Connect with us

Hassan

ತಂಬಾಕು ಹರಾಜು ಮಾರುಕಟ್ಟೆಯನ್ನು ನಿಲ್ಲಿಸಿ: ರೈತರಿಂದ ಪ್ರತಿಭಟನೆ

Published

on

ವರದಿ: ಶಂಕರ್ ಕಟ್ಟೆಮಳಲವಾಡಿ

ಹುಣಸೂರು: ಐಟಿಸಿ ಕಂಪನಿಯವರು ಕಳೆದ ವರ್ಷ ರೈತರು ಬೆಳೆದ ಹೊಗೆ ಸೊಪ್ಪು ಇನ್ನೂ ಮಾರುಕಟ್ಟೆ ಆಗಿಲ್ಲ, ಆದರೆ ಪುನಃ ಎರಡನೇ ಬೆಳೆಗೆ ಬೀಜ ಕೊಟ್ಟು ಹಾಳು ಮಾಡುತ್ತಿದ್ದಾರೆ.

2, 3, 4ನೇ ಗ್ರೇಡ್ ಹೋಗೆ ಸೊಪ್ಪಿಗೆ 250, 240, 220 ರೂ ಬೆಲೆಗೆ ಖರೀದಿ ಮಾಡುತ್ತಿದ್ದಾರೆ ಬಹಳ ತೊಂದರೆಯಾಗುತ್ತಿದೆ 320 ರೂ. ಗೆ ಖರೀದಿಸುವವರೆಗೆ ಮಾರುಕಟ್ಟೆ ಮಾಡಲು ಬಿಡುವುದಿಲ್ಲ ಎಂದು ರೈತ ನಾಗೇಗೌಡ, ಕರೀಂ ಸಾಬ್ ಹಾಗೂ ರೈತ್ ಸಂಘದ ಕಾರ್ಯದರ್ಶಿ ರಾಮೇಗೌಡ ಆರೋಪಿಸಿದರು.


ಇವರು ಗುರುವಾರ ತಾಲೂಕಿನ ಕಟ್ಟೆಮಳಲವಾಡಿ ತಂಬಾಕು ಹರಾಜು ಮಾರುಕಟ್ಟೆ ಬಂದ್ ಮಾಡಿ ಎಂದು ರೈತರು ಕಚೇರಿಯ ಮುಂದೆ ಜಮಾಗೊಂಡು ಪ್ರತಿಭಟಿಸಿದರು.

ಈ ಪ್ರತಿಭಟನೆಯಲ್ಲಿ ನೂರಾರು ರೈತರು ಭಾಗವಹಿಸಿದ್ದರು.

Continue Reading

Hassan

ಮಾ. 8ಕ್ಕೆ ಮಹಿಳಾ ದಿನಾಚರಣೆ ಅಂಗವಾಗಿ ಧಾರವಾಡದಲ್ಲಿ ಮ್ಯಾರಥಾನ್: ಶೈಲಜಾ

Published

on

ಹಾಸನ:  ಮಹಿಳಾ ದಿನಾಚರಣೆ ಅಂಗವಾಗಿ ಮಾರ್ಚ್. 8 ರಂದು ಧಾರವಾಡದಲ್ಲಿ ಮ್ಯಾರಥಾನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಶೈಲಜಾ ತಿಳಿಸಿದ್ದಾರೆ.

ನಗರದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಸರ್ಕಾರಿ ನೌಕರರ ಸಮಸ್ಯೆಗಳಿಗೆ ಸ್ಪಂದನೆ, ಅವರ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುವ ಸದುದ್ದೇಶದಿಂದ 2023ರಲ್ಲಿ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಇದೀಗ ಹಾಸನ ಜಿಲ್ಲಾ ಘಟಕವನ್ನೂ ರಚಿಸಲಾಗಿದೆ ಎಂದರು.

ಹಾಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಅವರ ಮಾರ್ಗದರ್ಶನದಲ್ಲಿ ಮಹಿಳಾ ನೌಕರರ ಸಂಘವು ಅದರ ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ. ಮಹಿಳಾ ನೌಕರರಿಗೆ ಋತುಚಕ್ರ ರಜೆ ಸೇರಿದಂತೆ ಹಲವು ಹಕ್ಕುಗಳಿಗಾಗಿ ಷಡಾಕ್ಷರಿ ಅವರು ಶ್ರಮಿಸುತ್ತಿರುವುದನ್ನು ಶ್ಲಾಘಿಸಿದರು.

ಮಹಿಳಾ ನೌಕರರಿಗೆ ವಿಶೇಷವಾದ ಹಲವು ಸಮಸ್ಯೆಗಳಿದ್ದು, ಅವುಗಳನ್ನು ಸಂಘದ ವೇದಿಕೆಯಲ್ಲಿ ಚರ್ಚಿಸಿ ಸರ್ಕಾರದ ಗಮನಕ್ಕೆ ತರಲಾಗುವುದು. ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಹಿಳಾ ನೌಕರರ ಪರವಾಗಿ ಅನೇಕ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ. ಬರುವ ಮಾರ್ಚ್. 8 ರಂದು ಮಹಿಳಾ ದಿನಾಚರಣೆ ಅಂಗವಾಗಿ ಧಾರವಾಡದಲ್ಲಿ ಮ್ಯಾರಥಾನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.


ಹಾಸನ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದ್ದು, ಜಿಲ್ಲಾಧ್ಯಕ್ಷರಾಗಿ ಕೆ. ವೀಣಾ, ಪ್ರಧಾನ ಕಾರ್ಯದರ್ಶಿಯಾಗಿ ಸಾವಿತ್ರಮ್ಮ ಕೆ.ಜಿ., ಖಜಾಂಚಿಯಾಗಿ ಪುಷ್ಪ ಡಿ. ಆಯ್ಕೆಯಾಗಿದ್ದಾರೆ. ಹಿರಿಯ ಉಪಾಧ್ಯಕ್ಷರಾಗಿ ದಾಕ್ಷಾಯಿಣಿ, ಉಪಾಧ್ಯಕ್ಷರಾಗಿ ನಂದಿನಿ, ಸುಧಾಮಣಿ ಬಿ.ಪಿ., ಮಧುಮತಿ, ಶೃತಿ ಬಿ.ಎಂ. ಹಾಗೂ ಪುಷ್ಪ ಡಿ.ಸಿ. ಅವರನ್ನು ಆಯ್ಕೆ ಮಾಡಲಾಗಿದೆ. ಗೌರವಾಧ್ಯಕ್ಷರಾಗಿ ಹಿಮ್ಸ್‌ನ ಅರವಳಿಕೆ ತಜ್ಞರಾದ ಡಾ. ಅನುಪಮ ಅವರನ್ನು ಆಯ್ಕೆ ಮಾಡಲಾಗಿದ್ದು, ಶೀಘ್ರದಲ್ಲೇ ಸಂಘದ ಉದ್ಘಾಟನೆ ನಡೆಯಲಿದೆ ಎಂದು ಶೈಲಜಾ ತಿಳಿಸಿದರು.

ಮುಂದಿನ ದಿನಗಳಲ್ಲಿ ಮಹಿಳೆಯರ ವಿವಿಧ ಸಮಸ್ಯೆಗಳಿಗೆ ಸ್ಪಂದಿಸುವುದು, ಸಂಘಟನೆ ಬಲಪಡಿಸುವುದು ಹಾಗೂ ಆರೋಗ್ಯ ಕುರಿತು ಅರಿವು ಮೂಡಿಸುವ ಮೂಲಕ ಮಹಿಳಾ ನೌಕರರ ಧ್ವನಿಯಾಗಿ ಸಂಘ ಕಾರ್ಯನಿರ್ವಹಿಸಲಿದೆ ಎಂಬ ಭರವಸೆ ನೀಡಿದರು.

