Connect with us

Kodagu

ಆನೆ ಮಾವುತರ ಕುಟುಂಬ, ಸರ್ಕಾರಿ ಶಾಲಾ ಮಕ್ಕಳಿಗೆ ನೆರವು

Published

on

ಮಡಿಕೇರಿ: ಸಮಾಜ ಸೇವೆಯ ಮೂಲಕ ಅಗತ್ಯವಿರುವ ಕುಟುಂಬಗಳು ಹಾಗೂ ಸರ್ಕಾರಿ ಶಾಲಾ ಮಕ್ಕಳಿಗೆ ನೆರವು ನೀಡುವ ಕಾರ್ಯ ನಿರಂತರವಾಗಬೇಕು ಎಂದು ಬೆಂಗಳೂರಿನ ಬನಶಂಕರಿ ಮಹಿಳಾ ಸಮಾಜ ಮತ್ತು ಲಕ್ಷ್ಮೀದೇವಿ ಮಹಿಳಾ ಟ್ರಸ್ಟ್ ಅಧ್ಯಕ್ಷರಾದ ಶಾಂತರಾಮಸ್ವಾಮಿ ಹೇಳಿದರು.


ಕೊಡಗು ಜಿಲ್ಲೆಯ ಕುಶಾಲನಗರದ ದುಬಾರೆ ಆನೆ ಶಿಬಿರದ ಆನೆ ಮಾವುತರ ಕುಟುಂಬದವರಿಗೆ ಬೆಂಗಳೂರಿನ ಬನಶಂಕರಿ ಮಹಿಳಾ ಸಮಾಜ ಮತ್ತು ಲಕ್ಷ್ಮೀದೇವಿ ಮಹಿಳಾ ಟ್ರಸ್ಟ್ ಬಟ್ಟೆ, ರೈನ್‌ಕೋಟ್, ಜಾಕೆಟ್ ಹಾಗೂ ಸ್ಥಳೀಯ ಸರ್ಕಾರಿ ಶಾಲೆಯ ಮಕ್ಕಳಿಗೆ ವಾಟರ್ ಬಾಟಲ್, ಶಾಲಾ ಬ್ಯಾಗ್ ಮತ್ತು ನೋಟ್ ಪುಸ್ತಕಗಳನ್ನು ಉಚಿತವಾಗಿ ಬುಧವಾರ ವಿತರಿಸಿ ಅವರು ಮಾತನಾಡಿದರು.

ಆನೆಗಳ ಆರೈಕೆ ಹಾಗೂ ಸಂರಕ್ಷಣೆಯಲ್ಲಿ ಮಾವುತರು ಮತ್ತು ಅವರ ಕುಟುಂಬದವರ ಪಾತ್ರ ಮಹತ್ವದ್ದಾಗಿದೆ. ಪ್ರತಿಕೂಲ ಹವಾಮಾನದಲ್ಲಿಯೂ ಕರ್ತವ್ಯ ನಿರ್ವಹಿಸುವ ಮಾವುತರ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ಅವರೊಂದಿಗೆ ಸಮಾಜ ನಿಲ್ಲಬೇಕು. ಅದೇ ರೀತಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ಒದಗಿಸುವುದು ಅವರ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಇಂತಹ ಸಮಾಜಮುಖಿ ಕಾರ್ಯಗಳಿಗೆ ಎಲ್ಲರೂ ಮುಂದಾಗಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್.ಪಿ ನವೀನ್ ಕುಮಾರ್, ಟ್ರಸ್ಟ್‌ನ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Continue Reading

