Connect with us

Mysore

ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ಮತದಾನ ನಡೆಸಲು ಎಲ್ಲಾ ರೀತಿಯ ಕ್ರಮ : ಚುನಾವಣಾಧಿಕಾರಿ ಸುಪ್ರಿಯ ಬಣಗಾರ್ 

Published

on

ಸಾಲಿಗ್ರಾಮ :-ಏ.೨೬ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ಮತದಾನವನ್ನು ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ನಡೆಸಲು ಆಯೋಗ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಕೆ.ಆರ್.ನಗರ ವ್ಯಾಪ್ತಿಯ ಸಹಾಯಕ ಚುನಾವಣಾಧಿಕಾರಿ ಬಿ.ಸುಪ್ರಿಯಬಣಗಾರ್ ಹೇಳಿದರು.

ತಾಲೂಕು ಕಛೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಕ್ಷೇತ್ರದ ವ್ಯಾಪ್ತಿಯಲ್ಲಿ 256 ಮತಗಟ್ಟೆಗಳನ್ನು ತೆರೆಯಲಿದ್ದು ಅಲ್ಲಿ ಚುನಾವಣಾ ಸಿಬ್ಬಂದಿ ಮತ್ತು ಮತದಾನ ಮಾಡಲು ಬರುವವರಿಗೆ ಅನುಕೂಲವಾಗುವಂತೆ ಈಗಾಗಲೇ ಎಲ್ಲಾ ಮೂಲಭೂತ ಸವಲತ್ತು ಒದಗಿಸಲು ಗಮನಹರಿಸಲಾಗಿದೆ ಎಂದರು.

ಕ್ಷೇತ್ರದಲ್ಲಿ ಒಟ್ಟು 218786 ಮತದಾರರಿದ್ದು ಈ ಪೈಕಿ ಪುರುಷರು108008 ಮತ್ತು ಮಹಿಳಾ ಮತದಾರರು 110766 ಹಾಗು 12 ಮಂದಿ ಇತರೆ ಮತದಾರರು ಇದ್ದಾರೆ ಎಂದು ಮಾಹಿತಿ ನೀಡಿದ ಅವರು ಪುರುಷರಿಗಿಂತ  2758 ಮಂದಿ ಮಹಿಳಾ ಮತದಾರರು ಹೆಚ್ಚಾಗಿ ಇರುವರೆಂದು ತಿಳಿಸಿದರು.

3270ಮಂದಿ ವಿಶೇಷ ಚೇತನ ಮತದಾರರ ಪೈಕಿ  2035 ಪುರುಷರು ಮತ್ತು 1235 ಮಂದಿ ಮಹಿಳೆಯರಿದ್ದು ಅವರುಗಳು ಮತಗಟ್ಟೆಗೆ ಬಂದಾಗ ಸುಲಲಿತವಾಗಿ ಮತ ಚಲಾಯಿಸಲು ಅಗತ್ಯವಿರುವ ಅನುಕೂಲ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ನುಡಿದರು.

85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಮನೆಯಿಂದಲೇ ಮತದಾನ ಮಾಡಲು ಅವಕಾಶ ಮಾಡಿಕೊಡಬೇಕೆಂದು ಅರ್ಜಿ ಸಲ್ಲಿಸಿದ್ದು 358 ಮಂದಿಗೆ 12(ಡಿ) ನಮೂನೆ ವಿತರಣೆ ಮಾಡಲಾಗಿದೆ ಎಂದರಲ್ಲದೆ ಚುನಾವಣಾ ಸಂಬoಧಿತ ಯಾವುದೇ ದೂರುಗಳಿದ್ದರೂ ತಮಗೆ ನೇರವಾಗಿ  ನಿರ್ಭೀತಿಯಿಂದ ಮಾಹಿತಿ ನೀಡಬಹುದು ಎಂದು ಪ್ರಕಟಿಸಿದರು.

ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಮತದಾನ ಮಾಡಲು 5539 ಮಂದಿ ಯುವ ಮತದಾರರು ತಮ್ಮ ಹೆಸರನ್ನು ನೊಂದಾಯಿಸಿಕೊಡಿದ್ದು ಆ ಪೈಕಿ 3092 ಯುವಕರು ಮತ್ತು 2447 ಯುವತಿಯರು ಇದ್ದಾರೆ ಎಂದು ತಿಳಿಸಿದರು.

