National
ದೇಶದ ನಿಯಮಗಳನ್ನು ಪಾಲಿಸಲು ಸಾಧ್ಯವಾಗದಿದ್ದರೆ ದೇಶ ಬಿಟ್ಟು ತೊಲಗಿ: ವಾಟ್ಸಪ್‌ಗೆ ಸುಪ್ರೀಂ ಎಚ್ಚರಿಕೆ
ನವದೆಹಲಿ: ಗೌಪ್ಯತೆ ಉಲ್ಲಂಘನೆ ಆರೋಪ ಕೇಳಿಬಂದ ಹಿನ್ನೆಲೆ, ದೇಶದ ನಿಯಮಗಳನ್ನು ಪಾಲಿಸಲು ಸಾಧ್ಯವಾಗದಿದ್ರೆ, ದೇಶ ಬಿಟ್ಟು ತೊಲಗಿ ಎಂದು ವಾಟ್ಸಪ್ ಒಡೆತನದ ಮೆಟಾ ಸಂಸ್ಥೆಗೆ ಸುಪ್ರೀಂ ಕೋರ್ಟ್ ಖಡಕ್ ಎಚ್ಚರಿಕೆ ನೀಡಿದೆ.
ಮೆಟಾ ಒಡೆತದ ವಾಟ್ಸಪ್ ಇಂದು ವಿಶ್ವದ ಜನಪ್ರಿಯ ಮೆಸೆಂಜರ್ ಅಪ್ಲಿಕೇಶನ್ ಆಗಿದೆ. ಇಂಟರ್‌ನೆಟ್ ಇದ್ದರೆ ವಿಶ್ವದ ಯಾವುದೇ ಮೂಲೆಯಲ್ಲಿರುವ ವ್ಯಕ್ತಿಯೊಂದಿಗೆ ಸಂಪರ್ಕ ಸಾಧಿಸಬಹುದಾಗಿದೆ. ಫೋಟೋ, ವಿಡಿಯೋ ಧ್ವನಿ ಸಂದೇಶ, ಲೈವ್ ಲೊಕೇಷನ್‌ಗಳನ್ನ ಹಂಚಿಕೊಳ್ಳುವ ಸಾಧನವಾಗಿದೆ. ಆದರೆ ಮೆಟಾ ಸಂಸ್ಥೆಯು ಉದ್ದೇಶಿತ ಜಾಹೀರಾತಿಗಾಗಿ ಬಳಕೆದಾರರ ಖಾಸಗಿ ಡೇಟಾವನ್ನ ಹಂಚಿಕೊಳ್ಳುತ್ತಿದೆ ಎನ್ನುವ ಆರೋಪ ಕೇಳಿಬಂದ ಹಿನ್ನೆಲೆ ಸುಪ್ರೀಂ ಕೋರ್ಟ್ ದೇಶ ತೊರೆಯುವಂತೆ ಖಡಕ್ ಸಂದೇಶ ನೀಡಿದೆ.

ವಾಟ್ಸಪ್‌ನ 2021 ರ ಗೌಪ್ಯತೆ ನೀತಿಗೆ ಸಂಬಂಧಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ತ್ರಿಸದಸ್ಯ ಪೀಠವೂ, ಒಟಿಟಿ ಸಂದೇಶ ಪ್ಲಾಟ್‌ಫಾರ್ಮ್‌ನಲ್ಲಿ ಗೌಪ್ಯತೆ ದುರುಪಯೋಗಕ್ಕಾಗಿ ಭಾರತದ ಸ್ಪರ್ಧಾ ಆಯೋಗವು ವಿಧಿಸಿದ್ದ 213 ಕೋಟಿ ರೂ. ದಂಡವನ್ನು ಎತ್ತಿಹಿಡಿದಿದೆ.
