Connect with us

Mandya

ಜಿಲ್ಲೆಯಲ್ಲಿ ಹರಡುತ್ತಿರುವ ಡೆಂಗ್ಯೂ ಜ್ವರವನ್ನು ನಿಯಂತ್ರಿಸಿ: ಸಿಇಓ ಶೇಕ್ ತನ್ವೀರ್ ಆಸೀಫ್

Published

on

ಮಂಡ್ಯ: ಜಿಲ್ಲೆಯಲ್ಲಿ ಡೆಂಗ್ಯೂ ರೋಗ ಪ್ರಕರಣಗಳು ಹೆಚ್ಚುತ್ತಿದ್ದು, ಡೆಂಗ್ಯೂ ರೋಗ ನಿಯಂತ್ರಣ ಮಾಡಲು ಅಗತ್ಯ ಕ್ರಮವಹಿಸಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಅವರು ತಿಳಿಸಿದರು.

ಅವರು ಜಿಲ್ಲೆಯ ಎಲ್ಲಾ ವೈದ್ಯಾಧಿಕಾರಿಗಳು, ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ
ಡೆಂಗ್ಯೂ ನಿಯಂತ್ರಣ ಕುರಿತು ವೀಡಿಯೋ ಸಂವಾದ ನಡೆಸಿ ಮಾತನಾಡಿದರು.

ಜಿಲ್ಲೆಯಲ್ಲಿ ಒಟ್ಟು 189 ಡೆಂಗ್ಯೂ ಪ್ರಕರಣಗಳು
2024 ನೇ ಸಾಲಿನಲ್ಲಿ ಜೂನ್ ಮಾಹೆಯವರೆಗೆ ಜಿಲ್ಲೆಯಲ್ಲಿ ಒಟ್ಟು 189 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, ಮಂಡ್ಯ ತಾಲ್ಲೂಕಿನಲ್ಲಿ – 89 , ಮದ್ದೂರು ತಾಲ್ಲೂಕಿನಲ್ಲಿ – 34 , ಮಳವಳ್ಳಿ ತಾಲ್ಲೂಕಿನಲ್ಲಿ -14, ಪಾಂಡವಪುರ – 18, ಶ್ರೀರಂಗಪಟ್ಟಣ – 16, ಕೆ. ಆರ್. ಪೇಟೆ – 9, ನಾಗಮಂಗಲ ತಾಲ್ಲೂಕಿನಲ್ಲಿ – 9 ಪ್ರಕರಣಗಳು ದಾಖಲಾಗಿವೆ. ಸಾರ್ವಜನಿಕರು ಮುನ್ನಚ್ಚರಿಕಾ ಕ್ರಮಗಳನ್ನು ವಹಿಸಿ ಎಂದರು.

ಸ್ಥಳೀಯ ಸಂಸ್ಥೆಗಳು ಕಸ ವಿಲೇವಾರಿ ಮಾಡುವ ವಾಹನದಲ್ಲಿ ದಿನವು ಡೆಂಗ್ಯೂ ನಿಯಂತ್ರಣದ ಬಗ್ಗೆ ನೀಡಿರುವ ಆಡಿಯೋ ತುಣುಕುಗಳನ್ನು ಪ್ರಸಾರ ಪಡಿಸುವುದರ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಗುಂಡಿಗಳು ಹಾಗೂ ತಗ್ಗುಗಳನ್ನು ಮುಚ್ಚಿಸುವುದರ ಮೂಲಕ ನೀರು ಸಂಗ್ರಹವಾಗದಂತೆ ತಡೆಗಟ್ಟಬೇಕು ಮತ್ತು ಸಾರ್ವಜನಿಕ ನಲ್ಲಿಗಳು ಹಾಗೂ ಕೊಳವೆ ಬಾವಿಗಳಿಂದ ನೀರು ಸರಾಗವಾಗಿ ಹರಿದು ಹೋಗುವಂತೆ ಸೂಕ್ತವಾದ ವ್ಯವಸ್ಥೆ ಮಾಡುವುದರ ಜೊತೆಗೆ ಈಗಾಗಲೇ ಇರುವ ಚರಂಡಿಗಳಲ್ಲಿ ಹುದುಗಿರುವ ಹೂಳನ್ನು ಎತ್ತಿ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳಬೇಕು ಎಂದರು.

