Connect with us

Hassan

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಸೈಯದ್ ತಾಜಿಂ ಬೃಹತ್ ಪ್ರತಿಭಟನೆ.

Published

on

ಹಾಸನ: ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಸೈಯದ್ ತಾಜಿಂ ಬಿನ್ ಸೈಯದ್ ಅಸ್ಲಂ ಇವರಿಗೆ ನೀಡಲು ಜಿಲ್ಲೆಯ ಸಾವಿರಾರು ಮುಸ್ಲಿಂ ಬಾಂಧವರು ಹಾಸನದ ಹೇಮಾವತಿ ಪ್ರತಿಮೆಯಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಮೆರವಣಿಗೆಯ ಮೂಲಕ ಒಗ್ಗಟ್ಟಿನ ಶಕ್ತಿ ಪ್ರದರ್ಶಿಸಿದರು.

ಜಿಲ್ಲಾಧಿ ಕಚೇರಿ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಂಜುನಾಥ್ ರವರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಕಾರ್ಯಕರ್ತ ಕಬೀರ್ ಅಹಮದ್, ಮುಸ್ಲಿಂ ಸಮುದಾಯವು ರಾಜಕೀಯ ಮತ್ತು ಆಡಳಿತಾತ್ಮಕ ಕ್ಷೇತ್ರಗಳಲ್ಲಿ ಗಣನೀಯವಾಗಿ ಹಿಂದುಳಿದಿದೆ. ಈ ಸಮುದಾಯವು ಸಮಾಜದ ಮುಖ್ಯವಾಹಿನಿಯಲ್ಲಿ ಸಮಾನ ಭಾಗವಹಿಸಲು ಮತ್ತು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಏಳಿಗೆಯನ್ನು ಸಾಧಿಸಲು ರಾಜಕೀಯ ಅಧಿಕಾರವು ಅತ್ಯಗತ್ಯವಾಗಿದೆ ಎಂದರು.

ಅಧಿಕಾರವಿಲ್ಲದ ಸಮುದಾಯವು ತನ್ನ ಧ್ವನಿಯನ್ನು ಪರಿಣಾಮಕಾರಿಯಾಗಿ ಎತ್ತಲು ಸಾಧ್ಯವಾಗದಿರುವುದರಿಂದ, ನಾಯಕತ್ವದ ಕೊರತೆಯಿಂದಾಗಿ ಹಲವು ತೊಡಕುಗಳನ್ನು ಎದುರಿಸುತ್ತಿದೆ. ಈ ಕಾರಣಕ್ಕಾಗಿಯೇ ಅಧಿಕಾರ ವಿಕೇಂದ್ರೀಕರಣ ಮತ್ತು ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ, ಇದು ಸಮುದಾಯವನ್ನು ಸಬಲಗೊಳಿಸಿ, ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದರು


ಮಾತನಾಡಿದ ವೀರ ಕನ್ನಡಿಗ ಟಿಪ್ಪು ಸೇನೆಯ ರಾಜ್ಯಾಧ್ಯಕ್ಷ ಅಕ್ಮಲ್ ಜಾವಿದ್,
ಹಾಸನ ಜಿಲ್ಲೆಯ ಸನ್ನಿವೇಶ:
ಹಾಸನ ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯವು ರಾಜಕೀಯವಾಗಿ ನಿರಾಸಕ್ತಿಯ ಸ್ಥಿತಿಯಲ್ಲಿದೆ. ಕಾಂಗ್ರೆಸ್ ಪಕ್ಷಕ್ಕೆ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಸ್ಥಿರವಾದ ಬೆಂಬಲವನ್ನು ನೀಡಿದ್ದರೂ, ದುರದೃಷ್ಟವಶಾತ್, ಈ ಸಮುದಾಯಕ್ಕೆ ಜಿಲ್ಲೆಯಲ್ಲಿ ಯಾವುದೇ ಉನ್ನತ ರಾಜಕೀಯ ಅಥವಾ ಆಡಳಿತಾತ್ಮಕ ಹುದ್ದೆಗಳನ್ನು ನೀಡಲಾಗಿಲ್ಲ ಎಂದರು

