Kodagu
ಸುಂಟ್ಟಿಕೊಪ್ಪ: ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅನೂಪ್ ಕುಮಾರ್ ರಾಜೀನಾಮೆ?

ಮಡಿಕೇರಿ: ಸುಂಟಿಕೊಪ್ಪ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅನೂಪ್ ಕುಮಾರ್ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ತಮ್ಮ ರಾಜೀನಾಮೆ ಬಗ್ಗೆ ಮುಂದಿನ ಮೂರು ದಿನಗಳೊಳಗೆ, ತಮ್ಮ ಹಿತೈಷಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದೆಂದು ಅನೂಪ್ ಕುಮಾರ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅನೂಪ್ ಕುಮಾರ್, ನಾನು ಕಳೆದ ಹಲವು ವರ್ಷಗಳಿಂದ ಯುವ ಕಾಂಗ್ರೆಸ್ ಕಾರ್ಯರ್ತನಾಗಿ ನಂತರ ಸುಂಟಿಕೊಪ್ಪ ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ನಿಷ್ಠಾವಂತನಾಗಿ ಕಾರ್ಯನಿರ್ವಹಿಸಿದ್ದೇನೆ. ಅದಲ್ಲದೇ ಸುಂಟಿಕೊಪ್ಪ ಭಾಗದಲ್ಲಿ ಯುವಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆದು ಯುವ ಕಾಂಗ್ರೆಸ್ ಬಲಪಡಿಸುವ ಕೆಲಸ ಮಾಡಿದ್ದೇನೆ.
ಆದರೆ ಕಿಡಿಗೇಡಿಗಳ ಗುಂಪೊಂದು ನನ್ನ ಮೇಲೆ ಹಲ್ಲೆ ಮಾಡಿದ ಸಂದರ್ಭ, ಸುಂಟಿಕೊಪ್ಪ ಠಾಣೆಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಲತೀಫ್ ಸುಂಟಿಕೊಪ್ಪ ಮತ್ತು ಸಿಸಿಬಿ ವಿರಾಜಪೇಟೆ ತಂಡದ ಯುವಕರು ಹೊರತುಪಡಿಸಿ ಯಾರು ಕೂಡ ನನ್ನ ಬೆಂಬಲಕ್ಕೆ ನಿಂತಿಲ್ಲ.
ಘಟನೆಯ ಬಗ್ಗೆ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಸುಂಟ್ಟಿಕೊಪ್ಪ ನಗರ ಕಾಂಗ್ರೆಸ್ ನಾಯಕರ ಗಮನಕ್ಕೆ ತಂದರು ಕೂಡ, ನನ್ನ ಬೆಂಬಲಕ್ಕೆ ನಿಲ್ಲದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅನೂಪ್ ಕುಮಾರ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಮುಖಂಡರ ಈ ಧೋರಣೆಯಿಂದ ಬೇಸತ್ತು ನಾನು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಮುಂದಿನ ಮೂರು ದಿನಗಳಲ್ಲಿ ನಿರ್ಧಾರ ತಿಳಿಸುವುದಾಗಿ ಅನೂಪ್ ಕುಮಾರ್ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಅನೂಪ್ ಕುಮಾರ್ ಚಾರಿಟೇಬಲ್ ಟ್ರಸ್ಟ್ ಮೂಲಕ ಜನಸೇವೆಗೆ ಸದಾ ಸಿದ್ಧನಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡಿದ್ದ ಯುವ ಕಾಂಗ್ರೆಸ್ ಆಂತರಿಕ ಚುನಾವಣೆಯಲ್ಲಿ ಯುವ ಕಾಂಗ್ರೆಸ್ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸ್ಥಾನಕ್ಕೆ ಅನೂಪ್ ಕುಮಾರ್ ಸ್ಪರ್ಧಿಸಿದ್ದರು. ಅದಲ್ಲದೇ ಅನೂಪ್ ಕುಮಾರ್ ಅವರ ಗೆಲುವು ಕೂಡ ಬಹುತೇಕ ಖಚಿತಗೊಂಡಿತ್ತು. ಯುವ ಕಾಂಗ್ರೆಸ್ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುವ ಮುನ್ನ ಅನೂಪ್ ಕುಮಾರ್ ಅವರ ರಾಜೀನಾಮೆ ನೀಡಲು ಮುಂದಾಗಿರುವುದು ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಗೆ ದೊಡ್ಡ ಹಿನ್ನಡೆಯಾಗಿದೆ ಎಂದು ಹೇಳಲಾಗುತ್ತಿದೆ.
ಸುಂಟಿಕೊಪ್ಪ ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಜಿಲ್ಲಾ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದಿಂದ ಅನೂಪ್ ಕುಮಾರ್ ಪ್ರಬಲ ಆಕಾಂಕ್ಷಿಯಾಗಿದ್ದರು.
