Hassan
ಕಟ್ಟಾಯ ಸರ್ಕಾರಿ ಪ್ರೌಢಶಾಲೆಯಲ್ಲಿ ಬ್ರಹ್ಮಾಂಡದ ವಿಸ್ಮಯಗಳ ಅನಾವರಣ : ವಿಜ್ಞಾನ ಸಂವಾದ ಕಾರ್ಯಕ್ರಮ
ಕಟ್ಟಾಯ (ಹಾಸನ): “ವಿಶ್ವದ ಅನಂತ ಪಯಣದಲ್ಲಿ ಭೂಮಿಯೆಂಬುದು ಒಂದು ಪುಟ್ಟ ನೀಲಿ ಚುಕ್ಕೆ. ನಾವು ನಕ್ಷತ್ರಗಳ ದೂಳಿನಿಂದ ಬಂದವರು ಎಂಬ ಅರಿವು ನಮ್ಮಲ್ಲಿ ಮೂಡಿದಾಗ ಮಾತ್ರ ನಮಗೆ ಪರಿಸರದ ಮೇಲೆ ಕಾಳಜಿ ಮತ್ತು ವಿಜ್ಞಾನದ ಬಗ್ಗೆ ಕುತೂಹಲ ಬೆಳೆಯಲು ಸಾಧ್ಯ” ಎಂದು ಖ್ಯಾತ ವಿಜ್ಞಾನ ಸಂವಹನಕಾರ ಹಾಗೂ ಬಿ.ಜಿ.ವಿ.ಎಸ್ ಜಿಲ್ಲಾಸಮಿತಿ ಸದಸ್ಯ ಅಹಮದ್ ಹಗರೆ ತಿಳಿಸಿದರು.
ಅವರು ಇತ್ತೀಚೆಗೆ ಕಟ್ಟಾಯ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ “ಬ್ರಹ್ಮಾಂಡದ ಅನಂತ ಪಯಣ: ನಮ್ಮ ಮನೆಯಂಗಳದಿಂದ ಕಪ್ಪುಕುಳಿಯವರೆಗೆ” ಎಂಬ ವಿಶೇಷ ವಿಜ್ಞಾನ ಸಂವಾದ ಮತ್ತು ಪಿ.ಪಿ.ಟಿ ಪ್ರಸ್ತುತಿ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡುತ್ತಿದ್ದರು.

ಸುಮಾರು 90 ನಿಮಿಷಗಳ ಕಾಲ ನಡೆದ ಈ ರೋಚಕ ಸಂವಾದದಲ್ಲಿ, ವಿದ್ಯಾರ್ಥಿಗಳನ್ನು ಕಾಲ್ಪನಿಕ ರಾಕೆಟ್ ಮೂಲಕ ಬಾಹ್ಯಾಕಾಶ ಪಯಣಕ್ಕೆ ಕರೆದೊಯ್ದ ಹಗರೆಯವರು, ಭೂಮಿಯ ವಾತಾವರಣದ ಪದರಗಳಿಂದ ಆರಂಭಿಸಿ ಸೌರವ್ಯೂಹದ ಗ್ರಹಗಳ ವೈಚಿತ್ರಗಳು, ನಕ್ಷತ್ರಗಳ ಹುಟ್ಟು-ಸಾವು (ಸೂಪರ್ ನೋವಾ) ಹಾಗೂ ಬ್ರಹ್ಮಾಂಡದ ನಿಗೂಢ ರಹಸ್ಯವಾದ ‘ಕಪ್ಪುಕುಳಿ’ (Black Hole) ಕುರಿತು ಸರಳವಾಗಿ ವಿವರಿಸಿದರು. “ಪ್ರಶ್ನೆ ಕೇಳುವವನೇ ನಿಜವಾದ ವಿಜ್ಞಾನಿ. ನಿಮ್ಮ ಕಾಲುಗಳು ಭೂಮಿಯ ಮೇಲಿದ್ದರೂ ಮನಸ್ಸು ಆಕಾಶದಾಚೆಗಿನ ಅದ್ಭುತಗಳ ಕಡೆಗೆ ಸದಾ ಚಲಿಸುತ್ತಿರಲಿ” ಎಂದು ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿ.ಜಿ.ವಿ.ಎಸ್ ಹಾಸನ ತಾಲೂಕು ಸಮಿತಿ ಅಧ್ಯಕ್ಷರಾದ ಡಾ. ಎಚ್.ಜಿ. ಮಂಜುನಾಥ್ ಅವರು ಮಾತನಾಡಿ, ಇಕೋ ಕ್ಲಬ್ನ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಅಗತ್ಯತೆಯನ್ನು ಪ್ರತಿಪಾದಿಸಿದರು.