ಮಾತನಾಡಿದ ವಕೀಲ ಹಾಗೂ ಜನಪರ ಸಂಘಟನೆಯ ಮುಖಂಡ ಅನ್ಷದ್ ಪಾಳ್ಯ,
ಮುಸ್ಲಿಮರಿಗೆ ನೇರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದ (MP), ಶಾಸಕ (MLA) ಅಥವಾ ವಿಧಾನ ಪರಿಷತ್ ಸದಸ್ಯ (MLC) ಆಗುವ ಅವಕಾಶವನ್ನು ಒದಗಿಸಲಾಗಿಲ್ಲ. ಇದರಿಂದ ಸಮುದಾಯದ ರಾಜಕೀಯ ಧ್ವನಿಯು ದುರ್ಬಲವಾಗಿದ್ದು, ಆತ್ಮವಿಶ್ವಾಸ ಮತ್ತು ಭಾಗವಹಿಸುವಿಕೆಯ ಮೇಲೆ ಗಂಭೀರ ಪರಿಣಾಮ ಬೀರಿದೆ ಮುಸ್ಲಿಂ ವ್ಯಕ್ತಿಗೆ ಅಧಿಕಾರ ನೀಡಬೇಕು ಎಂದರು.


ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಚಾಂದ್ ಪಾಷಾ,
ಸೈಯದ್ ತಾಜಿಂ ಬಿನ್ ಸೈಯದ್ ಅಸ್ಲಂ (ವಯಸ್ಸು 43, ವಿಜಯನಗರ ಬಡಾವಣೆ, ಎರಡನೇ ಹಂತ, ಹಾಸನ) ಇವರಿಗೆ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ನೀಡುವ ಮೂಲಕ ಮುಸ್ಲಿಂ ಸಮುದಾಯಕ್ಕೆ ರಾಜಕೀಯ ಶಕ್ತಿಯನ್ನು ಒದಗಿಸಬೇಕೆಂದು ಗೌರವಾನ್ವಿತ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರಲ್ಲಿ ವಿನೀತವಾಗಿ ಮನವಿ ಮಾಡಿಕೊಳ್ಳುತ್ತೇವೆ ಎಂದರು.

ಮಾತನಾಡಿದ ಸೈಯದ್ ಇಲ್ಯಾಸ್,
ಸೈಯದ್ ತಾಜಿಂ ಇವರ ಕೊಡುಗೆಗಳು:
ಶ್ರೀ ಸೈಯದ್ ತಾಜಿಂ ಇವರು ಸಮಾಜದ ಎಲ್ಲ ವರ್ಗಗಳೊಂದಿಗೆ ಸಾಮರಸ್ಯದಿಂದ ಬೆರೆತು, ಸಮಾಜಕ್ಕೆ ಮಾದರಿಯಾಗಿ ನಿಂತಿದ್ದಾರೆ. ಶೋಷಿತ ಮತ್ತು ನಿರ್ಲಕ್ಷಿತರ ಪರವಾಗಿ ಧ್ವನಿಯಾಗಿ, ಸಾಮಾಜಿಕ ನ್ಯಾಯಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು, ತಮ್ಮ ತನು-ಮನ-ಧನದಿಂದ ಸಮಾಜಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ. ಯಶಸ್ವೀ ಉದ್ಯಮಿಯಾಗಿರುವ ಇವರು, ಉತ್ತಮ ನಡತೆ, ಸಮರ್ಪಣೆ ಮತ್ತು ನಾಯಕತ್ವದ ಗುಣಗಳನ್ನು ಹೊಂದಿದ್ದಾರೆ. ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಇವರು, ಸಮುದಾಯದ ಒಳಿತಿಗಾಗಿ ತಮ್ಮ ಆರ್ಥಿಕ ಸಂಪನ್ಮೂಲಗಳನ್ನು ಸದುಪಯೋಗಪಡಿಸಿಕೊಂಡಿದ್ದಾರೆ ಎಂದರು.

