State
ಸವಾಲಿನ ವಿರುದ್ದವೇ ಕೆಲಸ ಮಾಡುವ ಛಾತಿ ಬೆಳೆಸಿಕೊಳ್ಳಬೇಕು: ಡಾ.ವಿಜಯಾ

ಬೆಂಗಳೂರು: ಸಾಧಿಸುವ ಛಲ, ವೃತ್ತಿ ಬದ್ಧತೆ ಇದ್ದರೆ ಪತ್ರಕರ್ತರಿಗೆ ವಯಸ್ಸು ಅಡ್ಡಿಯಾಗುವುದಿಲ್ಲ. ಸವಾಲಿನ ವಿರುದ್ದವೇ ಕೆಲಸ ಮಾಡುವ ವೃತ್ತಿ ಬದ್ಧತೆಯ ಛಾತಿ ರೂಢಿಸಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತೆ, ರಂಗಕರ್ಮಿ, ಸಾಹಿತಿ ಡಾ.ವಿಜಯಾ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಮಹಿಳಾ ದಿನಾಚರಣೆ ಪ್ರಯುಕ್ತ ಮತ್ತು ವಿಶ್ವ ರಂಗಭೂಮಿ ದಿನಾಚರಣೆ ಸಂದರ್ಭದಲ್ಲಿ ಏರ್ಪಡಿಸಿದ್ದ ಮನೆಯಂಗಳದಲ್ಲಿ ಮನದುಂಬಿ ನಮನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಇತ್ತೀಚೆಗಿನ ದಿನಗಳಲ್ಲಿ ಪತ್ರಿಕಾ ವೃತ್ತಿಯಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ ಎಂದು ಹೇಳಿದರು.
ಪತ್ರಿಕೋದ್ಯಮದ ಜೊತೆಗೆ ಅನ್ಯಾಯಗಳ ವಿರುದ್ಧ ತಾನು ಸಾಕಷ್ಟು ಹೋರಾಟ ಮಾಡಿಕೊಂಡ ಕಾರಣಕ್ಕೆ ಸಮಾಜದ ವ್ಯವಸ್ಥೆಯ ಬಗ್ಗೆ ಪತ್ರಕರ್ತೆಯಾಗಿ ತನಗೆ ಸಂಪೂರ್ಣ ಅರಿವಿದೆ. ಕೆಲವು ಪತ್ರಿಕಾ ಸಂಸ್ಥೆಗಳು ಇತ್ತೀಚೆಗೆ ಕಾರ್ಪೋರೇಟ್ ವ್ಯವಸ್ಥೆಯಿಂದ ಕೂಡಿವೆ, ಅವು ಆ ಯೋಚನೆಯಿಂದ ಹೊರಬಂದು ಪತ್ರಕರ್ತರ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಪತ್ರಕರ್ತರನ್ನು ರೂಪಿಸಿ, ನಡೆಸಿಕೊಳ್ಳಬೇಕು ಎಂದರು.
