Mysore
ಸಂಸ್ಕೃತ ಭಾಷೆ ಎಲ್ಲ ವರ್ಗದವರಿಗು ಅನ್ವಯಿಸುವ ಭಾಷೆ: ಸಿ.ಎಚ್ ವಿಜಯಶಂಕರ್
ಮೈಸೂರು: ಸಂಸ್ಕೃತ ಭಾಷೆಯು ಒಂದೇ ವರ್ಗಕ್ಕೆ ಸೀಮಿತ ವಾಗಿರುವ ಭಾಷೆ ಅಲ್ಲ. ಇದು ಎಲ್ಲ ವರ್ಗದವರಿಗು ಅನ್ವಯಿಸುವ ಭಾಷೆಯಾಗಿದೆ ಎಂದು ಮೇಘಾಲಯ ರಾಜ್ಯಪಾಲ ಸಿ.ಎಚ್ ವಿಜಯಶಂಕರ್ ಅವರು ಹೇಳಿದರು
ನಗರದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಶನಿವಾರ ಮತ್ತು ಭಾನುವಾರ ಆಯೋಜಿಸಿರುವ,ಸಂಸ್ಕ್ರತ ಭಾರತಿ ಕರ್ನಾಟಕ ದಕ್ಷಿಣ ಸಂಸ್ಕೃತ ಕಾವೇರಿ ಪ್ರಾಂತಸಮ್ಮೇಳನ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಕೃತ ಭಾಷೆಯನ್ನು ಕೆಲವರು ಒಂದೇ ವರ್ಗಕ್ಕೆ ಸೀಮಿತ ಮಾಡಿದ್ದಾರೆ. ಆದರೆ ಕವಿರತ್ನ ಕಾಳಿದಾಸ, ವ್ಯಾಸ, ವಾಲ್ಮೀಕಿ ಅವರು ಮೇಲ್ವರ್ಗಕ್ಕೆ ಸೇರಿದವರಲ್ಲ.ರಾಮಯಣ, ಮಹಾಭಾರತ ಕಾವ್ಯಗಳನ್ನ ಸಂಸ್ಕೃತದಲ್ಲಿ ರಚಿಸಿ ಸಂಸ್ಕೃತವನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದಾರೆ ಎಂದರು.
ಮನುಷ್ಯನ ಹುಟ್ಟಿನ ಮೂಲವನ್ನು ನೋಡದೇ ಸಾಧನೆಯ ಮೂಲವನ್ನು ನೋಡಬೇಕು. ಜೀವನಮೌಲ್ಯ ಮತ್ತು ಬದುಕಿನ ನೈಜ ದರ್ಶನವಾದ ಮೇಲೆ ಸಾಧನೆಗೆ ಬೇಕಾದ ಸೇವೆ. ಸಂಕಲ್ಪ, ಶ್ರದ್ದೆ, ತ್ಯಾಗ, ಪರಿಶ್ರಮ, ಹೋರಾಟದ ಬದುಕಿನಿಂದ ಸಮಾಜಕ್ಕೆ ಆದರ್ಶವಾಗಬೇಕು ಎಂದು ಹೇಳಿದರು.
ಸಂಸ್ಕೃತದ ಕಾರ್ಯವನ್ನು ಮಾಡುವವರು ಸಂಸ್ಕೃತಭಾರತಿಯ ಮೂಲವಾದ ಕರ್ನಾಟಕದ ಬಗ್ಗೆ ಹೆಮ್ಮೆ ಮತ್ತು ಅಭಿಮಾನ ಪಡುವಂತಾಗಿದೆ. ಸಂಸ್ಕೃತಕಾವೇರಿಯು ಕರ್ನಾಟಕ-ದಕ್ಷಿಣದ ಸಂಘಟಿತಶಕ್ತಿಯನ್ನು ಪ್ರದರ್ಶಿಸುತ್ತದೆ ಎಂದು ತಿಳಿಸಿದರು.
ಪ್ರಾಪಂಚಿಕ ಸಂಬಂಧ ಮತ್ತು ಮೋಹವನ್ನು ಮೀರಿ, ಸೃಷ್ಟಿಯ ಮೂಲ ಮತ್ತು ಉದ್ದೇಶವನ್ನು ತಿಳಿದು. ತನ್ನ ತಪಸ್ಸಿನಿಂದ ಪಡೆದ ಸಿದ್ದಿಯನ್ನು ಮನುಕುಲದ ಕಲ್ಯಾಣಕ್ಕಾಗಿ ವಿನಿಯೋಗಿಸುವವರು ಸಾಮಾಜಿಕ ಸುಧಾರಕರು ಎಂದು ತಿಳಿಸಿದರು.
