National
ಕೇಂದ್ರ ಬಜೆಟ್-2026: ಕರ್ನಾಟಕಕ್ಕೆ ಸಿಕ್ಕಿದೇನು? ಈಡೇರದ ರಾಜ್ಯ ನಿರೀಕ್ಷೆಗಳು
ನವದೆಹಲಿ/ಬೆಂಗಳೂರು: ಕೇಂದ್ರ ಸರ್ಕಾರ 2026-27ರ ಬಜೆಟ್ ಪ್ರಸ್ತುತ ಪಡಿಸಿದೆ. ನಿರ್ಮಲಾ ಸೀತಾರಾಮನ್ ಅವರು ಸತತ 9ನೇ ಬಜೆಟ್ ಮಂಡಿಸಿದ್ದಾರೆ. ಈ ಮೂಲಕ ಭಾರತದಲ್ಲಿ ಅತ್ಯಧಿಕ ಬಜೆಟ್ ಮಂಡಿಸಿದ ಹಣಕಾಸು ಸಚಿವೆಯಾಗಿ ದಾಖಲೆ ಬರೆದಿದ್ದಾರೆ. ಈ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಅನೇಕ ಕೊಡುಗೆಗಳನ್ನೂ ಘೋಷಿಸಿದ್ದಾರೆ. ಬೆಟ್ಟದಷ್ಟು ನಿರೀಕ್ಷೆಗಳೂ ಈಡೇರಿದೇ ಉಳಿದಿವೆ.
ಕರ್ನಾಟಕ ರಾಜ್ಯಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಿಕ್ಕಿದ್ದೇನು?
ಹೈ-ಸ್ಪೀಡ್ ರೈಲ್ ಕಾರಿಡಾರ್‌ಗಳು
ಹೈದರಾಬಾದ್- ಬೆಂಗಳೂರು ಮತ್ತು ಚೆನ್ನೈ-ಬೆಂಗಳೂರು ಮಾರ್ಗಗಳಲ್ಲಿ ಹೈ-ಸ್ಪೀಡ್ ರೈಲುಗಳ ಅಭಿವೃದ್ಧಿ.
ಒಡಿಶಾ, ಕರ್ನಾಟಕ ಮತ್ತು ಕೇರಳದ ಕರಾವಳಿ ಪ್ರದೇಶಗಳಲ್ಲಿ ಕಡಲಾಮೆಗಳ ಮೊಟ್ಟೆಯಿಡುವ ಸ್ಥಳಗಳಲ್ಲಿ ಪ್ರಕೃತಿ-ಆಧಾರಿತ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಯೋಜನೆ. ಇದು ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಮತ್ತು ಸಂರಕ್ಷಣೆಯನ್ನು ಉತ್ತೇಜಿಸುತ್ತದೆ.

ಶ್ರೀಗಂಧದ ಉದ್ಯಮ ಪುನರುಜ್ಜೀವನಗೊಳಿಸುವ ವಿಶೇಷ ಯೋಜನೆ, ರಾಜ್ಯದಲ್ಲಿ ಶ್ರೀಗಂಧ ಬೆಳೆಯುವ ರೈತರಿಗೆ ಅನುಕೂಲ
ಕೋಕೋ ಮತ್ತು ತೆಂಗು ಬೆಳಗಾರರಿಗೆ ವಿಶೇಷ ಯೋಜನೆ
ಕೋಕೋ ಮತ್ತು ತೆಂಗು ಉತ್ಪನ್ನಗಳಿಗೆ ವಿಶೇಷ ಯೋಜನೆಗಳು. ತೆಂಗು ಉತ್ಪಾದನೆಯನ್ನು ಹೆಚ್ಚಿಸಲು ಮೂರು ಕೋಟಿ ಫಲಾನುಭವಿಗಳಿಗೆ ನಿಧಿ ನೀಡಲಾಗುತ್ತದೆ. ಇದು ತುಮಕೂರು, ಮಂಗಳೂರು, ಉಡುಪಿ ಮತ್ತು ಕಾರವಾರ ಪ್ರದೇಶಗಳ ರೈತರಿಗೆ ಪ್ರಯೋಜನಕಾರಿ.
