Connect with us

Kodagu

ಶ್ರದ್ಧೆ ಭಕ್ತಿಯಿಂದ ಜರುಗಿದ ಶ್ರೀ ಮುತ್ತಪ್ಪ ಸ್ವಾಮಿ ತೆರೆ ಮಹೋತ್ಸವ

Published

on

ಕುಶಾಲನಗರ :ಇಲ್ಲಿನ ಬೈಚನಳ್ಳಿಯ ಯೋಗಾನಂದ ಬಡಾವಣೆಯ ಕಾವೇರಿ ನದಿ ತಟದಲ್ಲಿರುವ ಶ್ರೀ ಮುತ್ತಪ್ಪ ಸ್ವಾಮಿ ದೇವಾಲಯದಲ್ಲಿ ಶನಿವಾರದಿಂದ ಆರಂಭವಾಗಿರುವ ತೆರೆ ಮಹೋತ್ಸವಕ್ಕೆ ಬೆಳಗ್ಗೆ ಗಣಪತಿ ಹೋಮ ಹಾಗೂ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ವಿಭಿನ್ನತೆಯಲ್ಲಿ ಏಕತೆ ಎಂಬ ಸಾಮರಸ್ಯದ ಸಂದೇಶ ಸಾರುವ ಹಿನ್ನೆಲೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ವಿವಿಧ ಸಮಾಜಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ನಗರದಲ್ಲಿ ಇರುವ ವಿವಿಧ ದೇವಾಲಯಗಳ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಮಧ್ಯಾಹ್ನ 2 ಗಂಟೆಗೆ ಮುತ್ತಪ್ಪನ್ ಮಲೈ ಇರಕ್ಕಲ್, ಸಂಜೆ 4 ಗಂಟೆಗೆ ಮುತ್ತಪ್ಪನ್ ವೆಳ್ಳಾಟಂ ನಡೆಯಿತು. ಸಂಜೆ 5 ಗಂಟೆಗೆ ಅಯ್ಯಪ್ಪ ದೇವಸ್ಥಾನದಿಂದ ಊರಿನ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಗಳ ಅಲಂಕಾರ ದಿಂದ ಕೇರಳದ ಪ್ರಖ್ಯಾತ ಚಂಡೆ ವಾದಕರ ವಾದ್ಯ ಘೋಷದೊಂದಿಗೆ ನೂರಾರು ಮಹಿಳೆಯರು ,ಮಕ್ಕಳು ಜ್ಯೋತಿ ಬೆಳಗಿಸಿಕೊಂಡು ಮೆರವಣಿಗೆಯಲ್ಲಿ ಸಾಗಿ ದೇವಾಲಯಕ್ಕೆ ಆಗಮಿಸಿದರು.
ರಾತ್ರಿ ಅನ್ನದಾನ ಪ್ರಸಾದವನ್ನು ಸೇರಿದ್ದ ಭಕ್ತರು ಸ್ವೀಕರಿಸಿದರು. ರಾತ್ರಿ 8 ಗಂಟೆಯಿಂದ 11 ಗಂಟೆಯವರೆಗೆ ಸ್ಥಳೀಯ ಕಲಾವಿದರು ಮತ್ತು ಮಕ್ಕಳಿಂದ ದೇವಾಲಯದ ಸಾಂಸ್ಕೃತಿಕ ವೇದಿಕೆಯಲ್ಲಿ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು, ರಾತ್ರಿ 11 ಗಂಟೆಗೆ ಕಳಿಗ ಪಾಟು, 12 ಗಂಟೆಗೆ ಕಳಸ ಆಗಮನವಾಯಿತು.
ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮತ್ತು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ವಿ.ಪಿ.ಶಶಿಧರ್, ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರು, ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ದೇವಾಲಯಕ್ಕೆ ಭೇಟಿ ನೀಡಿ ಮುತ್ತಪ್ಪ ಸ್ವಾಮಿ ಆಶೀರ್ವಾದ ಪಡೆದುಕೊಂಡರು. ತೆರೆ ಮಹೋತ್ಸವದಲ್ಲಿ ಕುಶಾಲನಗರ ಹಾಗೂ ಸುತ್ತ ಮುತ್ತ ಗ್ರಾಮಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಶ್ರೀ ಮುತ್ತಪ್ಪ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ವರದ, ಟ್ರಸ್ಟ್ ಪದಾಧಿಕಾರಿಗಳು ಮತ್ತು ದೇವಾಲಯ ಸಮಿತಿಯ ಸದಸ್ಯರುಗಳು ಇದ್ದರು.
ಭಾನುವಾರವೂ (ಫೆ.16) ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.