ಮುಂದುವರಿದು.. ಬಹುರಾಷ್ಟ್ರೀಯ ಕಂಪನಿಯ ವ್ಯವಹಾರ ಹಿತಾಸಕ್ತಿಗಳಿಗಾಗಿ ನಾಗರಿಕರ ಗೌಪ್ಯತೆಯ ಹಕ್ಕನ್ನು ರಾಜೀ ಮಾಡಿಕೊಳ್ಳಲಾಗುವುದಿಲ್ಲ ಎಂದು ಎಚ್ಚರಿಸಿದೆ. ಪೀಠವೂ ಫೆ. 10 ರಂದು ಈ ವಿಚಾರದ ಬಗ್ಗೆ ವಿವರವಾದ ಆದೇಶಗಳನ್ನು ನೀಡುವುದಾಗಿ ಹೇಳಿದೆ.
ಸುಪ್ರೀಂ ಕೋರ್ಟ್ ಹೇಳಿದ್ದೇನು?
ಮೆಟಾ ಸಂಸ್ಥೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಕೋರ್ಟ್, ಬಹುರಾಷ್ಟ್ರೀಯ ಕಂಪನಿಯೊಂದರ ವ್ಯವಹಾರ ಹಿತಾಸಕ್ತಿಗಾಗಿ ನಾಗರಿಕರ ಗೌಪ್ಯತೆಯನ್ನ ರಾಜೀ ಮಾಡಿಕೊಳ್ಳಲು ಅನುಮತಿಸುವುದಿಲ್ಲ. ಸುರಕ್ಷತೆಯನ್ನ ಖಚಿತಪಡಿಸಿಕೊಳ್ಳದಿದ್ದರೆ ಅಂತಹ ಡೇಟಾ ಹಂಚಿಕೆಯನ್ನ ನಿಷೇಧಿಸಬಹುದು ಎಂದು ತಿಳಿಸಿದೆ.
ನಮ್ಮ ದೇಶದ ಗೌಪ್ಯತೆಯೊಂದಿಗೆ ನೀವು ಆಟವಾಡಲು ಸಾಧ್ಯವಿಲ್ಲ. ನಮ್ಮ ಡೇಟಾದ ಒಂದೇ ಒಂದು ಅಂಕಿ-ಅಂಶವನ್ನೂ ಹಂಚಿಕೊಳ್ಳಲು ನಾವು ನಿಮಗೆ ಅವಕಾಶ ಕೊಡೋದಿಲ್ಲ. ದೇಶದ ಕಾನೂನುಗಳನ್ನು ಪಾಲಿಸಲು ವಿಫಲವಾದರೆ ಕಂಪನಿ ಭಾರತವನ್ನ ತೊರೆಯಬಹುದು ಎಂದು ಎಚ್ಚರಿಕೆ ನೀಡಿದೆ.
ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ವಾಣಿಜ್ಯ ಉದ್ದೇಶಕ್ಕಾಗಿ ಬಳಕೆದಾರರ ಡೇಟಾವನ್ನ ಹಂಚಿಕೊಳ್ಳುವ ಶೋಷಣಾ ನೀತಿಯನ್ನು ವ್ಯಂಗ್ಯ ಮಾಡಿದರು. ನಂತರ ಮುಖ್ಯ ನ್ಯಾಯಾಧೀಶರು, ನಮ್ಮ ಸಂವಿಧಾನ ಅನುಸರಿಸಲು ಸಾಧ್ಯವಾಗದಿದ್ದರೆ, ಭಾರತ ತೊರೆಯಿರಿ. ನಾಗರಿಕರ ಗೌಪ್ಯತೆಗೆ ಧಕ್ಕೆಯಾಗಲು ನಾವು ಬಿಡುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.