ಕರಾವಳಿ ಪ್ರದೇಶಗಳಲ್ಲಿ ಪರ್ವತಾರೋಹಣ
ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಮೌಂಟೇನ್ ಟ್ರೆಕ್ಕಿಂಗ್‌ಗೆ ಅನುಮತಿ, ಇದು ಪ್ರವಾಸೋದ್ಯಮ ಉತ್ತೇಜಿಸುತ್ತದೆ
ರಾಜ್ಯಗಳಿಗೆ ಹಣಕಾಸು ಆಯೋಗದ ಅನುದಾನ
ಎಲ್ಲಾ ರಾಜ್ಯಗಳಿಗೆ (ಕರ್ನಾಟಕ ಸೇರಿದಂತೆ) 1.4 ಲಕ್ಷ ಕೋಟಿ ರೂ. ಅನುದಾನ. ಇದರಲ್ಲಿ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳು ಮತ್ತು ವಿಪತ್ತು ನಿರ್ವಹಣೆಗೆ ನಿಧಿ ಸೇರಿದೆ.
ಸಿಟಿ ಇಕನಾಮಿಕ್ ರೀಜನ್‌ಗಳು (CER)
ಪ್ರತಿ CERಗೆ 5 ವರ್ಷಗಳಲ್ಲಿ 5,000 ಕೋಟಿ ರೂ. ಹಂಚಿಕೆ. ಟೈರ್-2 ಮತ್ತು ಟೈರ್-3 ನಗರಗಳ ಅಭಿವೃದ್ಧಿಗೆ ಗಮನ, ಇದರಡಿ ಕರ್ನಾಟಕದಲ್ಲಿನ ಎರಡು ಮತ್ತು ಮೂರನೇ ಹಂತದ ನಗರಗಳು ಪ್ರಯೋಜನ ಪಡೆಯಬಹುದು.
MSME ಗ್ರೋತ್ ಫಂಡ್
10,000 ಕೋಟಿ ರೂ. ನಿಧಿ ಮೀಸಲಿಟ್ಟಿದ್ದು ಇದು ಕರ್ನಾಟಕದ ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಬೆಂಬಲಿಸುತ್ತದೆ.

ರಾಷ್ಟ್ರೀಯ ಟೆಕ್ಸ್‌ಟೈಲ್ ಪಾಲಿಸಿ ಮತ್ತು ಮೆಗಾ ಟೆಕ್ಸ್‌ಟೈಲ್ ಪಾರ್ಕ್‌ಗಳು
ಟೆಕ್ಸ್‌ಟೈಲ್ ಉದ್ಯಮವನ್ನು ಉತ್ತೇಜಿಸುವ ಯೋಜನೆಗಳು, ಕರ್ನಾಟಕದ ಟೆಕ್ಸ್‌ಟೈಲ್ ಹಬ್‌ಗಳಿಗೆ ಪ್ರಯೋಜನ
ಮಹಿಳಾ ಸಬಲೀಕರಣ ಯೋಜನೆಗಳು
‘ಸ್ಟ್ರೀ ಮಾರ್ಟ್’ ಯೋಜನೆ ಮತ್ತು ಪ್ರತಿ ಜಿಲ್ಲೆಯಲ್ಲಿ ಮಹಿಳಾ ವಸತಿ ಸೌಲಭ್ಯಗಳ ರಾಜ್ಯಕ್ಕೂ ದೊರೆಯಲಿದೆ
ಇತರ ರಾಷ್ಟ್ರೀಯ ಯೋಜನೆಗಳು
ಸೆಮಿಕಂಡಕ್ಟರ್ ಮಿಷನ್ 2.0, ಎಲೆಕ್ಟ್ರಾನಿಕ್ಸ್ ಕಾಂಪೋನೆಂಟ್ ಉತ್ಪಾದನೆಗೆ 40,000 ಕೋಟಿ ರೂ., ಬಯೋಫಾರ್ಮಾ ಶಕ್ತಿ ಯೋಜನೆಗೆ 10,000 ಕೋಟಿ ರೂ., ಕರ್ನಾಟಕದ ಟೆಕ್ ಮತ್ತು ಫಾರ್ಮಾ ಹಬ್‌ಗಳಿಗೆ ಪರೋಕ್ಷ ಪ್ರಯೋಜನ.