ಐಟಿಐ ಸಂಸ್ಥೆಯಿಂದ ಸುದ್ದಿಮನೆಗೆ ಪಯಣ: ದಾವಣಗೆರೆ ಮೂಲದ ಡಾ. ವಿಜಯಾ ಅವರು ಬೆಂಗಳೂರಿನ ಐಟಿಐ ಸಂಸ್ಥೆಯಲ್ಲಿ ವೃತ್ತಿರಂಗಕ್ಕೆ ಪ್ರವೇಶಿಸಿದವರು. ಅಲ್ಲಿ ಆರಂಭವಾದ ಅವರ ಬರವಣಿಗೆಯ ಹವ್ಯಾಸವು ನಾಡಿನ ಹಿರಿಯ ಮತ್ತು ಪ್ರಶಸ್ತಿ ವಿಜೇತ ಪತ್ರಕರ್ತೆಯ ಸಾಲಿನಲ್ಲಿ ತಂದು ನಿಲ್ಲಿಸಿದೆ. ಪ್ರಜಾಮತ ಪತ್ರಿಕೆಯಲ್ಲಿ ಆರಂಭವಾದ ಅವರ ಬರಹಗಳು ಅದೇ ಸಂಸ್ಥೆಯ ಮಯೂರ, ಉದಯವಾಣಿ ಬಳಗದ ತುಷಾರ, ರೂಪತಾರ, ಮಲ್ಲಿಗೆ ಮುಂತಾದ ಪತ್ರಿಕೆಗಳ ಅಂಕಣಕಾರರನ್ನಾಗಿಸಿತು ಹಾಗೂ ಆ ಪತ್ರಿಕೆಗಳ ಸಂಪಾದಕ ಸ್ಥಾನವನ್ನೂ ದೊರಕಿಸಿಕೊಟ್ಟಿತು. ಮಲ್ಲಿಗೆ ಪತ್ರಿಕೆ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿತು. ಆರಂಭದಲ್ಲಿ ಗೋಕಾಕ್ ಚಳುವಳಿಯಲ್ಲಿ ಕಾರಾಗೃಹ ವಾಸವನ್ನೂ ಅನುಭವಿಸಿರುವ ಡಾ. ವಿಜಯ ಅವರ ಆರಂಭಿಕ ಚಟುವಟಿಕೆಗಳು ಹೋರಾಟ ಮನೋಭಾವಕ್ಕೆ ಮಾತ್ರ ಸೀಮಿತವಾಗಿದ್ದರೂ, ಕ್ರಮೇಣ ರಂಗಭೂಮಿಯತ್ತ ಅವರು ಮನಸ್ಸನ್ನು ಹೊರಳಿಸಿ ಬೀದಿ ನಾಟಕ ಎಂಬ ಕಲ್ಪನೆಯನ್ನು ಹುಟ್ಟು ಹಾಕಿ, ಬಳಿಕ ಸಾವಿರಾರು ಸಿನಿಮಾ ಲೇಖನಗಳನ್ನು ಬರೆದು ಕನ್ನಡದ ಖ್ಯಾತ ಸಿನಿಮಾ ಪತ್ರಕರ್ತೆ ಎಂದೆನಿಸಿಕೊಂಡವರು. ಕೇಂದ್ರ ಸಾಹಿತ್ಯ ಅಕಾಡೆಮಿ ಸೇರಿದಂತೆ ಹತ್ತಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಅವರು, ’ವಿಜಯಮ್ಮ’ ಎಂದೇ ಪತ್ರಕರ್ತರ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ತಮಗೆ ದೊರೆತ ಪ್ರಶಸ್ತಿಗಳ ಜೊತೆ ಬಂದ ನಗದು ಬಹುಮಾನಗಳನ್ನೆಲ್ಲಾ ಮರಳಿ ನೀಡಿದವರು, ಇಲ್ಲವೇ ಸಾಮಾಜಿಕ ಸೇವಾ ಕಾರ್ಯಕ್ಕೆ ವಿನಿಯೋಗಿಸಿಕೊಂಡವರು. ಯಾರ ಹಂಗಿನಲ್ಲೂ ಇರದೆ, ಸ್ವಾಭಿಮಾನಿ ಗುಣವನ್ನು ಮೈಗೂಡಿಸಿಕೊಂಡ ಸ್ವಭಾವ ಅವರದ್ದಾಗಿದೆ.