ಹಾಸನದಲ್ಲಿ ಎಲ್ಲ ರೀತಿಯ ಸಹಕಾರ ನೀಡಿದ ರಾಜ್ಯ ಉಪಾಧ್ಯಕ್ಷ ಕೆ.ಎಂ. ಶ್ರೀನಿವಾಸ್ ಸೇರಿದಂತೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಜಿಲ್ಲಾಧ್ಯಕ್ಷರಾದ ಕೆ. ವೀಣಾ ಮಾತನಾಡಿ, ವಿವಿಧ ಇಲಾಖೆಗಳಲ್ಲಿನ ಮಹಿಳಾ ನೌಕರರಿಗೆ ಸಂಘಟನೆಯ ಅಗತ್ಯವಿದ್ದು, ಮಹಿಳಾ ಶೋಷಣೆ, ಶೌಚಾಲಯ, ವಿಶ್ರಾಂತಿ ಕೊಠಡಿ ಸೇರಿದಂತೆ ಮೂಲಭೂತ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾ ಮಹಿಳಾ ನೌಕರರ ಸಂಘ ಸ್ಥಾಪಿಸಲಾಗಿದೆ ಎಂದು ಹೇಳಿದರು.


ಸುದ್ದಿಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷೆ ರಮಾ, ಪದಾಧಿಕಾರಿಗಳಾದ ರಾಜೇಶ್ವರಿ, ಮಂಗಳಾ, ಇಂದ್ರಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.

Continue Reading

Hassan

ಶಾಸಕ ಶಿವಲಿಂಗೇಗೌಡ ಸದನದಲ್ಲಿ ಅವಹೇಳನಕಾರಿ ಹೇಳಿಕೆ: ಸಭಾಧ್ಯಕ್ಷರ ರಾಜೀನಾಮೆಗೆ ದೇವರಾಜೇಗೌಡ ಆಗ್ರಹ

Published

on

ಹಾಸನ: ವಿಧಾನಸಭಾ ಸದನದಲ್ಲಿ ಶಾಸಕ ಶಿವಲಿಂಗೇಗೌಡ ಅವರು ಬಳಸಿದ ಪದಗಳು ಎಲ್ಲರೂ ತಲೆಬಗ್ಗಿಸುವಂತಿದ್ದು, ಸದನದ ಘನತೆಗೆ ಧಕ್ಕೆ ತಂದಿವೆ ಎಂದು ದೇವರಾಜೇಗೌಡ ಅವರು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತೀವ್ರವಾಗಿ ಖಂಡಿಸಿದರು.

ವಿರೋಧ ಪಕ್ಷದವರಿಗೆ ಸದನದಲ್ಲಿ ಖಂಡನೆ ವ್ಯಕ್ತಪಡಿಸುವ ಹಕ್ಕಿದ್ದು, ಅದನ್ನು ಬಿಜೆಪಿ ಪಕ್ಷ ಬಳಸಿದೆ. ಆದರೆ ಈ ಎಲ್ಲ ಘಟನೆಗಳನ್ನು ನೋಡುತ್ತಾ ಸಭಾಧ್ಯಕ್ಷರು ನಗುತ್ತಾ ಕುಳಿತರೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದೇ ಅತ್ಯಂತ ಆಕ್ಷೇಪಾರ್ಹ ಸಂಗತಿ ಎಂದು ಆರೋಪಿಸಿದರು. ಇಂತಹ ವರ್ತನೆಯಿಂದ ಸಭಾಧ್ಯಕ್ಷರು ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಆರ್‌ಎಸ್‌ಎಸ್ ವಿಶ್ವಾದ್ಯಂತ ಒಪ್ಪಿಗೆಯಾದ ಸಂಘವಾಗಿದ್ದು, ರಾಜ್ಯದಲ್ಲಿ ಹಿಂದುತ್ವ ಉಳಿದಿರುವುದು ಆರ್‌ಎಸ್‌ಎಸ್‌ನಿಂದಲೇ ಎಂದು ದೇವರಾಜೇಗೌಡ ಹೇಳಿದರು. ಸದನದಲ್ಲಿ ಶಾಸಕ ಶಿವಲಿಂಗೇಗೌಡ ಅವರು ಹೆಣ್ಣುಮಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು, ಇದಕ್ಕೂ ಸಭಾಧ್ಯಕ್ಷರು ಯಾವುದೇ ಕ್ರಮ ಕೈಗೊಳ್ಳದಿರುವುದು ಖಂಡನೀಯ ಎಂದು ಹೇಳಿದರು.


