Connect with us

Mysore

*ಹೋರಾಟಗಾರ ಸ.ರ‌.ಸುದರ್ಶನ್ ನಿಧನ*

Published

on

ಮೈಸೂರು: ಕನ್ನಡ ಪರ ಹೋರಾಟಗಾರ, ರಾಮಕೃಷ್ಣನಗರದ ನೃಪತುಂಗ ಕನ್ನಡ ಶಾಲೆಯ ಸ್ಥಾಪಕರಲ್ಲೊಬ್ಬರಾದ ಸ.ರ. ಸುದರ್ಶನ್ (73) ಭಾನುವಾರಬೆಳಗ್ಗೆ ಹೃದಯಾಘಾತದಿಂದ ವಿಜಯನಗರದ ತಮ್ಮ ಮನೆಯಲ್ಲಿ ನಿಧನರಾದರು.

ಅವರಿಗೆ ಒಬ್ಬರೇ ಪುತ್ರಿ ಎಂಜಿನಿಯರ್ ಹಾಗೂ ರಂಗ ಕಲಾವಿದೆ ನುಡಿ ಸುದರ್ಶನ್ ಇದ್ದಾರೆ.
ಐವತ್ತು ವರ್ಷಗಳ ಹಿಂದೆಯೇ ಮೊದಲ ಬಾರಿಗೆ ಕನ್ನಡ ಚಳವಳಿಯಲ್ಲಿ ಸುದರ್ಶನ್ ಪಾಲ್ಗೊಳ್ಳುವಿಕೆ. ಅಂದಿನಿಂದ ಇಂದಿನವರೆಗೆ ಸತತವಾಗಿ ಕನ್ನಡ ಚಳವಳಿಯಲ್ಲಿ ಭಾಗಿ.
ಎಂಬತ್ತರ ರ ದಶಕದಲ್ಲಿ ಪ್ರಾರಂಭವಾದ ಗೋಕಾಕ್ ಚಳವಳಿಯಲ್ಲಿ ಕನ್ನಡ ಕ್ರಿಯಾ ಸಮಿತಿ ವತಿಯಿಂದ ಆರಂಭದಿಂದಲೂ ಭಾಗಿ. ಮೂರು ದಿನಗಳ ಬಂಧನ. ಕನ್ನಡ ಕ್ರಿಯಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಅಂದು ಆಯ್ಕೆ, ಇಂದಿನವರೆಗೂ ಮುಂದುವರಿಕೆ.


