Kodagu
ಕೊಡಗು ಗೌಡ ಸಮಾಜಗಳ ಒಕ್ಕೂಟ ತೀವ್ರ ಅಸಮಾಧಾನ: ಕಾರಣವೇನು?

ಮಡಿಕೇರಿ: ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಫೆ.7 ರಂದು ಮಡಿಕೇರಿಯಲ್ಲಿ ಬೃಹತ್ ಜಾಥಾವನ್ನು ಶಾಂತಿಯುತವಾಗಿ ನಡೆಸಿರುವುದಕ್ಕೆ ಕೊಡಗು ಗೌಡ ಸಮಾಜಗಳ ಒಕ್ಕೂಟದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಆದರೆ ಜಾಥಾ ನಡೆದ ನಂತರ ಜಿಲ್ಲಾಡಳಿತಕ್ಕೆ ನೀಡಿದ ಮನವಿ ಪತ್ರದಲ್ಲಿ ಉಲ್ಲೇಖಿಸಿರುವ ೯ ಅಂಶಗಳನ್ನು ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ ಎಂದು ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜ.20 ರಂದು ಅರೆಭಾಷೆ ಗೌಡ ಸಮುದಾಯದವರು ಶಾಂತಿಯುತ ಜಾಥಾ ನಡೆಸಿ ಸಾಮಾಜಿಕ ಜಾಲತಾಣಗಳಲ್ಲಿ ಜಾತಿ ನಿಂದನೆ ಮಾಡಿರುವ ಸಿಎನ್‌ಸಿ ಅಧ್ಯಕ್ಷರು ಹಾಗೂ ಕೆಲವು ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಆ ಸಂದರ್ಭ ನಾವು ನೀಡಿದ ಮನವಿ ಪತ್ರದಲ್ಲಿದ್ದ ವಿಚಾರಗಳು ಎಲ್ಲೆ ಮೀರಿರಲಿಲ್ಲ. ಆದರೆ ಅಖಿಲ ಕೊಡವ ಸಮಾಜ ನೀಡಿದ ಮನವಿಯಲ್ಲಿ ನೇರವಾಗಿ ಅರೆಭಾಷೆ ಗೌಡರನ್ನು ಉಲ್ಲೇಖಿಸಲಾಗಿದೆ ಮತ್ತು ಇಲ್ಲಸಲ್ಲದ ಆರೋಪ ಮಾಡಲಾಗಿದೆ. ಕೊಡವರ ಸಂಸ್ಕೃತಿ, ಆಚಾರ ವಿಚಾರದ ಉಳಿವಿಗಾಗಿ ಪ್ರಸ್ತಾಪಿಸುವ ಬೇಡಿಕೆಗಳಿಗೆ ನಮ್ಮ ಆಕ್ಷೇಪವಿಲ್ಲ. ಆದರೆ ಅರೆಭಾಷೆ ಗೌಡರನ್ನು ಗುರಿ ಮಾಡಿರುವುದು ಸರಿಯಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಅರೆಭಾಷೆ ಗೌಡರನ್ನು ದೂಷಿಸಿರುವ ಮನವಿ ಪತ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ಅನಾಮದೇಯ ವ್ಯಕ್ತಿ ಎಂದು ಹೇಳಲಾಗಿದೆ. ಈ ಮನವಿ ಪತ್ರದ ಹಿಂದೆ ಮತ್ತೊಬ್ಬ ವ್ಯಕ್ತಿಯ ಕೈವಾಡವಿರುವ ಶಂಕೆ ಇದೆ. ಅರೆಭಾಷೆ ಗೌಡರನ್ನು ನೇರವಾಗಿ ಉಲ್ಲೇಖಿಸಿರುವ 9 ಅಂಶಗಳನ್ನು ತೀವ್ರವಾಗಿ ಖಂಡಿಸುತ್ತೇವೆ. ಗೌಡರು ನಡೆಸಿದ ಜಾಥಾಕ್ಕೆ ಹೊರ ಜಿಲ್ಲೆಯ ಅರೆಭಾಷಿಕರಲ್ಲದವರನ್ನು ಕರೆ ತರಲಾಗಿದೆ ಎಂದು ಕೆಲವರು ಆರೋಪ ಮಾಡಿದ್ದಾರೆ.
ಆದರೆ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆ ನೆಲೆಸಿರುವ ಶೇ.100 ರಷ್ಟು ಅರೆಭಾಷೆ ಗೌಡರು ಜಾಥಾದಲ್ಲಿ ಪಾಲ್ಗೊಂಡಿರುವುದನ್ನು ಆರೋಪ ಮಾಡುತ್ತಿರುವವರು ಮನಗಾಣಬೇಕು. ಅರೆಭಾಷಿಕರಲ್ಲದವರನ್ನು ಕರೆತಂದು ಜಾಥಾ ಮಾಡುವಷ್ಟು ಕೀಳುಮಟ್ಟಕ್ಕೆ ನಾವು ಇಳಿಯುವುದಿಲ್ಲವೆಂದು ಸೂರ್ತಲೆ ಸೋಮಣ್ಣ ಸ್ಪಷ್ಟಪಡಿಸಿದರು.
ಕಟ್ಟೆಮಾಡು ಶ್ರೀ ಮಹಾಮೃತ್ಯುಂಜಯ ದೇವಾಲಯದ ವಿಚಾರ ಆ ಊರಿಗೆ ಸಂಬಂಧಿಸಿದ್ದಾಗಿದೆ. ಇದರಲ್ಲಿ ಗೌಡ ಸಮಾಜಗಳ ಒಕ್ಕೂಟ ಯಾವುದೇ ಪಾತ್ರವನ್ನು ವಹಿಸುವುದಿಲ್ಲ. ಆದರೆ ಗೌಡ ಸಮುದಾಯಕ್ಕೆ ನೋವಾದರೆ ಅವರ ಬೆಂಬಲಕ್ಕೆ ಒಕ್ಕೂಟ ನಿಲ್ಲಲಿದೆ. ನಾವು ಶಾಂತಿಯನ್ನು ಬಯಸುವವರು, ಶಾಂತಿಸಭೆ ನಡೆಯಬೇಕು ಎನ್ನುವ ಅಪೇಕ್ಷೆ ನಮ್ಮದಾಗಿತ್ತು. ಆದರೆ ಶಾಂತಿಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ಕೊಡವ ಸಮಾಜದವರು ಹೇಳಿರುವುದರಿಂದ ನಾವು ಕೂಡ ಪಾಲ್ಗೊಳ್ಳುವುದಿಲ್ಲ ಎಂದರು.
ಒಕ್ಕೂಟದ ಖಜಾಂಚಿ ಆನಂದ ಕರಂದ್ಲಾಜೆ ಮಾತನಾಡಿ ಕೊಡಗಿನ ಅರೆಭಾಷಿಕ ಒಕ್ಕಲಿಗ ಗೌಡರ ನಿಲುವುಗಳು ಮತ್ತು ಸ್ಪಷ್ಟನೆಗಳು ಎಂದು ವಿವಿಧ ವಿಚಾರಗಳನ್ನು ಮಂಡಿಸಿದರು.
