Mysore
ಚುಂಚನಕಟ್ಟೆ ಕಾವೇರಿ ನದಿಯಲ್ಲಿ ಶ್ರೀ ರಾಮ ದೇವರ ತೆಪ್ಪೋತ್ಸವ

ವರದಿ : ಎಸ್ ಬಿ ಹರೀಶ್ ಸಾಲಿಗ್ರಾಮ
ಸಾಲಿಗ್ರಾಮ :- ಕಿವಿತುಂಬೆಲ್ಲಾ ಪಟಾಕಿ ಸದ್ದು. . . ಇದರ ನಡುವೆ ದೇವಾಲಯದಿಂದ ಉತ್ಸವ ಮೂರ್ತಿಯನ್ನು ಹೊತ್ತು ತಂದ ಭಕ್ತಾದಿಗಳು . . . ಅಲಂಕೃತಗೊಂಡಿದ್ದ ಮಂಟಪದಲ್ಲಿ ಪ್ರತಿಷ್ಠಾಪನೆಗೊಂಡ ಸೀತಾ ರಾಮ ಲಕ್ಷ್ಮಣ. . . ನದಿಯಲ್ಲಿ ಮೂರು ಸುತ್ತು ಸುತ್ತಿದ ಉತ್ಸವ ಮೂರ್ತಿಗಳು . . . ದೇವಲೋಕವೇ ಧರೆಗೆ ಬಂದ ಅನುಭವ . . . ಈ ಇಂತಹ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾದ ಸಾವಿರಾರು ಮಂದಿ. . .
ಇದು ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆಯ ಕಾವೇರಿ ನದಿಯಲ್ಲಿ ಶುಕ್ರವಾರ ರಾತ್ರಿ ನಡೆದ ಪುರಾಣ ಪ್ರಸಿದ್ದವಾಗಿರುವ ಶ್ರೀ ರಾಮದೇವರ ತೆಪ್ಪೋತ್ಸವದಲ್ಲಿ ಕಂಡು ಬಂದ ದೃಶ್ಯಗಳು.
ರಾತ್ರಿ 7.45 ರ ನಂತರ ಇಲ್ಲಿನ ಶ್ರೀ ರಾಮದೇವರ ದೇವಾಲಯದಿಂದ ಶ್ರೀ ರಾಮ, ಲಕ್ಷಣ, ಸೀತಾಮಾತೆ ದೇವರುಗಳ ಉತ್ಸವ ಮೂರ್ತಿಗಳನ್ನು ಪಟಾಕಿ ಸಿಡಿಸುವ ಮೂಲಕ ಅದ್ದೂರಿ ಮೆರವಣಿಗೆ ಮೂಲಕ ಕಾವೇರಿ ನದಿಯ ದಡದಲ್ಲಿ ದೇವಾಲಯದ ಸಮೀಪವಿರುವ ಆಂಜನೇಯ ಗುಡಿಯ ಬಳಿ ವರ್ಣರಂಜಿತ ವಿದ್ಯುತ್ ಲೈಟ್‌ಗಳು ಮತ್ತು ಹೂವಿನ ಅಲಂಕಾರಗಳಿಂದ ಶೃಂಗಾರಗೊoಡಿದ್ದ ತೆಪ್ಪದಲ್ಲಿ ಪ್ರತಿಷ್ಠಾಪಿಸಲಾಯಿತು.
ಅನಂತರ ತೆಪ್ಪದಲ್ಲಿ ದೇವರ ಉತ್ಸವ ಮೂರ್ತಿಗಳನ್ನು ರಾತ್ರಿ 8.15ರ ಸಮಯದಲ್ಲಿ ಕಾವೇರಿ ನದಿಯ ಮಧ್ಯ ಭಾಗಕ್ಕೆ ತೆಗೆದುಕೊಂಡು ಹೋಗಿ 3 ಭಾರಿ ತಿರುಗಿಸುತ್ತಿದ್ದಂತೆಯೇ ತೆಪ್ಪದಲ್ಲಿದ್ದ ಅರ್ಚಕ ವಾಸುದೇವನ್ ಉತ್ಸವ ಮೂರ್ತಿಗಳಿಗೆ ಮಂಗಳಾರತಿಯನ್ನು ಮಾಡಿದಾಗ ನೆರೆದಿದ್ದ ಸಾವಿರಾರು ಭಕ್ತಾಧಿಗಳು ಶ್ರೀ ರಾಮನಿಗೆ ಜೈಕಾರ, ಶ್ರೀರಮಣನ ಗೋವಿಂದಾ ಗೋ..ವಿಂದಾ ಎಂಬ ಘೋಷಣೆಗಳನ್ನು ಮೊಳಗಿಸಿದಾಗ ದೇವಲೋಕವೇ ಧರೆಗೆ ಬಂದಂತೆ ಭಾಸವಾಯಿತು.