ಸರಕಾರದ ವತಿಯಿಂದ ಕನ್ನಡಕ್ಕೆ ಕುತ್ತು ಬಂದ ಬಹುತೇಕ ಸಂದರ್ಭಗಳಲ್ಲಿ ಹೋರಾಟ. ಹಲವಾರು ಧರಣಿಗಳು, ಪ್ರತಿಭಟನೆಗಳು ಮತ್ತಿತರ ವಿಧಾನಗಳು. ಹಲವು ಬಾರಿ ಬಂಧನ, ಬಿಡುಗಡೆ.
ವಿದ್ಯಾರ್ಥಿ ದಿಸೆಯಲ್ಲಿದ್ದಾಗಲೇ ಗೆಳೆಯರು ಆರಂಭಿಸಿದ ಚೇತನ ಕನ್ನಡ ಸಂಘದ ಕಾರ್ಯದರ್ಶಿ. ಒಂದು ದಶಕಗಳಿಗೂ ಹೆಚ್ಚು ಕಾಲ ವಿಶಿಷ್ಟವಾದ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಎಪ್ಪತ್ತರ ದಶಕದಲ್ಲಿ ಮೈಸೂರಿನಲ್ಲಿ ಮನೆ ಮಾತಾಗಿದ್ದ ಸಂಘ. ನಾಟಕ, ಚಳವಳಿ, ಪುಸ್ತಕ ಯಾತ್ರೆ, ಸಮೀಕ್ಷೆಗಳಂತಹ ಕಾರ್ಯಕ್ರಮಗಳ ಮೂಲಕ ಹೊಸ ಛಾಪನ್ನು ಮೂಡಿಸಿದ ಸಂಘ.
ಮೈಸೂರು ವಿಶ್ವವಿದ್ಯಾನಿಲಯದ ಭೂ ವಿಜ್ಞಾನ ಸ್ನಾತಕೋತ್ತರ ಪದವಿ (ಎಂ ಎಸ್ ಸಿ ಭೂವಿಜ್ಞಾನ) ಪಡೆದ ಅವರು, ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತರೂ ಪರೀಕ್ಷೆಯಲ್ಲಿ ಕನ್ನಡದಲ್ಲಿ ಉತ್ತರಿಸಿ ಮೂರನೇ ರ್‍ಯಾಂಕ್ ಪಡೆದರು.
40 ವರ್ಷಗಳ ಹಿಂದೆಯೇ ಪ್ರಸಿದ್ಧ ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರ ಜೊತೆಗೂಡಿ ಪದವಿಮಟ್ಟದ ವಿದ್ಯಾರ್ಥಿಗಳಿಗಾಗಿ ‘ಬದಲಾಗುತ್ತಿರುವ ಭೂಮಿ` ಎಂಬ ಪುಸ್ತಕ ಪ್ರಕಟಣೆ. ಪ್ರಸಿದ್ಧ ಭೂ ವಿಜ್ಞಾನ ಲೇಖಕರು ಹಾಗೂ ಪ್ರಾಧ್ಯಾಪಕರು ಆಗಿದ್ದ ದಿವಂಗತ ಡಾ. ಬಿ. ವಿ. ಗೋವಿಂದರಾಜುಲು ಅವರೊಂದಿಗೆ ಅನುವಾದಿಸಿದ “ಭೂ ಸ್ವರೂಪ ವಿಜ್ಞಾನ’ ಎಂಬ ಸ್ನಾತಕೋತ್ತರ ಮಟ್ಟದ ಕೃತಿ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಿಂದ ಪ್ರಕಟಣೆ. ಪ್ರಸ್ತುತ ‘ಭೂ ವಿಜ್ಞಾನ ವಿಷಯ ವಿಶ್ವಕೋಶ’ದ ಗೌರವ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಎಲ್‌ಎಲ್‌ಬಿ ಪರೀಕ್ಷೆಯಲ್ಲೂ ಕನ್ನಡದಲ್ಲಿ ಉತ್ತರಿಸಿದವರು. ಅವರು ಸಂಕಲಿಸಿದ ‘ಕಾನೂನು ಪದಕೋಶ’ ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದಿಂದ ಪ್ರಕಟವಾಗಿದೆ.
ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಯೋಜನೆ ಅಡಿಯಲ್ಲಿ ಗೌರವ ಸಂಪಾದಕರಾಗಿ ನಾಲ್ಕು ಸಂಪುಟಗಳ ಇಂಗ್ಲಿಷ್ ಕನ್ನಡ ನಿಘಂಟನ್ನು ಸಂಕ್ಷಿಪ್ತಗೊಳಿಸಿ, ೨೫೦೦೦ ಪದಗಳಿರುವ ‘ ಸಂಕ್ಷಿಪ್ತ ಇಂಗ್ಲಿಷ್ ಕನ್ನಡ ನಿಘಂಟು’ ಸಿದ್ಧಪಡಿಸಿದ್ದು, ಅಚ್ಚಿನಲ್ಲಿದೆ.
ಪ್ರಾರಂಭದಲ್ಲಿ ಸ್ವತಹ ಪ್ರಕಟಿಸಿದ ‘ಶಾಲಾ ವಿದ್ಯಾರ್ಥಿಗಳಿಗಾಗಿ ಇಂಗ್ಲೀಷ್ ಕನ್ನಡ ನಿಘಂಟು’ ನಂತರ ವಿವಿಧ ಪ್ರಕಾಶಕರಿಂದ 15ನೇ ಮುದ್ರಣವನ್ನು ಕಂಡಿದೆ.
ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದಲ್ಲಿ ಇಂಗ್ಲಿಷ್ ಕನ್ನಡ ನಿಘಂಟಿನ ಸಹಾಯಕ ಸಂಪಾದಕನಾಗಿ ಮೊದಲ ನೇಮಕ. 14 ವರ್ಷಗಳ ಅನುಭವ. ನಂತರ ಅದೇ ಪ್ರಸಾರಾಂಗದಲ್ಲಿ ಸಹಾಯಕ ನಿರ್ದೇಶಕನಾಗಿ ಬಡ್ತಿ. ಉಪನಿರ್ದೇಶಕನಾಗಿ 2014ರಲ್ಲಿ ನಿವೃತ್ತಿ.
ಮೈಸೂರಿನ ಅರಸರು ಸ್ಥಾಪಿಸಿದ, ಕನ್ನಡ ನಾಡಿನ ಮೊಟ್ಟ ಮೊದಲ ಸರಕಾರಿ ಬಾಲಕಿಯರ ಶಾಲೆಯಾದ ಮಹಾರಾಣಿ ಮಾದರಿ ಶಾಲೆಯ ಜಾಗವನ್ನು ರಾಮಕೃಷ್ಣ ಆಶ್ರಮದವರು ವಿವೇಕಾನಂದ ಸ್ಮಾರಕಕ್ಕಾಗಿ ಸರ್ಕಾರದಿಂದ ಪಡೆದುಕೊಂಡಾಗ ಶಾಲೆಯನ್ನು ಉಳಿಸಲು ಸುಮಾರು ಒಂದು ದಶಕಗಳ ಕಾಲ ನಡೆದ ಹೋರಾಟದ ಮುಂಚೂಣಿಯಲ್ಲಿ ಭಾಗಿ. ಹಲವು ಸಾರಿ ಪ್ರತಿಭಟನೆ, ಬಂಧನ, ಬಿಡುಗಡೆ.
ಗೋಕಾಕ್ ಚಳವಳಿಯ ನಂತರ ಕನ್ನಡಕ್ಕಾಗಿ ಒಂದು ಸೃಜನಾತ್ಮಕ ಕಾರ್ಯವನ್ನು ಕೈಗೊಳ್ಳಬೇಕೆಂಬ ಹಿರಿಯರು ಮತ್ತು ಗೆಳೆಯರ ಆಶಯದಂತೆ ಸ್ಥಾಪಿತವಾದ ನೃಪತುಂಗ ಕನ್ನಡ ಶಾಲೆಯ ಸ್ಥಾಪಕ ಧರ್ಮದರ್ಶಿಗಳಲ್ಲೊಬ್ಬ.
ನೃಪತುಂಗ ಕನ್ನಡ ಶಾಲೆ ಮೈಸೂರಿನ ಕನ್ನಡ ವಿಕಾಸ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ 1991ರಲ್ಲಿ ಪ್ರಾರಂಭವಾದ ಶಾಲೆ. ಸಂಪೂರ್ಣ ಕನ್ನಡ ಮಾಧ್ಯಮ ಶಾಲೆ. ಪ್ರತಿ ವರ್ಷ ಸರ್ಕಾರಿ ಶಾಲೆಗಳಲ್ಲಿ ಹತ್ತಿಪ್ಪತ್ತು ಮಕ್ಕಳು ಕಡಿಮೆಯಾಗುತ್ತಿದ್ದರೆ, ಸದರಿ ಶಾಲೆಯಲ್ಲಿ ಹತ್ತಿಪ್ಪತ್ತು ಮಕ್ಕಳು ಹೆಚ್ಚಾಗುತ್ತಿದ್ದಾರೆ. ಸ್ವಂತ ಕಟ್ಟಡ, ತನ್ನದೇ ಆದ ರಂಗ ಮಂದಿರ ಹೊಂದಿದೆ. ಸುಮಾರು ಎರಡು ದಶಕಗಳಿಂದ ಇದೇ ಸಂಸ್ಥೆಯ ಕಾರ್ಯದರ್ಶಿ, ಪ್ರಸ್ತುತ ಉಪಾಧ್ಯಕ್ಷ.
ಈವರೆಗೆ ನವ ಸಾಕ್ಷರರು ಹಾಗೂ ಮಕ್ಕಳಿಗಾಗಿ ಐವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.
ಮೂರು ವರ್ಷಗಳ ಕಾಲ ರಾಜ್ಯ ಸರ್ಕಾರದ ಕರ್ನಾಟಕ ವಿಜ್ಞಾನ ಅಕಾಡೆಮಿಯಲ್ಲಿ ಸದಸ್ಯನಾಗಿ ಕಾರ್ಯ ನಿರ್ವಹಣೆ. ಅಕಾಡೆಮಿ ವತಿಯಿಂದ ಪ್ರತಿ ವರ್ಷ ಕನ್ನಡ ವಿಜ್ಞಾನ ಸಮ್ಮೇಳನ ಮತ್ತು ಕನ್ನಡದಲ್ಲಿ ವಿಜ್ಞಾನ ಸಾಹಿತ್ಯವನ್ನು ಬದುಕಾಗಿ ಅಳವಡಿಸಿಕೊಂಡು ಲೇಖನ ಕೃಷಿ ಮಾಡಿದ ವಿಜ್ಞಾನ ಲೇಖಕರಿಗೆ ಜೀವಮಾನ ಸಾಧನೆ ಪ್ರಶಸ್ತಿ, ಇಂಗ್ಲಿಷ್ ಕನ್ನಡ ವಿಜ್ಞಾನ ನಿಘಂಟು ಮೊದಲಾದವುಗಳ ಪ್ರಸ್ತಾವನೆ ಮಂಡಿಸಿ, ಪ್ರೇರಕನ ಪಾತ್ರ ನಿರ್ವಹಣೆ.
ಗೋಕಾಕ್ ಚಳವಳಿ ಕುರಿತು ಬರೆದಿರುವ ಪುಸ್ತಕ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟಣೆ.