ಈಡೇರದ ಕರ್ನಾಟಕದ ನಿರೀಕ್ಷೆಗಳು
ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗೆ ಈಗಾಗಲೇ ಘೋಷಿಸಲಾಗಿರುವ 5,300 ಕೋಟಿ ರೂ. ಇನ್ನು ಬಿಡುಗಡೆಯಾಗಿಲ್ಲ, ಈ ಬಾರಿಯೂ ಇದರ ಪ್ರಸ್ತಾಪ ಇಲ್ಲ.
ಕರ್ನಾಟಕಕ್ಕೆ ಹಣಕಾಸು ಆಯೋಗ ಶಿಫಾರಸು ಮಾಡಿರುವ 11,495 ಕೋಟಿ ರೂ. ಅನುದಾನ ಬಿಡುಗಡೆಗೆ ಬೇಡಿಕೆ ಇತ್ತು, ಈಗ 16ನೇ ಹಣಕಾಸು ಆಯೋಗದ ಶಿಫಾರಸ್ಸು ಶುರುವಾಗಿದ್ದು ಬಹುತೇಕ ಈ ಹಣ ಬರುವುದು ಅನುಮಾನವಾಗಿದೆ.
ಬೆಂಗಳೂರು ಅಭಿವೃದ್ಧಿ ಮತ್ತು ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ಕೇಳಲಾಗಿತ್ತು, ಅದು ಸಾಧ್ಯವಾಗಿಲ್ಲ.
ಅಂಗನವಾಡಿ, ಆಶಾ ಮತ್ತು ಮಧ್ಯಾಹ್ನದ ಊಟದ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸಲು ಕೋರಲಾಗಿತ್ತು. ಈ ಬಗ್ಗೆ ನೇರ ಉಲ್ಲೇಖಗಳಿಲ್ಲ.
ಬಹುಬೇಡಿಕೆಯ ರಾಯಚೂರಿಗೆ ಎಐಐಎಂಎಸ್ ಘೋಷಣೆಯಾಗಿಲ್ಲ.
National
17ನೇ ಬೆಂಗಳೂರು ಚಿತ್ರೋತ್ಸವದಲ್ಲಿ ತಾಯಿ-ಮಗನ ಸಂಬಂಧದ ʼಅಮ್ಮಂಗೆ ಹೇಳ್ಬೇಡʼ ಚಿತ್ರ ಪ್ರದರ್ಶನ
ಬೆಂಗಳೂರು : ‘ನನ್ನ ಚೊಚ್ಚಲ ನಿರ್ದೇಶನದ ಈ ಚಿತ್ರವು 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವುದು ನನಗೆ ಹೆಮ್ಮೆಯ ವಿಷಯ. ಇದು ವಿಶ್ವದಾದ್ಯಂತ ಹಾಗೂ ಭಾರತದ ವಿವಿಧ ಭಾಗಗಳ ಸಿನಿಮೀಯ ಧ್ವನಿಗಳನ್ನು ಸಂಭ್ರಮಿಸುವ ವೇದಿಕೆಯಾಗಿದೆ’ ಎಂದು ‘ಅಮ್ಮಂಗೆ ಹೇಳ್ಬೇಡ’ (Don’t Tell Mother) ಚಿತ್ರದ ನಿರ್ದೇಶಕ ಅನೂಪ್ ಲೋಕ್ಕೂರ್ ತಿಳಿಸಿದ್ದಾರೆ.
‘ಅಮ್ಮಂಗೆ ಹೇಳ್ಬೇಡ’ ಚಲನಚಿತ್ರದ ಬಗ್ಗೆ ಮಾತನಾಡಿದ ಅವರು, ‘ಈ ಕಥೆಯು ತಮ್ಮನ್ನು 1990ರ ದಶಕದ ಬೆಂಗಳೂರಿನ ಬಾಲ್ಯದ ದಿನಗಳಿಗೆ, ಅಂದರೆ ಶಾಲೆಯ ತರಗತಿಗಳು ಮತ್ತು ಕುಟುಂಬದ ಆಪ್ತ ಕ್ಷಣಗಳಿಗೆ ಕೊಂಡೊಯ್ಯುತ್ತದೆ ಎಂದು ಸ್ಮರಿಸಿದ್ದಾರೆ. ಈ ಚಿತ್ರ ಕನ್ನಡ ಸ್ಪರ್ಧಾತ್ಮಕ ವಿಭಾಗದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಈ ಚಿತ್ರವು ಒಂಬತ್ತು ವರ್ಷದ ಬಾಲಕ ಆಕಾಶ್‌ನ ಜೀವನವನ್ನು ಆಧರಿಸಿದೆ.