ಮಾತನಾಡಿದ ಕಾಂಗ್ರೆಸ್ ಮುಖಂಡ ಸರದಾರ್ ಪಾಶ,
ಗೌರವಾನ್ವಿತ ಮುಖ್ಯಮಂತ್ರಿಗಳ ಸರ್ಕಾರವು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ಒತ್ತು ನೀಡುವ ದೃಷ್ಟಿಯನ್ನು ಹೊಂದಿದೆ. ಈ ದೃಷ್ಟಿಯನ್ನು ಮತ್ತಷ್ಟು ಬಲಪಡಿಸಲು, ಶ್ರೀ ಸೈಯದ್ ತಾಜಿಂ ಇವರಿಗೆ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ನೀಡುವ ಮೂಲಕ, ಮುಸ್ಲಿಂ ಸಮುದಾಯಕ್ಕೆ ರಾಜಕೀಯವಾಗಿ ಶಕ್ತಿ ತುಂಬಿ, ಸಮಾಜದ ಮುಖ್ಯವಾಹಿನಿಯಲ್ಲಿ ಸಕ್ರಿಯ ಭಾಗವಹಿಸುವ ಅವಕಾಶವನ್ನು ಕಲ್ಪಿಸಬೇಕೆಂದು ಕೋರಿಕೊಳ್ಳುತ್ತೇವೆ ಎಂದರು.
ಇದು ಕೇವಲ ಒಬ್ಬ ವ್ಯಕ್ತಿಯ ಗೌರವವಲ್ಲ, ಬದಲಿಗೆ ಒಂದು ಸಮುದಾಯದ ಸಬಲೀಕರಣಕ್ಕೆ, ಸಾಮಾಜಿಕ ನ್ಯಾಯಕ್ಕೆ ಮತ್ತು ರಾಜ್ಯದ ಒಗ್ಗಟ್ಟಿಗೆ ದೊಡ್ಡ ಕೊಡುಗೆಯಾಗಲಿದೆ.

ಜಿಲ್ಲೆಯಲ್ಲಿ ಮುಸ್ಲಿಮರಿಗೆ ಚುನಾಯಿತ ಹುದ್ದೆಗಳಲ್ಲಿ ಪ್ರಾತಿನಿಧ್ಯ ಸಿಗದಿರುವುದರಿಂದ, ಹುಡಾ ಅದ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನವು ಸಮುದಾಯಕ್ಕೆ ರಾಜಕೀಯ ಗುರುತಿಸುವಿಕೆಯನ್ನು ಒದಗಿಸುವ ಮಹತ್ವದ ಕ್ರಮವಾಗಿರುತ್ತದೆ.

ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ಸಕಾರಾತ್ಮಕ ಕ್ರಮ ಕೈಗೊಳ್ಳಲು ಗೌರವಾನ್ವಿತ ಮುಖ್ಯಮಂತ್ರಿಗಳು ಮತ್ತು ಸರ್ಕಾರವನ್ನು ಕೋರಿಕೊಳ್ಳುತ್ತೇವೆ ಎಂದರು

ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ರಘು, ವಿವಿಧ ಸಂಘಟನೆಯ ಮುಖಂಡರು, ಮಹಿಳಾ ಕಾರ್ಯಕರ್ತರು ಸಾವಿರಾರು ಜನರು ಭಾಗವಹಿಸಿದ್ದರು.

Continue Reading

Hassan

ಆಲೂರಿನಲ್ಲಿ ಕಾರ್ಗಿಲ್ ವಿಜಯೋತ್ಸವ: ಹುತಾತ್ಮ ಯೋಧರಿಗೆ ಲಯನ್ ಸೇವಾ ಸಂಸ್ಥೆಯಿಂದ ಗೌರವ ನಮನ

Published

on

ವರದಿ : ಸತೀಶ್ ಚಿಕ್ಕಕಣಗಾಲು

ಆಲೂರು: ನಮ್ಮ ಸೈನಿಕರು ಭಾರತದ ಗಡಿಯಲ್ಲಿ ಹಗಲಿರುಳು ಚಳಿ, ಗಾಳಿ, ಮಳೆಗೆ ಮೈಯೊಡ್ಡಿ ಯಾವುದೇ ಅಪಾಯ ಲೆಕ್ಕಿಸದೆ ದೇಶದ ಗಡಿ ಕಾಯುತ್ತಿರುವುದರಿಂದ, ನಾವು ದೇಶದ ಒಳಗೆ ಸುಖವಾಗಿ ನಿದ್ದೆ ಮಾಡುತ್ತಿದ್ದೇವೆ. ಸೈನಿಕರು ದೇಶವನ್ನು ಕಾಯುತ್ತಿದ್ದರೆ, ರೈತರು ನಮ್ಮ ಹಸಿವು ನೀಗಿಸುತ್ತಿದ್ದಾರೆ. ಇವರಿಗೆ ಅತ್ಯುನ್ನತ ಗೌರವ ಸಲ್ಲಬೇಕು ಎಂದು ಲಯನ್ ಸೇವಾ ಸಂಸ್ಥೆಯ ಅಧ್ಯಕ್ಷ ಆನಂದ್ ನುಡಿದರು.

