Cinema
17 ನೇ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದ ಕನ್ನಡ ಚಿತ್ರ ಸ್ಪರ್ಧಾ ವಿಭಾಗದಲ್ಲಿ ಬಡಿಗೇರ್ ದೇವೇಂದ್ರ ನಿರ್ದೇಶನದ “ವನ್ಯಾ” ಚಿತ್ರ ಪ್ರದರ್ಶನ
17 ನೇ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದ ಕನ್ನಡ ಚಿತ್ರ ಸ್ಪರ್ಧಾ ವಿಭಾಗದಲ್ಲಿ ಬಡಿಗೇರ್ ದೇವೇಂದ್ರ ನಿರ್ದೇಶನದ “ವನ್ಯಾ” ಚಿತ್ರ ಪ್ರದರ್ಶನ .
ಪಲ್ಲವಿ ಅನಂತ್ ಪೂಮಗಾಮೆ ನಿರ್ಮಾಣದ, ಬಡಿಗೇರ್ ದೇವೇಂದ್ರ ನಿರ್ದೇಶನದ ಹಾಗೂ ವೈಜನಾಥ್ ಬಿರಾದಾರ್, ಮೇಘನಾ ಬೆಳವಾಡಿ, ಪ್ರಕಾಶ್ ಬೆಳವಾಡಿ ಮುಂತಾದವರು ಪ್ರಮುಖಪಾತ್ರದಲ್ಲಿ ನಟಿಸಿರುವ “ವನ್ಯಾ” ಚಿತ್ರ ಈ ಬಾರಿಯ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಕನ್ನಡ ಚಿತ್ರಗಳ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನವಾಗಿದೆ. ಪ್ರದರ್ಶನದ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಈಗಾಗಲೇ ನಮ್ಮ ಚಿತ್ರ ಹತ್ತಕ್ಕೂ ಹೆಚ್ಚು ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿದೆ. ಪ್ರಸ್ತುತ ನಮ್ಮ ಬೆಂಗಳೂರು ಚಿತ್ರೋತ್ಸವದಲ್ಲಿ “ವನ್ಯಾ” ಚಿತ್ರ ಪ್ರದರ್ಶನವಾಗಿರುವುದು ಬಹಳ ಖುಷಿಯಾಗಿದೆ. “ವನ್ಯಾ” ಕಾಡಿನ ಪ್ರಮುಖ್ಯತೆ ತಿಳಿಸುವ ಚಿತ್ರ. ನಗರದವರು ಈಗ ವಿಶ್ರಾಂತಿಗಾಗಿ ಕಾಡಿಗೆ ಹೋಗುತ್ತಿದ್ದಾರೆ. ಅದರಿಂದ ನಮ್ಮ ಕಾಡುಗಳಿಗೆ ಹೆಚ್ಚು ಹಾನಿಯಾಗುತ್ತಿದೆ. ಕಾಡಿನಲ್ಲಿ ನೆಲೆಸಿರುವ ಎಷ್ಟೋ ಜನರು ನಾಡಿನತ್ತ ಮುಖ ಮಾಡುತ್ತಿದ್ದಾರೆ. ಈ ರೀತಿಯ ವಿಭಿನ್ನ ಕಥಾಹಂದರ ಹೊಂದಿರುವ ನಮ್ಮ ಚಿತ್ರವನ್ನು ಚಿತ್ರೋತ್ಸವದಲ್ಲಿ ನೋಡಿದವರು ನೀಡಿದ ಪ್ರಶಂಸೆಗೆ ಮನ ತುಂಬಿ ಬಂದಿದೆ ಎಂದು ನಿರ್ದೇಶಕ ಬಡಿಗೇರ್ ದೇವೆಂದ್ರ ತಿಳಿಸಿದರು.
ಈ ಚಿತ್ರದಲ್ಲಿ ಅಭಿನಯಿಸಿರುವುದು ಖುಷಿಯಾಗಿದೆ. ಕಾಡನ್ನು ಬಿಟ್ಟು ನಾಡಿಗೆ ಬರಲು ಮನಸ್ಸಿಲ್ಲದ ವಯಸ್ಸಾದ ವ್ಯಕ್ತಿಯ ಪಾತ್ರ ನನ್ನದು ಎಂದು ಹಿರಿಯ ನಟ ವೈಜನಾಥ ಬಿರಾದಾರ್ ಹೇಳಿದರು.