Kodagu

ಅಕ್ಟೋಬರ್ 4 ರಂದು ಕುಶಾಲನಗರದಲ್ಲಿ ಓಣಂ ಆಚರಣೆ

Published

on

ಕುಶಾಲನಗರ: ಕುಶಾಲನಗರ ಕೇರಳ ಸಮಾಜದ ಆಶ್ರಯದಲ್ಲಿ ಅಕ್ಟೋಬರ್ 4 ರಂದು ಭಾನುವಾರ ಎಪಿಸಿಎಂಎಸ್ ಸಭಾಂಗಣದಲ್ಲಿ 26ನೇ ವರ್ಷದ ಓಣಂ ಆಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಅಧ್ಯಕ್ಷ ಪಿ. ರವೀಂದ್ರನ್ ತಿಳಿಸಿದರು.
ಸಮಾಜದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ಕೇರಳ ಸಮಾಜದಿಂದ ಎಪಿಸಿಎಂಎಸ್ ಸಭಾಂಗಣದವರೆಗೆ ಮಾವೇಲಿ ಸಹಿತ ಚೆಂಡೆ ವಾದ್ಯಗಳೊಂದಿಗೆ ಸಮಾಜದ ಬಾಂಧವರಿಂದ ಮೆರವಣಿಗೆ ನಡೆಯಲಿದೆ.ಮುಖ್ಯ ಅತಿಥಿಗಳಾಗಿ ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್, ಶಾಸಕ ಡಾ. ಮಂತರ್ ಗೌಡ, ಮಾಜಿ ಶಾಸಕ ಅಪ್ಪಚ್ಚುರಂಜನ್, ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಜಿ.ಪಂ. ಮಾಜಿ ಅಧ್ಯಕ್ಷ ವಿ.ಎಂ. ವಿಜಯನ್, ಕುಶಾಲನಗರ ಎಸ್.ಎನ್.ಡಿ.ಪಿ. ಶಾಖೆ ಅಧ್ಯಕ್ಷ ಕೆ.ಟಿ. ಗಣೇಶ್ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಮಾಜದ ನಿರ್ದೇಶಕ ಕೆ. ವರದ ಮಾತನಾಡಿ, ಹಿಂದೂ, ಕ್ರೈಸ್ತ, ಮುಸ್ಲಿಂ ಸಮುದಾಯದ ಮಲಯಾಳಿ ಭಾಷಿಕರು ಒಗ್ಗೂಡಿ ಕುಶಾಲನಗರದಲ್ಲಿ ಓಣಂ ಆಚರಿಸುವುದು ಇಲ್ಲಿನ ವಿಶೇಷವಾಗಿದೆ. ಅಂದು ಓಣಂ ಅಂಗವಾಗಿ ಪೂಕಳಂ, ಚಿತ್ರಕಲಾ ಸ್ಪರ್ಧೆ ಸೇರಿದಂತೆ ತಿರುವಾತಿರ ಕಳಿ, ಭರತನಾಟ್ಯ, ನಾಡೋಡಿ ನೃತ್ಯ, ನಾಡನ್ ಪಾಟ್ಟು, ಓಣಂ ಪಾಟ್ಟು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸಮಾಜದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಸಮಾಜದ ಜಂಟಿ ಕಾರ್ಯದರ್ಶಿ ಅಜಿತ್ ಧನರಾಜ್, ಖಜಾಂಚಿ ಬಿ.ಸಿ. ಆನಂದ್, ನಿರ್ದೇಶಕ ಎಂ.ಜಿ. ಪ್ರಕಾಶ್ ಇದ್ದರು.

Continue Reading

Kodagu

ಮಡಿಕೇರಿಯಲ್ಲಿ ಹೃದಯ ದಿನದ ಪ್ರಯುಕ್ತ ಜಾಗೃತಿ ಅಭಿಯಾನ

Published

on

ಮಡಿಕೇರಿ : ನಗರದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಜಿಲ್ಲಾ ಸರ್ವೇಕ್ಷಣ ಘಟಕ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ‘ವಿಶ್ವ ಹೃದಯ ದಿನ’ ನಡೆಯಿತು.
ಜಿಲ್ಲಾ ಕ್ಷಯರೋಗ ನಿರ್ಮೂಲನ ಅಧಿಕಾರಿ ಡಾ.ಸನತ್ ಕುಮಾರ್ ಅವರು ದೀಪ ಬೆಳಗಿಸಿ ಉದ್ಘಾಟಿಸಿ, ಮಾತನಾಡಿ ಪ್ರತಿವರ್ಷ ಸೆಪ್ಟೆಂಬರ್ 29 ರಂದು ವಿಶ್ವ ಹೃದಯ ದಿನ ಆಚರಿಸಲಾಗುತ್ತಿದೆ.