ಪರಿಸರಾನಂದದ ಕುರಿತು ಮಾತನಾಡುತ್ತಾ, ಹಸಿರು ಹೊದಿಕೆಯ ಹೆಚ್ಚಳ, ಮನುಷ್ಯನ ಚಯಾಪಚಯ ಕ್ರಿಯೆ (Metabolism), ದ್ಯುತಿಸಂಶ್ಲೇಷಣೆ ಹಾಗೂ ಸ್ವಚ್ಛತೆಯ ಮಹತ್ವದ ಬಗ್ಗೆ ಆಸಕ್ತಿದಾಯಕ ಮಾಹಿತಿಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಯುತ ರವೀಶ ಅವರು ವಹಿಸಿದ್ದರು. ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ವಿಶ್ವನಾಥರಾವ್ ಚೌಹಾಣ್ ಅವರು ಉಪಸ್ಥಿತರಿದ್ದು ಹಿತನುಡಿಗಳನ್ನಾಡಿದರು.
ಶಾಲೆಯ ಆಂಗ್ಲ ಭಾಷಾ ಶಿಕ್ಷಕರಾದ ಶ್ರೀಯುತ ಅಶ್ವಾಕ್ ತಬ್ರೈಸ್ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು. ಇಕೋ ಕ್ಲಬ್ ಮಾರ್ಗದರ್ಶಕಿ ಶ್ರೀಮತಿ ಪೃಥ್ವಿ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು.

ಕೊನೆಯಲ್ಲಿ ಶ್ರೀ ಸಣ್ಣಲಿಂಗಗೌಡ ಅವರು ವಂದನಾರ್ಪಣೆ ಮಾಡಿದರು. ಸಂವಾದದಲ್ಲಿ ಶಾಲೆಯ ಶಿಕ್ಷಕ ವೃಂದ ಹಾಗೂ ನೂರಾರು ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿ, ತಮ್ಮ ಕುತೂಹಲದ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರು.
Hassan
ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಕಾರ್ಯಕ್ರಮ
ಹಾಸನ : ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಹಾಸನದಲ್ಲಿ 2026ರ ಜ. 31ನೇ ಶನಿವಾರ ಸಂಜೆ 5.00 ಗಂಟೆಗೆ “ರಾಷ್ಟ್ರೋತ್ಸವ” ಕಾರ್ಯಕ್ರಮವನ್ನು ಅತ್ಯಂತ ವೈಭವದಿಂದ ಆಚರಿಸಲಾಯಿತು. “ರಾಷ್ಟ್ರದೇವೋಭವ” – A Devotion To Nation ಎಂಬ ಘೋಷವಾಕ್ಯದಡಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮವು ದೀಪಪ್ರಜ್ವಲನದೊಂದಿಗೆ ಆರಂಭವಾಯಿತು. ಗಣ್ಯರು ದೀಪ ಬೆಳಗಿಸಿ ರಾಷ್ಟ್ರಭಕ್ತಿಯ ಸಂದೇಶವನ್ನು ನೀಡಿದರು. ನಂತರ ವಿದ್ಯಾರ್ಥಿಗಳಿಂದ ಮನಮೋಹಕವಾಗಿ ಪ್ರಾರ್ಥನಾ ಗೀತೆಯನ್ನು ಹಾಡಲಾಯಿತು.