Kodagu
ಮುದ್ದಂಡ ಹಾಕಿ ಉತ್ಸವಕ್ಕೆ ಅಂತಿಮ ಹಂತದ ಸಿದ್ಧತೆ

ಮಡಿಕೇರಿ : ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯ ಮುದ್ದಂಡ ಕಪ್ ಹಾಕಿ ಉತ್ಸವಕ್ಕೆ ಮಡಿಕೇರಿ ನಗರದಲ್ಲಿ ಅಂತಿಮ ಹಂತದ ಸಿದ್ಧತೆ ನಡೆದಿದ್ದು, ಬೆಳ್ಳಿ ಹಬ್ಬದ ಪ್ರಯುಕ್ತ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಮುದ್ದಂಡ ಹಾಕಿ ಹಬ್ಬದ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ ತಿಳಿಸಿದ್ದಾರೆ.
ಹಾಕಿ ಪಂದ್ಯಾವಳಿ ನಡೆಯುವ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿ ಕೊಡವ ಕುಟುಂಬಗಳ ದಾಖಲೆಯ ೩೯೬ ತಂಡಗಳು ನೋಂದಾಯಿಸಿಕೊಂಡಿದ್ದು, ಮಡಿಕೇರಿಯ ಕೇಂದ್ರ ಸ್ಥಾನದಲ್ಲಿ ಪಂದ್ಯಾವಳಿ ನಡೆಯುತ್ತಿರುವುದು ಈ ಬಾರಿಯ ವಿಶೇಷ ಎಂದರು.
ಪಂದ್ಯಾವಳಿಯ ವಿಜೇತ ತಂಡಕ್ಕೆ ರೂ.೫ ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ೩ ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ, ಸೆಮಿಫೈನಲ್‌ಗೆ ಬಂದ ಎರಡು ತಂಡಗಳಿಗೆ ತಲಾ ೧ ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಪಂದ್ಯಾವಳಿಯ ಯಶಸ್ಸಿಗೆ ಸರ್ಕಾರದ ಸಂಪೂರ್ಣ ಸಹಕಾರ ಇದ್ದು, ಬೇಡಿಕೆಗಳನ್ನು ಈಡೇರಿಸುವ ಭರವಸೆ ದೊರೆತ್ತಿದೆ. ಜಿಲ್ಲೆಯ ಶಾಸಕದ್ವಯರು ಹಾಗೂ ಸಂಸದರು ಮೊದಲ ದಿನದಿಂದಲೂ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗಳ ಎಲ್ಲಾ ಕೊಡವ ಸಮಾಜಗಳು ಹಾಗೂ ಕೊಡವ ಕೇರಿಗಳ ಸಹಕಾರವನ್ನು ಪಡೆಯಲಾಗಿದ್ದು, ಹಾಕಿ ಉತ್ಸವ ಯಶಸ್ವಿಯಾಗಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕ್ರೀಡಾ ಜ್ಯೋತಿ : ಕೊಡವ ಹಾಕಿ ಉತ್ಸವದ ಜನಕರಾದ ಕರಡ ಗ್ರಾಮದ ಪಾಂಡಂಡ ಕುಟುಂಬದ ಐನ್’ಮನೆಯಲ್ಲಿ ಮುದ್ದಂಡ ಹಾಕಿ ಉತ್ಸವದ ಕ್ರೀಡಾಜ್ಯೋತಿಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ಕೊಡವ ಹಾಕಿ ಹಬ್ಬದ ಜನಕ ದಿ.ಪಾಂಡಂಡ ಕುಟ್ಟಪ್ಪ ಅವರ ಪತ್ನಿ ಲೀಲ ಕುಟ್ಟಪ್ಪ ಉದ್ಘಾಟಿಸಿದ್ದು, ಇದುವರೆಗೆ ಹಾಕಿ ಉತ್ಸವ ಆಯೋಜಿಸಿದ್ದ ೨೪ ಕುಟುಂಬಗಳನ್ನು ಸ್ಮರಿಸುವ ಮತ್ತು ಗೌರವದಿಂದ ಕಾಣುವ ಉದ್ದೇಶದಿಂದ ಎಲ್ಲಾ ಐನ್’ಮನೆಗಳಿಗೆ ಮ್ಯಾರಥಾನ್ ಮೂಲಕ ಕ್ರೀಡಾಜ್ಯೋತಿಯನ್ನು ಕೊಂಡೊಯ್ಯುತ್ತಿರುವುದು ಈ ಬಾರಿಯ ವಿಶೇಷ.
