Kodagu
ಮರಣೋತ್ತರ ಪರೀಕ್ಷೆಗೆ ಲಂಚ ಪಡೆದ ವೈದ್ಯ ಅಮಾನತು
ವೀರಾಜಪೇಟೆ : ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಸಲು ಹಣ ಪಡೆದ ಆರೋಪ ಎದುರಿಸುತ್ತಿರುವ ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ತಜ್ಞ ವೈದ್ಯ ಡಾ. ಶ್ರೀನಿವಾಸ್ ಮೂರ್ತಿ ಅವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಯ ಆಯುಕ್ತ ಡಿ. ರಂದೀಪ್ ಅಮಾನತು ಮಾಡಿ, ಆದೇಶ ಹೊರಡಿಸಿದ್ದಾರೆ.
ಆರೋಪ ಎದುರಿಸುತ್ತಿರುವ ವೈದ್ಯರು ಹಣ ಪಡೆದಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡಿದ್ದು, ಸದರಿ ವರದಿಯನ್ನು ಪರಿಶೀಲಿಸಲಾಗಿ, ವೈದ್ಯರು ಸಂಬಂಧಿಕರಿಂದ ಹಣ ಪಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿರುತ್ತದೆ ಎಂದು ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಆಯುಕ್ತರಿಗೆ ವರದಿಯನ್ನು ಸಲ್ಲಿಸಿ, ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಿದ್ದ ಹಿನ್ನಲೆ ಆಯುಕ್ತರು, ಈ ಆದೇಶ ಹೊರಡಿಸಿದ್ದಾರೆ.
ಭ್ರಷ್ಟಾಚಾರ ಹಾಗೂ ದುರ್ನಡತೆಯ ಆರೋಪದ ಮೇರೆಗೆ ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಿರುದಾಗಿ ಆಯುಕ್ತರು ಆದೇಶದಲ್ಲಿ ಹೇಳಿದ್ದು, ವೈದ್ಯರು ಶವದ ಮರಣೋತ್ತರ ಪರೀಕ್ಷೆ ನಡೆಸಲು ಹಣ ಪಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿರುತ್ತದೆ. ಇವರು ಭ್ರಷ್ಟಾಚಾರದಲ್ಲಿ ತೊಡಗಿರುವುದು ಇವರ ಈ ವರ್ತನೆಯಿಂದ ಸಾರ್ವಜನಿಕರಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಇಲಾಖೆಯ ಬಗ್ಗೆ ಖುಣಾತ್ಮಕ ಅಭಿಪ್ರಾಯವುಂಟಾಗಿರುತ್ತದೆ. ಇವರು ಸರ್ಕಾರಿ ವೈದ್ಯರಿಗೆ ತಕ್ಕದಲ್ಲದ ರೀತಿಯಲ್ಲಿ ವರ್ತಿಸಿ ದುರ್ನಡತೆ ಎಸಗಿರುತ್ತಾರೆ. ಇವರ ಭ್ರಷ್ಟಾಚಾರ ಹಾಗೂ ದುರ್ನಡತೆಯನ್ನು ಗಂಭೀರವಾಗಿ ಪರಿಗಣಿಸಿ, ಇವರನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ವಿಚಾರಣೆ ಬಾಕಿಯಿರಿಸಿ ಸೇವೆಯಿಂದ ಅಮಾನತ್ತುಗೊಳಸಲು ತೀರ್ಮಾಸಿದೆ.
ವೈದ್ಯರ ವಿರುದ್ಧದ ಭ್ರಷ್ಟಾಚಾರ ಹಾಗೂ ದುರ್ನಡತೆ ಆರೋಪದ ಬಗ್ಗೆ ಶಿಸ್ತುಕ್ರಮ ಬಾಕಿಯಿರಿಸಿ, ಈ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಿರುತ್ತೇನೆ, ಸದರಿ ವೈದ್ಯರು ಅಮಾನತ್ತಿನ ಅವಧಿಯಲ್ಲಿ ಜೀವನಾಂಶ ಭತ್ಯೆಯನ್ನು ಪಡೆಯುವ ಸಲುವಾಗಿ ಇವರನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಖಾಲಿ ಇರುವ ಕೀಲು ಮತ್ತು ಮೂಳೆ ತಜ್ಞರ ಹುದ್ದೆಗೆ ಸ್ಥಳಾಂತರಿಸಲಾಗಿದೆ. ಸದರಿ ವೈದ್ಯರು ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿಯನ್ನು ಪಡೆಯದೆ ಕೇಂದ್ರ ಸ್ಥಾನವನ್ನು ಬಿಡತಕ್ಕದಲ್ಲವೆಂದು ಆಯುಕ್ತರು ಆದೇಶಿಸಿದ್ದಾರೆ.