ಕಾವೇರಿ ನದಿಯಲ್ಲಿ ಸುತ್ತಿ ಬಂದ ಶ್ರೀರಾಮ, ಲಕ್ಷಣ, ಸೀತಾ ದೇವರುಗಳ ಉತ್ಸವ ಮೂರ್ತಿಗಳನ್ನು ಭಕ್ತಾಧಿಗಳು ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಿ ಪೂಜಾ ಕೈಂಕರ್ಯಗಳನ್ನು ಕೈಗೊಂಡು ತಮ್ಮ ಇಷ್ಟಾರ್ಥವನ್ನು ಈಡೇರುವಂತೆ ಪ್ರಾರ್ಥಿಸಿಕೊಂಡರು.
ಆನಂತರ ಉತ್ಸವ ಮೂರ್ತಿಗಳನ್ನು ಮತ್ತೆ ದೇವಾಲಯಕ್ಕೆ ಒತ್ತು ತರಲಾಯಿತು. ಈ ಬಾರಿಯ ತೆಪ್ಪೋತ್ಸವಕ್ಕೆ ಗುಂಡ್ಲುಪೇಟೆ ಆನಂದ್‌ಕುಮಾರ್ ಎಂಬುವವರು ಭಾರಿ ಪಟಾಕಿಗಳನ್ನು ಸಿಡಿಸುವ ಮೂಲಕ ತೆಪ್ಪೋತ್ಸವಕ್ಕೆ ಕಳೆತಂದರು.
ಕಾರ್ಯಕ್ರಮದಲ್ಲಿ ಸಾಲಿಗ್ರಾಮ ತಸೀಲ್ದಾರ್ ನರಗುಂದ, ಉಪತಹಸೀಲ್ದಾರ್ ಕೆ.ಜೆ.ಶರತ್ , ಗ್ರಾಮ ಲೆಕ್ಕಿಗರಾದ ಮೇಘ, ಮೌನೇಶ್,ಕಾವೇರಿ,ಪ್ರಿಯಾ,
ದೇವಾಲಯದ ಇಓ ಕೆ.ರಘು, ಪಾರುಪತ್ತೆದಾರ್ ಯತೀರಾಜ್, ಸೇರಿದಂತೆ 3 ಸಾವಿರ ಭಕ್ತಾಧಿಗಳು ಹಾಜರಿದ್ದರು.
Mysore
ಪರವಾನಗಿ ರಹಿತ ತಂಬಾಕು ಬೆಳೆಗಾರರಿಗೂ ಮಾರಾಟ ಮಾಡಲು ಅವಕಾಶ ನೀಡಿ

ಮೈಸೂರು : ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಪರವಾನಗಿ ರಹಿತ ತಂಬಾಕು ಬೆಳೆಗಾರರಿಗೆ ಮಾರಾಟಕ್ಕೆ ಅವಕಾಶ ಮಾಡಿಕೊಡಲು ಹಾಗೂ ಅವರ ಮೇಲೆ ವಿಧಿಸಲಾಗುತ್ತಿದ್ದ ದಂಡವನ್ನು ಮನ್ನಾ ಮಾಡಬೇಕೆಂದು ಮನವಿ ಸಲ್ಲಿಸಿದ್ದೇನೆ ಎಂದು ಮೈಸೂರು-ಕೊಡಗು ಸಂಸದರಾದ ಯದುವೀರ್ ಒಡೆಯರ್ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರನ್ನು ಗುರುವಾರ ಭೇಟಿ ಮಾಡಿದ ನಂತರ ಸಂಸದರು ಈ ವಿಷಯ ತಿಳಿಸಿದ್ದಾರೆ.
