Hassan
ಅದ್ದೂರಿಯಾಗಿ ಜರುಗಿದ 18ನೇ ವರ್ಷದ ಶ್ರೀ ಉದ್ಭವ ಶನೈಶ್ಚರ ಸ್ವಾಮಿಯ ಜಾತ್ರಾ ಮಹೋತ್ಸವ
ಆಲೂರು: ತಾಲೂಕಿನ ಕೆ. ಕಾಟೀಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಶ್ರೀ ಉದ್ಭವ ಶನೈಶ್ಚರ ಸ್ವಾಮಿಯ 18ನೇ ವರ್ಷದ ಜಾತ್ರಾ ಮಹೋತ್ಸವವೂ ಅತ್ಯಂತ ವೈಭವದಿಂದ ಜರುಗಿತು. ಈ ಸಂಭ್ರಮದ ನಡುವೆ ಗ್ರಾಮದ ಯುವಕರು ಜಾತಿ-ಮತದ ಭೇದ ಮರೆತು ಒಗ್ಗಟ್ಟಿನ ಪ್ರದರ್ಶನ ನೀಡುವ ಮೂಲಕ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ.
ವೈಭವದ ರಥೋತ್ಸವ ಮತ್ತು ಸಾಂಸ್ಕೃತಿಕ ಮೆರುಗು
ಫೆ.6 ರಿಂದ 7 ರವರೆಗೆ ನಡೆದ ಈ ಜಾತ್ರಾ ಮಹೋತ್ಸವದಲ್ಲಿ ವಿಶೇಷವಾಗಿ ಗ್ರಾಮದ ದೇವತೆಗಳನ್ನು ಚಿನ್ನ ಹಾಗೂ ಬೆಳ್ಳಿಯ ರಥಗಳ ಮೂಲಕ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಈ ಸಂದರ್ಭದಲ್ಲಿ ವೀರಗಾಸೆ, ಡೋಲು ಕುಣಿತದಂತಹ ಜಾನಪದ ಕಲಾತಂಡಗಳು ಮೆರವಣಿಗೆಗೆ ವಿಶೇಷ ಕಳೆ ತಂದವು. ಭಕ್ತಾದಿಗಳು ಸಾಗರೋಪಾದಿಯಲ್ಲಿ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು.

ಸೌಹಾರ್ದತೆಯ ಸಂದೇಶ ಸಾರಿದ ಕ್ರಿಕೆಟ್ ಪಂದ್ಯಾವಳಿ
ಜಾತ್ರೆಯ ಮರುದಿನವಾದ ಭಾನುವಾರ , ಗ್ರಾಮದ ಯುವಕರು ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯು ಎಲ್ಲರ ಗಮನ ಸೆಳೆಯಿತು. “ನಾವೆಲ್ಲರೂ ಒಂದೇ” ಎಂಬ ಉದಾತ್ತ ಉದ್ದೇಶದೊಂದಿಗೆ ಗ್ರಾಮದ ಎಲ್ಲಾ ವರ್ಗದ ಯುವಕರು ಯಾವುದೇ ಭೇದ-ಭಾವವಿಲ್ಲದೆ ಕ್ರೀಡೆಯಲ್ಲಿ ಪಾಲ್ಗೊಂಡಿದ್ದರು. ಕ್ರೀಡೆಯ ಮೂಲಕ ಸಮಾಜದಲ್ಲಿ ಭಾವೈಕ್ಯತೆಯನ್ನು ಬೆಳೆಸಬಹುದು ಎಂಬುದನ್ನು ಈ ಯುವಕರು ಸಾಬೀತುಪಡಿಸಿದರು.
ಪ್ರಮುಖ ಸಹಕಾರ
ಈ ಕಾರ್ಯಕ್ರಮದ ಯಶಸ್ಸಿನ ಹಿಂದೆ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಯೋಗೀಶ್ ಅವರ ಮಾರ್ಗದರ್ಶನ ಹಾಗೂ ಪ್ರಧಾನ ಅರ್ಚಕರಾದ ರವಿ ಸ್ವಾಮಿ ಅವರ ಆಶೀರ್ವಾದವಿತ್ತು.