ತಹಶೀಲ್ದಾರ್ ಸಿ.ಎಸ್.ಪೂರ್ಣಿಮ ಮಾತನಾಡಿ ಮತಗಟ್ಟೆಗಳಲ್ಲಿ ಅಗತ್ಯ ಮೂಲಭೂತ ಸವಲತ್ತು ಕಲ್ಪಿಸುವಂತೆ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದ್ದು ಈ ಸಂಬoಧ ನಾವುಗಳು ಸಹ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಹೇಳಿದರು.

ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಹೆಚ್.ಕೆ.ಹರೀಶ್ ಮಾತನಾಡಿ ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ 25 ಸಾವಿರ ಮೌಲ್ಯದ ಮದ್ಯ, ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಸೀರೆ ಮತ್ತು ಕುಕ್ಕರ್ ವಶಪಡಿಸಿಕೊಳ್ಳಲಾಗಿದೆ ಎಂದರು.

ಸಾಲಿಗ್ರಾಮ ತಹಶೀಲ್ದಾರ್ ಎಸ್.ಎನ್.ನರಗುಂದ್, ಸಾಲಿಗ್ರಾಮ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಶಿವಕುಮಾರಿ, ಅಬಕಾರಿ ಎಸ್‌ಐ ಎನ್.ಶ್ರೀನಿವಾಸಮೂರ್ತಿ, ಶಿರಸ್ತೇದಾರ್ ಅಸ್ಲಾಂಭಾಷ, ತಾಲೂಕು ಕಛೇರಿ ಸಿಬ್ಬಂದಿಗಳಾದ ಎಂ.ಸಿ.ಸಣ್ಣಸ್ವಾಮಿ, ದೀಪಕ್, ಯಶವಂತ್, ಸಿ.ಎನ್.ಧ್ರುವಕುಮಾರ್ ಮತ್ತಿತರರು ಇದ್ದರು.

ಎಸ್ ಬಿ ಹರೀಶ್ ಸಾಲಿಗ್ರಾಮ

Continue Reading
Click to comment

Leave a Reply

Your email address will not be published. Required fields are marked *

Mysore

ಶ್ರೀ ಸಿದ್ದೇಶ್ವರ ಸರ್ವಿಸ್ ಸ್ಟೇಷನ್ ಪೆಟ್ರೋಲ್ ಬಂಕ್ ಅನ್ನು ಉದ್ಘಾಟಿಸಿದ — ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

Published

on

ನಂಜನಗೂಡು ತಾಲೂಕಿನ ದೊಡ್ಡಕವಲಂದೆ ಗ್ರಾಮದಲ್ಲಿ
ನೂತನ ಶ್ರೀ ಸಿದ್ದೇಶ್ವರ ಸರ್ವಿಸ್ ಸ್ಟೇಷನ್ ಪೆಟ್ರೋಲ್ ಬಂಕ್ ಅನ್ನು ಉದ್ಘಾಟಿಸಿದ — ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

 


ನಂಜನಗೂಡು ಚಾಮರಾಜನಗರ ಮುಖ್ಯರಸ್ತೆಯಲ್ಲಿರುವ ಬಿಜೆಪಿ ರಾಜ್ಯ ಕಾಂಪೋಸ್ಟ್ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಪಕ್ಷದ ಹಿರಿಯ ಮುಖಂಡ ಎಸ್. ಮಹದೇವಯ್ಯ ಅವರ ನೂತನ ಶ್ರೀ ಸಿದ್ದೇಶ್ವರ ಸರ್ವಿಸ್ ಸ್ಟೇಷನ್ ಪೆಟ್ರೋಲ್ ಬಂಕ್ ಅನ್ನು ಟೇಪ್ ಕತ್ತರಿಸುವ ಮೂಲಕ ಮಾಜಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದರು.

ನಂಜನಗೂಡು ಆ.09

ನಂಜನಗೂಡು ತಾಲೂಕಿನ ದೊಡ್ಡಕವಲಂದೆ ಗ್ರಾಮದಲ್ಲಿ ನೂತನ ಶ್ರೀ ಸಿದ್ದೇಶ್ವರ ಸರ್ವಿಸ್ ಸ್ಟೇಷನ್ ಪೆಟ್ರೋಲ್ ಬಂಕ್ ಅನ್ನು ಟೇಪ್ ಕತ್ತರಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರವರು ಉದ್ಘಾಟಿಸಿದರು.