ಕೊಡಗಿನ ಅರೆಭಾಷೆ ಒಕ್ಕಲಿಗರಿಗೆ ಅನಾದಿಕಾಲದಿಂದಲೂ ತನ್ನದೇ ಆದ ಆಚಾರ ವಿಚಾರ, ಸಂಸ್ಕೃತಿ ಮತ್ತು ಉಡುಗೆ ತೊಡುಗೆಗಳಿವೆ. ಅದನ್ನು ಆಚರಿಸಲು, ತೊಡಲು ಯಾರ ಅಪ್ಪಣೆಯ ಅಥವಾ ಅನುಮತಿಯ ಅವಶ್ಯಕತೆ ಇರುವುದಿಲ್ಲ. ಇದೇ ತಿಂಗಳ ೭ನೇ ತಾರೀಕು ಮಡಿಕೇರಿಯಲ್ಲಿ ನಡೆದ ಕೊಡವ ಜನಾಂಗದ ಸಭೆಯ ಮನವಿ ಪತ್ರದಲ್ಲಿ ನಮ್ಮ ಮೇಲೆ ಮಾಡಿದ ಕ್ಷುಲ್ಲಕ ಆರೋಪಗಳು ಆಧಾರರಹಿತವಾಗಿದ್ದು, ಇದನ್ನು ನಾವು ಖಂಡಿಸುತ್ತೇವೆ.
ಕಟ್ಟೆಮಾಡು ಶ್ರೀಮಹಾ ಮೃತ್ಯುಂಜಯ ದೇವಸ್ಥಾನದ ಆಚಾರ-ವಿಚಾರದ ಕುರಿತಾಗಿ ಯಾವುದೇ ಚರ್ಚೆ ಅಥವಾ ಮಾತುಕತೆಗೆ ಅರೆಭಾಷೆ ಒಕ್ಕಲಿಗರ ಸಮಾಜ ಮತ್ತು ಗೌಡ ಸಮಾಜಗಳ ಒಕ್ಕೂಟ ಭಾಗವಹಿಸುವುದಿಲ್ಲ. ಅದು ಅವರ ಗ್ರಾಮಕ್ಕೆ ಮತ್ತು ಆಡಳಿತ ಮಂಡಳಿಗೆ ಸಂಬಂಧಿಸಿದ್ದಾಗಿರುತ್ತದೆ. ಅದರ ಬಗ್ಗೆ ಆಕ್ಷೇಪವಿರುವವರು ನ್ಯಾಯಾಲಯದ ಮೊರೆ ಹೋಗಲು ಯಾರ ಅಭ್ಯಂತರವೂ ಇರುವುದಿಲ್ಲ. ಆದರೆ ಕಟ್ಟೆಮಾಡುವಿನಲ್ಲಿರುವ ಅರೆಭಾಷೆ ಒಕ್ಕಲಿಗರ ಹಾಗೂ ಸಂಖ್ಯಾಬಲವಿಲ್ಲದ ಇತರ ಸಣ್ಣಪುಟ್ಟ ಸಮುದಾಯದ, ಹಿಂದುಳಿದ ವರ್ಗಗಳ ನ್ಯಾಯಯುತ ಬೇಡಿಕೆಗಳ ಬೆನ್ನಿಗೆ ನಾವು ನಿಲ್ಲಲಿದ್ದೇವೆ.
ನಮ್ಮ ಸಭೆ ಮತ್ತು ಮೆರವಣಿಗೆಗಳಲ್ಲಿ ಜನಾಂಗದ ಧೀರ ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರಿಗೆ ಪುಷ್ಪಗುಚ್ಛ ಇಟ್ಟು ಗೌರವ ಸಲ್ಲಿಸುವ ಸಂದರ್ಭದಲ್ಲಿ ಕೊಡವ ಜನಾಂಗದ ಹಿರಿಯರಿಗೂ ನಾವು ಗೌರವ ಸಲ್ಲಿಸುತ್ತಿದ್ದೆವು. ಆದರೆ ಅವರು ಉದ್ದೇಶಪೂರ್ವಕವಾಗಿ ನಮ್ಮ ನಾಯಕರಿಗೆ ಗೌರವ ಸಲ್ಲಿಸದೇ ಇರುವುದನ್ನು ಗಮನಿಸಿದರೆ ಅವರ ಜಾತಿ ವೈಷಮ್ಯವನ್ನು ಎದ್ದು ಕಾಣುವಂತೆ ಮಾಡಿದೆ ಎಂದು ಆರೋಪಿಸಿದರು.
ಬಿಜೆಪಿಯ ಹಾಲಿ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅವರು ಕೊಡಗಿನ ಎಲ್ಲಾ ಜನಾಂಗದವರಿAದ ಆಯ್ಕೆಯಾಗಿದ್ದು, ಕೇವಲ ಒಂದು ಜನಾಂಗದ ಪರವಾಗಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಅಲ್ಲದೆ ಮಡಿಕೇರಿಯ ಸಭೆಯಲ್ಲಿ ಭಾಗವಹಿಸಿ ಮತ್ತೊಂದು ಜನಾಂಗದ ವಿರುದ್ಧದ ಮನವಿ ಪತ್ರಕ್ಕೆ ಸಾಕ್ಷಿಯಾಗಿರುವುದು ಖಂಡನೀಯ. ಬಿಜೆಪಿ ಪಕ್ಷ ಅವರ ಮೇಲೆ ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಅಂತಹ ಪಕ್ಷದಿಂದ ನಮ್ಮ ಜನಾಂಗವು ಅಂತರ ಕಾಪಾಡಿಕೊಳ್ಳಲಾಗುವುದು. ಕೊಡಗಿನಲ್ಲಿ ಗೌಡರಿಗೆ ಅವರ ಜನಸಂಖ್ಯೆಗೆ ತಕ್ಕಂತೆ ರಾಜಕೀಯ ಪ್ರಾತಿನಿಧ್ಯ ನೀಡದ ಪಕ್ಷಗಳನ್ನು ದೂರ ಇಡಲಾಗುವುದು.
ಅಗೋಚರ ಶಕ್ತಿಗಳ ಒತ್ತಡಕ್ಕೆ ಮಣಿದ ಶಾಲೆಗಳು ಜಾತಿಯ ಬಣ್ಣ ಬಳಿದುಕೊಂಡು ರಜೆ ಘೋಷಣೆ ಮಾಡಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದರೂ ಕ್ರಮ ತೆಗೆದುಕೊಳ್ಳದಿರುವುದನ್ನು ಪ್ರಜ್ಞಾವಂತರೆಲ್ಲರೂ ಖಂಡಿಸಬೇಕಿದೆ. ಏನೂ ಅರಿಯದ ಮುಗ್ಧ ಮನಸ್ಸುಗಳಿಗೆ ಜಾತಿಯ ವಿಷ ಬೀಜ ಬಿತ್ತುವ ಕಾರ್ಯ ಮಾಡಬಾರದಿತ್ತು.
