Chikmagalur
ರಾಜ್ಯಸಭೆ ಅಡ್ಡಮತದಾನ ವಿವಾದ| ಯಾರನ್ನೂ ನೇರವಾಗಿ ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಸಾಧ್ಯವಿಲ್ಲ: ಸಿ.ಟಿ.ರವಿ
ಚಿಕ್ಕಮಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ರಚಿಸಿರುವ ಸತ್ಯಶೋಧನಾ ಸಮಿತಿಯು ತನ್ನ ಪ್ರಾಥಮಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ.
ಸಮಿತಿಯ ಸದಸ್ಯರಾದ ಸಿ.ಟಿ. ರವಿ ಅವರು ಚಿಕ್ಕಮಗಳೂರಿನಲ್ಲಿ ಈ ಕುರಿತು ಪ್ರಮುಖ ಹೇಳಿಕೆ ನೀಡಿದ್ದಾರೆ. ಅಡ್ಡ ಮತದಾನಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಂಪೂರ್ಣ ವರದಿಯನ್ನು ಸಿದ್ಧಪಡಿಸಲಾಗಿದ್ದು, ಅದನ್ನು ಗೌಪ್ಯವಾಗಿ ಸೀಲ್ಡ್ ಕವರ್‌ನಲ್ಲಿ ಇಡಲಾಗಿದೆ ಎಂದು ಸಿ.ಟಿ. ರವಿ ತಿಳಿಸಿದ್ದಾರೆ. ಸದ್ಯ ರಾಜ್ಯ ಬಿಜೆಪಿ ಅಧ್ಯಕ್ಷರು ದೆಹಲಿ ಪ್ರವಾಸದಲ್ಲಿದ್ದು, ನಾಳೆ ಸಂಜೆ ಅವರು ಬೆಂಗಳೂರಿಗೆ ಮರಳಲಿದ್ದಾರೆ.

ಆ ಬಳಿಕ ಸಮಿತಿಯ ಮೂವರು ಸದಸ್ಯರು ಅಧ್ಯಕ್ಷರನ್ನು ಭೇಟಿಯಾಗಿ ವರದಿಯನ್ನು ಹಸ್ತಾಂತರಿಸಲಿದ್ದಾರೆ. ಈ ವರದಿಯನ್ನು ಯಾವ ಆಧಾರದ ಮೇಲೆ, ಹೇಗೆ ಸಿದ್ಧಪಡಿಸಲಾಗಿದೆ ಎಂಬ ವಿವರಣೆಯನ್ನು ನೀಡಿದ ಬಳಿಕವಷ್ಟೇ ಅದನ್ನು ಪಕ್ಷದ ಮುಖಂಡರಿಗೆ ಒಪ್ಪಿಸಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇನ್ನು ಈ ಸೂಕ್ಷ್ಮ ವಿಷಯದ ಕುರಿತು ಮಾತನಾಡಿದ ಅವರು, ವರದಿಯ ಸಿದ್ಧತೆಗಾಗಿ ಹಲವು ವ್ಯಕ್ತಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ಲಭ್ಯವಾದ ನಿಖರ ಮಾಹಿತಿಗಳನ್ನು ಆಧರಿಸಿ ವರದಿ ರೂಪಿಸಲಾಗಿದೆ. ಆದರೆ ಪಕ್ಷದ ಆಂತರಿಕ ಶಿಸ್ತಿನ ದೃಷ್ಟಿಯಿಂದ ಯಾವುದೇ ಸಂಗತಿಯನ್ನು ಸಾರ್ವಜನಿಕವಾಗಿ ಚರ್ಚಿಸಲು ತಾವು ಬಯಸುವುದಿಲ್ಲ ಎಂದಿದ್ದಾರೆ.