ಕೆಲವು ಗೊಂದಲಗಳನ್ನು ನಿವಾರಿಸುವ ನಿಟ್ಟಿನಲ್ಲಿ ಈ ಸಮ್ಮೇಳನದ ಪಾತ್ರ ಬಹು ಮುಖ್ಯ. ಇಂಗ್ಲೀಷಿನ ವ್ಯಾಮೋಹದಿಂದ ಮುಂದಿನ ದಿನಗಳಲ್ಲಿ ಕನ್ನಡ ಮುಂತಾದ ಭಾರತೀಯ ಭಾಷೆಗಳು ಸಂಕಷ್ಟಕ್ಕೆ ತಲುಪುವ ಸಾಧ್ಯತೆ ಇದೆ. ಆದ್ದರಿಂದ ನಮ್ಮ ಸಂಸ್ಕೃತಿಯ ಮೂಲವಾದ ಸಂಸ್ಕೃತವನ್ನು ಬೆಳೆಸಿದಾಗ ಮಾತ್ರ ಉಳಿದ ಎಲ್ಲ ರಂಗಗಳಲ್ಲೂ ಭಾರತೀಯತೆಯನ್ನು ಉಳಿಸಿಕೊಳ್ಳಲು ಸಾಧ್ಯವಿದೆ ಎಂದರು.
ಕಾರ್ಯಕ್ರಮದ ಮುಖ್ಯಭಾಷಣ ಮಾಡಿದ ದೆಹಲಿ ಅಖಿಲ ಭಾರತೀಯ ಸಂಘಟನ ಮಂತ್ರಿ ಜಯಪ್ರಹಾಶ್ ಗೌತಮ್ ಅವರು ಹೆಚ್ಚಿನ ಭಾರತೀಯ ಭಾಷೆಗಳ ಜನನೀ ಸಂಸ್ಕೃತ. ಭಾರತದ ಪ್ರತಿಷ್ಠೆಗಳು ಸಂಸ್ಕೃತ ಮತ್ತು ಸಂಸ್ಕೃತಿ ಎಂದರು
ಸಂಸ್ಕೃತವು ಕಠಿಣ, ಸಂಸ್ಕೃತವು ಒಂದು ವರ್ಗಕ್ಕೆ ಮಾತ್ರ ಸೀಮಿತ. ಸಂಸ್ಕೃತದಲ್ಲಿ ದೋಷವಾದರೆ ಪಾಪವು ಬರುತ್ತದೆ ಮುಂತಾದ ನಕಾರಾತ್ಮಕ ವಿಚಾರಗಳನ್ನು ಸಂಸ್ಕೃತಭಾರತಿಯು ನಿರ್ಮೂಲನ ಮಾಡಿ ಸಕಾರಾತ್ಮಕ ಅಂಶಗಳನ್ನು ಸಮಾಜಕ್ಕೆ ತಲುಪಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು
ಸುಮಾರು 30 ದೇಶಗಳಲ್ಲಿ ಸಂಸ್ಕೃತಭಾರತಿಯ ಕಾರ್ಯ ನಡೆಯುತ್ತಿದೆ. ಸಂಸ್ಕೃತಕ್ಕಾಗಿ ಪ್ರತಿದಿನ ಕೆಲವು ಘಂಟೆಗಳನ್ನಾದರೂ ನೀಡುವ ಸಂಕಲ್ಪ ಮಾಡಬೇಕು ಎಂದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಮುಕ್ತಿದಾನಂದ ಜೀ ಮಹಾರಾಜ್ ಅವರು ಮಾತನಡಿಸಂಸ್ಕೃತವು ಆಡುಭಾಷೆಯಾಗಿ ಪ್ರಚಲಿತವಾಗದಿದ್ದರೂ. ಸಂಸ್ಕೃತದಿಂದ ಹುಟ್ಟಿದ ಹತ್ತಾರು ಭಾಷೆಗಳಲ್ಲಿ ಸಂಸ್ಕೃತದ ಛಾಪವನ್ನು ಕಾಣಲು ಸಾಧ್ಯವಾಗಿದೆ ಎಂದು ಹೇಳಿದರು.
ಭಾರತೀಯರು ಸಂಸ್ಕೃತವನ್ನು ಅಭ್ಯಾಸ ಮಾಡಿದರೆ ಸಂಸ್ಕೃತಿಯು ಪ್ರವರ್ಧಮಾನಕ್ಕೆ ಬಂದು ಭಾರತಕ್ಕೆ ಜಗತ್ತಿನಲ್ಲಿ ಹೆಚ್ಚಿನ ಮಾನ್ಯತೆ ದೊರೆಯಲಿದೆ. ವಿದೇಶಿಗರು ಇಸ್ರೇಲ್ ದೇಶಕ್ಕೆ ಹೋದರೆ ಹಿಬ್ರೂ ಭಾಷೆಯನ್ನು ಕಲಿಸಿಯೇ ಅವರಿಗೆ ದೇಶದಲ್ಲಿ ಉಳಿಯುವ ಅವಕಾಶ ನೀಡುತ್ತಿದೆ. ಭಾರತೀಯ ಪ್ರಜ್ಞೆಯು ಸಂಸ್ಕೃತದ ಮೂಲಕ ಸಹಸ್ರಾರು ವರ್ಷಗಳಲ್ಲಿ ತನ್ನ ಹಿರಿಮೆಯನ್ನು ಮೆರೆದಿದೆ. ಎಲ್ಲ ಭಾರತೀಯರೂ ಸಂಸ್ಕೃತದ ಕಾರ್ಯದೊಂದಿಗೆ ಕೈಜೋಡಿಸಬೇಕು ಎಂದರು.