ಇದಕ್ಕೆ ಸೂಕ್ತವಾಗಿ ಸ್ಪಂದನೆ ವ್ಯಕ್ತಪಡಿಸಿದ ವಾಣಿಜ್ಯ ಸಚಿವರಾದ ಪಿಯೂಷ್ ಗೋಯಲ್, ಕಾರ್ಡ್ ಹೊಂದಿರದ (ಪರವಾನಗಿ ರಹಿತ) ತಂಬಾಕು ಬೆಳೆಗಾರರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸುವ ಕುರಿತು ಭರವಸೆ ನೀಡಿದ್ದಾರೆ ಎಂದು ಸಂಸದರು ತಿಳಿಸಿದರು.
ಪರವಾನಗಿ ತಂಬಾಕು ಬೆಳೆಗಾರರಿಗೆ ವಿಧಿಸುತ್ತಿದ್ದ ದಂಡವನ್ನು ಮನ್ನಾ ಮಾಡುವ ಸಂಬಂಧ ತಂಬಾಕು ಮಂಡಳಿಗೆ ಸೂಕ್ತ ನಿರ್ದೇಶನ ನೀಡುವ ಭರವಸೆಯನ್ನೂ ನೀಡಿದ್ದಾರೆ ಎಂದು ಯದುವೀರ್ ಸ್ಪಷ್ಟಪಡಿಸಿದ್ದಾರೆ.
ಅತಿ ಶೀಘ್ರದಲ್ಲೇ ನಿರ್ಧಾರ ಹೊರಬೀಳುವ ನಿರೀಕ್ಷೆ ಇದೆ ಎಂದು ಸಂಸದರು ತಿಳಿಸಿದರು.
ನಮ್ಮ ಕ್ಷೇತ್ರದ ಬೆಳಗಾರರ ಪರವಾಗಿ ದನಿ ಎತ್ತಲು ನಾನು ಸದಾ ಬದ್ಧನಾಗಿದ್ದೇನೆ ಎಂದು ಯದುವೀರ್ ಹೇಳಿದ್ದಾರೆ.
Mysore
ಹದಗೆಟ್ಟ ರಸ್ತೆಗಳನ್ನು ಅಭಿವೃದ್ಧಿಪಡಿಸಿ: ನಾಗರೀಕ ಸೇವಾ ವೇದಿಕೆ ಹಾಗೂ ಆಟೋ ಚಾಲಕರ ಒತ್ತಾಯ

ತಿ.ನರಸೀಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪರ ಸ್ವ ಕ್ಷೇತ್ರವಾದ ತಿ.ನರಸೀಪುರ ಪಟ್ಟಣದಲ್ಲಿ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು ಕೂಡಲೇ ಸರ್ಕಾರ ಎಚ್ಚೆತ್ತು ರಸ್ತೆ ಅಭಿವೃದ್ಧಿ ಕಾಮಗಾರಿ ಮಾಡದಿದ್ದರೆ ಧಾರ್ಮಿಕ ಆಚರಣೆ ಹೊರತು ಪಡಿಸಿ ಪಟ್ಟಣದಲ್ಲಿ ನಡೆಯುವ ಸಭೆ ಸಮಾರಂಭಗಳಿಗೆ ಕಪ್ಪುಬಾವುಟ ಪ್ರದರ್ಶನ ಮಾಡಲಾಗುತ್ತದೆ ಎಂದು ನಾಗರೀಕ ಸೇವಾ ವೇದಿಕೆಯ ಕಾರ್ಯದರ್ಶಿ ಕರೋಹಟ್ಟಿ ಪ್ರಭುಸ್ವಾಮಿ ಸರ್ಕಾರಕ್ಕೆ ಎಚ್ಚರಿಕ ನೀಡಿದರು.
