Kodagu
ಮನುಷ್ಯನ ಉನ್ನತೀಕರಣಕ್ಕೆ ಶಿಕ್ಷಣ ಮುಖ್ಯ : ಹರಪಳ್ಳಿ ರವೀಂದ್ರ
ಸುಂಟಿಕೊಪ್ಪ : ಯಾವುದೇ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತಗೊಳ್ಳದೆ ಪ್ರತಿಯೊಬ್ಬ ವಿದ್ಯಾರ್ಥಿಯು ಶಿಕ್ಷಣವನ್ನು ಪಡೆದುಕೊಳ್ಳುವಂತಾಗಬೇಕೆನ್ನುವ ಸದ್ದುದ್ದೇಶವನ್ನು ಇರಿಸಿಕೊಂಡು ಮಕ್ಕಳಿಗೆ ಪುಸ್ತಕ ವಿತರಣೆ ಮಾಡುತ್ತಿದ್ದೇನೆಂದು ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ ಹೇಳಿದರು.

ಸಮೀಪದ ಕೊಡಗರಹಳ್ಳಿ ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಕೊಡುಗೆಯಾಗಿ ನೋಟ್ ಪುಸ್ತಕಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.

ಸಮಾಜದಲ್ಲಿ ಒಬ್ಬ ಮನುಷ್ಯನ ಉನ್ನತೀಕರಣ ಆಗಬೇಕಾದರೆ ಅವನ ಜೀವನದಲ್ಲಿ ಶಿಕ್ಷಣ ಬಹುಮುಖ್ಯ ಪಾತ್ರ ವಹಿಸುತ್ತದೆ. ಅದುದ್ದರಿಂದಸ ನನ್ನಿಂದಾಗುವ ಸಹಾಯ ಮಕ್ಕಳಿಗೆ ಶಿಕ್ಷಣ ಕಲಿಯಲು ಸಾಧ್ಯವಾಗಲಿ ಎಂದು ನೋಟ್ ಪುಸ್ತಕಗಳನ್ನು ನೀಡುತ್ತಿದ್ದೇನೆ ಎಂದರು.

ನಾಡು ಪ್ರೌಢಶಾಲೆ ಗೌರವ ಕಾರ್ಯದರ್ಶಿ ಕೆ.ಎಸ್.ಮಂಜುನಾಥ್ ಮಾತನಾಡಿ, ವಿದ್ಯೆ ಬಹಳ ಮುಖ್ಯವಾದದ್ದು. ಈ ವಿದ್ಯೆಯಿಂದ ಏನು ಬೇಕಾದರೂ ಜೀವನದಲ್ಲಿ ಸಾಧಿಸಬಹುದು ಎಂದರು.

ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಚಂಗಪ್ಪ ಮಾತನಾಡಿದರು. ಕೊಡಗರಹಳ್ಳಿ ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಕೆ.ಇಂದಿರಾ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಪ್ರೌಢಶಾಲೆಯ ಆಡಳಿತ ಮಂಡಳಿ ನಿರ್ದೇಶಕ ಕುಟ್ಟಪ್ಪ, ಮುಖಂಡರಾದ ಖಾಸಿಂ ಮಾದಪುರ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಶಿಕ್ಷಕ ಶಿವಪ್ಪ ಗುರ್ಕಿ ನಿರೂಪಿಸಿದರು.
Kodagu
ಯಶಸ್ವಿಗೊಂಡ ಗರ್ಭಕೋಶ ಕ್ಯಾನ್ಸರ್ ತಪಾಸಣೆ, ರಕ್ತದಾನ ಶಿಬಿರ
ಮಡಿಕೇರಿ : ಜಿಲ್ಲಾ ಪೊಲೀಸ್ ಘಟಕ, ಕಿದ್ವಾಯಿ ಗಂಥಿ ಆಸ್ಪತ್ರೆ, ಬೆಂಗಳೂರು ಮತ್ತು ಲಯನ್ಸ್ ಕ್ಲಬ್, ಮೈಸೂರು ಜೀವಾಧಾರ ಇವುಗಳ ಸಹಯೋಗದಲ್ಲಿ ಜಿಲ್ಲಾ ಪೊಲೀಸ್ ಘಟಕದ ಮಹಿಳಾ ಸಿಬ್ಬಂದಿಗಳು ಮತ್ತು ಪೊಲೀಸ್ ಸಿಬ್ಬಂದಿಗಳ ಕುಟುಂಬದ ಮಹಿಳಾ ಸದಸ್ಯರುಗಳಿಗೆ ಮಡಿಕೇರಿಯ ಮೈತ್ರಿ ಪೊಲೀಸ್ ಸಮುದಾಯ ಭವನದಲ್ಲಿ ಸ್ತನ ಮತ್ತು ಗರ್ಭಕೋಶ ಕ್ಯಾನ್ಸರ್ ತಪಾಸಣೆ ಮತ್ತು ರಕ್ತದಾನ ಶಿಬಿರ ನಡೆಸಲಾಯಿತು.

ಈ ಸಂದರ್ಭದ ನೆನಪಿಗಾಗಿ ಮಡಿಕೇರಿಯ ಡಿಎಆರ್ ಕಚೇರಿಯ ಆವರಣದಲ್ಲಿ ಹಣ್ಣಿನ ಗಿಡವನ್ನು ನೆಡಲಾಯಿತು. ಶಿಬಿರದಲ್ಲಿ ಜಿಲ್ಲೆಯ ಮಹಿಳಾ ಪೊಲೀಸ್ ಸಿಬ್ಬಂದಿಗಳು ಮತ್ತು ಕುಟುಂಬಗಳ ಮಹಿಳಾ ಸದಸ್ಯರುಗಳು ಪಾಲ್ಗೊಂಡಿದ್ದರು. ಕಿದ್ವಾಯಿ ಆಸ್ಪತ್ರೆಯ ತಜ್ಞ ವೈದ್ಯರು ಪರೀಕ್ಷೆಗಳನ್ನು ನಡೆಸಿದರು.
