Connect with us

State

ರಾಜ್ಯಪಾಲರ ಭಾಷಣದಲ್ಲಿ ಉಪ್ಪು ಹುಳಿ ಖಾರ ಏನೂ ಇಲ್ಲ: ಹೆಚ್.ಡಿ.ಕುಮಾರಸ್ವಾಮಿ

Published

on

ಬರಪೀಡಿತ ರೈತರಿಗೆ ಕೊಡಲು ಹಣವಿಲ್ಲ; ಸಂಪುಟ ದರ್ಜೆ ಭಾಗ್ಯಕ್ಕೆ ಹಣವಿದೆ!!

ಭಾಷಣದಲ್ಲಿ ಕಾಂತರಾಜ್ ವರದಿ ಸದ್ದೇ ಇಲ್ಲವಲ್ಲ ಎಂದು ಸಿಎಂಗೆ ಕುಟುಕಿದ ಮಾಜಿ ಮುಖ್ಯಮಂತ್ರಿ

*

ಬೆಂಗಳೂರು: ರಾಜ್ಯಪಾಲರ ಭಾಷಣದಲ್ಲಿ ಉಪ್ಪು ಹುಳಿ ಖಾರ ಏನೂ ಇಲ್ಲ. ಇದೊಂದು ಜಾಹೀರಾತುಗಳಿಂದ ನಡೆಯುತ್ತಿರುವ ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದ್ದಾರೆ.

ಅಲ್ಲದೆ; ಒಂದು ಕಡೆ ಬರಗಾಲ, ಕೇಂದ್ರ ಸರ್ಕಾರದಿಂದ ಹಣ ಬರುತ್ತಿಲ್ಲ ಎನ್ನುವ ಸರ್ಕಾರ ಇಲ್ಲಿ ನೋಡಿದರೆ ಗಂಜಿ ಕೇಂದ್ರಗಳನ್ನು ಸೃಷ್ಟಿ ಮಾಡಿ 90 ಮಂದಿಗೆ ಸಂಪುಟ ದರ್ಜೆ ನೀಡಿದೆ. ಅದರಲ್ಲಿ 77 ಶಾಸಕರಿಗೆ ಸಂಪುಟ ದರ್ಜೆ ಭಾಗ್ಯ ನೀಡಿದ್ದರೆ, ಸಿಎಂ ಕಚೇರಿಯಲ್ಲಿ 9 ಜನರಿಗೆ ಸಂಪುಟ ಭಾಗ್ಯ ಕರುಣಿಸಲಾಗಿದೆ. ರಾಜ್ಯದ ಆಡಳಿತಾತ್ಮಕ ಇತಿಹಾಸದಲ್ಲಿಯೂ ಇಷ್ಟು ಬೇಕಾಬಿಟ್ಟಿಯಾಗಿ ಅಧಿಕಾರ ಹಂಚಿಕೆ ಮಾಡಿ ಖಜಾನೆಗೆ ನಷ್ಟ ಉಂಟು ಮಾಡಲಾಗಿದೆ ಎಂದು ಅವರು ದೂರಿದರು.ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ಮಾಡಲಾದ ರಾಜ್ಯಪಾಲರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು; ಕ್ಯಾಬಿನೆಟ್ ದರ್ಜೆ ಅದಕ್ಕೊಂದು ಲೆಕ್ಕ ಬೇಡವೇ? ಉಪ ಮುಖ್ಯಮಂತ್ರಿ ಅವರ ಆರೋಗ್ಯ ತಪಾಸಣೆ ಮಾಡುವ ವೈದ್ಯರಿಗೂ ಕ್ಯಾಬಿನೆಟ್ ದರ್ಜೆ! ಕಲೆಕ್ಷನ್ ಮಾಡಿಕೊಡುವ ಅಸಾಮಿಗೂ ಕ್ಯಾಬಿನೆಟ್ ದರ್ಜೆ!! ಕರ್ನಾಟಕ ಹಣಕಾಸು ಸಂಸ್ಥೆ (KSFC) ಅಧ್ಯಕ್ಷರನ್ನಾಗಿ ಶಾಸಕರನ್ನು ನೇಮಕ ಮಾಡುತ್ತಿರುವುದು ಉಂಟಾ? ಎಂದು ಸರಕಾರವನ್ನು ಮಾಜಿ ಮುಖ್ಯಮಂತ್ರಿಗಳು ಪ್ರಶ್ನಿಸಿದರು.ಬರಕ್ಕೆ ತುತ್ತಾದ ರೈತರಿಗೆ ಪರಿಹಾರ ಕೊಡಲು ಇವರಲ್ಲಿ ಹಣವಿಲ್ಲ. ಆದರೆ, ಸಂಪುಟ ದರ್ಜೆ ಭಾಗ್ಯಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಇದನ್ನು ಏನೆಂದು ಕರೆಯಬೇಕು? ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ ಪ್ರತೀ ವರ್ಷ ನಡೆಯುವ ಶಾಸ್ತ್ರವಷ್ಟೇ. ಪ್ರತಿ ವರ್ಷದ ಸಂಪ್ರದಾಯದಂತೆ ವಿಧಾನಸಭೆ ಕಲಾಪಗಳು ನಡೆಯುತ್ತವೆ. ಸರಕಾರದ ಮುಂದಿನ ವರ್ಷದ ನೀಲನಕ್ಷೆ ಹಾಗೂ ಸಾಧನೆಗಳ ನೋಟವನ್ನು ಕೊಡಬೇಕು. ಅದನ್ನು ಮಾಡದ ಕೆಲಸಗಳ ಬಗ್ಗೆ ಡಂಗುರ ಹೊಡೆಯುವ ಕೆಲಸ ಅಷ್ಟೇ ಆಯಿತು. ಸರ್ಕಾರದ ಸಾಧನೆಗಳ ಬಗ್ಗೆ ರಾಜ್ಯಪಾಲರಿಂದ ಭಾಷಣ ಕೇಳಿದ್ದೇವೆ. ಆದರೆ, ಈ ಭಾಷಣ ಹಾಡಿದ್ದೇ ಹಾಡೋ ಕಿಸಬಾಯಿ ದಾಸ ಎನ್ನುವ ರೀತಿಯಲ್ಲಿದೆ ಎಂದು ಅವರು ಟೀಕಿಸಿದರು.ಇವರಿಗೆ ಸ್ಪಷ್ಟ ಬಹುಮಯದ ಸರಕಾರ ಕೊಟ್ಟಿದ್ದಾರೆ ಜನ. ಆದರೆ, ಇವರು ಅಸ್ಪಷ್ಟವಾಗಿ ಆಡಳಿತ ನಡೆಸುತ್ತಿದ್ದಾರೆ. ಗ್ಯಾರಂಟಿಗಳ ಬಗ್ಗೆ ಪ್ರತಿದಿನವೂ ಮಾಧ್ಯಮಗಳಲ್ಲಿ ನುಡಿದಂತೆ ನಡೆದಿದ್ದೇವೆ ಎಂದು ಹೇಳಿಕೊಂಡು ಹೋಗುತ್ತಿದ್ದಾರೆ. ಆದರೆ, ಕೇವಲ ಜನರಿಗೆ ಸರಿಯಾಗಿ ತಲುಪದ ಗ್ಯಾರೆಂಟಿಗಳ ಬಗ್ಗೆ ಗೌರವಾನ್ವಿತ ರಾಜ್ಯಪಾಲರಿಂದ ಸುಳ್ಳು ಭಾಷಣ ಮಾಡಿಸಿದ್ದಾರೆ.