ಚಿತ್ರದಲ್ಲಿ ನಟಿಸಿರುವ ಅಶ್ವಿನ್ ಹಾಸನ್, ಯಶವಂತ್ ಹಾಗೂ ನಿರ್ಮಾಪಕಿ ಪಲ್ಲವಿ ಅನಂತ್ ಪೂಮಗಾಮೆ ಮುಂತಾದವರು ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ “ವನ್ಯಾ” ಚಿತ್ರ ಪ್ರದರ್ಶನವಾಗಿರುವುದಕ್ಕೆ ಸಂತಸಪಟ್ಟರು.
Cinema
ಸಿನಿಮಾ ವಿಶ್ಲೇಷಣೆ ಮೂಲಕ ಸಿನಿಮಾ ಕಟ್ಟುವ ಬಗೆ ಕಲಿಸಿದ ಗುರು ಸತೀಶ್ ಬಹಾದುರ್: ಗಿರೀಶ್ ಕಾಸರವಳ್ಳಿ
ಬೆಂಗಳೂರು ಚಿತ್ರೋತ್ಸವ ವೇದಿಕೆ: ‘ಸಿನಿಮಾ ಶಿಕ್ಷಕರಾಗಿದ್ದ ಸತೀಶ್ ಬಹಾದುರ್ ಅವರು ಸಿನಿಮಾ ವಿಶ್ಲೇಷಿಸುವ ಮೂಲಕ ಸಿನಿಮಾ ಕಟ್ಟುವ ಕ್ರಮನ್ನು ಕಲಿಸಿಕೊಟ್ಟರು. ದಾರಿ ಅರ್ಥ ಮಾಡಿಕೊಳ್ಳದೆ ಇದ್ದರೆ ಗುರಿ ಸಾಧಿಸಲು ಆಗುವುದಿಲ್ಲ ಎಂದು ತಿಳಿಸಿಕೊಟ್ಟರು. ಸಿನಿಮಾ ಎಂದರೆ ಕತೆ ಮಾತ್ರವೇ ಅಲ್ಲ, ರಿದಂ, ಸಮತೋಲನ ಎಲ್ಲವೂ ಹೌದು. ಅವೆಲ್ಲವನ್ನೂ ಅರ್ಥ ಮಾಡಿಕೊಂಡರೆ ಸಿನಿಮಾ ಕಟ್ಟುವ ಕ್ರಮವನ್ನು ಕಲಿಯಬಹುದು ಎಂಬುದನ್ನು ಅರ್ಥಮಾಡಿಸಿದರು’ ಎಂದು ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹೇಳಿದರು.
ಸಿನಿಮಾ ಶಿಕ್ಷಕ ಮತ್ತು ಸಿನಿಮಾ ವಿಮರ್ಶಕ ಸತೀಶ್ ಬಹಾದುರ್ ಶತಮಾನೋತ್ಸವ ವರ್ಷದ ಹಿನ್ನೆಲೆಯಲ್ಲಿ ನಡೆದ ಗೋಷ್ಠಿಯಲ್ಲಿ ಸತೀಶ್ ಬಹಾದುರ್ ಅವರ ಪ್ರಾಮುಖ್ಯತೆಯ ಕುರಿತು ಅವರು ಮಾತನಾಡಿದರು.