Kodagu
ಡಿ.11ಕ್ಕೆ ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ ಲೋಕಾರ್ಪಣೆ
ಪೊನ್ನಂಪೇಟೆ: ಕ್ರೀಡಾ ಚಟುವಟಿಕೆಗಳ ಆಯೋಜನೆ ಮತ್ತು ಕ್ರೀಡಾ ಪ್ರತಿಭೆಗಳ ಉತ್ತೇಜನಕ್ಕೆ ಮಾತ್ರ ಸೀಮಿತಪಟ್ಟು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ (ಕೆ.ಎಂ.ಎಸ್.ಎ.) ಇದೇ ತಿಂಗಳ 11ರಂದು ಗುರುವಾರ ಉದ್ಘಾಟನೆಗೊಳ್ಳಲಿದೆ ಎಂದು ಅಕಾಡೆಮಿ ಅಧ್ಯಕ್ಷ ಆಲೀರ ರಶೀದ್ ತಿಳಿಸಿದ್ದಾರೆ.
ಮಡಿಕೇರಿ ತಾಲೂಕಿನ ಕಕ್ಕಬ್ಬೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಲೆಯೊಂದಕ್ಕೆ ವಿವಿಧ ಕ್ರೀಡಾ ಪರಿಕರಗಳನ್ನು ವಿತರಿಸುವ ಮೂಲಕ ಕೆ.ಎಂ.ಎಸ್.ಎ.ಯನ್ನು ವಿದ್ಯುಕ್ತವಾಗಿ ಲೋಕಾರ್ಪಣೆಗೊಳಿಸಲಾಗುವುದು ಎಂದರು.

ಈ ಕುರಿತು ವಿರಾಜಪೇಟೆಯಲ್ಲಿ ನಡೆದ ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿಯ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಅಕಾಡೆಮಿಯನ್ನು ಮಾದರಿ ಕ್ರೀಡಾ ಸಂಘಟನೆಯಾಗಿ ಮುನ್ನೆಡೆಸುವ ಉದ್ದೇಶದಿಂದಾಗಿ ಇದನ್ನು ಅರ್ಥಪೂರ್ಣವಾಗಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಕೆ.ಎಂ.ಎಸ್.ಎ. ಪೂರ್ಣರೂಪದ ಕ್ರೀಡಾ ಸಂಸ್ಥೆಯಾಗಿರುವುದರಿಂದ ಇದನ್ನು ಸಾಮಾನ್ಯ ರೀತಿಯಲ್ಲಿ ಉದ್ಘಾಟಿಸುವ ಬದಲು ಬೇರೆ ಬೇರೆ ಕಾರಣಗಳಿಂದ ಕ್ರೀಡಾ ಪರಿಕರಗಳ ಕೊರತೆ ಎದುರಿಸುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಪರಿಕರಗಳನ್ನು ವಿತರಿಸುವುದರ ಮೂಲಕ ಅಕಾಡೆಮಿಯನ್ನು ಅರ್ಥಪೂರ್ಣವಾಗಿ ಉದ್ಘಾಟಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ರಶೀದ್ ಅವರು ಮಾಹಿತಿ ನೀಡಿದರು.