Kodagu
ಯಶಸ್ವಿಗೊಂಡ ಸೋಮವಾರಪೇಟೆ ತಾಲೂಕಿನ 9ನೇ ಕನ್ನಡ ಸಾಹಿತ್ಯ ಸಮ್ಮೇಳನ
ಸೋಮವಾರಪೇಟೆ : ತಾಲೂಕಿನ ಐಗೂರು ಗ್ರಾಮದ ಕಾಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸೋಮವಾರ ಸೋಮವಾರಪೇಟೆ ತಾಲೂಕಿನ 9ನೇ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತು.
ಶಾಸಕ ಡಾ.ಮಂತರ್‌ಗೌಡ ಮಾತನಾಡಿ, ‘ಮಲ್ಳಳ್ಳಿ ಜಲಪಾತದ ಅಭಿವೃದ್ಧಿಯಾಗಬೇಕು ಎಂಬ ಒತ್ತಾಯ ಇದೆ, ಮಕ್ಕಳಗುಡಿ ಬೆಟ್ಟದ ಅಭಿವೃದ್ಧಿಯಾಗಬೇಕು ಎಂಬ ಕೂಗು ಇದೆ. ಮಾದಾಪುರದಲ್ಲಿ ಪಿಯು ಕಾಲೇಜು ನಿರ್ಮಾಣ ಮಾಡಬೇಕು ಎಂಬ ಮನವಿ ಇದೆ. ಕೃಷಿ ಕಾರ್ಮಿಕರಿಗೆ ನಿವೇಶನ ಬೇಕು ಎಂಬ ಆಗ್ರಹ ಇದೆ. ಇದರೊಂದಿಗೆ ಇನ್ನೂ ಇರುವ ಹಲವು ಬೇಡಿಕೆಗಳಿಗೆ ಸ್ಪಂದಿಸುವೆ. ಜೊತೆಗೆ, ಈಚೆಗೆ ಆಕಸ್ಮಿಕ ಬೆಂಕಿಯಿಂದ ಮನೆಯನ್ನು ಕಳೆದುಕೊಂಡವರಿಗೆ ಸಹಾಯ ಹಸ್ತ ಚಾಚುವೆ ಎಂದು ಭರವಸೆ ನೀಡಿದರು.

‘ಇತಿಹಾಸವನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ಇತಿಹಾಸದೊಂದಿಗೆ ನಮಗೆ ಮುಂದಿನ ದೂರದೃಷ್ಟಿಯೂ ಇರಬೇಕು. ಕನ್ನಡ ಭಾಷೆಯು ಕೊಡಗಿನಲ್ಲಿ ನಮ್ಮನ್ನೆಲ್ಲ ಒಂದು ಮಾಡಿದೆ. ಸಾಹಿತಿಗಳಿಗೆ ಪ‍್ರೋತ್ಸಾಹ ಕೊಡುವುದು ನನ್ನ ಜವಾಬ್ದಾರಿ. ಹಾಗಾಗಿ, ಈ ಸಮ್ಮೇಳನದ ಯಶಸ್ವಿಗೆ ಒಂದಿಷ್ಟು ಸಹಕಾರ ನೀಡಿರುವೆ ಎಂದು ತಿಳಿಸಿದರು.
ಸಮ್ಮೇಳನಾಧ್ಯಕ್ಷೆ ಜಲಜಾ ಶೇಖರ್ ಮಾತನಾಡಿ, ‘‘ನಾವು ಎಲ್ಲಾ ಭಾಷೆಗಳನ್ನು ಕಲಿಯೋಣ. ಕನ್ನಡಕ್ಕೆ ಆದ್ಯತೆ ಕೊಡೋಣ’ ಎಂದರು.

‘ಅನ್ಯರಾಜ್ಯದಿಂದ ಬಂದು ನೆಲಸಿರುವವರಿಗೆ ಕನ್ನಡ ಕಲಿಯಲೇ ಬೇಕೆಂಬ ಅನಿವಾರ್ಯತೆಯನ್ನು ನಾವು ಸೃಷ್ಟಿಸಿಲ್ಲ. ಒಂದು ಭಾಷೆಯ ಅಳಿವು – ಉಳಿವು ನಿರ್ಧಾರವಾಗುವುದು ಆ ಭಾಷೆಯನ್ನು ಎಷ್ಟು ಬಳಸುತ್ತಿದ್ದಾರೆ? ಜನ-ಜೀವನವನ್ನು ಎಷ್ಟು ತುಂಬಿಕೊಂಡಿದೆ? ಭಾಷೆಗೆ ಎಷ್ಟು ಮಹತ್ವ ನೀಡುತ್ತಿದ್ದಾರೆ ಎಂಬುದರ ಮೇಲೆ ನಿಂತಿದೆ. ಹಾಗಾಗಿ, ಎಲ್ಲರೂ ಕನ್ನಡವನ್ನು ಹೆಚ್ಚು ಬಳಸಬೇಕು ಎಂದು ಹೇಳಿದರು.
‘ಡಿಜಿಟಲ್ ಸ್ಕ್ರೀನ್’ ಸಮಯ ಹೆಚ್ಚಳದಿಂದ ಮಕ್ಕಳಲ್ಲಿ ಹಿಂಸೆ, ದ್ವೇಷದ ಗುಣಗಳ ಜೊತೆಗೆ ಎಲ್ಲವನ್ನು ಪ್ರತಿಸ್ಪರ್ಧಿಯಂತೆ ಭಾವಿಸುವ ಗುಣಗಳು ಹೆಚ್ಚಾಗುತ್ತಿವೆ. ಮಕ್ಕಳನ್ನು ಮನುಷ್ಯರನ್ನಾಗಿಸಲು ಪುಸ್ತಕ ಪ್ರೀತಿಯ ಬೀಜ ಬಿತ್ತಬೇಕು. ಸಾಹಿತಿಗಳು ಬರೆದ ಪುಸ್ತಕಗಳನ್ನು ಕೊಂಡು ಓದಬೇಕು ಎಂದರು.