ವಿಶೇಷವಾಗಿ ಮತದಾನದ ಪ್ರಕ್ರಿಯೆಯು ‘ಸೀಕ್ರೆಟ್ ವೋಟಿಂಗ್’ (ಗೌಪ್ಯ ಮತದಾನ) ಆಗಿರುವುದರಿಂದ, ಕೇವಲ ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ಕೆಲವರನ್ನು ಅನುಮಾನಿಸಬಹುದೇ ಹೊರತು, ಯಾರನ್ನೂ ನೇರವಾಗಿ ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಸಾಧ್ಯವಿಲ್ಲ ಎಂದು ಸಿ.ಟಿ. ರವಿ ಅಭಿಪ್ರಾಯಪಟ್ಟಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಲ್ಲಿ 250 ಕೋಟಿ ರೂಪಾಯಿಗೂ ಅಧಿಕ ಹಣದ ಹಗರಣ ನಡೆದಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದ್ದು, ಈ ಪ್ರಕರಣವನ್ನು ತಕ್ಷಣವೇ ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಸರ್ಕಾರದ ಯಾವುದೇ ತನಿಖೆಯಿಂದಲೂ ಈ ಪ್ರಕರಣದಲ್ಲಿ ನ್ಯಾಯ ಸಿಗಲು ಸಾಧ್ಯವಿಲ್ಲ. ನಕಲಿ ಖಾತೆಗಳನ್ನು ಪತ್ತೆ ಹಚ್ಚಿದ್ದು ಸರ್ಕಾರವಲ್ಲ, ಬದಲಿಗೆ ಸಿಐಜಿ ಈ ಮಹಾ ವಂಚನೆಯನ್ನು ಬಯಲಿಗೆಳೆದಿದೆ ಎಂದು ಸಿ.ಟಿ. ರವಿ ಸ್ಪಷ್ಟಪಡಿಸಿದರು.
ಒಂದೇ ಬ್ಯಾಂಕ್ ಖಾತೆಗೆ ಸಾವಿರಾರು ಜನರ ಹಣ ವರ್ಗಾವಣೆಯಾಗಿದೆ ಎಂದರೆ ಇದು ಸಾಮಾನ್ಯ ಸಂಗತಿಯಲ್ಲ. ಅರ್ಹ ಮಹಿಳೆಯರ ಕನಸಿನ ಯೋಜನೆ ಈಗ ಕಳ್ಳರ ಪಾಲಾಗುತ್ತಿದೆ ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ಭ್ರಷ್ಟಾಚಾರದ ಕುರಿತು ಮುಖ್ಯಮಂತ್ರಿಗಳು ಹಾಗೂ ಮಾಜಿ ಮುಖ್ಯಮಂತ್ರಿಗಳು ಮೌನ ವಹಿಸಿರುವುದು ಏಕೆ ಎಂದು ಪ್ರಶ್ನಿಸಿದ ಅವರು, ಹಿಂದಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರ ಮೌನವು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ ಎಂದರು.
ಈ ನಕಲಿ ಖಾತೆಗಳ ಹಣದ ಪಾಲು ಆಳುವವರಿಗೂ ಸಿಕ್ಕಿದೆಯೇ ಎಂಬ ಸಂಶಯ ಮೂಡುತ್ತಿದ್ದು, ಗೃಹಲಕ್ಷ್ಮಿಯರ ಹೆಸರಿನಲ್ಲಿ ಹಣ ಲೂಟಿ ಮಾಡಿರುವುದು ರಾಜ್ಯದ ಮಹಿಳೆಯರಿಗೆ ಎಸಗಿದ ದ್ರೋಹವಾಗಿದೆ ಎಂದು ಕಿಡಿಕಾರಿದರು. ಪ್ರಭಾವಿಗಳ ಪತ್ನಿಯರಿಗೂ ಈ ಯೋಜನೆ ತಲುಪುತ್ತದೆ ಎಂದು ನಂಬಿಸಿ, ಈಗ ಇಂತಹ ಲೂಟಿ ನಡೆಸಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದ್ದು, ಸತ್ಯಾಸತ್ಯತೆ ಹೊರಬರಲು ಸಿಬಿಐ ತನಿಖೆಯೊಂದೇ ದಾರಿ ಎಂದು ಅವರು ಒತ್ತಾಯಿಸಿದ್ದಾರೆ.