‘ಸತೀಶ್ ಬಹಾದುರ್ ಅವರು ಸಿನಿಮಾ ವಿಶ್ಲೇಷಣೆಯ ಶಿಕ್ಷಕರಾಗಿದ್ದರು. ಸಿನಿಮಾ ಅನ್ನುವುದು ಅನುಭವ ಮತ್ತು ಪ್ರದರ್ಶಕ ಕಲೆಯೂ ಹೌದು. ಸಿನಿಮಾ ಪ್ರೇಕ್ಷಕನಿಗೆ ಅನುಭವ ಕಟ್ಟಿಕೊಡಬಲ್ಲ ಸಿನಿಮಾ ಹೇಗೆ ರೂಪಿಸಬೇಕು ಅನ್ನುವುದನ್ನು ಅವರು ವಿದ್ಯಾರ್ಥಿಗಳಿಗೆ ಕಲಿಸಿಕೊಟ್ಟರು. ಅವರನ್ನು ಫಾದರ್ ಆಫ್ ಫಿಲ್ಮ್ ಅಪ್ರಿಸಿಯೇಷನ್ ಅಂತ ಕರೆಯುತ್ತಾರೆ. ಆದರೆ ಅದು ಸರಿಯಲ್ಲ, ಅವರು ಫಾದರ್ ಆಫ್ ಫಿಲ್ಮ್ ಅನಾಲಿಸಿಸ್’ ಎಂದು ಅವರು ಹೇಳಿದರು. ಸುದೀರ್ಘವಾಗಿ ಮಾತನಾಡಿದ ಅವರು ಭಾರತೀಯ ಚಿತ್ರರಂಗದಲ್ಲಿ ಸತೀಶ್ ಬಹಾದುರ್ ಅವರ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟರು.
ಸಿನಿಮಾ ವಿಮರ್ಶಕ, ಬೆಂಗಳೂರು ಚಿತ್ರೋತ್ಸವದ ಮಾಜಿ ಕಲಾ ನಿರ್ದೇಶಕರಾದ ಎನ್. ವಿದ್ಯಾಶಂಕರ್ ಅವರು ಮಾತನಾಡಿ, ‘ಸಿನಿಮಾ ಅನುಭವವನ್ನು ದಾಖಲಿಸುವುದು ಮುಖ್ಯ. ಸಿನಿಮಾವನ್ನು ಓದುವ ಕ್ರಮವನ್ನು, ಅನುಭವ ಅರ್ಥ ಮಾಡಿಕೊಳ್ಳುವ ವಿಧಾನವನ್ನು, ಸಿನಿಮಾವನ್ನು ನೋಡುವ, ಅರಿಯುವ ಅಭ್ಯಾಸ ಬೆಳೆಸುವ ವಿಚಾರದಲ್ಲಿ ಸತೀಶ್ ಬಹಾದುರ್ ಒಂದು ಅಪ್ರತಿಮ ದಾರಿಯನ್ನು ಹಾಕಿಕೊಟ್ಟರು. ಕ್ಲಾಸಿಕಲ್ ಸಿನಿಮಾವನ್ನು ನಮ್ಮದಾಗಿಸುವ ಬಗೆಯನ್ನು ದಶಕಗಳ ಕಾಲ ಕಲಿಸಿಕೊಟ್ಟರು. ನಿಮ್ಮ ಕೆಲಸವನ್ನು ಅರ್ಥ ಮಾಡಿಕೊಳ್ಳುವುದನ್ನು ಕಲಿಯಿರಿ. ಆಗ ಬೇರೆಯದನ್ನೂ ಅರ್ಥ ಮಾಡಿಕೊಳ್ಳುವ ಶಕ್ತಿ ಒದಗುತ್ತದೆ’ ಎಂದು ಅವರು ಹೇಳಿಕೊಟ್ಟರು.
ಹಿರಿಯ ಛಾಯಾಗ್ರಾಹಕರಾದ ಜಿ ಎಸ್ ಭಾಸ್ಕರ್ ಅವರು, ತಮ್ಮ ಮತ್ತು ಸತೀಶ್ ಬಹಾದುರ್ ಅವರ ನಡುವಿನ ಒಡನಾಟ ನೆನಪಿಸಿಕೊಂಡರು. ಆಪ್ತವಾಗಿ ಕಾರ್ಯಕ್ರಮ ನಿರ್ವಹಿಸಿದರು.