ಅಪಘಾತವಾದಾಗ ಇಂದಿನ ಮಕ್ಕಳು ನಿರ್ಲಿಪ್ತರಾಗಿ ಅದನ್ನು ನೋಡುತ್ತಾರೆ. ಅವರಲ್ಲಿ ಮಾನವ ಸಹಜವಾದ ಅನುಕಂಪ ಮೂಡುವುದೇ ಇಲ್ಲ. ಮಕ್ಕಳಿಗೆ, ವಯೋಸಹಜ ಅನುಕಂಪ, ಪ್ರೀತಿಯನುಭೂತಿ ಕಡಿಮೆಯಾಗಲು ಕಾರಣ, ಹೆಚ್ಚುತ್ತಿರುವ ಅವರ ‘ಸ್ಕೀನ್ ಸಮಯ’. ಮಕ್ಕಳಲ್ಲಿ ದಯೆ ಮತ್ತು ಜಗದ ಕಾರುಣ್ಯ ಮರೆಯಾಗುತ್ತಿರುವ ಬಗ್ಗೆ ನಾವೆಲ್ಲ ಕಾಳಜಿ ವಹಿಸಬೇಕಾಗಿದೆ ಎಂದು ಕಿವಿಮಾತು ಹೇಳಿದರು.
ಮುಖ್ಯ ಭಾಷಣ ಮಾಡಿದ ಮೈಸೂರಿನ ಸಾಹಿತಿ ಜಯಪ್ಪ ಹೊನ್ನಾಳಿ ‘ನಾವು ನವೆಂಬರ್ ಕನ್ನಡಿಗರಾಗದೇ, ‘ನಾವೆಂಬರು ಕನ್ನಡಿಗರು’ ಅಥವಾ ‘ನಂಬರ್ ಒನ್ ’ಕನ್ನಡಿಗರಾಗಬೇಕು. ಭಾಷೆಯ ವಾರಸುದಾರರಾದ ನಮಗೆ ಅಭಿಮಾನ ಇರಬೇಕು’ ಎಂದು ಪ್ರತಿಪಾದಿಸಿದರು.

‘ಕಾಯಬೇಕಾದ ಕನ್ನಡಿಗರೇ ಇಂದು ಕನ್ನಡವನ್ನು ಕೊಲ್ಲುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಕನ್ನಡದ ನೆಲದಲ್ಲೇ ಕನ್ನಡವನ್ನು ಉಳಿಸಿ, ಬೆಳೆಸಿ ಎಂದು ಕೇಳಿಕೊಳ್ಳುವ ಸ್ಥಿತಿ ಬಂದಿರುವುದು ದುರ್ದೈವದ ಸಂಗತಿ ಎಂದರು.
ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷೆ ಶ.ಗ.ನಯನಾತಾರಾ ಮಾತನಾಡಿ, ಹಳ್ಳಿಗಳಲ್ಲಿ ನಡೆಯುವ ಇಂತಹ ಸಮ್ಮೇಳನದಿಂದ ಕನ್ನಡದ ಅಭಿವೃದ್ಧಿಯಾಗುತ್ತದೆ, ಏಕತೆ ಮೂಡುತ್ತದೆ ಎಂದು ಹೇಳಿದರು.
‘ಹಿಂದೆ ಕೊಡಗಿನಲ್ಲಿ ಸಾಹಿತಿಗಳಿಲ್ಲ ಎಂದು ಮೂಗು ಮುರಿಯುತ್ತಿದ್ದರು. ಆದರೆ, ಈಗ ಕೊಡಗಿನಲ್ಲಿ ಸಾಹಿತಿಗಳು ತುಂಬಿ ತುಳುಕುತ್ತಿದ್ದು, ಮೂಗು ಮುರಿದವರೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಾಗಿದೆ’ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಮಾತನಾಡಿ, ‘ಕನ್ನಡ ಉಳಿಸಿ ಬೆಳಸಲು ತಾಲ್ಲೂಕು ಹೋಬಳಿ ಮಟ್ಟದಲ್ಲೂ ಕಾರ್ಯಕ್ರಮ ಆಯೋಜಿಸಲು ಚಿಂತನೆ ನಡದಿದೆ. ಕನ್ನಡ ನುಡಿ ಬೆಳಸಲಿ ಸಮ್ಮೇಳನ ಸಹಕಾರಿ. ಈ ಸಮ್ಮೇಳನದ ಯಶಸ್ವಿಗಾಗಿ 11 ಸಮಿತಿ ರಚನೆ ಮಾಡಿದ್ದೇವೆ. 11 ದ್ವಾರಗಳ ನಿರ್ಮಾಣ ಮಾಡಲಾಗಿದೆ. ಮಹನೀಯರ ತ್ಯಾಗ ಸಾಧನೆ ಗೊತ್ತಾಗಬೇಕು ಎಂಬ ಕಾರಣಕ್ಕೆ ದ್ವಾರ ನಿರ್ಮಿಸಿದ್ದೇವೆ ಎಂದರು.