ಸ್ವಾಗತ ಭಾಷಣ ಮಾಡಿ ಮಾತನಾಡಿದ ಶಾಸಕ ಶ್ರೀ ವತ್ಸ ಅವರು.ಮೈಸೂರು ಅನೇಕ ಆಯಾಮಗಳಾದ ಕಲೆ, ಸಾಹಿತ್ಯ, ರಂಗಭೂಮಿ, ಸಂಸ್ಕೃತಿಗಳಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಇವತ್ತಿನ ಕಾಲಮಾನದಲ್ಲಿ ಎಲ್ಲ ಮಕ್ಕಳು ಎಂ.ಬಿ.ಬಿ.ಎಸ್.ಎಂಜಿನಿಯರ್ ಮಾಡಬೇಕು ಎಂದು ಹೋಗುವವರ ಮಧ್ಯೆ 150 ಕ್ಕು ಹೆಚ್ಚು ಮಕ್ಕಳು ಸಂಸ್ಕೃತ ಕಲಿಯಲು ಗಣಪತಿ ಸಚ್ಚಿದಾನಂದ ಆಶ್ರ ಸುತ್ತೂರಿಗೆ ಸೇರುತ್ತಿರುವುದು ಸಂತಸವಾಗಿದೆ ಎಂದರು.
Mysore
ಗ್ರಾಮಮಟ್ಟದಲ್ಲಿ ಈ-ಪೌತಿ ಆಂದೋಲನ ನಡೆಸಿ ರೈತರಿಗೆ ಅನುಕೂಲ ಮಾಡಿಕೊಡಿ: ಡಾ.ಪಿ.ಶಿವರಾಜು
ಮೈಸೂರು: ಇ-ಪೌತಿ ಆಂದೋಲನವನ್ನು ಕಡ್ಡಾಯವಾಗಿ ತಾಲೂಕು ಮತ್ತು ಗ್ರಾಮ ಪಂಚಾಯಿತಿ ಹಾಗೂ ಗ್ರಾಮಮಟ್ಟದಲ್ಲಿ ಅದಾಲತ್ ನಡೆಸಿ ಪ್ರತಿದಿನವೂ ಪ್ರಗತಿ ಸಾಧಿಸುವಂತೆ ಅಪರ ಜಿಲ್ಲಾಧಿಕಾರಿ ಡಾ:ಪಿ ಶಿವರಾಜು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕಂದಾಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಜಿಲ್ಲೆಯ ಎಲ್ಲಾ ತಹಶೀಲ್ದಾರರು ಹಾಗೂ ಉಪ ವಿಭಾಗಾಧಿಕಾರಿಗಳಿಗೆ ಸೂಚನೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಯಾದ ಹಾಗೂ ರೈತರಿಗೆ ಅನುಕೂಲಕರವಾದ ಈ ಪೌತಿ-ಆಂದೋಲನವನ್ನು ಇನ್ನುಮುಂದೆ ಕಡ್ಡಾಯವಾಗಿ ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ ಅರ್ಜಿಗಳನ್ನು ಪಡೆದು ರೈತರ ಮನವೊಲಿಸಿ ಪೌತಿ ಖಾತೆಯನ್ನು ನಿಯಮಾನುಸಾರ ಮಾಡಿಕೊಡುವಂತೆ ತಿಳಿಸಿದರು.
ಈ ತಿಂಗಳು ಪ್ರತಿ ದಿನವೂ ಸಹ ಗ್ರಾಮಮಟ್ಟದಲ್ಲಿ ನಿಯಮಿತವಾಗಿ ಅದಾಲತ್ ಗಳನ್ನು ನಡೆಸಿ ಕಡ್ಡಾಯವಾಗಿ ಪ್ರತಿ ಗ್ರಾಮ ಆಡಳಿತಾಧಿಕಾರಿಗಳು ಕನಿಷ್ಠ ನೂರು ಈ-ಪೌತಿ ಮಾಡಿ ಕೊಡುವಂತೆ ಹಾಗು ರೈತರಿಗೆ ಅನುಕೂಲ ಮಾಡಿಕೊಡುವಂತೆ ತಿಳಿಸಿದರು.