ಕೊಡಗಿನಲ್ಲಿರುವ ಸರ್ವ ಜನಾಂಗದವರೊಂದಿಗೆ ಸಾಮರಸ್ಯದಿಂದ ಜೀವಿಸುತ್ತಿರುವ ಅರೆಭಾಷೆ ಒಕ್ಕಲಿಗರ ವಿರುದ್ಧ ವಿನಾಕಾರಣ ಹೆಜ್ಜೆ ಹಾಕಿದವರ ಜೊತೆ ಮುಂದಿನ ದಿನಗಳಲ್ಲಿ ಅಂತರ ಕಾಪಾಡಿಕೊಳ್ಳಲಾಗುವುದು. ನಮ್ಮ ವಿರುದ್ಧ ಅವಹೇಳನ ಮಾಡಿದ ಸಿಎನ್‌ಸಿ ಸಂಘಟನೆ ಹಾಗೂ ಕೆಲವು ದುಷ್ಕರ್ಮಿಗಳನ್ನು ಬಂಧಿಸುವಂತೆ ಒತ್ತಾಯಿಸಿ ನಾವು ನಡೆಸಿದ ಸಾಂಕೇತಿಕ ಪ್ರತಿಭಟನೆಯಲ್ಲಿ ಸ್ವಯಂಪ್ರೇರಿತರಾಗಿ ಹತ್ತು ಸಾವಿರ ಮಂದಿ ಭಾಗವಹಿಸಿದ್ದರು.
ಬೆಳ್ತಂಗಡಿ, ಬಂಟ್ವಾಳ, ಪುತ್ತೂರು, ಸುಳ್ಯ ಮತ್ತು ಕೊಡಗಿನಲ್ಲಿ ಅರೆಭಾಷೆ ಒಕ್ಕಲಿಗ ಜನಾಂಗಕ್ಕೆ ಸೇರಿದ ಸುಮಾರು ಐದು ಲಕ್ಷ ಜನರಿದ್ದಾರೆ. ಶಾಲಾ ಕಾಲೇಜುಗಳಿಂದ ಮಕ್ಕಳನ್ನು ಕರೆತರದೆ ಮಡಿಕೇರಿಯಲ್ಲಿ ಎರಡು ಲಕ್ಷ ಅರೆಭಾಷೆ ಮಾತನಾಡುವ ಒಕ್ಕಲಿಗರನ್ನು ಸೇರಿಸುವುದು ನಮಗೆ ದೊಡ್ಡ ಸಂಗತಿಯಲ್ಲ. ಆದರೆ ನಾವು ದೇಶದ ಮತ್ತು ರಾಜ್ಯದ ಕಾನೂನು ಸುವ್ಯವಸ್ಥೆಗೆ ತಲೆಬಾಗುವವರು. ನಮ್ಮ ಜನಾಂಗವು ಪ್ರತ್ಯೇಕತೆಯನ್ನು ಪ್ರತಿಪಾದಿಸಿಲ್ಲ. ನಮ್ಮ ಜನಾಂಗವನ್ನು ನಿಂದನೆ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದು ಜಿಲ್ಲಾಡಳಿತ ಮತ್ತು ಸರಕಾರದ ಜವಾಬ್ದಾರಿಯಾಗಿದೆ.
ಈ ಹಿಂದಿನ ನಮ್ಮ ದೂರುಗಳಿಗೆ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಪಂದಿಸಿ ಸಿಎನ್‌ಸಿ ಮತ್ತು ಇತರ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರೆ ಇಷ್ಟರಲ್ಲೇ ಕೊಡಗಿನಲ್ಲಿ ಶಾಂತಿ ನೆಲೆಸಿರುತ್ತಿತ್ತು. ದೂರು ದಾಖಲು ಮಾಡದ ನಡೆಯ ಹಿಂದೆ ಕಾಣದ ಕೈಗಳ ಒತ್ತಡಕ್ಕೆ ಒಳಗಾದಂತೆ ಕಂಡುಬರುತ್ತಿದೆ ಎಂದು ಆನಂದ ಕರಂದ್ಲಾಜೆ ಆರೋಪಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಇನ್ನೊಂದು ಜನಾಂಗವನ್ನು ನಿಂದಿಸುವ ವ್ಯಕ್ತಿಗಳು, ಯಾವುದೇ ಜನಾಂಗದಲ್ಲಿದ್ದರೂ ಅವರ ಮೇಲೆ ಜಿಲ್ಲಾಡಳಿತ ಮತ್ತು ಪೊಲೀಸ್ ವರಿಷ್ಠಧಿಕಾರಿಗಳು ತಾರತಮ್ಯ ಮಾಡದೆ ಮತ್ತು ಒತ್ತಡಕ್ಕೆ ಮಣಿಯದೆ ಕಠಿಣ ಕ್ರಮ ಜರುಗಿಸಬೇಕು. ಕೊಡಗಿನಲ್ಲಿ ಎಲ್ಲಾ ಜನಾಂಗದವರು ಶಾಂತಿ ಮತ್ತು ಸಹಬಾಳ್ವೆಯಿಂದ ಬಾಳುವ ವಾತಾವರಣ ಸೃಷ್ಟಿ ಮಾಡಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಕಾರ್ಯದರ್ಶಿ ಪೇರಿಯನ ಕೆ.ಉದಯಕುಮಾರ್, ನಿರ್ದೇಶಕರಾದ ಚಿಲ್ಲನ ಗಣಿ ಪ್ರಸಾದ್, ತಳೂರು ದಿನೇಶ್ ಕರುಂಬಯ್ಯ ಹಾಗೂ ಕುಶಾಲನಗರ ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ ಉಪಸ್ಥಿತರಿದ್ದರು.
Kodagu
ಮುದ್ದಂಡ ಹಾಕಿ ಉತ್ಸವಕ್ಕೆ ಅಂತಿಮ ಹಂತದ ಸಿದ್ಧತೆ

ಮಡಿಕೇರಿ : ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯ ಮುದ್ದಂಡ ಕಪ್ ಹಾಕಿ ಉತ್ಸವಕ್ಕೆ ಮಡಿಕೇರಿ ನಗರದಲ್ಲಿ ಅಂತಿಮ ಹಂತದ ಸಿದ್ಧತೆ ನಡೆದಿದ್ದು, ಬೆಳ್ಳಿ ಹಬ್ಬದ ಪ್ರಯುಕ್ತ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಮುದ್ದಂಡ ಹಾಕಿ ಹಬ್ಬದ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ ತಿಳಿಸಿದ್ದಾರೆ.