***

ಕನ್ನಡಕ್ಕೆ ಶಾಸ್ತ್ರೀಯ ಭಾಷೆ ನೀಡಬೇಕೆಂಬ ಹೋರಾಟದಲ್ಲಿ ಪ್ರತ್ಯಕ್ಷವಾಗಿ ಅವರು ಭಾಗಿ. ಅದನ್ನು ಮೈಸೂರಿನಲ್ಲಿ ಉಳಿಸಬೇಕೆಂದು ನಡೆಯುತ್ತಿರುವ ಆಂದೋಲನದಲ್ಲಿ ಮುಂದಾಳತ್ವ.
‌ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ರಚಿತವಾಗಿದ್ದ ಜಿಲ್ಲಾ ಕನ್ನಡ ಕಾವಲು ಸಮಿತಿ ಸದಸ್ಯತ್ವ. ಸಮಿತಿ ಸರಿಯಾಗಿ ಕಾರ್ಯ ನಡೆಸಲಿಲ್ಲವೆಂದು ಪ್ರತಿಭಟಿಸಿ ರಾಜೀನಾಮೆ. ಅಧಿಕಾರಿಗಳ ಮನವಿಯ ಮೇರೆಗೆ ರಾಜೀನಾಮೆಯನ್ನು ಹಿಂದಕ್ಕೆ ತೆಗೆದುಕೊಂಡು ನಂತರ ಹಲವಾರು ಕಚೇರಿಗಳಿಗೆ ಸಮಿತಿಯ ಸದಸ್ಯರೊಡನೆ ಭೇಟಿ, ತಪಾಸಣೆ.
ಮೈಸೂರಿನಲ್ಲಿ ದಶಕಗಳಿಂದ ನಡೆಯುತ್ತಿರುವ ಕನ್ನಡ ನಾಮಫಲಕ ಚಳವಳಿಯಲ್ಲಿ ಮುಂದಾಳತ್ವ.
ಒಂದು ದಶಕದ ಹಿಂದೆ ರಾಜ್ಯದಲ್ಲಿ ಒಂದರಿಂದ ಏಳನೇ ತರಗತಿವರೆಗೆ ಮಾತೃಭಾಷೆ ಶಿಕ್ಷಣ ಮಾಧ್ಯಮವಾಗಬೇಕೆಂದು ಉಚ್ಚ ನ್ಯಾಯಾಲಯದಲ್ಲಿ ಕನ್ನಡ ಕ್ರಿಯಾ ಸಮಿತಿ ವತಿಯಿಂದ ಪ್ರಧಾನ ಕಾರ್ಯದರ್ಶಿಯಾಗಿ ಅರ್ಜಿದಾರನಾಗಿ ರಿಟ್ ಆಫ್ ಮ್ಯಾಂಡಮಸ್ ಸಲ್ಲಿಕೆ.
ಶಿಕ್ಷಣ ಮಾಧ್ಯಮದ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆದ ದಾವೆಯಲ್ಲಿ ಮಧ್ಯಪ್ರವೇಶ ಅರ್ಜಿದಾರರಲ್ಲೊಬ್ಬರು.