ಮರಣ ಹೊಂದಿರುವ ರೈತರ ಹೆಸರಿನಲ್ಲಿಯೇ ಇರುವ ಪಹಣಿಗಳಲ್ಲಿ ಪೌತಿಖಾತೆಯನ್ನು ನಿರ್ವಹಿಸಿ ಅವರ ಕುಟುಂಬದವರ ಹೆಸರಿನಲ್ಲಿ ಜಂಟಿ ಖಾತೆ ಇಡುವ ಮೂಲಕ ಜೀವಂತವಿರುವ ಉತ್ತರಾಧಿಕಾರಿಗಳ ಹೆಸರನ್ನು ಪಹಣಿಗಳಲ್ಲಿ ನಮೂದಿಸಿ ಕಾಲೋಚಿತಗೊಳಿಸುವ ಸದರಿ ಯೋಜನೆಯು ರೈತರಿಗೆ ಅನುಕೂಲಕರವಾದ ಯೋಜನೆಯಾಗಿರುತ್ತದೆ .
ಈ ಹಿಂದೆ ಆಧಾರ್ ಸೀಡಿಂಗ್ ಮಾಡುವ ವೇಳೆ ಗ್ರಾಮಆಡಳಿತ ಅಧಿಕಾರಿಗಳು ಗುರುತಿಸಿರುವ ಮರಣ ಹೊಂದಿರುವ ಭೂಮಾಲೀಕರ ಪಹಣಿಗಳನ್ನು ಕಾಲೋಚಿತಗೊಳಿಸುವ ಬಗ್ಗೆ ಸದರಿ ಅದಾಲತ್ ಗಳು ಸಹಕಾರಿಯಾಗುತ್ತವೆ ಆದ್ದರಿಂದ ಕಡ್ದಾಯವಾಗಿ ಪ್ರತಿದಿನ ರೈತರ ಬಳಿಗೆ ಹೋಗಿ, ಗ್ರಾಮ ಮಟ್ಟದಲ್ಲಿ ಅದಾಲತ್ ನಡೆಸುವಂತೆ ನಿರ್ದೇಶನ ನೀಡಿದರು.

ಸದರಿ ಸಭೆಯಲ್ಲಿ ಜಿಲ್ಲೆಯ ಉಪವಿಭಾಗಾಧಿಕಾರಿಗಳು, ತಹಶೀಲ್ದಾರರುಗಳು , ಡಿಡಿಎಲ್ ಆರ್, ಹಾಗೂ ಇನ್ನಿತರ ಅಧಿಕಾರಿಗಳು ಹಾಜರಿದ್ದರು.
Mysore
ಬಸವಣ್ಣನವರ ವಚನ ಸಾಹಿತ್ಯವನ್ನು ಯುವ ಜನತೆಗೆ ತಿಳಿಸಬೇಕಿದೆ: ಶಾಸಕ ಜಿಟಿಡಿ
ಮೈಸೂರು: ಸಾಮಾಜಿಕ ಅನಿಷ್ಠ,ಮೌಢ್ಯತೆ ದೂರ ಮಾಡಿ ಸಾಮಾಜಿಕ ನ್ಯಾಯ, ಸಮಾನತೆಯ ಬೆಳಕು ಹರಿಸಿದ ಬಸವಣ್ಣನವರ ವಚನ ಸಾಹಿತ್ಯವನ್ನು ಯುವ ಜನತೆಗೆ ತಿಳಿಸಬೇಕು. ಜಾತೀಯತೆ ನಿರ್ಮೂಲನೆ ಕುರಿತು ಗಂಟೆಗಟ್ಟಲೆ ಭಾಷಣ ಮಾಡುವವರಿಂದಲೇ ಜಾತೀಯತೆ ಹೆಚ್ಚಾಗಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ವಿಜಯನಗರ ಮೂರನೇ ಹಂತದ ವಿ.ಕೆ.ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಆಯೋಜಿಸಿದ್ದ ವಿಜಯನಗರ 3 ಮತ್ತು 4ನೇ ಹಂತ, ಹಿನಕಲ್, ವಿಜಯಶ್ರೀಪುರದ ವೀರಶೈವ ಲಿಂಗಾಯತ ಬಸವ ಬಳಗದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಬಸವಣ್ಣ, ಬುದ್ಧ, ವಿವೇಕಾನಂದ, ಡಾ.ಬಿ.ಆರ್. ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯ, ಸಮಾನತೆಯನ್ನು ನೀಡಿದ್ದಾರೆ. ಬಸವಣ್ಣ ಅವರು ದಯವೇ ಧರ್ಮದ ಮೂಲವಯ್ಯ ಎಂದಿದ್ದರು. ಬಡವರ ಬಗ್ಗೆ, ಅಬಲರ ಬಗ್ಗೆ ಪ್ರೀತಿ,ಕರುಣೆ,ಮಾನವೀಯ ಮೌಲ್ಯದಿಂದ ನೋಡುವುದನ್ನು ಹೇಳಿಕೊಟ್ಟರು. ಆದರೆ,ಇಂದಿಗೂ ಸಮಾಜದಲ್ಲಿ ಜಾತೀಯತೆ ನಿರ್ಮೂಲನೆಯಾಗಿಲ್ಲ ಎಂದು ಬೇಸರಿಸಿದರು.