ಮೆಟಾ ಹಾಗೂ ವಾಟ್ಸಾಪ್ ಪರವಾಗಿ ಹಿರಿಯ ವಕೀಲ ಮುಕುಲ್ ರೋಹಟ್ಗಿ ಮತ್ತು ಹಿರಿಯ ವಕೀಲ ಅಖಿಲ್ ಸಿಬಲ್ ವಾದ ಮಂಡಿಸಿದರು. ಎಲ್ಲಾ ಸಂದೇಶಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಆಗಿವೆ. ಕಂಪನಿಗಳೂ ಕೂಡ ವಿಷಯವನ್ನು ನೋಡಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಪ್ರತಿವಾದಿಸಿದರು.
ವಾದ ಪ್ರತಿವಾದಗಳನ್ನು ಆಲಿಸಿದ ಪೀಠವು ಫೆ. 10 ರಂದು ಈ ವಿಷಯದ ಕುರಿತು ವಿವರವಾದ ಆದೇಶಗಳನ್ನು ನೀಡುವುದಾಗಿ ಹೇಳಿದೆ.
National
17ನೇ ಬೆಂಗಳೂರು ಚಿತ್ರೋತ್ಸವದಲ್ಲಿ ತಾಯಿ-ಮಗನ ಸಂಬಂಧದ ʼಅಮ್ಮಂಗೆ ಹೇಳ್ಬೇಡʼ ಚಿತ್ರ ಪ್ರದರ್ಶನ
ಬೆಂಗಳೂರು : ‘ನನ್ನ ಚೊಚ್ಚಲ ನಿರ್ದೇಶನದ ಈ ಚಿತ್ರವು 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವುದು ನನಗೆ ಹೆಮ್ಮೆಯ ವಿಷಯ. ಇದು ವಿಶ್ವದಾದ್ಯಂತ ಹಾಗೂ ಭಾರತದ ವಿವಿಧ ಭಾಗಗಳ ಸಿನಿಮೀಯ ಧ್ವನಿಗಳನ್ನು ಸಂಭ್ರಮಿಸುವ ವೇದಿಕೆಯಾಗಿದೆ’ ಎಂದು ‘ಅಮ್ಮಂಗೆ ಹೇಳ್ಬೇಡ’ (Don’t Tell Mother) ಚಿತ್ರದ ನಿರ್ದೇಶಕ ಅನೂಪ್ ಲೋಕ್ಕೂರ್ ತಿಳಿಸಿದ್ದಾರೆ.
‘ಅಮ್ಮಂಗೆ ಹೇಳ್ಬೇಡ’ ಚಲನಚಿತ್ರದ ಬಗ್ಗೆ ಮಾತನಾಡಿದ ಅವರು, ‘ಈ ಕಥೆಯು ತಮ್ಮನ್ನು 1990ರ ದಶಕದ ಬೆಂಗಳೂರಿನ ಬಾಲ್ಯದ ದಿನಗಳಿಗೆ, ಅಂದರೆ ಶಾಲೆಯ ತರಗತಿಗಳು ಮತ್ತು ಕುಟುಂಬದ ಆಪ್ತ ಕ್ಷಣಗಳಿಗೆ ಕೊಂಡೊಯ್ಯುತ್ತದೆ ಎಂದು ಸ್ಮರಿಸಿದ್ದಾರೆ. ಈ ಚಿತ್ರ ಕನ್ನಡ ಸ್ಪರ್ಧಾತ್ಮಕ ವಿಭಾಗದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಈ ಚಿತ್ರವು ಒಂಬತ್ತು ವರ್ಷದ ಬಾಲಕ ಆಕಾಶ್‌ನ ಜೀವನವನ್ನು ಆಧರಿಸಿದೆ.

