Mandya
ಬಹುಗ್ರಾಮ ಕುಡಿಯುವ ನೀರು ಯೋಜನೆ: ಸ್ಥಳ ಪರಿಶೀಲನೆ
ಶ್ರೀರಂಗಪಟ್ಟಣ: ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಅವರು ಶ್ರೀರಂಗಪಟ್ಟಣ ತಾಲ್ಲೂಕಿನ ಮರಳಗಾಲಾ ಗ್ರಾಮದಲ್ಲಿ ನಡೆಯುತ್ತಿರುವ ಬಹುಗ್ರಾಮ ಕುಡಿಯುವ ನೀರು ಯೋಜನೆ (MVS) ಕಾಮಗಾರಿ ಪರಿಶೀಲನೆ ನಡೆಸಿದರು.
ಈ ಯೋಜನೆಯಲ್ಲಿ ಜಲಧಾರೆ ಯೋಜನೆ-3, WTP.ಯನ್ನು ನಿರ್ಮಾಣ ಮಾಡಲು ಸ್ಥಳದ ಅವಶ್ಯಕತೆ ಇದ್ದು, ಸ್ಥಳ ನೀಡುವಂತೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಅವರು ತಿಳಿಸಿದರು.
ತದ ನಂತರ ವಡೆಯಂಡನಹಳ್ಳಿಯ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ಪರಿಶೀಲಿಸಿ ಮತ್ತು MTB ಮತ್ತು ZBT ಟ್ಯಾಂಕ್ ನಿರ್ಮಾಣ ಮಾಡಲು ಸಾಮಾಗ್ರಿಗಳನ್ನು ಸಾಗಿಸಲು, ಅರಣ್ಯ ಇಲಾಖೆಯಿಂದ ತಡೆಹಿಡಿದಿದ್ದು, ಪ್ರಾದೇಶಿಕ ಅರಣ್ಯ ಸಂರಕ್ಷಣಾಧಿಕಾರಿರವರನ್ನು ಸ್ಥಳಕ್ಕೆ ಕರೆಯಿಸಿ ಮಾತನಾಡಿ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿರವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಕೆಲಸ ಶುರು ಮಾಡಲು ಅನುವು ಮಾಡಿಕೊಟ್ಟರು.

Mandya
ರೈತರ ಬದುಕು ಹಸನಾಗಿಸಲು ಸರ್ಕಾರ ಅಗತ್ಯ ಕ್ರಮವಹಿಸಬೇಕು: ವಿ. ಸಿ. ಉಮಾಶಂಕರ
ಮದ್ದೂರು : ದುಡಿಮೆಯೆ ದೇವರೆಂದು ನಂಬಿ ಹಗಲಿರಳು ಭೂಮಿ ತಾಯಿಯ ಸೇವೆ ಸಲ್ಲಿಸಿ ಇಡಿ ಜಗತ್ತಿಗೆ ಅನ್ನ ನೀಡುವ ಕಾಯಕ ಯೋಗಿಯ ಬದುಕು ಸದಾ ಹಸನಾಗಲುವಂತೆ ಮಾಡಲು ಆಳುವ ಸರ್ಕಾರಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ. ಸಿ. ಉಮಾಶಂಕರ ಒತ್ತಾಯಿಸಿದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ಮಂಗಳವಾರ ನಗರದ ಮಳವಳ್ಳಿ ರಸ್ತೆಯಲ್ಲಿರುವ ವಿಶ್ವ ರೈತನಾಯಕ ಪ್ರೊ.ನಂಜುಂಡಸ್ವಾಮಿ ಅವರ ಪುತ್ತಳಿ ಬಳಿ ನಡೆದ ವಿಶ್ವ ರೈತ ದಿನಾಚರಣೆ ಅಂಗವಾಗಿ ಪ್ರೊ.ನಂಜುಂಡಸ್ವಾಮಿ ಅವ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದ ನಂತರ ಮಾತನಾಡಿದರು.

