Hassan
ಎಸ್‌ಡಿಪಿಐ ಮುಖಂಡನ ಮೇಲೆ ಹಲ್ಲೆ ಆರೋಪ: ಮುನೀರ್ ಹಲ್ಲೆಗೊಳಗಾದ ಎಸ್‌ಡಿಪಿಐ ಮುಖಂಡ
ಆಲೂರು: ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕೆಂಚಮ್ಮನಹೊಸಕೋಟೆ ಗ್ರಾಮದಲ್ಲಿ ಯುವಕರ ಗುಂಪೊಂದು ಎಸ್‌ಡಿಪಿಐ ಮುಖಂಡನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಮುನೀರ್ ಹಲ್ಲೆಗೊಳಗಾದ ಎಸ್‌ಡಿಪಿಐ ಮುಖಂಡನಾಗಿದ್ದು ಭುವನೇಶ್ ಹಾಗೂ ಅಕ್ಷಯ್ ಹಲ್ಲೆ ನಡೆಸಿದ ಯುವಕರು.

ಇಂದು ಬೆಳಿಗ್ಗೆ ಕೆಂಚಮ್ಮನ ಹೊಸಕೋಟೆ ಗ್ರಾಮದಲ್ಲಿ ಹಾಸಿಗೆ ರಿಪೇರಿ ಮಾಡುವ ಕಾರ್ಮಿಕ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಆತನನ್ನು ಅಡ್ಡಗಟ್ಟಿದ ಭುವನೇಶ್ ಹಾಗೂ ಅಕ್ಷಯ್ ಹಲ್ಲೆ ನಡೆಸುತ್ತಿದ್ದಾರೆ. ಇದನ್ನು ಕಂಡ ಮುನೀರ್ ಹಾಸಿಗೆ ರಿಪೇರಿ ಮಾಡುವವರ ರಕ್ಷಣೆಗೆ ಬಂದಿದ್ದು ಮುನೀರ್ ಮೇಲೂ ಭುವನೇಶ್ ಹಾಗೂ ಅಕ್ಷಯ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮುನೀರ್ ಕೆಂಚಮ್ಮನ ಹೊಸಕೋಟೆ ಉಪಪೊಲೀಸ್ ಠಾಣೆಗೆ ದೂರು ಕೊಡಲು ಹೋಗಿದ್ದು ಅಲ್ಲಿ ಯಾರು ಇಲ್ಲದ ಕಾರಣ ಕಾಯುತ್ತಾ ನಿಂತಿದ್ದ ವೇಳೆ ಅಲ್ಲಿಗೆ ಬಂದ ಭುವನೇಶ್ ಹಾಗೂ ಅಕ್ಷಯ್ ಉಪಪೊಲೀಸ್ ಠಾಣೆಯಿಂದ ಹೊರಗೆಳೆದು ಪುನಃ ಮುನೀರ್ ಮೇಲೆ ಹಲ್ಲೆ ನಡೆಸಿದ್ದಾರೆ.

ಹಲ್ಲೆಗೊಳಗಾದ ಮುನೀರ್ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆಲೂರು ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.
Hassan
ಗ್ರಾಮದಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಕುಡಿಯುವ ನೀರಿಗೆ ಸಮಸ್ಯೆ: ತಾ.ಪಂ.ಕಚೇರಿ ಮುಂದೆ ಪ್ರತಿಭಟನೆ
ವರದಿ: ರಾಜೇಂದ್ರ ಸುಹಾಸ್
ಅರಕಲಗೂಡು: ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ತೆ ಕಲ್ಪಿಸುವಂತೆ ಆಗ್ರಹಿಸಿ ಮಲ್ಲಿಪಟ್ಟಣ ಹೋಬಳಿ ಜೋಗಿ ಹೊಸಹಳ್ಳಿ ಗ್ರಾಮಸ್ಥರು ತಾ.ಪಂ.ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ತಮ್ಮ ಗ್ರಾಮ ಹೆಗ್ಗಡಿಹಳ್ಳಿ ಗ್ರಾಪಂ ವ್ಯಾಪ್ತಿಗೆ ಸೇರಿದ್ದು ಗ್ರಾಮದಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ. ನೀರು ಸರಬರಾಜು ಮಾಡುತ್ತಿದ್ದ ಕೊಳವೆ ಬಾವಿಯ ಮೋಟಾರ್ ಪಂಪ್ ಕುಸಿದು ಬಿದ್ದಿತ್ತು. ಇದನ್ನು ಎತ್ತಿ ಸರಿಪಡಿಸಿದರೂ ನೀರು ಬರುತ್ತಿಲ್ಲ ಹೀಗಾಗಿ ಗ್ರಾಮದಲ್ಲಿ ಕುಡಿಯುವ ನೀರಿಗೆ ತತ್ವಾರ ಎದುರಾಗಿದೆ.