12ನೇ ಶತಮಾನದಲ್ಲಿ ಬಸವಣ್ಣ ನಡೆಸಿದ ಕ್ರಾಂತಿ ಇಂದಿಗೂ ಮರೆಯಲಾಗದ ಕ್ಷಣವಾಗಿದೆ. ಉತ್ತರ ಕಲ್ಯಾಣ ಪ್ರವಾಸಕ್ಕೆ ಹೋದಾಗಲೆಲ್ಲಾ ಬಸವ ಕಲ್ಯಾಣ, ಕೂಡಲ ಸಂಗಮಕ್ಕೆ ಹೋಗಿಯೇ ಬರುತ್ತೇನೆ. ಬಸವಣ್ಣ, ಅಲ್ಲಮಪ್ರಭು ಸೇರಿದಂತೆ ಅನೇಕ ಶರಣರ ವಚನಸಾಹಿತ್ಯವನ್ನು ಪೂರ್ಣವಾಗಿ ಅಧ್ಯಯನ ಮಾಡಲು ಸಾಧ್ಯವಾಗಿಲ್ಲ. ವಚನ ಸಾಹಿತ್ಯವನ್ನು ನಿರಂತರವಾಗಿ ಅಧ್ಯಯನ ಮಾಡುತ್ತಾ ಹೋದರೆ ದಾರ್ಶನಿಕರುಗಳ ಕೊಡುಗೆ ಗೊತ್ತಾಗುತ್ತದೆ. ಬಸವಣ್ಣನವರ ಉತ್ಸವವನ್ನು ರಾಜ್ಯಾದ್ಯಂತ ಮಾಡಲಾಗುತ್ತಿದೆ. ಬಸವ ಕಲ್ಯಾಣದಿಂದ ಆರಂಭವಾಗಿ ಕರ್ನಾಟಕದ ಮೂಲೆ ಮೂಲೆಗಳಲ್ಲೂ ಬಸವಣ್ಣನವರ ಜಯಂತಿ ಆಚರಿಸಿ ಸುಮ್ಮನಾಗುವ ಜತೆಗೆ, ಇಂದಿನ ಯುವಜನತೆಗೆ ವಚನಸಾಹಿತ್ಯದಲ್ಲಿರುವ ಸಾರವನ್ನು ತಿಳಿಸಿಕೊಡುವ ಕೆಲಸ ಆಗಬೇಕಿದೆ ಎಂದು ಸಲಹೆ ನೀಡಿದರು.
ಜಾತೀಯತೆಯನ್ನು ತೊಲಗಿಸಿ ಸಮಾನತೆಯ ಸಮಾಜ ನಿರ್ಮಾಣ ಮಾಡಬೇಕೆಂದು ಹೇಳುತ್ತಾರೆ. ಆದರೆ, ಜಾತಿಗೆ ಮತ್ತೊಂದು ಜಾತಿಯನ್ನು ಎತ್ತಿಕಟ್ಟುವ ಕೆಲಸ ಮಾಡಲಾಗುತ್ತದೆ. ಅದರಲ್ಲೂ ರಾಜಕಾರಣಿಗಳು ಹೊರತಾಗಿಲ್ಲ. ನಮ್ಮಜಾತಿ ಅಂದರೆ ಜನರ ಕೆಲಸ ಮಾಡಬೇಕಿಲ್ಲ. ಜಾತಿ ಅಷ್ಟೇ ಸಾಕು ಎನ್ನುವುದಾಗಿದೆ. ಅದಕ್ಕಾಗಿಯೇ ಜನರ ಸೇವೆ ಮಾಡುವುದಕ್ಕಿಂತಲೂ ಜಾತೀಯತೆ ಗಟ್ಟಿಯಾಗಿದೆ ಎಂದರು.

ಇಂದು ಬಸವಣ್ಣನವರನ್ನು ಮೀರಿಸಿ ಮಾತನಾಡುತ್ತಾರೆ. ಜಾತಿ ಬಿಟ್ಟು ರಾಜಕಾರಣ ಮಾಡಲ್ಲ ಎಂದು ನುಡಿದರು. ಬಸವ ಬಳಗದ ಮೂಲಕ ಅರಿವು,ಸಂಸ್ಕೃತಿ,ಜ್ಞಾನದ ಪ್ರಸಾರ ಮಾಡುವ ಕೆಲಸ ಮಾಡಬೇಕು. ಯುವಜನತೆಗೆ ಚಂಚಲ ಮನಸ್ಸು ಹೆಚ್ಚಾಗುತ್ತಿರುವುದರಿಂದ ವಚನ ಸಾಹಿತ್ಯಗಳ ಮೂಲಕ ಮನಸ್ಸನ್ನು ಬದಲಿಸಬೇಕು. ಮನೆಯ ಕಡೆ ಚಂಚಲ, ಇಲ್ಲಿ ಕುಳತಿದ್ದರೂ ಚಂಚಲ ಎನ್ನುವಂತಾಗಿದೆ. ಜನರಿಗೆ ಬಸವಣ್ಣನವರ ವಚನ ಸಾಹಿತ್ಯವನ್ನು ತಿಳಿಸಬೇಕು.ಮಕ್ಕಳಿಗೆ ಕೊಡುವ ಸಂಸ್ಕಾರ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಹೇಳಿದರು.