ಸಭೆಯಲ್ಲಿದ್ದ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಮೀತಲತಂಡ ಇಸ್ಮಾಯಿಲ್ ಮಾತನಾಡಿ, ಅಂದು ಬೆಳಿಗ್ಗೆ 10:00 ಗಂಟೆಗೆ ಅಕಾಡೆಮಿ ಅಧ್ಯಕ್ಷ ಆಲೀರ ರಶೀದ್ ಅವರ ಅಧ್ಯಕ್ಷತೆಯಲ್ಲಿ ಜರಗಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಕ್ಕಬ್ಬೆ ಗ್ರಾ. ಪಂ. ಅಧ್ಯಕ್ಷರಾದ ಶಿಲ್ಪಾ ಲೋಕೇಶ್, ಸದಸ್ಯರಾದ ಕಲಿಯಂಡ ಸಂಪನ್ ಅಯ್ಯಪ್ಪ, ಹೊದ್ದೂರು ಗ್ರಾ. ಪಂ. ಅಧ್ಯಕ್ಷರಾದ ಹೆಚ್. ಎ. ಹಂಸ, ಜಿಲ್ಲಾ ಕೆ. ಡಿ. ಪಿ. ಸದಸ್ಯರಾದ ಬಾಚಮಂಡ ಲವ ಚಿಣ್ಣಪ್ಪ, ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಸಭೆಯಲ್ಲಿ ಅಕಾಡೆಮಿಯ ಉಪಾಧ್ಯಕ್ಷರಾದ ಕೇಂಗೋಟಂಡ ಎಸ್. ಸೂಫಿ, ಕುಂಡಂಡ ಎ. ರಜ್ಹಾಕ್, ಕ್ರೀಡಾ ಸಂಚಾಲಕರಾದ ಕತ್ತಣಿರ ಹೆಚ್. ಅಬ್ದುಲ್ ರಹಿಮಾನ್ (ಅಂದಾಯಿ), ಜಂಟಿ ಕಾರ್ಯದರ್ಶಿ ಕಣ್ಣಪ್ಪಣೆ ವೈ. ಅಶ್ರಫ್, ನಿರ್ದೇಶಕರಾದ ಆಲೀರ ಎ. ಹುಸೈನ್, ಪುಂಜೆರ ಹೆಚ್. ಅಬ್ದುಲ್ಲ, ಕುಪ್ಪೋಡಂಡ ಮಹಮ್ಮದ್, ಮಂದಮಾಡ ರಫೀಕ್ (ಮುನ್ನ) ಅಕ್ಕಳತಂಡ ಎ. ಶಫೀಕ್ ಮತ್ತು ಪರವಂಡ ಎ. ಸಿರಾಜುದ್ದೀನ್ ಉಪಸ್ಥಿತರಿದ್ದರು.
Kodagu
ತಪೊಕ್ಷೇತ್ರ ಮನೆಹಳ್ಳಿ ಮಠದಲ್ಲಿ ಸಂಭ್ರಮದ ಲಕ್ಷದೀಪೋತ್ಸವ
ಸೋಮವಾರಪೇಟೆ: ತಾಲೂಕಿನ ಆಲೂರುಸಿದ್ದಾಪುರ ಸಮೀಪದ ತಪೋಕ್ಷೇತ್ರ ಮನೆಹಳ್ಳಿ ಮಠದಲ್ಲಿ ಸಂಭ್ರಮದ ದೀಪೋತ್ಸವ ಹಾಗೂ ಶ್ರದ್ಧಾ ಭಕ್ತಿಯಿಂದ ಶ್ರೀ ಗುರುಸಿದ್ಧವೀರೇಶ್ವರರ ಉತ್ಸವ ನಡೆಯಿತು.
ಅಕ್ಕಪಕ್ಕದ ಗ್ರಾಮಗಳು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸಹಸ್ರಾರು ಭಕ್ತಾದಿಗಳು ದೀಪೋತ್ಸವವನ್ನು ಕಣ್ತುಂಬಿಕೊಂಡರು.
ಬೆಳಗಿನಿಂದಲೇ ಕ್ಷೇತ್ರದ ದೇವರಿಗೆ ವಿಶೇಷ ಪೂಜೆ,ಅರ್ಚನೆ ನಡೆಯಿತು. ಮಹಿಳೆಯರಾದಿಯಾಗಿ ಹಲವು ಭಕ್ತರು ಮಠದ ಆವರಣವನ್ನು ತಳಿರು ತೋರಣಗಳಿಂದ ಹಾಗೂ ವೈವಿಧ್ಯಮಯ ರಂಗೋಲಿಬಿಡಿಸಿ ಅಲಂಕರಿಸಿದ್ದರು.