ಅನನ್ಯವಾದ ಸೇವೆಯ ಅಮ್ಮ: ಇದೇ ಸಂದರ್ಭದಲ್ಲಿ ಡಾ. ವಿಜಯಾ ಅವರ ಸಾಧನೆಯ ಬಗ್ಗೆ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ತಮ್ಮ ಸುದೀರ್ಘ ಅವಧಿಯ ವೃತ್ತಿ ಜೀವನದ ಅವರ ಕೊಡುಗೆ ಪತ್ರಿಕಾ ರಂಗಕ್ಕೆ ನಿಜಕ್ಕೂ ಬಹುದೊಡ್ಡ ಕೊಡುಗೆ. 90ರ ದಶಕದ ಬಾಗೂರು ಚಳುವಳಿಗಾರರಿಗೂ ಅವರು ಸಹಕಾರ ನೀಡಿದ ದೂರದೃಷ್ಟಿಯ ಚಿಂತನೆಯ ಸಹಕಾರವೂ ಸ್ಮರಣೀಯ. ಅವರ ಆದರ್ಶ ಇಂದಿನ ಯುವ ಪತ್ರಕರ್ತರಿಗೆ ನಿಜಕ್ಕೂ ಮಾದರಿ ಎಂದರು. ಪತ್ರಕರ್ತೆಯಾಗಿ, ಸಂಘಟಕಿಯಾಗಿ, ಸಾಹಿತಿಯಾಗಿ, ರಂಗಕರ್ಮಿಯಾಗಿ ವಿಜಯಮ್ಮ ಅವರ ಸೇವೆ ಅನನ್ಯ ಎಂದು ಶ್ಲಾಸಿದರು.
ಅಮ್ಮನ ಭಾವ ತುಂಬಿದ ವಿಜಯಮ್ಮ: ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ಮಾತನಾಡಿ, ಸಮಾಜದಲ್ಲಿ ಸಾಮಾಜಿಕ ಬದ್ಧತೆ ಏನೆಂಬುದನ್ನು ತೋರಿಸಿದ ದಿಟ್ಟ ಪತ್ರಕರ್ತೆ ಡಾ. ವಿಜಯಾ ಅವರು ಎಂದು ಉದಾಹರಣೆ ಸಹಿತ ಶ್ಲಾಘಿಸಿದರು. ಒಬ್ಬೊಬ್ಬರನ್ನು ಒಂದೊಂದು ರೀತಿಯಲ್ಲಿ ಪ್ರಭಾವಿಸಿ, ಅವರಿಗೆ ನೆರವಾಗಿರುವ ಕಾರಣಕ್ಕೆ ಅವರಿಗೆ ಅಮ್ಮ ಪಟ್ಟ ದೊರೆತಿದೆ. ಸಮಾಜಕ್ಕೆ ಮೊದಲು ಬೀದಿ ನಾಟಕಗಳ ಪರಿಕಲ್ಪನೆಯನ್ನು ಬಿತ್ತಿದ್ದನ್ನು ಮರೆಯುವಂತಿಲ್ಲ. ಪ್ರತಿಯೊಂದು ಸಮಸ್ಯೆಗೂ ಸ್ಪಂದಿಸುವ ಅವರ ಮಾತೃ ಹೃದಯ ಇಡೀ ಸಮಾಜಕ್ಕೆ ಮಾದರಿ ಎಂದರು.
ಹೊಸಭಾಷ್ಯ ಬರೆದರು: ಚಲನಚಿತ್ರ ಪತ್ರಿಕೋದ್ಯಮದಲ್ಲಿ ಹೊಸ ಭಾಷ್ಯ ಬರೆದ ಹೆಗ್ಗಳಿಕೆಗೆ ಡಾ. ವಿಜಯಾ ಅವರು ಪಾತ್ರರಾಗಿದ್ದು, ಅವರ ಬರವಣಿಗೆಯ ಮಾರ್ಗದರ್ಶನ ಇಂದಿನ ಪತ್ರಕರ್ತರಿಗೂ ದೊರೆತಿದೆ ಎಂದು ಹಿರಿಯ ಪತ್ರಕರ್ತರಾದ ಬಾ.ನಾ. ಸುಬ್ರಮಣ್ಯ ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಪತ್ರಕರ್ತೆಯರಿಗೆ ಆಸರೆ: ಪತ್ರಕರ್ತೆಯರ ಸಂಘದ ಮಾಲತಿ ಭಟ್ ಮಾತನಾಡಿ, ಉನ್ನತ ವ್ಯಕ್ತಿತ್ವದ ಡಾ. ವಿಜಯ ಅವರು ಪತ್ರಕರ್ತೆಯರ ಸಮಸ್ಯೆಗಳಿಗೂ ಸ್ಪಂದಿಸಿದವರು ಮತ್ತು ಪರ್ತ್ರಕರ್ತೆಯರ ಸಂಘದ ಹುಟ್ಟಿಗೂ ಕಾರಣಕರ್ತರಾದವರು ಎಂದರು.