ಈಗಾಗಲೇ ಪಾಂಡಂಡ ಕುಟುಂಬದ ಐನ್ ಮನೆಯ ನಂತರ ಕಿರುಗೂರು ಚೆಪ್ಪುಡಿರ, ಅಲಮೇಂಗಡ, ಟಿ.ಶೆಟ್ಟಿಗೇರಿ- ಒಂಟಿಯಂಗಡಿ ಮಚ್ಚಮಾಡ, ಚೆಕ್ಕೇರ, ಕಳ್ಳಿಚಂಡ, ಕುಂದ ಮನೆಯಪಂಡ, ನಾಂಗಾಲ ಕುಪ್ಪಂಡ, ವಿರಾಜಪೇಟೆ ಕಾವಾಡಿ ನೆಲ್ಲಮಕ್ಕಡ, ಚೆಂಬೆಬೆಳ್ಳೂರು ಈಶ್ವರ ದೇವಾಲಯ, ಮಂಡೇಪಂಡ, ಕುಕ್ಲೂರು ತಾತಂಡ, ವಿರಾಜಪೇಟೆ ಕೊಡವ ಸಮಾಜ, ಅರಮೇರಿ ಮುದ್ದಂಡ, ಐಚೆಟ್ಟಿರ, ಕಾಕೋಟುಪರಂಬು ಮಂಡೇಟಿರ, ಬಲ್ಲಚಂಡ, ಕರಡ ಕೋಡಿರ, ಬಾವಲಿ ಬಿದ್ದಂಡ ಐನ್ ಮನೆಗಳಿಗೆ ಕೊಡಗಿನ ಮ್ಯಾರಥಾನ್ ಪಟುಗಳು ಕ್ರೀಡಾಜ್ಯೋತಿಯೊಂದಿಗೆ ಸಾಗಿದ್ದು, ಗೌರವ ಸಲ್ಲಿಸಲಾಗಿದೆ ಎಂದು ಹೇಳಿದರು.
ಮಾ.೨೭ರಂದು ಬಾವಲಿ ಮಾದಂಡ, ಕಲಿಯಂಡ, ನೆಲ್ಜಿ ಮಾಳೆಯಂಡ, ಅಪ್ಪಚೆಟ್ಟೋಳಂಡ, ನಾಪೋಕ್ಲು ಕುಲ್ಲೇಟಿರ, ಬಿದ್ದಾಟಂಡ, ಕೊಳಕೇರಿ ಕುಂಡ್ಯೋಳಂಡ, ಮಡಿಕೇರಿ ಶಾಂತೆಯಂಡ ಮೂಲಕ ಮಾ.೨೮ರಂದು ಜನರಲ್ ತಿಮ್ಮಯ್ಯ ವೃತ್ತ ತಲುಪಲಿದೆ. ನಂತರ ಬೆಳಿಗ್ಗೆ ೯ಗಂಟೆಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಿಂದ ಮುಖ್ಯ ರಸ್ತೆಯ ಮೂಲಕ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನಕ್ಕೆ ಬೃಹತ್ ಮೆರವಣಿಗೆಯ ಮೂಲಕ ಕ್ರೀಡಾಜ್ಯೋತಿಯನ್ನು ಕೊಂಡೊಯ್ಯಲಾಗುವುದು.
ಉದ್ಘಾಟನಾ ಸಮಾರಂಭದ ಪ್ರಯುಕ್ತ ಪ್ರದರ್ಶನ ಪಂದ್ಯ ಮಧ್ಯಾಹ್ನ ೧೨.೩೦ ಗಂಟೆಗೆ ಕೊಡಗು ಜಿಲ್ಲಾಡಳಿತ ಹಾಗೂ ಆಯೋಜಕ ಕುಟುಂಬ ಮತ್ತು ಕೊಡವ ಹಾಕಿ ಅಕಾಡೆಮಿ ಘಿ೧ ಹಾಗೂ ಕರ್ನಾಟಕ ಘಿ೧ ತಂಡದ ನಡುವೆ ನಡೆಯಲಿದೆ ಎಂದು ರಶಿನ್ ಸುಬ್ಬಯ್ಯ ತಿಳಿಸಿದರು.
ಸೈಕ್ಲೋಥಾನ್ :: ಏ.೨೬ ರಂದು ನಗರದ ಜನರಲ್ ತಿಮ್ಮಯ್ಯ ವೃತ್ತದಿಂದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ವರೆಗೆ ಸುಮಾರು ೮೩ ಕಿ.ಮೀ ನ ಸೈಕ್ಲೋಥಾನ್ ನಡೆಯಲಿದೆ. ಇದಕ್ಕೆ ಅಂತರರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಹಾಗೂ ಸ್ಥಳೀಯ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದು, ವಿವಿಧ ವಿಭಾಗದಲ್ಲಿ ಬಹುಮಾನ ನೀಡಲಾಗುವುದು.
ಮೈದಾನದಲ್ಲಿ ಸುಮಾರು ೨೫ ಸಾವಿರಕ್ಕೂ ಹೆಚ್ಚು ಮಂದಿ ಕುಳಿತುಕೊಳ್ಳಬಹುದಾದ ಗ್ಯಾಲರಿ ನಿರ್ಮಾಣ ಮಾಡಲಾಗಿದ್ದು, ೩೫ ಪುಡ್ ಸ್ಟಾಲ್‌ಗಳು ಇರಲಿದೆ ಎಂದು ಹೇಳಿದರು.