ಅದೇ ಸದನದಲ್ಲಿ ಪಾಕಿಸ್ತಾನ ಅಥವಾ ಮುಸ್ಲಿಂ ಮಹಿಳೆಯರ ಕುರಿತು ಮಾತನಾಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ಹಿಂದೂ ಹೆಣ್ಣುಮಗಳ ಬಗ್ಗೆ ಅವಹೇಳನ ಮಾಡಿದಾಗ ದನಿ ಎತ್ತದಿರುವುದು ದ್ವಂದ್ವ ನಿಲುವು ಎಂದು ಸಭಾಧ್ಯಕ್ಷರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ಶಿವಲಿಂಗೇಗೌಡ ಅವರು ಧರ್ಮದ ಮಾನವನ್ನು ಹರಾಜು ಹಾಕುತ್ತಿರುವುದು ಅತೀ ಖಂಡನೀಯ ಎಂದರು.

ದೇವರಾಜೇಗೌಡ ಅವರು ಮಾತನಾಡಿ, ಶಾಸಕ ಶಿವಲಿಂಗೇಗೌಡ ಅವರಿಗೆ ಬಹಿರಂಗ ಎಚ್ಚರಿಕೆ ನೀಡಿದರು. ನೀವು ಯಾರ ಕಾಲು ಹಿಡಿದು ಬೇಡಿಕೊಂಡಿದ್ದೀರೋ ನನಗೆ ತಿಳಿದಿದೆ. ಸರ್ಕಾರಿ ಪಾರ್ಕ್ ಜಾಗವನ್ನು ಅಕ್ರಮವಾಗಿ ಕಬಳಿಸಿಕೊಂಡ ಪ್ರಕರಣದಲ್ಲಿ ರೋಹಿಣಿ ಸಿಂಧೂರಿ ಅವರ ಅಧಿಕಾರಾವಧಿಯಲ್ಲಿ ‘ಭೂಮಿ ಕಳ್ಳ’ ಎಂದು ವರದಿ ಸಲ್ಲಿಸಲಾಗಿತ್ತು ಎಂದು ಮಾಹಿತಿ ನೀಡಿದರು. ಆಗಿನ ಅವಧಿಯಲ್ಲಿ ಕುಮಾರಸ್ವಾಮಿ ಅವರು ಸಿಎ ಜಾಗಕ್ಕೆ ಬದಲಿ ನಿವೇಶನ ನೀಡಲು ಅನುಮೋದನೆ ನೀಡಿ ತಪ್ಪು ಮಾಡಿದ್ದಾರೆ ಎಂದು ದೂರಿದರು.


ಕುಮಾರಸ್ವಾಮಿ ಅವರು ಸಾಕಿದ ಭ್ರಷ್ಟಾಚಾರದ ಮಗು ಶಿವಲಿಂಗೇಗೌಡ ಎಂದು ಕಟುವಾಗಿ ಟೀಕಿಸಿದರು. 2022ರ ಚುನಾವಣೆಯ ವೇಳೆ ಬ್ಲೂ ಫಿಲಂ ಅನ್ನು ಕ್ರಮಬದ್ಧವಾಗಿ ಹಂಚಿಕೆ ಮಾಡಲು ನೀವೇ ಹೇಳಿದ್ದೀರಿ ಎಂಬ ಆರೋಪವನ್ನೂ ಮಾಡಿದರು. ಹೂಡ ಅಧಿಕಾರ ಹಂಚಿಕೆಗೆ ಮೂರು ಕೋಟಿ ರೂ. ಲಂಚ ಪಡೆದಿರುವುದು ಎಲ್ಲರಿಗೂ ತಿಳಿದ ವಿಚಾರ ಎಂದು ಆರೋಪಿಸಿ, ಎಲ್ಲರನ್ನೂ ಮಂಪರು ಪರೀಕ್ಷೆಗೆ ಒಳಪಡಿಸಿ ಎಂದರು. ಈ ಎಲ್ಲ ಪ್ರಕರಣಗಳ ಕುರಿತು ತೀವ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಕಾಂಗ್ರೆಸ್ ಪಕ್ಷದ ಕೊಡುಗೆಯನ್ನು ನಾವು ಇಂದಿಗೂ ಸ್ಮರಿಸಬೇಕು. ಆದರೆ ಶಿವಲಿಂಗೇಗೌಡ ಅವರಂತಹ ವ್ಯಕ್ತಿಗಳನ್ನು ಯಾವುದೇ ಪಕ್ಷದಲ್ಲೂ ನೋಡಿಲ್ಲ ಎಂದು ಹೇಳಿದರು. ಕೂಡಲೇ ಶಾಸಕ ಶಿವಲಿಂಗೇಗೌಡ ಅವರನ್ನು ಬಂಧಿಸಿ ಎಫ್‌ಐಆರ್ ದಾಖಲಿಸಬೇಕೆಂದು ದೇವರಾಜೇಗೌಡ ಅವರು ಆಗ್ರಹಿಸಿದರು.