ಭಾರತದ ಐದನೇ ಪ್ರಧಾನಿ ಚೌದರಿ ಚರಣ್ ಸಿಂಗ್ ಅವರ ಜನ್ಮದಿನವನ್ನು ರೈತರ ದಿನವನ್ನಾಗಿ ಆಚರಿಸಲಾಗುತ್ತಿದೆ. ರೈತರಿಗಾಗಿ ತಮ್ಮ ಅಧಿಕಾರಾವಧಿಯಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದು ಅನುಷ್ಠಾನಗೊಳಿಸಿದ ಕೀರ್ತಿ ಚರಣ್ ಸಿಂಗ್ ಅವರಿಗೆ ಸಲ್ಲುತ್ತದೆ ಎಂದರು.
ದೇಶದ ಬೆನ್ನೆಲುಬು, ಅನ್ನ ನೀಡುವ ಅನ್ನದಾತರು ಪ್ರಕೃತಿಗೆ ಅವಲಂಬಿತರಾಗಿ ಎಲ್ಲಾ ಸಂಕಷ್ಟಗಳನ್ನು ಎದುರಿಸಿ ಬೆಳೆ ಬೆಳೆದು ಹಸಿವನ್ನೂ ನೀಗಿಸುವ ಶ್ರಮಿಕ ಜೀವಿ ರೈತ ನಮ್ಮ ದೇಶದ ಆರ್ಥಿಕತೆಯಲ್ಲಿ ಕೃಷಿ ಕ್ಷೇತ್ರದ ಪಾತ್ರ ಅತ್ಯಂತ ಮಹತ್ವವಾಗಿದೆ ಎಂದರು.

ಆಧುನಿಕ ತಂತ್ರಜ್ಞಾನ ಮತ್ತು ವಿಜ್ಞಾನದ ಪ್ರಯೋಜನ ರೈತರಿಗೆ ತಲುಪಬೇಕು ರೈತರ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಆರೋಗ್ಯ ಸಿಗುವಂತಾಗಬೇಕು ರೈತರ ಬದುಕು ಸುಧಾರಿಸಿದರೆ ಮಾತ್ರ ನಮ್ಮ ದೇಶ ಅಭಿವೃದ್ಧಿ ಸಾಧ್ಯವಾಗುತ್ತದೆ. ಸರ್ಕಾರಗಳು ಕೃಷಿಯನ್ನು ಬೆಂಬಲಿಸಬೇಕು ಕೃಷಿಗೆ ಮಾನ್ಯತೆ ಕೊಡಬೇಕೆಂದು ಕರೆಯಿತ್ತರು.
ಭಾರತದ ಎರಡನೇ ಪ್ರಧಾನ ಮಂತ್ರಿಗಳಾದ ಲಾಲ್ ಬಹುದ್ದೂರ್ ಶಾಸ್ತ್ರಿ ಅವರು ಜೈ ಜವಾನ್ ಜೈ ಕಿಸಾನ್ ಉದ್ಘೋಷಗಳೊಂದಿಗೆ ಯೋಧ ಮತ್ತು ರೈತರಿಗೆ ಗೌರವ ಸೂಚಿಸಿದರು ಇಡೀ ಜಗತ್ತಿನ ಶಕ್ತಿ ಅಡಗಿರುವುದು ರೈತನ ತೋಳ್ಬಲದಲ್ಲಿ ಮಾತ್ರ ಜಗತ್ತಿನ ಹಸಿವನ್ನ ನೀಗಿಸುವ ಶಕ್ತಿ ಇರುವುದು, ರೈತನ ರೆಟ್ಟೆಗಳಲ್ಲಿ ಮಾತ್ರ ಎಂದು ರಾಷ್ಟ್ರಕವಿ ಕುವೆಂಪುರವರ ನುಡಿಮುತ್ತುಗಳು ಅಮೃತವಾಣಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ಸಿ.