ನಮ್ಮಲ್ಲಿ ನಾಗರಿಕ ಶಿಷ್ಟಾಚಾರ ಹಾಗೂ ಸಾಮಾಜಿಕ ಜವಾಬ್ದಾರಿ ಮೂಡಿ ಬಂದಾಗ ಮಾತ್ರ ನಾವು ನಿಜವಾದ ದೇಶಭಕ್ತರಾಗಲು ಸಾಧ್ಯ. ಮಗುವಿನ ವ್ಯಕ್ತಿತ್ವ ರೂಪಿಸುವಲ್ಲಿ ಕೇವಲ ಶಾಲೆಯಷ್ಟೇ ಅಲ್ಲ, ಪೋಷಕರು ಕೂಡ ಮಕ್ಕಳ ಶಿಸ್ತಿನ ಕಡೆಗೆ ಗಮನ ನೀಡಬೇಕು ಎಂದು ಹಾಸನ ವಿಶ್ವವಿದ್ಯಾಲಯದ ಕುಲಪತಿ ಡಾ. ಟಿ. ಸಿ ತಾರಾನಾಥ್ ಕರೆ ನೀಡಿದರು.
ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಎನ್ ದಿನೇಶ್ ಹೆಗ್ಡೆ ಗುರೂಜಿಯವರು ಒಂದು ಶಾಲೆ ಎಂದರೆ ಅದು ಕೇವಲ ಶಿಕ್ಷಣ ನೀಡುವ ಕಟ್ಟಡವಲ್ಲ. ಅದು ವ್ಯಕ್ತಿ ನಿರ್ಮಾಣ ಕೇಂದ್ರ. ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣ ಮಾಡುವುದೇ ನಮ್ಮ ಪರಮ ಉದ್ದೇಶ ಎಂದು ಹೇಳಿದರು.

ಸಾಂಸ್ಕೃತಿಕ ಕಾರ್ಯಕ್ರಮವನ್ನು ಭವ್ಯವಾಗಿ ಹಾಗೂ ಶಿಸ್ತುಬದ್ಧವಾಗಿ ಆಯೋಜಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಗೊಂಡ ಬಳಿಕ ಎಲ್ಲರೂ ಏಕಸ್ವರದಲ್ಲಿ “ವಂದೇ ಮಾತರಂ” ಗೀತೆಯನ್ನು ಹಾಡಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ದೇಶಭಕ್ತಿ, ಸಂಸ್ಕೃತಿ ಮತ್ತು ನೈತಿಕ ಮೌಲ್ಯಗಳನ್ನು ಪ್ರತಿಬಿಂಬಿಸುವ ಹಲವಾರು ದೇಶಭಕ್ತಿ ಗೀತೆಗಳು, ನೃತ್ಯ, ನಾಟಕ, ವೇಷಭೂಷಣ ಪ್ರದರ್ಶನ ಇತ್ಯಾದಿಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಮೆರೆದರು. ರಾಷ್ಟ್ರೀಯ ಭಾವೈಕ್ಯತೆ ಮತ್ತು ಭಾರತೀಯ ಪರಂಪರೆಯನ್ನು ಎತ್ತಿ ಹಿಡಿಯುವ ನೃತ್ಯ ರೂಪಕಗಳು ಪ್ರೇಕ್ಷಕರಲ್ಲಿ ದೇಶಪ್ರೇಮದ ಕಿಚ್ಚು ಹಚ್ಚಿದವು.

ಕಾರ್ಯಕ್ರಮವನ್ನು ಧನ್ವಿತ್ ಮತ್ತು ವೈಷ್ಣವಿ ನಡೆಸಿಕೊಟ್ಟರು. ಅತಿಥಿ ಗಣ್ಯರನ್ನು 7 ನೇ ತರಗತಿಯ ಆರಾಧ್ಯ ಸ್ವಾಗತಿಸಿದರು. ವಂದನಾರ್ಪಣೆಯನ್ನು 5 ನೇ ತರಗತಿಯ ಧನ್ವಿತ ಮಾಡಿದರು.
ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ರಾಷ್ಟ್ರಭಕ್ತಿ, ಏಕತೆ ಮತ್ತು ನೈತಿಕ ಮೌಲ್ಯಗಳನ್ನು ಬಲಪಡಿಸುವಲ್ಲಿ ಯಶಸ್ವಿಯಾಯಿತು. ಉಪಸ್ಥಿತರಿದ್ದ ಪೋಷಕರು, ಶಿಕ್ಷಕರು ಮತ್ತು ಅತಿಥಿಗಳು ಕಾರ್ಯಕ್ರಮದ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಶಾಂತಿ ಮಂತ್ರ ಪಠಣದೊಂದಿಗೆ ಕಾರ್ಯಕ್ರಮವು ಸಮಾರೋಪಗೊಂಡಿತು .