ಸಮ್ಮೇಳನದಲ್ಲಿ ಜಲಜಾ ಶೇಖರ್ ಅವರ ನಿರುತ್ತರ, ಬೆಸೂರು ಮೋಹನ್ ಪಾಳೇಗಾರ್ ಅವರ ‘ಕಾಂಪೌಂಡ್‌ಗೆ ಬಣ್ಣ ಮನೆಗೆ ಸುಣ್ಣವಿಲ್ಲ’, ಜಲಾ ಕಾಳಪ್ಪ ಅವರ ನೆಮ್ಮದಿ, ಶರ್ಮಿಳಾ ರಮೇಶ್ ಅವರ ಭವಭಾವದೆಡೆಗೆ ವಿಕಾಸದ ಕ್ಷಣ, ಲಾವಣ್ಯ ಮೋಹನ್ ಅವರ ಪುಷ್ಕರಿಣಿ, ಯಶಸ್ವಿ ಗಣೇಶ್ ಅವರ ಸಪ್ತ ಸ್ವರ ತಾಣ ಪುಸ್ತಕಗಳನ್ನು ಹಾಗೂ ಸಮ್ಮೇಳನದ ಸ್ಮರಣ ಸಂಚಿಕೆ ‘ಐಗೂರಿನ ಐಸಿರಿ’ಯ ಮುಖಪುಟವನ್ನು ಬಿಡುಗಡೆ ಮಾಡಲಾಯಿತು.
ಇದಕ್ಕೂ ಮುನ್ನ ಸಮ್ಮೇಳನ ಉದ್ಘಾಟಿಸಿದ ಹಿರಿಯ ಮುಖಂಡ ಬಿ.ಎ.ಜೀವಿಜಯ, ‘ಅಜ್ಞಾನಕ್ಕೆ ಸಾವಿದೆ, ಜ್ಞಾನಕ್ಕೆ ಸಾವಿಲ್ಲ’ ಎಂದರು. ಕನ್ನಡ ಸಾಹಿತ್ಯದ ಪರಿವರ್ತನೆಯ ಘಟ್ಟಗಳನ್ನು ವಿವರಿಸಿದರು.
ಇದಕ್ಕೂ ಮುನ್ನ ಧ್ವಜಾರೋಹಣದ ಮೂಲಕ ಸಮ್ಮೇಳನ ಆರಂಭವಾಯಿತು. ಸಾಧಕರ ಹೆಸರಿನಲ್ಲಿದ್ದ ದ್ವಾರಗಳನ್ನು ಉದ್ಘಾಟಿಸಲಾಯಿತು. ಕಬ್ಬಿಣದ ಸೇತುವೆ ಸಮೀಪದಿಂದ ಹೊರಟ ಸಮ್ಮೇಳನದ ಸರ್ವಾಧ್ಯಕ್ಷೆ ಜಲಜಾ ಶೇಖರ್ ಅವರ ಮೆರವಣಿಗೆಯು ಐಗೂರು–ಯಡವಾರೆ ಮಾರ್ಗವಾಗಿ ಕಾಜೂರು ಅರಣ್ಯ ವಸತಿಗೃಹದ ಮೂಲಕ ಐಗೂರಿನ ಕಾಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನ ತಲುಪಿತು. ಮಂಗಳವಾದ್ಯಗಳು, ಪೂರ್ಣಕುಂಭ, ವಿವಿಧ ಕಲಾತಂಡಗಳು, ಸ್ತಬ್ದಚಿತ್ರಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು.
ಪುಸ್ತಕ ಮಾರಾಟ ಸೇರಿದಂತೆ ವಿವಿಧ ಬಗೆಯ ಹತ್ತಾರು ಮಳಿಗೆಗಳು ಅಲ್ಲಿದ್ದವು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರಕ್ತದಾನ ಶಿಬಿರವೂ ನಡೆಯಿತು.
ಜ್ಯೋತಿ ಅರುಣ್ ಅವರ ನಿರೂಪಣೆ, ಗಂಧರ್ವ ಕಲಾ ತಂಡದವರ ರೈತ ಗೀತೆ, ಕಾಜೂರು ಐಗೂರು ಶಾಲಾ ಶಿಕ್ಷಕರಿಂದ ನಾಡಗೀತೆಗಳು ಗಮನ ಸೆಳೆದವು.
ಕಾಫಿ ಬೆಳೆಗಾರರಾದ ವಿನೋದ್ ಶಿವಪ್ಪ, ಕೆ.ಪಿ.ಚಂದ್ರಕಲಾ, ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್, ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷೆ ಶ.ಗ.ನಯನತಾರಾ, ಪರಿಷತ್ತಿನ ಸೋಮವಾರಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಟಿ.ವಿಜೇತ್, ಐಗೂರು ಹೋಬಳಿ ಘಟಕದ ಅಧ್ಯಕ್ಷ ನಂಗಾರು ಕೀರ್ತಿಪ್ರಸಾದ್, ಪರಿಷತ್ತಿನ ಪದಾಧಿಕಾರಿಗಳಾದ ಎಸ್.ಐ.ಮುನೀರ್ ಅಹಮ್ಮದ್, ಎಸ್.ಎಸ್.ಸಂಪತ್ ಕುಮಾರ್, ಕಡ್ಲೇರ ತುಳಸಿ ಮೋಹನ್, ರೇವತಿ ರಮೇಶ್, ಕೆ.ಎ.ನಾಗೇಶ್, ಮುಖಂಡರಾದ ಕೆ.ಪಿ.ಚಂದ್ರಕಲಾ, ಕೆ.ಎನ್.ದೇವರಾಜು, ವಿ.ಪಿ.ಶಶಿಧರ್, ತಹಶಿಲ್ದಾರ ಕೆ.ಕೆ.ಕೃಷ್ಣಮೂರ್ತಿ ಭಾಗವಹಿಸಿದ್ದರು.