Continue Reading

Mysore

ಕೊನೆಯ ಆಷಾಢ ಶುಕ್ರವಾರ: ನಂಜನಗೂಡು ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ, ಭಕ್ತರ ಸಾಗರ

Published

on

ನಂಜನಗೂಡು, ಆ. 7: ಕೊನೆಯ ಆಷಾಢ ಶುಕ್ರವಾರದ ಅಂಗವಾಗಿ ನಂಜನಗೂಡಿನ ಕಪಿಲಾ ನದಿ ತಟದಲ್ಲಿರುವ ಚಾಮುಂಡೇಶ್ವರಿ ದೇವಾಲಯದಲ್ಲಿ ಶುಕ್ರವಾರ ವಿಶೇಷ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.

ಬೆಳಗ್ಗೆಯಿಂದಲೇ ದೇವಾಲಯಕ್ಕೆ ಆಗಮಿಸಿದ ಮಹಿಳೆಯರು ನಿಂಬೆಹಣ್ಣಿನ ಆರತಿ ಸೇರಿದಂತೆ ವಿವಿಧ ಸೇವೆಗಳನ್ನು ಸಲ್ಲಿಸಿ ದೇವಿಯ ಕೃಪೆಗೆ ಪಾತ್ರರಾದರು. ದಿನವಿಡೀ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.

ಭಕ್ತರ ದಟ್ಟಣೆ ಹಿನ್ನೆಲೆಯಲ್ಲಿ ದೇವಾಲಯದ ಆವರಣದಲ್ಲಿ ಸೂಕ್ತ ಪೊಲೀಸ್ ಭದ್ರತೆ ಹಾಗೂ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು.

Continue Reading

Mysore

ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ

Published

on

ಮೈಸೂರು: ಸಚಿವ ಸಂಪುಟ ವಿಸ್ತರಣೆ ಹಾಗೂ ಮೈಸೂರು ಜಿಲ್ಲೆಗೆ ಕೇವಲ ಒಂದೇ ಸ್ಥಾನ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸರ್ಕಾರದ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ದಕ್ಷಿಣ ಭಾರತದ ಖರ್ಗೆಯಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಮೈಸೂರು ಜಿಲ್ಲೆಗೆ ಅನ್ಯಾಯ ಹಾಗೂ ಹಿರಿಯ ನಾಯಕರಿಗೆ ಕೊಕ್:
ಎರಡನೇ ಹಂತದ ಸಂಪುಟ ರಚನೆಯಲ್ಲಿ ಮೈಸೂರು ಭಾಗಕ್ಕೆ ನ್ಯಾಯ ಸಿಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಆರು ಬಾರಿ ಗೆದ್ದಿರುವ ತನ್ವೀರ್ ಸೇಠ್, ಹಿರಿಯರಾದ ಹೆಚ್.ಸಿ. ಮಹದೇವಪ್ಪ ಹಾಗೂ ಕೆ. ವೆಂಕಟೇಶ್ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಿಲ್ಲ. ದಲಿತ ಮತ್ತು ಅಹಿಂದ ಪರ ಹೋರಾಟ ನಡೆಸುತ್ತೇವೆ ಎನ್ನುವವರ ಜಿಲ್ಲೆಯಲ್ಲೇ ದಲಿತರಿಗೆ ಹಾಗೂ ಅಲ್ಪಸಂಖ್ಯಾತರಿಗೆ ಸರಿಯಾದ ನ್ಯಾಯ ಸಿಕ್ಕಿಲ್ಲ ಎಂದು ದೂರಿದರು.

ಖರ್ಗೆ ಹಾದಿ ಹಿಡಿದ ಸಿದ್ದರಾಮಯ್ಯ (ಕುಟುಂಬ ರಾಜಕಾರಣದ ಆರೋಪ):
2016ರಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ಮಗನನ್ನು ಮಂತ್ರಿ ಮಾಡಲು ಕಲ್ಯಾಣ ಕರ್ನಾಟಕ ಭಾಗದ ಹಲವು ನಾಯಕರ ರಾಜಕೀಯ ಜೀವನವನ್ನು ಮುಗಿಸಿದ್ದರು. ಅದೇ ಹಾದಿಯನ್ನು ಈಗ ಸಿದ್ದರಾಮಯ್ಯ ಕೂಡ ಹಿಡಿದ್ದಾರೆ. ತಮ್ಮ ಮಗನ ತಲೆಗೆ ಕಿರೀಟವಿಟ್ಟುಕೊಳ್ಳಲು ಜಿಲ್ಲೆಯ ಹಿರಿಯ ನಾಯಕರನ್ನು ಸೈಡ್‌ಗೆ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಪಸಂಖ್ಯಾತರು ಮತ್ತು ದಲಿತರನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲಾಗಿದೆ ಎಂದರು.