ಮಹಿಳಾ ಹಾಕಿ ಸಂಭ್ರಮ: ಬೆಳ್ಳಿಮಹೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ಮುದ್ದಂಡ ಹಾಕಿ ಉತ್ಸವದಲ್ಲಿ ಮಹಿಳಾ ತಂಡಗಳ ನಡುವೆ ಹಾಕಿ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಈಗಾಗಲೇ ೪೦ ತಂಡಗಳು ನೋಂದಾಯಿಸಿಕೊಂಡಿವೆ. ನೋಂದಣಿಯ ಕೊನೆಯ ದಿನಾಂಕ ಏ.೧೦ ಆಗಿರುವುದರಿಂದ ಮತ್ತಷ್ಟು ತಂಡಗಳು ಸೇರ್ಪಡೆಗೊಳ್ಳಲಿವೆ. ಮೂರನೇ ಮೈದಾನದಲ್ಲಿ ಮಹಿಳಾ ಹಾಕಿ ಪಂದ್ಯಾವಳಿ ನಡೆಯಲಿದೆ ಎಂದರು.
ಪಂದ್ಯಾವಳಿಯ ವಿಜೇತರಿಗೆ ರೂ.೨ ಲಕ್ಷ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ೧ ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಸೆಮಿಫೈನಲ್ ಸಂದರ್ಭ ಭಾರತೀಯ ಮಹಿಳಾ ಹಾಕಿ ತಂಡದ ನಾಯಕಿ ಲಾಲ್ ರಿಮ್ ಸಿಯಾಮಿ ಅವರು ಆಗಮಿಸಿದ ಹಾಕಿ ಕ್ರೀಡೆಯ ಕುರಿತು ಮಾಹಿತಿ ನೀಡಲಿದ್ದಾರೆ. ಭಾರತೀಯ ಪುರುಷರ ಹಾಕಿ ತಂಡದ ನಾಯಕ ಹಾಗೂ ಒಲಂಪಿಯನ್ ಮನ್ ಪ್ರೀತ್ ಸಿಂಗ್ ಕೂಡ ಪಂದ್ಯಾವಳಿಯ ಸಂದರ್ಭ ಪಾಲ್ಗೊಳ್ಳಲಿದ್ದಾರೆ. ಸೆಮಿ ಫೈನಲ್ ಪಂದ್ಯಾವಳಿಗೆ ಹಿರಿಯ ರಾಜಕರಣಿ ಅಜಯ್ ಮಕೆನ್ ಆಗಮಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಮಾ.೨೮ ರಂದು ಮಡಿಕೇರಿಯ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಹಾಕಿ ಉತ್ಸವ ಉದ್ಘಾಟನೆಗೊಳ್ಳಲಿದೆ. ಅಂದು ಬೆಳಿಗ್ಗೆ ೯.೪೫ಗಂಟೆಗೆ ನಗರದ ಜನರಲ್ ತಿಮ್ಮಯ್ಯ ವೃತ್ತದಿಂದ ಫೀ.ಮಾ.ಕಾರ್ಯಪ್ಪ ಕಾಲೇಜು ಮೈದಾನದವರೆಗೆ ಕೊಡವ ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಮೆರವಣಿಗೆ ನಡೆಯಲಿದ್ದು, ನಂತರ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಲಾಗುವುದು.
ಸಭಾ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಒಡೆಯರ್, ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು, ಮಡಿಕೇರಿ ಶಾಸಕ ಡಾ.ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ, ಅರ್ಜುನ ಪ್ರಶಸ್ತಿ ವಿಜೇತ ಒಲಂಪಿಯನ್ ಅಂಜಪರವಂಡ ಬಿ.ಸುಬ್ಬಯ್ಯ, ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ, ಅತಿಥಿಗಳಾಗಿ ಜಿಲ್ಲಾಧಿಕಾರಿ ವೆಂಕಟರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಕೊಡಗು ವಿಶ್ವ ವಿದ್ಯಾನಿಲಯದ ಉಪ ಕುಲಪತಿ ಅಶೋಕ್ ಸಂಗಪ್ಪ ಆಲೂರ, ಮಾಜಿ ಶಾಸಕರುಗಳಾದ ಮಂಡೇಪಂಡ ಅಪ್ಪಚ್ಚುರಂಜನ್, ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯರುಗಳಾದ ಶಾಂತೆಯಂಡ ವೀಣಾ ಅಚ್ಚಯ್ಯ, ಮಂಡೇಪಂಡ ಸುನಿಲ್ ಸುಬ್ರಮಣಿ ಹಾಗೂ ಚೆಪ್ಪುಡಿರ ಅರುಣ್ ಮಾಚಯ್ಯ ಪಾಲ್ಗೊಳ್ಳಲಿದ್ದಾರೆ. ಮುದ್ದಂಡ ಕುಟುಂಬದ ಅಧ್ಯಕ್ಷ ಮುದ್ದಂಡ ಬಿ.ದೇವಯ್ಯ ಹಾಗೂ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ ಉಪಸ್ಥಿತರಿರುವರು.