ನಿಯಮಿತ ಹಾಗೂ ಸಮರ್ಪಕ ನೀರು ಸರಬರಾಜು, ನೀರು ಸರಬರಾಜಾಗುವ ನಲ್ಲಿ ಪೈಪುಗಳು ಸೋರದಂತೆ ನೋಡಿಕೊಳ್ಳಬೇಕು, ಕೊಳವೆ ಬಾವಿಗಳು ಹಾಗೂ ನಲ್ಲಿ ಪೈಪುಗಳು ಒಳಚರಂಡಿ ಜಾಗದಿಂದ ದೂರದಲ್ಲಿರುವಂತೆ ನಿರ್ಮಿಸಬೇಕು ಎಂದರು.

ಮೇಲ್ಟಾವಣಿಯ ತೊಟ್ಟಿಗಳು ಹಾಗೂ ನೀರು ಸರಬಾರಾಜು ಮಾಡುವ ತೊಟ್ಟಿಗಳನ್ನು ಭದ್ರವಾದ ಮುಚ್ಚಳದಿಂದ ಮುಚ್ಚುವ ವ್ಯವಸ್ಥೆ ಮಾಡಬೇಕು. ಆರೋಗ್ಯ ಇಲಾಖೆ ಜೊತೆ ನಿರಂತರ ಸಂಪರ್ಕದಲ್ಲಿದ್ದು ಗ್ರಾಮದ ನೈರ್ಮಲ್ಯತೆ ಹಾಗೂ ಗ್ರಾಮದಲ್ಲಿರಬಹುದಾದ ಸಾಂಕ್ರಾಮಿಕ ರೋಗಗಳ ಪರಿಸ್ಥಿತಿ ಹಾಗೂ ಹತೋಟಿಯ ಬಗ್ಗೆ ಚರ್ಚಿಸಬೇಕು‌ ಎಂದರು.

ಗ್ರಾಮ ಪಂಚಾಯತಿಗಳು ಸೊಳ್ಳೆ ಉತ್ಪತ್ತಿ ತಾಣಗಳ ನಿವಾರಣೆ ಹಾಗೂ ಗ್ರಾಮ ನೈರ್ಮಲ್ಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ನಡೆಸಬೇಕು ಎಂದರು.

ಶಿಕ್ಷಣ ಇಲಾಖೆ ಗಳಲ್ಲಿ ಶಾಲಾ ಪ್ರಾರ್ಥನಾ ವೇಳೆಯಲ್ಲಿ ಡೆಂಗೀ ನಿಯಂತ್ರಣದ ಕುರಿತು ಕರಪತ್ರಗಳನ್ನು ವಿದ್ಯಾರ್ಥಿಗಳತ್ತಿರ ಓದಿಸಬೇಕು ಮತ್ತು ಶಾಲೆಗಳಲ್ಲಿ ಆರೋಗ್ಯ ಶಿಕ್ಷಣ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಬೇಕು‌. ಸೊಳ್ಳೆಗಳಿಂದ ಹರಡುವ ಮತ್ತು ಇತರೆ ಸಾಂಕ್ರಾಮಿಕ ರೋಗಗಳ ಮತ್ತು ಅವುಗಳ ನಿಯಂತ್ರಣ ಬಗ್ಗೆ ಜಾಗೃತಿ ಮೂಡಿಸಿ ಎಂದರು.

ಶಾಲಾ ಆವರಣವನ್ನು ಸೊಳ್ಳೆ ಉತ್ಪತ್ತಿ ಮುಕ್ತವಾಗಿಡುವುದಲ್ಲದೇ ಸ್ವಚ್ಛತೆ ಹಾಗೂ ನೈರ್ಮಲ್ಯತೆಯನ್ನು ಕಾಪಾಡಬೇಕು ಮತ್ತು ಶಾಲೆಯಲ್ಲಿ ಯಾವುದೇ ಜ್ವರ ಪ್ರಕರಣವಿದ್ದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತಿಳಿಸುವುದು ಹಾಗೂ ಸಾಮೂಹಿಕ ಜ್ವರ ಪ್ರಕರಣಗಳು ಕಂಡುಬಂದಲ್ಲಿ ತಪ್ಪದೆ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಿಳಿಸಬೇಕು ಎಂದರು.