ಯುವಶಕ್ತಿಯ ಸಂಘಟನೆ:
ಗ್ರಾಮದ ಯುವಕರಾದ ಕೆ.ಡಿ.ರವಿ, ಪ್ರಸನ್ನ, ಸೋಮ, ಪ್ರತಾಪ್, ಸುನಿಲ್, ಶ್ರೀಧರ, ಮದನ್, ಮನು (ಭಾಷಾ), ಚಂದನ್, ಮನು ಉಗನೆ, ಗಿರೀಶ್, ಕೆ.ಟಿ. ಮಂಜುನಾಥ್ ಹಾಗೂ ಇನ್ನಿತರ ಯುವಕರು ಹಗಲಿರುಳು ಶ್ರಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಗ್ರಾಮದ ಹಿರಿಯರು ಯುವಕರ ಈ ಉತ್ಸಾಹ ಮತ್ತು ಒಗ್ಗಟ್ಟನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದು, ಕೆ. ಕಾಟೀಹಳ್ಳಿಯ ಈ ಮಾದರಿ ಕಾರ್ಯ ಇತರ ಗ್ರಾಮಗಳಿಗೂ ಸ್ಫೂರ್ತಿಯಾಗಲಿ ಎಂದು ಹಾರೈಸಿದ್ದಾರೆ
Hassan
ಆರ್‌ಟಿಐ ಕಾರ್ಯಕರ್ತನ ಮೇಲೆ ಗ್ರಾ.ಪ. ಮಾಜಿ ಸದಸ್ಯನಿಂದಲೇ ಹಲ್ಲೆ ಆರೋಪ
ಹಾಸನ: ಹಸು ಮಾರಾಟ ಮಾಡಿ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯಲ್ಲಿ ದಾಖಲೆಗಳನ್ನು ಪಡೆದುಕೊಂಡು ರಾಜ್ಯದ ಗಮನ ಸೆಳೆದಿದ್ದ ರೈತನ ಮೇಲೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯನೇ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರೈತ ರವಿ ಎಂಬವರು ಜಿತೇನಹಳ್ಳಿ ಗ್ರಾಮದ ಮಾಜಿ ಗ್ರಾ.ಪಂ. ಸದಸ್ಯ ಆನಂದ್ ವಿರುದ್ಧ ಹಲ್ಲೆ ಆರೋಪ ಮಾಡಿದ್ದಾರೆ.

ನವೆಂಬರ್ ತಿಂಗಳಲ್ಲಿ ಕಾಳೇನಹಳ್ಳಿ ಗ್ರಾಮ ಪಂಚಾಯಿತಿಯಿಂದ ಬರೊಬ್ಬರಿ 16,370 ಪುಟಗಳ ದಾಖಲೆಗಳನ್ನು ಆರ್‌ಟಿಐ ಅಡಿಯಲ್ಲಿ ಪಡೆದಿದ್ದ ರವಿ, ಇದಕ್ಕಾಗಿ 32,340 ರೂ. ಶುಲ್ಕವನ್ನು ಪಾವತಿಸಿದ್ದರು. ದಾಖಲೆಗಳ ಜೆರಾಕ್ಸ್‌ಗೆ ಹಣ ಹೊಂದಿಸಲು ತನ್ನ ಹಸುವನ್ನು ಮಾರಾಟ ಮಾಡಿದ್ದರು. ಅಲ್ಲದೆ
ಗ್ರಾಮ ಪಂಚಾಯಿತಿಗೆ ತೆರಳಿ, ಎತ್ತಿನಗಾಡಿಯಲ್ಲಿ ದಾಖಲೆಗಳನ್ನು ಸಾಗಿಸಿಕೊಂಡು ಬಂದಿದ್ದ ರವಿ, ಪಡೆದ ದಾಖಲೆಗಳ ಆಧಾರದ ಮೇಲೆ ಅನುದಾನ ದುರುಪಯೋಗ ಆರೋಪಿಸಿ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ಈ ದೂರು ದಾಖಲಾಗಿದ ಬಳಿಕವೇ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ರವಿ ಆರೋಪಿಸಿದ್ದಾರೆ.