ಮುದ್ದಂಡ ಹಾಕಿ ಹಬ್ಬದ ಉಪಾಧ್ಯಕ್ಷ ಡೀನ್ ಬೋಪಣ್ಣ ಮಾತನಾಡಿ, ಪಂದ್ಯಾವಳಿ ವೀಕ್ಷಣೆಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಸೂಕ್ತವಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ವಿಧಾನ ಪರಿಷತ್ ಸದಸ್ಯ ಸುಜಾಕುಶಾಲಪ್ಪ ಅವರ ಅನುದಾನದಲ್ಲಿ ೧,೫೦೦ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ದಿಲೀಪ್ ನಾಚಪ್ಪ ಹಾಗೂ ಯಲದಾಳು ಮನೋಜ್ ಬೋಪಯ್ಯ ಅವರ ಜಾಗದಲ್ಲಿ ೧,೦೦೦ ವಾಹನದ ನಿಲುಗಡೆ ವ್ಯವಸ್ಥೆ ಮಾಡಲಾಗಿದ್ದು, ಸುಮಾರು ೨,೫೦೦ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಮುದ್ದಂಡ ಒಕ್ಕದ ಅಧ್ಯಕ್ಷ ಮುದ್ದಂಡ ಬಿ.ದೇವಯ್ಯ ಮಾತನಾಡಿ, ಮುದ್ದಂಡ ಕಪ್ ಹಾಕಿ ಉತ್ಸವವು ಜಿಲ್ಲೆಯಲ್ಲಿ ದಸರಾ ಹಬ್ಬದಂತೆ ನಡೆಯಲಿದ್ದು, ಕೊಡವ ಜನಾಂಗ ಹಾಗೂ ಕೊಡವೇತರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಕೋರಿದರು.
ಮುದ್ದಂಡ ಹಾಕಿ ಹಬ್ಬದ ಕಾರ್ಯದರ್ಶಿ ಆದ್ಯ ಪೂವಣ್ಣ ಉಪಸ್ಥಿತರಿದ್ದರು.
Kodagu
ಪೊನ್ನಂಪೇಟೆ ಪಟ್ಟಣ ಪಂಚಾಯಿತಿ: ಚೊಚ್ಚಲ ಬಜೆಟ್ ಮಂಡನೆ

ಪೊನ್ನಂಪೇಟೆ : ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿದ ನಂತರ ಇದೇ ಮೊದಲ ಬಾರಿಗೆ ಪೊನ್ನಂಪೇಟೆ ಪಟ್ಟಣ ಪಂಚಾಯಿತಿಯ ಬಜೆಟ್ (ಆಯ-ವ್ಯಯ) ಮಂಡನೆಯಾಗಿದೆ. ಪೊನ್ನಂಪೇಟೆ ಪಟ್ಟಣ ಪಂಚಾಯಿತಿಯ ಚೊಚ್ಚಲ ಮತ್ತು 2025-26ನೇ ಸಾಲಿನ ಬಜೆಟ್ ಮೊತ್ತವು ಒಟ್ಟು ರೂ. 71748000/- ಆಗಿರುತ್ತದೆ. ಪೊನ್ನಂಪೇಟೆ ತಾಲೂಕು ಘೋಷಣೆಯಾದ ನಂತರ ಕೇಂದ್ರ ಸ್ಥಾನ ಹೊಂದಿರುವ ಪೊನ್ನಂಪೇಟೆ ಪಟ್ಟಣದಲ್ಲಿದ್ದ ಗ್ರಾಮ ಪಂಚಾಯಿತಿ ಸರಕಾರದ ನಿಯಮಾವಳಿಯಂತೆ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿತ್ತು.
ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷರಾದ ಆಲೀರ ಎಂ. ರಶೀದ್ ಮುಂದಿನ ಲೆಕ್ಕಪತ್ರ ಸಾಲಿನ ಬಜೆಟ್ ಅನ್ನು ಮಂಡಿಸಿದರು. ಪೊನ್ನಂಪೇಟೆಯು ದಿನೇ-ದಿನೇ ಬೆಳೆಯುತ್ತಿರುವ ಪಟ್ಟಣವಾಗಿದ್ದು, ಜನತೆಗೆ ಮೂಲಭೂತ ಸೌಕರ್ಯ ಒದಗಿಸುವುದು ಪಟ್ಟಣ ಪಂಚಾಯಿತಿಯ ಆದ್ಯ ಕರ್ತವ್ಯವಾಗಿರುತ್ತದೆ. ರಸ್ತೆ, ನೀರು, ಚರಂಡಿ, ನೈರ್ಮಲ್ಯ, ಬೀದಿ ದೀಪ ವ್ಯವಸ್ಥೆಗಳನ್ನು ಪಟ್ಟಣದ ಪ್ರಸಕ್ತ ಜನಸಂಖ್ಯೆಗೆ ಅನುಗುಣವಾಗಿ ವ್ಶೆಜ್ಞಾನಿಕ ರೂಪದಲ್ಲಿ ಜಾರಿಗೊಳಿಸಬೇಕಾಗಿದೆ ಎಂದು ಹೇಳಿದ ರಶೀದ್, ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಅತ್ಯುತ್ತಮ ಮೂಲಭೂತ ಸೌಲಭ್ಯ ಒದಗಿಸುವುದು ಮತ್ತು ಪಟ್ಟಣ ಪಂಚಾಯಿತಿಯನ್ನು ಆರ್ಥಿಕವಾಗಿ ಸದೃಡಗೊಳಿಸುವುದು ಮೊದಲ ಆದ್ಯತೆಯಾಗಿರುತ್ತದೆ ಎಂದು ತಿಳಿಸಿದರು.