Cinema
ಮೊದಲಿನಂತೆ ಸ್ವತಂತ್ರವಾಗಿ ಸಿನಿಮಾ ಮಾಡಲಾಗುತ್ತಿಲ್ಲ
ಬೆಂಗಳೂರು : 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ನಡೆದ ‘ಫಿಯರ್‌ಲೆಸ್ ಫಿಲ್ಮ್ ಮೇಕಿಂಗ್ʼ (ಭಯವಿಲ್ಲದ ಚಲನಚಿತ್ರ ನಿರ್ಮಾಣ) ಸಂವಾದದಲ್ಲಿ ಬಾಲಿವುಡ್ ನಟ-ನಿರ್ದೇಶಕ ಅನುರಾಗ್ ಕಶ್ಯಪ್ ಭಾಗವಹಿಸಿ, ಸದ್ಯದ ಸಿನಿಮಾ ಪ್ರವೃತ್ತಿ, ರಾಜಕೀಯ ಮತ್ತು ತಂತ್ರಜ್ಞಾನದ ಬಗ್ಗೆ ಮುಕ್ತವಾಗಿ ಮಾತನಾಡಿದರು. ಖ್ಯಾತ ಚಿತ್ರ ವಿಮರ್ಶಕ ಭಾರದ್ವಾಜ್ ರಂಗನ್ ಈ ಸಂವಾದವನ್ನು ನಡೆಸಿಕೊಟ್ಟರು.

ʼಇಂದಿನ ದಿನಗಳಲ್ಲಿ ‘ಗ್ಯಾಂಗ್ಸ್ ಆಫ್ ವಾಸೇಪುರ್’ ಅಥವಾ ‘ಬ್ಲ್ಯಾಕ್ ಫ್ರೈಡೇ’ ನಂತಹ ಚಿತ್ರಗಳನ್ನು ಮಾಡುವುದು ಅಸಾಧ್ಯ. ಕೆಲವು ವಿಷಯಗಳು ರಾಜಕೀಯವಾಗಿ ಸೂಕ್ಷ್ಮವಾಗಿ ಪರಿಣಮಿಸಿದ್ದು, ವಿವಾದಗಳಿಗೆ ಕಾರಣವಾಗುತ್ತದೆ’ ಎಂದು ಅನುರಾಗ್ ಕಶ್ಯಪ್ ಅಭಿಪ್ರಾಯಪಟ್ಟಿದ್ದಾರೆ.
ʼಇರಾನ್ ಅಥವಾ ರಷ್ಯಾದಂತಹ ರಾಷ್ಟ್ರಗಳ ನಿರ್ದೇಶಕರು ನಮಗಿಂತ ಹೆಚ್ಚಿನ ನಿರ್ಬಂಧಗಳ ನಡುವೆಯೂ ಸಿನಿಮಾ ಮಾಡುತ್ತಿದ್ದಾರೆ. ಭಾರತೀಯ ನಿರ್ದೇಶಕರು ಅವರಿಂದ ಸ್ಫೂರ್ತಿ ಪಡೆಯಬೇಕುʼ ಎಂದು ಹೇಳಿದರು.
ಇತ್ತೀಚಿನ ‘ಧುರಂಧರ್’ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಅನುರಾಗ್ ಕಶ್ಯಪ್, ʼಇದು ಧೈರ್ಯಶಾಲಿ ಮುಖ್ಯವಾಹಿನಿ ಚಿತ್ರಕ್ಕೆ ಉತ್ತಮ ಉದಾಹರಣೆ. ನನಗೆ ಈ ಸಿನಿಮಾ ಇಷ್ಟವಾಯಿತು, ಆದರೆ, ಕೆಲವು ಸಿದ್ಧಾಂತಗಳು ಇಷ್ಟವಾಗಲಿಲ್ಲ. “ಇದು ಹೊಸ ಭಾರತ” ಎಂಬ ಸಂಭಾಷಣೆ ಮತ್ತು ಒಂದು ಸುದೀರ್ಘ ರಾಜಕೀಯ ಏಕಪಾತ್ರಾಭಿನಯ ಸೇರಿದಂತೆ ಒಟ್ಟು ಮೂರು ದೃಶ್ಯಗಳು ಚಿತ್ರಕ್ಕೆ ಅನಗತ್ಯವಾಗಿದ್ದವು; ಇವುಗಳಿಲ್ಲದಿದ್ದರೂ ಚಿತ್ರದ ಪ್ರಭಾವ ಕುಗ್ಗುತ್ತಿರಲಿಲ್ಲʼ ಎಂದು ಅವರು ಅಭಿಪ್ರಾಯಪಟ್ಟರು.