Continue Reading

Hassan

ಹಾಸನಾಂಬ ದೇವಾಲಯದಲ್ಲಿ 108ಕ್ಕೂ ಅಧಿಕ ಉಪಾಸಕರಿಂದ ಸಾಮೂಹಿಕ ಶ್ರೀ ದೇವಿ ಪುರಾಣ ಪಠಣ ಹೋಮ

Published

on

ಹಾಸನ: ನಗರದ ಪ್ರಸಿದ್ಧ ಶಕ್ತಿಪೀಠವಾಗಿರುವ ಶ್ರೀ ಹಾಸನಾಂಬ ದೇವಾಲಯದಲ್ಲಿ ಲೋಕ ಕಲ್ಯಾಣಾರ್ಥವಾಗಿ, ಮಳೆ–ಬೆಳೆ ಸಮೃದ್ಧಿ, ಸುಖ–ಶಾಂತಿ ಹಾಗೂ ನೆಮ್ಮದಿಗಾಗಿ 108ಕ್ಕೂ ಅಧಿಕ ಶ್ರೀ ದೇವಿ ಉಪಾಸಕರಿಂದ ಸಾಮೂಹಿಕ ಶ್ರೀ ದೇವಿ ಪುರಾಣ ಪಠಣ ಹೋಮ ಹಾಗೂ ಧರ್ಮಸಭೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕಟ್ಟಾಯ ಶಿವಕುಮಾರ್ ಅವರು ತಿಳಿಸಿದರು.

ದಿನಾಂಕ 06-02-2026 (ಶುಕ್ರವಾರ) ರಂದು ಬೆಳಿಗ್ಗೆ 7.30 ಗಂಟೆಗೆ ಈ ಧಾರ್ಮಿಕ ಕಾರ್ಯಕ್ರಮ ಆರಂಭವಾಗಲಿದ್ದು, ಶ್ರೀ ಹಾಸನಾಂಬ ದೇವಾಲಯ ಅನಾವರಣದ ಐದನೇ ವರ್ಷದ ಅಂಗವಾಗಿ ಈ ವಿಶೇಷ ಪೂಜಾ ವಿಧಿಗಳು ನೆರವೇರಲಿವೆ. ಜಗನ್ಮಾತೆಯಾದ ಶ್ರೀ ಶಾಂಭವಿಯನ್ನು ಭಕ್ತಿಯಿಂದ ಭಜಿಸುವ ಮೂಲಕ ನಾಡಿನ ಜನತೆಗೆ ಸಮೃದ್ಧಿ, ಆರೋಗ್ಯ ಹಾಗೂ ನೆಮ್ಮದಿ ದೊರಕಲಿ ಎಂಬ ಸಂಕಲ್ಪವನ್ನು ಕೈಗೊಳ್ಳಲಾಗಿದೆ ಎಂದರು.