ನಂಜನಗೂಡು ತಾಲೂಕು ದೊಡ್ಡ ಕೌಲಂದೆ ಗ್ರಾಮದ ಚಾಮರಾಜನಗರ ಮತ್ತು ನಂಜನಗೂಡು ಮುಖ್ಯರಸ್ತೆಯಲ್ಲಿರುವ ಬಿಜೆಪಿ ರಾಜ್ಯ ಕಾಂಪೋಸ್ಟ್ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಪಕ್ಷದ ಹಿರಿಯ ಮುಖಂಡ ಎಸ್. ಮಹದೇವಯ್ಯ ಅವರ ನೂತನ ಶ್ರೀ ಸಿದ್ದೇಶ್ವರ ಸರ್ವಿಸ್ ಸ್ಟೇಷನ್ ಪೆಟ್ರೋಲ್ ಬಂಕ್ ಅನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪೆಟ್ರೋಲ್ ಹಾಕುವ ಮೂಲಕ ಚಾಲನೆ ನೀಡಿ ಶುಭ ಕೋರಿದರು.

ನಂಜನಗೂಡು ಕ್ಷೇತ್ರದ ಶಾಸಕ ದರ್ಶನ್ ದ್ರುವ ನಾರಾಯಣ್, ನಂಜನಗೂಡು ಮಲ್ಲನ ಮೂಲೆ ಮಠದ ಚನ್ನಬಸವ ಸ್ವಾಮೀಜಿ ರವರು, ದೇವನೂರು ಮಠದ ಸ್ವಾಮೀಜಿ ಇವರುಗಳು ಭಾಗವಹಿಸಿ ಶುಭ ಕೋರಿದರು.

ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂತಿ೯, ಅಶೋಕ್, ವೀರಶೈವ ನಂಜನಗೂಡು ತಾಲೂಕು ಅಧ್ಯಕ್ಷ ಕೆಂಪಣ್ಣ, ಎಸ್.ಮಹದೇವಯ್ಯ, ಕೃಷ್ಣಪ್ಪ ಗೌಡ, ಎನ್. ಸಿ ಬಸವಣ್ಣ, ಮಧುರಾಜ್ ಸೇರಿದಂತೆ ಹಲವಾರು ಮುಖಂಡರು ಇದ್ದರು.

ನಂಜನಗೂಡು ಮಹದೇವಸ್ವಾಮಿ ಪಟೇಲ್.

Continue Reading

Mysore

ಬಿಜೆಪಿ ಜೆಡಿಎಸ್ ನವರು ನನ್ನನ್ನು ಅಲುಗಾಡಿಸಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ

Published

on

ಮೈಸೂರು: ಜೆಡಿಎಸ್ ಬಿಜೆಪಿ ಜೊತೆಗೂಡಿ ಎಷ್ಟು ಪಾದಯಾತ್ರೆ ಮಾಡಿದರು ನಾನು ಜಗ್ಗುವುದಿಲ್ಲ ಬಗ್ಗುವುದಿಲ್ಲ ಜನರ ಆಶೀರ್ವಾದ ಇರುವರೆಗೂ ನನ್ನನ್ನು ಯಾರು ಮುಟ್ಟಲು ಸಾಧ್ಯವಿಲ್ಲ. ಬಿಜೆಪಿ ಜೆಡಿಎಸ್ ನವರು ನನ್ನನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

 

