Connect with us

Mandya

ನಾಲ್ವಡಿ ಕೃಷ್ಣರಾಜ‌ ಒಡೆಯರ್ 140 ನೇ ಜನ್ಮ‌ ದಿನಾಚರಣೆಯನ್ನು ಪಕ್ಷಾತೀತವಾಗಿ ಎಲ್ಲಾ ಸಂಘಟನೆಗಳೂ ಆಚರಿಸಬೇಕು – ತಗ್ಗಳ್ಳಿ ವೆಂಕಟೇಶ್

Published

on

ಮಂಡ್ಯ: ಜೂನ್ 4 ರಂದು ಮಂಡ್ಯ ಜಿಲ್ಲಾದ್ಯಂತ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 140ನೇ ಜನ್ಮ ದಿನಾಚರಣೆಯನ್ನು ಪಕ್ಷಾತೀತವಾಗಿ ಎಲ್ಲಾ ಸಂಘಟನೆಗಳು, ಸಂಘ ಸಂಸ್ಥೆಗಳು ಆಚರಿಸಬೇಕೆಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ಅಧ್ಯಕ್ಷ ತಗಹಳ್ಳಿ ವೆಂಕಟೇಶ್ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಡೆಯರ್ ಅವರು ಮಾದರಿ ಮಹಾರಾಜರಾಗಿದ್ದಾರೆ. ಶಿಕ್ಷಣ, ಆರೋಗ್ಯ, ನೀರಾವರಿ, ಕೈಗಾರಿಕೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆಗಳನ್ನು ಅವರು ನೀಡಿದ್ದಾರೆ .

ಸ್ವಾತಂತ್ರ್ಯ ಪೂರ್ವದಲ್ಲಿ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸಿ, ಗೆಜ್ಜೆಪೂಜೆಯಂತಹ ಅನಿಷ್ಟ ಪದ್ದತಿಗೆ ಒಡೆಯರ್ ಅವರು ತಿಲಾಂಜಲಿ ನೀಡಿದ್ದಾರೆ. ದೇಶದಲ್ಲಿ ಜನಪರ, ಅಭಿವೃದ್ಧಿಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.

ಮೈಸೂರು ಮತ್ತು ಮಂಡ್ಯ ಜಿಲ್ಲೆಗೆ ಅವರು ನೀಡಿರುವ ಕೊಡುಗೆ ಅಪಾರವಾಗಿದೆ. ಹಾಗಾಗಿ ಅವರನ್ನು ಸ್ಮರಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು .
ಮಂಡ್ಯ ಜಿಲ್ಲೆಯ ಬರಡು ಭೂಮಿಯನ್ನು ಹಸಿರು ಮಾಡಿ ದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲುತ್ತದೆ. ತಮ್ಮ ಕುಟುಂಬದವರ ಒಡವೆಗಳನ್ನು ಮಾರಿ ಕನ್ನಂಬಾಡಿ ಕಟ್ಟೆಯನ್ನು ನಿರ್ಮಿಸಿ ಕೃಷಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ

ನೀರಾವರಿ ,ಕೈಗಾರಿಕೆ ಒಡೆಯರ್ ಅವರ ಕೊಡುಗೆಯಾಗಿದೆ. ಇಡೀ ಏಷ್ಯಾದಲ್ಲಿಯೇ ಶಿಂಷಾದಲ್ಲಿ ವಿದ್ಯುತ್ ಯೋಜನೆಯನ್ನು ಪ್ರಥಮ ಬಾರಿಗೆ ಜಾರಿಗೆ ತಂದಿದ್ದಾರೆ. ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯ, ಆಸ್ಪತ್ರೆ ಹೀಗೆ ನೂರಾರು ಯೋಜನೆಗಳನ್ನು ಜಾರಿಗೆ ತಂದು ಜನೋಪಯೋಗಿ ಕೆಲಸ ಮಾಡಿದ್ದಾರೆ. ಅಲ್ಲದೆ ಸಾಹಿತ್ಯ ಕ್ಷೇತ್ರಕ್ಕೂ ಕೊಡುಗೆ ನೀಡಿದ್ದಾರೆ ಎಂದರು .
ಚಿತ್ರನಟರು ,ಕ್ರೀಡಾಪಟುಗಳು, ರಾಜಕಾರಣಿಗಳ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಮಾಡುತ್ತಿರುವುದನ್ನು ನೋಡುತ್ತಿದ್ದೇವೆ. ಇದು ಸಹಜ ಪ್ರಕ್ರಿಯೆಯಾಗಿದೆ. ಆದರೆ ನಮಗೆ ಅನ್ನ ನೀಡಿದ, ರಾಜ್ಯಕ್ಕೆ ಹೊಸ ಆಯಾಮವನ್ನೇ ತಂದುಕೊಟ್ಟ ಒಡೆಯರ್ ಅವರ ಜನ್ಮ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಬೇಕು. ಇದು ಎಲ್ಲರ ಕರ್ತವ್ಯವಾಗಿದೆ ಎಂದರು.

ಸರ್ಕಾರಿ ಕಚೇರಿಗಳಲ್ಲಿ ಮತ್ತು ಇತರ ಸಂಘ ಸಂಸ್ಥೆಗಳು ಶಾಲಾ ಕಾಲೇಜುಗಳು ಸೇರಿದಂತೆ ಎಲ್ಲೆಡೆ ಅವರ ಜನ್ಮ ದಿನಾಚರಣೆಯನ್ನು ಆಚರಿಸಲು ಆದೇಶಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅವರಿಗೆ ಮನವಿ ಮಾಡಿದ್ದೇವೆ. ಅವರು ಈ ಬಗ್ಗೆ ಸುತ್ತೋಲೆ ಹೊರಡಿಸುವುದಾಗಿ ಭರವಸೆ ನೀಡಿದ್ದಾರೆ. ಆದ ಕಾರಣ ಎಲ್ಲಾ ಸಂಘಟನೆಗಳು, ಸಂಘ ಸಂಸ್ಥೆಗಳು, ಗ್ರಾಮ ಪಂಚಾಯಿತಿಗಳು ಸ್ವಯಂ ಪ್ರೇರಿತವಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಸರಳ ರೀತಿಯಲ್ಲಿ ಆಚರಿಸಬೇಕು ಎಂದು ಅವರು ಮನವಿ ಮಾಡಿದರು.

ಗೋಷ್ಠಿಯಲ್ಲಿ ಸಚಿನ್, ಮಂಜು, ಶಿವಣ್ಣ, ಉಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Mandya

ಯುವ ಜನತೆಗೆ ಸಕಾಲದಲ್ಲಿ ಪ್ರೋತ್ಸಾಹ ಮತ್ತು ಉತ್ತೇಜನ ನೀಡಲು ಯುವನಿಧಿ ಸಹಾಯಕವಾಗಿದೆ : ಡಾ.ಕುಮಾರ

Published

on

ಮಂಡ್ಯ : ಯುವ ಜನತೆ ನಮ್ಮ ದೇಶದ ಸಂಪತ್ತು, ಯುವ ಜನತೆಗೆ ಸಕಾಲದಲ್ಲಿ ಪ್ರೋತ್ಸಾಹ ಮತ್ತು ಉತ್ತೇಜನ ನೀಡಲು ಯುವನಿಧಿ ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಹೇಳಿದರು.