ಪಟ್ಟಣದ ಬಸ್ ನಿಲ್ದಾಣದ ಮುಂಭಾಗ ಲಯನ್ ಸೇವಾ ಸಂಸ್ಥೆಯ ಇವರ ವತಿಯಿಂದ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವ ದಿವಸ್ ಆಚರಣೆ ಅಂಗವಾಗಿ, ಹುತಾತ್ಮ ಯೋಧರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮ ಅತ್ಯಂತ ಹೆಮ್ಮೆಯ ಕಾರ್ಯಕ್ರಮ ಎಂದರು.

ನಿಕಟ ಪೂರ್ವ ಅಧ್ಯಕ್ಷ ವಕೀಲ ಮಂಜೇಗೌಡ ಮಾತನಾಡಿ, ಹುತಾತ್ಮ ಯೋಧರ ಗೌರವಾರ್ಥ ಕಾರ್ಗಿಲ್ ವಿಜಯ್ ದಿವಸ್ ಅನ್ನು ರಾಷ್ಟ್ರೀಯ ಹಬ್ಬವಾಗಿ ಘೋಷಿಸಬೇಕು. ತಾಲ್ಲೂಕು ಆಡಳಿತ ಮತ್ತು ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಿಸಿ ಹುತಾತ್ಮಯೋಧರಿಗೆ ಗೌರವ ಸಲ್ಲಿಸುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ಕರವೇ ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ ಮಾತನಾಡಿ, ಕಾರ್ಗಿಲ್ ವಿಜಯ್ ದಿವಸ್ ಭಾರತೀಯರಿಗೆ ಹೆಮ್ಮೆಯ ವಿಷಯವಾದರೂ ಅಂದು ಯುದ್ಧದಲ್ಲಿ ವೀರ ಮರಣ ಹೊಂದಿ, ಹುತಾತ್ಮರಾದ ವೀರ ಯೋಧರ ಸ್ಮರಣೆ, ಗೌರವ ಸಮರ್ಪಣೆ ಜತೆಗೆ ಅವರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಿ ಅವರ ಕುಟುಂಬ ಸದಸ್ಯರಿಗೆ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶ ನೀಡುವುದು ನಮ್ಮ ಜವಾಬ್ದಾರಿ ಹಾಗೂ ಕರ್ತವ್ಯ ಎಂದರು.

ಈ ಸಂದರ್ಭದಲ್ಲಿ ಲಯನ್ ಸೇವಾ ಸಂಸ್ಥೆಯ ಕಾರ್ಯದರ್ಶಿ ರಾಮಚಂದ್ರ (ಗಿರೀಶ್ ), ಖಜಾಂಚಿ ಪ್ರಭು ಬೈರಾಪುರ, ವಲಯ ಸಂಯೋಜಕ ಹರೀಶ್ ಕೆ ಹೊಸಕೋಟೆ , ಮಾಜಿ ಅಧ್ಯಕ್ಷರಾದ, ರೇಣುಕಾ ಪ್ರಸಾದ್, ಪ್ರವೀಣ್ ಕುಮಾರ್, ಆರ್. ಎಸ್ ನಟರಾಜ್, ಜಗದೀಶ್, ನವೀನ್ ದಡಹಳ್ಳಿ, ಸದಸ್ಯರಾದಪ್ರವೀಣ್, ನಾಗರಾಜ್ ಹೆದುರ್ಗ, ಕಾಡ್ಲೂರು ಮೋಹನ್ ಸೇರಿದಂತೆ ಮುಂತಾದವರು ಹಾಜರದ್ದರು.