ಕಾರ್ಯಕ್ರಮದಲ್ಲಿ ಹಾಸನ ವಿಶ್ವವಿದ್ಯಾಲಯದ ಕುಲಪತಿ ಡಾ. ಟಿ. ಸಿ ತಾರಾನಾಥ್ ರವರು,ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಎನ್. ದಿನೇಶ್ ಹೆಗಡೆ ಗುರೂಜಿಯವರು, ಕರ್ನಾಟಕ ದಕ್ಷಿಣ ವಲಯದ ಸಿ ಬಿ ಎಸ್ ಇ ಶಾಲೆಗಳ ಕರೆಸ್ಪಾಂಡೆಂಟ್ ಆದ ಶ್ರೀ ವಸಂತ್ ಕುಮಾರ್ ಗುರೂಜಿಯವರು, ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಹಾಸನದ ಸಂಚಾಲನ ಸಮಿತಿಯ ಸದಸ್ಯರುಗಳು, ರಾಷ್ಟ್ರೋತ್ಥಾನ ಬನಶಂಕರಿಯ ಶಾಲೆಯ ಶಿಕ್ಷಕರು, ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಶಾಲೆಯ ಪ್ರಧಾನಾಚಾರ್ಯರಾದ ಶ್ರೀಮತಿ ಉಮಾ ಎಸ್ ಪಾಟೀಲ್ ಮಾತಾಜಿಯವರು, ಶಿಕ್ಷಕರು, ಪೋಷಕರು, ಶಾಲಾ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Hassan
ಕುಡಿಯುವ ನೀರು–ನೈರ್ಮಲ್ಯ ಇಲಾಖೆಯಲ್ಲಿ ಅಕ್ರಮ ನೇಮಕಾತಿ ಆರೋಪ – ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯ
ಹಾಸನ : ಹಾಸನ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆಯುತ್ತಿದ್ದು, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹಾಗೂ ಜಿಲ್ಲಾ ಪಂಚಾಯಿತಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಕೆಲವು ಏಜೆನ್ಸಿಗಳು ಶಾಮೀಲಾಗಿ, ಅಧಿಕೃತ ವ್ಯಕ್ತಿಗಳ ಹೆಸರನ್ನು ಬಳಸಿ ಬೇರೆಯವರಿಂದ ಕೆಲಸ ಮಾಡಿಸುತ್ತಿರುವುದು ಕಂಡುಬಂದಿದೆ ಎಂದು ಚೇತನ್ ಅವರು ತಿಳಿಸಿದರು.
ವಯೋಸಹಜ ನಿವೃತ್ತಿ ಹೊಂದಿರುವವರನ್ನು ಕಮಿಷನ್ ಆಧಾರದಲ್ಲಿ ಜಿಲ್ಲಾ ಪಂಚಾಯಿತಿಯ ವಿವಿಧ ಉಪಕಚೇರಿಗಳಲ್ಲಿ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ. ಈ ಎಲ್ಲಾ ಅಕ್ರಮಗಳಿಗೆ ಇಲಾಖೆಯ ಸಿಇಒ, ಕಾರ್ಯಪಾಲಕ ಇಂಜಿನಿಯರ್ (EE) ಹಾಗೂ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳು (AEE) ಕಾರಣರಾಗಿದ್ದಾರೆ ಎಂದು ಆರೋಪಿಸಿದರು.