ಹಾಕಿ ಪಂದ್ಯಾವಳಿ ನಡೆಯುವ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿ ಕೊಡವ ಕುಟುಂಬಗಳ ದಾಖಲೆಯ ೩೯೬ ತಂಡಗಳು ನೋಂದಾಯಿಸಿಕೊಂಡಿದ್ದು, ಮಡಿಕೇರಿಯ ಕೇಂದ್ರ ಸ್ಥಾನದಲ್ಲಿ ಪಂದ್ಯಾವಳಿ ನಡೆಯುತ್ತಿರುವುದು ಈ ಬಾರಿಯ ವಿಶೇಷ ಎಂದರು.
ಪಂದ್ಯಾವಳಿಯ ವಿಜೇತ ತಂಡಕ್ಕೆ ರೂ.೫ ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ೩ ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ, ಸೆಮಿಫೈನಲ್‌ಗೆ ಬಂದ ಎರಡು ತಂಡಗಳಿಗೆ ತಲಾ ೧ ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಪಂದ್ಯಾವಳಿಯ ಯಶಸ್ಸಿಗೆ ಸರ್ಕಾರದ ಸಂಪೂರ್ಣ ಸಹಕಾರ ಇದ್ದು, ಬೇಡಿಕೆಗಳನ್ನು ಈಡೇರಿಸುವ ಭರವಸೆ ದೊರೆತ್ತಿದೆ. ಜಿಲ್ಲೆಯ ಶಾಸಕದ್ವಯರು ಹಾಗೂ ಸಂಸದರು ಮೊದಲ ದಿನದಿಂದಲೂ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗಳ ಎಲ್ಲಾ ಕೊಡವ ಸಮಾಜಗಳು ಹಾಗೂ ಕೊಡವ ಕೇರಿಗಳ ಸಹಕಾರವನ್ನು ಪಡೆಯಲಾಗಿದ್ದು, ಹಾಕಿ ಉತ್ಸವ ಯಶಸ್ವಿಯಾಗಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕ್ರೀಡಾ ಜ್ಯೋತಿ : ಕೊಡವ ಹಾಕಿ ಉತ್ಸವದ ಜನಕರಾದ ಕರಡ ಗ್ರಾಮದ ಪಾಂಡಂಡ ಕುಟುಂಬದ ಐನ್’ಮನೆಯಲ್ಲಿ ಮುದ್ದಂಡ ಹಾಕಿ ಉತ್ಸವದ ಕ್ರೀಡಾಜ್ಯೋತಿಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ಕೊಡವ ಹಾಕಿ ಹಬ್ಬದ ಜನಕ ದಿ.ಪಾಂಡಂಡ ಕುಟ್ಟಪ್ಪ ಅವರ ಪತ್ನಿ ಲೀಲ ಕುಟ್ಟಪ್ಪ ಉದ್ಘಾಟಿಸಿದ್ದು, ಇದುವರೆಗೆ ಹಾಕಿ ಉತ್ಸವ ಆಯೋಜಿಸಿದ್ದ ೨೪ ಕುಟುಂಬಗಳನ್ನು ಸ್ಮರಿಸುವ ಮತ್ತು ಗೌರವದಿಂದ ಕಾಣುವ ಉದ್ದೇಶದಿಂದ ಎಲ್ಲಾ ಐನ್’ಮನೆಗಳಿಗೆ ಮ್ಯಾರಥಾನ್ ಮೂಲಕ ಕ್ರೀಡಾಜ್ಯೋತಿಯನ್ನು ಕೊಂಡೊಯ್ಯುತ್ತಿರುವುದು ಈ ಬಾರಿಯ ವಿಶೇಷ.
ಈಗಾಗಲೇ ಪಾಂಡಂಡ ಕುಟುಂಬದ ಐನ್ ಮನೆಯ ನಂತರ ಕಿರುಗೂರು ಚೆಪ್ಪುಡಿರ, ಅಲಮೇಂಗಡ, ಟಿ.ಶೆಟ್ಟಿಗೇರಿ- ಒಂಟಿಯಂಗಡಿ ಮಚ್ಚಮಾಡ, ಚೆಕ್ಕೇರ, ಕಳ್ಳಿಚಂಡ, ಕುಂದ ಮನೆಯಪಂಡ, ನಾಂಗಾಲ ಕುಪ್ಪಂಡ, ವಿರಾಜಪೇಟೆ ಕಾವಾಡಿ ನೆಲ್ಲಮಕ್ಕಡ, ಚೆಂಬೆಬೆಳ್ಳೂರು ಈಶ್ವರ ದೇವಾಲಯ, ಮಂಡೇಪಂಡ, ಕುಕ್ಲೂರು ತಾತಂಡ, ವಿರಾಜಪೇಟೆ ಕೊಡವ ಸಮಾಜ, ಅರಮೇರಿ ಮುದ್ದಂಡ, ಐಚೆಟ್ಟಿರ, ಕಾಕೋಟುಪರಂಬು ಮಂಡೇಟಿರ, ಬಲ್ಲಚಂಡ, ಕರಡ ಕೋಡಿರ, ಬಾವಲಿ ಬಿದ್ದಂಡ ಐನ್ ಮನೆಗಳಿಗೆ ಕೊಡಗಿನ ಮ್ಯಾರಥಾನ್ ಪಟುಗಳು ಕ್ರೀಡಾಜ್ಯೋತಿಯೊಂದಿಗೆ ಸಾಗಿದ್ದು, ಗೌರವ ಸಲ್ಲಿಸಲಾಗಿದೆ ಎಂದು ಹೇಳಿದರು.
ಮಾ.೨೭ರಂದು ಬಾವಲಿ ಮಾದಂಡ, ಕಲಿಯಂಡ, ನೆಲ್ಜಿ ಮಾಳೆಯಂಡ, ಅಪ್ಪಚೆಟ್ಟೋಳಂಡ, ನಾಪೋಕ್ಲು ಕುಲ್ಲೇಟಿರ, ಬಿದ್ದಾಟಂಡ, ಕೊಳಕೇರಿ ಕುಂಡ್ಯೋಳಂಡ, ಮಡಿಕೇರಿ ಶಾಂತೆಯಂಡ ಮೂಲಕ ಮಾ.೨೮ರಂದು ಜನರಲ್ ತಿಮ್ಮಯ್ಯ ವೃತ್ತ ತಲುಪಲಿದೆ. ನಂತರ ಬೆಳಿಗ್ಗೆ ೯ಗಂಟೆಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಿಂದ ಮುಖ್ಯ ರಸ್ತೆಯ ಮೂಲಕ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನಕ್ಕೆ ಬೃಹತ್ ಮೆರವಣಿಗೆಯ ಮೂಲಕ ಕ್ರೀಡಾಜ್ಯೋತಿಯನ್ನು ಕೊಂಡೊಯ್ಯಲಾಗುವುದು.