ಬಿಜೆಪಿ ಜೆಡಿಎಸ್ ನ ಭ್ರಷ್ಟಾಚಾರ ಹಾಗೂ ಮೈಸೂರು ಚಲೋ ಪಾದಯಾತ್ರೆಯನ್ನು ವಿರೋಧಿಸಿ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಜನಾಂದೋಲನ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿ, ರಾಜ್ಯದಲ್ಲಿ ದೇವರಾಜು ಅರಸು ಅವರನ್ನು ಬಿಟ್ಟರೆ ಐದು ವರ್ಷಗಳ ಕಾಲ ಮುಖ್ಯಮಂತ್ರಿ ಆಗಿ ಆಡಳಿತ ನಡೆಸಿದ್ದು ಮತ್ತೆ ಎರಡನೇ ಬಾರಿ ಮುಖ್ಯಮಂತ್ರಿ ಯಾಗಿ ಆಡಳಿತ ನಡೆಸುತ್ತಿರುವುದು ಬಿಜೆಪಿ ಜೆಡಿಎಸ್ ನವರಿಗೆ ಹೊಟ್ಟೆಹುರಿ ಆಗಿದೆ. ದೇವರಾಜ ಅರಸು, ಬಂಗಾರಪ್ಪ ಅವರನ್ನೂ ಬಿಜೆಪಿ ಜೆಡಿಎಸ್ ಸಹಿಸಲಿಲ್ಲ. ಈಗ ನನ್ನನ್ನೂ ಸಹಿಸುತ್ತಿಲ್ಲ. ಜನರ ಆಶೀರ್ವಾದ ಇರುವವರೆಗೂ ನನ್ನ ಮತ್ತು ನಮ್ಮ ಸರ್ಕಾರವನ್ನು ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ಪಕ್ಷಗಳ ವಿರುದ್ಧ ಕಿಡಿಕಾರಿದರು.

ಮನುವಾದಿಗಳು, ಜಾತಿವಾದಿಗಳು ಪಾಳ್ಳೇಗಾರಿಕೆ ಪ್ರವೃತ್ತಿ ಇರುವವರು ಶೋಷಿತರು ಅಧಿಕಾರ ಮಾಡುವುದನ್ನು ಸಹಿಸುವುದಿಲ್ಲ ಅದನ್ನು ಖಂಡಿಸಿ ಎಂದು ಜನಾಂಗೋಲನ ಸಮಾವೇಶವನ್ನು ಕೈಗೊಂಡಿದ್ದೇವೆ ಎಂದರು.

ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿ ಅಧಿಕಾರ ನಡೆಸಿದರೆ ನನ್ನ ಶವದ ಮೇಲೆ ನಡೆಸಬೇಕು ಎಂದು ದೇವೇಗೌಡರು ಹೇಳಿದ್ದರು. ಮೋದಿ ಮತ್ತೆ ಪ್ರಧಾನಿ ಆದರೆ ದೇಶ ಬಿಟ್ಟು ಹೋಗುತ್ತೇನೆ ಎಂದು ಹೇಳಿದ್ದ ದೇವೇಗೌಡರೇ ಈಗ ಬಿಜೆಪಿ ಜೊತೆ ಶಾಮೀಲಾಗಿದ್ದಾರೆ. ದೇವೇಗೌಡರು ಹಾಗೂ ಅವರ ಮಗ ಕುಮಾರಸ್ವಾಮಿ ಕೊಟ್ಟ ಮಾತಿನಂತೆ ನಡೆದುಕೊಳ್ಳುವವರಲ್ಲ ಎಂದು ಟೀಕಿಸಿದರು.

ನನ್ನ ರಾಜಕೀಯ ಜೀವನ ತೆರೆದ ಪುಸ್ತಕ:
4 ದಶಕಗಳ ಕಾಲ ರಾಜ್ಯದಲ್ಲಿ ಮಂತ್ರಿಯಾಗಿ ಅನೇಕ ಖಾತೆಗಳನ್ನು ನಿರ್ವಹಿಸಿದ್ದೇನೆ. ರಾಜ್ಯದ ಜನರ ಆಶೀರ್ವಾದದಿಂದ ಎರಡು ಬಾರಿ ಉಪ ಮುಖ್ಯಮಂತ್ರಿಯಾಗಿ, ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇನೆ. 40ವರ್ಷದ ಸುದೀರ್ಘ ರಾಜಕಾರಣದಲ್ಲಿ ನನಗೆ ಯಾವುದೇ ಕಪ್ಪು ಚುಕ್ಕೆ ಇಲ್ಲ ನನ್ನ ರಾಜಕೀಯ ಜೀವನ ತೆರೆದ ಪುಸ್ತಕ ಎಂದರು.