ಅಂಗನವಾಡಿ ಕಾರ್ಯಕರ್ತರು ವೈಯುಕ್ತಿಕ ರಕ್ಷಣೆ ಮತ್ತು ಪರಿಸರ ನೈರ್ಮಲ್ಯದ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು ಮತ್ತು ಅಂಗನವಾಡಿ ಆವರಣವನ್ನು ಸೊಳ್ಳೆ ಉತ್ಪತ್ತಿ ಮುಕ್ತವಾಗಿಡುವುದೇ ಅಲ್ಲದೆ ಸ್ವಚ್ಛತೆ ಹಾಗೂ ನೈರ್ಮಲ್ಯತೆಯಿಂದ ನೋಡಿಕೊಳ್ಳಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಆನಂದ್ ಉಪಸ್ಥಿತರಿದ್ದರು

Continue Reading
Click to comment

Leave a Reply

Your email address will not be published. Required fields are marked *

Mandya

ಜ.23 ರಂದು ಬೃಹತ್ ರಕ್ತದಾನ ಶಿಬಿರ : ನಟರಾಜ್

Published

on

ಮಂಡ್ಯ: ಜಿಲ್ಲೆಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ಸುಭಾಷ್‌ ಚಂದ್ರಬೋಸ್ ಅವರ ೧೨೮ನೇ ಜನ್ಮದಿನದ ಸ್ಮರಣಾರ್ಥ ನಿರಂತರ ೨೪ ಗಂಟೆಗಳ ಕಾಲ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಜನವರಿ ೨೩ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜೀವಧಾರೆ ಟ್ರಸ್ಟ್‌ನ ನಟರಾಜ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟ್ರಸ್ಟ್‌ನ ವತಿಯಿಂದ ಇದುವರೆಗೂ ೩೪೪ ರಕ್ತದಾನ ಶಿಬಿರವನ್ನು ಆಯೋಜಿಸಿದ್ದು, ೪೩ ಸಾವಿರ ಯೂನಿಟ್ ರಕ್ತವನ್ನು ಸಂಗ್ರಹಿಸಿ ಯೋಧರ ಆಸ್ಪತ್ರೆಯನ್ನೂ ಒಳಗೊಂಡಂತೆ ಸರ್ಕಾರಿ ರಕ್ತನಿಧಿ ಕೇಂದ್ರಗಳಿಗೆ ನಿರಂತರವಾಗಿ ಕಾಲಕಾಲಕ್ಕೆ ಸಂಗ್ರಹಿಸಿದ ರಕ್ತ ಒದಗಿಸುತ್ತಿದೆ ಎಂದರು.

ಜನವರಿ ೨೩ರ ಬೆಳಿಗ್ಗೆ ೦೮ ಪ್ರಾರಂಭವಾಗುವ ರಕ್ತದಾನ ಶಿಬಿರ ಜನವರಿ ೨೪ರ ಬೆಳಿಗ್ಗೆ ೦೮ ಗಂಟೆ ವರೆಗೂ ನಡೆಯಲಿದೆ. ರಕ್ತದಾನ ಶಿಬಿರ ಸಂಬಂಧ ೧೨೮ ಹಳ್ಳಿಗಳಿಗೆ ಭೇಟಿ ಪ್ರಚಾರ ಮಾಡಲಾಗಿದೆ. ಜನವರಿ ೧೮ರಂದು ನಗರದ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ಜಾಥಾ ಮೂಲಕ ಪ್ರಚಾರ ಮಾಡಲಾಗಿದೆ. ಟ್ರಸ್ಟ್‌ನಿಂದ ನಡೆಯುವ ೩೪೫ನೇ ರಕ್ತದಾನ ಶಿಬಿರದಲ್ಲಿ ೧೫೦೦ ಯುನಿಟ್ ಸಂಗ್ರಹವಾಗುವ ನಿರೀಕ್ಷೆಯಿದೆ ಎಂದು ಪ್ರಶ್ನೆಗೆ ಉತ್ತರ ನೀಡಿದರು.