ಉದ್ಘಾಟನಾ ಸಮಾರಂಭದ ಪ್ರಯುಕ್ತ ಪ್ರದರ್ಶನ ಪಂದ್ಯ ಮಧ್ಯಾಹ್ನ ೧೨.೩೦ ಗಂಟೆಗೆ ಕೊಡಗು ಜಿಲ್ಲಾಡಳಿತ ಹಾಗೂ ಆಯೋಜಕ ಕುಟುಂಬ ಮತ್ತು ಕೊಡವ ಹಾಕಿ ಅಕಾಡೆಮಿ ಘಿ೧ ಹಾಗೂ ಕರ್ನಾಟಕ ಘಿ೧ ತಂಡದ ನಡುವೆ ನಡೆಯಲಿದೆ ಎಂದು ರಶಿನ್ ಸುಬ್ಬಯ್ಯ ತಿಳಿಸಿದರು.
ಸೈಕ್ಲೋಥಾನ್ :: ಏ.೨೬ ರಂದು ನಗರದ ಜನರಲ್ ತಿಮ್ಮಯ್ಯ ವೃತ್ತದಿಂದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ವರೆಗೆ ಸುಮಾರು ೮೩ ಕಿ.ಮೀ ನ ಸೈಕ್ಲೋಥಾನ್ ನಡೆಯಲಿದೆ. ಇದಕ್ಕೆ ಅಂತರರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಹಾಗೂ ಸ್ಥಳೀಯ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದು, ವಿವಿಧ ವಿಭಾಗದಲ್ಲಿ ಬಹುಮಾನ ನೀಡಲಾಗುವುದು.
ಮೈದಾನದಲ್ಲಿ ಸುಮಾರು ೨೫ ಸಾವಿರಕ್ಕೂ ಹೆಚ್ಚು ಮಂದಿ ಕುಳಿತುಕೊಳ್ಳಬಹುದಾದ ಗ್ಯಾಲರಿ ನಿರ್ಮಾಣ ಮಾಡಲಾಗಿದ್ದು, ೩೫ ಪುಡ್ ಸ್ಟಾಲ್‌ಗಳು ಇರಲಿದೆ ಎಂದು ಹೇಳಿದರು.
ಮಹಿಳಾ ಹಾಕಿ ಸಂಭ್ರಮ: ಬೆಳ್ಳಿಮಹೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ಮುದ್ದಂಡ ಹಾಕಿ ಉತ್ಸವದಲ್ಲಿ ಮಹಿಳಾ ತಂಡಗಳ ನಡುವೆ ಹಾಕಿ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಈಗಾಗಲೇ ೪೦ ತಂಡಗಳು ನೋಂದಾಯಿಸಿಕೊಂಡಿವೆ. ನೋಂದಣಿಯ ಕೊನೆಯ ದಿನಾಂಕ ಏ.೧೦ ಆಗಿರುವುದರಿಂದ ಮತ್ತಷ್ಟು ತಂಡಗಳು ಸೇರ್ಪಡೆಗೊಳ್ಳಲಿವೆ. ಮೂರನೇ ಮೈದಾನದಲ್ಲಿ ಮಹಿಳಾ ಹಾಕಿ ಪಂದ್ಯಾವಳಿ ನಡೆಯಲಿದೆ ಎಂದರು.
ಪಂದ್ಯಾವಳಿಯ ವಿಜೇತರಿಗೆ ರೂ.೨ ಲಕ್ಷ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ೧ ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಸೆಮಿಫೈನಲ್ ಸಂದರ್ಭ ಭಾರತೀಯ ಮಹಿಳಾ ಹಾಕಿ ತಂಡದ ನಾಯಕಿ ಲಾಲ್ ರಿಮ್ ಸಿಯಾಮಿ ಅವರು ಆಗಮಿಸಿದ ಹಾಕಿ ಕ್ರೀಡೆಯ ಕುರಿತು ಮಾಹಿತಿ ನೀಡಲಿದ್ದಾರೆ. ಭಾರತೀಯ ಪುರುಷರ ಹಾಕಿ ತಂಡದ ನಾಯಕ ಹಾಗೂ ಒಲಂಪಿಯನ್ ಮನ್ ಪ್ರೀತ್ ಸಿಂಗ್ ಕೂಡ ಪಂದ್ಯಾವಳಿಯ ಸಂದರ್ಭ ಪಾಲ್ಗೊಳ್ಳಲಿದ್ದಾರೆ. ಸೆಮಿ ಫೈನಲ್ ಪಂದ್ಯಾವಳಿಗೆ ಹಿರಿಯ ರಾಜಕರಣಿ ಅಜಯ್ ಮಕೆನ್ ಆಗಮಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಮಾ.೨೮ ರಂದು ಮಡಿಕೇರಿಯ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಹಾಕಿ ಉತ್ಸವ ಉದ್ಘಾಟನೆಗೊಳ್ಳಲಿದೆ. ಅಂದು ಬೆಳಿಗ್ಗೆ ೯.೪೫ಗಂಟೆಗೆ ನಗರದ ಜನರಲ್ ತಿಮ್ಮಯ್ಯ ವೃತ್ತದಿಂದ ಫೀ.ಮಾ.ಕಾರ್ಯಪ್ಪ ಕಾಲೇಜು ಮೈದಾನದವರೆಗೆ ಕೊಡವ ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಮೆರವಣಿಗೆ ನಡೆಯಲಿದ್ದು, ನಂತರ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಲಾಗುವುದು.
ಸಭಾ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಒಡೆಯರ್, ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು, ಮಡಿಕೇರಿ ಶಾಸಕ ಡಾ.ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ, ಅರ್ಜುನ ಪ್ರಶಸ್ತಿ ವಿಜೇತ ಒಲಂಪಿಯನ್ ಅಂಜಪರವಂಡ ಬಿ.ಸುಬ್ಬಯ್ಯ, ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ, ಅತಿಥಿಗಳಾಗಿ ಜಿಲ್ಲಾಧಿಕಾರಿ ವೆಂಕಟರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಕೊಡಗು ವಿಶ್ವ ವಿದ್ಯಾನಿಲಯದ ಉಪ ಕುಲಪತಿ ಅಶೋಕ್ ಸಂಗಪ್ಪ ಆಲೂರ, ಮಾಜಿ ಶಾಸಕರುಗಳಾದ ಮಂಡೇಪಂಡ ಅಪ್ಪಚ್ಚುರಂಜನ್, ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯರುಗಳಾದ ಶಾಂತೆಯಂಡ ವೀಣಾ ಅಚ್ಚಯ್ಯ, ಮಂಡೇಪಂಡ ಸುನಿಲ್ ಸುಬ್ರಮಣಿ ಹಾಗೂ ಚೆಪ್ಪುಡಿರ ಅರುಣ್ ಮಾಚಯ್ಯ ಪಾಲ್ಗೊಳ್ಳಲಿದ್ದಾರೆ. ಮುದ್ದಂಡ ಕುಟುಂಬದ ಅಧ್ಯಕ್ಷ ಮುದ್ದಂಡ ಬಿ.ದೇವಯ್ಯ ಹಾಗೂ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ ಉಪಸ್ಥಿತರಿರುವರು.