ಸಂಜೆ ನಡೆದ ಧಾರ್ಮಿಕ ಸಮಾರಂಭಲ್ಲಿ ಶಿಕ್ಣಣ ತಜ್ಞ ದಾವಣಗೆರೆಯ ಸಾಗರ್ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಮಕ್ಕಳು ಅನ್ಯ ಮಾರ್ಗ ಹಿಡಿದಿರುವುದು ಆತಂಕಕಾರಿ ವಿಚಾರವಾಗಿದೆ. ಆನ್ ಲೈನ್ ಗೇಮ್ ಗಳಿಗೆ ಬಲಿಯಾಗುತ್ತಿದ್ದಾರೆ ಎಂತಹ ಪರಿಸ್ಥಿತಿ ಬಂದಿದೆ ಎಂದು ಹೇಳಿದರು.
ನಮ್ಮ ಶಿಕ್ಷಣ ವ್ಯವಸ್ಥೆ ಬದಲಾಗಬೇಕಿದೆ ಇಂದು ಇರುವುದು ಕೇವಲ ಪದವಿಗಾಗಿ ಮಾತ್ರ ಆದರೆ ನೈತಿಕ ಶಿಕ್ಷಣ ಅವಶ್ಯಕತೆ ಇದೆ ಎಂದ ಅವರು ಬಸವಣ್ಣ ನವರ ಅನುಭವ ಮಂಟಪದ ರೀತಿಯ ಶಿಕ್ಷಣ ವ್ಯವಸ್ಥೆ ಬರಬೇಕು,ವಿದ್ಯಾರ್ಥಿಗಳು ಪ್ರಶ್ನಿಸುವುದನ್ನು ಕಲಿಯಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮನೆಹಳ್ಳಿ ಮಠಾಧ್ಯಕ್ಷ ಶ್ರೀ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ, ಶ್ರೀಕ್ಷೇತ್ರ ಮನೆಹಳ್ಳಿ ಮಠವು ಈ ಹಿಂದೆ ಅಜ್ಞಾತ ಸ್ಥಳವಾಗಿದ್ದು, ವರ್ಷದಿಂದ ವರ್ಷಕ್ಕೆ ಧಾರ್ಮಿಕತೆಯ ಶ್ರದ್ಧಾಕೇಂದ್ರವಾಗಿ ರೂಪುಗೊಳ್ಳುತ್ತಿದೆ. ಕಾಡುಗಳಿಂದ ಕೂಡಿದ್ದ ಈ ಪ್ರದೇಶದಲ್ಲಿ ಶ್ರೀ ಗುರು ಸಿದ್ಧವೀರೇಶ್ವರ ಸ್ವಾಮಿಯವರ ಕೃಪಾ ವಿಶೇಷತೆಯಿಂದ ಗುಡಿ ಗೋಪುರಗಳು, ಪೂಜಾ ಕೈಂಕರ್ಯಗಳು, ದಾಸೋಹ ಕಾಯಕಗಳಿಂದ ಸಂಸ್ಕಾರಯುತ ಮೌಲ್ಯಗಳಿಂದ ತುಂಬಿರುವ ತಪೋಕ್ಷೇತ್ರವಾಗಿ ಬೆಳೆದುಬರುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಹಾಸನ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾತನಾಡಿ ಕೊಡಗು ಮಠಗಳ ನಾಡು ಎಂದೇ ಪರಿಗಣಿಸಲ್ಪಡುವ ಜಿಲ್ಲೆಯಾಗಿದೆ. ಉತ್ತರ ಕೊಡಗಿನಲ್ಲಿ ಶ್ರೀ ಕ್ಷೇತ್ರ ತಪೋವನ ಮನೆಹಳ್ಳಿ ಮಠವು ಧಾರ್ಮಿಕ, ಸಾಮಾಜಿಕ ಸೇವಾ ಕಾರ್ಯಗಳಿಂದ ಭಕ್ತರ ಪಾಲಿಗೆ ಪುಣ್ಯಕ್ಷೇತ್ರವಾಗಿ ರೂಪುಗೊಂಡಿರುವುದು ಹೆಮ್ಮೆಯ ಸಂಗತಿ ಎಂದರು.