ವರದಿ.ಟಿ.ಆರ್.ಪ್ರಭುದೇವ್
ಕುಶಾಲನಗರ

Continue Reading

Kodagu

ಕೊಡಗು ಜಿಲ್ಲಾಡಳಿತ ಭವನದಲ್ಲಿ ಆಧುನಿಕ ತಂತ್ರಜ್ಞಾನದ ಲಿಫ್ಟ್ ಭಾಗ್ಯ

Published

on

ಕೊಡಗು: ಮಡಿಕೇರಿಯಲ್ಲಿರುವ ಕೊಡಗು ಜಿಲ್ಲಾಡಳಿತ ಭವನದ ಸಂಕೀರ್ಣಕ್ಕೆ ಆಧುನಿಕ ತಂತ್ರಜ್ಞಾನದ ನೂತನ ಲಿಫ್ಟ್ ಅಳವಡಿಕೆ ಆಗಲಿದೆ. ಸುಮಾರು 14 ಲಕ್ಷ ರೂ ವೆಚ್ಚದಲ್ಲಿ ಸಂಪೂರ್ಣ ರಸ್ಟ್ ಪ್ರೂಫ್ ಲಿಫ್ಟ್ ಇನ್ನು ಮೂರು ವಾರಗಳ ಒಳಗಾಗಿ ಅಳವಡಿಸಿ ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ ಎಂದು ನಿರ್ವಹಣೆ ಹೊತ್ತ ಸಂಸ್ಥೆ ‌ಮಾಹಿತಿ ನೀಡಿದೆ.

ಜಿಲ್ಲಾಡಳಿತ ಭವನ ಲೋಕಾರ್ಪಣೆ ಗೊಂಡು ಐದು ವರ್ಷಗಳಲ್ಲಿಯೇ ಪದೇ ಪದೇ ರಿಪೇರಿಯಾಗಲು ಆರಂಭಿಸಿತ್ತು. ಕಟ್ಟಡ ನಿರ್ಮಾಣ ಕಾಲದಲ್ಲಿ ಕಾಮಗಾರಿ ವಸ್ತುಗಳನ್ನು ಸಾಗಿಸಲು ಲಿಫ್ಟ್ ಬಳಕೆಯಾದ್ದರಿಂದ ಅದರ ಸಾಮರ್ಥ್ಯ ಕೂಡ ಕುಗ್ಗಿತ್ತು. ಕಳೆದ ಡಿಸೆಂಬರ್ ನಲ್ಲಿ ಸಂಪೂರ್ಣ ಬಂದ್ ಆಗಿತ್ತು. ಕೊಡಗು ಜಿಲ್ಲಾಧಿಕಾರಿಗಳಾದ ವೆಂಕಟ್ ರಾಜಾ ಅವರಿಂದ ಸಂಪೂರ್ಣ ‌ಮಾಹಿತಿ ಪಡೆದ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು ಅವರು ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಮತ್ತು ಡಾ ಮಂತರ್ ಗೌಡ ಅವರು ಲಿಫ್ಟ್ ನ್ನು ರಿಪೇರಿ ಮಾಡುವ ಬದಲು ಹೊಸ ಲಿಫ್ಟ್ ಖರೀದಿಗೆ ಸೂಚನೆ ನೀಡಿದ ಮೇರೆಗೆ ದಿನಾಂಕ 31-1-2025 ರಂದು ಜಿಲ್ಲಾಧಿಕಾರಿಗಳು ಟೆಂಡರ್ ಕರೆದು ದಿನಾಂಕ 4-3-2025 ರಂದು ಕಾರ್ಯಾದೇಶವನ್ನು ಲಿಫ್ಟ್ ತಯಾರಿಕೆಯಲ್ಲಿ ಪ್ರತಿಷ್ಠಿತ ಸಂಸ್ಥೆ ಯಾಗಿರುವ ಬೆಂಗಳೂರಿನ ಸ್ವಿಫ್ಟ್ ಸ್ಪೇಸ್ ಎಲಿವೇಟರ್ಸ್ ಸಂಸ್ಥೆಗೆ ನೀಡಲಾಯಿತು.