ಮುದ್ದಂಡ ಹಾಕಿ ಹಬ್ಬದ ಉಪಾಧ್ಯಕ್ಷ ಡೀನ್ ಬೋಪಣ್ಣ ಮಾತನಾಡಿ, ಪಂದ್ಯಾವಳಿ ವೀಕ್ಷಣೆಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಸೂಕ್ತವಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ವಿಧಾನ ಪರಿಷತ್ ಸದಸ್ಯ ಸುಜಾಕುಶಾಲಪ್ಪ ಅವರ ಅನುದಾನದಲ್ಲಿ ೧,೫೦೦ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ದಿಲೀಪ್ ನಾಚಪ್ಪ ಹಾಗೂ ಯಲದಾಳು ಮನೋಜ್ ಬೋಪಯ್ಯ ಅವರ ಜಾಗದಲ್ಲಿ ೧,೦೦೦ ವಾಹನದ ನಿಲುಗಡೆ ವ್ಯವಸ್ಥೆ ಮಾಡಲಾಗಿದ್ದು, ಸುಮಾರು ೨,೫೦೦ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಮುದ್ದಂಡ ಒಕ್ಕದ ಅಧ್ಯಕ್ಷ ಮುದ್ದಂಡ ಬಿ.ದೇವಯ್ಯ ಮಾತನಾಡಿ, ಮುದ್ದಂಡ ಕಪ್ ಹಾಕಿ ಉತ್ಸವವು ಜಿಲ್ಲೆಯಲ್ಲಿ ದಸರಾ ಹಬ್ಬದಂತೆ ನಡೆಯಲಿದ್ದು, ಕೊಡವ ಜನಾಂಗ ಹಾಗೂ ಕೊಡವೇತರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಕೋರಿದರು.
ಮುದ್ದಂಡ ಹಾಕಿ ಹಬ್ಬದ ಕಾರ್ಯದರ್ಶಿ ಆದ್ಯ ಪೂವಣ್ಣ ಉಪಸ್ಥಿತರಿದ್ದರು.
Kodagu
ಪೊನ್ನಂಪೇಟೆ ಪಟ್ಟಣ ಪಂಚಾಯಿತಿ: ಚೊಚ್ಚಲ ಬಜೆಟ್ ಮಂಡನೆ

ಪೊನ್ನಂಪೇಟೆ : ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿದ ನಂತರ ಇದೇ ಮೊದಲ ಬಾರಿಗೆ ಪೊನ್ನಂಪೇಟೆ ಪಟ್ಟಣ ಪಂಚಾಯಿತಿಯ ಬಜೆಟ್ (ಆಯ-ವ್ಯಯ) ಮಂಡನೆಯಾಗಿದೆ. ಪೊನ್ನಂಪೇಟೆ ಪಟ್ಟಣ ಪಂಚಾಯಿತಿಯ ಚೊಚ್ಚಲ ಮತ್ತು 2025-26ನೇ ಸಾಲಿನ ಬಜೆಟ್ ಮೊತ್ತವು ಒಟ್ಟು ರೂ. 71748000/- ಆಗಿರುತ್ತದೆ. ಪೊನ್ನಂಪೇಟೆ ತಾಲೂಕು ಘೋಷಣೆಯಾದ ನಂತರ ಕೇಂದ್ರ ಸ್ಥಾನ ಹೊಂದಿರುವ ಪೊನ್ನಂಪೇಟೆ ಪಟ್ಟಣದಲ್ಲಿದ್ದ ಗ್ರಾಮ ಪಂಚಾಯಿತಿ ಸರಕಾರದ ನಿಯಮಾವಳಿಯಂತೆ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿತ್ತು.
ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷರಾದ ಆಲೀರ ಎಂ. ರಶೀದ್ ಮುಂದಿನ ಲೆಕ್ಕಪತ್ರ ಸಾಲಿನ ಬಜೆಟ್ ಅನ್ನು ಮಂಡಿಸಿದರು. ಪೊನ್ನಂಪೇಟೆಯು ದಿನೇ-ದಿನೇ ಬೆಳೆಯುತ್ತಿರುವ ಪಟ್ಟಣವಾಗಿದ್ದು, ಜನತೆಗೆ ಮೂಲಭೂತ ಸೌಕರ್ಯ ಒದಗಿಸುವುದು ಪಟ್ಟಣ ಪಂಚಾಯಿತಿಯ ಆದ್ಯ ಕರ್ತವ್ಯವಾಗಿರುತ್ತದೆ. ರಸ್ತೆ, ನೀರು, ಚರಂಡಿ, ನೈರ್ಮಲ್ಯ, ಬೀದಿ ದೀಪ ವ್ಯವಸ್ಥೆಗಳನ್ನು ಪಟ್ಟಣದ ಪ್ರಸಕ್ತ ಜನಸಂಖ್ಯೆಗೆ ಅನುಗುಣವಾಗಿ ವ್ಶೆಜ್ಞಾನಿಕ ರೂಪದಲ್ಲಿ ಜಾರಿಗೊಳಿಸಬೇಕಾಗಿದೆ ಎಂದು ಹೇಳಿದ ರಶೀದ್, ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಅತ್ಯುತ್ತಮ ಮೂಲಭೂತ ಸೌಲಭ್ಯ ಒದಗಿಸುವುದು ಮತ್ತು ಪಟ್ಟಣ ಪಂಚಾಯಿತಿಯನ್ನು ಆರ್ಥಿಕವಾಗಿ ಸದೃಡಗೊಳಿಸುವುದು ಮೊದಲ ಆದ್ಯತೆಯಾಗಿರುತ್ತದೆ ಎಂದು ತಿಳಿಸಿದರು.