ಹೃದಯ ರಕ್ತನಾಳದ ಕಾಯಿಲೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳುವ ಜೀವನ ಶೈಲಿಯನ್ನು ಉತ್ತೇಜಿಸುವುದು ಮತ್ತು ಹೃದಯಾಘಾತ ಹಾಗೂ ಪಾಶ್ರ್ವವಾಯು ವಿನಂತಹ ಸಮಸ್ಯೆಗಳನ್ನು ತಡೆಗಟ್ಟುವ ಬಗ್ಗೆ ಅರಿವು ಮೂಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದರು.
ನಮ್ಮ ಬದುಕಿಗೆ ಪ್ರತಿ ಕ್ಷಣ ದುಡಿಯುವ ಹೃದಯ ಕಾಪಾಡುವುದು ಎಲ್ಲರ ಜವಬ್ದಾರಿ ಆಗಿರುತ್ತದೆ. ಹೃದಯ ಆರೋಗ್ಯದ ಬಗ್ಗೆ ನಿರ್ಲಕ್ಷ್ಯತನದಿಂದ ಮತ್ತು ಉತ್ತಮ ಜೀವನ ಶೈಲಿ ಅನುಸರಿಸದೆ ಇಂದು ಅನೇಕ ಯುವಕರು ಹೃದಯಾಘಾತದಿಂದ ಸಾವನ್ನಪ್ಪುತ್ತಿರುವುದು ವಿಷಾದನಿಯವೆಂದರು.

ಆರೋಗ್ಯಕರ ಆಹಾರ–ನಿಯಮಿತ ವ್ಯಾಯಾಮ–ತಂಬಾಕಿಗೆ ದೂರ–ಒತ್ತಡ ನಿಯಂತ್ರಣ–ನಿಯಮಿತ ಆರೋಗ್ಯ ತಪಾಸಣೆ” ಇವುಗಳನ್ನು ಜೀವನಶೈಲಿಯ ಭಾಗವಾಗಿಸಿಕೊಳ್ಳುವುದು ಮುಖ್ಯ ಎಂದರು.
ಮಡಿಕೇರಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುನೀಲ್ ಮಾತನಾಡಿ ಹೃದಯ ಕಾಯಿಲೆಗಳ ಬಗ್ಗೆ ಜಾಗೃತಿ ಇರಲಿ ಹೃದಯರೋಗಗಳ ಅಪಾಯ, ಲಕ್ಷಣಗಳು ಮತ್ತು ತಡೆಗಟ್ಟುವ ಕ್ರಮಗಳ ಕುರಿತು ಜನರಿಗೆ ಹೆಚ್ಚಿನ ಮಾಹಿತಿ ನೀಡುವುದು ಒಳ್ಳೆಯದು.
ಹೆಚ್ಚು ಉಪ್ಪು, ಸಕ್ಕರೆ ಮತ್ತು ಸ್ಯಾಚುರೇಟೆಡ್ ಕೊಬ್ಬಿನ ಆಹಾರ ಕಡಿಮೆ ಮಾಡಿ, ತರಕಾರಿ, ಹಣ್ಣು, ಧಾನ್ಯಗಳು ಮತ್ತು ಸಮತೋಲಿತ ಆಹಾರ ಸೇವಿಸುವಂತೆ ಪ್ರೇರೇಪಿಸಿ ಆರೋಗ್ಯ ಶಿಕ್ಷಣ ನೀಡಿದರು.

ನಿಯಮಿತ ದೈಹಿಕ ಚಟುವಟಿಕೆ ಹೃದಯದ ಆರೋಗ್ಯಕ್ಕೆ ಸಹಕಾರಿ. ವಯಸ್ಕರಿಗೆ ನಿಯಮಿತ ದೈಹಿಕ ಚಟುವಟಿಕೆಗೆ ಶಿಫಾರಸು ಮಾಡಬೇಕಾಗುತ್ತದೆ. ಧೂಮಪಾನ ಹಾಗೂ ತಂಬಾಕು ಸೇವನೆ ಹೃದಯರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಅವುಗಳನ್ನು ತ್ಯಜಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಬಹಳ ಮುಖ್ಯ ಎಂದರು.

