Connect with us

Chamarajanagar

50ನೇ ದಿನಕ್ಕೆ ಕಾಲಿಟ್ಟ ರೈತರ ಆಹೋರಾತ್ರಿ ಧರಣಿ: ಜಿಲ್ಲಾಡಳಿತದ ವಿರುದ್ಧ ತಮಟೆ ಚಳುವಳಿ *ಅ.16ರಂದು ಬೃಹತ್‌ ಪ್ರತಿಭಟನೆಗೆ ಕರೆ

Published

on

ಗುಂಡ್ಲುಪೇಟೆ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಕಚೇರಿ ಮುಂದೆ ನಡೆಸುತ್ತಿರುವ ಆಹೋರಾತ್ರಿ ಧರಣಿ 50ನೇ ದಿನಕ್ಕೆ ಕಾಲಿಟ್ಟರೂ, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ತಮಟೆ ಚಳವಳಿ ನಡೆಸಿದರು. ಪಟ್ಟಣದ ಪ್ರವಾಸಿ ಮಂದಿರದಿಂದ ತಮಟೆ ಬಾರಿಸುತ್ತಾ ಹೊರಟ ರೈತರು, ರಾಷ್ಟ್ರೀಯ ಹೆದ್ದಾರಿ ಮೂಲಕ ಮೆರವಣಿಗೆಯಲ್ಲಿ ಸಾಗಿ ತಾಲೂಕು ಕಚೇರಿ ಆವರಣದಲ್ಲಿ ಜಮಾಯಿಸಿ, ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿ, 50 ದಿನಗಳಿಂದ ನಿರಂತರವಾಗಿ ಧರಣಿ ನಡೆಸುತ್ತಿದ್ದರೂ ಜಿಲ್ಲಾ ಹಾಗೂ ತಾಲೂಕು ಆಡಳಿತ ರೈತರ ಸಮಸ್ಯೆಗೆ ಸ್ಪಂದಿಸಿಲ್ಲ, ತಾಲೂಕು ಆಡಳಿತ ಜಡ್ಡು ಹಿಡಿದಂತಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ ಪಡೆದು ಆಯ್ಕೆಯಾದ ಜನಪ್ರತಿನಿಧಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸುಮಾರು 70 ವರ್ಷಗಳಿಂದ ಭೂಮಿ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿರುವ ರೈತರು ಸಾಗುವಳಿ ಚೀಟಿಗಾಗಿ ಕಾಯುತ್ತಿದ್ದಾರೆ. 3,592 ರೈತರಿಗೆ ಸಾಗುವಳಿ ಹಕ್ಕು ನೀಡಲು ಸರ್ಕಾರಕ್ಕೆ ಎಷ್ಟು ಸಮಯ ಬೇಕು ಎಂದು ಪ್ರಶ್ನಿಸಿದರು. ದಶಕಗಳಿಂದ ಉಳುಮೆ ಮಾಡುತ್ತಿರುವ ಭೂಮಿಗೆ ಸಾಗುವಳಿ ಪತ್ರ ಹಾಗೂ ಹಕ್ಕು ಪತ್ರ ನೀಡುವಂತೆ ಕೇಳುತ್ತಿದ್ದಾರೆ ಎಂದರು.

ಅ.16ರಂದು ಬೃಹತ್ ಪ್ರತಿಭಟನೆ: ಅಕ್ಟೋಬ‌ರ್ 16ರಂದು ತಾಲೂಕಿನ ಎಲ್ಲಾ ಗ್ರಾಮಗಳಿಂದ ರೈತರನ್ನು ಸಂಘಟಿಸಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಎತ್ತಿನಗಾಡಿ ಹಾಗೂ ಟ್ರ್ಯಾಕ್ಟರ್‌ಗಳೊಂದಿಗೆ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಈ ಮಧ್ಯೆ, ಸ್ಥಳಕ್ಕೆ ಆಗಮಿಸಿದ ಆರ್‌ಎಫ್‌ಒ ಶಿವಕುಮಾ‌ರ್ ಹಾಗೂ ಪ್ರಭಾರ ಎಸಿಎಫ್ ವಿನೋದ್ ರೈತರ ಸಮಸ್ಯೆಗಳನ್ನು ಆಲಿಸಿದರು. ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಮಲ್ಲಯನಪುರ ಶಿವಣ್ಣ, ತಾಲೂಕು ಪ್ರಧಾನ ಕಾರ್ಯದರ್ಶಿ ಕೊಡಹಳ್ಳಿ ಪ್ರಸಾದ್‌, ಶಿವಕುಮಾರ್ ಪಿಕೆ, ಹಕ್ಕಲಪುರ ಕುಮಾ‌ರ್, ಗುರುಪ್ರಸಾದ್, ರೋಹನ್ ಗೌಡ, ಮನು, ಚಂದ್ರು, ಸುಭಾಸ್ ಸೇರಿದಂತೆ ಹಲವರು ಹಾಜರಿದ್ದರು.