ಡಾ. ವಿಜಯ ಅವರು ಪತ್ರಿಕಾ ವೃತ್ತಿಯ ಜೊತೆಗೆ ಹಲವಾರು ಮೌಲ್ಯಯುತ ಗ್ರಂಥಗಳ ಸಂಪಾದಕಿಯಾಗಿ ಪುಸ್ತಕ ಪ್ರಕಟಣೆಗಳ ಮೆರಗನ್ನು ಹೆಚ್ಚಿಸಿದ್ದಾರೆ ಎಂದು ಬೆಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್ ಹೇಳಿದರು.
ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೆ. ಆರ್. ದೇವರಾಜ್, ನಗರ ಘಟಕದ ಸಮಿತಿ ಸದಸ್ಯ ಡಿ.ಎಲ್.ಹರೀಶ್, ಶಿವರಾಜ್, ಸದಸ್ಯರಾದ ಸುಂದರೇಶ್, ಶರಣ ಬಸಪ್ಪ, ಪೂರ್ಣಿಮಾ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ ಸ್ವಾಗತಿಸಿ, ಕೊನೆಯಲ್ಲಿ ರಾಜ್ಯ ಖಜಾಂಚಿ ವಾಸುದೇವ ಹೊಳ್ಳ ವಂದನಾರ್ಪಣೆ ಮಾಡಿದರು.
ಕಾರ್ಯಕ್ರಮದ ವೇಳೆ ಡಾ. ವಿಜಯಾ ಅವರ ಸಹೋದರಿ ಪುಷ್ಪಾ, ಪುತ್ರ ಗುರು, ಸೊಸೆ ಭಾರತಿ ಸೇರಿದಂತೆ ಅವರ ಹಲವಾರು ಹಿತೈಷಿಗಳು ಪಾಲ್ಗೊಂಡಿದ್ದರು.
State
ಡಿಸಿಎಂ ಡಿಕೆ ಶಿವಕುಮಾರ್ ಭೇಟಿಯಾದ ಸಂಸದ ಬಿ.ವೈ ರಾಘವೇಂದ್ರ

ಬೆಂಗಳೂರು: ಬಿಜೆಪಿ ಸಂಸದ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುರ ಬಿ.ವೈ.ರಾಘವೇಂದ್ರ ಅವರಿಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಈ ಕುರಿತು ಸ್ಪಷ್ಟನೆ ನೀಡಿರುವ ರಾಘವೇಂದ್ರ ಅವರು, ಮಗನ ಮದುವೆ ಇದೆ. ಅದಕ್ಕೆ ಆಮಂತ್ರಣ ನೀಡಲು ಬಂದಿದ್ದೆ. ಜೊತೆಗೆ ಕ್ಷೇತ್ರದ ಅಭಿವೃದ್ಧಿ ವಿಚಾರ ಕುರಿತು ಚರ್ಚೆ ಮಾಡಿದ್ದೇನೆ. ಭೇಟಿಗೆ ಡಿಕೆಶಿ ಅವರು ಸಮಯ ನೀಡಿದ್ದರು. ಅದರಂತೆ ಇಂದು ಭೇಟಿ ಮಾಡಿದ್ದೇನೆ. ಮದುವೆಗೆ ಬರುವುದಾಗಿ ಭರವಸೆ ನೀಡಿದ್ದಾರೆ ಎಂದರು.