ಲಕ್ಕಯ್ಯ ಅವರು ಇದೇ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ 58 ವರ್ಷಕ್ಕೆ ನಿವೃತ್ತಿ ಹೊಂದಿದ್ದು, ಪ್ರಸ್ತುತ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಜೀವನ ನಿರ್ವಹಣೆಗೆ ಹೊರಗುತ್ತಿಗೆಯಲ್ಲಿ ಕೆಲಸ ನೀಡುವಂತೆ ಮನವಿ ಮಾಡಿದರೂ ದಲಿತ ಸಮುದಾಯದವರಾದ ಕಾರಣ ಅವಕಾಶ ನೀಡಲಾಗುತ್ತಿಲ್ಲ ಎಂದು ಅವರು ಆರೋಪಿಸಿದರು. ಸರ್ಕಾರ ಮಟ್ಟದಲ್ಲಿ ಹಾಗೂ ಜಿಲ್ಲಾಧಿಕಾರಿಗಳ ಮಾರ್ಗದರ್ಶನ ಇದ್ದರೂ ಕೆಲಸಕ್ಕೆ ಸೇರಿಸಿಲ್ಲ ಎಂದು ಆರೋಪಿಸಿದರು.
ಭ್ರಷ್ಟ ಏಜೆನ್ಸಿಗಳನ್ನು ತಕ್ಷಣವೇ ಕಪ್ಪುಪಟ್ಟಿಗೆ ಸೇರಿಸಬೇಕು. ತಾರತಮ್ಯ ನಡೆಸಿ ದಾರಿ ತಪ್ಪಿಸುತ್ತಿರುವ ಅಧಿಕಾರಿಗಳನ್ನು ವಜಾಗೊಳಿಸಬೇಕು. ನಿವೃತ್ತರಾದರೂ ಅಧಿಕಾರಿಗಳ ಕುಮ್ಮಕ್ಕಿನಿಂದ ಇಲಾಖೆಯ ಇಂಜಿನಿಯರಿಂಗ್ ವಿಭಾಗ ಸೇರಿದಂತೆ ವಿವಿಧ ಕಡೆಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲರನ್ನು ತಕ್ಷಣ ಕೆಲಸದಿಂದ ತೆಗೆಯಬೇಕು. ಇಲ್ಲವಾದಲ್ಲಿ ಇದೇ ರೀತಿಯ ಅರ್ಹರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಇದಲ್ಲದೆ ಇಲಾಖೆಯಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ನಿವೃತ್ತರನ್ನು ತೆಗೆದುಹಾಕಿ, ಸರ್ಕಾರಿ ಸಮಯ ಹಾಗೂ ಸಂಪನ್ಮೂಲಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಅಧಿಕಾರಿಗಳು ಮತ್ತು ಏಜೆನ್ಸಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಸರ್ಕಾರಿ ಖಜಾನೆಗೆ ಆಗಿರುವ ನಷ್ಟವನ್ನು ಸಂಬಂಧಿಸಿದ ಅಧಿಕಾರಿಗಳು ಮತ್ತು ಏಜೆನ್ಸಿಗಳಿಂದ ವಸೂಲಿ ಮಾಡಬೇಕು ಎಂದು ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಈ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದಲ್ಲಿ, ಮುಂದಿನ ದಿನಗಳಲ್ಲಿ ಸಂಘಟನೆಗಳು ಜಿಲ್ಲಾದ್ಯಂತ ಹೋರಾಟ ಮತ್ತು ಕಾನೂನು ಹೋರಾಟದ ಮೂಲಕ ನ್ಯಾಯ ಪಡೆಯಲಿವೆ ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಹೇಶ್, ಮಂಜೇಗೌಡ ಹಾಗೂ ಇತರರು ಉಪಸ್ಥಿತರಿದ್ದರು.
Hassan
ಫೆ.12 ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಹಾಸನದಲ್ಲಿ ವ್ಯಾಪಕ ಬೆಂಬಲ
ಹಾಸನ : ನಾಲ್ಕು ಕರಾಳ ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು ಸೇರಿದಂತೆ ವಿವಿಧ ಜನವಿರೋಧಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀತಿಗಳನ್ನು ವಿರೋಧಿಸಿ ಫೆಬ್ರವರಿ 12ರಂದು ನಡೆಯಲಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಹಾಸನ ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ನೀಡುವಂತೆ ಹಾಸನ ಜಿಲ್ಲಾ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಹಾಗೂ ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟ ಜಂಟಿಯಾಗಿ ಮನವಿ ಮಾಡಿವೆ.