ಪಟ್ಟಣದ ನಾಗರೀಕ ಸೇವಾ ವೇದಿಕೆ ಕಾರ್ಯಕರ್ತರು ಹಾಗು ಆಟೋ ಚಾಲಕ ಸಂಘದ ಸದಸ್ಯರೊಂದಿಗೆ ಪಟ್ಟಣದಲ್ಲಿ ಹಳ್ಳ ಬಿದ್ದಿರುವ ರಸ್ತೆಗಳ ದುರಸ್ತಿ ಮಾಡಬೇಕೆಂಬ ಸದುದ್ದೇಶದೊಂದಿಗೆ ಸರ್ಕಾರ ಮತ್ತು ಅಧಿಕಾರಿಗಳ ಗಮನ ಸೆಳೆಯಲು ಪತ್ರಕರ್ತರೊಂದಿಗೆ ಗುಂಡಿ ಬಿದ್ದ ರಸ್ತೆ ಬಳಿ ತೆರಳಿ ಅವ್ಯವಸ್ಥೆ ಬಗ್ಗೆ ಕಿಡಿಕಾರಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಫೆ.10 ರಿಂದ ಮೂರು ದಿನಗಳ ಕಾಲ ಕುಂಭಮೇಳ ನಡೆಯುತ್ತಿದೆ. ಆದರೆ ಪಟ್ಟಣದ ಯಾವುದೇ ರಸ್ತೆಗಳು ವ್ಯವಸ್ಥಿತವಾಗಿಲ್ಲ. ತಿ.ನರಸೀಪುರ ಪುರಸಭೆಯ 23 ವಾರ್ಡ್ ಗಳ ಪೈಕಿ17 ವಾರ್ಡ್ ಗಳು ವರುಣ ಕ್ಷೇತ್ರಕ್ಕೆ ಸೇರಿದರೆ, ಉಳಿಕೆ 6 ವಾರ್ಡ್ ಗಳು ಎಚ್‌ಸಿಎಂ ಕ್ಷೇತ್ರಕ್ಕೆ ಸೇರುತ್ತವೆ. ಆದರೆ ಇಲ್ಲಿ ಯಾವುದೇ ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಿಲ್ಲ. ಪಟ್ಟಣದ ಎಣ್ಣೆ ಮಿಲ್ ರಸ್ತೆಯ ಸ್ಥಿತಿಯಂತೂ ಹೇಳ ತೀರದಾಗಿದೆ. ಮಂಡಿ ಮಟ್ಟದ ಹಳ್ಳ ಬಿದ್ದು ಸಾರ್ವಜನಿಕರು ಓಡಾಡದ ಪರಿಸ್ಥಿತಿ ಎದುರಾಗಿದೆ ಎಂದು ಬೇಸರಿಸಿದರು.
ಈ ರಸ್ತೆಯಲ್ಲಿ ಅದೆಷ್ಟೋ ಬೈಕ್ ಸವಾರರು ಬಿದ್ದು ಮಾರಣಾಂತಿಕವಾಗಿ ಗಾಯಗೊಂಡರೆ, ಲಾರಿ, ಬೈಕ್ ಗಳು ಹಳ್ಳಕ್ಕೆ ಬಿದ್ದು ಅಪಘಾತ ಸಹ ಉಂಟಾಗಿದೆ. ಇನ್ನುಳಿದಂತೆ ಲಿಂಕ್ ರಸ್ತೆ, ತಾಲೂಕು ಕಚೇರಿ ರಸ್ತೆ ಹಾಗು ಕೆನರಾ ಬ್ಯಾಂಕ್ ರಸ್ತೆ ಸಹ ತೀವ್ರವಾಗಿ ಹದಗೆಟ್ಟ ಸ್ಥಿತಿಯಲ್ಲಿದ್ದು ಈ ಬಗ್ಗೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಗಮನ ಹರಿಸದೇ ಇರುವುದು ವಿಪರ್ಯಾಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ ಕಳೆದಿದೆ. ಕ್ಷೇತ್ರದ ಜನತೆ ನಿಮ್ಮ ಮೇಲೆ ಭರವಸೆ ಇಟ್ಟು ಆಯ್ಕೆ ಮಾಡಿದ್ದಾರೆ. ಅವರ ನಂಬಿಕೆಗೆ ದ್ರೋಹ ಬಗೆಯದೇ ಶೀಘ್ರವಾಗಿ ರಸ್ತೆ ಅಭಿವೃದ್ಧಿಪಡಿಸಿ ಎಂದು ಮನವಿ ಮಾಡಿದರು.
ಯಾವುದೇ ಒಂದು ಐತಿಹಾಸಿಕ ಆಚರಣೆ ಮಾಡಬೇಕಾದರೆ ಪೂರ್ವಭಾವಿಯಾಗಿ ಮೂಲಸೌಕರ್ಯದ ಅಭಿವೃದ್ಧಿ ಮಾಡಬೇಕಾದದ್ದು ದೂರದೃಷ್ಟಿ ಇರುವ ನಾಯಕರ ಜವಾಬ್ದಾರಿಯಾಗಿದೆ ಎಂದು ವಿಷಾಧಿಸಿದರು.