ಲಿಂಗರಾಜು, ತಾಲೂಕು ಅಧ್ಯಕ್ಷ ತಿಪ್ಪೂರು ರಾಜೇಶ್, ಒಕ್ಕಲಿಗರ ಸಂಘದ ಅಧ್ಯಕ್ಷ ಶಿವಲಿಂಗೇಗೌಡ, ಗೌರವಾಧ್ಯಕ್ಷ ಶಿವಲಿಂಗಯ್ಯ, ಸಂಘಟನೆ ಮುಖಂಡರಾದ ಹಾಗಲಹಳ್ಳಿ ಬಸವರಾಜು, ಸಕ್ಕರೆ ನಾಗರಾಜು, ಬೆಳತೂರು ಚಂದ್ರಹಾಸ, ವಿ. ಪಿ. ವರದರಾಜು, ಗ್ರಾಪಂ ಮಾಜಿ ಅಧ್ಯಕ್ಷ ಹುಲಿಗೆರೆಪುರ ಮಹದೇವ, ಮಹದೇಶ, ನಾಗರಾಜು, ಹಿರಿಯ ಕಲಾವಿದರಾದ ವಿ.ಕೆ. ರಾಮು, ವೀರಭದ್ರ ಚಾರಿ, ಸತೀಶ್, ಪುಟ್ಟಸ್ವಾಮಿ, ರೈತ ಮುಖಂಡರಾದ ಕೋಣಸಾಲೆ ಲಿಂಗರಾಜು, ಅರಗಿನಮಳೆ ರಾಮಣ್ಣ, ರಾಹುಲ್, ರಾಮಕೃಷ್ಣ ಇದ್ದರು.
Mandya
SSLC ಫಲಿತಾಂಶ ಸಂಬಂಧ “ಮಿಷನ್ 40 ಫಾರ್ 90 ಡೇಸ್” ಅಭಿಯಾನದ ಪರಿಶೀಲನಾ ಸಭೆ ನಡೆಸಿದ ಕೆ.ಆರ್.ನಂದಿನಿ
ಮಂಡ್ಯ: ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಮಂಡ್ಯ ಜಿಲ್ಲೆಯಲ್ಲಿ ವಿನೂತನವಾಗಿ “ಮಿಷನ್ 40 ಫಾರ್ 90 ಡೇಸ್” ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಸದರಿ ಅಭಿಯಾನದ ಪರಿಶೀಲನಾ ಸಭೆಯನ್ನು ಜಿ.ಪಂ. ಸಿಇಓ ನಂದಿನಿ ಕೆ.ಆರ್. ಅವರು ನಡೆಸಿದರು.
ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿ ವಿದ್ಯಾರ್ಥಿಯು 90 ದಿನಗಳಲ್ಲಿ ಕನಿಷ್ಟ 40 ಅಂಕಗಳನ್ನು ಪಡೆಯುವಂತೆ ಮಾಡಲು ಕ್ರಮವಹಿಸಬೇಕೆಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಫಲಿತಾಂಶ ಉತ್ತಮಗೊಳಿಸಲು ನೇಮಕ ಮಾಡಲಾಗಿರುವ 56 ನೋಡಲ್ ಅಧಿಕಾರಿಗಳಿಗೆ ಸೂಚಿಸಿದರು.

ಡಿ. 18,19,ಮತ್ತು 20ನೇ ತಾರೀಖುಗಳಂದು ಜಿಲ್ಲೆಯ ಎಲ್ಲಾ ಹೈಸ್ಕೂಲ್ ಗಳಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ 40 ಅಂಕಗಳಿಗೆ ಅಭ್ಯಾಸ ಪರೀಕ್ಷೆ ನೀಡುವಂತೆ ಸೂಚಿಸಲಾಗಿದ್ದು, ಸದರಿ ಪರೀಕ್ಷೆಯಲ್ಲಿ ಶೇಕಡ 50ಕ್ಕಿಂತ ಕಡಿಮೆ ಅಂಕ ಪಡೆದ 5221 ವಿದ್ಯಾರ್ಥಿಗಳಿಗೆ ಹೆಚ್ಚಿನ ವಿಶೇಷ ಗಮನ ಹರಿಸಿ ವಿಶೇಷ ತರಗತಿಗಳನ್ನು ತೆಗೆದುಕಳ್ಳುವಂತೆ ಸೂಚಿಸಲಾಗಿದೆ ಎಂದರು.