 

ವಿಶೇಷವಾಗಿ ಬೆಂಗಳೂರಿನಲ್ಲಿ ಬ್ರ್ಯಾಂಡ್ ಬೆಂಗಳೂರು ಮಾಡುತ್ತೇವೆಂದು ದೊಡ್ಡ ದೊಡ್ಡ ಹೇಳಿಕೆಗಳನ್ನು ಕೊಟ್ಟಿದ್ದನ್ನು ನೋಡಿದ್ದೇವೆ. ಸಂಗಮದಿಂದ ಮೇಕೆದಾಟು ಪಾದಾಯಾತ್ರೆ ಮಾಡಿದ್ದನ್ನೂ ನೋಡಿದ್ದೇವೆ. ಆ ಮೇಕೆದಾಟು ಕಳೆದ 8 ತಿಂಗಳಲ್ಲಿ ಎಲ್ಲಿ ಶುರುವಾಯಿತೋ ಈಗಲೂ ಅಲ್ಲಿಯೇ ನಿಂತಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಏನಾಯಿತು, ಎಲ್ಲಿಗೆ ಬಂತು? ಅಭಿವೃದ್ಧಿ ಯೋಜನೆಗಳಿಗೆ ಹಣ ಕೇಳಲೇಬೇಡಿ ಎನ್ನುವಂತೆ ಇದೆ ಪರಿಸ್ಥಿತಿ ಎಂದು ಕುಮಾರಸ್ವಾಮಿ ಅವರು ಅಸಮಾಧಾನ ವ್ಯಕ್ತಪಡಿಸಿದರು.ಈ ಸರಕಾರ ನುಡಿದಂತೆ ನಡೆದಿದ್ದರೆ ನಾನು ಖಂಡಿತಾ ಮೆಚ್ಚುತ್ತಿದ್ದೆ. ಆದರೆ ಇವರು ಎಲ್ಲಿಯೂ ನುಡಿದಂತೆ ನಡೆದಿಲ್ಲ. ಅದಕ್ಕೆ ನಾನು ಹೇಳಿದ್ದು, ರಾಜ್ಯಪಾಲರ ಭಾಷಣದಲ್ಲಿ ಉಪ್ಪು ಖಾರ ಉಳಿ ಇಲ್ಲಾ ಎಂದು. ಇದರ ನಾನು ಏನು ಮಾತಾಡಲಿ? ಹದಿನೈದು ಬಜೆಟ್ ಮಂಡನೆ ಮಾಡಿದ ಸಿದ್ದರಾಮಯ್ಯನವರು, ಎರಡನೇ ಮುಖ್ಯಮಂತ್ರಿ ಆದವರು ರಾಜ್ಯಪಾಲರಿಂದ ಮಾಡಿಸುವ ಭಾಷಣವೇ ಇದು? ಇದು ಅತ್ಯಂತ ಕಳಪೆ ಭಾಷಣ ಎಂದು ಮಾಜಿ ಮುಖ್ಯಮಂತ್ರಿಗಳು ಪ್ರತಿಪಾದಿಸಿದರು.