ಕಾರ್ಯಕ್ರಮದಲ್ಲಿ ಬೆಳಗಿನ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ವ್ಯವಸ್ಥೆ ಮಾಡಲಾಗಿದ್ದು, ಸರ್ಕಾರಿ ಆಸ್ಪತ್ರೆಯಿಂದ ರಕ್ತ ಸಂಗ್ರಹಿಸಲು ವೈದ್ಯ ಸಿಬ್ಬಂದಿಗಳು ೩ ಪಾಳಯದಲ್ಲಿ ಕಾರ್ಯನಿರ್ವಹಿಸಲಿದ್ದು, ಸರ್ಕಾರಿ ಆಸ್ಪತ್ರೆಯಿಂದ ೧೫೦ ಹಾಸಿಗೆ ವ್ಯವಸ್ಥೆಯನ್ನು ಒದಗಿಸಲಾಗುವುದು. ಸಂಗ್ರಹವಾದ ರಕ್ತವನ್ನು ಸೈನಿಕ ಆಸ್ಪತ್ರೆಗೆ ಬೇಕಾಗಿರುಷ್ಟು ತಲುಪಿಸಲಾಗುವುದು. ಉಳಿದ ಎಲ್ಲ ರಕ್ತವನ್ನು ಸರ್ಕಾರಿ ರಕ್ತ ನಿಧಿ ಕೇಂದ್ರ ಹಾಗೂ ಅಗತ್ಯವಿರುವ ಆಸ್ಪತ್ರೆಗಳಿಗೆ ನೀಡಲಾಗುವುದು ಎಂದು ಹೇಳಿದರು.

ಗೋಷ್ಠಿಯಲ್ಲಿ ಟ್ರಸ್ಟ್‌ನ ಗಣೇಶ್, ಅಭಿ, ಮಹದೇವ, ಉದಯ್, ರವಕುಮಾರ್, ಕುಮಾರ್, ಅನ್ವೇಶ್ ಇದ್ದರು.

Continue Reading

Mandya

ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿವರ್ಷ ಒಂದು ತಾಲ್ಲೂಕಿಗೆ ಅಂದಾಜು ರೂ 220 ಕೋಟಿ : ಎನ್ ಚಲುವರಾಯಸ್ವಾಮಿ

Published

on

ಮಂಡ್ಯ : ಹಲವಾರು ವಿರೋಧಗಳ ನಡುವೆ ರಾಜ್ಯದಲ್ಲಿ ಪಂಚ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲಾಯಿತು. ಈ ಯೋಜನೆಯಿಂದ ಪ್ರತಿ ತಾಲ್ಲೂಕಿಗೆ ಒಂದು ವರ್ಷದಲ್ಲಿ ಸುಮಾರು 220 ಕೋಟಿ ರೂ ನೀಡಲಾಗುತ್ತಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಅವರು ಮದ್ದೂರು ತಾಲ್ಲೂಕಿನ ಕೊಪ್ಪದಲ್ಲಿ ಆಯೋಜಿಸಲಾಗಿದ್ದ ಜನತಾ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಗ್ಯಾರಂಟಿ ಯೋಜನೆಗಳನ್ನು ಪಡೆಯಲು ಜನರು ಕಚೇರಿಗಳಿಗೆ ಅಲೆದಾಟುವಂತಿಲ್ಲ‌. ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗುತ್ತದೆ ಎಂದರು.

ಸಮಸ್ಯೆ ಪರಿಹಾರವಾದ ನಂತರ ಪರಿಹಾರವಾಗಿದೆ ಎಂದು ಯಾರು ಅಭಿನಂದನೆ ಸಲ್ಲಿಸುವುದಿಲ್ಲ. ಹೊಸ ಸಮಸ್ಯೆಗಳ ಪರಿಹಾರಕ್ಕೆ ಅರ್ಜಿ ಸಲ್ಲಿಕೆಯಾಗುತ್ತದೆ‌. ಸಾರ್ವಜನಿಕರ ಕೆಲಸ ಮಾಡುವುದು ಜನಪ್ರತಿನಿಧಿಗಳ ಕೆಲಸ ಎಂಬ ಮನೋಭಾವನೆಯನ್ನು ಬೆಳಸಿಕೊಳ್ಳಬೇಕು ಎಂದರು.