ಆರ್ಥಿಕ ಕ್ರೋಡೀಕರಣ ಮತ್ತು ಜನರ ಬೇಡಿಕೆಯನ್ನು ಪರಿಗಣಿಸಿ ಪ್ರಸಕ್ತ ಬಜೆಟ್ ಅನ್ನು ತಯಾರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅದಕ್ಕೆ ತಕ್ಕ ಆದಾಯ ಮೂಲಗಳಾದ ತೆರಿಗೆ ಸಂಗ್ರಹ ಹಾಗೂ ಸರಕಾರದ ವಿವಿಧ ಯೋಜನೆಯ ಅನುದಾನ ಪಡೆಯಲು ನಿರ್ಧರಿಸಲಾಗಿದೆ. ಇವೆಲ್ಲವನ್ನು ಈ ಬಜೆಟ್ ಒಳಗೊಂಡಿದ್ದು, ಪಟ್ಟಣ ಪಂಚಾಯಿತಿಗೆ ಬರುವ ಆದಾಯಗಳಲ್ಲಿ ಆಸ್ತಿ ತೆರಿಗೆ, ವಾಣಿಜ್ಯ ಮಳಿಗೆ ಬಾಡಿಗೆ, ಉದ್ದಿಮೆ ಪರವಾನಗಿ, ಮಾರುಕಟ್ಟೆ ಬಾಡಿಗೆಗಳು ಹಾಗೂ ಇತರೆ ಶುಲ್ಕಗಳು ಮತ್ತು ಸರ್ಕಾರದಿಂದ ಬಿಡುಗಡೆ ಆಗುವ ಎಸ್.ಎಫ್.ಸಿ. ಅನುದಾನ, ಹಣಕಾಸು ಆಯೋಗದ ಅನುದಾನ, ಎಸ್.ಎಫ್.ಸಿ.ವಿಶೇಷ ಅನುದಾನ ಪ್ರಮುಖವಾಗಿವೆ. ಇವೆಲ್ಲವನ್ನು ಅಂದಾಜಿಸಿಕೊಂಡು ಪೊನ್ನಂಪೇಟೆ ಪಟ್ಟಣ ಪಂಚಾಯಿತಿಗೆ ಹೊಸದಾಗಿ ಸೇರಿಕೊಂಡಿರುವ ವಿಭಾಗಗಳಲ್ಲಿ ಚರಂಡಿ ನಿರ್ಮಾಣ, ಬೀದಿ ದೀಪ ಅಳವಡಿಕೆ, ನೀರು ವಿತರಣಾ ವ್ಯವಸ್ಥೆ, ಒಳಚರಂಡಿ ವ್ಯವಸ್ಥೆಗೆ ಪ್ರಮುಖ ಆದ್ಯತೆ ಮತ್ತು ವಾಣಿಜ್ಯ ಮಳಿಗೆಗಳ ಮತ್ತು ಸ್ಥಿರಾಸ್ತಿ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ ಎಂದು ರಶೀದ್ ತಮ್ಮ ಬಜೆಟ್ ಭಾಷಣದಲ್ಲಿ ವಿವರಿಸಿದರು.
2025-26ನೇ ಸಾಲಿನಲ್ಲಿ ಒಟ್ಟು ರೂ. 70826727 ಮೊತ್ತದ ಆದಾಯವನ್ನು ನಿರೀಕ್ಷಿಸಲಾಗಿದೆ. ಈ ಪೈಕಿ ಎಸ್.ಎಫ್.ಸಿ. ವಿಶೇಷ ಅನುದಾನ ರೂ. 150 ಲಕ್ಷ, ಎಸ್.ಎಫ್.ಸಿ. ಅನುದಾನ ರೂ. 70 ಲಕ್ಷ, 15ನೇ ಹಣಕಾಸು ಅನುದಾನ ರೂ. 80ಲಕ್ಷ, ವಿದ್ಯುತ್ ಅನುದಾನ ರೂ. 75 ಲಕ್ಷ, ನೀರಿನ ಅಭಾವ ಅನುದಾನ ರೂ. 10ಲಕ್ಷ, ಎಸ್.ಎಫ್.ಸಿ. ವೇತನ ಅನುದಾನ ರೂ. 74.90ಲಕ್ಷ, ಕಟ್ಟಡ ಕಾಯ್ದೆಗಳಿಗೆ ಸಂಬಂಧಿಸಿದ ಶುಲ್ಕಗಳು ರೂ.5ಲಕ್ಷ, ಮಾರುಕಟ್ಟೆಗಳ,ವಾಹನ ನಿಲುಗಡೆ ಮತ್ತು ಸಂತೆ ಸುಂಕದ ಹರಾಜಿನ ಆದಾಯ ರೂ. 7.5ಲಕ್ಷ, ವಾಣಿಜ್ಯ ಮಳಿಗೆ ಬಾಡಿಗೆ ರೂ. 6.86ಲಕ್ಷ, ಆಸ್ತಿ ತೆರಿಗೆ ರೂ. 51.58ಲಕ್ಷ, ಉದ್ದಿಮೆ ಪರವಾನಿಗೆ ರೂ. 5ಲಕ್ಷ, ನೈರ್ಮಲ್ಯ ಮತ್ತು ಘನತ್ಯಾಜ್ಯ ವಸ್ತು ನಿರ್ವಹಣೆಗೆ ರೂ. 4.5ಲಕ್ಷ, ಪರಿಶಿಷ್ಟ ಜಾತಿ/ಪ.ಪಂ ಶ್ರೇಯೋಭಿವೃದ್ಧಿ ನಿಧಿಯಿಂದ ರೂ. 5ಲಕ್ಷ, ಇತರೆ ಬಡಜನರ ಕಲ್ಯಾಣ ನಿಧಿಯ ಶೇ.7.25%ರಂತೆ ರೂ.3ಲಕ್ಷ, ಅಂಗವಿಕಲರಿಗೆ ಶ್ರೇಯೋಭಿವೃದ್ಧಿ ನಿಧಿಯ ಶೇ.5%ರಂತೆ ರೂ. 2ಲಕ್ಷ ಮತ್ತು ಸ್ವಚ್ಛ್ ಭಾರತ ಯೋಜನೆ ಅನುದಾನದಿಂದ ರೂ. 5ಲಕ್ಷ ಅನುದಾನದ ನಿರೀಕ್ಷೆ ಹೊಂದಲಾಗಿದೆ ಎಂದು ರಶೀದ್ ಹೇಳಿದರು.