ಸಿ.ಎಸ್.ಆರ್. ಅನುದಾನದಡಿ ಮಕ್ಕಳಿಗೆ ನೋಟ್ ಬುಕ್ ವಿತರಣೆಗೆ ಕ್ರಮ:
ಅಭ್ಯಾಸ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಭ್ಯಾಸ ನಡೆಸಲು ನೋಟ್ ಬುಕ್ ಗಳ ಕೊರತೆ ಎದುರಾಗುತ್ತದೆಂಬ ಅಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಸಿ.ಎಸ್.ಆರ್. ಅನುದಾನದಡಿ ನೋಟ್ ಬುಕ್ ಗಳನ್ನು ಪಡೆದು ಶಾಲೆಗೆ ವಿತರಿಸಲು ಪ್ರಯತ್ನಿಸಲಾಗುವುದು ಎಂದು ಮಾಹಿತಿ ನೀಡಿದರು.
ಈಗಾಗಲೇ ಕೆಲವು ಸಂಸ್ಥೆಗಳಿಗೆ ತಮ್ಮ ಸಿ.ಎಸ್.ಆರ್. ಅನುದಾನದಡಿ ನೋಟ್ ಬುಕ್ ಗಳನ್ನು ವಿತರಣೆ ಮಾಡುವಂತೆ ಕೋರಲಾಗಿದೆ ಎಂದು ಮಾಹಿತಿ ನೀಡಿದರು.

ಮೇಲ್ವಿಚಾರಣಾ ಸಮಿತಿ ರಚನೆ:
ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಪ್ರಾಂಶುಪಾಲರು, ಡಯಟ್, ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಅಧಿಕಾರಿ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆರವರನ್ನೊಳಗೊಂಡ ಮೇಲ್ವಿಚಾರಣಾ ಸಮಿತಿಯನ್ನು ರಚಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಕಾರ್ಯನಿರ್ವಾಹಕ ಅಧಿಕಾರಿಗಳು ಎಸ್.ಎಸ್,ಎಲ್.ಸಿ. ಫಲಿತಾಂಶ ಉತ್ತಮಗೊಳಿಸುವ ನಿಟ್ಟಿನಲ್ಲಿ ತಾಲ್ಲೂಕು ಮಟ್ಟದಲ್ಲಿ ಸಭೆಗಳನ್ನು ನಡೆಸಿ ಕಾಲ ಕಾಲಕ್ಕೆ ವರದಿ ನೀಡಬೇಕು ಹಾಗೂ ಫಲಿತಾಂಶ ಉತ್ತಮಗೊಳಿಸುವ ಸಂಬಂಧ ಗ್ರಾ.ಪಂ. ಗಳು ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಅಗತ್ಯ ಸಹಕಾರ ನೀಡುವಂತೆ ನಿರ್ದೇಶನ ನೀಡಬೇಕು ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.

ಉತ್ತಮ ಫಲಿತಾಂಶ ಸಾಧನೆ ಮಾಡುವ ಬಿಇಓ, ಹೆಚ್.ಎಂ. ಮತ್ತು ನೋಡಲ್ ಅಧಿಕಾರಿಗಳಿಗೆ ಬಹುಮಾನ: ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವ ಶಾಲೆಯ ಮುಖ್ಯೋಪದ್ಯಾಯರು, ನೋಡಲ್ ಅಧಿಕಾರಿಗಳು ಮತ್ತು ಬಿಇಓ ಗಳಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದು ಸಿಇಓ ಅವರು ತಿಳಿಸಿದರು.
ಕೆ.ಆರ್.ಪೇಟೆ, ಪಾಂಡವಪುರ ಮತ್ತು ಶ್ರೀರಂಗಪಟ್ಟಣದಲ್ಲಿ ಕಡಿಮೆ ಫಲಿತಾಂಶ: ಅಭ್ಯಾಸ ಪರೀಕ್ಷೆಯಲ್ಲಿ ಕೆ.ಆರ್.ಪೇಟೆ, ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲ್ಲೂಕಿನ ಶಾಲೆಗಳಲ್ಲಿ ಶೇಕಡ 50ಕ್ಕಿಂತ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿ ಇದ್ದು, ಈ ತಾಲ್ಲೂಕುಗಳಲ್ಲಿ ವಿಶೇಷ ಗಮನ ಹರಿಸುವಂತೆ ಸಿಇಓ ಅವರು ನೋಡಲ್ ಅಧಿಕಾರಿಗಳು ಮತ್ತು ಬಿಇಓ ಗಳಿಗೆ ಸೂಚಿಸಿದರು.