ಈ ಸಂದರ್ಭ ರಾಜ್ಯ ಉಚ್ಛ ನ್ಯಾಯಾಲಯದ ಹಿರಿಯ ವಕೀಲ ಚಂದ್ರಮೌಳಿ ಕ್ಷೇತ್ರದ 2026ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಅರಮೇರಿ ಕಳಂಚೇರಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಕಲ್ಲುಮಠದ ಶ್ರೀ.ಮಹಾಂತ ಸ್ವಾಮೀಜಿ,ಮುಳ್ಳೂರು ಮಠದ ಶ್ರೀ.ಸ್ವತಂತ್ರ ಬಸವಲಿಂಗ ಸ್ವಾಮೀಜಿ, ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಚಿಲುಮೆಮಠದ ಜಯದೇವ ಸ್ವಾಮೀಜಿ,ತೊರೆನೂರು ಮಠದ ಮಲ್ಲೇಶ ಸ್ವಾಮೀಜಿ, ಶಿಡಿಗಳಲೆ ಮಠದ ಶ್ರೀ.ಇಮ್ಮಡಿ ಶಿವಲಿಂಗ ಸ್ವಾಮೀಜಿ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು. ತಪೋವನೇಶ್ವರಿ ಮಹಿಳಾತಂಡದಿಂದ ಪ್ರಾರ್ಥನೆ ನಡೆಯಿತು.
Kodagu
ಡಿ. 21ರಿಂದ ವಿ.ಬಾಡಗದಲ್ಲಿ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ: ಹೈಪ್ಲೈಯರ್ಸ್ ತಂಡದ ವತಿಯಿಂದ ಪಂದ್ಯಾವಳಿ ಆಯೋಜನೆ
ಪೊನ್ನಂಪೇಟೆ : ಬಿಟ್ಟಂಗಾಲ ಸಮೀಪದ ವಿ. ಬಾಡಗದ ಹೈ ಪ್ಲೈಯರ್ಸ್ ತಂಡದ ವತಿಯಿಂದ ವಿಯೋಮನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅವರ ಸಹ ಪ್ರಾಯೋಜಕತ್ವದಲ್ಲಿ 4ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಹೈಪ್ಲೈಯರ್ಸ್ ಕಪ್-2025 ಅನ್ನು ಇದೇ ಡಿ.21ರಿಂದ 25ರವರೆಗೆ ಆಯೋಜಿಸಲಾಗಿದೆ. ಬಿಟ್ಟಂಗಾಲ, ಬಿ.ಶೆಟ್ಟಿಗೇರಿ ಮತ್ತು ಹಾತೂರು ಗ್ರಾ. ಪಂ. ವ್ಯಾಪ್ತಿಯಲ್ಲಿ ಐನ್ ಮನೆ ಹೊಂದಿರುವ ಕೊಡವ ಕುಟುಂಬಗಳ ತಂಡಗಳಿಗಾಗಿ ಈ ಹಾಕಿ ಪಂದ್ಯಾವಳಿ ಏರ್ಪಡಿಸಲಾಗಿದೆ ಎಂದು ವಿ. ಬಾಡಗ ಹೈಪ್ಲೈಯರ್ಸ್ ತಂಡದ ಅಧ್ಯಕ್ಷರಾದ ಅಮ್ಮಣಿಚಂಡ ರಂಜು ಪೂಣಚ್ಚ ಅವರು ತಿಳಿಸಿದ್ದಾರೆ.
ಈ ಕುರಿತು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕೌಟುಂಬಿಕ ಹಾಕಿ ಪಂದ್ಯಾವಳಿಯು ವಿ. ಬಾಡಗ ಗ್ರಾಮದಲ್ಲಿ 4ನೇ ಭಾರಿಗೆ ಜರುಗುತ್ತಿದೆ. ವಿ.ಬಾಡಗದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಒಟ್ಟು 5 ದಿನಗಳ ಕಾಲ ನಡೆಯುವ ಈ ಹಾಕಿ ಪಂದ್ಯಾವಳಿಗಾಗಿ ಈಗಾಗಲೇ ಸಿದ್ಧತೆಗಳು ಆರಂಭಗೊಂಡಿರುವುದಾಗಿ ರಂಜು ಪೂಣಚ್ಚ ಮಾಹಿತಿ ನೀಡಿದರು.