ಆರು ತಿಂಗಳಲ್ಲಿ ನೀರು: ಮುಂದಿನ ಆರುತಿಂಗಳಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಹಳ್ಳಿಗಳಿಗೆ ದಿನದ 24ಗಂಟೆಗಳ ಕಾಲ ನೀರು ಹರಿಯಲಿದೆ. ವಿಜಯನಗರ ಮೂರನೇ ಹಂತವನ್ನು ನಗರಪಾಲಿಕೆಗೆ ಸೇರಿಸಲು ಪ್ರಯತ್ನ ಮಾಡಿದೆ. ವಿಜಯನಗರ ನಾಲ್ಕನೇ ಹಂತ, ಹಿನಕಲ್‌ನಲ್ಲಿ ಅನೇಕ ಕೆಲಸಗಳನ್ನು ಮಾಡಿಸಿದ್ದೇನೆ. ಯುಜಿಡಿ ವ್ಯವಸ್ಥೆ,ಚರಂಡಿ ಮಾಡಿಸುವ ಜತೆಗೆ ಸುಂದರವಾದ ರಸ್ತೆಗಳನ್ನು ಮಾಡಿಸಿದ್ದೇನೆ ಎಂದರು.
ಕಳೆದ ಎರಡು ವರ್ಷಗಳ ಹಿಂದೆ ವಿಜಯನಗರ ಮೂರು,ನಾಲ್ಕನೇ ಹಂತವನ್ನು ನಗರಪಾಲಿಕೆಗೆ ಸೇರಿಸಲು ಯತ್ನಿಸಿದಾಗ ಬಿಜೆಪಿ,ದಳ,ಕಾಂಗ್ರೆಸ್ ಸೇರಿದಂತೆ ಎಲ್ಲರೂ ವಿರೋಧ ಮಾಡಿದರು. ನಂತರ, ಪ್ರತಾಪ್‌ಸಿಂಹ, ಎಸ್.ಟಿ.ಸೋಮಶೇಖರ್ ಎಲ್ಲರೊಂದಿಗೆ ಹದಿನೈದು ದಿನಗಳ ಕಾಲ ನಿರಂತರವಾದ ಒತ್ತಡದಿಂದಾಗಿ ನಗರಸಭೆಯನ್ನಾಗಿ ಮಾಡಲಾಯಿತು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಿ ಮನವೊಲಿಸಿದ ಮೇಲೆ ಹೂಟಗಳ್ಳಿ ನಗರಸಭೆಯನ್ನು ಗ್ರೇಡ್-1 ಮೈಸೂರು ಪಾಲಿಕೆಗೆ ಸೇರಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ನನ್ನ ಹೋರಾಟದ ಶ್ರಮದ ಫಲವಾಗಿ ಗ್ರೇಡ್-1 ಮೈಸೂರು ರಚನೆಯಾಗಿದೆ ಎಂದು ನುಡಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ 26 ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ,ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದೆ. ಮುಂದಿನ ಆರು ತಿಂಗಳಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಪ್ರತಿ ಗ್ರಾಮಗಳು,ಬಡಾವಣೆಗಳಿಗೆ ದಿನದ ೨೪ಗಂಟೆಗಳ ಕಾಲ ಕುಡಿಯುವ ನೀರು ಒದಗಿಸಲಾಗುವುದು. ನಾನು ಚುನಾವಣೆಯಲ್ಲಿ ಎರಡು ಬಾರಿ ಪ್ರತಾಪ್ ಸಿಂಹ, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಗೆಲುವಿಗೆ ಹದಿನೈದು ದಿನಗಳ ಕಾಲ ಕೆಲಸ ಮಾಡಿರುವೆ. ಬಿಜೆಪಿಗೆ ಮಹಾಪೌರ-ಉಪ ಮಹಾಪೌರ ಸ್ಥಾನ ಸಿಗಲು ನಾನೇ ಸಹಾಯ ಮಾಡಿದ್ದೆ.ಆದರೆ,ನನ್ನ ಚುನಾವಣೆಯಲ್ಲಿ ಪಕ್ಷವೆಂದು ದೂರ ಸರಿದು ಸಹಾಯ ಮಾಡಲ್ಲ ಎಂದು ಬೇಸರಿಸಿದರು.