Chikmagalur
ಕಂಬಳದ ಕೆಸರುಗದ್ದೆಯಂತಾದ ಕೋಳೂರು ರಸ್ತೆ: ಶಾಲಾ ಮಕ್ಕಳ ಹರಸಾಹಸ, ಪಂಚಾಯತ್ ನಿರ್ಲಕ್ಷ್ಯಕ್ಕೆ ಆಕ್ರೋಶ
ಮೂಡಿಗೆರೆ: ಕಂಬಳದ ಕೆಸರುಗದ್ದೆಯನ್ನು ನೋಡಲು ಕರಾವಳಿಗೇ ಹೋಗಬೇಕಾಗಿಲ್ಲ, ಮೂಡಿಗೆರೆ ತಾಲ್ಲೂಕಿನ ಬೆಟ್ಟಿಗೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಳೂರಿಗೆ ಬಂದರೆ ಸಾಕು! ಮಳೆಗಾಲ ಬಂತೆಂದರೆ ಮಲೆನಾಡಿನ ರಸ್ತೆಗಳ ಪಾಡು ಹೀಗೆಯೇ ಎನ್ನುವಂತಾಗಿದ್ದು, ಇಲ್ಲಿನ ದುಸ್ಥಿತಿಯನ್ನು ಅಷ್ಟು ಸುಲಭವಾಗಿ ತಳ್ಳಿಹಾಕಲು ಸಾಧ್ಯವಿಲ್ಲ.
ಕೆಸರು ಹಳ್ಳ ದಾಟಿಯೇ ಶಾಲೆಗೆ ಬರಬೇಕು ಮಕ್ಕಳು!
ಕೋಳೂರು ಗ್ರಾಮದ ಈ ರಸ್ತೆಯಲ್ಲಿ ನಿಂತಿರುವ ವಿದ್ಯಾರ್ಥಿಗಳು ಪಕ್ಕದ ಹಳಿಕೆ ಗ್ರಾಮದವರಾಗಿದ್ದು, ಅವರು ಪ್ರತಿನಿತ್ಯ ಇದೇ ಕೆಸರು ಹಳ್ಳವನ್ನು ದಾಟಿಕೊಂಡೇ ಕೋಳೂರಿನ ಶಾಲೆಗೆ ಬರಬೇಕಾದ ಅನಿವಾರ್ಯತೆ ಎದುರಾಗಿದೆ. ಅಲ್ಲಿನ ಚಿತ್ರಣವನ್ನು ನೋಡಿದರೆ ಪುಟ್ಟ ಕಣ್ಮಣಿಗಳ ಕಷ್ಟ ಯಾರಿಗಾದರೂ ಅರ್ಥವಾಗುತ್ತದೆ. ಕೇವಲ ವಿದ್ಯಾರ್ಥಿಗಳಷ್ಟೇ ಅಲ್ಲದೆ, ಕೋಳೂರು ಗ್ರಾಮದ ಪ್ರತಿಯೊಬ್ಬ ನಾಗರಿಕರೂ ಪ್ರತಿನಿತ್ಯ ಇದೇ ಕೆಸರು ರಸ್ತೆಯಲ್ಲೇ ಓಡಾಡಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.

ತೋಟದ ಮಾಲೀಕರ ತಕರಾರು – ಪಂಚಾಯತ್ ಮೌನ!