ಗ್ಯಾರಂಟಿಗಳ ಬಗ್ಗೆ ಅಧ್ಯಯನವಂತೆ:

ಗ್ಯಾರಂಟಿಗಳ ಬಗ್ಗೆ ದೇಶ ವಿದೇಶದಲ್ಲಿ ಅಧ್ಯಯನ ಮಾಡುತ್ತಿದ್ದಾರಂತೆ. ಅಧ್ಯಯನ ಮಾಡುವವರಿಗೆ ವಾಸ್ತವ ಚಿತ್ರಣ ಗೊತ್ತಿದ್ದಂತೆ ಇಲ್ಲ. ಹಾವೇರಿ ಜಿಲ್ಲೆಯ ತಾಯಿ ಮಗ ಕೆಲಸಕ್ಕಾಗಿ ಗೋವಾಕ್ಕೆ ಗುಳೆ ಹೋದರು. ಅಲ್ಲಿಯೂ ಕೆಲಸ ಸಿಗಲಿಲ್ಲ ಎಂದು ರೈಲಿನಲ್ಲಿ ಊರಿಗೆ ವಾಪಸ್ ಬರುವಾಗ ಟಿಕೆಟ್ ಇರಲಿಲ್ಲ ರೈಲಿನ ಟಿಕೆಟ್ ತಪಾಸಣೆ ಮಾಡುವವನು ಅವರಿಬ್ಬರನ್ನು ಧಾರವಾಡ ಜಿಲ್ಲೆಯ ಆಳ್ನಾವರದಲ್ಲಿ ರೈಲಿನಿಂದ ಇಳಿಸಿಬಿಟ್ಟ. ಮೂರು ದಿನ ಉಪವಾಸ ಬಿದ್ದ ಆ ತಾಯಿಮಗ ಸುಸ್ತಾಗಿದ್ದರು. ತಾಯಿಗಾಗಿ ಅನ್ನ ಹುಡುಕಲು ಹೊರಟ ಮಗನಿಗೆ ಅನ್ನವೂ ಸಿಗಲಿಲ್ಲ, ಕೆಲಸವೂ ಧಕ್ಕಲಿಲ್ಲ. ಕೊನೆಗೆ ಅದೇ ಊರಿನಲ್ಲಿ ಆ ಯುವಕ ಆತ್ಮಹತ್ಯೆ ಮಾಡಿಕೊಂಡ. ಗ್ಯಾರಂಟಿಗಳು ಪರಿಣಾಮಕಾರಿಯಾಗಿ ಜಾರಿ ಆಗಿ ಅವು ಎಲ್ಲರಿಗೂ ತಲುಪಿದ್ದಿದ್ದರೆ ಆ ತಾಯಿ ಮಗ ಗೋವಾಕ್ಕೆ ಯಾಕೆ ಹೋಗುತ್ತಿದ್ದರು? ಆ ಯುವಕ ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ? ಎಂದು ಮಾಜಿ ಮುಖ್ಯಮಂತ್ರಿ ಅವರು ಆಕ್ರೋಶ ವ್ಯಕ್ತಪಡಿಸಿದರು. ಆ ತಾಯಿ ಇವತ್ತು ಅನಾಥೆಯಾಗಿದ್ದಾರೆ. ಆದರೆ ಇವರ ಗ್ಯಾರಂಟಿ ಜಾಹೀರಾತುಗಳು ಮಾತ್ರ ಹಾಗೆಯೇ ಬರುತ್ತಿವೆ. ಈ ಸರಕಾರ ಜಾಹೀರಾತು ಮೇಲೆ ನಡೆಯುತ್ತಿದೆ. ಜನಸ್ಪಂದನಕ್ಕೆ ಬಂದಿದ್ದ ಮಹಿಳೆಯರು ಗೃಹಲಕ್ಷಿ ಯೋಜನೆಯಲ್ಲಿ ಹಣ ಬಂದಿಲ್ಲಾ ಅಂತಾ ಸಿಎಂ ಅವರಿಗೆ ದೂರು ನೀಡಿದರು ಎಂದು ಗ್ಯಾರಂಟಿ ವೈಫಲ್ಯಗಳನ್ನು ಕುಮಾರಸ್ವಾಮಿ ಅವರು ಎಳೆಎಳೆಯಾಗಿ ಬಿಡಿಸಿಟ್ಟರು.