ಫೆಬ್ರವರಿ 12ರಂದು ದೇಶದ ಎಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳು, ಸ್ವತಂತ್ರ ಒಕ್ಕೂಟಗಳು ಹಾಗೂ ನೌಕರರ ಸಂಘಟನೆಗಳು ಸೇರಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದ್ದು, ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕಾರ್ಮಿಕರು, ರೈತರು, ಕೃಷಿ ಕೂಲಿಕಾರರು, ದಲಿತರು, ಮಹಿಳೆಯರು, ವಿದ್ಯಾರ್ಥಿ–ಯುವಜನರು ಮತ್ತು ವ್ಯಾಪಾರಿಗಳು ಒಟ್ಟಾಗಿ ಬೃಹತ್ ಮೆರವಣಿಗೆ, ಸಾರ್ವಜನಿಕ ಸಭೆ, ರಸ್ತೆ ತಡೆ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳ ಮುಂದೆ ಪಿಕೆಟಿಂಗ್ ನಡೆಸಲಿದ್ದಾರೆ ಎಂದು ಧರ್ಮೇಶ್ ಅವರು ತಿಳಿಸಿದರು.

ವ್ಯಾಪಾರ ಸುಲಭೀಕರಣದ ಹೆಸರಿನಲ್ಲಿ 29 ಕಾರ್ಮಿಕ ಕಾನೂನುಗಳನ್ನು ರದ್ದುಪಡಿಸಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿರುವುದು ಕಾರ್ಮಿಕರ ಹಕ್ಕುಗಳ ಮೇಲೆ ಆರ್ಥಿಕ ಹಾಗೂ ರಾಜಕೀಯ ದಾಳಿ ನಡೆಸಿದಂತಾಗಿದೆ. ಇದರಿಂದ ಶೇ.90ಕ್ಕೂ ಹೆಚ್ಚು ಕಾರ್ಮಿಕರು ವೇತನ, ಇಎಸ್‌ಐ, ಪಿಎಫ್, ಗ್ರಾಚ್ಯುಟಿ, ಬೋನಸ್ ಮೊದಲಾದ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಸಂಘಟನೆಗಳು ಆರೋಪಿಸಿವೆ. ಜೀವನೋಪಾಯ ವೇತನದ ಬದಲು ತಳಮಟ್ಟದ ಕನಿಷ್ಠ ವೇತನದ ಪ್ರಸ್ತಾವನೆ ಕಾರ್ಮಿಕರ ಬದುಕನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ತಿಳಿಸಿದರು.
ನರೇಗಾ ಕಾಯ್ದೆಯಡಿಯಲ್ಲಿ ಖಾತರಿಪಡಿಸಿದ ಕೆಲಸದ ಹಕ್ಕನ್ನು ಕಸಿದುಕೊಳ್ಳುವುದು, ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಿಸುವ ಮೂಲಕ ಸರ್ಕಾರ ತನ್ನ ಸಾಮಾಜಿಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿರುವುದು, ರೈತರಿಗೆ ಬೆಂಬಲ ಬೆಲೆ ನೀಡದೇ ಕಂಪನಿ ಕೃಷಿ ಮತ್ತು ಬಲವಂತದ ಭೂಸ್ವಾಧೀನಕ್ಕೆ ಉತ್ತೇಜನ ನೀಡುತ್ತಿರುವುದು ರೈತರು ಹಾಗೂ ಗ್ರಾಮೀಣ ಶ್ರಮಜೀವಿಗಳ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.

ಇತ್ತೀಚೆಗೆ ಮಂಡಿಸಲಾದ 53.5 ಲಕ್ಷ ಕೋಟಿ ರೂ.ಗಳ ಕೇಂದ್ರ ಬಜೆಟ್ ಜನಸಾಮಾನ್ಯರ ಸಂಕಷ್ಟಗಳಿಗೆ ಪರಿಹಾರ ನೀಡದೆ ಬಂಡವಾಳಗಾರರಿಗೆ ಅನುಕೂಲ ಕಲ್ಪಿಸಿದೆ. ರಾಜ್ಯ ಸರ್ಕಾರವೂ ಕಾರ್ಮಿಕ ಸಂಹಿತೆಗಳಿಗೆ ನಿಯಮಾವಳಿ ರೂಪಿಸುವ ಮೂಲಕ ಕಾರ್ಮಿಕ ವಿರೋಧಿ ಧೋರಣೆಯನ್ನು ಮುಂದುವರೆಸುತ್ತಿದೆ ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಫೆಬ್ರವರಿ 12ರಂದು ಉತ್ಪಾದನೆ, ಸೇವೆ, ಸಂಚಾರ ಮತ್ತು ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿ ಸ್ವಯಂಪ್ರೇರಿತವಾಗಿ ಮುಷ್ಕರವನ್ನು ಯಶಸ್ವಿಗೊಳಿಸುವಂತೆ ಸಂಘಟನೆಗಳು ಜಿಲ್ಲೆಯ ಎಲ್ಲಾ ವರ್ಗದ ಜನತೆಗೆ ಮನವಿ ಮಾಡಿದೆ.