ಈ ಬಗ್ಗೆ ಗ್ರಾ.ಪಂ. ಪಿಡಿಒ ನವೀನ್ ಕುಮಾರ್ ಅವರ ಗಮನಕ್ಕೆ ತಂದರೂ ಈ ವರೆವಿಗೂ ಕ್ರಮ ಕೈಗೊಳ್ಳದೆ ನಿರ್ಲಕ್ಷ ತೋರುತ್ತಿದ್ದಾರೆ. ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದ್ದು ಈ ಕುರಿತು ಸಹ ಗಮನ ಹರಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.

ಮನವಿ ಸ್ವೀಕರಿಸಿದ ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ಡಿ. ಡಿ. ಪ್ರಕಾಶ್ ಈ ಕುರಿತು ಗಮನ ಹರಿಸಿ ಒಂದರೆಡು ದಿನದಲ್ಲೆ ಸಮಸ್ಯೆ ಬಗೆ ಹರಿಸುವುದಾಗಿ ತಿಳಿಸಿದರು. ಚಂದ್ರೇಗೌಡ, ಮಂಗಳ, ರೇಣುಕ,ಪುಟ್ಟಲಕ್ಷ್ಮೀ,ಶೋಭ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Hassan
ಪರೀಕ್ಷೆ ಎಂಬ ಭಯವನ್ನು ಮನಸ್ಸಿನಿಂದ ಹೋಗಲಾಡಿಸಬೇಕು: ಕೆ. ಟಿ. ಮೇಘನಾ
ವರದಿ: ರಾಜೇಂದ್ರ ಸುಹಾಸ್
ಅರಕಲಗೂಡು: ಆಗಲ್ಲ ಎಂದು ಕೈಕಟ್ಟಿ ಕುಳಿತುಕೊಳ್ಳದೆ ಶ್ರಮಪಟ್ಟು ವ್ಯಾಸಂಗ ಮಾಡಬೇಕು. ಆಗ ಮಾತ್ರ ಯಶಸ್ಸು ಸಾಧ್ಯ
ಎಂದು ಬೆಂಗಳೂರು ಡಿಡಿ ಚಂದನ ಸಹಾಯಕ ನಿರ್ದೇಶಕಿ ಕೆ. ಟಿ. ಮೇಘನಾ ತಿಳಿಸಿದರು.
ಪಟ್ಟಣದ ಕಲ್ಯಾಣಮಂಟಪದಲ್ಲಿ ಬಿಜಿಎಸ್ ಪದವಿ ಪೂರ್ವ ಕಾಲೇಜು ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬರಿಗಾಲಿನಲ್ಲಿ ಬೆಟ್ಟವನ್ನು ಹತ್ತುವಾಗ ಕಲ್ಲು ಮುಳ್ಳು ಚುಚ್ಚುತ್ತವೆ. ಆದರೂ ಬೆಟ್ಟಹತ್ತಿ ಸೂರ್ಯೋದಯವನ್ನು ನೋಡಿದಾಗ ತುಂಬಾ ಖುಷಿಯಾಗುತ್ತದೆ. ಹಾಗೆಯೇ ವಿದ್ಯಾರ್ಥಿಗಳು ಶ್ರಮಪಟ್ಟು ವ್ಯಾಸಂಗಮಾಡಿ ಪರೀಕ್ಷೆಯಲ್ಲಿ ಉತ್ತಮ ಅಂಕಪಡೆದು ಅನ್ಕೊಂಡ ಕೋರ್ಸ್ ನಲ್ಲಿ ಸೀಟು ಸಿಕ್ಕರೆ ತುಂಬಾ ಖುಷಿಯಾಗುತ್ತದೆ. ಪರೀಕ್ಷೆ ಎಂಬ ಭಯವನ್ನು ಮನಸ್ಸಿನಿಂದ ಹೋಗಲಾಡಿಸಬೇಕು. ಒಂದು ಸಣ್ಣ ಯಶಸ್ಸು ಕೂಡ ತುಂಬಾ ಶ್ರಮ ವಹಿಸುತ್ತದೆ. ನನಗೆ ಆಗಲ್ಲ ಎಂದು ಕೈಕಟ್ಟಿ ಕುಳಿತುಕೊಳ್ಳದೆ ಶ್ರಮಪಟ್ಟು ವ್ಯಾಸಂಗ ಮಾಡಬೇಕು. ಆಗ ಮಾತ್ರ ಯಶಸ್ಸು ಸಾಧ್ಯ ಎಂದರು.