ಶಾಲೆಯಲ್ಲಿ ಅನುಭವಿಸಿದ ಶಿಕ್ಷೆಯ ಗುರುತುಗಳನ್ನು ಮುಚ್ಚಿಟ್ಟುಕೊಂಡು, ತನ್ನ ಕುಟುಂಬದ ಭಾವನಾತ್ಮಕ ಸಮತೋಲನವನ್ನು ಕಾಪಾಡಲು ಆತ ಪಡುವ ಶ್ರಮ ಹಾಗೂ ಭಯ, ಪ್ರೀತಿ ಮತ್ತು ಜವಾಬ್ದಾರಿಗಳ ನಡುವೆ ಆತ ಸಾಗುವ ಪಯಣವನ್ನು ಈ ಸಿನಿಮಾ ಸುಂದರವಾಗಿ ಚಿತ್ರಿಸುತ್ತದೆ. ಆಕಾಶ್ ಪಾತ್ರದಲ್ಲಿ ಸಿದ್ಧಾರ್ಥ್ ಸ್ವರೂಪ್ ನಟಿಸಿದ್ದು, ತಮ್ಮ ಮುಗ್ಧತೆ ಮತ್ತು ಬಲವಾದ ಅಭಿನಯದ ಮೂಲಕ ಚಿತ್ರಕ್ಕೆ ಜೀವ ತುಂಬಿದ್ದಾರೆ. ಅನಿರುದ್ಧ್ ಪಿ. ಕೇಸರ್‌ಕರ್ ಬಾಲಕನ ತಮ್ಮನ ಪಾತ್ರದಲ್ಲಿ ಕಾಣಿಸಿಕೊಂಡರೆ, ಐಶ್ವರ್ಯ ದಿನೇಶ್ ಮತ್ತು ಕಾರ್ತಿಕ್ ನಾಗರಾಜನ್ ಪೋಷಕರ ಪಾತ್ರದಲ್ಲಿ ಅದ್ಭುತವಾಗಿ ನಟಿಸಿ ಕುಟುಂಬದ ಸಂಘರ್ಷಗಳಿಗೆ ಭಾವನಾತ್ಮಕ ಸ್ಪರ್ಶ ನೀಡಿದ್ದಾರೆ’ ಎಂದು ಹೇಳಿದರು.
ಈ ಸಿನಿಮಾ ಕೇವಲ ವೈಯಕ್ತಿಕ ಗತಕಾಲದ ಪ್ರತಿಬಿಂಬವಲ್ಲ, ಬದಲಿಗೆ ಪ್ರೇಕ್ಷಕರು ತಮ್ಮ ಬಾಲ್ಯದ ನೆನಪುಗಳನ್ನು ಮತ್ತು ಕುಟುಂಬದ ಅಲಿಖಿತ ಕಥೆಗಳನ್ನು ಮರುಶೋಧಿಸುವಂತೆ ಮಾಡುತ್ತದೆ ಎಂದ ಅನೂಪ್ ಲೋಕ್ಕೂರ್, ʼಕಥೆ ಹೇಳುವ ಕಲೆಯನ್ನು ಗೌರವಿಸುವ ಇಂತಹ ದೊಡ್ಡ ಚಿತ್ರೋತ್ಸವದಲ್ಲಿ, ತಾವು ಬೆಳೆದ ಪರಿಸರ ಮತ್ತು ಜೀವನದ ಲಯವನ್ನು ಬಿಂಬಿಸುವ ಚಿತ್ರವನ್ನು ಬೆಳ್ಳಿತೆರೆಯ ಮೇಲೆ ನೋಡುವುದು ಒಬ್ಬ ನಿರ್ದೇಶಕನಾಗಿ ತಮಗೆ ಅತ್ಯಂತ ಭಾವುಕ ಮತ್ತು ಸಂತಸದ ಕ್ಷಣʼ ಎಂದರು.
National
ಸಮಸ್ಯೆ ಮತ್ತು ಜೀವನಶೈಲಿ ಚಿತ್ರಿಸುವಲ್ಲಿ ಓಟಿಟಿ ಮಹತ್ವದ ಪಾತ್ರ
ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸದಲ್ಲಿ ಗಿರೀಶ್ ಕಾಸರವಳ್ಳಿ ಅಭಿಪ್ರಾಯ, ಓಟಿಟಿಗಳು ನಮ್ಮ ಜೀವನಕ್ಕೆ ಹತ್ತಿರವಾಗಿರುವ ಸಮಸ್ಯೆಗಳು ಮತ್ತು ಜೀವನಶೈಲಿಯನ್ನು ಚಿತ್ರಿಸುತ್ತಿವೆ. ಆ ಅರ್ಥದಲ್ಲಿ ಅವು ಬಹಳ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಕಾಸರವಳ್ಳಿ ಅಭಿಪ್ರಾಯಪಟ್ಟಿದ್ದಾರೆ.
17 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ʼ30 ವರ್ಷಗಳ ಹಿಂದೆ ಟೆಲಿವಿಷನ್ ಬೆಳವಣಿಗೆಯಿಂದ ಉಂಟಾದ ಒಳ್ಳೆಯ ಸಂಗತಿಯೆಂದರೆ, ಚಾಲ್ತಿಯಲ್ಲಿದ್ದ ಕೆಲವು ನಂಬಿಕೆಗಳನ್ನು ಪುಡಿ ಮಾಡಿದ್ದು. ಅದಕ್ಕೂ ಮೊದಲು ಒಬ್ಬ ನಟಿ ಸ್ಟಾರ್ ಆಗಬೇಕಾದರೆ ಆಕೆ ಎಷ್ಟೇ ಪ್ರತಿಭಾವಂತಳಾಗಿದ್ದರೂ, ಸುಂದರವಾಗಿರಬೇಕು ಎಂಬ ನಂಬಿಕೆ ಇತ್ತು. ಪ್ರತಿಭೆ ಎರಡನೇ ಸ್ಥಾನದಲ್ಲಿತ್ತು. ಅಂದರೆ ಕಲಾವಿದರನ್ನು ಅರ್ಥಮಾಡಿಕೊಳ್ಳಲು ಮಾರುಕಟ್ಟೆ ಆರ್ಥಿಕತೆಯ ತರ್ಕವನ್ನು ಬಳಸಲಾಗುತ್ತಿತ್ತು. ಆದರೆ, ಟಿವಿ ಬಂದ ನಂತರ ಪ್ರತಿಭೆ ಇರುವವರನ್ನು ನೇರವಾಗಿ ಸಾಮಾನ್ಯ ಜನರ ಮಧ್ಯದಿಂದಲೇ ಆಯ್ಕೆ ಮಾಡಲು ಆರಂಭಿಸಲಾಯಿತು. ಅವರು ಸುಂದರವಾಗಿ ಕಾಣಿಸಿಕೊಳ್ಳದೇ ಇರಬಹುದು, ಆದರೆ ಪ್ರತಿಭಾವಂತರಾಗಿದ್ದರು.

ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಅದು ನಟಿ ಅನಿತಾ ಕನ್ವರ್ ಎಂದ ಕಾಸರವಳ್ಳಿ, ʼಅವರು ಒಂದು ಧಾರಾವಾಹಿಯನ್ನು ಸುಮಾರು ಎರಡು ವರ್ಷಗಳ ಕಾಲ ಯಶಸ್ವಿಯಾಗಿ ಮುನ್ನಡೆಸಿದರು. ಆದರೆ, ಸಿನಿಮಾರಂಗ ಅವರನ್ನು ಅಷ್ಟರ ಮಟ್ಟಿಗೆ ಸ್ವೀಕರಿಸಲಿಲ್ಲ. ಈ ರೀತಿಯ ಹಲವಾರು ಸೂಕ್ಷ್ಮ ಬದಲಾವಣೆಗಳು ಮತ್ತು ಹೊಸ ಅಸಮಾಧಾನಗಳು ಈಗ ನಡೆಯುತ್ತಿವೆ. ನನ್ನ ಅಭಿಪ್ರಾಯದಲ್ಲಿ ವೆಬ್ ಸೀರೀಸ್‌ಗಳು ಇದನ್ನು ಬಹಳ ಪರಿಣಾಮಕಾರಿಯಾಗಿ ಮಾಡುತ್ತಿವೆ. ಆ ನಿಟ್ಟಿನಲ್ಲಿ ನಾವು ಓಟಿಟಿಯೊಂದಿಗೆ ಹೆಜ್ಜೆ ಹಾಕಬೇಕುʼ ಎಂದು ಹೇಳಿದರು.