ಸಿನಿಮಾಗಳನ್ನು ‘ಪ್ರಚಾರ’ ಅಥವಾ ‘ಪ್ರೊಪಗಾಂಡಾ’ ಎಂದು ಕರೆಯುವುದೇ ಒಂದು ರೀತಿಯ ಪ್ರಚಾರ ಎಂದ ಕಶ್ಯಪ್, ʼಹಾಲಿವುಡ್‌ನ ಮಾರ್ವೆಲ್ ಚಿತ್ರಗಳು ಅಮೆರಿಕದ ಶ್ರೇಷ್ಠತೆಯನ್ನು ಸಾರುತ್ತವೆ, ಆದರೆ ಯಾರೂ ಅದನ್ನು ಆ ದೃಷ್ಟಿಕೋನದಲ್ಲಿ ಟೀಕಿಸುವುದಿಲ್ಲʼ ಎಂದರು.
ಕನ್ನಡದ ‘ಟಾಕ್ಸಿಕ್’ ಚಿತ್ರದ ಟೀಸರ್ ಬಗ್ಗೆ ಮಾತನಾಡಿದ ಅವರು, ಅದನ್ನು ಅತ್ಯಂತ ಧೈರ್ಯಶಾಲಿ ಪ್ರಯತ್ನ ಎಂದು ಶ್ಲಾಘಿಸಿದರು. ʼಟೀಸರ್ ವಿರುದ್ಧ ವ್ಯಕ್ತವಾದ ಆಕ್ರೋಶವು ನಮ್ಮ ಸಾಂಸ್ಕೃತಿಕ ಬೂಟಾಟಿಕೆಯನ್ನು ತೋರಿಸುತ್ತದೆ. ತೆರೆಯ ಮೇಲೆ ಪುರುಷ ನಟರು ಶರ್ಟ್ ಇಲ್ಲದೆ ಕಾಣಿಸಿಕೊಂಡರೆ ಅಥವಾ ಅತಿಯಾದ ಪೌರುಷ ತೋರಿಸಿದರೆ ಯಾರೂ ಪ್ರಶ್ನಿಸುವುದಿಲ್ಲ. ಆದರೆ ಒಬ್ಬ ಮಹಿಳೆ ತನ್ನ ಲೈಂಗಿಕತೆಯನ್ನು ಆಚರಿಸಿದರೆ ಅದನ್ನು ಒಪ್ಪಲು ಕಷ್ಟವಾಗುತ್ತದೆʼ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯದ ಬಗ್ಗೆ ತಮಗಿರುವ ಪ್ರೀತಿಯನ್ನು ವ್ಯಕ್ತಪಡಿಸಿದ ಅನುರಾಗ್ ಕಶ್ಯಪ್, ಖ್ಯಾತ ಬರಹಗಾರ ವಿವೇಕ್ ಶಾನಭಾಗ್ ಅವರ ‘ಘಾಚರ್ ಘೋಚರ್’ ಕಾದಂಬರಿಯನ್ನು ಆಧರಿಸಿ ಕನ್ನಡ ಚಿತ್ರವೊಂದನ್ನು ನಿರ್ಮಿಸುತ್ತಿರುವುದಾಗಿ ಬಹಿರಂಗಪಡಿಸಿದರು. ಈ ಚಿತ್ರವು ಸದ್ಯ ಬರವಣಿಗೆ ಹಂತದಲ್ಲಿದ್ದು, ಮುಂದೆ ಹಿಂದಿಯಲ್ಲೂ ಬರಲಿದೆ. ಇದರ ನಿರ್ದೇಶಕರು ಮತ್ತು ಕಲಾವಿದರ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ತಿಳಿಸಿದರು.