ಅಬ್ದುಲ್ ಕಲಾಂ ಅವರು ಪೈಲೆಟ್ ಆಗಬೇಕೆಂದು ಕನಸ್ಸು ಕಂಡಿದ್ದರು. ಅದಕ್ಕಾಗಿ ಡೆಹರಡೂನ್ ನಲ್ಲಿ ಐರಫೋರ್ಸ್ ಪರೀಕ್ಷೆಗೆ ಹೋಗುತ್ತಾರೆ. ೮ ಹುದ್ದೆಗೆ 25 ಜನ ಬಂದಿರುತ್ತಾರೆ. ಕಲಾಂ ಅವರು 9 ನೇ ಸ್ಥಾನದಲ್ಲಿರುತ್ತಾರೆ. ಇದರಿಂದ ತುಂಬಾ ಬೇಸರ ಮಾಡಿಕೊಳ್ಳುತ್ತಾರೆ. ಅವರು ಪೈಲೆಟ್ ಆಗದಿರಬಹುದು ಆದ್ರೆ ಹಲವು ಸ್ಥಾನಗಳನ್ನು ಅಲಂಕರಿಸಿದ್ದಾರೆ. ಹಾಗಾಗಿ ಒಂದು ಬಾಗಿಲು ಮುಚ್ಚಿದರೆ, ಹಲವು ಬಾಗಿಲು ತೆರೆದುಕೊಳ್ಳುತ್ತವೆ. ಹಾಗಾಗಿ ಪ್ರಸ್ತುತ ಪರೀಕ್ಷೆ ಕಡೆಗೆ ಹೆಚ್ಚಿನ ಗಮನಹರಿಸಬೇಕು.ವಿದ್ಯಾರ್ಥಿಗಳು ಓದಿದ್ದನ್ನು ಹವ್ಯಾಸ ಮಾಡಿಕೊಳ್ಳಬೇಕು ಎಂದರು.
ಪರೀಕ್ಷೆ ಸಮೀಪಸುತ್ತಿದ್ದಂತೆ ಹೆದರದೆ ದೈರ್ಯವಾಗಿ ಬರೆಯಬೇಕು. ಪರೀಕ್ಷೆ ಬರೆದು ಬಂದ ಮೇಲೆ ಆ ವಿಷಯದ ಬಗ್ಗೆ ಚರ್ಚಿಸದೆ ಮುಂದಿನ ಪರೀಕ್ಷೆಕಡೆ ಗಮನಹರಿಸಬೇಕು. ಅವರು, ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆ ತಯಾರಿ ಬಗ್ಗೆ ತಿಳಿಸಿದರು.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಸನ – ಕೊಡಗು ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ ಮಾತನಾಡಿ, ಕಠಿಣ ಪರಿಶ್ರಮ ದಿಂದ ಮಾತ್ರ ಸಾಧನೆ ಮೆಟ್ಟಿಲೆರಲು ಸಾಧ್ಯ. ಹಾಗಾಗಿ ಮೇಘನಾ ಅವರು ಯಾರೋ ಕಟ್ಟಿದ ಗೋಪುರಕ್ಕೆ ಕಳಸವಾಗಿಲ್ಲ.ಅವರೇ ಕಟ್ಟಿದ ಗೋಪುರಕ್ಕೆ ಕಳಸವಾಗಿದ್ದಾರೆ. ಹಾಗಾಗಿ ಪರೀಕ್ಷೆಗೆ ಭಯ, ಆತಂಕ ಬೇಡ. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು.ನಮ್ಮ ಮುಂದೆ ಸಾಕಷ್ಟು ಸವಾಲುಗಳು ಬಂದರೂ ದೈರ್ಯವಾಗಿ ಎದುರಿಸಬೇಕು ಎಂದರು.