ರಸ್ತೆಯಲ್ಲಿ ನಿಂತಿರುವ ನೀರನ್ನು ಪಕ್ಕದ ತೋಟಕ್ಕೆ ಹರಿಸೋಣವೆಂದರೆ ಅಲ್ಲಿನ ತೋಟದ ಮಾಲೀಕರು ತಕರಾರು ತೆಗೆಯುತ್ತಿದ್ದಾರೆ. ಇದರಿಂದಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಬೆಟ್ಟಿಗೆರೆ ಗ್ರಾಮ ಪಂಚಾಯತಿಯವರಂತೂ ತಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲದಂತೆ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರ ಮನವಿ:
ಗ್ರಾಮ ಪಂಚಾಯತ್ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು. ಈ ವಿಡಿಯೋ ಹಾಗೂ ವರದಿ ಮೂಡಿಗೆರೆಯ ಶಾಸಕರಿಗೆ ತಲುಪುವಂತಾಗಲು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ದಯಮಾಡಿ ಶೇರ್ ಮಾಡಬೇಕಾಗಿ ವಿನಂತಿಸಲಾಗಿದೆ.
Chikmagalur
ಮೂಡಿಗೆರೆ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಹಿರಿಯ ನಾಯಕರ ಕಡೆಗಣನೆಗೆ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಆಕ್ರೋಶ
ಮೂಡಿಗೆರೆ: ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಭಿನ್ನಮತ ತಾರಕಕ್ಕೇರಿದ್ದು, ದಶಕಗಳಿಂದ ಪಕ್ಷಕ್ಕಾಗಿ ಶ್ರಮಿಸಿದ ಹಿರಿಯ ನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂದು ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಪಕ್ಷದ ತಳಮಟ್ಟದಿಂದ ದುಡಿದ ಹಿರಿಯ ಮುಖಂಡರನ್ನು ಏಕಾಏಕಿ ಹುದ್ದೆಗಳಿಂದ ಕಿತ್ತೊಗೆಯುತ್ತಿರುವುದು ಕಾರ್ಯಕರ್ತರ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.
ಗ್ಯಾರಂಟಿ ಅಧ್ಯಕ್ಷ ಸ್ಥಾನದಿಂದ ಜಯರಾಮ್ ಗೌಡರ ವಜಾಕ್ಕೆ ತೀವ್ರ ಬೇಸರ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ, “ಮತದಾನದ ಆರಂಭದ ದಿನಗಳಿಂದಲೂ ಕಾಂಗ್ರೆಸ್ ಪಕ್ಷದಲ್ಲೇ ಗುರುತಿಸಿಕೊಂಡಿರುವ ಜಯರಾಮ್ ಗೌಡರು ಹಾಗೂ ಅವರ ತಾಯಿಯ ಕಾಲದಿಂದಲೂ ಪಕ್ಷಕ್ಕಾಗಿ ಪ್ರಾಣ ಪಣಕ್ಕಿಟ್ಟು ದುಡಿದ ಇಂತಹ ಹಿರಿಯ ನಾಯಕರನ್ನು ಗ್ಯಾರಂಟಿ ಯೋಜನೆಯ ಅಧ್ಯಕ್ಷ ಸ್ಥಾನದಿಂದ ಏಕಾಏಕಿ ಯಾವುದೇ ಮುನ್ಸೂಚನೆ ಇಲ್ಲದೆ ಕಿತ್ತೊಗೆದಿರುವುದು ತೀವ್ರ ಬೇಸರ ತಂದಿದೆ,” ಎಂದರು.