ಪ್ರತಿ 20 ವರ್ಷಗಳಿಗೊಮ್ಮೆ ಸಿನಿಮಾದ ವ್ಯಾಕರಣ ಬದಲಾಗುತ್ತದೆ ಎಂದ ಅವರು, ʼಸಿನೆಮಾ ಒಂದು ಕಲೆ. ಅದು ಸುಮಾರು 130 ವರ್ಷಗಳಷ್ಟು ಹಳೆಯದು. ಆದರೆ, ಪ್ರತಿ 20 ವರ್ಷಕ್ಕೊಮ್ಮೆ ಚಲನಚಿತ್ರ ವ್ಯಾಕರಣದ ದೃಷ್ಟಿಕೋನ ಬದಲಾಗುತ್ತಿರುತ್ತದೆ. ಇಲ್ಲಿಯವರೆಗೂ ಕೆಲವು ಬಾರಿ ಈ ತರಹದ ಬದಲಾವಣೆಗಳಾಗುತ್ತಿರುತ್ತವೆ. ಆ ಬದಲಾವಣೆಯ ಹಿಂದೆ ರಾಜಕೀಯವಿದೆ. ಆ ಬದಲಾವಣೆಯ ಹಿಂದೆ ಒಂದು ಹೊಸ ಅಭಿವ್ಯಕ್ತಿ ವಿಧಾನ ಮೂಡಿಬರುತ್ತದೆʼ ಎಂದು ಹೇಳಿದರು.
National
ಲಡಾಖ್ ಗಡಿ ಸಂಘರ್ಷ: ಸಂಸತ್‌ನಲ್ಲಿ ಮನೋಜ್‌ರವರ ಅಪ್ರಕಟಿತ ಪುಸ್ತಕ ವಿಚಾರದ ಬಗ್ಗೆ ಪ್ರಸ್ತಾಪಿಸಿದ ರಾಹುಲ್ ಗಾಂಧಿ
ನವದೆಹಲಿ: ಲಡಾಖ್ ಗಡಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ ನರವಾಣೆ ಅವರ ಅಪ್ರಕಟಿತ ಪುಸ್ತಕ ವಿಚಾರವನ್ನು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಸ್ತಾಪಿಸಿದ್ದು, ಲೋಕಸಭೆಯಲ್ಲಿ ಭಾರೀ ಗದ್ದಲವನ್ನು ಸೃಷ್ಟಿ ಮಾಡಿದೆ..