ಕಸಪಾ ಜಿಲ್ಲಾಧ್ಯಕ್ಷರು ಮಲ್ಲೇಶ್ ಗೌಡ, ಪ್ರಾಂಶುಪಾಲರಾದ ಮಹೇಶ್ ಹೊಡೆನೂರು ಇದ್ದರು. ವೇದಿಕೆ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
Hassan
ಬಿ. ಶಿವರಾಂ ಆರೋಪಗಳಿಗೆ ಪ್ರತಿಕ್ರಿಯೆ ಇಲ್ಲ, ಅಭಿವೃದ್ಧಿಯೇ ನನ್ನ ಉತ್ತರ: ಹೆಚ್.ಕೆ. ಸುರೇಶ್
ಬೇಲೂರು: ಬಿ. ಶಿವರಾಂ ಆರೋಪಗಳಿಗೆ ಪ್ರತಿಕ್ರಿಯೆ ಇಲ್ಲ, ಅಭಿವೃದ್ಧಿಯೇ ನನ್ನ ಉತ್ತರ. ಈಗಾಗಲೇ ಮಾಜಿ ಸಚಿವರಿಗೆ ಅರಳು ಮರಳು ಎಂಬುದು ಇಡೀ ಜಿಲ್ಲೆಗೆ ತಿಳಿದಿದೆ ಎಂದು ಶಾಸಕ ಹೆಚ್.ಕೆ. ಸುರೇಶ್ ತಿರುಗೇಟು ನೀಡಿದ್ದಾರೆ.
ತಾಲೂಕಿನ ತೊಳಲು ಗ್ರಾಮದಲ್ಲಿ ಕಾಮಗಾರಿಗೆ ಗುದ್ದಲಿ ಪೂಜೆ ನಡೆಸಿ ಮಾತನಾಡಿದ ಅವರು, ಬಿ. ಶಿವರಾಂ ಅವರು ನನ್ನ ವಿರುದ್ಧ ನೀಡುತ್ತಿರುವ ಹೇಳಿಕೆಗಳಿಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಶಾಸಕ ಹೆಚ್.ಕೆ. ಸುರೇಶ್ ಸ್ಪಷ್ಟಪಡಿಸಿದರು.
ಬಸವಣ್ಣನವರು ಹೇಳಿದಂತೆ “ಕಾಯಕವೇ ಕೈಲಾಸ” ಎಂಬ ತತ್ವಕ್ಕೆ ನಾನು ಇಂದಿಗೂ ಬದ್ಧನಾಗಿದ್ದು, ಕೆಲವರ ಅಸಂಬದ್ಧ ಹಾಗೂ ಹತಾಶ ಮನೋಭಾವದ ಮಾತುಗಳಿಗೆ ಉತ್ತರ ಕೊಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.

ಬಿ. ಶಿವರಾಂ ಅವರು ಹತಾಶ ಮನಸ್ಥಿತಿಯಿಂದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದ ಶಾಸಕರು, ಇಂದು ತಾಲೂಕಿನ ಪ್ರತಿ ಹಳ್ಳಿ-ಹಳ್ಳಿಗಳಲ್ಲೂ ಹಾಗೂ ಪಟ್ಟಣದಲ್ಲೂ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆಗಳು ನಡೆಯುತ್ತಿವೆ. ಸರ್ಕಾರದಲ್ಲಿ ಹಣ ಇಲ್ಲ, ಯಾರಿಗೂ ಅನುದಾನ ಸಿಗುತ್ತಿಲ್ಲ ಎಂದು ಹೇಳುತ್ತಿದ್ದವರ ನಡುವೆಯೇ ನಾನು ಅನುದಾನ ತಂದು ಕಾಮಗಾರಿಗಳನ್ನು ಮಾಡಿಸುತ್ತಿರುವುದು ಅವರಿಗೆ ಸಹಿಸಲಾಗುತ್ತಿಲ್ಲ. ಅದೇ ಕಾರಣಕ್ಕೆ ಈ ರೀತಿಯ ಆರೋಪಗಳು ಬರುತ್ತಿವೆ ಎಂದು ಹೇಳಿದರು.