ಈ ವೇಳೆ ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಲಿಂಗಪ್ಪಾಜಿ,ಕಾರ್ ಮಲ್ಲಪ್ಪ,ಮಂಜು,ಮಹೇಶ್, ರೇವಣ್ಣ,ಬಸವರಾಜು,ಮಹದೇವ ಸ್ವಾಮಿ,ರಾಜೇಶ ಮತ್ತಿತರರಿದ್ದರು.
Mysore
ನಿಸ್ವಾರ್ಥ ಸೇವೆಯೇ ನಿಜವಾದ ಸಮಾಜ ಸೇವೆ: ಸಿ.ನಾರಾಯಣಗೌಡ

ಮೈಸೂರು: ನಿಸ್ವಾರ್ಥ ಸೇವೆಯೇ ನಿಜವಾದ ಸಮಾಜ ಸೇವೆ ಎಂದು ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಹೇಳಿದರು.
ಶ್ರೀ ದುರ್ಗಾ ಪೋಡೇಶನ್ ಹಾಗೂ ಅರಿವು ಸಂಸ್ಥೆ ವತಿಯಿಂದ ಜೀವಧಾರ ರಕ್ತನಿಧಿ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ, 20 ವರ್ಷ ನಿರಂತರ ಸಾಮಾಜಿಕ ಸೇವೆ, ಸಂಘಟನೆಯಿಂದ ಸೇವೆ ಸಲ್ಲಿಸುತ್ತಿರುವ ಎಸ್.ಇ.ಗಿರೀಶ್ ಅವರಿಗೆ ಜೀವ ರಕ್ಷಕ ಸೇವಾ ಪ್ರಶಸ್ತಿಯನ್ನು ಪ್ರದಾನ ಮಾಡಿ ಅವರು ಮಾತನಾಡಿದರು.
ಸೇವೆಯನ್ನು ಆತ್ಮ ತೃಪ್ತಿ ಮತ್ತು ಮನಃಸಂತೋಷಕ್ಕಾಗಿ ಮಾಡುತ್ತೇವೆ. ಆದರೆ, ಜೀವದಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಅವರು,ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರ ಸೇವೆಯ ಜೊತೆಗೆ , ಬಡ ವಿದ್ಯಾರ್ಥಿ ಹಾಗೂ ರೋಗಿಗಳ ಸಹಾಯ ಮಾಡುವ ಮೂಲಕ ನಿಸ್ವಾರ್ಥ ದೃಷ್ಟಿಯಿಂದ ಸೇವೆ ಮಾಡುತ್ತಿರುವುದು ನಿಜವಾದ ಸಮಾಜ ಸೇವೆ ಎಂದರು.
ನಿಸ್ವಾರ್ಥ ಸೇವಾಕಾರಗಳು ಸಮಾಜದ ಸ್ವಾಸ್ಥ್ಯ ಕಾಪಾಡಲು ಸಹಕಾರಿ. ಗಿರೀಶ್ ಅವರ 20 ವರ್ಷದ ಸುದೀರ್ಘಕಾಲದ ಸೇವೆಯನ್ನು ಹೀಗೆ ಮುಂದುವರಿಸಲಿ ಎಂದು ಆಶಿಸಿದರು.