Kodagu
ಮಾರ್ಚ್ ಅಂತ್ಯದೊಳಗೆ ಹೋಂ ಸ್ಟೇಗೆ ಪರವಾನಗಿ ಹಾಗೂ ನವೀಕರಣಕ್ಕೆ ಡಿಸಿ ಸೋಮಶೇಖರ್ ಸೂಚನೆ
ಮಡಿಕೇರಿ : ಜಿಲ್ಲೆಯಲ್ಲಿನ ಹೊಸ ಹೋಂ ಸ್ಟೇಗಳ ನೋಂದಣಿ ಮತ್ತು ಈಗಾಗಲೇ ಇರುವ ಹೋಂ ಸ್ಟೇಗಳಿಗೆ ಪರವಾನಗಿ ನೀಡುವುದು ಹಾಗೂ ಈಗಾಗಲೇ ನೋಂದಾಯಿಸಿರುವ ಹೋಂಸ್ಟೇಗಳಿಗೆ ನವೀಕರಣವನ್ನು ಮಾ.31 ರೊಳಗೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಆನ್‌ಲೈನ್ ಮೂಲಕ ಪರವಾನಗಿ ನೋಂದಣಿ ಹಾಗೂ ನವೀಕರಣ ಕಾರ್ಯವು ಸ್ಥಗಿತವಾಗಿದ್ದು, ತಾತ್ಕಾಲಿಕವಾಗಿ ಆಪ್‌ಲೈನ್ ಮೂಲಕ ಸ್ಥಳ ಪರಿಶೀಲಿಸಿ ಅನುಮೋದನೆ ಮಾಡಬೇಕಿದ್ದು, ಆ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರು ಹಾಗೂ ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಅವರು ಫೆ.7 ರವರೆಗೆ 100 ಹೊಸ ಹೋಂ ಸ್ಟೇಗಳಿಗೆ ಪರವಾನಗಿ ನೀಡಲು ಅರ್ಜಿ ಸಲ್ಲಿಕೆಯಾಗಿವೆ. ಹಾಗೆಯೇ 180 ಹೋಂ ಸ್ಟೇಗಳ ನವೀಕರಣಕ್ಕೆ ಅರ್ಜಿ ಸಲ್ಲಿಕೆಯಾಗಿದೆ ಎಂದು ಅವರು ಮಾಹಿತಿ ನೀಡಿದರು.

ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಸೋಮಶೇಖರ್ ಅವರು ಖುದ್ದಾಗಿ ಸ್ಥಳಕ್ಕೆ ತೆರಳಿ, ನೋಂದಣಿ ಹಾಗೂ ನವೀಕರಣ ಕಾರ್ಯವನ್ನು ಕೈಗೊಳ್ಳಬೇಕು. ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಮಾರ್ಚ್ ಅಂತ್ಯದೊಳಗೆ ಪರಿಶೀಲಿಸಿ ಅರ್ಜಿ ವಿಲೇವಾರಿಗೆ ಕ್ರಮವಹಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ನಾಗೇಂದ್ರ ಪ್ರಸಾದ್, ಹೋಂ ಸ್ಟೇ ಅಸೋಷಿಯೇಷನ್ ಅಧ್ಯಕ್ಷರಾದ ಮೋಂತಿ ಗಣೇಶ್ ಅವರು ಮಾತನಾಡಿ, ಕೊರೋನಾ ಸಂದರ್ಭದಲ್ಲಿ ಹಲವು ಹೋಂ ಸ್ಟೇಗಳು ಮುಚ್ಚಿ ಹೋದವು. ಆ ಸಂದರ್ಭದಲ್ಲಿ ಬದುಕು ನಡೆಸುವುದೇ ದುಸ್ತರವಾಗಿತ್ತು ಎಂದು ಹೇಳಿದರು.

ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಪ್ರತೀವರ್ಷ ಅರ್ಥಪೂರ್ಣವಾಗಿ ಆಯೋಜಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಅವರು ಇದೇ ಸಂದರ್ಭದಲ್ಲಿ ಸಲಹೆ ಮಾಡಿದರು.
ಕೂರ್ಗ್ ವಿಲೇಜ್ ಅಭಿವೃದ್ದಿ ಸಂಬಂಧಿಸಿದಂತೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ನಗರಸಭೆ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಆಸಕ್ತರನ್ನು ಒಳಗೊಂಡ ಉಪ ಸಮಿತಿ ರಚಿಸುವಂತೆ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಉಪಾಧ್ಯಕ್ಷರಾದ ನವೀನ್ ಅಂಬೆಕಲ್ಲು ಅವರು ೯೮ ಲಕ್ಷ ರೂ. ಖರ್ಚು ಮಾಡಿ ಕೂರ್ಗ್ ವಿಲೇಜ್‌ನ್ನು ನಿರ್ಮಿಸಲಾಗಿದೆ. ಅಲ್ಲಿ ಮತ್ತೆ ವೆಚ್ಚ ಮಾಡುವುದಕ್ಕಿಂತ ರಾಜಾಸೀಟನ್ನು ಅಭಿವೃದ್ಧಿ ಪಡಿಸುವುದು ಒಳಿತು ಎಂದು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಶಶಿಧರ ಅವರು ಸ್ವಸಹಾಯ ಗುಂಪುಗಳಿಗೆ ಹಾಗೂ ವಿವಿಧ ಇಲಾಖೆಗಳಿಗೆ ಮಳಿಗೆ ನೀಡಲು ನಿರ್ಧರಿಸಲಾಗಿತ್ತು, ಆ ಸಂದರ್ಭದಲ್ಲಿ ಯಾರೂ ಸಹ ಮುಂದೆ ಬರಲಿಲ್ಲ ಎಂದು ಸದ್ಯ ಆರ್ಟ್ ಗ್ಯಾಲರಿ, ಮತ್ತಿತರ ಮಳಿಗೆಯನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದರು.
ಮೋಂತಿ ಗಣೇಶ್ ಅವರು ಮಾತನಾಡಿ ಕೂರ್ಗ್ ವಿಲೇಜ್ ಬಳಕೆಯಾಗಬೇಕು. ಜೊತೆಗೆ ನೆಹರು ಮಂಟಪವನ್ನು ಅಭಿವೃದ್ಧಿ ಪಡಿಸಬೇಕು ಎಂದು ಸಲಹೆ ನೀಡಿದರು.