ಬಳಗವನ್ನು ಸುತ್ತೂರುಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ವಿಜಯನಗರ ಮೂರನೇ ಹಂತದ ವೀರಶೈವ ಲಿಂಗಾಯತ ಬಸವ ಬಳಗ ಅಧ್ಯಕ್ಷ ಡಿ.ಎಂ.ಶಿವಪ್ರಸಾದ್ ವಹಿಸಿದ್ದರು. ಜೆಎಸ್‌ಎಸ್ ಮಹಾವಿದ್ಯಾಪೀಠದಪ್ರಕಟಣಾ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ವಿಶೇಷ ಉಪನ್ಯಾಸ ನೀಡಿದರು. ಶ್ರೀಬಸವೇಶ್ವರ ಪಟ್ಟದ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ, ಮೈಮುಲ್ ಮಾಜಿ ನಿರ್ದೇಶಕ ಎಸ್.ಸಿ.ಅಶೋಕ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಚ್.ವಿ.ಬಸವರಾಜು, ಮೈಸೂರು ನಗರ ಅಧ್ಯಕ್ಷ ಎಂ.ಎಚ್.ಚಂದ್ರಶೇಖರ್, ವಿಶ್ರಾಂತ ಪ್ರಾಧ್ಯಾಪಕ ಡಾ.ಕೆ.ಸಿ.ಬಸವರಾಜು, ನಿರ್ದೇಶಕಿ ಡಾ.ಶೈಲಾ ನಾಗರಾಜ್, ಬಸವಜಯಂತಿ ಉತ್ಸವದ ಅಧ್ಯಕ್ಷ ಬಿ.ಕೆ.ನಾಗರಾಜು, ಕೆ.ಎಸ್.ಮಹಾಲಕ್ಷ್ಮೀ, ಕೆ.ಎಸ್.ಮಂಜುನಾಥ, ಎನ್.ಮಂಜುನಾಥ್, ಎಚ್.ಎಸ್.ಪ್ರಕಾಶ್, ಎಸ್.ಶಿವಕುಮಾರ್, ಗಂಗಾಧರ್ ವಿ.ಹಟ್ಟಿಹೊಳಿ, ಬಿ.ಕಾರ್ತಿಕ್, ಮಲ್ಲಿಕಾರ್ಜುನಸ್ವಾಮಿ, ಜಿ.ರತ್ನ, ಡಾ.ಎಚ್.ಎಸ್.ಸನತ್ ಕುಮಾರ್, ಎಸ್.ವೀರಣ್ಣ ಮತ್ತಿತರರು ಹಾಜರಿದ್ದರು.
Mysore
ಯೂನಿಟಿ ಮಾಲ್‌ಗೆ ಪ್ರಮೋದಾದೇವಿ ಒಡೆಯರ್ ತಡೆಯಾಜ್ಞೆ
ಮೈಸೂರು: ಕೇಂದ್ರ ಸರ್ಕಾರ ಮೈಸೂರಿನಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ‘ಯೂನಿಟಿ ಮಾಲ್’ ಕಾಮಗಾರಿಗೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ತಡೆಯಾಜ್ಞೆ ತಂದಿದ್ದಾರೆ. ಆದರೆ ಅವರ ಪುತ್ರ, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸದರಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದರು.

ಮೈಸೂರಿನ ಅರಮನೆ ಎದುರಿನ ದಸರಾ ವಸ್ತು ಪ್ರದರ್ಶನ ಆವರಣ (ಮೈಸೂರು ಸರ್ವೇ ನಂ.1)ದ ಮಹಾತ್ಮ ಗಾಂಧಿ ರಸ್ತೆಗೆ ಹೊಂದಿಕೊಂಡ 6.5 ಎಕರೆ ಜಾಗದಲ್ಲಿ ಯೂನಿಟಿ ಮಾಲ್ ನಿರ್ಮಿಸಲು ಇತ್ತೀಚೆಗೆ ಚಾಲನೆ ನೀಡಲಾಗಿತ್ತು. ಇದರ ವಿರುದ್ಧ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಹೈಕೋರ್ಟ್ ಮೆಟ್ಟಿಲು ಏರಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದೆ.
ಏನಿದು ಯೂನಿಟಿ ಮಾಲ್?: ಕೇಂದ್ರ ಸರ್ಕಾರ ದೇಶಾದ್ಯಂತ ಯೂನಿಟಿ ಮಾಲ್ ಹೆಸರಿನಲ್ಲಿ ದೇಶಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಚಿಂತನೆ ನಡೆಸಿದೆ. ರಾಜ್ಯದ ಮೊದಲ ಹಾಗೂ ಏಕೈಕ ಯೂನಿಟಿ ಮಾಲ್ ಮೈಸೂರಿಗೆ ಮಂಜೂರಾಗಿತ್ತು.