”ಇಂತಹ ಹಿರಿಯ ನಾಯಕರಿಗೆ ಗೌರವಯುತವಾಗಿ ಪಕ್ಷದ ನಿರ್ಧಾರವನ್ನು ತಿಳಿಸಿ, ರಾಜೀನಾಮೆ ನೀಡಲು ಕೋರಿದ್ದರೆ ಅವರೇ ಗೌರವದಿಂದ ನಿರ್ಗಮಿಸುತ್ತಿದ್ದರು. ಆದರೆ, ಬೇಕಾಬಿಟ್ಟಿಯಾಗಿ ಇವರನ್ನು ತೆಗೆದುಹಾಕಿ ಬೇರೆಯವರನ್ನು ನೇಮಕ ಮಾಡಿರುವುದು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ತೀವ್ರ ನೋವುಂಟು ಮಾಡಿದೆ,” ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
’ಸೆಟ್ ದೋಸೆ’, ‘ವಯಸ್ಸಾಗಿದೆ’ ಎಂದು ಹೀಯಾಳಿಕೆ: ಸಾರ್ವಜನಿಕ ವಲಯದಲ್ಲಿ ಆಕ್ರೋಶ ಪಕ್ಷದ ಬೆಳವಣಿಗೆಗೆ ರಕ್ತ ಮಾಂಸ ಸವೆಸಿದ ಹಿರಿಯ ನಾಯಕರನ್ನು ‘ಸೆಟ್ ದೋಸೆ’, ‘ವಯಸ್ಸಾಗಿದೆ’, ‘ಅವರಿಂದ ವೋಟ್ ಬರಲ್ಲ’ ಎಂದು ಹೀಯಾಳಿಸುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಹಿರಿಯರಿಗೆ ನೀಡುತ್ತಿರುವ ಇಂತಹ ಅಪಮಾನಗಳು ಪಕ್ಷದ ಸಂಸ್ಕೃತಿಗೆ ತಕ್ಕುದಲ್ಲ ಎಂದು ಸ್ಥಳೀಯ ಮುಖಂಡರು ಅಸಮಾಧಾನ ಹೊರಹಾಕಿದ್ದಾರೆ.ಶಾಸಕಿ ನಯನ ಮೋಟಮ್ಮ ವಿರುದ್ಧ ಗಂಭೀರ ಆರೋಪಹಾಲಿ ಶಾಸಕಿ ನಯನ ಮೋಟಮ್ಮ ಅವರ ವಿರುದ್ಧವೂ ಗಂಭೀರ ಆರೋಪಗಳು ಕೇಳಿಬಂದಿದ್ದು, ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಹದಗೆಟ್ಟಿದೆ ಎಂಬ ಆತಂಕ ವ್ಯಕ್ತವಾಗಿದೆ.
ಅಧಿಕೃತ ಸಭೆಗಳ ಕೊರತೆ: ನಯನ ಮೋಟಮ್ಮ ಅವರು ಶಾಸಕರಾದ ನಂತರ ಪಕ್ಷದ ಕಚೇರಿಯಲ್ಲಿ ಒಂದೇ ಒಂದು ಅಧಿಕೃತ ಸಭೆ ನಡೆದಿಲ್ಲ. ಗುಂಪುಗಾರಿಕೆಗೆ ಉತ್ತೇಜನ: ಅಧಿಕೃತ ಪದಾಧಿಕಾರಿಗಳನ್ನೇ ದೂರ ಇಡುವುದು ಮತ್ತು ಶಾಸಕರೇ ಮತ್ತೊಂದು ಕಡೆ ಪ್ರತ್ಯೇಕ ಸಭೆ ನಡೆಸುವುದು ಪಕ್ಷದಲ್ಲಿ ಅಧೋಗತಿಯನ್ನು ಸೃಷ್ಟಿಸಿದೆ.

ಮುಂದಿನ ಚುನಾವಣೆಯಲ್ಲಿ ಭಾರಿ ಹಿನ್ನಡೆಯ ಎಚ್ಚರಿಕೆಈ ರೀತಿಯ ಗುಂಪುಗಾರಿಕೆ ಮತ್ತು ಹಿರಿಯ ನಾಯಕರ ಕಡೆಗಣನೆ ಮುಂಬರುವ ದಿನಗಳಲ್ಲಿ ಮೂಡಿಗೆರೆ ಕಾಂಗ್ರೆಸ್‌ಗೆ ಭಾರಿ ಹಿನ್ನಡೆಯನ್ನು ತರಲಿದೆ ಎಂದು ಹಿರಿಯ ಕಾಂಗ್ರೆಸ್ಸಿಗರು ಕಳವಳ ವ್ಯಕ್ತಪಡಿಸಿದ್ದಾರೆ.”ಶಾಸಕರು ತಕ್ಷಣವೇ ತಮ್ಮ ವರ್ಚಸ್ಸು ಮತ್ತು ಧೋರಣೆಯನ್ನು ಬದಲಾಯಿಸಿಕೊಳ್ಳಬೇಕು. ಇಲ್ಲದಿದ್ದರೆ ಇದು ಪಕ್ಷದ ಭವಿಷ್ಯದ ಬೆಳವಣಿಗೆಗೆ ಮಾರಕವಾಗಲಿದೆ,” ಎಂದು ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ನೇರ ಎಚ್ಚರಿಕೆ ನೀಡಿದ್ದಾರೆ.