ರಾಜಾಸೀಟು ಅಭಿವೃದ್ಧಿ ಸಮಿತಿಯಲ್ಲಿ ಆಸಕ್ತರನ್ನು ಆಹ್ವಾನಿಸಬೇಕು. ಉಪ ಸಮಿತಿ ರಚನೆ ಮಾಡಿ ಪ್ರವಾಸಿ ಕೇಂದ್ರವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ನಗರಸಭೆ, ತೋಟಗಾರಿಕೆ ಇಲಾಖೆ, ಉಪ ವಿಭಾಗಾಧಿಕಾರಿಯವರು ಹಾಗೆಯೇ ಸಂಚಾರಿ ಪೊಲೀಸರು ಹಾಗೂ ಸಾರ್ವಜನಿಕರನ್ನು ಒಳಗೊಂಡ ಉಪ ಸಮಿತಿಯನ್ನು ರಚನೆ ಮಾಡಿಕೊಂಡು ರಾಜಾಸೀಟು ಅಭಿವೃದ್ಧಿಗೆ ಮುಂದಾಗುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ರಾಜಾಸೀಟಿನಲ್ಲಿ ಪುಟಾಣಿ ರೈಲು ಸಂಬಂಧಿಸಿದಂತೆ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಮೈಸೂರಿನ ರೈಲ್ವೆ ಅಧಿಕಾರಿಗಳ ಜೊತೆ ಚರ್ಚಿಸಿ ತ್ವರಿತ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೊಡವ ಹೆರಿಟೇಜ್ ಸೆಂಟರ್ ಇನ್ನೂ ಪೂರ್ಣಗೊಳ್ಳದಿರುವುದಕ್ಕೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ನಾಗೇಂದ್ರ ಪ್ರಸಾದ್ ಅವರು ಪ್ರತೀ ವರ್ಷ ಚರ್ಚೆಗೆ ಬರುತ್ತಿದೆ. ಆದರೆ ಕೆಲಸ ಆಗಿಲ್ಲ ಎಂದು ದೂರಿದರು.
ಭಾರತ ಸರ್ಕಾರದ ನಾಗರಿಕ ಸೇವೆಯಲ್ಲಿದ್ದ ಕೊಡಗು ಜಿಲ್ಲೆಯ ರತಿ ವಿನೇಜಾ ಅವರ ಪ್ರಯತ್ನದಿಂದ ಕೊಡವ ಹೆರಿಟೇಜ್ ಸ್ಥಾಪನೆಗೆ ಮುಂದಾಗಲಾಗಿತ್ತು. ಆದರೆ ಈ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಮೋಂತಿ ಗಣೇಶ್ ಅವರು ಹೇಳಿದರು.
ಹೋಂ ಮೇಡ್ ವೈನ್, ಚಾಕಲೇಟ್ ತಯಾರಿಕೆ ಹಾಗೂ ಸ್ಪೈಸಸ್ ಹೆಸರಿನಲ್ಲಿ ಕೊಡಗು ಜಿಲ್ಲೆಯಲ್ಲಿ ಸುಳ್ಳು ಹೇಳಿ ವ್ಯಾಪಾರ ಮಾಡುತ್ತಿದ್ದು, ಇದಕ್ಕೆ ಕಡಿವಾಣ ಬೀಳಬೇಕು ಎಂದು ಮೋಂತಿ ಗಣೇಶ್ ಅವರು ಮನವಿ ಮಾಡಿದರು.
’ಕೊಡಗು ಸಿಲ್ಕ್’ ಹೆಸರಿನಲ್ಲಿ ಸೀರೆಯನ್ನು ಮಾರುವುದು ಕಂಡು ಬರುತ್ತಿದೆ. ಇದಕ್ಕೆ ಅರ್ಥವಿದೆಯೇ ಎಂದು ಕರುಂಬಯ್ಯ ಅವರು ಗಮನ ಸೆಳೆದರು.
ಕೊಡಗು ಹೋಂ ಮೇಡ್ ಹೆಸರಿನಲ್ಲಿ ಕಡಿಮೆ ಬೆಲೆಗೆ ವೈನ್ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಗಮನಹರಿಸಬೇಕು. ಆರೋಗ್ಯ ಸುರಕ್ಷತೆಗೆ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಬಕಾರಿ ಇಲಾಖೆ ಇನ್ಸ್‌ಪೆಕ್ಟರ್ ಅಬ್ರಾಹಂ ಚೇತನ್ ಅವರು ಹೋಂ ಮೇಡ್ ವೈನ್‌ನಲ್ಲಿ ಶೇ.6.8 ರಷ್ಟು ಆಲ್ಕೋ ಹಾಲ್ ಅಂಶ ಇರುವುದು ಕಂಡುಬಂದಿದೆ ಎಂದು ಅವರು ತಿಳಿಸಿದರು.
ಹೋಂ ಮೇಡ್ ಚಾಕಲೇಟ್ ಸಂಬಂಧಿಸಿದಂತೆ ತಯಾರಿಕಾ ದಿನಾಂಕ ಹಾಗೂ ವರ್ಷ, ತಯಾರಿಕೆ ಸಂಸ್ಥೆಯ ಹೆಸರು, ಎಕ್ಸ್‌ಪೈಯರಿ ಡೇಟ್, ಪರವಾನಗಿ ಮತ್ತಿತರ ಅಂಶಗಳು ಒಳಗೊಂಡಿರಬೇಕು ಎಂದು ಅವರು ಹೇಳಿದರು.
ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಗೆ ರಾಜಾಸೀಟು ವೀಕ್ಷಣೆಗೆ ವಾರಾಂತ್ಯದಲ್ಲಿ ಸಾವಿರಾರು ಜನರು ಆಗಮಿಸುತ್ತಾರೆ. ಇದರಿಂದ ಪ್ರವಾಸಿ ವಾಹನಗಳ ನಿಲುಗಡೆಗೆ ತೊಂದರೆಯಾಗಿದೆ. ಆದ್ದರಿಂದ ಈ ಬಗ್ಗೆ ಗಮನಹರಿಸಬೇಕು ಎಂದು ನಾಗೇಂದ್ರ ಪ್ರಸಾದ್ ಅವರು ಹೇಳಿದರು.