ಮಂಡ್ಯ ಉತ್ತರ ಮತ್ತು ದಕ್ಷಿಣ ವಲಯದಲ್ಲಿ ಉತ್ತಮ ಫಲಿತಾಂಶ ಬದ್ದಿದ್ದು, ಶೇಕಡ 90ಕ್ಕೆ ಪ್ರಗತಿಯನ್ನು ಹೆಚ್ಚಿಸುವಂತೆ ಸಂಬಂಧಪಟ್ಟ ಬಿಇಓ ಮತ್ತು ನೋಡಲ್ ಅಧಿಕಾರಿಗಳಿಗೆ ಸೂಚಿಸಿದರು.
ನಿವೃತ್ತ ಅಡುಗೆ ಸಿಬ್ಬಂದಿಗಳ ಇಡಿಗಂಟು ಮೊತ್ತವನ್ನು ಹೊಸ ವರ್ಷಕ್ಕೆ ನೇರವಾಗಿ ಜಮೆ ಮಾಡುವಂತೆ ಕ್ರಮವಹಿಸಲು ಸೂಚನೆ: 2022ನೇ ಸಾಲಿನಿಂದ ಬಾಕಿ ಉಳಿದಿದ್ದ ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿರುವ 217 ಅಡುಗೆ ಸಿಬ್ಬಂದಿಗಳಿಗೆ 1 ಜನವರಿ 2026ರ ಹೊಸ ವರ್ಷದಂದು ಸರ್ಕಾರದ ನಿರ್ದೇಶನದಂತೆ ನೇರವಾಗಿ ಸಂಬಂಧಪಟ್ಟವರ ಖಾತೆಗೆ ಇಡಿಗಂಟು ಪಾವತಿಸಲು ಅಗತ್ಯ ಕ್ರಮವಹಿಸುವಂತೆ ಸಿಇಓ ಅವರು ಸೂಚಿಸಿದರು.
ಬಿಸಿಯೂಟ ಸಿಬ್ಬಂದಿಗಳ ಹಿತಾಸಕ್ತಿ ರಕ್ಷಿಸುವ ನಿಟ್ಟಿನಲ್ಲಿ ಇದೆ ಮೊದಲ ಬಾರಿಗೆ ಈ ರೀತಿಯ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಲೋಕೇಶ್ ಜಿ, ಡಯಟ್ ಪ್ರಾಂಶುಪಾಲರಾದ ಯೋಗೇಶ್, ಮಧ್ಯಾಹ್ನದ ಬಿಸಿಯೂಟ ಯೋಜನೆಯ ಶಿಕ್ಷಣಾಧಿಕಾರಿ ರವಿಕುಮಾರ್ ಸೇರಿದಂತೆ ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಫಲಿತಾಂಶ ಉತ್ತಮಗೊಳಿಸುವ ನಿಟ್ಟಿನಲ್ಲಿ ನೇಮಕ ಮಾಡಲಾಗಿರುವ ನೋಡಲ್ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
Mandya
ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕ ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ
ಮಂಡ್ಯ : ರಾಜ್ಯ ಸರ್ಕಾರವು ಅನುಷ್ಠಾನಕ್ಕೆ ತರುತ್ತಿರುವ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕವನ್ನು ವಿರೋಧಿಸಿ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕವು ನಾಗರೀಕರ ಮೂಲ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಸಂವಿಧಾನದ 19 (1) ಪರಿಚ್ಛೇದ, (2) ಪರಿಚ್ಛೇದದಡಿ ವಾಕ್ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಲಿದೆ ಎಂದು ಕಿಡಿಕಾರಿದರು.