Chikmagalur
ನಾರಾಯಣಮೂರ್ತಿ ದಂಪತಿ ಹೆಸರಲ್ಲಿ ವಂಚನೆ: ಆನ್‌ಲೈನ್ ಟ್ರೇಡಿಂಗ್ ನಂಬಿ ₹14.6 ಲಕ್ಷ ಕಳೆದುಕೊಂಡ ಚಿಕ್ಕಮಗಳೂರು ವ್ಯಕ್ತಿ!
ಚಿಕ್ಕಮಗಳೂರು: ಸೈಬರ್ ಕ್ರೈಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ಆನ್‌ಲೈನ್ ಹೂಡಿಕೆ ವಂಚನೆ ಬೆಳಕಿಗೆ ಬಂದಿದ್ದು, ಪ್ರತಿಷ್ಠಿತ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ಅವರ ಹೆಸರನ್ನು ಬಳಸಿಕೊಂಡು ಸಾರ್ವಜನಿಕರನ್ನು ನಂಬಿಸಿ ಲಕ್ಷಾಂತರ ರೂಪಾಯಿ ದೋಚಲಾಗಿದೆ. ಫೇಸ್‌ಬುಕ್‌ನಲ್ಲಿ ಈ ದಂಪತಿಯು ಟ್ರೇಡಿಂಗ್ ಬಗ್ಗೆ ಭಾಷಣ ಮಾಡುತ್ತಿರುವಂತೆ ಬಿಂಬಿಸಲಾಗಿದ್ದ ನಕಲಿ ಜಾಹೀರಾತು ಲಿಂಕ್ ಅನ್ನು ಕ್ಲಿಕ್ ಮಾಡಿದ ವ್ಯಕ್ತಿಯೊಬ್ಬರು ಬರೋಬ್ಬರಿ ₹14,67,241 ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆ ಆಪ್ ಓಪನ್ ಆಗಿದ್ದು, ತದನಂತರ ವರುಣ್ ಖನ್ನಾ ಎಂಬ ಹೆಸರಿನಲ್ಲಿ ಕರೆ ಮಾಡಿದ ವಂಚಕರು, ಬ್ಯಾಂಕ್ ಎಫ್‌ಡಿಗಿಂತಲೂ ಮೂರು ಪಟ್ಟು ಹೆಚ್ಚಿನ ಲಾಭಾಂಶ ನೀಡುವುದಾಗಿ ಆಮಿಷ ಒಡ್ಡಿದ್ದಾರೆ.