ಗುರುವಾರ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಉದ್ಯೋಗ ಸೇವೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಯಲಯ ಮತ್ತು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉದ್ಯೋಗ ಮಾರುಕಟ್ಟೆ ಮಾಹಿತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರ್ಕಾರ ಯಾವುದೇ ಯೋಜನೆ ತಂದರು ಅದನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ತರುವುದು ಅಧಿಕಾರಿಗಳ ಇಚ್ಛಾಶಕ್ತಿಯ ಮೇಲೆ ನಿಂತಿದೆ. ನಮ್ಮ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಅರ್ಹ ಎಲ್ಲಾ ಸಾರ್ವಜನಿಕರಿಗೆ ತಲುಪಿಸಲು ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಜೊತೆಗೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಯ ಅಧ್ಯಕ್ಷರು ಹಾಗೂ ಸದಸ್ಯರು ಗ್ಯಾರಂಟಿ ಯೋಜನೆಗಳ ಕುರಿತು ವ್ಯಾಪಕ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಹೇಳಿದರು.

ಇತ್ತೀಚೆಗೆ ನಡೆದ ಕೆ.ಡಿ.ಪಿ ಸಭೆಗೆ ಆಗಮಿಸಿ ಮಾತನಾಡಿದ್ದ ರಾಜ್ಯ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರ ಅಧ್ಯಕ್ಷರಾದ ಎಚ್.ಎಂ ರೇವಣ್ಣ ಅವರು ಗ್ಯಾರಂಟಿ ಯೋಜನೆಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲು ನಮಗೆ ಕೆಲವು ಮಾರ್ಗದರ್ಶನ ನೀಡಿದ್ದಾರೆ ಹಾಗೂ ಯುವನಿಧಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಕಡ್ಡಾಯವಾಗಿ ಕಾಲೇಜುಗಳಿಗೆ ತೆರಳಿ ಯುವನಿಧಿ ಯೋಜನೆ ಕುರಿತಾಗಿ ಹೆಚ್ಚಿನ ಪ್ರಚಾರ ಹಾಗೂ ಅರಿವು ಮೂಡಿಸಿ ಎಂದು ತಿಳಿಸಿದ್ದಾರೆ.

ನಮ್ಮ ಜಿಲ್ಲೆಯಲ್ಲಿ ಯುವ ನಿಧಿ ವ್ಯಾಪ್ತಿಗೆ ಒಳಪಡುವ 60 ಪದವಿ, ಪಾಲಿಟೆಕ್ನಿಕ್ ಹಾಗೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿವೆ, 2025 ನೇ ಸಾಲಿನಲ್ಲಿ ತೇರ್ಗಡೆಗೊಂಡು ಹೊರ ಹೋಗಿರುವ ವಿದ್ಯಾರ್ಥಿಗಳಿಗೆ 180 ದಿನಗಳು ಕಳೆದರೂ ಉದ್ಯೋಗ ಸಿಗದ ಪಕ್ಷದಲ್ಲಿ ಅವರಿಗೆ ಯುವ ನಿಧಿ ಕೊಡಿಸುವ ಜವಾಬ್ದಾರಿ ಅ ಕಾಲೇಜಿನ ಪ್ರಾಂಶುಪಾಲರದ್ದು ಎಂದು ಹೇಳಿದರು.

ಉದ್ಯೋಗ ಅರಸಿ ಬರುತ್ತಿರುವ ಯುವ ಸಮೂಹ ನಿರಾಸೆಯಿಂದ ಕೈಚಲ್ಲಿ ಕೂರಬಾರದು ಎಂಬ ಉದ್ದೇಶದಿಂದ ಯುವ ನಿಧಿ ಜಾರಿಗೊಳಿಸಲಾಗಿದೆ, ಇದನ್ನು ಬಳಸಿಕೊಂಡು ಯುವ ಜನತೆ ಆಸಕ್ತಿ ಇರುವ ವಿಷಯಗಳಲ್ಲಿ ಯುವ ನಿಧಿ ಪ್ಲಾಸ್ ಮುಖಾಂತರ ಕೌಶಲ್ಯ ತರಬೇತಿ ಪಡೆಯಬೇಕು ಎಂದು ತಿಳಿ ಹೇಳಿದರು.