ಕರ್ನಾಟಕ ರಾಜ್ಯ ಸಾರ್ವಜನಿಕರಿಗೆ ನೀಡುವ ಕಾರ್ಯಕ್ರಮಗಳಿಗೆ ಸಂಗ್ರಹಿಸುವ ಫಲಾನುಭವಿಗಳ ವಿವರಗಳ ಬಗ್ಗೆ ಬೇರೆ ರಾಜ್ಯಗಳು ಮೆಚ್ಚುಗೆ ವ್ಯಕ್ತಪಡಿಸಿ, ವಿವರ ಸಂಗ್ರಹಿಸಲು ರೂಪಿಸಿರುವ ತಂತ್ರಜ್ಞಾನ ವನ್ನು ಹಂಚಿಕೊಳ್ಳುವಂತೆ ಮನವಿ ಸಲ್ಲಿಸಿರುವುದು ಹರ್ಷದಾಯಕ ವಿಷಯವಾಗಿದೆ ಎಂದರು.

ಕೊಪ್ಪ ಹೋಬಳಿಯಲ್ಲಿ ಇದು ಎರಡನೇ ಬಾರಿಗೆ ಜನತಾ ದರ್ಶನ ಕಾರ್ಯಕ್ರಮವನ್ನು ಆಯೋಜಿಸಿದ್ದು, ಸ್ವೀಕರಿಸುವ ಕುಂದು ಕೊರತೆ ಅರ್ಜಿಗಳನ್ನು ಕಾನೂನು ಚೌಕಟ್ಟಿನಲ್ಲಿ ಪರಿಹರಿಸಲಾಗುವುದು ಎಂದರು.

ಕೊಪ್ಪದಲ್ಲಿ ಬೇಡಿಕೆ ಇರುವ ಪೊಲೀಸ್ ಠಾಣೆ ನಿರ್ಮಾಣ, ನಾಡ ಕಚೇರಿ ಹಾಗೂ ಪ್ರವಾಸಿ ಮಂದಿರ ನಿರ್ಮಾಣಕ್ಕೆ ಸ್ಥಳ ಗುರುತಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಇದಲ್ಲದೇ ಪಂಚಾಯಿತಿ ಕಚೇರಿ ಹಾಗೂ ಗ್ರಂಥಾಲಯ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದು, ಸುಮಾರು 1 ಕೋಟಿ ವೆಚ್ಚವಾಗಲಿದೆ ಎಂದರು.

ಸಹಕಾರ ಸಂಘದ ಮೂಲಕ ರೂ 1 ಕೋಟಿ ಸಾಲ

ಕೊಪ್ಪ ಹಾಗೂ ಸುತ್ತಮುತ್ತಲಿನ 16 ಹಳ್ಳಿಗಳ ಕೃಷಿ ಪತ್ತಿನ ಸಹಕಾರ ಸಂಘ ಹಲವಾರು ಕಾರಣಗಳಿಂದ ಕೆಲಸ ಸ್ಥಗಿತಗೊಳಿಸಿತ್ತು. ಇದನ್ನು ಸರಿಪಡಿಸಿ ರೈತರು ಹಾಗೂ ಮಹಿಳೆಯರಿಗೆ ಆರ್ಥಿಕವಾಗಿ ಸದೃಢರಾಗಲು ಬಡ್ಡಿ ರಹಿತವಾಗಿ 1 ಕೋಟಿ ರೂ ವರೆಗೆ ಸಾಲ ನೀಡಲಾಗಿದೆ. ಇದಕ್ಕೆ ನಬಾಡ್೯ ವಿಧಿಸುವ ಬಡ್ಡಿಯನ್ನು ಸರ್ಕಾರ ಭರಿಸುತ್ತಿದೆ ಎಂದರು.

ಗ್ಯಾರಂಟಿ ಯೋಜನೆಗಳ ಜೊತೆಗೆ ಹೈನುಗಾರಿಕೆ ಕೃಷಿ ಸಂಬಂಧಿಸಿದ ಇಲಾಖೆಗಳ ಮೂಲಕ ಕೊಪ್ಪ ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ ಸುಮಾರು 2000 ಫಲಾನುಭವಿಗಳಿಗೆ 1.96 ಕೋಟಿ ರೂ ಸಹಾಯಧನ ನೀಡಲಾಗಿದೆ ಎಂದರು.