ಸಂಸತ್‌ನಲ್ಲಿ ಇಂದು ರಾಷ್ಟ್ರಪತಿಗಳ ಭಾಷಣಕ್ಕೆ ಸಂಬಂಧಿಸಿದಂತೆ ವಂದನಾ ನಿರ್ಣಯದ ಮೇಲಿನ ಚರ್ಚೆ ಕೈಗೆತ್ತಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ, 2019ರ ಡಿಸೆಂಬರ್‌ನಿಂದ ಏಪ್ರಿಲ್ 2022 ರವರೆಗೆ ಭಾರತದ ಸೇನಾ ಮುಖ್ಯಸ್ಥರಾಗಿ ಎಂ.ಎಂ. ನರವಾಣೆ ಅವರು ಸೇವೆ ಸಲ್ಲಿಸಿದ್ದಾರೆ. ಅವರ ಕುರಿತಾದ ಪುಸ್ತಕ ಪ್ರಕಟಿಸಲು ಕೇಂದ್ರ ಅನುಮೋದನೆ ನೀಡಿಲ್ಲ. 2020ರ ಭಾರತ-ಚೀನಾ ಗಡಿ ಘರ್ಷಣೆಯ ಸಮಯದಲ್ಲಿನ ಮಹತ್ವದ ಅಂಶಗಳು ಪುಸ್ತಕದಲ್ಲಿವೆ. ಚೀನಾ ಆಕ್ರಮಣ, ಉಪಟಳವು ಅದರಲ್ಲಿದೆ. ಇಂತಹ ಪುಸ್ತಕದ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಇದೇ ವೇಳೆ ಮಧ್ಯಪ್ರವೇಶಿಸಿದ ರಾಜನಾಥ್ ಸಿಂಗ್, ಅಪ್ರಕಟಿತ ವಿಷಯ ಸದನದಲ್ಲಿ ಉಲ್ಲೇಖ ಸರಿಯಲ್ಲ ಎಂದು ಹೇಳಿದರು. ಅವರ ಮಾತು ಬೆಂಬಲಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಕ್ಷೇಪಿಸಿದರು. ಔಪಚಾರಿಕವಾಗಿ ಪ್ರಕಟಿತ ವಿಷಯವನ್ನು ಪ್ರಸ್ತಾಪಿಸುವಂತೆ ಆಗ್ರಹಿಸಿದ್ದಾರೆ.
ಪತ್ರಿಕೆಗಳು ಹಾಗೂ ಮ್ಯಾಗಜಿನ್‌ಗಳು ಏನು ಬೇಕಾದರೂ ಪ್ರಕಟಿಸಬಹುದು. ಅಧಿಕೃತವಾಗಿ ಪ್ರಕಟವಾಗದ ಮೂಲಗಳನ್ನು ಸಂಸತ್ತಿನ ದಾಖಲೆಯ ಭಾಗವಾಗಲು ಅವಕಾಶ ಕೊಡಬಾರದು ಎಂದು ಹೇಳಿದರು. ಇದರಿಂದ ಸದನದಲ್ಲಿ ಗದ್ದಲ ಹೆಚ್ಚಾಯಿತು. ವಿರೋಧ ಪಕ್ಷದ ಸದಸ್ಯರು, ಆಡಳಿತ ಪಕ್ಷವು ಉದ್ದೇಶಪೂರ್ವಕವಾಗಿ ಚರ್ಚೆಯನ್ನು ನಿಲ್ಲಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿ, ರಾಜನಾಥ್ ಸಿಂಗ್ ಮತ್ತು ಅಮಿತ್ ಶಾ ಅವರ ಮಧ್ಯಪ್ರವೇಶವನ್ನು ಖಂಡನೆ ಮಾಡಿದ್ದಾರೆ.
ಕೇಂದ್ರ ಸರ್ಕಾರದ ಆಕ್ಷೇಪಗಳಿಗೆ ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿ ಅವರು, ಜನರಲ್ ನರವಾಣೆ ಅವರ ಪುಸ್ತಕದ ಆಧಾರದ ಮೇಲೆ ಮ್ಯಾಗಜಿನ್‌ನಲ್ಲಿ ಪ್ರಕಟವಾದ ವರದಿಯನ್ನು ತಾವು ಉಲ್ಲೇಖಿಸಿದ್ದಾಗಿ ಸ್ಪಷ್ಟನೆ ನೀಡಿದರು. ತಮ್ಮ ಉಲ್ಲೇಖವು ನಂಬಿಕಸ್ಥ ಮೂಲದ ಮೇರೆಗೆ ಇದ್ದು, ಆಡಳಿತ ಪಕ್ಷದ ಒಬ್ಬ ಸಂಸದರು ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದ ಕಾರಣಕ್ಕೆ ಈ ವಿಷಯವನ್ನು ಪ್ರಸ್ತಾಪಿಸಬೇಕಾಯಿತು ಎಂದು ಸಮರ್ಥಿಸಿಕೊಂಡಿದ್ದಾರೆ.