ಪ್ರಸ್ತುತ ಹಣಕಾಸು ಸಾಲಿನಲ್ಲಿ ಒಟ್ಟು ರೂ. 71110000/- ಮೊತ್ತದ ಖರ್ಚನ್ನು ಅಂದಾಜಿಸಲಾಗಿದೆ. ಈ ಪೈಕಿ
ನೌಕರರ ವೇತನಕ್ಕೆ ರೂ.1.05 ಕೋಟಿ, 15ನೇ ಹಣಕಾಸು ಯೋಜನೆ ಕಾಮಗಾರಿಗಳಿಗಾಗಿ ರೂ.80ಲಕ್ಷ, ನೈರ್ಮಲ್ಯ ಮತ್ತು ಘನತ್ಯಾಜ್ಯ ವಸ್ತು ನಿರ್ವಹಣೆಗೆ ರೂ. 86ಲಕ್ಷ, ನೀರು ಸರಬರಾಜು ಮೂಲಗಳು ಮತು ವಿತರಣಾ ವ್ಯವಸ್ಥೆ ಮತ್ತು ನಿರ್ವಹಣೆಗೆ ರೂ. 35ಲಕ್ಷ, ಬೀದಿ ದೀಪಗಳ ಅಭಿವೃದ್ಧಿಗಾಗಿ ರೂ. 10ಲಕ್ಷ, ಉದ್ಯಾನವನಗಳ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ರೂ.15ಲಕ್ಷ, ನಾಗರಿಕ ವಿನ್ಯಾಸಗಳಿಗಾಗಿ ರೂ. 5ಲಕ್ಷ, ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳ ನಿರ್ಮಾಣ ಕಾಮಗಾರಿಗಳಿಗೆ ರೂ. 20ಲಕ್ಷ, ಚರಂಡಿಗಳಿಗಾಗಿ (ರಸ್ತೆ ಬದಿ ಮತ್ತು ಮಳೆ ನೀರು ಚರಂಡಿ) ರೂ.25ಲಕ್ಷ, ಕಛೇರಿ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ರೂ. 30ಲಕ್ಷ, ಮಾರುಕಟ್ಟೆ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ರೂ.25ಲಕ್ಷ, ಕಛೇರಿ ಉಪಕರಣಗಳ ಖರೀದಿಗಾಗಿ ರೂ. 7ಲಕ್ಷ, ನೀರು ಸರಬರಾಜು ಮತ್ತು ಬೀದಿ ದೀಪಗಳ ವಿದ್ಯುತ್ ವೆಚ್ಚಕ್ಕೆ ರೂ. 77ಲಕ್ಷ, ಪರಿಶಿಷ್ಟ ಜಾತಿ/ಪ.ಪಂ ಶ್ರೇಯೋಭಿವೃದ್ಧಿಗೆ ಯೋಜನೆಗಳಿಗಾಗಿ ರೂ. 5ಲಕ್ಷ, ಇತರೆ ಬಡಜನರ ಕಲ್ಯಾಣ ನಿಧಿ ಶೇ.7.25%ರ ಯೋಜನೆಗಳಿಗೆ ರೂ.3ಲಕ್ಷ ಮತ್ತು ಅಂಗವಿಕಲರಿಗೆ ಶ್ರೇಯೋಭಿವೃದ್ಧಿಯ ಶೇ. 5%ರ ಯೋಜನೆಗಳಿಗೆ ರೂ. 2ಲಕ್ಷ ಅನುದಾನವನ್ನು ಖರ್ಚು ಮಾಡುವ ಗುರಿ ಹೊಂದಲಾಗಿದೆ ಎಂದು ಬಜೆಟ್ ಮಂಡಿಸಿದ ರಶೀದ್ ಮಾಹಿತಿ ನೀಡಿದರು. ಪೊನ್ನಂಪೇಟೆ ಪಟ್ಟಣ ಪಂಚಾಯಿತಿಯ 2025 26 ನೇ ಸಾಲಿನ ಆಯ-ವ್ಯಯದ ಘೋಸ್ವಾರೆಯಲ್ಲಿ ಒಟ್ಟು ರೂ. 638641/- ಮೊತ್ತದ ಉಳಿತಾಯ ಸಾಧಿಸುವ ಗುರಿಯೂ ಹೊಂದಲಾಗಿದೆ ಎಂದು ರಶೀದ್ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. ಸಭೆಯಲ್ಲಿ ಮುಖ್ಯಾಧಿಕಾರಿಗಳಾದ ಎಸ್. ಗೋಪಿ ಸೇರಿದಂತೆ ಸದಸ್ಯರು ಪಾಲ್ಗೊಂಡಿದ್ದರು.
Kodagu
ನೇರಳೆ ಹಣ್ಣು ಕುಯ್ಯಲು ಹೋಗಿ ಮರದಿಂದ ಬಿದ್ದು ಬಾಲಕ ಸಾ*ವು

ಮರಪಾಲ ಚಿನೀಹಡ್ಲು ಗ್ರಾಮದ ನಿವಾಸಿ ದೇವಮ್ಮರವರ ಪುತ್ರ ತಿತಿಮತಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತಿದ್ದ ಬಾಲಕ ರಮೇಶ್ ಇಂದು ಶಾಲೆಗೆ ಚಕ್ಕರ್ ಹೊಡೆದು ಸ್ನೇಹಿತರೊಂದಿಗೆ ಮನೆಯ ಪಕ್ಕದಲ್ಲಿರುವ ನೇರಳೆ ಮರದಲ್ಲಿರುವ ನೇರಳೆ ಹಣ್ಣನ್ನು ಕುಯ್ಯಲು ಮರವೇರುತಿದ್ದ ಸಂದರ್ಭ ಕಾಲಿಗೆ ಆಯಾ ತಪ್ಪಿ ಮರದಿಂದ ಬಿದ್ದು ಪ್ರಾಣ ಬಿಟ್ಟಿರುತ್ತಾನೆ.
ಸ್ಥಳಕ್ಕೆ ಠಾಣಾಧಿಕಾರಿಗಳಾದ ಪ್ರದೀಪ್ ಕುಮಾರ್ ಭೇಟಿನೀಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ
-
Kodagu22 hours ago
ಬೇಳೂರು ಬಾಣೆಯಲ್ಲಿ ಸ್ಟೇರಿಂಗ್ ಲಾಕ್ : ಕಾರು ಪಲ್ಟಿ
-
Kodagu19 hours ago
ಕೊಡಗಿನ ಭರವಸೆಯ ಪ್ರತಿಭೆ ವರ್ತ ಕಾಳಿ ಕಿರುಚಿತ್ರದ ನಿರ್ದೇಶಕ: ಕೃತಾರ್ಥ ಮಂಡೆಕುಟ್ಟಂಡ
-
State15 hours ago
ಬಿಜೆಪಿ ಶೋಕಾಸ್ ನೋಟಿಸ್ ಕುರಿತು ಶಾಸಕ ಎಸ್ಟಿಎಸ್ ಫಸ್ಟ್ ರಿಯಾಕ್ಷನ್
-
Mysore18 hours ago
ಎಲ್ಲಾ ಪಕ್ಷದವರ ಮೇಲೂ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ: ಯತೀಂದ್ರ ಸಿದ್ದರಾಮಯ್ಯ
-
Mandya13 hours ago
ಎಂ.ಕೆ.ಸೋಮಶೇಖರ್ಗೆ ರಾಜ್ಯಮಟ್ಟದ ಛಾಯಗ್ರಾಹಕ ಹಾಗೂ ಕಲಾವಿದ ಪ್ರಶಸ್ತಿ ಪ್ರಧಾನ
-
State12 hours ago
ಬಿಜೆಪಿಯಿಂದ ಆರು ವರ್ಷಗಳ ಕಾಲ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ
-
Mandya17 hours ago
ಭೂ ದಾಖಲೆ ಹೊಂದಿರುವವರನ್ನು ಓಕ್ಕಲೆಬ್ಬಿಸಬೇಡಿ : ಎನ್ ಚೆಲುವರಾಯಸ್ವಾಮಿ
-
Hassan16 hours ago
1 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನರೆವೇರಿಸಿದ ಸ್ವರೂಪ್ ಪ್ರಕಾಶ್