ನನಗೆ ಇಷ್ಟೆಲ್ಲಾ ಅಧಿಕಾರ ಸಿಕ್ಕಾಗಲೂ ಆಸ್ತಿ ಮಾಡುವಂತ ವ್ಯಾಮೋಹ ನನಗೆ ಮತ್ತು ಕುಟುಂಬಕ್ಕೆ ಬಂದಿಲ್ಲ. ನನ್ನ ಪತ್ನಿ ಸಾರ್ವಜನಿಕ ಸಭೆಯಲ್ಲೂ ಕಾಣಿಸಿಲ್ಲ. ಎರಡು ಬಾರಿ ಸಿಎಂ ಆದರೂ ಪ್ರಮಾಣ ವಚನಕ್ಕೂ ಬರಲಿಲ್ಲ. ಅವರು ಭ್ರಷ್ಟಾಚಾರ ಮಾಡಲು ಸಾಧ್ಯವಿಲ್ಲ. ನಿಮ್ಮ ನಂಬಿಕೆಗೆ ದ್ರೋಹ ಎಸಗಲು ಸಾಧ್ಯವಿಲ್ಲ. ನಾನು ರಾಜಕೀಯದಲ್ಲಿ ಇರುವವರೆಗೂ ಯಾವತ್ತೂ ನಿಮ್ಮ ನಂಬಿಕೆಗೆ ದ್ರೋಹ ಬಗೆಯಲ್ಲ ಎಂದು ಹೇಳಿದರು.

ಸಮಾಜದಲ್ಲಿ ಶೋಷಿತರ, ಬಡವರ ಪ.ಜಾತಿ ಪ.ಪಂಗಡ ಅಲ್ಪಸಂಖ್ಯಾತರ ಹಾಗೂ ಸಮಸ್ತ ಜನರ ಸಾಮಾಜಿಕ, ಆರ್ಥಿಕ ಶಕ್ತಿ ತುಂಬಿಲು ಅವರ ಏಳಿಗೆಗಾಗಿ ಮಾತ್ರ ನನ್ನ ಅಧಿಕಾರ ಮೀಸಲಿಟ್ಟಿದ್ದೇನೆ ಎಂದರು.

ನಾನು ಸೊನ್ನೆಯಿಂದ ರಾಜಕೀಯ ಪ್ರಾರಂಭಿಸಿದೆ. 1983 ರಲ್ಲಿ ಮೊದಲ ಚುನಾವಣೆಗೆ ಡೆಪಾಸಿಟ್ ಮಾಡಲು ನನ್ನ ಬಳಿ ಹಣ ಇರಲಿಲ್ಲ. ನನ್ನ ಕಚೇರಿ ಕ್ಲರ್ಕ್ ಆನಂದ 250ರೂ ಡೆಪಾಸಿಟ್ ಕಟ್ಟಿದರು. ಜನರೇ ಹಣ ಕೊಟ್ಟು ಚುನಾವಣೆ ಗೆಲ್ಲಿಸಿದರು. ಆ ಚುನಾವಣೆಯಲ್ಲಿ ಜನರೇ 63 ಸಾವಿರ ರೂಪಾಯಿ ಖರ್ಚು ಮಾಡಿ ನನ್ನನ್ನು ಆರಿಸಿದರು ಎಂದು ತಮ್ಮ ಸಚ್ಚಾರಿತ್ರ್ಯದ ಚರಿತ್ರೆಯನ್ನು ಬಿಚ್ಚಿಟ್ಟರು.