ಶಾಲೆಯಲ್ಲಿ ಅನುಭವಿಸಿದ ಶಿಕ್ಷೆಯ ಗುರುತುಗಳನ್ನು ಮುಚ್ಚಿಟ್ಟುಕೊಂಡು, ತನ್ನ ಕುಟುಂಬದ ಭಾವನಾತ್ಮಕ ಸಮತೋಲನವನ್ನು ಕಾಪಾಡಲು ಆತ ಪಡುವ ಶ್ರಮ ಹಾಗೂ ಭಯ, ಪ್ರೀತಿ ಮತ್ತು ಜವಾಬ್ದಾರಿಗಳ ನಡುವೆ ಆತ ಸಾಗುವ ಪಯಣವನ್ನು ಈ ಸಿನಿಮಾ ಸುಂದರವಾಗಿ ಚಿತ್ರಿಸುತ್ತದೆ. ಆಕಾಶ್ ಪಾತ್ರದಲ್ಲಿ ಸಿದ್ಧಾರ್ಥ್ ಸ್ವರೂಪ್ ನಟಿಸಿದ್ದು, ತಮ್ಮ ಮುಗ್ಧತೆ ಮತ್ತು ಬಲವಾದ ಅಭಿನಯದ ಮೂಲಕ ಚಿತ್ರಕ್ಕೆ ಜೀವ ತುಂಬಿದ್ದಾರೆ. ಅನಿರುದ್ಧ್ ಪಿ. ಕೇಸರ್‌ಕರ್ ಬಾಲಕನ ತಮ್ಮನ ಪಾತ್ರದಲ್ಲಿ ಕಾಣಿಸಿಕೊಂಡರೆ, ಐಶ್ವರ್ಯ ದಿನೇಶ್ ಮತ್ತು ಕಾರ್ತಿಕ್ ನಾಗರಾಜನ್ ಪೋಷಕರ ಪಾತ್ರದಲ್ಲಿ ಅದ್ಭುತವಾಗಿ ನಟಿಸಿ ಕುಟುಂಬದ ಸಂಘರ್ಷಗಳಿಗೆ ಭಾವನಾತ್ಮಕ ಸ್ಪರ್ಶ ನೀಡಿದ್ದಾರೆ’ ಎಂದು ಹೇಳಿದರು.
ಈ ಸಿನಿಮಾ ಕೇವಲ ವೈಯಕ್ತಿಕ ಗತಕಾಲದ ಪ್ರತಿಬಿಂಬವಲ್ಲ, ಬದಲಿಗೆ ಪ್ರೇಕ್ಷಕರು ತಮ್ಮ ಬಾಲ್ಯದ ನೆನಪುಗಳನ್ನು ಮತ್ತು ಕುಟುಂಬದ ಅಲಿಖಿತ ಕಥೆಗಳನ್ನು ಮರುಶೋಧಿಸುವಂತೆ ಮಾಡುತ್ತದೆ ಎಂದ ಅನೂಪ್ ಲೋಕ್ಕೂರ್, ʼಕಥೆ ಹೇಳುವ ಕಲೆಯನ್ನು ಗೌರವಿಸುವ ಇಂತಹ ದೊಡ್ಡ ಚಿತ್ರೋತ್ಸವದಲ್ಲಿ, ತಾವು ಬೆಳೆದ ಪರಿಸರ ಮತ್ತು ಜೀವನದ ಲಯವನ್ನು ಬಿಂಬಿಸುವ ಚಿತ್ರವನ್ನು ಬೆಳ್ಳಿತೆರೆಯ ಮೇಲೆ ನೋಡುವುದು ಒಬ್ಬ ನಿರ್ದೇಶಕನಾಗಿ ತಮಗೆ ಅತ್ಯಂತ ಭಾವುಕ ಮತ್ತು ಸಂತಸದ ಕ್ಷಣʼ ಎಂದರು.