ದಿನಸಿ ಸಾಮಾನು ಖರೀದಿಗೆ ತೆರಳಿದ್ದ ವೇಳೆ ತನ್ನ ಮೇಲೆ ಹಲ್ಲೆ ನಡೆದಿದ್ದು, ಈ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಹಲ್ಲೆಯಿಂದ ಗಾಯಗೊಂಡಿರುವ ರವಿ ಸದ್ಯ ಹಾಸನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
Hassan
ಹೊಳೆನರಸೀಪುರ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ಲೈನ್, ಫ್ಲಾಟ್ ಫಾರ್ಮ್ ವಿಸ್ತರಿಸಲು ಅಶ್ವಿನಿ ವೈಷ್ಣವ್‌ಗೆ ಶ್ರೇಯಸ್ ಮನವಿ
ಹಾಸನ: ಸಂಸದ ಶ್ರೇಯಸ್ ಎಂ. ಪಟೇಲ್ ಅವರು ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ ಹೊಳೆನರಸೀಪುರ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ಒಂದು ಲೈನ್, ಫ್ಲಾಟ್ ಫಾರ್ಮ್ ವಿಸ್ತರಿಸಲು ಹಾಗೂ ಗಜರಾಜ್ ಸಿಸ್ಟಮ್ ಅಳವಡಿಸುವಂತೆ ಪ್ರಸ್ತಾವನೆ ಸಲ್ಲಿಸಿದರು.
ಹೊಳೆನರಸೀಪುರದಲ್ಲಿ ಪ್ರಸ್ತುತ ಕೇವಲ ಎರಡು ರೈಲು ಹಳಿಗಳು ಮಾತ್ರ ಇದ್ದು, ಸಂಚಾರ ದಟ್ಟಣೆ ಹಾಗೂ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ಫ್ಲಾಟ್ ಫಾರ್ಮ್ ವಿಸ್ತರಣೆ ಮತ್ತು ಸಂಬಂಧಿತ ಕಾಮಗಾರಿಗಳಿಗೆ ಅಗತ್ಯ ಭೂಮಿಯನ್ನು ರಾಜ್ಯ ಸರ್ಕಾರ ಪಿಡಬ್ಲ್ಯುಡಿ ಮೂಲಕ ರೈಲ್ವೆಗೆ ಹಸ್ತಾಂತರಿಸಲು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ, ಕನಿಷ್ಠ ಒಂದು ಹೆಚ್ಚುವರಿ ರೈಲು ಹಳಿ ನಿರ್ಮಾಣ ಹಾಗೂ ಪ್ಲಾಟ್‌ಫಾರ್ಮ್ ವಿಸ್ತರಣೆಗೆ ಅನುಮೋದನೆ ನೀಡುವಂತೆ ಮನವಿ ಮಾಡಿದರು.

ಜೊತೆಗೆ ಮಲೆನಾಡು ಭಾಗದಲ್ಲಿ ರೈಲು ಡಿಕ್ಕಿಯಿಂದ ಆನೆಗಳ ಸಾವು ಸಂಭವಿಸುತ್ತಿರುವ ಗಂಭೀರ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಅಪಾಯಕಾರಿ ರೈಲು ಮಾರ್ಗಗಳಲ್ಲಿ “ಗಜರಾಜ್ ಸಿಸ್ಟಮ್” (ತಂತ್ರಜ್ಞಾನ ಆಧಾರಿತ ಆನೆ ಪತ್ತೆ ಮತ್ತು ಎಚ್ಚರಿಕೆ ವ್ಯವಸ್ಥೆ) ಅಳವಡಿಸುವಂತೆ ಮನವಿ ಮಾಡಿದರು.