ಕಾಲೇಜುಗಳ ಪ್ರಾಂಶುಪಾಲರು ಉತ್ತೀರ್ಣರಾಗಿ ಹೊರಹೋಗುವ ವಿದ್ಯಾರ್ಥಿಗಳಿಗೆ ಇದರ ಕುರಿತಾಗಿ ಮಾಹಿತಿ ನೀಡಬೇಕು. ವಿದ್ಯಾರ್ಥಿಗಳಿಗೆ ಸರ್ಕಾರದಲ್ಲಿ ಲಭ್ಯವಿರುವ ಅನೇಕ ಕೌಶಲ್ಯ ತರಬೇತಿಗಳ ಬಗ್ಗೆ ತಿಳುವಳಿಕೆ ಇರುವುದಿಲ್ಲ, ಪ್ರಾಂಶುಪಾಲರುಗಳು ವಿದ್ಯಾರ್ಥಿಗಳಿಗೆ ಆಸಕ್ತಿ ಇರುವ ವಿಷಯಗಳ ಕುರಿತು ಅವರಿಗೆ ಸರ್ಕಾರದ ವತಿಯಿಂದ ಲಭ್ಯವಿರುವ ಕೌಶಲ್ಯ ತರಬೇತಿಗಳ ಕುರಿತಾಗಿ ಹೆಚ್ಚಿನ ಮಾಹಿತಿ ನೀಡಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಆರ್ ನಂದಿನಿ ಅವರು ಮಾತನಾಡಿ ಸಾರ್ವಜನಿಕ ವಲಯಗಳಲ್ಲಿ ಕೆಲಸ ಪಡೆಯಲು ಕೌಶಲ್ಯ ಅಭಿವೃದ್ಧಿ ಅತಿ ಮುಖ್ಯ, ಯುವ ಜನತೆಗೆ ಕೌಶಲ್ಯದ ಕೊರತೆಯಿಂದಾಗಿ ಉದ್ಯೋಗ ದೊರೆಯುತ್ತಿಲ್ಲ. ಜಿಲ್ಲೆಯ ಯುವ ಜನತೆಗೆ ಕೌಶಲ್ಯದ ಅಭಿವೃದ್ಧಿ ಅಗತ್ಯವಿದೆ ಎಂದು ಹೇಳಿದರು.

ಕಾಲೇಜುಗಳು ಖಾಸಗಿ ವಲಯಗಳಲ್ಲಿರುವ ಸಂಸ್ಥೆಗಳೊಡನೆ ನೇರ ಸಂಪರ್ಕ ಸಾಧಿಸಬೇಕು, ಕಾಲೇಜುಗಳಲ್ಲಿ ಇರುವ ಪ್ಲೇಸ್ ಮೆಂಟ್ ಸೆಲ್ ಗಳನ್ನು ಬಲವರ್ಧನೆಗೊಳಿಸಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ 6856 ಜನ ನಿರುದ್ಯೋಗಿಗಳು ಎಂದು ನೊಂದಣಿ ಮಾಡಿಕೊಂಡಿದ್ದಾರೆ ಒಟ್ಟು ಯುವ ನಿಧಿಗೆ ಅರ್ಹರೆಂದು ಗುರುತಿಸಲಾಗಿರುವುದು 5942 ಜನರು ಪರಿಗಣಿಸಲಾಗಿದೆ, ಈವರೆಗೆ ಫಲಾನುಭವಿಗಳ ಖಾತೆಗೆ ಡಿ.ಬಿ.ಟಿ ಮೂಲಕ ನೇರವಾಗಿ 11.92 ಕೋಟಿ ಅನುದಾನವನ್ನು ಯುವ ನಿಧಿ ಯೋಜನೆಯಡಿ ಮಂಜೂರು ಮಾಡಲಾಗಿದೆ. ನೀಡಲಾಗಿರುವ ಹಣವನ್ನು ಬಳಸಿಕೊಂಡು ಉದ್ಯಮ ಆರಂಭಿಸಿದರೆ ಕಡ್ಡಾಯ ಅವರು ತಮ್ಮ ಜೀವನವನ್ನು ರೂಪಿಸಿಕೊಳ್ಳಬಹುದು ಎಂದು ಹೇಳಿದರು.