ಸಚಿವರ ಕನ್ನಡ ಜ್ಞಾನದ ಬಗ್ಗೆ ವ್ಯಂಗ್ಯ:
ಪ್ರಮಾಣ ವಚನ ಸ್ವೀಕಾರದ ವೇಳೆ ಸಚಿವರು ಕನ್ನಡ ತಪ್ಪು ತಪ್ಪಾಗಿ ಓದಿರುವ ಬಗ್ಗೆ ಟೀಕಿಸಿದ ಅವರು, ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿರುದ್ಧ ತಮಟೆ ಹೊಡೆದು ಹೋರಾಟ ಮಾಡುವ ಕಾಂಗ್ರೆಸ್ ನಾಯಕರು, ಮೊದಲು ತಮ್ಮ ಸಂಪುಟದ ಸಚಿವರಿಗೆ ಸರಿಯಾಗಿ ಕನ್ನಡ ಓದುವುದನ್ನು ಕಲಿಸಲಿ ಎಂದು ವ್ಯಂಗ್ಯವಾಡಿದರು.

ಮಹಿಳಾ ಪ್ರತಿನಿಧಿಗಳಿಲ್ಲದಿರುವುದಕ್ಕೆ ಆಕ್ಷೇಪ:
ಸಮಾಜವಾದಿ ಹಿನ್ನೆಲೆಯಿಂದ ಬಂದವರು ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಕನಿಷ್ಠ ಒಬ್ಬ ಮಹಿಳೆಗೂ ಸ್ಥಾನ ನೀಡಿಲ್ಲ. ಕೋರ್ಟ್‌ನಲ್ಲಿ ಹೋರಾಡಿ ಗೆದ್ದು ಬಂದ ಗಾಯತ್ರಿ ಶಂತೇಗೌಡ ಅವರಿಗೂ ಅವಕಾಶ ನೀಡದೆ, ಮೂಲ ಕಾಂಗ್ರೆಸ್‌ನಂತೆ ಮಹಿಳಾ ವಿರೋಧಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು:
“ಭಾರತ ಹಿಂದೂ ರಾಷ್ಟ್ರವಾಗಬಾರದು” ಎಂಬ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, “ಯಾರೂ ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಹೊರಟಿಲ್ಲ, ಇದು ಸ್ವಾಭಾವಿಕವಾಗಿಯೇ ಹಿಂದೂ ರಾಷ್ಟ್ರ. ಯತೀಂದ್ರ ಅವರೇ, ನಿಮಗೆ ರಾಜಕೀಯ ಸ್ಥಾನಮಾನ ಸಿಕ್ಕಿರುವುದೇ ಇದೇ ಹಿಂದೂ ಧರ್ಮದ ಜಾತಿ ವ್ಯವಸ್ಥೆಯಿಂದ ಮತ್ತು ಅಪ್ಪನ ಖೋಟಾದಿಂದ ಎಂಬುದನ್ನು ಮರೆಯಬೇಡಿ” ಎಂದು ತಿರುಗೇಟು ನೀಡಿದರು.

Continue Reading

Mysore

ಅಭಿವೃದ್ಧಿ ಕಾಣದ ರಸ್ತೆಗೆ ಕಳಪೆ ಕಾಮಗಾರಿ; ಅಧಿಕಾರಿಗಳ ನಿರ್ಲಕ್ಷ್ಯ ವಿರುದ್ಧ ಸಾರ್ವಜನಿಕರ ಆಕ್ರೋಶ