National
ಸಮಸ್ಯೆ ಮತ್ತು ಜೀವನಶೈಲಿ ಚಿತ್ರಿಸುವಲ್ಲಿ ಓಟಿಟಿ ಮಹತ್ವದ ಪಾತ್ರ
ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸದಲ್ಲಿ ಗಿರೀಶ್ ಕಾಸರವಳ್ಳಿ ಅಭಿಪ್ರಾಯ, ಓಟಿಟಿಗಳು ನಮ್ಮ ಜೀವನಕ್ಕೆ ಹತ್ತಿರವಾಗಿರುವ ಸಮಸ್ಯೆಗಳು ಮತ್ತು ಜೀವನಶೈಲಿಯನ್ನು ಚಿತ್ರಿಸುತ್ತಿವೆ. ಆ ಅರ್ಥದಲ್ಲಿ ಅವು ಬಹಳ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಕಾಸರವಳ್ಳಿ ಅಭಿಪ್ರಾಯಪಟ್ಟಿದ್ದಾರೆ.
17 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ʼ30 ವರ್ಷಗಳ ಹಿಂದೆ ಟೆಲಿವಿಷನ್ ಬೆಳವಣಿಗೆಯಿಂದ ಉಂಟಾದ ಒಳ್ಳೆಯ ಸಂಗತಿಯೆಂದರೆ, ಚಾಲ್ತಿಯಲ್ಲಿದ್ದ ಕೆಲವು ನಂಬಿಕೆಗಳನ್ನು ಪುಡಿ ಮಾಡಿದ್ದು. ಅದಕ್ಕೂ ಮೊದಲು ಒಬ್ಬ ನಟಿ ಸ್ಟಾರ್ ಆಗಬೇಕಾದರೆ ಆಕೆ ಎಷ್ಟೇ ಪ್ರತಿಭಾವಂತಳಾಗಿದ್ದರೂ, ಸುಂದರವಾಗಿರಬೇಕು ಎಂಬ ನಂಬಿಕೆ ಇತ್ತು. ಪ್ರತಿಭೆ ಎರಡನೇ ಸ್ಥಾನದಲ್ಲಿತ್ತು. ಅಂದರೆ ಕಲಾವಿದರನ್ನು ಅರ್ಥಮಾಡಿಕೊಳ್ಳಲು ಮಾರುಕಟ್ಟೆ ಆರ್ಥಿಕತೆಯ ತರ್ಕವನ್ನು ಬಳಸಲಾಗುತ್ತಿತ್ತು. ಆದರೆ, ಟಿವಿ ಬಂದ ನಂತರ ಪ್ರತಿಭೆ ಇರುವವರನ್ನು ನೇರವಾಗಿ ಸಾಮಾನ್ಯ ಜನರ ಮಧ್ಯದಿಂದಲೇ ಆಯ್ಕೆ ಮಾಡಲು ಆರಂಭಿಸಲಾಯಿತು. ಅವರು ಸುಂದರವಾಗಿ ಕಾಣಿಸಿಕೊಳ್ಳದೇ ಇರಬಹುದು, ಆದರೆ ಪ್ರತಿಭಾವಂತರಾಗಿದ್ದರು.

ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಅದು ನಟಿ ಅನಿತಾ ಕನ್ವರ್ ಎಂದ ಕಾಸರವಳ್ಳಿ, ʼಅವರು ಒಂದು ಧಾರಾವಾಹಿಯನ್ನು ಸುಮಾರು ಎರಡು ವರ್ಷಗಳ ಕಾಲ ಯಶಸ್ವಿಯಾಗಿ ಮುನ್ನಡೆಸಿದರು. ಆದರೆ, ಸಿನಿಮಾರಂಗ ಅವರನ್ನು ಅಷ್ಟರ ಮಟ್ಟಿಗೆ ಸ್ವೀಕರಿಸಲಿಲ್ಲ. ಈ ರೀತಿಯ ಹಲವಾರು ಸೂಕ್ಷ್ಮ ಬದಲಾವಣೆಗಳು ಮತ್ತು ಹೊಸ ಅಸಮಾಧಾನಗಳು ಈಗ ನಡೆಯುತ್ತಿವೆ. ನನ್ನ ಅಭಿಪ್ರಾಯದಲ್ಲಿ ವೆಬ್ ಸೀರೀಸ್‌ಗಳು ಇದನ್ನು ಬಹಳ ಪರಿಣಾಮಕಾರಿಯಾಗಿ ಮಾಡುತ್ತಿವೆ. ಆ ನಿಟ್ಟಿನಲ್ಲಿ ನಾವು ಓಟಿಟಿಯೊಂದಿಗೆ ಹೆಜ್ಜೆ ಹಾಕಬೇಕುʼ ಎಂದು ಹೇಳಿದರು.
ಪ್ರತಿ 20 ವರ್ಷಗಳಿಗೊಮ್ಮೆ ಸಿನಿಮಾದ ವ್ಯಾಕರಣ ಬದಲಾಗುತ್ತದೆ ಎಂದ ಅವರು, ʼಸಿನೆಮಾ ಒಂದು ಕಲೆ. ಅದು ಸುಮಾರು 130 ವರ್ಷಗಳಷ್ಟು ಹಳೆಯದು. ಆದರೆ, ಪ್ರತಿ 20 ವರ್ಷಕ್ಕೊಮ್ಮೆ ಚಲನಚಿತ್ರ ವ್ಯಾಕರಣದ ದೃಷ್ಟಿಕೋನ ಬದಲಾಗುತ್ತಿರುತ್ತದೆ. ಇಲ್ಲಿಯವರೆಗೂ ಕೆಲವು ಬಾರಿ ಈ ತರಹದ ಬದಲಾವಣೆಗಳಾಗುತ್ತಿರುತ್ತವೆ. ಆ ಬದಲಾವಣೆಯ ಹಿಂದೆ ರಾಜಕೀಯವಿದೆ. ಆ ಬದಲಾವಣೆಯ ಹಿಂದೆ ಒಂದು ಹೊಸ ಅಭಿವ್ಯಕ್ತಿ ವಿಧಾನ ಮೂಡಿಬರುತ್ತದೆʼ ಎಂದು ಹೇಳಿದರು.
National
ಲಡಾಖ್ ಗಡಿ ಸಂಘರ್ಷ: ಸಂಸತ್‌ನಲ್ಲಿ ಮನೋಜ್‌ರವರ ಅಪ್ರಕಟಿತ ಪುಸ್ತಕ ವಿಚಾರದ ಬಗ್ಗೆ ಪ್ರಸ್ತಾಪಿಸಿದ ರಾಹುಲ್ ಗಾಂಧಿ
ನವದೆಹಲಿ: ಲಡಾಖ್ ಗಡಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ ನರವಾಣೆ ಅವರ ಅಪ್ರಕಟಿತ ಪುಸ್ತಕ ವಿಚಾರವನ್ನು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಸ್ತಾಪಿಸಿದ್ದು, ಲೋಕಸಭೆಯಲ್ಲಿ ಭಾರೀ ಗದ್ದಲವನ್ನು ಸೃಷ್ಟಿ ಮಾಡಿದೆ..