ಇಂದಿನ ಪ್ರೇಕ್ಷಕರು ಮೊಬೈಲ್ ಫೋನ್‌ಗಳಲ್ಲಿ ಸಿನಿಮಾ ನೋಡಲು ಇಷ್ಟಪಡುತ್ತಿದ್ದಾರೆ ಮತ್ತು ನಿಧಾನಗತಿಯ ಸಿನಿಮಾಗಳಿಗೆ ಗಮನ ಸೆಳೆಯುವುದು ಕಷ್ಟವಾಗುತ್ತಿದೆ ಎಂದ ಅವರು, ʼಇದು ತಂತ್ರಜ್ಞಾನದ ಬದಲಾವಣೆಯ ಫಲವೇ ಹೊರತು ಪ್ರೇಕ್ಷಕರ ತಪ್ಪಲ್ಲʼ ಎಂದು ಅವರು ವಿಶ್ಲೇಷಿಸಿದರು.
ರಾಜಕೀಯ ಚಿತ್ರಗಳ ಬಗ್ಗೆ ಪ್ರತಿಕ್ರಿಯಿಸುತ್ತಾ, ʼಹಿಟ್ಲರ್ ಸತ್ತ ನಂತರವಷ್ಟೇ ಜರ್ಮನಿಯಲ್ಲಿ ಅವನ ವಿರುದ್ಧ ಸಿನಿಮಾಗಳು ಬಂದವು. ಪ್ರತಿಯೊಂದಕ್ಕೂ ಸಮಯ ಬರಬೇಕುʼ ಎಂದು ಮಾರ್ಮಿಕವಾಗಿ ನುಡಿದರು.
Cinema
ಫೆ.1ರಂದು ಚಿತ್ರೋತ್ಸವದಲ್ಲಿ ನೋಡಬಹುದಾದ ಉತ್ತಮ 10 ಸಿನಿಮಾಗಳು
ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ 3ನೇ ದಿನ, ಫೆ.1ರಂದು ನೋಡಬಹುದಾದ ಅತ್ಯುತ್ತಮ 10 ಚಲನಚಿತ್ರಗಳ ಪಟ್ಟಿ ಇಲ್ಲಿದೆ. ಇದರಲ್ಲಿ ಜಾಗತಿಕ ಸಿನಿಮಾಗಳು ಮತ್ತು ಕನ್ನಡದ ಪ್ರಮುಖ ಚಿತ್ರಗಳನ್ನು ಆಯ್ಕೆ ಮಾಡಲಾಗಿದೆ.
1. ಆಶಸ್ ಅಂಡ್ ಡೈಮಂಡ್ಸ್
ಸ್ಕ್ರೀನ್ 1 – ಬೆಳಗ್ಗೆ 11:50
ನಿರ್ದೇಶಕ: ಆಂಡ್ರೆ ವಾಜ್ದಾ (ಪೋಲೆಂಡ್)
ವಿಶೇಷತೆ: ಇದು ವಿಶ್ವದ ಶ್ರೇಷ್ಠ ಚಿತ್ರಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ. ಆಂಡ್ರೆ ವಾಜ್ದಾ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಈ ಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ.

2. ಕೂರ್ಮಾವತಾರ
ಸ್ಕ್ರೀನ್ ವಿಐಪಿ 2 – ಸಂಜೆ 5:10
ನಿರ್ದೇಶಕ: ಗಿರೀಶ್ ಕಾಸರವಳ್ಳಿ
ವಿಶೇಷತೆ: ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಈ ಚಿತ್ರವು ನೈತಿಕತೆ ಮತ್ತು ಗಾಂಧಿವಾದದ ಸಂಘರ್ಷವನ್ನು ಅದ್ಭುತವಾಗಿ ಚಿತ್ರಿಸುತ್ತದೆ.
3. ಇಟ್ ವಾಸ್ ಜಸ್ಟ್ ಆನ್ ಆಕ್ಸಿಡೆಂಟ್
ಸ್ಕ್ರೀನ್ 5 – ಸಂಜೆ 5:10
ನಿರ್ದೇಶಕ: ಜಾಫರ್ ಪನಾಹಿ (ಇರಾನ್)
ವಿಶೇಷತೆ: ಇರಾನಿನ ಖ್ಯಾತ ನಿರ್ದೇಶಕ ಜಾಫರ್ ಪನಾಹಿ ಅವರ ಚಿತ್ರಗಳು ಮಾನವೀಯ ಸಂಬಂಧಗಳ ಬಗ್ಗೆ ಆಳವಾದ ಒಳನೋಟ ನೀಡುತ್ತವೆ.