ಬಸ್ಸಿನಲ್ಲಿ ಜನರನ್ನು ಕರೆತಂದು ಜನತಾದರ್ಶನ ಮಾಡಿಲ್ಲ:

ನಾನು ಸಿಎಂ ಆಗಿದ್ದಾಗ ಜನತಾದರ್ಶನ ಮಾಡಿದ್ದೆ. ಅದಕ್ಕೆ ಬಸ್ ನಲ್ಲಿ ಜನರನ್ನು ಕರೆತಂದಿರಲಿಲ್ಲ. ರಾತ್ರಿ ಮೂರು ಗಂಟೆಗೆ ಬಂದು ಜನ ಕಾಯುತ್ತಿದ್ದರು. ಬೆಳಗ್ಗೆ 9 ಗಂಟೆಯಿಂದ ಮಧ್ಯರಾತ್ರಿವರೆಗೂ ಆ ಜನರ ಅಹವಾಲು ಕೇಳಿ ಸ್ಥಳದಲ್ಲಿಯೇ ಅವರ ಸಂಕಷ್ಟ ನಿವಾರಣೆ ಮಾಡಿದ್ದೇನೆ. ಆದರೆ, ನಾನೆಂದೂ ಜಾಹೀರಾತು ಕೊಟ್ಟುಕೊಂಡು ಪ್ರಚಾರ ಪಡೆದುಕೊಳ್ಳಲಿಲ್ಲ. ದಿನಕ್ಕೆ 100 ಸುಳ್ಳು ಹೇಳಿಕೊಂಡು ಓಡಾಡುವ ಇವರು, ರಾಜ್ಯಪಾಲರಿಂದಲು ಸುಳ್ಳು ಭಾಷಣ ಮಾಡಿಸಿದ್ದಾರೆ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.ನಾನು‌ ಯಾವ ಗ್ಯಾರಂಟಿಗಳನ್ನು ತಪ್ಪು ಎಂದು ಹೇಳುವುದಿಲ್ಲ. ಗ್ಯಾರಂಟಿಗಳ ವಿಚಾರದಲ್ಲಿ ನನಗೆ ಯಾವ ತಕಾರಾರೂ ಇಲ್ಲ. ಬೇಕಾದರೆ ಇನ್ನು ಐದು ಗ್ಯಾರಂಟಿ ಜಾರಿ ಮಾಡಿ, ಅಭಿನಂದಿಸ್ತಿನಿ. ಆದರೆ, ಈಗಾಗಲೇ ಜಾರಿ ಮಾಡಿರುವ ಗ್ಯಾರಂಟಿಗಳು ಏನಾಗಿವೆ? ಬೆಂಗಳೂರಿನ ಭಾಗವೇ ಆಗಿರುವ ದೇವನಹಳ್ಳಿಯಲ್ಲಿ ಶಾಲಾ ಮಕ್ಕಳಿಗೆ ಬಸ್ ಇಲ್ಲ. ಮಕ್ಕಳು ಶಾಲೆಗೆ ದಿನವೂ ನಡೆದುಕೊಂಡು ಹೋಗುವ ಪರಿಸ್ಥಿತಿ ಇದೆ. ಉದ್ಯೋಗ ಕೊಡುತ್ತೇವೆ ಎಂದು ಜಾಹೀರಾತು ಕೊಡುತ್ತಲೇ ಇದ್ದಾರೆ. ಅಷ್ಟು ಜನ ನೇಮಕ, ಇಷ್ಟು ಜನ ನೇಮಕಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ ಎನ್ನುತ್ತಿದ್ದಾರೆ. ಬರೀ ಪ್ರಸ್ತಾವನೆ ಸಲ್ಲಿಸುವುದರಲ್ಲಿಯೇ ಸರ್ಕಾರ ಕಾಲಹರಣ ಮಾಡುತ್ತಿದೆ ಎಂದು ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು.