ಪೋಟೋ ಕ್ಯಾಪ್ಶನ್: ಆಲೂರು ಲಯನ್ ಸೇವಾ ಸಂಸ್ಥೆ ವತಿಯಿಂದ ಕಾರ್ಗಿಲ್ ವಿಜಯೋತ್ಸವ ಆಚರಣೆ ಮಾಡಲಾಯಿತು. ಅಧ್ಯಕ್ಷ ಆನಂದ್ ಮಾಜಿ ಅಧ್ಯಕ್ಷರಾದ ರೇಣುಕ ಪ್ರಸಾದ್, ರಘು ಪಾಳ್ಯ, ನವೀನ್ ದಡದಲ್ಲಿ, ಪ್ರವೀಣ್ ಕುಮಾರ್, ಮುಂತಾದವು ಹಾಜರಿದ್ದರು.

Continue Reading

Hassan

ಸಕಲೇಶಪುರದಲ್ಲಿ ಕಾಡಾನೆ ದಾಳಿ: ರೈತನಿಗೆ ಗಂಭೀರ ಗಾಯ, ಜಿಲ್ಲಾ ಆಸ್ಪತ್ರೆಗೆ ರವಾನೆ

Published

on

ಸಕಲೇಶಪುರ: ತಾಲೂಕಿನ ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುದುರಂಗಿ ಸಮೀಪದ ಶಾಂತಪುರ ಗ್ರಾಮದಲ್ಲಿ ಸೋಮವಾರ ಸಂಜೆ ಒಂಟಿ ಕಾಡಾನೆ ದಾಳಿ ನಡೆಸಿದ ಪರಿಣಾಮ 54 ವರ್ಷದ ರೈತ ಮಲ್ಲೇಶ್ ಗಂಭೀರವಾಗಿ ಗಾಯಗೊಂಡಿದ್ದಾರೆ.ಮಲ್ಲೇಶ್ ಅವರು ತಮ್ಮ ಗದ್ದೆಯಿಂದ ದನಗಳನ್ನು ಮನೆಗೆ ಕರೆದುಕೊಂಡು ಬರುತ್ತಿದ್ದ ವೇಳೆ ಏಕಾಏಕಿ ಎದುರಾದ ಒಂಟಿ ಕಾಡಾನೆ ದಾಳಿ ನಡೆಸಿದೆ. ದಾಳಿಯ ವೇಳೆ ಕಾಡಾನೆ ಅವರ ಬಲಗಾಲಿಗೆ ತುಳಿದ ಪರಿಣಾಮ ಗಂಭೀರ ಗಾಯಗಳಾಗಿದ್ದು, ಬಲಗಾಲಿನ ಮೂಳೆ ಮುರಿದಿದೆ.

ಸ್ಥಳೀಯರು ತಕ್ಷಣ ಧಾವಿಸಿ ಗಾಯಾಳುವನ್ನು ರಕ್ಷಿಸಿ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು. ಬಳಿಕ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆಯ ಆರ್‌ಎಫ್‌ಒ ಹೇಮಂತ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಘಟನೆಯ ಮಾಹಿತಿ ಸಂಗ್ರಹಿಸಿದರು.

ಇತ್ತೀಚಿನ ದಿನಗಳಲ್ಲಿ ಕುದುರಂಗಿ–ಶಾಂತಪುರ ಭಾಗದಲ್ಲಿ ಒಂಟಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ರೈತರು ಹಾಗೂ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಕೃಷಿ ಚಟುವಟಿಕೆಗಳಿಗೆ ತೆರಳುವ ಜನರು ಜೀವಭಯದಲ್ಲೇ ಓಡಾಡುವಂತಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ಕಾಡಾನೆಗಳ ನಿರಂತರ ಹಾವಳಿಯನ್ನು ತಡೆಗಟ್ಟಲು ಶಾಶ್ವತ ಕ್ರಮ ಕೈಗೊಳ್ಳಬೇಕು ಹಾಗೂ ಗ್ರಾಮಸ್ಥರ ಸುರಕ್ಷತೆಗೆ ಅರಣ್ಯ ಇಲಾಖೆ ತುರ್ತು ಕಾರ್ಯಯೋಜನೆ ರೂಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Continue Reading