ಪೌತಿ ಖಾತೆ ಆಂದೋಲನಕ್ಕೆ ಸಂಬಂಧಿಸಿದಂತೆ ಕಳೆದ ಒಂದುವರೆ ತಿಂಗಳಿನಿಂದ ಕೊಪ್ಪ ವ್ಯಾಪ್ತಿಯಲ್ಲಿ 1275 ಅರ್ಜಿ ಸ್ವೀಕರಿಸಿ ಸುಮಾರು 443 ಪೌತಿ ಖಾತೆ ಮಾಡಿಕೊಡಲಾಗಿದೆ. ಪೌತಿ ಖಾತೆ ಮಾಡಿಸಿಕೊಳ್ಳಲು ರೈತರು ಸಹ ಆಸಕ್ತಿ‌ ತೋರಿಸಿ ಮುಂದೆ ಬರಬೇಕು. ದಾಖಲೆ, ಆರ್.ಟಿ.ಸಿ ಗಳು ಸರಿಯಿದ್ದರೆ ಮಾತ್ರ ಬ್ಯಾಂಕ್ ಅಥವಾ ಸೊಸೈಟಿಗಳಿಂದ ಸಾಲ ಪಡೆಯಲು ಸಾಧ್ಯ ಎಂದರು.

ರೈತರ ಭೂಮಿ ಹಾಗೂ ಇನ್ನಿತರೆ ದಾಖಲೆಗಳನ್ನು ಕಂದಾಯ ಇಲಾಖೆ ಡಿಜಟಲ್ ಮಾಡುವ ಭೂ ಸುರಕ್ಷಾ ಯೋಜನೆಯನ್ನು ಜಾರಿಗೆ ತಂದಿರುತ್ತದೆ. ಜಿಲ್ಲೆಯಲ್ಲಿ ಈಗಾಗಲೇ 36 ಲಕ್ಷ ದಾಖಲೆಗಳನ್ನು ಡಿಜಟಲೀಕರಣ ಮಾಡಲಾಗಿದೆ ಎಂದರು.

ಕಂದಾಯ ಇಲಾಖೆಯಲ್ಲಿ ಜನಪರ ಕೆಲಸಗಳು ನಡೆಯುತ್ತಿದ್ದು, ಸುಮಾರು 67 ಲಕ್ಷ ಪೌತಿ ಖಾತೆ, ಹಲವಾರು ವರ್ಷಗಳಿಂದ ಬಾಕಿ ಇದ್ದ ಕೋಟ್೯ ಪ್ರಕರಣಗಳನ್ನು ಒಂದು ವರ್ಷದಲ್ಲಿ 16000 ವಿಲೇವಾರಿ ಮಾಡಲಾಗಿದೆ. 18 ಲಕ್ಷ ಆರ್.ಟಿ.ಸಿ ಗಳಿಗೆ ಆಧಾರ್ ಜೋಡಣೆ ಕೆಲಸ ಮಾಡಲಾಗಿದೆ ಎಂದರು.

ಇತಿಹಾಸದಲ್ಲೇ ಮೊದಲ ಬಾರಿಗೆ ನಿರಂತರ 154 ದಿನಗಳು ಕೆ.ಆರ್.ಎಸ್ ನಲ್ಲಿ ನೀರು ತುಂಬಿರುವುದು ಸಂತೋಷದ ವಿಷಯವಾಗಿದೆ. ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸಲು ಕ್ರಮ ವಹಿಸಲಾಗಿದೆ ಬೆಳಗಳಿಗೆ ಕಟ್ಟು ಪದ್ಧತಿಯಲ್ಲಿ ನೀರು ಹರಿಸಲು ಪ್ರಾರಂಭಿಸಲಾಗಿದೆ. ರೈತರು ಬಿತ್ತನೆ ಕೆಲಸಗಳನ್ನು ಪ್ರಾರಂಭಿಸುವಂತೆ ತಿಳಿಸಿದರು.