ರಾಜ್ಯಪಾಲರ ಭಾಷಣದಲ್ಲಿ ಕಾಂತರಾಜು ವರದಿ ಸದ್ದೇ ಇಲ್ಲ:

ಸಂವಿಧಾನವನ್ನು ರಕ್ಷಣೆ ಮಾಡಿದರೆ, ಸಂವಿಧಾನ ನಮ್ಮನ್ನು ರಕ್ಷಣೆ ಮಾಡುತ್ತದೆ. ಸ್ಲೋಗನ್ ಚೆನ್ನಾಗಿದೆ. ಆದರೆ, ನಾನು ಜಾತ್ಯತೀತ, ಧರ್ಮಾತೀತ ಎಂದು ಡಂಗುರ ಹೊಡೆದುಕೊಂಡು ತಿರುಗಾಡುವ ಈ ಮುಖ್ಯಮಂತ್ರಿ, ಧರ್ಮ – ಜಾತಿಗಳ ಹೆಸರಿನಲ್ಲಿ ಎಷ್ಟು ಸಮಾವೇಶಗಳನ್ನು ಮಾಡಿಲ್ಲ? ಬೇಕಾದರೆ ದಾಖಲೆ ತೆಗೆಯೋಣ ಎಂದ ಅವರು; ಕಾಂತರಾಜ್ ವರದಿಯ ಸದ್ದೇ ಇಲ್ಲವಲ್ಲ ಈ ಭಾಷಣದಲ್ಲಿ? ವರದಿ ಸ್ವೀಕಾರ ಮಾಡಿ ಜಾರಿ ಮಾಡುತ್ತೇನೆ ಎಂದು ಚಿತ್ರದುರ್ಗದಲ್ಲಿ ಅಬ್ಬರ ಮಾಡಿದ್ದರಲ್ಲ.. ಈ ಬಗ್ಗೆ ರಾಜ್ಯಪಾಲರ ಭಾಷಣದಲ್ಲಿ ಚಕಾರವೇ ಇಲ್ಲ.ಜಯಪ್ರಕಾಶ್ ಹೆಗ್ಡೆ ಅವರ ಹತ್ತಿರ ಏನ್ ಬರುಸ್ತಿದ್ದಿರಾ ಎಂದು ನೇರವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಕುಟುಕಿದರು ಕುಮಾರಸ್ವಾಮಿ ಅವರು.

*

ಪ್ರೀತಂಗೌಡ ಹೇಳಿಕೆಯ ಬಗ್ಗೆ:

ಹಾಸನದಲ್ಲಿ ತಾವು ನೀಡಿದ ಹೇಳಿಕೆಯ ಬಗ್ಗೆ ಮಾಜಿ ಶಾಸಕ ಪ್ರೀತಂಗೌಡ ಕೊಟ್ಟಿರುವ ಪ್ರತಿಕ್ರಿಯೆ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಕುಮಾರಸ್ವಾಮಿ ಅವರು; ದ್ವೇಷದ ಇತಿಹಾಸವೇ ಹೌದು. ಈ ಮಣ್ಣಿನ ಗುಣವೇ ಹಾಗೆ. ದಾಯಾದಿ ಕಲಹ ನಡೆಯುತ್ತಿರುತ್ತದೆ. ಅವರು ನಡೆದಿರುವ ಘಟನೆ ಹೇಳಿದ್ದಾರೆ. ಮುಂದಿನ ಭವಿಷ್ಯವನ್ನೂ ಅವರು ಹೇಳಿದ್ದಾರೆ, ನೊಡೊಣಾ.. ಎಂದರು.

*

ಮೈಸೂರಿನಲ್ಲಿ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗದ ಬಗ್ಗೆ ಮಾಹಿತಿ ನೀಡಿದ ಮಾಜಿ ಮುಖ್ಯಮಂತ್ರಿಗಳು, ನಾನು ಈ ಬಗ್ಗೆ ಅಮಿತ್ ಶಾ ಅವರಿಗೆ ಮಾಹಿತಿ ಕೊಟ್ಟಿದ್ದೆ. ಬೇರೆ ಕಾರಣದಿಂದ ಹೋಗಲು ಆಗಲಿಲ್ಲ. ಇದರಲ್ಲಿ ಯಾವುದೇ ಅನುಮಾನ, ಗೊಂದಲ ಬೇಡ ಎಂದರು.

ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡರು, ಶಾಸಕಾಂಗ ಪಕ್ಷದ ಉಪ ನಾಯಕಿ ಶಾರದಾ ಪೂರ್ಯಾ ನಾಯಕ್, ಶಾಸಕರಾದ ಕೆ.ಎ.ತಿಪ್ಪೇಸ್ವಾಮಿ, ಎಂ ಟಿ ಕೃಷ್ಣಪ್ಪ, ಎ.ಮಂಜು, ನೆಮಿರಾಜ್ ನಾಯಕ್, ಮೇಲೂರು ರವಿ, ಸಮೃದ್ಧಿ ಮಂಜುನಾಥ್, ಬಿ.ಎಂ.ಫಾರೂಕ್, ಭೋಜೇಗೌಡ, ಸ್ವರೂಪ್ ಪ್ರಕಾಶ್, ಟಿ.ಎ.ಶರವಣ, ಇಂಚರ ಗೋವಿಂದರಾಜು, ಕೆ.ಆರ್. ಪೇಟೆ ಮಂಜುನಾಥ್, ಹನೂರು ಮಂಜುನಾಥ್, ಹರೀಶ್ ಗೌಡ, ರಾಜೂ ಗೌಡ ಪಾಟೀಲ ಸೇರಿದಂತೆ ಪಕ್ಷದ ಎಲ್ಲಾ ಶಾಸಕರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

State

ನಿರ್ಮಲಾ ಸೀತಾರಾಮನ್ ಎನ್ ಡಿಎ ಸರ್ಕಾರ ಉಳಿಸಿಕೊಳ್ಳುವ ಬಜೆಟ್ ಮಂಡಿಸಿದ್ದಾರೆ: ಡಿಸಿಎಂ ಡಿ.ಕೆ.ಶಿವಕುಮಾರ್

Published

on

ಬೆಂಗಳೂರು, ಜು.23

“ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎನ್ ಡಿಎ ಸರ್ಕಾರ ಉಳಿಸಿಕೊಳ್ಳಲು ಮಂಡಿಸಿದ ಬಜೆಟ್ ಇದಾಗಿದೆ. ಕರ್ನಾಟಕಕ್ಕೆ ಯಾವುದೇ ನೆರವು ನೀಡದೆ ಅವರ ಮೇಲಿದ್ದ ನಿರೀಕ್ಷೆಗಳನ್ನು ಹುಸಿ ಮಾಡಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಕೇಂದ್ರ ಬಜೆಟ್ ವಿಚಾರವಾಗಿ ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಈ ಬಜೆಟ್ ನಲ್ಲಿ ನಿರ್ಮಲಾ ಸೀತರಾಮನ್ ಅವರು ತಮ್ಮ ಸರ್ಕಾರವನ್ನು ಉಳಿಸಿಕೊಳ್ಳಲು ಬಿಹಾರ ಹಾಗೂ ಆಂಧ್ರ ಪ್ರದೇಶಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಇದು ಅತ್ಯಂತ ನಿರಾಶಾದಾಯಕ ಬಜೆಟ್. ಈ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ದೇಶವನ್ನು ಒಂದಾಗಿ ನೋಡಿಲ್ಲ. ಇಂಡಿಯಾ ಮೈತ್ರಿಕೂಟದ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳನ್ನು ಕಡೆಗಣಿಸಿದ್ದಾರೆ. ಇದು ಕೇವಲ ಬಿಜೆಪಿ ಹಾಗೂ ಎನ್ ಡಿಎ ಮೈತ್ರಿಕೂಟ ಪಕ್ಷಗಳ ಆಡಳಿತ ರಾಜ್ಯಗಳಿಗೆ ನೆರವು ನೀಡುವ ಬಜೆಟ್ ಆಗಿದೆ. ಈ ಬಜೆಟ್ ನಲ್ಲಿ ತಾರತಮ್ಯ ಹೆಚ್ಚಾಗಿದೆ. ಇದು ಖಂಡನೀಯ” ಎಂದು ಟೀಕಿಸಿದರು.

“ಪ್ರಧಾನಮಂತ್ರಿ ಹಾಗೂ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮೇಲೆ ನಾನು ಬಹಳಷ್ಟು ವಿಶ್ವಾಸ ಇಟ್ಟುಕೊಂಡಿದ್ದೆ. ಇಡೀ ವಿಶ್ವ ಭಾರತವನ್ನು ಬೆಂಗಳೂರಿನ ಮೂಲಕ ನೋಡುತ್ತಿದೆ. ಬೆಂಗಳೂರು ಹಾಗೂ ಕರ್ನಾಟಕ ಹೆಚ್ಚು ಉದ್ಯೋಗಗಳನ್ನು ಸೃಷ್ಟಿ ಮಾಡಿ ಜಾಗತಿಕ ಮಟ್ಟದಲ್ಲಿ ತನ್ನದೇ ಚಾಪು ಮೂಡಿಸಿದೆ. ಹೀಗಾಗಿ ಪ್ರಧಾನಮಂತ್ರಿಗಳು ಬೆಂಗಳೂರಿಗೆ ಮೂಲಸೌಕರ್ಯ ನೆರವು ಹಾಗೂ ಕರ್ನಾಟಕಕ್ಕೆ ಸಹಾಯ ಮಾಡುವ ಭರವಸೆ ಇಟ್ಟುಕೊಂಡಿದ್ದೆ. ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕವನ್ನು ಪ್ರತಿನಿಧಿಸಿದ್ದು, ತಮ್ಮ ರಾಜ್ಯಕ್ಕೆ ಆದ್ಯತೆ ನೀಡುತ್ತಾರೆ. ಕರ್ನಾಟಕದ ಹಿತ ರಕ್ಷಣೆ ಮಾಡುತ್ತಾರೆ, ಬಾಕಿ ಇರುವ ಯೋಜನೆಗಳಿಗೆ ಅನುದಾನ ನೀಡುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