ಆರಂಭದಲ್ಲಿ ರಿಜಿಸ್ಟ್ರೇಷನ್ ಶುಲ್ಕವಾಗಿ ₹26,600 ಪಾವತಿಸಿಕೊಂಡ ವಂಚಕರು, ನಂತರ ಹಂತ ಹಂತವಾಗಿ ಹೂಡಿಕೆ ಮಾಡುವಂತೆ ಪ್ರೇರೇಪಿಸಿದ್ದಾರೆ. ಇದನ್ನು ನಿಜವೆಂದು ನಂಬಿದ ಸಂತ್ರಸ್ತರು VIXO ಟ್ರೇಡರ್ಸ್ ಹಾಗೂ QUATINO FX ಕಂಪನಿಗಳ ವಿವಿಧ ಖಾತೆಗಳಿಗೆ ಆರ್‌ಟಿಜಿಎಸ್ ಮತ್ತು ಯುಪಿಐ ಮೂಲಕ ಬರೋಬ್ಬರಿ 14.67 ಲಕ್ಷ ರೂಪಾಯಿಗೂ ಹೆಚ್ಚು ಹಣವನ್ನು ವರ್ಗಾವಣೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಹಣವನ್ನು ಯುಕೆಯ ಚಿನ್ನದ ಬಾಂಡ್‌ಗಳಲ್ಲಿ ಹೂಡಿಕೆ ಮಾಡಿದರೆ ಇನ್ನೂ ಹೆಚ್ಚಿನ ಲಾಭ ಬರುತ್ತದೆ ಎಂದು ನಂಬಿಸಿ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಸಂತ್ರಸ್ತರು ಅನುಮಾನಗೊಂಡು ಹೂಡಿಕೆ ಮಾಡಿದ ಹಣವನ್ನು ವಾಪಸ್ ಕೇಳಿದಾಗ, ಕಂಪನಿಯು ನಷ್ಟದಲ್ಲಿದೆ ಎಂದು ಹೇಳಿ ವಂಚನೆ ಎಸಗಿದ್ದಾರೆ. ಇಷ್ಟಾದರೂ ರಾಣಾ ಪ್ರತಾಪ್ ಎಂಬ ವ್ಯಕ್ತಿಯು ಮೊಬೈಲ್‌ನಿಂದ ಕರೆ ಮಾಡಿ ಇನ್ನೂ ಹೆಚ್ಚಿನ ಹಣ ಹಾಕುವಂತೆ ಬೆದರಿಕೆ ಹಾಕುತ್ತಿದ್ದಾನೆ ಎನ್ನಲಾಗಿದೆ. ಸದ್ಯ ಈ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
-
State12 hours agoಚೆನ್ನಮ್ಮ ಅಂತ್ಯಕ್ರಿಯೆ: ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಲು ಪ್ರಜ್ವಲ್ ರೇವಣ್ಣಗೆ ಅನುಮತಿ
-
Kodagu7 hours agoಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ಕುಶಾಲನಗರದ ಐಎಎಸ್ ಅಧಿಕಾರಿ ಎಸ್.ಎಸ್. ನಕುಲ್ ನೇಮಕ
-
Hassan6 hours agoಪಂಚಭೂತಗಳಲ್ಲಿ ಲೀನರಾದ ಚೆನ್ನಮ್ಮ ದೇವೇಗೌಡ
-
Politics4 hours agoಬಿಡದಿ ಟೌನ್ಶಿಪ್ ಭೂಸ್ವಾಧೀನಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್; PIL ವಜಾ
-
National11 hours agoಇಂದಿನಿಂದ ಸಂಸತ್ ಮುಂಗಾರು ಅಧಿವೇಶನ ಆರಂಭ
-
Kodagu24 hours ago“ಭಾಗಮಂಡಲ ಕಾಮಗಾರಿಗೆ ₹3 ಕೋಟಿ: ಪೊನ್ನಣ್ಣ ಕೋರಿಕೆಗೆ ಅನುದಾನ”
-
Kodagu7 hours agoಇಂದಿನಿಂದ ಪುಷ್ಯ ಮಳೆ : ಉತ್ತಮ ಮಳೆ ನಿರೀಕ್ಷೆಯಲ್ಲಿ ಜಿಲ್ಲೆಯ ರೈತರು
-
Chikmagalur4 hours agoಕಂಬಳದ ಕೆಸರುಗದ್ದೆಯಂತಾದ ಕೋಳೂರು ರಸ್ತೆ: ಶಾಲಾ ಮಕ್ಕಳ ಹರಸಾಹಸ, ಪಂಚಾಯತ್ ನಿರ್ಲಕ್ಷ್ಯಕ್ಕೆ ಆಕ್ರೋಶ