ಆರ್ಥಿಕ ಕ್ರೋಡೀಕರಣ ಮತ್ತು ಜನರ ಬೇಡಿಕೆಯನ್ನು ಪರಿಗಣಿಸಿ ಪ್ರಸಕ್ತ ಬಜೆಟ್ ಅನ್ನು ತಯಾರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅದಕ್ಕೆ ತಕ್ಕ ಆದಾಯ ಮೂಲಗಳಾದ ತೆರಿಗೆ ಸಂಗ್ರಹ ಹಾಗೂ ಸರಕಾರದ ವಿವಿಧ ಯೋಜನೆಯ ಅನುದಾನ ಪಡೆಯಲು ನಿರ್ಧರಿಸಲಾಗಿದೆ. ಇವೆಲ್ಲವನ್ನು ಈ ಬಜೆಟ್ ಒಳಗೊಂಡಿದ್ದು, ಪಟ್ಟಣ ಪಂಚಾಯಿತಿಗೆ ಬರುವ ಆದಾಯಗಳಲ್ಲಿ ಆಸ್ತಿ ತೆರಿಗೆ, ವಾಣಿಜ್ಯ ಮಳಿಗೆ ಬಾಡಿಗೆ, ಉದ್ದಿಮೆ ಪರವಾನಗಿ, ಮಾರುಕಟ್ಟೆ ಬಾಡಿಗೆಗಳು ಹಾಗೂ ಇತರೆ ಶುಲ್ಕಗಳು ಮತ್ತು ಸರ್ಕಾರದಿಂದ ಬಿಡುಗಡೆ ಆಗುವ ಎಸ್.ಎಫ್.ಸಿ. ಅನುದಾನ, ಹಣಕಾಸು ಆಯೋಗದ ಅನುದಾನ, ಎಸ್.ಎಫ್.ಸಿ.ವಿಶೇಷ ಅನುದಾನ ಪ್ರಮುಖವಾಗಿವೆ. ಇವೆಲ್ಲವನ್ನು ಅಂದಾಜಿಸಿಕೊಂಡು ಪೊನ್ನಂಪೇಟೆ ಪಟ್ಟಣ ಪಂಚಾಯಿತಿಗೆ ಹೊಸದಾಗಿ ಸೇರಿಕೊಂಡಿರುವ ವಿಭಾಗಗಳಲ್ಲಿ ಚರಂಡಿ ನಿರ್ಮಾಣ, ಬೀದಿ ದೀಪ ಅಳವಡಿಕೆ, ನೀರು ವಿತರಣಾ ವ್ಯವಸ್ಥೆ, ಒಳಚರಂಡಿ ವ್ಯವಸ್ಥೆಗೆ ಪ್ರಮುಖ ಆದ್ಯತೆ ಮತ್ತು ವಾಣಿಜ್ಯ ಮಳಿಗೆಗಳ ಮತ್ತು ಸ್ಥಿರಾಸ್ತಿ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ ಎಂದು ರಶೀದ್ ತಮ್ಮ ಬಜೆಟ್ ಭಾಷಣದಲ್ಲಿ ವಿವರಿಸಿದರು.
2025-26ನೇ ಸಾಲಿನಲ್ಲಿ ಒಟ್ಟು ರೂ. 70826727 ಮೊತ್ತದ ಆದಾಯವನ್ನು ನಿರೀಕ್ಷಿಸಲಾಗಿದೆ. ಈ ಪೈಕಿ ಎಸ್.ಎಫ್.ಸಿ. ವಿಶೇಷ ಅನುದಾನ ರೂ. 150 ಲಕ್ಷ, ಎಸ್.ಎಫ್.ಸಿ. ಅನುದಾನ ರೂ. 70 ಲಕ್ಷ, 15ನೇ ಹಣಕಾಸು ಅನುದಾನ ರೂ. 80ಲಕ್ಷ, ವಿದ್ಯುತ್ ಅನುದಾನ ರೂ. 75 ಲಕ್ಷ, ನೀರಿನ ಅಭಾವ ಅನುದಾನ ರೂ. 10ಲಕ್ಷ, ಎಸ್.ಎಫ್.ಸಿ. ವೇತನ ಅನುದಾನ ರೂ. 74.90ಲಕ್ಷ, ಕಟ್ಟಡ ಕಾಯ್ದೆಗಳಿಗೆ ಸಂಬಂಧಿಸಿದ ಶುಲ್ಕಗಳು ರೂ.5ಲಕ್ಷ, ಮಾರುಕಟ್ಟೆಗಳ,ವಾಹನ ನಿಲುಗಡೆ ಮತ್ತು ಸಂತೆ ಸುಂಕದ ಹರಾಜಿನ ಆದಾಯ ರೂ. 7.5ಲಕ್ಷ, ವಾಣಿಜ್ಯ ಮಳಿಗೆ ಬಾಡಿಗೆ ರೂ. 6.86ಲಕ್ಷ, ಆಸ್ತಿ ತೆರಿಗೆ ರೂ. 51.58ಲಕ್ಷ, ಉದ್ದಿಮೆ ಪರವಾನಿಗೆ ರೂ. 5ಲಕ್ಷ, ನೈರ್ಮಲ್ಯ ಮತ್ತು ಘನತ್ಯಾಜ್ಯ ವಸ್ತು ನಿರ್ವಹಣೆಗೆ ರೂ. 4.5ಲಕ್ಷ, ಪರಿಶಿಷ್ಟ ಜಾತಿ/ಪ.ಪಂ ಶ್ರೇಯೋಭಿವೃದ್ಧಿ ನಿಧಿಯಿಂದ ರೂ. 5ಲಕ್ಷ, ಇತರೆ ಬಡಜನರ ಕಲ್ಯಾಣ ನಿಧಿಯ ಶೇ.7.25%ರಂತೆ ರೂ.3ಲಕ್ಷ, ಅಂಗವಿಕಲರಿಗೆ ಶ್ರೇಯೋಭಿವೃದ್ಧಿ ನಿಧಿಯ ಶೇ.5%ರಂತೆ ರೂ. 2ಲಕ್ಷ ಮತ್ತು ಸ್ವಚ್ಛ್ ಭಾರತ ಯೋಜನೆ ಅನುದಾನದಿಂದ ರೂ. 5ಲಕ್ಷ ಅನುದಾನದ ನಿರೀಕ್ಷೆ ಹೊಂದಲಾಗಿದೆ ಎಂದು ರಶೀದ್ ಹೇಳಿದರು.