Continue Reading

State

ಕೇಂದ್ರದ ಬಜೆಟ್ ಮಂಡನೆ

Published

on

 

Chandrababu Naidu: ಕೇಂದ್ರದ ಬಜೆಟ್ ಮಂಡನೆ – ಚಂದ್ರಬಾಬು ನಾಯ್ಡು ಇಟ್ಟ ಈ ಪ್ರಮುಖ ಬೇಡಿಕೆಗಳ ಮೇಲೆಯೇ ಎಲ್ಲರ ಕಣ್ಣು !!

Chandrababu Naidu: ಪ್ರಧಾನಿ ಮೋದಿ 3 ನೇ ಅವಧಿಗೆ ಪ್ರಧಾನಿ ಆಗುವ ಮೂಲಕ NDA ಸರ್ಕಾರದ ರಚನೆಗೆ ಪ್ರಮುಖ ಕಾರಣ ಆಗಿರೋ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ನಲ್ಲಿ ತಮ್ಮ ರಾಜ್ಯಕ್ಕೆ ಹಲವು ಬೇಡಿಕೆಗಳನ್ನಟ್ಟಿದ್ದಾರೆ.

ಹೌದು, NDA ಸರ್ಕಾರ ರಚನೆಯಾಗುವಾಗ ಬೆಂಬಲ ಘೋಷಿಸಿದ್ದ ನಿತೀಶ್ ಕುಮಾರ್ ಹಾಗೂ ಚಂದ್ರಬಾಬು ನಾಯ್ಡು(Chandrababu Naidu) ಅವರು ಯಾವುದೇ ಷರತ್ತುಗಳಿಲ್ಲದೆ, ನಗುನಗುತ್ತಾ ಬಂದು ಮೋದಿ ಕೈ ಕುಲುಕಿ ನಮ್ಮ ಬೆಂಬಲ ನಿಮಗೆ, ಯಾವತ್ತೂ ಯಾವುದಕ್ಕೂ ಹಸ್ತಕ್ಷೇಪ ಮಾಡಲ್ಲ ಎಂದು ಹೇಳಿದ್ದರು. ಅಂತೆಯೇ ಇದೀಗ ಎಲ್ಲವೂ ಸುಸೂತ್ರವಾಗಿ ಸಾಗುತ್ತಿವೆ. ಆದರೆ ಮುಂದೇನು ಎಂಬುದು ಬಲ್ಲವರು ಯಾರು ಅಲ್ಲವೇ? ಆದರೀಗ ಇಂದು NDA ಸರ್ಕಾರದ ಮೊದಲ ಬಜೆಟ್ ಮಂಡನೆಯಾಗುತ್ತಿದ್ದು, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರು ಮೋದಿ ಎದುರು ಈ ಬೇಡಿಕೆಗಳನ್ನು ಇಟ್ಟಿದ್ದಾರೆ ಎನ್ನಲಾಗಿದೆ. ಆದರೆ ಇವುಗಳಿಗೆ ನಿರ್ಮಲಾ ಸೀತಾರಾಮನ್ ಅವರು ಹೇಗೆ ಸ್ಪಂದಿಸಿದ್ದಾರೆ ಎಂದು ನೋಡಬೇಕಿದೆ.