ಮೈಸೂರು ಚೇಂಬರ್ ಆ್ ಕಾಮಸ್‌ರ ಅಧ್ಯಕ್ಷ ಕೆ.ಬಿ.ಲಿಂಗರಾಜು ಮಾತನಾಡಿ,
ರಕ್ತದಾನಕ್ಕಿಂತ ಶ್ರೇಷ್ಠವಾದ ದಾನ ಮತ್ತೊಂದಿಲ್ಲ. ಅಪಘಾತ ಮತ್ತಿತರರ ಘಟನೆ ಸಂದರ್ಭದಲ್ಲಿ ರಕ್ತದ ಕೊರತೆಯಿಂದ ಪ್ರಾಣ ಕಳೆದುಕೊಳ್ಳುವ ಸ್ಥಿತಿಯಲ್ಲಿರುವ ರೋಗಿಗಳಿಗೆ ರಕ್ತದಾನ ಮಾಡುವವರೇ ಎರಡನೇ ದೇವರಾಗುತ್ತಾರೆ. ಅಂತಹ ಕೆಲಸದಲ್ಲಿ ಜೀವದಾರ ರಕ್ತನಿಧಿ ಕೇಂದ್ರ 20 ವರ್ಷದಿಂದ ನಿರಂತರವಾಗಿ ಸೇವೆ ಮಾಡುತ್ತ ಬಂದಿದೆ. ಜೀವದಾರ ರಕ್ತ ನಿಧಿ ಕೇಂದ್ರಕ್ಕೆ ಮೈಸೂರು ನಗರದ ಅತ್ಯುತ್ತಮ ರಕ್ತ ನಿಧಿ ಕೇಂದ್ರ ಎಂಬ ಪ್ರಶಂಸೆಗೆ ಪಾತ್ರವಾಗಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀ ದುರ್ಗಾ ೌಂಡೇಶನ್ ಹಾಗೂ ಅರಿವು ಸಂಸ್ಥೆಯ ಪದಾಧಿಕಾರಿಗಳು ಸ್ವಯಂ ಪ್ರೇರಿತವಾಗಿ 30 ಯೂನಿಟ್ ರಕ್ತದಾನ ಮಾಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ರೇಣುಕಾ ರಾಜ್, ಜೆಡಿಎಸ್ ಕಾರ್ಯಧ್ಯಕ್ಷ ಎಸ್. ಪ್ರಕಾಶ್ ಪ್ರಿಯಾ ದರ್ಶನ್, ಜಿ.ರಾಘವೇಂದ್ರ, ಆನಂದ್, ಮುತ್ತಣ್ಣ, ಎಂ.ಗಂಟಯ್ಯ (ಕೃಷ್ಣಪ್ಪ), ದುರ್ಗಾ ೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ಅರಿವು ಸಂಸ್ಥೆಯ ಅಧ್ಯಕ್ಷರಾದ ಶ್ರೀಕಾಂತ್ ಕಶ್ಯಪ್, ಕೇಬಲ್ ವಿಜಿ, ಸೂರಜ್, ಸದಾಶಿವ್, ವಿನಯ್ ಕಣಗಾಲ್, ರಾಕೇಶ್, ಕೆಂಪಣ್ಣ ,ನಂದೀಶ್, ರಾಘವೇಂದ್ರ ಮತ್ತಿತರರು ಇದ್ದರು.
-
State13 hours ago
ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯ ದುರದೃಷ್ಟಕರ: ಬಸವರಾಜ ಬೊಮ್ಮಾಯಿ ಬೇಸರ
-
Kodagu10 hours ago
ಕೊಡವಾಮೆ ಬಾಳೋ ಪಾದಯಾತ್ರೆ: ಮಧ್ಯ ಮಾರಾಟ ನಿಷೇಧ
-
Chamarajanagar10 hours ago
ಚಿಕ್ಕಮಗಳೂರು: ನಕ್ಸಲ್ ರವೀಂದ್ರಗೆ ಸೇರಿದ್ದು ಎನ್ನಲಾದ ಬಂದೂಕು ಪತ್ತೆ?
-
Kodagu10 hours ago
ಕೊಟ್ಟಮುಡಿ ಝೀನತ್ ಯುವಕ ಸಂಘ ಅಧ್ಯಕ್ಷರಾಗಿ ಸೌಕತ್ ಆಯ್ಕೆ
-
Kodagu14 hours ago
ಫೆ.7 ರ ಕೊಡವ ಪಾದಯಾತ್ರೆಗೆ ಸಿಎನ್ ಸಿ ಬೆಂಬಲ
-
Hassan8 hours ago
ಎಂಸಿಇ ಕಾಲೇಜು ಉಪಾಧ್ಯಕ್ಷರಿಗೆ ವೀರಶೈವ ಲಿಂಗಾಯತ ಮಹಾಸಭಾದಿಂದ ಸನ್ಮಾನ
-
Hassan9 hours ago
ಆಸ್ತಿ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ
-
Sports11 hours ago
ಏಕದಿನ ಮಾದರಿಗೆ ದಿಢೀರ್ ನಿವೃತ್ತಿ ಘೋಷಿಸಿದ ಆಸೀಸ್ ಆಲ್ರೌಂಡರ್ ಸ್ಟೋಯ್ನಿಸ್