ಶ್ರೀ ಹಾಸನಾಂಬ ದೇವಾಲಯವು ವರ್ಷದಲ್ಲಿ ಕೇವಲ 10 ರಿಂದ 12 ದಿನಗಳವರೆಗೆ ಮಾತ್ರ ಗರ್ಭಗುಡಿ ತೆರೆದುಕೊಳ್ಳುವ ಅಪರೂಪದ ವೈಶಿಷ್ಟ್ಯ ಹೊಂದಿದ ಶಕ್ತಿಶಾಲಿ ಕ್ಷೇತ್ರವಾಗಿದೆ. ಗರ್ಭಗುಡಿ ಮುಚ್ಚಿದ ಬಳಿಕವೂ ನಂದಾದೀಪ ಆರದೇ ಇರುವುದೂ, ಅರ್ಪಿಸಿದ ನೈವೇದ್ಯ ಬಿಸಿಯಾಗಿಯೇ ಇರುವುದೂ ದೇವಿಯ ಮಹಿಮೆಯ ಪವಾಡವೆಂದು ಭಕ್ತರು ನಂಬುತ್ತಾರೆ. ದೇವಿಯ ಮುಂಭಾಗದಲ್ಲಿರುವ ನೆಲ್ಲು ಕಾಳಿನ ಗಾತ್ರದ ಕಲ್ಲು ವರ್ಷದಿಂದ ವರ್ಷಕ್ಕೆ ವೃದ್ಧಿಯಾಗುತ್ತ ಬರುತ್ತಿರುವುದು ಈ ಕ್ಷೇತ್ರದ ಮತ್ತೊಂದು ವಿಶೇಷತೆ ಎಂದರು.

ಪ್ರತಿ ವರ್ಷ ಆಶ್ವಿಜ ಹುಣ್ಣಿಮೆಯ ನಂತರ ಬರುವ ಮೊದಲ ಗುರುವಾರ ಗರ್ಭಗುಡಿ ತೆರೆದು ಲಕ್ಷಾಂತರ ಭಕ್ತರು ಶ್ರೀ ಹಾಸನಾಂಬ ದೇವಿಯ ದರ್ಶನ ಪಡೆಯುತ್ತಾರೆ. ಭಕ್ತಿಯಿಂದ ದೇವಿಯನ್ನು ಆರಾಧಿಸಿದರೆ ಕಷ್ಟಕಾರ್ಪಣ್ಯಗಳು ದೂರವಾಗುತ್ತವೆ ಎಂಬ ಗಾಢ ನಂಬಿಕೆ ಭಕ್ತರಲ್ಲಿ ಇದೆ. ಇಂತಹ ಪವಿತ್ರ ಕ್ಷೇತ್ರದಲ್ಲಿ ಜಗದ್ರಕ್ಷಕಳಾದ ಶ್ರೀ ದೇವಿಯ ಪುರಾಣ ಪಠಣ ಹೋಮವನ್ನು 108ಕ್ಕೂ ಅಧಿಕ ಉಪಾಸಕರಿಂದ ನಡೆಸಲಾಗುತ್ತಿದೆ ಎಂದರು.


ಮಧ್ಯಾಹ್ನ 12.30 ಗಂಟೆಗೆ ನಾಡಿನ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಪುರಾಣ ಮಹಾಮಂಗಲ ಧರ್ಮಸಭೆ ನಡೆಯಲಿದ್ದು, ನಂತರ ಮಹಾಪ್ರಸಾದ ವಿತರಣೆ ಕಾರ್ಯಕ್ರಮ ಜರುಗಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತನು–ಮನ–ಧನಗಳಿಂದ ಸೇವೆ ಸಲ್ಲಿಸಿ ಜಗನ್ಮಾತೆಯ ಕೃಪೆಗೆ ಪಾತ್ರರಾಗಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.

ಹಾಸನಕ್ಕೆ ಆಗಮಿಸುವ ಭಕ್ತರಿಗೆ ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣದಿಂದ ಆಟೋ ರಿಕ್ಷ ವ್ಯವಸ್ಥೆ ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ, ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು:
9980868058, 9449261302, 9945858274.

Continue Reading

Trending

error: Content is protected !!