ಸುದ್ದಿಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾ ಅಧ್ಯಕ್ಷ ಧರ್ಮೇಶ್, ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಧರ್ಮರಾಜ್, ಕೆಪಿಆರ್‌ಎಸ್ ಜಿಲ್ಲಾ ಅಧ್ಯಕ್ಷ ಎಚ್.ಆರ್. ನವೀನ್‌ಕುಮಾರ್, ಕ.ರಾ. ರೈತ ಸಂಘ ಜಿಲ್ಲಾ ಅಧ್ಯಕ್ಷ ರಘು, ಕದಸಂಸ (ಅಂಬೇಡ್ಕರ್‌ವಾದ) ರಾಜ್ಯ ಸಂಘಟನಾ ಸಂಚಾಲಕ ಈರೇಶ್ ಹಿರೆಹಳ್ಳಿ ಸೇರಿದಂತೆ ವಿವಿಧ ಕಾರ್ಮಿಕ, ರೈತ, ದಲಿತ, ಮಹಿಳಾ, ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳ ಮುಖಂಡರು ಹಾಗೂ ಇತರರು ಉಪಸ್ಥಿತರಿದ್ದರು.
-
Manglore18 hours agoಜಿ.ಎಲ್. ಟ್ರೋಫಿ-2026: ಜಿ.ಎಲ್. ಹಾಸನ ತಂಡ ಚಾಂಪಿಯನ್
-
Hassan18 hours agoಅರಸೀಹಳ್ಳಿ ಹರೀಶ್ಗೆ ಪಿಹೆಚ್ಡಿ ಪದವಿ
-
Hassan19 hours agoಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ : ಕೇಂದ್ರ ಸಚಿವರನ್ನು ಭೇಟಿ ಮಾಡಿದ ಸಂಸದ ಶ್ರೇಯಸ್ ಪಟೇಲ್
-
Hassan19 hours agoಮಾಧ್ಯಮ ಸ್ವಾತಂತ್ರ್ಯ ಸದ್ಬಳಕೆಯಾಗಲಿ: ಎಎಸ್ಪಿ ತಮ್ಮಯ್ಯ
-
Mandya23 hours agoಎಂ. ಅಂಕೇಗೌಡರ ಪುಸ್ತಕ ಪ್ರೀತಿ ಇಂದಿನ ಯುವ ಪೀಳಿಗೆಗೆ ಮಾದರಿ : ಡಾ.ಮಾನಸ
-
State21 hours agoಸಿಎಂ ಹೌದು ಹುಲಿಯಾ ಆಗಿಲ್ಲ, ಹೌದು ಇಲಿಯಾ ಆಗಿದ್ದಾರೆ: ಆರ್.ಅಶೋಕ್
-
National21 hours ago17ನೇ ಬೆಂಗಳೂರು ಚಿತ್ರೋತ್ಸವದಲ್ಲಿ ತಾಯಿ-ಮಗನ ಸಂಬಂಧದ ʼಅಮ್ಮಂಗೆ ಹೇಳ್ಬೇಡʼ ಚಿತ್ರ ಪ್ರದರ್ಶನ
-
Mysore19 hours agoಡ್ರಗ್ಸ್ ಲ್ಯಾಬ್ ಪತ್ತೆ: ಕೈಗಾರಿಕೆಗಳ ತಪಾಸಣೆಗೆ 14 ತಂಡ ರಚನೆ