ಹಾಸನ ಜಿಲ್ಲೆ ಪಶ್ಚಿಮ ಘಟ್ಟಗಳ ಪ್ರದೇಶವಾಗಿದ್ದು, ಇಲ್ಲಿ ಆನೆಗಳ ಸಹಜ ಸಂಚಾರ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ವನ್ಯಜೀವಿಗಳ ರಕ್ಷಣೆ ಮಾಡುವುದು ಅತ್ಯಗತ್ಯವಾಗಿದೆ. ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಆನೆಗಳ ರಕ್ಷಣೆ ಹಾಗೂ ಸುರಕ್ಷಿತ ರೈಲು ಸಂಚಾರಕ್ಕೆ ಸಹಕಾರಿ ಆಗಲಿದೆ.
Hassan
ಕೇಂದ್ರ ಸಚಿವ ಜ್ಯೋತಿರಾದಿತ್ಯ ಎಂ. ಸಿಂಧ್ಯಾರವರನ್ನು ಭೇಟಿಯಾಗಿ ಹಾಸನ ಜಿಲ್ಲೆಯ ಅಂಚೆ ಇಲಾಖೆ ಬಗ್ಗೆ ಚರ್ಚಿಸಿದ ಶ್ರೇಯಸ್
ಹಾಸನ: ಸಂಸದ ಶ್ರೇಯಸ್ ಎಂ. ಪಟೇಲ್ ಅವರು ನವದೆಹಲಿಯಲ್ಲಿ ಇಂದು ಕೇಂದ್ರ ಸರ್ಕಾರದ ಸಂವಹನ ಸಚಿವ ಜ್ಯೋತಿರಾದಿತ್ಯ ಎಂ. ಸಿಂಧ್ಯಾ ಅವರನ್ನು ಭೇಟಿಯಾಗಿ, ಹಾಸನ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ವಿಚಾರಗಳನ್ನು ಮಂಡಿಸಿದ್ದಾರೆ.
ಹಾಸನ ಅಂಚೆ ವಿಭಾಗದಲ್ಲಿ 17 ಖಾಲಿ ಜಾಗಗಳು ಲಭ್ಯವಿದ್ದರೂ ಅನೇಕ ಅಂಚೆ ಕಚೇರಿಗಳು ಇನ್ನೂ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ತಾಲ್ಲೂಕು ಕೇಂದ್ರವಾದ ಆಲೂರಿನಲ್ಲಿ ಅಂಚೆ ಕಚೇರಿ ಕಟ್ಟಡ ನಿರ್ಮಾಣ ಸೇರಿದಂತೆ, ಹಾಸನ (ಎನ್.ಆರ್.ಬಡಾವಣೆ), ಹರಳಹಳ್ಳಿ, ಬಾಗೂರು, ಗೊರೂರು, ರಾಮನಾಥಪುರ, ನುಗ್ಗೇಹಳ್ಳಿ, ಶಾಂತಿಗ್ರಾಮ, ಕಂದಲಿ, ದುದ್ದ, ಯಸಳೂರು, ಬಿಕ್ಕೋಡು, ಪಾಳ್ಯ, ಹಾನುಬಾಳು, ಹಗರೆ ಹಾಗೂ ಕೆ.ಹೊಸಕೋಟೆಗಳಲ್ಲಿ ಸಬ್ ಪೋಸ್ಟ್ ಕಚೇರಿ ಕಟ್ಟಡಗಳಿಗೆ ಅನುಮೋದನೆ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದರು.

ಇದೇ ವೇಳೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಹೆಚ್ಚುತ್ತಿರುವ ಮಾನವ–ಕಾಡಾನೆ ಸಂಘರ್ಷವನ್ನು ಗಮನದಲ್ಲಿಟ್ಟುಕೊಂಡು, ಸಾರ್ವಜನಿಕರ ಸುರಕ್ಷತೆಗೆ ಅಗತ್ಯವಾದ ಮೊಬೈಲ್ ನೆಟ್ವರ್ಕ್ ವ್ಯವಸ್ಥೆ ಕಲ್ಪಿಸುವಂತೆ ಕೋರಿದರು.