Hassan

ಮನೆಯಲ್ಲೇ ಕೈಚಳಕ: ಪ್ರಿಯಕರನಿಗೆ ಚಿನ್ನ-ನಗದು ಕೊಟ್ಟ ಸೊಸೆ ಬಂಧನ

Published

on

ಹಾಸನ, ಜು.27: ಹಾಸನ ತಾಲೂಕಿನ ದೊಡ್ಡಹೊನ್ನೇನಹಳ್ಳಿ ಗ್ರಾಮದಲ್ಲಿ ಮನೆಗೆ ನುಗ್ಗಿ ₹56.16 ಲಕ್ಷ ಮೌಲ್ಯದ 441.5 ಗ್ರಾಂ ಚಿನ್ನಾಭರಣ ಹಾಗೂ ₹13.40 ಲಕ್ಷ ನಗದು ಕಳವು ನಡೆದ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಪ್ರಕರಣವನ್ನು ಕಳ್ಳತನ ನಡೆದ ಕೆಲವೇ ಗಂಟೆಗಳಲ್ಲಿ ಬೇಧಿಸಿದ ಹಾಸನ ಗ್ರಾಮಾಂತರ ಪೊಲೀಸರು, ಮನೆಯ ಸೊಸೆ ಹಾಗೂ ಆಕೆಯ ಪ್ರಿಯಕರನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಶನಿವಾರ ಬೆಳಿಗ್ಗೆ ಕೇಶವೇಗೌಡ, ಅವರ ಪತ್ನಿ ಜಯಲಕ್ಷ್ಮೀ ಹಾಗೂ ಪುತ್ರ ವೇಣುಗೋಪಾಲ್ ಜಮೀನಿನ ಕೆಲಸಕ್ಕೆ ತೆರಳಿದ್ದರು. ಮಗನನ್ನು ಶಾಲಾ ಬಸ್‌ಗೆ ಹತ್ತಿಸಿದ ಬಳಿಕ ಮನೆಯಲ್ಲಿದ್ದ ಸೊಸೆ ಅಮೃತಾ, ತನ್ನ ಪರಿಚಿತನಾದ ಪರಮೇಶ್ @ ಚೇತನ್‌ನನ್ನು ಮನೆಗೆ ಕರೆಸಿಕೊಂಡಿದ್ದಾಳೆ ಎನ್ನಲಾಗಿದೆ.

ಬೀರುವಿನಲ್ಲಿದ್ದ 441.5 ಗ್ರಾಂ ಚಿನ್ನಾಭರಣ ಹಾಗೂ ₹13.40 ಲಕ್ಷ ನಗದನ್ನು ತೆಗೆದು ಪ್ರಿಯಕರನಿಗೆ ನೀಡಿದ ಬಳಿಕ, ಮನೆಯ ಮುಂಭಾಗಿಲಿಗೆ ಬೀಗ ಹಾಕದೇ ಕೊಟ್ಟಿಗೆಗೆ ಮಾತ್ರ ಬೀಗ ಹಾಕಿ ಅಮೃತಾ ಜಮೀನಿನತ್ತ ತೆರಳಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಸಂಜೆ ಮನೆಗೆ ಮರಳಿದ ಕೇಶವೇಗೌಡ ಅವರಿಗೆ ಬೀರುವಿನಲ್ಲಿದ್ದ ಚಿನ್ನಾಭರಣ ಮತ್ತು ನಗದು ಕಾಣೆಯಾಗಿರುವುದು ಗೊತ್ತಾಗಿದೆ. ಈ ವೇಳೆ ಅಮೃತಾ ಕೂಡ ಕಳ್ಳತನ ನಡೆದಿದೆ ಎಂದು ನಾಟಕವಾಡಿದ್ದಾಳೆ ಎನ್ನಲಾಗಿದೆ.

ಪೊಲೀಸರ ತನಿಖೆಯಲ್ಲಿ ಪ್ರಕರಣದ ಸತ್ಯಾಂಶ ಬೆಳಕಿಗೆ ಬಂದಿದ್ದು, ಅಮೃತಾ ಹಾಗೂ ಹಿರೀಹಳ್ಳಿ ಗ್ರಾಮದ ಪರಮೇಶ್ @ ಚೇತನ್ ಹಲವು ವರ್ಷಗಳಿಂದ ಪರಸ್ಪರ ಪರಿಚಯ ಹೊಂದಿದ್ದರು ಎಂದು ತಿಳಿದುಬಂದಿದೆ.

ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಹಾಸನ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Continue Reading

Trending

error: Content is protected !!