ರಕ್ತದೊತ್ತಡ, ಮಧುಮೇಹ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣ: ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಂಡು, ವೈದ್ಯರ ಸಲಹೆಯಂತೆ ಇವುಗಳನ್ನು ನಿಯಂತ್ರಣದಲ್ಲಿ ಇಡುವುದು ಹೃದಯದ ಆರೋಗ್ಯಕ್ಕೆ ಬಹಳ ಮುಖ್ಯ ಎಂದರು.
ಹೃದಯಾಘಾತದ ಲಕ್ಷಣಗಳ ಅರಿವು: ಎದೆನೋವು ಅಥವಾ ಒತ್ತಡ, ಉಸಿರಾಟದ ತೊಂದರೆ, ತಣ್ಣನೆಯ ಬೆವರು, ವಾಕರಿಕೆ, ತಲೆಸುತ್ತುವಿಕೆ ಮುಂತಾದ ಲಕ್ಷಣಗಳನ್ನು ನಿರ್ಲಕ್ಷಿಸದೆ ತಕ್ಷಣ ವೈದ್ಯಕೀಯ ನೆರವು ಪಡೆಯುವ ಬಗ್ಗೆ ಜನರಲ್ಲಿ ಅರಿವು ಮೂಡಿಸುವಂತೆ ಇಲಾಖೆಯ ಸಿಬ್ಬಂದಿಯವರಿಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅದ್ಯಕ್ಷರಾದ ಅರುಣ್ ಕುಮಾರ್, ಡಾ.ವಿಜಯ್ ಕುಮಾರ್ ಮೂರ್ನಾಡು, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಕೆ.ಆರ್.ಪ್ರಕಾಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ವಿ.ಶ್ರೀನಾಥ್, ಸುಮತಿ, ನಿಲಿಮ್, ಶಾಲಿನಿ, ಕಿಶೋರ್ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಮೇಲ್ವಿಚಾರಕರು, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು ಮತ್ತು ಆಶಾ ಕಾರ್ಯಕರ್ತರು ಹಾಜರಿದ್ದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಟಿ.ಎನ್.ಪಾಲಾಕ್ಷ ರವರು ಸ್ವಾಗತಿಸಿದರು. ಜಾಗೃತಿ ಜಾಥಾ: ನಗರದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಯಿತು. ಈ ಸಂದರ್ಭದಲ್ಲಿ ಕರಪತ್ರ ವಿತರಿಸಲಾಯಿತು.

Continue Reading

Kodagu

ಅಕ್ಷರ ದಾಸೋಹ ನೌಕರರ ತಾಲೂಕು ಸಮ್ಮೇಳನ

Published

on

ವಿರಾಜಪೇಟೆ: ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ವಿರಾಜಪೇಟೆ ಹಾಗೂ ಪೊನ್ನಂಪೇಟೆ ಘಟಕ ಮತ್ತು ಸಿಐಟಿಯು ನೇತೃತ್ವದಲ್ಲಿ ವಿರಾಜಪೇಟೆಯ ಸಿಐಟಿಯು ಕಚೇರಿ ಸಭಾಂಗಣದಲ್ಲಿ ಪೊನ್ನಂಪೇಟೆ ಹಾಗೂ ವಿರಾಜಪೇಟೆ ತಾಲೂಕುಗಳ ಸಂಯುಕ್ತ ಸಮ್ಮೇಳನವು ಅತ್ಯಂತ ಅರ್ಥಪೂರ್ಣವಾಗಿ ಜರುಗಿತು.