ವಾಲ್ಮೀಕಿ ನಿಗಮದ ಪ್ರಕರಣದಲ್ಲೂ ಸರ್ಕಾರದ ಮೇಲೆ ಸುಳ್ಳು ಆರೋಪ ಹೊರಿಸಲು ಯತ್ನಿಸಿ ಸೋತರು. ದಾಖಲೆಗಳು ಸ್ಪಷ್ಟವಾಗಿವೆ. ಸರ್ಕಾರಕ್ಕೂ ನಿಗಮದ ಹಗರಣಕ್ಕೂ ಸಂಬಂಧ ಇಲ್ಲ ಎನ್ನುವುದು ದಾಖಲೆಗಳಲ್ಲಿದೆ. ವಾಲ್ಮೀಕಿ ನಿಗಮದ ಹಗರಣದಲ್ಲಿ 12 ಜನರನ್ನು ಅರೆಸ್ಟ್ ಮಾಡಲಾಗಿದೆ. ನಾವು ಎಸ್ಐಟಿ ರಚಿಸಿ ತನಿಖೆ ನಡೆದು ಹಣ ವಾಪಾಸ್ ವಸೂಲಾಗಿದೆ. 50 ಕೋಟಿ ರೂಪಾಯಿಯನ್ನು ಎಸ್ಐಟಿ ರಿಕವರಿ ಮಾಡಲಾಗಿದೆ. 46 ಕೋಟಿ ಹಣ ಖಾಸಗಿ ಬ್ಯಾಂಕ್ ನಲ್ಲಿದ್ದು ಸೀಜ್ ಮಾಡಿದ್ದಾರೆ. ಇಷ್ಟು ಪರಿಣಾಮಕಾರಿಯಾಗಿ ಎಸ್ಐಟಿ ಯವರು ತನಿಖೆ ನಡೆಸಿದ್ದಾರೆ. ಆದರೂ ಇಡಿ ಯವರು ಸ್ವಯಂಸ್ಫೂರ್ತಿಯಿಂದ ಕೇಸು ದಾಖಲಿಸಿಕೊಂಡು ತನಿಖೆ ನಡೆಸಿದರೂ ಸರ್ಕಾರದ ವಿರುದ್ಧ ಏನೂ ದಾಖಲೆ ಸಿಗಲಿಲ್ಲ. ಹೀಗಾಗಿ ಹಗರಣವೇ ಅಲ್ಲದ ಮೂಡಾ ಪ್ರಕರಣಕ್ಕೆ ಹಗರಣದ ಬಣ್ಣ ಕೊಟ್ಟರು ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.

ಸಮಾವೇಶದಲ್ಲಿ ಸಂಸದ ಸುನೀಲ್ ಬೋಸ್, ಸಚಿವರಾದ ಕೆ.ವೆಂಕಟೇಶ್, ಡಾ.ಜಿ.ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್, ಎಂ.ಬಿ. ಪಾಟೀಲ್, ಕೃಷ್ಣ ಭೈರೇಗೌಡ, ಭೈರತಿ ಸುರೇಶ್, ದಿನೇಶ್ ಗುಂಡೂರಾವ್, ಕೆ.ಜೆ.ಜಾರ್ಜ್, ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಶಾಸಕರು, ಮಾಜಿ ಶಾಸಕರು ಹಾಗೂ ಇತರರು ಉಪಸ್ಥಿತರಿದ್ದರು.

Continue Reading

Mysore

ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಪೂರ್ವಭಾವಿ ಸಭೆ

Published

on

ನಂಜನಗೂಡು:  ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್ ರವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.