ವೈಯಕ್ತಿಕ ವಿಚಾರಕ್ಕೆ ಮಾತ್ರ ನಾನು ಭೇಟಿ ಮಾಡಿದ್ದೇನೆ. ಅದನ್ನು ಹೊರತುಪಡಿಸಿ ಬೇರೆ ಏನು ಇಲ್ಲ. ಅಧಿಕಾರದಲ್ಲಿದ್ದಾಗ, ಸರ್ಕಾರ ಇದ್ದಾಗ ಪಕ್ಷ ಬೇಧ ಮರೆತು ಭೇಟಿ ಮಾಡುವುದು ಸಾಮಾನ್ಯ. ಅದರಂತೆ ಬಿಜೆಪಿಯ ಶಾಸಕ ಬಿ.ಪಿ.ಹರೀಶ್ ಹಾಗೂ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್ ಭೇಟಿ ಮಾಡಿದ್ದಾರೆ. ಅದಕ್ಕೆ ಹೆಚ್ಚಿನ ಮಹತ್ವ ನೀಡಬೇಕಿಲ್ಲ ಎಂದು ಸ್ಪಷ್ಟನೆ ನೀಡಿದರು.
State
ಸಭಾಧ್ಯಕ್ಷ ಯು ಟಿ ಖಾದರ್ ಮನವಿಗೆ ಸ್ಪಂದಿಸಿದ ಶಿಕ್ಷಣ ಇಲಾಖೆ

ಕ್ರಿಶ್ಚಿಯನ್ ಸಮುದಾಯದ ಶಿಕ್ಷಕ/ಶಿಕ್ಷಕಿಯರಿಗೆ ಈಸ್ಟರ್ ಗುಡ್ ಫ್ರೈಡೇ ದಿನಗಳಲ್ಲಿ ಎಸ್ ಎಸ್ ಎಲ್ ಸಿ ಮೌಲ್ಯ ಮಾಪನ ಕರ್ತವ್ಯಕ್ಕೆ ವಿನಾಯಿತಿ,ಸಭಾಧ್ಯಕ್ಷ ಯು ಟಿ ಖಾದರ್ ಮನವಿಗೆ ಸ್ಪಂದಿಸಿದ ಶಿಕ್ಷಣ ಇಲಾಖೆ
ಪವಿತ್ರ ಈಸ್ಟರ್,ಗುಡ್ ಫ್ರೈಡೇ ದಿನಗಳಲ್ಲಿ ಕ್ರಿಶ್ಚಿಯನ್ ಸಮುದಾಯದ ಶಿಕ್ಷಕ/ಶಿಕ್ಷಕಿಯರು ಎಸ್ ಎಸ್ ಎಲ್ ಸಿ ಮೌಲ್ಯ ಮಾಪನದ ಕರ್ತವ್ಯಕ್ಕೆ ಹಾಜರಾಗಬೇಕಾಗಿತ್ತು.ಈ ಬಗ್ಗೆ ಯು ಟಿ ಖಾದರ್ ರವರ ಬಳಿ ಕ್ರಿಶ್ಚಿಯನ್ ಸಮುದಾಯದ ಶಿಕ್ಷಕ ಶಿಕ್ಷಕಿಯರು ಸರಕಾರದ ಜೊತೆ ಮಾತುಕತೆ ನಡೆಸಿ ವಿನಾಯಿತಿ ದೊರಕಿಸಿಕೊಡುವಂತೆ ಮನವಿ ಮಾಡಿದ್ದರು.
ಈ ಬಗ್ಗೆ ಶಿಕ್ಷಣ ಇಲಾಖೆಯ ಮಂತ್ರಿಗಳು ಹಾಗೂ ಮುಖ್ಯ ಕಾರ್ಯದರ್ಶಿಗಳ ಜೊತೆ ಮಾತುಕತೆ ನಡೆಸಿದ ಸಭಾಧ್ಯಕ್ಷ ಯು ಟಿ ಖಾದರ್ ಈಸ್ಟರ್ ಗುಡ್ ಫ್ರೈಡೇ ದಿನಗಳಾದ ಗುರುವಾರ,ಶುಕ್ರವಾರ ಹಾಗೂ ಭಾನುವಾರ ಕರ್ತವ್ಯಕ್ಕೆ ವಿನಾಯಿತಿ ನೀಡುವಂತೆ ಸೂಚನೆ ನೀಡಿದ್ದರು.