ಸಂಸತ್‌ನಲ್ಲಿ ಇಂದು ರಾಷ್ಟ್ರಪತಿಗಳ ಭಾಷಣಕ್ಕೆ ಸಂಬಂಧಿಸಿದಂತೆ ವಂದನಾ ನಿರ್ಣಯದ ಮೇಲಿನ ಚರ್ಚೆ ಕೈಗೆತ್ತಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ, 2019ರ ಡಿಸೆಂಬರ್‌ನಿಂದ ಏಪ್ರಿಲ್ 2022 ರವರೆಗೆ ಭಾರತದ ಸೇನಾ ಮುಖ್ಯಸ್ಥರಾಗಿ ಎಂ.ಎಂ. ನರವಾಣೆ ಅವರು ಸೇವೆ ಸಲ್ಲಿಸಿದ್ದಾರೆ. ಅವರ ಕುರಿತಾದ ಪುಸ್ತಕ ಪ್ರಕಟಿಸಲು ಕೇಂದ್ರ ಅನುಮೋದನೆ ನೀಡಿಲ್ಲ. 2020ರ ಭಾರತ-ಚೀನಾ ಗಡಿ ಘರ್ಷಣೆಯ ಸಮಯದಲ್ಲಿನ ಮಹತ್ವದ ಅಂಶಗಳು ಪುಸ್ತಕದಲ್ಲಿವೆ. ಚೀನಾ ಆಕ್ರಮಣ, ಉಪಟಳವು ಅದರಲ್ಲಿದೆ. ಇಂತಹ ಪುಸ್ತಕದ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಇದೇ ವೇಳೆ ಮಧ್ಯಪ್ರವೇಶಿಸಿದ ರಾಜನಾಥ್ ಸಿಂಗ್, ಅಪ್ರಕಟಿತ ವಿಷಯ ಸದನದಲ್ಲಿ ಉಲ್ಲೇಖ ಸರಿಯಲ್ಲ ಎಂದು ಹೇಳಿದರು. ಅವರ ಮಾತು ಬೆಂಬಲಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಕ್ಷೇಪಿಸಿದರು. ಔಪಚಾರಿಕವಾಗಿ ಪ್ರಕಟಿತ ವಿಷಯವನ್ನು ಪ್ರಸ್ತಾಪಿಸುವಂತೆ ಆಗ್ರಹಿಸಿದ್ದಾರೆ.
ಪತ್ರಿಕೆಗಳು ಹಾಗೂ ಮ್ಯಾಗಜಿನ್‌ಗಳು ಏನು ಬೇಕಾದರೂ ಪ್ರಕಟಿಸಬಹುದು. ಅಧಿಕೃತವಾಗಿ ಪ್ರಕಟವಾಗದ ಮೂಲಗಳನ್ನು ಸಂಸತ್ತಿನ ದಾಖಲೆಯ ಭಾಗವಾಗಲು ಅವಕಾಶ ಕೊಡಬಾರದು ಎಂದು ಹೇಳಿದರು. ಇದರಿಂದ ಸದನದಲ್ಲಿ ಗದ್ದಲ ಹೆಚ್ಚಾಯಿತು. ವಿರೋಧ ಪಕ್ಷದ ಸದಸ್ಯರು, ಆಡಳಿತ ಪಕ್ಷವು ಉದ್ದೇಶಪೂರ್ವಕವಾಗಿ ಚರ್ಚೆಯನ್ನು ನಿಲ್ಲಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿ, ರಾಜನಾಥ್ ಸಿಂಗ್ ಮತ್ತು ಅಮಿತ್ ಶಾ ಅವರ ಮಧ್ಯಪ್ರವೇಶವನ್ನು ಖಂಡನೆ ಮಾಡಿದ್ದಾರೆ.
ಕೇಂದ್ರ ಸರ್ಕಾರದ ಆಕ್ಷೇಪಗಳಿಗೆ ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿ ಅವರು, ಜನರಲ್ ನರವಾಣೆ ಅವರ ಪುಸ್ತಕದ ಆಧಾರದ ಮೇಲೆ ಮ್ಯಾಗಜಿನ್‌ನಲ್ಲಿ ಪ್ರಕಟವಾದ ವರದಿಯನ್ನು ತಾವು ಉಲ್ಲೇಖಿಸಿದ್ದಾಗಿ ಸ್ಪಷ್ಟನೆ ನೀಡಿದರು. ತಮ್ಮ ಉಲ್ಲೇಖವು ನಂಬಿಕಸ್ಥ ಮೂಲದ ಮೇರೆಗೆ ಇದ್ದು, ಆಡಳಿತ ಪಕ್ಷದ ಒಬ್ಬ ಸಂಸದರು ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದ ಕಾರಣಕ್ಕೆ ಈ ವಿಷಯವನ್ನು ಪ್ರಸ್ತಾಪಿಸಬೇಕಾಯಿತು ಎಂದು ಸಮರ್ಥಿಸಿಕೊಂಡಿದ್ದಾರೆ.