Published

on

ಕೃಷ್ಣರಾಜನಗರ: ತಾಲೂಕಿನ ಗಡಿಭಾಗದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ಅಭಿವೃದ್ಧಿ ಕಾಮಗಾರಿಯು ಅತ್ಯಂತ ಕಳಪೆಯಾಗಿ ನಡೆಯುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳ ಮೌನಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಘಟನೆಯ ವಿವರ:ಕೃಷ್ಣರಾಜನಗರದಿಂದ ತಾಲೂಕಿನ ಗಡಿಭಾಗದ ಗ್ರಾಮಗಳಾದ ಹೊಸಕೋಟೆ, ಬ್ಯಾಡರಹಳ್ಳಿ, ಸಿದ್ದಾಪುರ ಹಾಗೂ ಮಳಲಿ ಮಾರ್ಗವಾಗಿ ಸಂಪರ್ಕಿಸುವ ಕೆ.ಆರ್.ನಗರ – ಹೊಸಕೋಟೆ ಮುಖ್ಯ ರಸ್ತೆಯ ಅಭಿವೃದ್ಧಿ ಕಾಮಗಾರಿ ಸದ್ಯ ಪ್ರಗತಿಯಲ್ಲಿದೆ. ಆದರೆ ಈ ಕಾಮಗಾರಿಯು ನಿಯಮಾನುಸಾರ ನಡೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

  • ಕಳಪೆ ಕಾಮಗಾರಿ ಆರೋಪ: ರಸ್ತೆಗೆ ಸರಿಯಾದ ರೀತಿಯಲ್ಲಿ ಮೆಟ್ಲಿಂಗ್ (Metling) ಅಂದರೆ ಜಲ್ಲಿ ಕಲ್ಲುಗಳನ್ನು ಹಾಕಿ ಗಟ್ಟಿಗೊಳಿಸುವ ಕೆಲಸ ಮಾಡುತ್ತಿಲ್ಲ.

  • ಕನಿಷ್ಠ ಗುಣಮಟ್ಟವಿಲ್ಲದ ಸಾಮಗ್ರಿಗಳು: ಕಾಮಗಾರಿಗೆ ಬಳಸಲಾಗುತ್ತಿರುವ ಕಚ್ಚಾ ಸಾಮಗ್ರಿಗಳು ಮತ್ತು ಕಲ್ಲು-ಮಣ್ಣುಗಳು ತೀರಾ ಕಳಪೆ ಮಟ್ಟದ್ದಾಗಿವೆ ಎಂದು ಸ್ಥಳೀಯರು ದೂರಿದ್ದಾರೆ.

ಅಧಿಕಾರಿಗಳ ಮೌನ ಹಾಗೂ ಸಾರ್ವಜನಿಕರ ಖಂಡನೆ:

ಬಹಳ ವರ್ಷಗಳಿಂದ ಯಾವುದೇ ಅಭಿವೃದ್ಧಿಯನ್ನು ಕಾಣದೆ ಸಂಪೂರ್ಣ ಹದೆಗೆಟ್ಟಿದ್ದ ಈ ರಸ್ತೆಗೆ, ಈಗಲಾದರೂ ಉತ್ತಮ ರೀತಿಯಲ್ಲಿ ಕಾಮಗಾರಿ ನಡೆದು ಅನುಕೂಲವಾಗಲಿದೆ ಎಂದು ಗ್ರಾಮಸ್ಥರು ನಿರೀಕ್ಷಿಸಿದ್ದರು. ಆದರೆ ಗುತ್ತಿಗೆದಾರರು ಹಾಗೂ ಇಲಾಖೆಯ ಕಳಪೆ ಕಾಮಗಾರಿಯ ಧೋರಣೆಯನ್ನು ಕಂಡು “ವರ್ಷಗಳ ನಂತರ ರಸ್ತೆ ಬಂದರೂ ಹೀಗೆ ಕಳಪೆಯಾಗಿ ಮಾಡಿದರೆ ಅಭಿವೃದ್ಧಿ ಎಲ್ಲಿಂದ ಬಂತು?” ಎಂದು ಸಾರ್ವಜನಿಕರು ತೀವ್ರವಾಗಿ ಖಂಡಿಸಿದ್ದಾರೆ.

ಈ ಕುರಿತು ಸ್ಥಳೀಯರು ಹಲವು ಬಾರಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ದೂರುಗಳನ್ನು ನೀಡಿದರೂ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದು, ತಕ್ಷಣ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Continue Reading

Trending

error: Content is protected !!