ಅದರಂತೆ ಶಿಕ್ಷಣ ಇಲಾಖೆಯು ಕ್ರಿಶ್ಚಿಯನ್ ಸಮುದಾಯದ ಶಿಕ್ಷಕ/ಶಿಕ್ಷಕಿಯರಿಗೆ ಈಸ್ಟರ್,ಗುಡ್ ಫ್ರೈಡೇ ದಿನಗಳಲ್ಲಿ ವಿನಾಯಿತಿ ನೀಡಿ ಉಳಿದ ದಿನಗಳಲ್ಲಿ ಹಾಜರಾಗಲು ಅನುಮತಿ ನೀಡಲಾಗಿದೆ ಎಂದು ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು ಮಾಹಿತಿ ನೀಡಿದ್ದಾರೆ.
State
ಸಿದ್ದರಾಮಯ್ಯ ಜಾತಿಗಣತಿಯನ್ನ ರಾಜಕೀಯ ದಾಳವಾಗಿ ಬಳಸುತ್ತಿದ್ದಾರೆ: ಆರ್.ಅಶೋಕ್

ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗದ ಕಾಂತರಾಜು ವರದಿ ಬಗ್ಗೆ ನಾಡಿನ ಜನತೆಗೆ ಅನುಮಾನ ಇರುವ ಕಾರಣ, ಇನ್ನಾದರೂ ಒಣ ಪ್ರತಿಷ್ಠೆ ಮತ್ತು ಸ್ವಹಿತಾಸಕ್ತಿ ಬದಿಗಿಟ್ಟು ಎಲ್ಲರೂ ಒಪ್ಪುವಂತಹ ವೈಜ್ಞಾನಿಕ ಸಮೀಕ್ಷೆ ನಡೆಸಿ ಹೊಸ ವರದಿ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಬೇಕು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಆಶೋಕ್ ಆಗ್ರಹಿಸಿದ್ದಾರೆ.
ಈ ಕುರಿತು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಆಶೋಕ್ ಅವರು, ಎಲ್ಲರೂ ಒಪ್ಪುವಂತಹ ವೈಜ್ಞಾನಿಕ ಸಮೀಕ್ಷೆ ನಡೆಸಿ ಹೊಸ ವರದಿ ಪಡೆಯಲು ತಮ್ಮ ತಕರಾರೇನು? ಸಿಎಂ ಸಿದ್ದರಾಮಯ್ಯನವರು ಪ್ರಾಮಾಣಿಕ ಮತ್ತು ಪಾರದರ್ಶಕ ನಿರ್ಧಾರ ತೆಗೆದುಕೊಳ್ಳಲಿ ಎಂದು ಒತ್ತಾಯಿಸಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರೊಂದಿಗೆ ಆಗಿದೆ ಎನ್ನಲಾದ ಅಧಿಕಾರ ಹಂಚಿಕೆ ಒಪ್ಪಂದವನ್ನು ಹೇಗಾದರೂ ಮಾಡಿ ಮುಂದೂಡಲು, ಅಧಿಕಾರ ಹಂಚಿಕೆ ಒಪ್ಪಂದದಿಂದ ತಪ್ಪಿಸಿಕೊಳ್ಳಲು ಜಾತಿ ಜನಗಣತಿ ವರದಿಯನ್ನು ತಂತ್ರವಾಗಿ ಬಳಸಿಕೊಳ್ಳಲಾಗುತ್ತಿದೆಯೇ?. ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ತಾವು ಈ ವರದಿ ಜಾರಿ ಬಾಣ ಬಿಟ್ಟಿರುವ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲೇ ಚರ್ಚೆ ನಡೆಯುತ್ತಿದೆ. ಇದರ ಬಗ್ಗೆ ಏನು ಹೇಳುತ್ತೀರಿ? ಎಂದು ಪ್ರಶ್ನೆಸಿದ್ದಾರೆ.