ನಾಯ್ಡು ಇಟ್ಟ ಬೇಡಿಕೆಗಳು:
* ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ವ್ಯಾಪಿಸಿರುವ ಬುಂಧೇಲ್ ಖಂಡ್ ರೀತಿಯಲ್ಲಿ ವಿಶೇಷ ಪ್ಯಾಕೇಜ್
* ಕೈಗಾರಿಕಾ ಪ್ರೋತ್ಸಾಹಧನ, ರಾಜಧಾನಿಯಾಗಿ ಅಮರಾವತಿ ನಗರವನ್ನು ನಿರ್ಮಿಸಲು ಪ್ಯಾಕೇಜ್
* ಪೋಲಾವರಂ ವಿವಿಧೋದ್ದೇಶ ಯೋಜನೆಗೆ ಹಣ ಬಿಡುಗಡೆ
ರಾಜ್ಯ ಆರ್ಥಿಕ ವ್ಯವಹಾರಗಳ ಮೇಲೆ ತಾತ್ಕಾಲಿಕ ಹಿಡಿತ ಸಾಧಿಸಲು ಅಲ್ಪಾವಧಿಯ ಸಹಾಯ
* ವಿಶೇಷ ನೆರವಿನ ಯೋಜನೆಯಡಿಯಲ್ಲಿ ಬಂಡವಾಳ ಹೂಡಿಕೆಗೆ ಹೆಚ್ಚುವರಿ ಆರ್ಥಿಕ ಸಹಾಯ
* ರಸ್ತೆ, ಸೇತುವೆ, ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಗಳಂತಹ ಅಗತ್ಯ ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್
* ಬಿಪಿಸಿಎಲ್ ( Bharat Petroleum Corporation Limited) ರಿಫೈನರಿ ಹೊಸ ಘಟಕ ಆಂಧ್ರ ಪ್ರದೇಶದಲ್ಲಿ ಸ್ಥಾಪನೆ

Continue Reading

State

ವಿಧಾನಸೌಧದ ಗುಮ್ಮಟದಲ್ಲಿ ಬಿರುಕು – ಸಿಎಂ ಗಮನಕ್ಕೆ ತರ್ತೀನಿ ಎಂದ ಸ್ಪೀಕರ್‌

Published

on

ಬೆಂಗಳೂರು: ವಿಧಾನಸೌಧದ ಪೂರ್ವ ಭಾಗದ ಗುಮ್ಮಟದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಮಾಹಿತಿ ಪಡೆದ ಸ್ಪೀಕರ್ ಯುಟಿ ಖಾದರ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಸಿಎಂ ಗಮನಕ್ಕೆ ತರುವುದಾಗಿಯೂ ಹೇಳಿದ್ದಾರೆ.

ಗುಮ್ಮಟದಲ್ಲಿ ಸಣ್ಣ ಮಟ್ಟದ ಬಿರುಕು ಕಾಣಿಸಿದ್ದು. ಜೋರು ಮಳೆ ಬಂದಾಗ ನೀರು ಸಹ ಲೀಕೇಜ್ ಆಗುತ್ತಿದೆ ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಜೊತೆ ಖುದ್ದು ಸ್ಪೀಕರ್ ಯು.ಟಿ ಖಾದರ್ ಪರಿಶೀಲನೆ ನಡೆಸಿದ್ದಾರೆ.

ಪರಿಶೀಲನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಧಾನಸೌಧ ರಾಜಕೀಯ ನಾಯಕರ ಕಟ್ಟಡವಾಗಿರದೇ ಪ್ರವಾಸಿಗರ ಆಕರ್ಷಣೆಯ ಕೇಂದ್ರವೂ ಆಗಿದೆ. ಆದ್ರೆ ದೊಡ್ಡ ಕಟ್ಟಡಗಳನ್ನು ಸರಿಪಡಿಸುವಾಗ ಮತ್ತೊಂದು ಕಡೆ ಸ್ವಲ್ಪ ಹೆಚ್ಚು-ಕಡಿಮೆ ಆಗಬಹುದು. ಗುಮ್ಮಟ ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಫ್ಲೋರ್‌ಗಳು ಮಾತ್ರ ವ್ಯಾಪ್ತಿಗೆ ಬರುತ್ತದೆ. ಆದರೂ ಈ ವಿಚಾರವನ್ನ ಸಿಎಂ ಗಮನಕ್ಕೆ ತರುತ್ತೇನೆ ಎಂದಿದ್ದಾರೆ.

ನಮ್ಮ ವ್ಯಾಪ್ತಿಯಲ್ಲಿನ ಫ್ಲೋರ್‌ಗಳನ್ನು ಸರಿಪಡಿಸಿದ್ದೇನೆ. ಡಿಪಿಆರ್ ಹಾಗೂ ಲೋಕೋಪಯೋಗಿ ಇಲಾಖೆಯವರ ವ್ಯಾಪ್ತಿಗೆ ಗುಮ್ಮಟ ಬರುತ್ತದೆ. ಅವರ ಗಮನಕ್ಕೆ ತಂದು ಸರಿಪಡಿಸಲು ಹೇಳುತ್ತೇನೆ. ಇದು ಬಹಳ ವರ್ಷಗಳ ಹಳೆಯ ಕಟ್ಟಡ. ಕೆಲವೊಂದು ಲೋಪದೋಷ ಆಗಿರಬಹುದು, ಆದಷ್ಟು ಬೇಗ ಸಿಎಂಗೆ ವಿಚಾರ ತಿಳಿಸುತ್ತೇನೆ ಎಂದು ಆಶ್ವಾಸನೆ ನೀಡಿದ್ದಾರೆ.

Continue Reading

Trending

error: Content is protected !!