ಪ್ರಸ್ತುತ ಹಣಕಾಸು ಸಾಲಿನಲ್ಲಿ ಒಟ್ಟು ರೂ. 71110000/- ಮೊತ್ತದ ಖರ್ಚನ್ನು ಅಂದಾಜಿಸಲಾಗಿದೆ. ಈ ಪೈಕಿ
ನೌಕರರ ವೇತನಕ್ಕೆ ರೂ.1.05 ಕೋಟಿ, 15ನೇ ಹಣಕಾಸು ಯೋಜನೆ ಕಾಮಗಾರಿಗಳಿಗಾಗಿ ರೂ.80ಲಕ್ಷ, ನೈರ್ಮಲ್ಯ ಮತ್ತು ಘನತ್ಯಾಜ್ಯ ವಸ್ತು ನಿರ್ವಹಣೆಗೆ ರೂ. 86ಲಕ್ಷ, ನೀರು ಸರಬರಾಜು ಮೂಲಗಳು ಮತು ವಿತರಣಾ ವ್ಯವಸ್ಥೆ ಮತ್ತು ನಿರ್ವಹಣೆಗೆ ರೂ. 35ಲಕ್ಷ, ಬೀದಿ ದೀಪಗಳ ಅಭಿವೃದ್ಧಿಗಾಗಿ ರೂ. 10ಲಕ್ಷ, ಉದ್ಯಾನವನಗಳ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ರೂ.15ಲಕ್ಷ, ನಾಗರಿಕ ವಿನ್ಯಾಸಗಳಿಗಾಗಿ ರೂ. 5ಲಕ್ಷ, ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳ ನಿರ್ಮಾಣ ಕಾಮಗಾರಿಗಳಿಗೆ ರೂ. 20ಲಕ್ಷ, ಚರಂಡಿಗಳಿಗಾಗಿ (ರಸ್ತೆ ಬದಿ ಮತ್ತು ಮಳೆ ನೀರು ಚರಂಡಿ) ರೂ.25ಲಕ್ಷ, ಕಛೇರಿ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ರೂ. 30ಲಕ್ಷ, ಮಾರುಕಟ್ಟೆ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ರೂ.25ಲಕ್ಷ, ಕಛೇರಿ ಉಪಕರಣಗಳ ಖರೀದಿಗಾಗಿ ರೂ. 7ಲಕ್ಷ, ನೀರು ಸರಬರಾಜು ಮತ್ತು ಬೀದಿ ದೀಪಗಳ ವಿದ್ಯುತ್ ವೆಚ್ಚಕ್ಕೆ ರೂ. 77ಲಕ್ಷ, ಪರಿಶಿಷ್ಟ ಜಾತಿ/ಪ.ಪಂ ಶ್ರೇಯೋಭಿವೃದ್ಧಿಗೆ ಯೋಜನೆಗಳಿಗಾಗಿ ರೂ. 5ಲಕ್ಷ, ಇತರೆ ಬಡಜನರ ಕಲ್ಯಾಣ ನಿಧಿ ಶೇ.7.25%ರ ಯೋಜನೆಗಳಿಗೆ ರೂ.3ಲಕ್ಷ ಮತ್ತು ಅಂಗವಿಕಲರಿಗೆ ಶ್ರೇಯೋಭಿವೃದ್ಧಿಯ ಶೇ. 5%ರ ಯೋಜನೆಗಳಿಗೆ ರೂ. 2ಲಕ್ಷ ಅನುದಾನವನ್ನು ಖರ್ಚು ಮಾಡುವ ಗುರಿ ಹೊಂದಲಾಗಿದೆ ಎಂದು ಬಜೆಟ್ ಮಂಡಿಸಿದ ರಶೀದ್ ಮಾಹಿತಿ ನೀಡಿದರು. ಪೊನ್ನಂಪೇಟೆ ಪಟ್ಟಣ ಪಂಚಾಯಿತಿಯ 2025 26 ನೇ ಸಾಲಿನ ಆಯ-ವ್ಯಯದ ಘೋಸ್ವಾರೆಯಲ್ಲಿ ಒಟ್ಟು ರೂ. 638641/- ಮೊತ್ತದ ಉಳಿತಾಯ ಸಾಧಿಸುವ ಗುರಿಯೂ ಹೊಂದಲಾಗಿದೆ ಎಂದು ರಶೀದ್ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. ಸಭೆಯಲ್ಲಿ ಮುಖ್ಯಾಧಿಕಾರಿಗಳಾದ ಎಸ್. ಗೋಪಿ ಸೇರಿದಂತೆ ಸದಸ್ಯರು ಪಾಲ್ಗೊಂಡಿದ್ದರು.