ಕುಟುಂಬ ತಂಡಗಳಲ್ಲಿ ಗರಿಷ್ಠ 4 ಅತಿಥಿ ಆಟಗಾರರು ಭಾಗವಹಿಸಬಹುದಾಗಿದೆ. ಆದರೆ ಅತಿಥಿ ಆಟಗಾರರು ಕಡ್ಡಾಯವಾಗಿ ಕೊಡವ ಆಟಗಾರರಾಗಿರಬೇಕು. ವಿಜೇತ ತಂಡಗಳಿಗೆ ಆಕರ್ಷಕ ನಗದು ಬಹುಮಾನ ಮತ್ತು ಕೊಡವ ಸಾಂಪ್ರದಾಯಿಕ ಪಾರಿತೋಷಕಗಳನ್ನು ನೀಡಿ ಗೌರವಿಸಲಾಗುವುದು ಎಂದು ತಿಳಿಸಿರುವ ರಂಜು ಪೂಣಚ್ಚ, ಕ್ರೀಡಾ ಪ್ರೇಮಿಗಳ ಆರ್ಥಿಕ ನೆರವಿನಿಂದ ಕಳೆದ ಮೂರು ವರ್ಷ ಪಂದ್ಯಾವಳಿ ಯಶಸ್ವಿಯಾಗಿ ನಡೆದಿದೆ. ಈ ಬಾರಿಯೂ ಸಂಪೂರ್ಣವಾಗಿ ದಾನಿಗಳ ನೆರವಿನಿಂದಲೇ ಪಂದ್ಯಾವಳಿ ಜರುಗಲಿದ್ದು, ಗ್ರಾಮಸ್ಥರು ಮತ್ತು ಪ್ರಾಯೋಜಕರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶಗಳಲ್ಲಿ ಹಾಕಿ ಪಂದ್ಯಾವಳಿಗೆ ಒತ್ತು ನೀಡುವ ಹಿನ್ನೆಲೆಯಲ್ಲಿ ಈ ಹಾಕಿ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದೆ. ಈ ಕಾರಣಕ್ಕಾಗಿಯೇ ಹೈ ಫ್ಲೈಯರ್ಸ್ ಎಂಬ ಕ್ರೀಡಾ ಸಂಸ್ಥೆಯನ್ನು ಕಳೆದ 3 ವರ್ಷಗಳ ಹಿಂದೆ ಹುಟ್ಟು ಹಾಕಲಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಹಾಕಿ ಪಂದ್ಯಾವಳಿಯನ್ನು ನಿರಂತರವಾಗಿ ಆಯೋಜಿಸುವುದರಿಂದ ಹಾಕಿ ಕ್ರೀಡೆಗೆ ಮತ್ತಷ್ಟು ಉತ್ತೇಜನ ದೊರೆತಂತಾಗುತ್ತದೆ. ಅಲ್ಲದೆ, ಗ್ರಾಮೀಣ ಮಟ್ಟದ ಕ್ರೀಡಾಕೂಟಗಳಿಂದ ಸಾಕಷ್ಟು ಹೊಸ ಪ್ರತಿಭೆಗಳಿಗೆ ಅವಕಾಶ ದೊರೆತಂತಾಗುತ್ತದೆ ಎಂದು ರಂಜು ಪೂಣಚ್ಚ ವಿವರಿಸಿದರು.
ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಕ್ರೀಡಾ ಕಾರ್ಯದರ್ಶಿ ಕುಪ್ಪಂಡ ದಿಲನ್ ಬೋಪಣ್ಣ ಮಾತನಾಡಿ, ಹಾಕಿ ಕೂರ್ಗ್ ಸಂಸ್ಥೆಯ ಅಧೀನದಲ್ಲಿ ನಡೆಯಲಿರುವ ಈ ಹಾಕಿ ಪಂದ್ಯಾವಳಿಯು ಹಾಕಿ ಕರ್ನಾಟಕ ಸಂಸ್ಥೆಯ ನಿಯಮಾವಳಿಗೆ ಬದ್ಧವಾಗಿ ನಾಕ್ ಔಟ್ ಮಾದರಿಯಲ್ಲಿ ನಡೆಯಲಿದೆ. ಕಳೆದ ಬಾರಿ ಆಯೋಜಿಸಿದ್ದ ಈ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಒಟ್ಟು 18 ಕುಟುಂಬ ತಂಡಗಳು ಭಾಗವಹಿಸಿದ್ದವು. ಈ ಬಾರಿ 20ಕ್ಕೂ ಹೆಚ್ಚಿನ ತಂಡಗಳನ್ನು ನಿರೀಕ್ಷಿಸಲಾಗಿದೆ. ಈಗಾಗಲೇ 12 ಕುಟುಂಬ ತಂಡಗಳು ಹೆಸರು ನೋಂದಾಯಿಸಿಕೊಂಡಿವೆ. ಆಸಕ್ತ ಕುಟುಂಬ ತಂಡಗಳು ಪಂದ್ಯಾವಳಿಗೆ ಹೆಸರು ನೋಂದಾಯಿಸಲು ಇದೇ ಡಿಸೆಂಬರ್ 15ರಂದು ಕೊನೆಯ ದಿನವಾಗಿರುತ್ತದೆ. ಡಿ. 16ರಂದು ಪಂದ್ಯಾವಳಿಯ ಟೈಸ್ ಅನ್ನು ಅಂತಿಮಗೊಳಿಸಲಾಗುವುದು. ಪಂದ್ಯಾವಳಿಯ ಕುರಿತ ಹೆಚ್ಚಿನ ಮಾಹಿತಿಗಾಗಿ 9481883738 ಅನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಸಂಸ್ಥೆಯ ಸಲಹಾ ಸಮಿತಿ ಅಧ್ಯಕ್ಷರಾದ ಮಳವಂಡ ಗಿರೀಶ್ ಮುದ್ದಯ್ಯ, ಕಾರ್ಯದರ್ಶಿ ಮಚ್ಚಾರಂಡ ಪ್ರವೀಣ್ ತಿಮ್ಮಯ್ಯ, ಕೋಶಾಧಿಕಾರಿ ಚೇಮಿರ ನಂದಾ ನಂಜಪ್ಪ ಉಪಸ್ಥಿತರಿದ್ದರು.
-
Mandya22 hours agoಡಿ.17ಕ್ಕೆ ಮಳವಳ್ಳಿಗೆ ರಾಷ್ಟ್ರಪತಿ ಆಗಮನ : ಜಿಲ್ಲಾಧಿಕಾರಿಗಳಿಂದ ಸ್ಧಳ ಪರಿಶೀಲನೆ
-
Mysore21 hours agoಮೈಸೂರು ದಸರಾ: ಮಹಿಳಾ ಉದ್ಯಮಿ ಉಪಸಮಿತಿಗೆ ಎಸ್. ರಂಗನಾಥ ಸಂಚಾಲಕರಾಗಿ ನೇಮಕ
-
Mysore5 hours agoಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ಗೆ ಏಕವಚನ ಬಳಕೆ: ಸಿಎಂ ವಿರುದ್ಧ ಹೇಮಾ ನಂದೀಶ್ ಅಸಮಾಧಾನ
-
Mysore2 hours agoಡೆವಿಲ್ ಚಿತ್ರದ ಯಶಸ್ಸಿಗಾಗಿ ಕುಂಬಳಕಾಯಿ ದೃಷ್ಟಿ ತೆಗೆದು ಪ್ರಾರ್ಥಿಸಿದ ಅಭಿಮಾನಿಗಳು
-
Hassan53 minutes agoಸೊಪ್ಪಿನಹಳ್ಳಿಯಲ್ಲಿ ಪ. ಜಾತಿ ಕುಟುಂಬಗಳಿಂದ ರಸ್ತೆ ತಡೆ: ರಸ್ತೆ ಬಿಡಿಸಿಕೊಡಲು ಆಗ್ರಹಿಸಿ ಭೀಮ್ ಆರ್ಮಿ ತಹಸೀಲ್ದಾರ್ ಗೆ ಮನವಿ
-
Mysore3 hours agoಚಾಮುಂಡಿಬೆಟ್ಟದ ವಿಶೇಷ ದರ್ಶನ, ಸೇವೆಗಳ ಶುಲ್ಕ ಹೆಚ್ಚಳ ವಿರೋಧಿಸಿ ಪ್ರತಿಭಟನೆ
-
Hassan7 hours agoವಾಲಿಬಾಲ್ ಪಂದ್ಯಾವಳಿಯಲ್ಲಿ ಜಗ್ಗಿಬಾಯ್ಸ್ ಪ್ರಥಮ ಸ್ಥಾನ
-
Hassan20 hours agoಡಿ.21ಕ್ಕೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಬಹಿರಂಗ ಸಭೆ: ಎಸ್.ವರಲಕ್ಷ್ಮೀ