ಕಳೆದ 15 ವರ್ಷಗಳಿಂದ ಇದೇ ಮಾಹಿತಿ ಹೇಳಿಕೊಂಡು ಬರಲಾಗಿದೆ. ಆದರೆ ಕೆಲಸಗಳು ಆಗಿಲ್ಲ ಎಂದು ಸಮಿತಿ ಸದಸ್ಯರೊಬ್ಬರು ಅತೃಪ್ತಿ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕರಾದ ಬಿ.ಬಸಪ್ಪ ಅವರು ನಗರೋತ್ಥಾನ ಯೋಜನೆಯಡಿ ಟೆಂಡರ್ ಆಗಿದ್ದು, ಶೀಘ್ರ ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ವಾಹನ ನಿಲುಗಡೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಆದಷ್ಟು ಕಾಮಗಾರಿಯನ್ನು ಶೀಘ್ರ ಆರಂಭಿಸುವಂತೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಮಾತನಾಡಿ ಜಿಲ್ಲೆಯಲ್ಲಿ ಪ್ಲಾಸ್ಟಿಕ್‌ನ್ನು ಹಂತ ಹಂತವಾಗಿ ರದ್ದುಗೊಳಿಸಬೇಕಿದೆ. ಮಾ.1 ರಿಂದ ಏ.1 ರ ತನಕ ಸ್ವಚ್ಚ ಹಾಗೂ ಸುಂದರ ಕೊಡಗು ಹೆಸರಿನಲ್ಲಿ ಅಭಿಯಾನ ಆಯೋಜಿಸುವಂತೆ ಜಿಲ್ಲಾಧಿಕಾರಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‌ನ ನಿರ್ದೇಶಕರಾದ ಶ್ಯಾಮ್ ಅವರು ಕಲ್ಯಾಣ ಮಂಟಪದಲ್ಲಿಯೂ ಸಹ ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಮೂಡಿಸಬೇಕು. ಕುಟ್ಟ ಹಾಗೂ ಮಾಕುಟ್ಟ ಗಡಿ ಪ್ರದೇಶದಲ್ಲಿ ವಾಹನಗಳ ತಪಾಸಣೆ ಮಾಡಿ ಪರಿಸರ ಶುಚಿತ್ವಕ್ಕೆ ಒತ್ತು ನೀಡಬೇಕು ಎಂದು ಸಲಹೆ ಮಾಡಿದರು.
ಮಾಂದಲ್ ಪಟ್ಟಿಗೆ ತೆರಳುವ ವಾಹನ ಸಂಬಂಧಿಸಿದಂತೆ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆ ಫ್ರೀಪೈಡ್ ವಾಹನಕ್ಕೆ ಅವಕಾಶ ಮಾಡುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಾಗೇಂದ್ರ ಪ್ರಸಾದ್ ಅವರು ದುಬಾರೆಯಲ್ಲಿ ಪ್ರೀಪೈಡ್ ಮಾದರಿಯಲ್ಲಿ ಬೋಟ್‌ಗಳು ಸಂಚರಿಸುತ್ತಿವೆ ಎಂದರು.
ಮಾಂದಲ್ ಪಟ್ಟಿಯಲ್ಲಿ ಬಾಡಿಗೆ ವಾಹನದಾರರು ಪ್ರವಾಸಿಗರಿಂದ ಹೆಚ್ಚಿನ ಶುಲ್ಕ ಪಡೆಯುತ್ತಿರುವ ದೂರುಗಳು ಕೇಳಿಬರುತ್ತಿರುವ ಹಿನ್ನೆಲೆ ಪ್ರೀಪೈಡ್ ಮಾದರಿಯಲ್ಲಿ ಶುಲ್ಕ ನಿಗಧಿ ಮಾಡುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೆಂಥಿಲ್ ಕುಮಾರ್ ಮಾಂದಲ್ ಪಟ್ಟಿಯಲ್ಲಿ ಸುಗಮ ಸಾರಿಗೆ ಸಂಚಾರ ಸಂಬಂಧ ಸಣ್ಣ ಸಣ್ಣ ಕಲ್ಲುಗಳನ್ನು ಅಳವಡಿಸಿ ರಸ್ತೆ ನಿರ್ಮಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ನಾಗೇಂದ್ರ ಪ್ರಸಾದ್ ಅವರು ಗಡಿ ಭಾಗದಲ್ಲಿ ವೈಟ್‌ಬೋರ್ಡ್‌ಗಳನ್ನು ತಪಾಸಣೆ ಮಾಡಬೇಕು. ತೆರಿಗೆಯನ್ನು ಸಂಗ್ರಹಿಸಬೇಕು ಎಂದರು.
ಈ ಕುರಿತು ಪ್ರತಿಕ್ರಿಯಿಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ಸತೀಶ್ ಅವರು ಜಿಲ್ಲೆಯಲ್ಲಿ 1.69 ಕೋಟಿಯಷ್ಟು ವಾಹನ ತೆರಿಗೆ ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ನಾಗೇಂದ್ರ ಪ್ರಸಾದ್ ಅವರು ಮಾತನಾಡಿ ಕುಶಾಲನಗರದಲ್ಲಿ ತಾವರೆಕೆರೆಯನ್ನು ಪ್ರವಾಸೋದ್ಯಮವಾಗಿ ಅಭಿವೃದ್ಧಿ ಪಡಿಸಬೇಕು. ಅಬ್ಬಿಪಾಲ್ಸ್, ತೂಗುಸೇತುವೆ ಸರಿಪಡಿಸುವಂತಾಗಬೇಕು ಎಂದು ಅವರು ಸಲಹೆ ಮಾಡಿದರು.