ಬಿಸಿಯೂಟ ಯೋಜನೆಯಲ್ಲಿ ಹಗಲಿರುಳು ಶ್ರಮಿಸುತ್ತಿರುವ ಮಹಿಳಾ ನೌಕರರ ನಾನಾ ಸಮಸ್ಯೆಗಳು, ಆರ್ಥಿಕ ಸಂಕಷ್ಟಗಳು ಹಾಗೂ ಸರ್ಕಾರದ ಸೌಲಭ್ಯಗಳ ಕೊರತೆಯ ಕುರಿತು ಸಮ್ಮೇಳನದಲ್ಲಿ ಗಂಭೀರ ಚರ್ಚೆ ನಡೆಸಲಾಯಿತು.
ಸಮ್ಮೇಳನವನ್ನು ಉದ್ಘಾಟಿಸಿ ಮುಖ್ಯ ಅತಿಥಿಯಾಗಿ ಮಾತನಾಡಿದ ಸಿಐಟಿಯು ಜಿಲ್ಲಾ ಅಧ್ಯಕ್ಷ ಎ.ಸಿ. ಸಾಬು ಅವರು, ಬಿಸಿಯೂಟ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಮಹಿಳಾ ಕಾರ್ಮಿಕರ ನೈಜ ಸ್ಥಿತಿಯನ್ನು ಬಿಚ್ಚಿಟ್ಟರು. ಇಂದಿನ ಗಗನಕ್ಕೇರುತ್ತಿರುವ ಬೆಲೆ ಏರಿಕೆಯ ಕಾಲದಲ್ಲಿ ಅತಿ ಕಡಿಮೆ ಗೌರವ ಧನ ಪಡೆದು ಜೀವನ ನಡೆಸುವುದು ಅಸಾಧ್ಯವಾಗಿದೆ ಎಂದ ಅವರು, ಅಕ್ಷರ ದಾಸೋಹ ನೌಕರರನ್ನು ಕೇವಲ ಸ್ವಯಂಸೇವಕರು ಅಥವಾ ಗೌರವ ಸಿಬ್ಬಂದಿಯಾಗಿ ನೋಡದೆ, ಅವರನ್ನು ಕಾರ್ಮಿಕರೆಂದು ಪರಿಗಣಿಸಿ ಕನಿಷ್ಠ ವೇತನ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿದ್ದರೂ ಉದ್ಯೋಗ ಭದ್ರತೆ, ಪಿಂಚಣಿ ಹಾಗೂ ಭವಿಷ್ಯ ನಿಧಿ ಇಲ್ಲದಿರುವುದು ಮಹಿಳಾ ನೌಕರರ ಬದುಕನ್ನು ಅಸುರಕ್ಷಿತವಾಗಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು. ಅಲ್ಲದೆ, ಅಡುಗೆ ಮಾಡುವಾಗ ಎದುರಾಗುವ ಹೊಗೆಯ ಬಾಧೆ, ತೂಕದ ಪಾತ್ರೆಗಳ ಹೊರೆ ಮತ್ತು ಆರೋಗ್ಯ ಸಮಸ್ಯೆಗಳಿಗೆ ಸರ್ಕಾರದ ವತಿಯಿಂದಲೇ ಸೂಕ್ತ ಪರಿಹಾರ ಹಾಗೂ ಉಚಿತ ವೈದ್ಯಕೀಯ ತಪಾಸಣಾ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವರಿಕೆ ಮಾಡಿಕೊಟ್ಟರು.

ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಸಂಚಾಲಕಿ ಪದ್ಮಿನಿ ಶ್ರೀಧರ್ ಮಾತನಾಡಿ, ಅಕ್ಷರ ದಾಸೋಹ ನೌಕರರಾಗಿ ಶ್ರಮಿಸುತ್ತಿರುವ ಬಹುಪಾಲು ಮಹಿಳೆಯರು ಬಡ ಹಾಗೂ ಗ್ರಾಮೀಣ ಹಿನ್ನೆಲೆಯವರಾಗಿದ್ದು, ಇವರಿಗೆ ಸರ್ಕಾರದಿಂದ ವಿಶೇಷ ಸಾಮಾಜಿಕ ಹಾಗೂ ಆರ್ಥಿಕ ಭದ್ರತಾ ವ್ಯವಸ್ಥೆಗಳು ಸಿಗಬೇಕು ಎಂದು ಒತ್ತಾಯಿಸಿದರು. ಮಹಿಳಾ ನೌಕರರಿಗೆ ತುರ್ತಾಗಿ ಪ್ರಸೂತಿ ರಜೆ, ಆರೋಗ್ಯ ವಿಮೆ ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನ ಸಿಗುವಂತಾಗಬೇಕು. ಮಹಿಳಾ ನೌಕರರಿಗೆ ಯಾವುದೇ ರೀತಿಯ ಲಿಂಗ ತಾರತಮ್ಯ ಅಥವಾ ಕಿರುಕುಳವಾಗದಂತೆ ತಡೆಯಲು ದೂರು ನಿವಾರಣಾ ಸಮಿತಿಗಳು ಕಾರ್ಯನಿರ್ವಹಿಸಬೇಕು ಎಂದ ಅವರು, ಮಹಿಳೆಯರು ತಮ್ಮ ಆರ್ಥಿಕ ಸ್ವಾವಲಂಬನೆಗಾಗಿ ಮತ್ತು ಹಕ್ಕುಗಳ ರಕ್ಷಣೆಗಾಗಿ ಒಗ್ಗಟ್ಟಿನ ಹೋರಾಟವನ್ನು ರೂಪಿಸುವುದು ಇಂದಿನ ತುರ್ತು ಅಗತ್ಯ ಎಂದು ಕರೆ ನೀಡಿದರು.

ಬಿಸಿಯೂಟ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಕುಸುಮ ಮಾತನಾಡಿ, ಇಲಾಖೆಯಿಂದ ಗೌರವ ಧನ ಬಿಡುಗಡೆಯಲ್ಲಿ ಆಗುತ್ತಿರುವ ಅನಗತ್ಯ ವಿಳಂಬ ಮತ್ತು ಕೆಲವೆಡೆ ಕಳಪೆ ಗುಣಮಟ್ಟದ ಅಡುಗೆ ಸಾಮಗ್ರಿಗಳನ್ನು ನೀಡಿ ನೌಕರರ ಮೇಲೆ ಗೂಬೆ ಕೂರಿಸುವ ಪ್ರವೃತ್ತಿಯನ್ನು ತೀವ್ರವಾಗಿ ಖಂಡಿಸಿದರು. ನೌಕರರ ಮೇಲಿನ ಅನಗತ್ಯ ಕೆಲಸದ ಒತ್ತಡವನ್ನು ತಗ್ಗಿಸಬೇಕು ಹಾಗೂ ನೌಕರರ ಕಷ್ಟಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ನೂತನ ಪದಾಧಿಕಾರಿಗಳ ಆಯ್ಕೆ:
ಸಮ್ಮೇಳನದ ಸಂದರ್ಭದಲ್ಲಿ ಸಂಘಟನೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪೊನ್ನಂಪೇಟೆ ಹಾಗೂ ವಿರಾಜಪೇಟೆ ತಾಲೂಕು ಸಮಿತಿಗಳಿಗೆ ಹೊಸ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಪೊನ್ನಂಪೇಟೆ ತಾಲೂಕು ಸಮಿತಿ ಅಧ್ಯಕ್ಷರಾಗಿ ಶ್ವೇತಾ, ಕಾರ್ಯದರ್ಶಿಯಾಗಿ ಸೀನಾ, ಖಜಾಂಚಿ (ಕೋಶಾಧಿಕಾರಿ)ಯಾಗಿ ಸೌಮ್ಯ ಆಯ್ಕೆಯಾದರು. ವಿರಾಜಪೇಟೆ ತಾಲೂಕು ಸಮಿತಿ ಅಧ್ಯಕ್ಷರಾಗಿ ಉಮ್ಮಕ್ಕ, ಕಾರ್ಯದರ್ಶಿಯಾಗಿ ರೂಪಾ, ಖಜಾಂಚಿ (ಕೋಶಾಧಿಕಾರಿ)ಯಾಗಿ ನಳಿನಿ ಎನ್.ಸಿ. ಆಯ್ಕೆಯಾದರು.

Continue Reading

Trending

error: Content is protected !!