ಈ ವೇಳೆ ಸಮಾಜವಾದಿ ಪಕ್ಷದ ಸಂಸದ ಅಖಿಲೇಶ್ ಯಾದವ್ ಸಹ ರಾಹುಲ್ ಗಾಂಧಿಗೆ ಬೆಂಬಲ ವ್ಯಕ್ತಪಡಿಸಿದರು. ಚೀನಾ ಸಂಬಂಧಿತ ವಿಷಯ ಅತ್ಯಂತ ಸೂಕ್ಷ್ಮವಾದದ್ದು. ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿಗೆ ಸಂಬಂಧಿಸಿದ ವಿಷಯಗಳ ಮೇಲೆ ಪ್ರತಿಪಕ್ಷ ನಾಯಕನಿಗೆ ಸಂಪೂರ್ಣವಾಗಿ ಮಾತನಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ನಂತರ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವಿನ ವಾಗ್ವಾದ ತೀವ್ರಗೊಂಡು, ಘೋಷಣೆಗಳು ಮತ್ತು ಅಡ್ಡಿಪಡಿಸುವಿಕೆಗಳಿಂದ ಸದನದಲ್ಲಿ ಕೆಲಕಾಲ ಗದ್ದಲವುಂಟಾಯಿತು. ಈ ಎಲ್ಲದರ ನಡುವೆಯೂ ರಾಹುಲ್ ಗಾಂಧಿ ತಮ್ಮ ಭಾಷಣವನ್ನು ಮುಂದುವರಿಸಿದ್ದಾರೆ.
-
Mandya24 hours agoಹುಣ್ಣಿಮೆಯ ಅಂಗವಾಗಿ ದಾಸೋಹ ಹುಣ್ಣಿಮೆ ಕಾರ್ಯಕ್ರಮ
-
Cinema20 hours ago17 ನೇ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದ ಕನ್ನಡ ಚಿತ್ರ ಸ್ಪರ್ಧಾ ವಿಭಾಗದಲ್ಲಿ ಬಡಿಗೇರ್ ದೇವೇಂದ್ರ ನಿರ್ದೇಶನದ “ವನ್ಯಾ” ಚಿತ್ರ ಪ್ರದರ್ಶನ
-
Hassan32 minutes agoಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ : ಕೇಂದ್ರ ಸಚಿವರನ್ನು ಭೇಟಿ ಮಾಡಿದ ಸಂಸದ ಶ್ರೇಯಸ್ ಪಟೇಲ್
-
Hassan45 minutes agoಮಾಧ್ಯಮ ಸ್ವಾತಂತ್ರ್ಯ ಸದ್ಬಳಕೆಯಾಗಲಿ: ಎಎಸ್ಪಿ ತಮ್ಮಯ್ಯ
-
Mandya5 hours agoಎಂ. ಅಂಕೇಗೌಡರ ಪುಸ್ತಕ ಪ್ರೀತಿ ಇಂದಿನ ಯುವ ಪೀಳಿಗೆಗೆ ಮಾದರಿ : ಡಾ.ಮಾನಸ
-
National2 hours ago17ನೇ ಬೆಂಗಳೂರು ಚಿತ್ರೋತ್ಸವದಲ್ಲಿ ತಾಯಿ-ಮಗನ ಸಂಬಂಧದ ʼಅಮ್ಮಂಗೆ ಹೇಳ್ಬೇಡʼ ಚಿತ್ರ ಪ್ರದರ್ಶನ
-
State3 hours agoಸಿಎಂ ಹೌದು ಹುಲಿಯಾ ಆಗಿಲ್ಲ, ಹೌದು ಇಲಿಯಾ ಆಗಿದ್ದಾರೆ: ಆರ್.ಅಶೋಕ್
-
Hassan22 hours agoವಿಜೃಂಭಣೆಯಿಂದ ಜರುಗಿದ ಡೆಕ್ಕನ್ ವ್ಯಾಲಿ ಇಂಟರ್ ನ್ಯಾಷನಲ್ ಶಾಲೆಯ 7ನೇ ವರ್ಷದ ವಾರ್ಷಿಕೋತ್ಸವ