ಸಾರ್ವಜನಿಕ ಸುರಕ್ಷತೆ ಮತ್ತು ಪರಿಣಾಮಕಾರಿ ಆಡಳಿತದ ದೃಷ್ಟಿಯಿಂದ 4G ಸ್ಯಾಚುರೇಷನ್ ಯೋಜನೆಯಡಿ ಮೊಬೈಲ್ ದೂರಸಂಪರ್ಕ ಮೂಲಸೌಕರ್ಯ ಒದಗಿಸುವಂತೆ ಒತ್ತಾಯಿಸಿದ್ದು, ಬೇಲೂರು ತಾಲೂಕಿನ ದೊಡ್ಡಸಾಲಾವರ, ಹೊಳಲು, ಬ್ಯಾದನೆ, ಕನಹಳ್ಳಿ, ನೆರ್ಲಮಕ್ಕಿ, ಅಂಕಿಹಳ್ಳಿ, ಸಕಲೇಶಪುರ ತಾಲ್ಲೂಕಿನ ಈಚಲಬೀಡು, ಹಿರಿದನಹಳ್ಳಿ ಹಾಗೂ ಆಲೂರು ತಾಲ್ಲೂಕಿನ ಮಾದಿಹಳ್ಳಿ ಮತ್ತು ಹರಿಹಳ್ಳಿಯಲ್ಲಿ ಮೊಬೈಲ್ ಟವರ್ ಅಳವಡಿಸುವಂತೆ ಮನವಿ ಮಾಡಿದ್ದಾರೆ.
-
Mysore10 hours agoರಾಜ್ಯದಲ್ಲಿ ಯತೀಂದ್ರ ಸೇಲ್ಸ್ ಟ್ಯಾಕ್ಸ್ ಕಡ್ಡಾಯ: ಪ್ರತಾಪ್ ಸಿಂಹ ಆರೋಪ
-
Mandya4 hours agoಕಾಯಕ ಶರಣರ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು :ಡಾ. ಬಿ.ವಿ. ನಂದೀಶ್
-
National3 hours agoಪಿಎಂ ಮೋದಿ ವಿರುದ್ಧ ಆಕ್ಷೇಪಾರ್ಹ ಪೋಸ್ಟರ್ ಹೊತ್ತೊಯ್ದಿರುವುದು ಪ್ರಚೋದನಕಾರಿ ನೀತಿ: ಪ್ರಹ್ಲಾದ್ ಜೋಶಿ
-
Special24 hours agoಸ್ತ್ರೀ ಶಕ್ತಿ ಪ್ಯಾಕೇಜ್: ಮಹಿಳೆಯರಿಗೆ ಭದ್ರತೆಯಿಲ್ಲದೇ 10 ಲಕ್ಷದವರೆಗೆ ಸಾಲ!
-
Mysore4 hours agoಕಳ್ಳತನ ಮಾಡಿದ್ದ ಕಾರು ವಶ: ಆರೋಪಿ ಬಂಧನ
-
Chikmagalur3 hours agoಮುಳ್ಳಯ್ಯನಗಿರಿ ದೇವಸ್ಥಾನದ ಕಾಮಗಾರಿ: ಸೀತಾಳಯ್ಯನ ಗಿರಿಯಿಂದ ಮುಳ್ಳಯ್ಯನಗಿರಿಗೆ ತೆರಳುವ ಮಾರ್ಗದಲ್ಲಿ ತಾತ್ಕಾಲಿಕ ನಿರ್ಬಂಧ
-
Kodagu3 hours agoಸಮ ಸಮಾಜ ನಿರ್ಮಾಣದಲ್ಲಿ ಕಾಯಕ ಶರಣರ ಕೊಡುಗೆ ಅಪಾರ: ಬಿ.ಬಿ.ಹೇಮಲತಾ
-
Kodagu5 hours ago104 ಮೊಬೈಲ್ಗಳನ್ನು ಪತ್ತೆ ಹಚ್ಚಿ ವಾರಸುದಾರರಿಗೆ ಹಿಂದಿರುಗಿಸಲಾಗಿದೆ: ಎಸ್ಪಿ ಬಿಂದುಮಣಿ