ಈ ವೇಳೆ ಸಮಾಜವಾದಿ ಪಕ್ಷದ ಸಂಸದ ಅಖಿಲೇಶ್ ಯಾದವ್ ಸಹ ರಾಹುಲ್ ಗಾಂಧಿಗೆ ಬೆಂಬಲ ವ್ಯಕ್ತಪಡಿಸಿದರು. ಚೀನಾ ಸಂಬಂಧಿತ ವಿಷಯ ಅತ್ಯಂತ ಸೂಕ್ಷ್ಮವಾದದ್ದು. ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿಗೆ ಸಂಬಂಧಿಸಿದ ವಿಷಯಗಳ ಮೇಲೆ ಪ್ರತಿಪಕ್ಷ ನಾಯಕನಿಗೆ ಸಂಪೂರ್ಣವಾಗಿ ಮಾತನಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ನಂತರ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವಿನ ವಾಗ್ವಾದ ತೀವ್ರಗೊಂಡು, ಘೋಷಣೆಗಳು ಮತ್ತು ಅಡ್ಡಿಪಡಿಸುವಿಕೆಗಳಿಂದ ಸದನದಲ್ಲಿ ಕೆಲಕಾಲ ಗದ್ದಲವುಂಟಾಯಿತು. ಈ ಎಲ್ಲದರ ನಡುವೆಯೂ ರಾಹುಲ್ ಗಾಂಧಿ ತಮ್ಮ ಭಾಷಣವನ್ನು ಮುಂದುವರಿಸಿದ್ದಾರೆ.
-
Manglore20 hours agoಜಿ.ಎಲ್. ಟ್ರೋಫಿ-2026: ಜಿ.ಎಲ್. ಹಾಸನ ತಂಡ ಚಾಂಪಿಯನ್
-
Hassan20 hours agoಅರಸೀಹಳ್ಳಿ ಹರೀಶ್ಗೆ ಪಿಹೆಚ್ಡಿ ಪದವಿ
-
Hassan21 hours agoಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ : ಕೇಂದ್ರ ಸಚಿವರನ್ನು ಭೇಟಿ ಮಾಡಿದ ಸಂಸದ ಶ್ರೇಯಸ್ ಪಟೇಲ್
-
Hassan21 hours agoಮಾಧ್ಯಮ ಸ್ವಾತಂತ್ರ್ಯ ಸದ್ಬಳಕೆಯಾಗಲಿ: ಎಎಸ್ಪಿ ತಮ್ಮಯ್ಯ
-
State24 hours agoಸಿಎಂ ಹೌದು ಹುಲಿಯಾ ಆಗಿಲ್ಲ, ಹೌದು ಇಲಿಯಾ ಆಗಿದ್ದಾರೆ: ಆರ್.ಅಶೋಕ್
-
National23 hours ago17ನೇ ಬೆಂಗಳೂರು ಚಿತ್ರೋತ್ಸವದಲ್ಲಿ ತಾಯಿ-ಮಗನ ಸಂಬಂಧದ ʼಅಮ್ಮಂಗೆ ಹೇಳ್ಬೇಡʼ ಚಿತ್ರ ಪ್ರದರ್ಶನ
-
Mysore21 hours agoಡ್ರಗ್ಸ್ ಲ್ಯಾಬ್ ಪತ್ತೆ: ಕೈಗಾರಿಕೆಗಳ ತಪಾಸಣೆಗೆ 14 ತಂಡ ರಚನೆ
-
Hassan24 hours agoಕೆಪಿಎಸ್ ಮ್ಯಾಗ್ನೆಟ್ ಶಾಲೆ ತೆರೆಯದಂತೆ ಆಗ್ರಹ: ಎಐಡಿಎಸ್ಓ ಸಂಘಟನೆಯಿಂದ ನಿಟ್ಟೂರಿನಲ್ಲಿ ಬೃಹತ್ ಸಮಾವೇಶ