4. ಅಮರಶಿಲ್ಪಿ ಜಕಣಾಚಾರಿ
ಸ್ಕ್ರೀನ್ ವಿಐಪಿ 3 – ಸಂಜೆ 7:00
ನಿರ್ದೇಶಕ: ಬಿ.ಎಸ್. ರಂಗ
ವಿಶೇಷತೆ: 1964ರ ಈ ಐತಿಹಾಸಿಕ ಕನ್ನಡ ಚಿತ್ರವನ್ನು ಈಗ ‘ನವಿಕರಿಸಿದ ಶ್ರೇಷ್ಠ ಚಿತ್ರ’ (Restored Classic) ವಿಭಾಗದಲ್ಲಿ ನೋಡಬಹುದು. ಹಳೆಯ ಚಿತ್ರವನ್ನು ಹೊಸ ಮೆರುಗಿನಲ್ಲಿ ನೋಡಲು ಇದು ಸುವರ್ಣಾವಕಾಶ.
5. ಸೌಂಡ್ ಆಫ್ ಫಾಲಿಂಗ್
ಸ್ಕ್ರೀನ್ 5 – ರಾತ್ರಿ 7:30
ನಿರ್ದೇಶಕ: ಮಾಶಾ ಸ್ಕಿಲಿನ್ಸ್ಕಿ (ಜರ್ಮನಿ)
ವಿಶೇಷತೆ: ಇದು ಈ ವರ್ಷದ ‘ಮಹಿಳೆ: ಅವಳ ಇರುವಿಕೆ’ (Woman: As She Is) ವಿಭಾಗದ ಪ್ರಮುಖ ಆಕರ್ಷಣೆಯಾಗಿದೆ.

6. ನಮ್ ಸಾಲಿ
ಸ್ಕ್ರೀನ್ 7 – ಮಧ್ಯಾಹ್ನ 3:30
ನಿರ್ದೇಶಕ: ಅನೀಲ್ ಕುಮಾರ್
ವಿಶೇಷತೆ: ಇದು ‘ಕನ್ನಡ ಸಿನಿಮಾ ಸ್ಪರ್ಧಾತ್ಮಕ’ ವಿಭಾಗದ ಚಿತ್ರವಾಗಿದ್ದು, ಗ್ರಾಮೀಣ ಶಿಕ್ಷಣ ವ್ಯವಸ್ಥೆಯ ಸುತ್ತ ನಡೆಯುವ ಕಥೆಯಾಗಿದೆ.
7. ಅಮ್ರಮ್
ಸ್ಕ್ರೀನ್ 6 – ರಾತ್ರಿ 8:00
ನಿರ್ದೇಶಕ: ಫಾತಿಹ್ ಅಕಿನ್ (ಜರ್ಮನಿ)
ವಿಶೇಷತೆ: ವಿಶ್ವ ಸಿನಿಮಾದ ಪ್ರಮುಖ ಧ್ವನಿಯಾಗಿರುವ ಫಾತಿಹ್ ಅಕಿನ್ ಅವರ ಈ ಹೊಸ ಚಿತ್ರವು ಇತಿಹಾಸ ಮತ್ತು ಕೌಟುಂಬಿಕ ಸಂಬಂಧಗಳ ಕಥೆ ಹೊಂದಿದೆ.
8. ದಿ ಇಯರಿಂಗ್ಸ್ ಆಫ್ ಮೇಡಂ ಡಿ…
ಸ್ಕ್ರೀನ್ 1 – ಮಧ್ಯಾಹ್ನ 2:30
ನಿರ್ದೇಶಕ: ಮ್ಯಾಕ್ಸ್ ಓಫಲ್ಸ್ (ಫ್ರಾನ್ಸ್)
ವಿಶೇಷತೆ: 1953ರ ಈ ಕಪ್ಪು ಬಿಳುಪು ಚಿತ್ರವು ಫ್ರೆಂಚ್ ಚಿತ್ರರಂಗದ ಅದ್ಭುತಗಳಲ್ಲಿ ಒಂದಾಗಿದೆ. ಇದರ ಛಾಯಾಗ್ರಹಣ ಮತ್ತು ಕಥೆ ಅಪ್ರತಿಮವಾಗಿದೆ.