ಶಾಸಕ ದರ್ಶನ್ ಧ್ರುವ ನಾರಾಯಣ್ ಸಭೆಯಲ್ಲಿ ಗೈರಾದ ಅಧಿಕಾರಿಗಳ ವಿರುದ್ಧ ತಾಲ್ಲೂಕು ಬಿಟ್ಟು ತೊಲಗಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರವರ ತವರು ಜಿಲ್ಲೆ ಎಂಬುವುದನ್ನು ತಾಲ್ಲೂಕು ಮಟ್ಟದ ಅಧಿಕಾರಿಗಳು ಮರೆಯಬಾರದು ಜಾಗೃತಿಯಿಂದ ಮತ್ತು ಪ್ರಾಮಾಣಿಕವಾಗಿ ಜನರ ಸೇವೆ ಮಾಡುವುದಕ್ಕೆ ಆಗುವುದಿಲ್ಲ ಕಳ್ಳಾಟ ಹಾಡಿ ದಿನದೊಡುತ್ತೇವೆ ಸಂಬಳ ಪಡೆಯುತ್ತೇವೆ ಎಂಬ ಮನಸ್ಥಿತಿ ಇರುವ ಅಧಿಕಾರಿಗಳೇ ನೀವಾಗಿ ನೀವೇ ತಾಲ್ಲೂಕು ಬಿಟ್ಟು ತೊಲಗಿ ಎಂದು ಖಡಕ್ಕಾಗಿ ಶಾಸಕ ದರ್ಶನ್ ಧ್ರುವನಾರಾಯಣ್ ಎಚ್ಚರಿಸಿದರು.
ನಂಜನಗೂಡು ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಶಾಸಕ ದರ್ಶನ್ ಧ್ರುವನಾರಾಯಣ್ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಸಭೆಯಲ್ಲಿ ಬೆರಳೆಣಿಕೆಯಷ್ಟು ಮಾತ್ರ ಅಧಿಕಾರಿಗಳು ಹಾಜರಾಗಿದ್ದರು. ಕೆಲವೇ ಕೆಲವು ಅಧಿಕಾರಿಗಳು ಮಾತ್ರ ಹಾಜರಿದ್ದರು. ಸಂಘ ಸಂಸ್ಥೆಗಳ ಮುಖಂಡರು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹೆಚ್ಚಿನ ರೀತಿಯಲ್ಲಿ ಹಾಜರಿದ್ದರು. ಇದನ್ನು ಗಮನಿಸಿದ ಶಾಸಕ ದರ್ಶನ್ ಧ್ರುವ ನಾರಾಯಣ್ ಗೈರಾದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದೇ ತಿಂಗಳ 15ರಂದು ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮವನ್ನು ಅದ್ದೂರಿ ಮತ್ತು ಸಡಗರ ಸಂಭ್ರಮದಿಂದ ಆಚರಿಸಲು ತಾಲ್ಲೂಕು ಆಡಳಿತ ಮುಂದಾಗಿದೆ. ಪ್ರತಿ ವರ್ಷದಂತೆ ನಡೆಯುವ ಕಾರ್ಯಕ್ರಮದಂತೆ ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಅತಿ ಹೆಚ್ಚು ಶಿಕ್ಷಣ ಇಲಾಖೆಗೆ ಜವಾಬ್ದಾರಿ ನೀಡಲಾಗಿದೆ. ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಜೆ 4 ಗಂಟೆಗೆ ನಂಜನಗೂಡಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ ಜೂನಿಯರ್ ಕಾಲೇಜು ಮೈದಾನದಲ್ಲಿ ಧ್ವಜಾರೋಹಣ ಕಾರ್ಯಕ್ರಮ, ವಿದ್ಯಾರ್ಥಿಗಳು ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳ ಪಥಸಂಚಲನ ಹಾಗೂ ವಿವಿಧ ಬಗೆಯ ಜಾಗೃತಿ ಸಂದೇಶಗಳನ್ನು ತಿಳಿಸುವ ಕಾರ್ಯಕ್ರಮಗಳನ್ನು ಕೂಡ ಮಾಡಲು ತಯಾರಿ ನಡೆಸಲಾಗಿದೆ. ಇಂತಹ ಪ್ರಮುಖ ಕಾರ್ಯಕ್ರಮಕ್ಕೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಈ ಪೂರ್ವಭಾವಿ ಸಭೆಗೆ ಗೈರು ಹಾಜರಾಗಿರುವ ಅಧಿಕಾರಿಗಳ ವಿರುದ್ಧ ಕೂಡಲೇ ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ಕಾರ್ಯಕ್ರಮದಲ್ಲಿ ಗೈರಾಗಿರುವ ಅಧಿಕಾರಿಗಳ ಪಟ್ಟಿ ಮಾಡಿ, ಅವರಿಗೆ ನೋಟಿಸ್ ನೀಡಿ, ಬೇಜವಾಬ್ದಾರಿಯಿಂದ ಕೆಲಸ ಮಾಡುವ ಅಧಿಕಾರಿಗಳು ಕ್ಷೇತ್ರ ಬಿಟ್ಟು ತೊಲಗಲಿ, ಇಲ್ಲವಾದಲ್ಲಿ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಸಸ್ಪೆಂಡ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್, ಸಿಡಿಪಿಒ ಭವ್ಯ ಶ್ರೀ, ನಗರಸಭಾ ಆಯುಕ್ತ ನಂಜುಂಡಸ್ವಾಮಿ ಪಿಎಸ್ಐ ಪ್ರಕಾಶ್ ಸಿದ್ದಪ್ಪ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ನಂಜನಗೂಡು ಮಹದೇವಸ್ವಾಮಿ ಪಟೇಲ್.

Continue Reading

Trending

error: Content is protected !!