ಹಳೆಯ ಲಿಫ್ಟ್ ನ್ನು ಸ್ಥಳಾಂತರಿಸುವ ಕೆಲಸ ಮುಗಿದಿದ್ದು, ಹೊಸ ಲಿಪ್ಟ್ ಅಳವಡಿಕೆಗೆ ಸಂಸ್ಥೆ ಸಿದ್ದತೆ ನಡೆಸುತ್ತಿದೆ. ಇನ್ನು ಮೂರು ವಾರಗಳಲ್ಲಿ ಸಾರ್ವಜನಿಕ ಉಪಯೋಗಕ್ಕೆ ಲಭ್ಯವಾಗಲಿದೆ. ಲಿಫ್ಟ್ ಇಲ್ಲದೆ ಸಾರ್ವಜನಿಕರು ಅದರಲ್ಲೂ ವಿಶೇಷವಾಗಿ ವೃದ್ದರು ಮತ್ತು ವಿಶೇಷ ಚೇತನರು ಜಿಲ್ಲಾಡಳಿತ ಭವನದ ಮೂರನೇ ಮಹಡಿ ತಲುಪಲು ಪ್ರಯಾಸ ಪಡುತ್ತಿದ್ದು, ಈಗ
ಉಸ್ತುವಾರಿ ಸಚಿವರು, ಕೊಡಗಿನ ಶಾಸಕದ್ವಯರು ಹಾಗೂ ಕೊಡಗು ಜಿಲ್ಲಾಧಿಕಾರಿಗಳ ಕಾಳಜಿಯಿಂದ ‌ನಿಟ್ಟುಸಿರು ಬಿಡುವಂತೆ ಆಗಿದೆ.

Continue Reading

Kodagu

ಮಾ.25 ಮತ್ತು 26 ರಂದು ಉಸ್ತುವಾರಿ ಸಚಿವರ ಕೊಡಗು ಜಿಲ್ಲಾ ಪ್ರವಾಸ

Published

on

ಮಡಿಕೇರಿ : ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ಮಾರ್ಚ್, 25 ಮತ್ತು 26 ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಮಾನ್ಯ ಸಚಿವರು ಮಾರ್ಚ್, 25 ರಂದು ಬೆಳಗ್ಗೆ 11 ಗಂಟೆಗೆ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ‘ಸುಸ್ಥಿರ ಅಭಿವೃದ್ಧಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ’ ಎಂಬ ಶೀರ್ಷಿಕೆಯಡಿ ಕನ್ನಡದಲ್ಲಿ 5ನೇ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

ಸಂಜೆ 4.30 ಗಂಟೆಗೆ ಪೊನ್ನಂಪೇಟೆ ತಾಲ್ಲೂಕು ನಾಗರಹೊಳೆ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಗೆ ಭೇಟಿ ನೀಡಲಿದ್ದಾರೆ.

ಮಾರ್ಚ್, 26 ರಂದು ಬೆಳಗ್ಗೆ 10.30 ಗಂಟೆಗೆ ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲ್ಲೂಕುಗಳ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿ ವೀರಭದ್ರ ಹಂಚಿನಾಳ ಅವರು ತಿಳಿಸಿದ್ದಾರೆ.

Continue Reading

Kodagu

ಮಡಿಕೇರಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ಲೈಬಸ್ ಸಂಚಾರ

Published

on

ಮಡಿಕೇರಿ : ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ಲೈಬಸ್ ಸಂಚಾರಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದು ಕೆಎಸ್‍ಆರ್‍ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕರಾದ ಎಂ.ಎಂ.ಮೆಹಬೂಬ್ ಅಲಿ ಅವರು ತಿಳಿಸಿದ್ದಾರೆ.

ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯರಾತ್ರಿ 2.30 ಗಂಟೆಗೆ ಹೊರಟು ಮಡಿಕೇರಿಗೆ ಬೆಳಗ್ಗೆ 7.30 ಗಂಟೆಗೆ ತಲುಪಲಿದೆ.

ನಂತರ ಬೆಳಗ್ಗೆ 11.30 ಗಂಟೆಗೆ ಮಡಿಕೇರಿಯಿಂದ ಹೊರಟು ಸಂಜೆ 6 ಗಂಟೆಗೆ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಲಿದೆ. ಕೆಎಸ್‍ಆರ್‍ಟಿಸಿ ಬೆಂಗಳೂರು ಕೇಂದ್ರ ವಿಭಾಗದ ನಾಲ್ಕನೇ ಘಟಕದಿಂದ ಪ್ಲೈ ಬಸ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಮೆಹಬೂಬ್ ಅಲಿ ಅವರು ತಿಳಿಸಿದ್ದಾರೆ

Continue Reading

Trending

error: Content is protected !!