ಬೇಲೂರು ಪಟ್ಟಣದಲ್ಲಿ ಈಗಾಗಲೇ ಸುಮಾರು 10 ಕೋಟಿ ರೂ.ಗಳ ಅನುದಾನವನ್ನು ತರಲಾಗಿದ್ದು, ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ. ಇದನ್ನು ಸಹಿಸದೆ ನನ್ನ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಸುರೇಶ್ ಅಸಮಾಧಾನ ವ್ಯಕ್ತಪಡಿಸಿದರು. ಅವರು ಎಷ್ಟು ಹೇಳಿಕೆಗಳನ್ನು ಕೊಡುತ್ತಾ ಇರಲಿ, ನಾನು ನನ್ನ ಕೆಲಸವನ್ನು ಮುಂದುವರೆಸಿಕೊಂಡು ಅಭಿವೃದ್ಧಿ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುತ್ತೇನೆ ಎಂದು ಹೇಳಿದರು.

ಬಿ. ಶಿವರಾಂ ಅವರು ನಾಲ್ಕು ಬಾರಿ ಶಾಸಕರಾಗಿದ್ದಾಗ ಆನೆ ಸಮಸ್ಯೆಯ ಬಗ್ಗೆ ಎಷ್ಟು ಬಾರಿ ಮಾತನಾಡಿದ್ದಾರೆ ಎಂಬುದನ್ನು ತಿಳಿಸಲಿ ಎಂದು ಪ್ರಶ್ನಿಸಿದ ಶಾಸಕರು, ನಾನು ಮೊದಲ ಬಾರಿಗೆ ಶಾಸಕರಾಗಿಯೇ ಆನೆಗಳ ದಾಳಿಯ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿದ್ದೇನೆ. ಜೊತೆಗೆ ನೀರಾವರಿ ಯೋಜನೆಗಳ ಬಗ್ಗೆ ಪ್ರಸ್ತಾವನೆಗಳನ್ನು ಸಲ್ಲಿಸಿ, ಕೆ. ಜಾರ್ಜ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಇಂಜಿನಿಯರ್‌ಗಳು, ಗುತ್ತಿಗೆದಾರರು ಹಾಗೂ ಅಧಿಕಾರಿಗಳು ನನ್ನ ಆತ್ಮೀಯರೇ. ಆದರೆ ಯಾರಿಗೆ ಟೆಂಡರ್ ಕೊಡಬೇಕು ಎಂಬುದು ನನ್ನ ಕೈಯಲ್ಲಿಲ್ಲ. ಯಾರು ನಿಯಮಾನುಸಾರ ಟೆಂಡರ್ ಹಾಕಿಕೊಂಡು ಬಂದರೂ ಅವರಿಗೆ ಕೆಲಸ ಸಿಗುತ್ತದೆ. ನಾನು ಗುಣಮಟ್ಟದ ಕೆಲಸ ಮಾಡುವಂತೆ ಮಾತ್ರ ಸೂಚನೆ ನೀಡುತ್ತೇನೆ ಹೊರತು, ನನ್ನ ಹಿಂಬಾಲಕರು ಎಂಬ ಕಾರಣಕ್ಕೆ ಯಾರಿಗೂ ಕೆಲಸ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿ. ಶಿವರಾಂ ಅವರು ನೀಡಿರುವ ಹೇಳಿಕೆಗಳು ಸಂಬಂಧರಹಿತವಾಗಿದ್ದು, ವಯಸ್ಸಿನ ಗಡಿಯಲ್ಲಿರುವ ಅವರ ಮಾತುಗಳು ಅರಳು–ಮರಳಿನ ಮಾತುಗಳಂತೆ ಇವೆ. ಅಂತಹ ಹೇಳಿಕೆಗಳಿಗೆ ಉತ್ತರ ಕೊಡುವ ಅಗತ್ಯವಿಲ್ಲ ಎಂದು ಸುರೇಶ್ ಹೇಳಿದರು.