Kodagu
ನೇರಳೆ ಹಣ್ಣು ಕುಯ್ಯಲು ಹೋಗಿ ಮರದಿಂದ ಬಿದ್ದು ಬಾಲಕ ಸಾ*ವು

ಮರಪಾಲ ಚಿನೀಹಡ್ಲು ಗ್ರಾಮದ ನಿವಾಸಿ ದೇವಮ್ಮರವರ ಪುತ್ರ ತಿತಿಮತಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತಿದ್ದ ಬಾಲಕ ರಮೇಶ್ ಇಂದು ಶಾಲೆಗೆ ಚಕ್ಕರ್ ಹೊಡೆದು ಸ್ನೇಹಿತರೊಂದಿಗೆ ಮನೆಯ ಪಕ್ಕದಲ್ಲಿರುವ ನೇರಳೆ ಮರದಲ್ಲಿರುವ ನೇರಳೆ ಹಣ್ಣನ್ನು ಕುಯ್ಯಲು ಮರವೇರುತಿದ್ದ ಸಂದರ್ಭ ಕಾಲಿಗೆ ಆಯಾ ತಪ್ಪಿ ಮರದಿಂದ ಬಿದ್ದು ಪ್ರಾಣ ಬಿಟ್ಟಿರುತ್ತಾನೆ.
ಸ್ಥಳಕ್ಕೆ ಠಾಣಾಧಿಕಾರಿಗಳಾದ ಪ್ರದೀಪ್ ಕುಮಾರ್ ಭೇಟಿನೀಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ
-
Kodagu20 hours ago
ಬೇಳೂರು ಬಾಣೆಯಲ್ಲಿ ಸ್ಟೇರಿಂಗ್ ಲಾಕ್ : ಕಾರು ಪಲ್ಟಿ
-
Kodagu17 hours ago
ಕೊಡಗಿನ ಭರವಸೆಯ ಪ್ರತಿಭೆ ವರ್ತ ಕಾಳಿ ಕಿರುಚಿತ್ರದ ನಿರ್ದೇಶಕ: ಕೃತಾರ್ಥ ಮಂಡೆಕುಟ್ಟಂಡ
-
State13 hours ago
ಬಿಜೆಪಿ ಶೋಕಾಸ್ ನೋಟಿಸ್ ಕುರಿತು ಶಾಸಕ ಎಸ್ಟಿಎಸ್ ಫಸ್ಟ್ ರಿಯಾಕ್ಷನ್
-
Mysore16 hours ago
ಎಲ್ಲಾ ಪಕ್ಷದವರ ಮೇಲೂ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ: ಯತೀಂದ್ರ ಸಿದ್ದರಾಮಯ್ಯ
-
Mandya15 hours ago
ಭೂ ದಾಖಲೆ ಹೊಂದಿರುವವರನ್ನು ಓಕ್ಕಲೆಬ್ಬಿಸಬೇಡಿ : ಎನ್ ಚೆಲುವರಾಯಸ್ವಾಮಿ
-
Mandya11 hours ago
ಎಂ.ಕೆ.ಸೋಮಶೇಖರ್ಗೆ ರಾಜ್ಯಮಟ್ಟದ ಛಾಯಗ್ರಾಹಕ ಹಾಗೂ ಕಲಾವಿದ ಪ್ರಶಸ್ತಿ ಪ್ರಧಾನ
-
State10 hours ago
ಬಿಜೆಪಿಯಿಂದ ಆರು ವರ್ಷಗಳ ಕಾಲ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ
-
Hassan14 hours ago
1 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನರೆವೇರಿಸಿದ ಸ್ವರೂಪ್ ಪ್ರಕಾಶ್