ರೈತರಿಗೆ ಹೆಚ್ಚು ಉಪಯುಕ್ತವಾಗಲಿ ಎಂದು ರೈತರು ಹೆಚ್ಚಿರುವ ಜಿಲ್ಲೆ ಮಂಡ್ಯ ಜಿಲ್ಲೆಯಲ್ಲಿ ಕೃಷಿ ವಿಶ್ವವಿದ್ಯಾಲಯವನ್ನು ವಿ.ಸಿ.ಫಾರಂ ನಲ್ಲಿ ಪ್ರಾರಂಭಿಸಲಾಗುವುದು. ಇಲ್ಲಿ ಕೃಷಿ ತಜ್ಞರು ರೈತರಿಗೆ ಹಲವಾರು ಉಪಯುಕ್ತ ಮಾಹಿತಿಯನ್ನು ನೀಡಲಿದ್ದಾರೆ ಎಂದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಜನರ ಸಮಸ್ಯೆಗಳನ್ನು ಪರಿಹರಿಸಲು ಜನತಾ ದರ್ಶನ ಕಾರ್ಯಕ್ರಮವನ್ನು ಎರಡನೇ ಬಾರಿಗೆ ಕೊಪ್ಪದಲ್ಲಿ ಆಯೋಜಿಸಲಾಗಿದ್ದು, ಈ ಹಿಂದೆ ಸ್ವೀಕೃತವಾರ ಕುಂದು ಕೊರತೆ ಅರ್ಜಿಗಳಿಗೆ ಪರಿಹಾರ ಒದಗಿಸಲಾಗಿದೆ.

ಕಂದಾಯ ಇಲಾಖೆ ಚುರುಕಾಗಿ ಕೆಲಸ ನಿರ್ವಹಿಸುತ್ತಿದ್ದು, ಸ್ವಯಂ ಪ್ರೇರಿತವಾಗಿ ಪೌತಿ ಖಾತೆ ಆಂದೋಲನ, ಪೋಡಿ ದುರಸ್ತಿ, ಆಧಾರ ಸೀಡಿಂಗ್ ಕೆಲಸಗಳನ್ನು ಮನೆ ಮನೆಗೆ ಭೇಟಿ ನೀಡಿ ದಾಖಲೆ ಸಂಗ್ರಹಿಸಿಕೊಂಡು ಮಾಡಿಕೊಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಮಂಡ್ಯ ಉಪವಿಭಾಗಾಧಿಕಾರಿ ಶಿವ ಮೂರ್ತಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading

Mandya

ಕೊಪ್ಪದಲ್ಲಿ ನೂತನ ವ್ಯವಸಾಯ ಸೇವಾ ಸಹಕಾರ ಸಂಘ ಕಟ್ಟಡ ಉದ್ಘಾಟನೆ

Published

on

ಮಂಡ್ಯ : ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಕೊಪ್ಪದಲ್ಲಿ ನಿರ್ಮಿಸಲಾಗಿದ್ದ ನೂತನ ವ್ಯವಸಾಯ ಸೇವಾ ಸಹಕಾರ ಸಂಘ ಕಟ್ಟಡವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಕೆಳೆದ ಐದು ವರ್ಷದಿಂದ ದುರಸ್ಥಿಯಲ್ಲಿ ಇದ್ದ ಕೊಪ್ಪ ವ್ಯವಸಾಯ ಸೇವಾ ಸಹಕಾರಿ ಸಂಘದ ಕಟ್ಟಡವನ್ನು ಕೆಡವಿ, ರೈತರಿಗೆ ಸಾರ್ವಜನಿಕರು ಅನುಕೂಲವಾಗುವಂತೆ
ನೂತನ ಕಟ್ಟಡ ನಿರ್ಮಿಸಿರುವುದು ಸಂತಸ ಎಂದು ಹೇಳಿದರು.

ಇದೇ ವೇಳೆ ವ್ಯವಸಾಯ ಸಂಘದ ಸದಸ್ಯರು ವಿವಿಧ ಬೇಡಿಕೆಗಳನ್ನು ಕೃಷಿ ಸಚಿವರ ಮುಂದಿಟ್ಟರು. ಮುಂದಿನ ದಿನಗಳಲ್ಲಿ ಎಲ್ಲ ಸಮಸ್ಯೆಗಳನ್ನೂ ಬಗೆಹರಿಸುವುದಾಗಿ ಸಚಿವರು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿ ಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂತೋಷ್, ಕೆ, ಆರ್ ಪೇಟೆ ಮಾಜಿ ಶಾಸಕ ಚಂದ್ರಶೇಖರ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading

Trending

error: Content is protected !!