9. ಕ್ಯಾರವಾನ್
ಸ್ಕ್ರೀನ್ 2 – ರಾತ್ರಿ 8:10
ನಿರ್ದೇಶಕ: ಜುಜಾನಾ ಕಿರ್ಚ್‌ನರೋವಾ (ಜೆಕ್ ಗಣರಾಜ್ಯ)
ವಿಶೇಷತೆ: ಕಂಟೆಂಪರರಿ ವರ್ಲ್ಡ್ ಸಿನಿಮಾ ವಿಭಾಗದ ಈ ಚಿತ್ರವು ಯುರೋಪ್‌ನ ಪ್ರಯಾಣದ ಹಿನ್ನೆಲೆಯಲ್ಲಿ ಸಾಗುವ ಅದ್ಭುತ ಡ್ರಾಮಾ.
10. ಮೈ ಫಾದರ್ಸ್ ಶಾಡೋ
ಸ್ಕ್ರೀನ್ 5 – ಮಧ್ಯಾಹ್ನ 12:00
ನಿರ್ದೇಶಕ: ಅಕಿನೋಲಾ ಡೇವಿಸ್ ಜೂನಿಯರ್ (ಯುಕೆ/ ನೈಜೀರಿಯಾ)
ವಿಶೇಷತೆ: ನೈಜೀರಿಯಾದ ಸಂಸ್ಕೃತಿ ಮತ್ತು ಅಸ್ಮಿತೆಯ ಬಗ್ಗೆ ಈ ಚಿತ್ರವು ವಿಭಿನ್ನವಾಗಿ ಚರ್ಚಿಸುತ್ತದೆ.
-
Manglore2 hours agoಜಿ.ಎಲ್. ಟ್ರೋಫಿ-2026: ಜಿ.ಎಲ್. ಹಾಸನ ತಂಡ ಚಾಂಪಿಯನ್
-
National4 hours ago17ನೇ ಬೆಂಗಳೂರು ಚಿತ್ರೋತ್ಸವದಲ್ಲಿ ತಾಯಿ-ಮಗನ ಸಂಬಂಧದ ʼಅಮ್ಮಂಗೆ ಹೇಳ್ಬೇಡʼ ಚಿತ್ರ ಪ್ರದರ್ಶನ
-
State5 hours agoಸಿಎಂ ಹೌದು ಹುಲಿಯಾ ಆಗಿಲ್ಲ, ಹೌದು ಇಲಿಯಾ ಆಗಿದ್ದಾರೆ: ಆರ್.ಅಶೋಕ್
-
Hassan2 hours agoಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ : ಕೇಂದ್ರ ಸಚಿವರನ್ನು ಭೇಟಿ ಮಾಡಿದ ಸಂಸದ ಶ್ರೇಯಸ್ ಪಟೇಲ್
-
Hassan3 hours agoಮಾಧ್ಯಮ ಸ್ವಾತಂತ್ರ್ಯ ಸದ್ಬಳಕೆಯಾಗಲಿ: ಎಎಸ್ಪಿ ತಮ್ಮಯ್ಯ
-
Mandya7 hours agoಎಂ. ಅಂಕೇಗೌಡರ ಪುಸ್ತಕ ಪ್ರೀತಿ ಇಂದಿನ ಯುವ ಪೀಳಿಗೆಗೆ ಮಾದರಿ : ಡಾ.ಮಾನಸ
-
Kodagu3 hours agoವಾಹನದ ಮೂಲ ಸ್ವರೂಪವನ್ನು ಬದಲು – ತನಿಖೆ
-
National4 hours agoಲಡಾಖ್ ಗಡಿ ಸಂಘರ್ಷ: ಸಂಸತ್ನಲ್ಲಿ ಮನೋಜ್ರವರ ಅಪ್ರಕಟಿತ ಪುಸ್ತಕ ವಿಚಾರದ ಬಗ್ಗೆ ಪ್ರಸ್ತಾಪಿಸಿದ ರಾಹುಲ್ ಗಾಂಧಿ