Continue Reading

Chamarajanagar

ಮಿಕ್ಸ್ ಬಾಕ್ಸಿಂಗ್: ಲಿಖಿತ್ ರಾಜ್ಯಮಟ್ಟಕ್ಕೆ ಆಯ್ಕೆ

Published

on

ಗುಂಡ್ಲುಪೇಟೆ: ಜಿಲ್ಲಾ ಮಟ್ಟದ ಮಿಕ್ಸ್ ಬಾಕ್ಸಿಂಗ್ ಪಂದ್ಯದಲ್ಲಿ ದೈಹಿಕ ಶಿಕ್ಷಕ ಲಿಖಿತ್ ಗೆದ್ದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಯಳಂದೂರಿನಲ್ಲಿ ಕರ್ನಾಟಕ ಅಮೆಚೂರ್ ಮಿಕ್ಸ್ ಬಾಕ್ಸಿಂಗ್ ಅಸೋಸಿಯೇಷನ್ ವತಿಯಿಂದ ನಡೆದ ಜಿಲ್ಲಾ ಮಟ್ಟದ ಮಿಕ್ಸ್ ಬಾಕ್ಸಿಂಗ್ ಪಂದ್ಯದಲ್ಲಿ ಟೈಗರ್ ಲ್ಯಾಂಡ್ ಮಾರ್ಷಲ್ ಅಕಾಡೆಮಿಯ ಹಾಗೂ ತಾಲೂಕಿನ ಬೇಗೂರಿನ ಲಿಟಲ್ ಪ್ಲವರ್ ಶಾಲೆಯ ದೈಹಿಕ ಶಿಕ್ಷಕರಾಗಿರುವ ಲಿಖಿತ್ ಜಯಶಾಲಿಯಾಗಿ ಕೊಡಗಿನಲ್ಲಿ ನಡೆಯುವ ರಾಜ್ಯ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.

ಮಿಕ್ಸ್ ಬಾಕ್ಸಿಂಗ್ ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಲಿಖಿತ್ ರನ್ನು ತರಬೇತುದಾರರಾದ ಟೈಗರ್ ಲ್ಯಾಂಡ್ ಮಾರ್ಷಲ್ ಅಕಾಡೆಮಿ ಸಂಸ್ಥಾಪಕ ಸೆನ್ಸಾಯ್ ಉಮೇಶ್ ಹಾಗೂ ಬೇಗೂರು ಲಿಟಲ್ ಫ್ಲವರ್ ಶಾಲೆಯ ಫಾಧರ್ ಜೋಜಿ ಮಾಧೂ ಅಭಿನಂದನೆ ಸಲ್ಲಿಸಿದ್ದಾರೆ.

Continue Reading

Chamarajanagar

ಚಾಮರಾಜನಗರ ದಸರಾ ಮಹೋತ್ಸವ : ಅ. 17 ರಿಂದ 19ರವರೆಗೆ ಆಹಾರ ಮೇಳ-ದರಪಟ್ಟಿ ಆಹ್ವಾನ

Published

on

ಚಾಮರಾಜನಗರ: ಚಾಮರಾಜನಗರ ದಸರಾ ಮಹೋತ್ಸವದ ಅಂಗವಾಗಿ ಅ. 17 ರಿಂದ 19ರವರೆಗೆ ಆಹಾರ ಮೇಳವನ್ನು ನಗರಸಭೆ ಹತ್ತಿರ ಆಯೋಜಿಸಲಾಗಿದ್ದು, ದರಪಟ್ಟಿ ಆಹ್ವಾನಿಸಲಾಗಿದೆ.

ಆಹಾರ ಮೇಳದಲ್ಲಿ ಭಾಗವಹಿಸಲು ಹಾಗೂ ವಿಶೇಷ ತಿಂಡಿ, ತಿನಿಸುಗಳನ್ನು ಮಾಡುವ ಮತ್ತು ಸಂಪ್ರದಾಯಿಕ ಖಾದ್ಯಗಳನ್ನು ತಯಾರಿಸಲು ಆಸಕ್ತಿಯುಳ್ಳವರು ದರಪಟ್ಟಿ ಮತ್ತು ಆಹಾರ ಪರವಾನಗಿ ವಿವರಗಳನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಆಹಾರ ಇಲಾಖೆ ಕೊಠಡಿ ಸಂಖ್ಯೆ 113, 114 ಕಚೇರಿಗೆ ಅ. 15ರೊಳಗೆ ಸಲ್ಲಿಸುವಂತೆ ಆಹಾರ ಮತ್ತು ವಸತಿ ಸಮಿತಿ ಕಾರ್ಯಾಧ್ಯಕ್ಷರೂ‌ ಆದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

Chamarajanagar

ದಸರಾ ಮಹೋತ್ಸವ: ಯುವ ಸಂಭ್ರಮ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ

Published

on

ಚಾಮರಾಜನಗರ: ಚಾಮರಾಜನಗರ ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಯುವ ಸಂಭ್ರಮದಲ್ಲಿ ನಾಡು-ನುಡಿಗೆ ಸಂಬಂಧಿಸಿದ ಕಾರ್ಯಕ್ರಮ ನೀಡಲು ಇಚ್ಛಿಸುವ 18 ರಿಂದ 30 ವರ್ಷದೊಳಗಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ವಿದ್ಯಾರ್ಥಿಗಳು ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಅರ್ಜಿ ಪಡೆದು, ಭರ್ತಿ ಮಾಡಿ ಅ. 13ರ ಒಳಗೆ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 9620139337, 9448999332 ನ್ನು ಸಂಪರ್ಕಿಸುವಂತೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರೂ ಆದ ದಸರಾ ಸಮಿತಿಯ ಯುವ ಸಂಭ್ರಮ ಕಾರ್ಯಕ್ರಮಗಳ ಕಾರ್ಯಾಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

Trending

error: Content is protected !!