ದ್ವೇಷ ಭಾಷಣಕ್ಕೆ ನೀಡಿರುವ ವ್ಯಾಖ್ಯಾನವೇ ಅಸ್ಪಷ್ಟವಾಗಿದೆ. ಸರ್ಕಾರದ ನೀತಿಗಳ ವಿರುದ್ಧ ಟೀಕೆ, ಸಾಮಾಜಿಕ ಚರ್ಚೆ, ವ್ಯಂಗ್ಯ ಮಾಡುವುದು ಅಥವಾ ಸತ್ಯವನ್ನು ಹೇಳುವುದನ್ನೂ ಕೂಡ ದ್ವೇಷ ಎಂದು ಪರಿಗಣಿಸುವ ಅಪಾಯವಿದೆ. ಜನರು ಭಯದಿಂದ ಮಾತನಾಡದೆ ಇರುವುದು ಸರ್ಕಾರದ ಉದ್ದೇಶವೇ ಎಂಬ ಪ್ರಶ್ನೆ ಮೂಡುತ್ತಿದೆ. ಇದು ಪ್ರಜಾಪ್ರಭುತ್ವದ ಮೂಲತತ್ವಕ್ಕೆ ಹಾನಿ ಮಾತ್ರವಲ್ಲ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಪ್ರಯತ್ನವಾಗಲಿದೆ. ಈ ಕಾನೂನು ಪೊಲೀಸರಿಗೆ ಮತ್ತು ಸರ್ಕಾರಕ್ಕೆ ನಿರಂಕುಶ ಅಧಿಕಾರ ನೀಡುತ್ತದೆ ಎಂದು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ವಿವೇಕ್, ವಸಂತ್ ಕುಮಾರ್, ಸಿ.ಟಿ.ಮಂಜುನಾಥ್ ಸೇರಿದಂತೆ ಇತರರು ಭಾಗವಹಿಸಿದ್ದರು.
-
Kodagu8 hours agoಹೆಚ್.ಎ.ನಗ್ಮಾಭಾನು ಅವರಿಗೆ ಯುವ ಮಹಿಳಾ ಸಂಶೋಧಕಿ ಪ್ರಶಸ್ತಿ
-
Hassan8 hours agoಹಳ್ಳಿಮೈಸೂರು ಹೋಬಳಿಯನ್ನು ಹೊಸ ತಾಲೂಕು ಕೇಂದ್ರವನ್ನಾಗಿ ಘೋಷಿಸುವಂತೆ ಗ್ರಾಮಸ್ಥರಿಂದ ಡಿಸಿಗೆ ಮನವಿ
-
Mysore17 hours agoರಾಜ್ಯದ ಶಾಲೆಗಳಲ್ಲೂ ಸಕ್ಕರೆ, ಉಪ್ಪು ಪ್ರಮಾಣ ಸೂಚಿಸುವ ಬೋರ್ಡ್ ಅಗತ್ಯ: ಡಾ. ಸುಶ್ರುತ ಗೌಡ ಸಲಹೆ
-
Kodagu11 hours agoಜ್ಯೋತಿ ಪ್ರಧಾನ ಕಾರ್ಯಕ್ರಮ
-
Mysore6 hours agoದೇವರಸನಹಳ್ಳಿ ಗ್ರಾಂ.ಪಂ.ನಲ್ಲಿ ವ್ಯಾಪಕ ಭ್ರಷ್ಟಾಚಾರ : ತನಿಖೆ ನಡೆಸುವಂತೆ ಮಾಜಿ ಗ್ರಾಂ.ಪಂ.ಸದಸ್ಯ ಮಹದೇವು ಆಗ್ರಹ
-
Hassan19 hours agoತಾಯಿಯಾದ 10 ತರಗತಿ ವಿದ್ಯಾರ್ಥಿನಿ: ಕಾರಣ ಕರ್ತ ಕೀಚಕ ಪರಾರಿ
-
Mysore10 hours agoನಾಲ್ಕನೇ ವರ್ಷದ ಅದ್ದೂರಿ ಹನುಮ ಜಯಂತಿ
-
Mysore5 hours agoತಿ.ನರಸೀಪುರ ಗುಂಜಾ ನರಸಿಂಹಸ್ವಾಮಿ ಹುಂಡಿ ಎಣಿಕೆ