ಕಳೆದ ಚುನಾವಣೆಯಲ್ಲಿ ನಾನು ಸೋತಾಗ ಲಿಂಗೇಶ್ ಶಾಸಕರಾಗಿದ್ದರು. ಆಗ ನಾನು ಅವರ ವಿರುದ್ಧ ಯಾವುದೇ ಹೇಳಿಕೆ ನೀಡಿರಲಿಲ್ಲ. ಜನಸಾಮಾನ್ಯರ ಜೊತೆ ನಿಂತು ಕೆಲಸ ಮಾಡುವುದೇ ನನ್ನ ರಾಜಕಾರಣ. ಇಂದು ಮತದಾರರು ನನ್ನ ಕೈ ಹಿಡಿದಿದ್ದು, ಅವರ ಸೇವೆ ಮಾಡುವುದು ನನ್ನ ಕರ್ತವ್ಯ ಎಂದು ಹೇಳಿದರು.

ನಾನು ಮೂಲತಃ ಸಿವಿಲ್ ಇಂಜಿನಿಯರ್ ಹಾಗೂ ಗುತ್ತಿಗೆದಾರನಾಗಿರುವುದರಿಂದಲೇ ಈ ಕ್ಷೇತ್ರಕ್ಕೆ ಹೆಚ್ಚು ಅನುದಾನ ತಂದು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸುತ್ತಿದ್ದೇನೆ. ನಾನು ಗುತ್ತಿಗೆದಾರನಾಗಿರುವುದರಿಂದ ನನಗೆ ಸಹಕಾರ ಸಿಗುತ್ತಿದೆ ಎಂದು ಬಿ. ಶಿವರಾಂ ಹೇಳಿರುವುದಕ್ಕೆ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ವ್ಯಂಗ್ಯವಾಡಿದರು.
-
National6 hours agoದೇಶದ ನಿಯಮಗಳನ್ನು ಪಾಲಿಸಲು ಸಾಧ್ಯವಾಗದಿದ್ದರೆ ದೇಶ ಬಿಟ್ಟು ತೊಲಗಿ: ವಾಟ್ಸಪ್ಗೆ ಸುಪ್ರೀಂ ಎಚ್ಚರಿಕೆ
-
Special24 hours agoರಾಜ್ಯದಲ್ಲಿ ಈ ವರ್ಷದ ರಸಗೊಬ್ಬರ ಪೂರೈಕೆ ಹೇಗಿದೆ?ಅಂಕಿ ಅಂಶಗಳು ಹೇಳುವುದೇನು? ತಿಳಿಯಿರಿ
-
Kodagu12 hours agoಹೂಡಿಕೆ ಹೆಸರಲ್ಲಿ ಸೈಬರ್ ವಂಚನೆ : 1.14 ಕೋಟಿ ರೂ. ಕಳೆದುಕೊಂಡ ಸಿದ್ದಾಪುರದ ವ್ಯಕ್ತಿ
-
Special10 hours agoಪೋಸ್ಟ್ ಆಫೀಸ್ ಉದ್ಯೋಗ ಅವಕಾಶ: ನೇರ ನೇಮಕಾತಿ
-
State51 minutes agoಕಮಿಷನ್ಗಾಗಿ ಡೀಲ್ ಆರೋಪದ ಆಡಿಯೋ ವೈರಲ್: ಗುತ್ತಿಗೆದಾರ ಸಂಘದ ಗೌರವಾಧ್ಯಕ್ಷ ಬಿ.ಜಗನ್ನಾಥ್ ಅಮಾನತು
-
Mysore3 hours agoಇ-ಸ್ವತ್ತು ಎರಡು ತಿಂಗಳಿಂದಲೂ ಸುಸ್ತು-ರಾಜ್ಯಾದ್ಯಂತ ತಾಂತ್ರಿಕ ತೊಡಕು: ಮಾಜಿ ಮೇಯರ್ ಶಿವಕುಮಾರ್ ಆರೋಪ
-
Kodagu5 hours agoನಾಮಫಲಕ, ಜಾಹಿರಾತು ಫಲಕಗಳಲ್ಲಿ ಕನ್ನಡ ಭಾಷೆ ಕಡ್ಡಾಯ : ಹೆಚ್.ಶಿವರಾಮೇಗೌಡ ಹಾಗು ಡಾ.ಬಿ.ಎ.ದಿನೇಶ್ ಶೆಟ್ಟಿ ಆಕ್ರೋಶ
-
Chamarajanagar3 hours agoಜಿಲ್ಲಾಧ್ಯಕ್ಷ ನವೀನ್ ಮೌರ್ಯಗೆ ಸನ್ಮಾನ