ಜಾತಿಗಣತಿಯನ್ನ ರಾಜಕೀಯ ದಾಳವಾಗಿ ಬಳಸುವುದು ದಲಿತರಿಗೆ, ಹಿಂದುಳಿದ ವರ್ಗಗಳಿಗೆ, ತಳ ಸಮುದಾಯಗಳಿಗೆ ಮಾಡುವ ಅಪಮಾನವಲ್ಲವೇ? ಸಾಮಾಜಿಕ ನ್ಯಾಯವೆಂಬ ಪವಿತ್ರ ಪರಿಕಲ್ಪನೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವುದು ಆತ್ಮವಂಚನೆಯಲ್ಲವೇ? ಜಾತಿ ಜನಗಣತಿ ವರದಿಯ ದತ್ತಾಂಶಗಳು ಮಾಧ್ಯಮಗಳಲ್ಲಿ ಸೋರಿಕೆಯಾಗಲು ಕಾರಣವೇನು? ಇದು ಸರ್ಕಾರದ ಲೋಪವೋ ಅಥವಾ ಉದ್ದೇಶಪೂರ್ವಕವಾಗಿಯೇ ವರದಿಯ ಅಂಕಿ-ಅಂಶಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಲಾಗುತ್ತಿದೆಯೇ? ಕೇವಲ ವೀರಶೈವ ಲಿಂಗಾಯತ ಮತ್ತು ಒಕ್ಕಲಿಗ ಜನಾಂಗಕ್ಕೆ ಸೇರಿದ ಉಪಜಾತಿಗಳನ್ನು ಬೇರ್ಪಡಿಸಲಾಗಿದೆ. ಇದೇ ಮಾನದಂಡ ಮುಸ್ಲಿಂ, ಕ್ರಿಶ್ಚಿಯನ್ ಧರ್ಮಗಳಿಗೆ ಏಕೆ ಅನುಸರಿಸಿಲ್ಲ? ಇದರ ಹಿಂದಿನ ಹುನ್ನಾರ ಏನು? ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
-
Chamarajanagar23 hours ago
ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ
-
Mysore20 hours ago
12 ವರ್ಷದ ಬಾಲಕಿ ಮೇಲೆ ಅತ್ಯಾಚಾರ : ಆರೋಪಿ ಬಂಧನ
-
Hassan24 hours ago
ಬಗರ್ ಹುಕುಂ ಸಾಗುವಳಿ ಮಂಜೂರಾತಿಯ ಸಭೆ
-
Kodagu20 hours ago
ಹುಲಿ ದಾಳಿಗೆ ಕರು ಬಲಿ
-
Kodagu23 hours ago
ಬಿರುನಾಣಿ ವ್ಯಾಪ್ತಿಯಲ್ಲಿ ಹುಲಿ ಸೆರೆಗೆ ಕಾರ್ಯಚರಣೆ
-
Mysore21 hours ago
ಆರ್. ರಘು ಅವರ ಎರಡು ಕೃತಿಗಳ ಲೋಕಾರ್ಪಣೆ
-
Hassan6 hours ago
ಹಾಸನ : ಕಾರಿನೊಳಗೆ ಅಸಿಸ್ಟೆಂಟ್ ಅಕೌಂಟೆಂಟ್ ಅನುಮಾನಾಸ್ಪದ ಸಾ*ವು
-
Kodagu6 hours ago
ಎ.ಎಸ್ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಿ – ಬೆಂಗಳೂರು ಕೊಡವ ಸಮಾಜ ಸಿಎಂಗೆ ಮನವಿ