ದೇಶಿಯ ಉತ್ಪನ್ನಗಳ ಮಾರಾಟಕ್ಕೆ ಮಾರುಕಟ್ಟೆ ಹಾಗೂ ಕರಕುಶಲ ಕರ್ಮಿಗಳಿಗೆ ಉದ್ಯೋಗ ನೀಡುವ ಉದ್ದೇಶ ಹೊಂದಿರುವ ಕೇಂದ್ರ ಸರ್ಕಾರದ ಯೋಜನೆಗೆ ರಾಜ್ಯ ಸರ್ಕಾರ ಜಾಗ ಗುರುತಿಸಿತ್ತು. ವಸ್ತು ಪ್ರದರ್ಶನ ಪ್ರಾಧಿಕಾರದ ಜಾಗದಲ್ಲಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭೂಮಿ ಪೂಜೆ ನೆರವೇರಿಸಿದ್ದರು.
ಪಿಪಿಪಿ ಮಾದರಿಯಲ್ಲಿ ಒಟ್ಟು 193 ಕೋಟಿ ರೂ. ವೆಚ್ಚದಲ್ಲಿ ಯೂನಿಟಿ ಮಾಲ್ ತಲೆ ಎತ್ತಲಿದೆ. 2027ರ ವೇಳೆಗೆ ಯೋಜನೆ ಪೂರ್ಣಗೊಳ್ಳಲಿದೆ. ಮೈಸೂರು ರೇಷ್ಮೆ, ಜಿಐ ಟ್ಯಾಗ್ ಹೊಂದಿರುವ ಉತ್ಪನ್ನಗಳು ಹಾಗೂ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಗುರುತಿಸಿರುವ ವಸ್ತುಗಳು ಸೇರಿದಂತೆ ಒಟ್ಟು 36 ವಾಣಿಜ್ಯ ಮಳಿಗೆಗಳನ್ನು ಯೂನಿಟಿ ಮಾಲ್ ಒಳಗೊಂಡಿರಲಿದೆ ಎಂದು ಮಾಹಿತಿ ನೀಡಿದ್ದರು.

ಇದೀಗ ಸದರಿ ಯೋಜನೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಕಾಮಗಾರಿಗೆ ಹಿನ್ನೆಡೆ ಉಂಟಾಗಿದೆ. ತಡೆಯಾಜ್ಞೆ ತೆರವುಗೊಳಿಸಲು ಜಿಲ್ಲಾಡಳಿತ ಕಾನೂನು ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
-
State14 hours agoIPL, ಟಿ-20 ವಿಶ್ವಕಪ್ ಕ್ರಿಕೆಟ್ ಸಂಬಂಧ ಸಿಎಂ, ಡಿಸಿಎಂರನ್ನು ಭೇಟಿ ಮಾಡಿದ ವೆಂಕಟೇಶ್ ಪ್ರಸಾದ್
-
Mandya16 hours agoಜಿಲ್ಲಾಧಿಕಾರಿಗಳಿಂದ ಗುತ್ತಲು ಕೆರೆಗೆ ಭೇಟಿ ಮತ್ತು ಪರಿಶೀಲನೆ
-
Chamarajanagar8 hours agoಮ.ಮ.ಬೆಟ್ಟದಲ್ಲಿ ಹುಂಡಿ ಹಣ ಎಣಿಕೆ: 28 ದಿನಗಳ ಅವಧಿಯಲ್ಲಿ 2.53 ಕೋಟಿ ರೂ. ಸಂಗ್ರಹ
-
Mandya14 hours agoಕಾಳೇನಹಳ್ಳಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಡಿಸಿ ಭೇಟಿ
-
State9 hours agoದ್ವೇಷ ಭಾಷಣ, ದ್ವೇಷ ಅಪರಾಧಗಳ ವಿಧೇಯಕ ಮಂಡಿಸಿದ ಡಾ.ಜಿ.ಪರಮೇಶ್ವರ್
-
Hassan12 hours agoಡಿ. 11ರಿಂದ 14 ರವರೆಗೆ ಶ್ರೀ ಮೆಳೆಯಮ್ಮದೇವಿ, ಚಿಕ್ಕಮ್ಮದೇವಿ ಅದ್ದೂರಿ ಜಾತ್ರಾ ಮಹೋತ್ಸವ
-
Hassan11 hours agoಗಾಂಜಾ ಅಮಲಿನಲ್ಲಿ ಯುವಕನೋರ್ವನ ಹ*ತ್ಯೆ: ಆರೋಪಿಯನ್ನು ಬಂಧಿಸಿದ ಪೊಲೀಸರು
-
Chamarajanagar10 hours agoರಾಗಿ ಒಕ್ಕಣೆ ಮಿಷನ್ ನಿಂದ ಕೂಲಿ ಕಾರ್ಮಿಕಳೊಬ್ಬಳ ಕೈ ತುಂಡು