ಜಿಲ್ಲೆಯಲ್ಲಿ ಡ್ರಗ್ಸ್ ನಿಯಂತ್ರಿಸುವ ಸಂಬಂಧ ಹೋಂಸ್ಟೇಗಳ ಪರಿಶೀಲನೆ ಮಾಡಬೇಕು ಎಂದು ಉಪ ವಿಭಾಗಾಧಿಕಾರಿ ಸಲಹೆ ಮಾಡಿದರು. ಈ ಕುರಿತು ಪ್ರತಿಕ್ರಿಯಿಸಿದ ಶ್ಯಾಮ್ ಅವರು ನವೀಕರಣ ಸಂದರ್ಭದಲ್ಲಿ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.
ದುಬಾರೆಯಲ್ಲಿನ ಆನೆ ಶಿಬಿರ ವೀಕ್ಷಣೆಗೆ ತೆರಳುವ ಸಂದರ್ಭದಲ್ಲಿ ಸಾರ್ವಜನಿಕರಿಂದ ಪ್ರವೇಶ ಶುಲ್ಕವನ್ನು ಹೆಚ್ಚು ತೆಗೆದುಕೊಳ್ಳಲಾಗುತ್ತಿದ್ದು, ಇದನ್ನು ಕಡಿಮೆ ಮಾಡಬೇಕು ಎಂದು ಸಮಿತಿ ಸದಸ್ಯರೊಬ್ಬರು ಹೇಳಿದರು.
ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಇಬ್ರಾಹಿಂ ಅವರು ಮಾತನಾಡಿ ದುಬಾರೆಯಲ್ಲಿ ತೂಗುಸೇತುವೆ ನಿರ್ಮಿಸುವ ಸಂಬಂಧ ಟೆಂಡರ್ ಆಗಿದ್ದು, ಕಾರ್ಯಾದೇಶ ನೀಡಬೇಕಿದೆ ಎಂದು ಹೇಳಿದರು.
ಟೂರ್ ಅಂಡ್ ಟ್ರಾವಲ್ ಅಸೋಷಿಯೇಷನ್ ಅಧ್ಯಕ್ಷರಾದ ಕುಪ್ಪಂಡ ವಸಂತ್ ಅವರು ಪ್ರವಾಸಿ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಯಾವುದೇ ಕಿರಿಕಿರಿ ಉಂಟಾಗದಂತೆ ಗಮನಹರಿಸಲಾಗುವುದು ಎಂದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಬಿ.ಬಸಪ್ಪ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಶಶಿಧರ, ಉಪ ಪೊಲೀಸ್ ವರಿಷ್ಠಾಧಿಕಾರಿ ಐ.ಪಿ.ಮೇದಪ್ಪ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಸಚಿನ್, ಜಿಲ್ಲಾ ಪರಿಸರ ಅಧಿಕಾರಿ ರಘುರಾಮ್, ದುಬಾರೆ ರಿವರ್ ರ್‍ಯಾಪ್ಟಿಂಗ್ ಮೆಂಬರ್ ವಿಶ್ವ ಇತರರು ಹಲವು ಮಾಹಿತಿ ನೀಡಿದರು. ಪ್ರವಾಸೋದ್ಯಮ ಇಲಾಖೆಯ ಸಮಾಲೋಚಕರಾದ ಜತಿನ್ ಬಿದ್ದಪ್ಪ ಇತರರು ಇದ್ದರು.
-
Mandya13 hours agoಕೆರೆ ಒತ್ತುವರಿ ತೆರವುಗೊಳಿಸದಿದ್ದರೆ ಶಿಸ್ತು ಕ್ರಮ: ಸಮಯ ನಿಗದಿಗೊಳಿಸಿ ಸೂಚನೆ ನೀಡಿದ ಡಿಸಿ ಡಾ.ಕುಮಾರ
-
Mandya14 hours agoಬೂದನೂರು ಗ್ರಾಮ ಪಂಚಾಯತಿಗೆ ನೇಮಕವಾಗಿರುವ ಆಡಳಿತಾಧಿಕಾರಿಗೆ ಗ್ರಾಮಸ್ಥರಿಂದ ಭವ್ಯ ಸ್ವಾಗತ
-
Hassan14 hours agoಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಎಚ್ಡಿಕೆ ಅಭಿಮಾನಿಗಳಿರುವ ಕ್ಷೇತ್ರ: ನಿಖಿಲ್ ಕುಮಾರಸ್ವಾಮಿ
-
Chamarajanagar21 hours agoಚಿರತೆ ದಾಳಿ: ಹಸು ಬಲಿ ಗ್ರಾಮಸ್ಥರಲ್ಲಿ ಆತಂಕ
-
Mysore19 hours agoಹಣ್ಣುಗಳ ಮಹತ್ವ, ಪೌಷ್ಟಿಕಾಂಶದ ಬಗ್ಗೆ ಅರಿವು ಮೂಡಿಸಿದ ರವಿ ಮಹದೇವ್
-
Mandya12 hours agoಜಿಲ್ಲೆಯ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಿ : ಮನೋಜ್ ಕುಮಾರ್ ಮೀನಾ
-
Special8 hours agoಸ್ತ್ರೀ ಶಕ್ತಿ ಪ್ಯಾಕೇಜ್: ಮಹಿಳೆಯರಿಗೆ ಭದ್ರತೆಯಿಲ್ಲದೇ 10 ಲಕ್ಷದವರೆಗೆ ಸಾಲ!
-
Mandya11 hours agoಫೆ.13 ರಿಂದ 19 ರವರೆಗೆ ಪ್ರಜಾಪಿತ ಬ್ರಹ್ಮ ಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ 90ನೇ ಮಹಾಶಿವರಾತ್ರಿ ಮಹೋತ್ಸವ