ಯುವ ಸಮೂಹ ಉದ್ಯೋಗ ಮತ್ತು ಕೌಶಲ್ಯವನ್ನು ಹೊರ ಜಿಲ್ಲೆ ಹೊರ ರಾಜ್ಯದಲ್ಲಿ ಪಡೆದುಕೊಂಡು ಜೀವನ ರೂಪಿಸಿಕೊಳ್ಳಲು ಸಿದ್ಧರಿರಬೇಕು. ಎಲ್ಲವನ್ನೂ ಸ್ವತಃ ಊರಿನಲ್ಲೆ ಮಾಡುತ್ತೇನೆ ಎಂದು ಕೂರಬಾರದು. ಯುವ ನಿಧಿ ಮತ್ತು ಯುವ ನಿಧಿ ಪ್ಲಾಸ್ ಯೋಜನೆಯ ಮೂಲ ಉದ್ದೇಶ ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯೋಗ ಅವಕಾಶವನ್ನು ಹೆಚ್ಚಿಸುವುದು ಎಂದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಿಕ್ಕಲಿಂಗಯ್ಯ ಮಾತನಾಡಿ ವಿದ್ಯಾರ್ಥಿಗಳು ಯಾವ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ ಎಂಬುದು ಪ್ರಾಂಶುಪಾಲರಿಗೆ ತಿಳಿದಿರುತ್ತದೆ, ಪ್ರಾಂಶುಪಾಲರು ವಿದ್ಯಾರ್ಥಿಗಳು ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಪಡೆಯಲು ಮಾರ್ಗದರ್ಶನ ನೀಡಬೇಕು. ಆಗ ಮಾತ್ರ ವಿದ್ಯಾರ್ಥಿಗಳು ಉದ್ಯೋಗ ಪಡೆದು ಬದುಕಿನಲ್ಲಿ ಯಶಸ್ಸು ಕಾಣುತ್ತಾರೆ ಎಂದು ತಿಳಿಸಿದರು.

ಮಂಡ್ಯ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರುದ್ರಪ್ಪ ಅವರು ಮಾತನಾಡಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿದೆ‌. ಮಂಡ್ಯ ತಾಲ್ಲೂಕು ಒಂದರಲ್ಲೆ ಗೃಹ ಲಕ್ಷ್ಮಿ ಯೋಜನೆಯಡಿ 341 ಕೋಟಿ ಅನುದಾನ ನೀಡಲಾಗಿದೆ ಇದರಿಂದ ತಾಲ್ಲೂಕಿನ ಮಹಿಳೆಯರು ಸಣ್ಣ ಸಣ್ಣ ಉದ್ಯಮ ಆರಂಭಿಸಿ ಬದುಕು ಕಟ್ಟಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ನಂತರ ಜಿಲ್ಲಾಧಿಕಾರಿ ಡಾ ಕುಮಾರ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಆರ್ ನಂದಿನಿ ಅವರು ಯುವ ನಿಧಿ ಪೋಸ್ಟರ್ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ನವೀನ್ ಕುಮಾರ್, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ನಾಗನಂದ, ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಧನುಷ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Continue Reading

Mandya

ಅಲ್ಪಹಳ್ಳಿ ಗ್ರಾಮದಲ್ಲಿ ಶ್ರೀ.ಕಾಲ ಭೈರವೇಶ್ವರ ಸ್ವಾಮಿ ದೇವಾಲಯದ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಸಿದ ಪಾಂಡವಪುರ ಶಾಸಕ ದರ್ಶನ್ ಪುಟ್ಟಣ್ಣಯ್ಯ.

Published

on

ಕೆ. ಆರ್. ಪೇಟೆ: ಇಂದಿನ ಒತ್ತಡದ ಜೀವನದಲ್ಲಿ ದೇವರು ಹಾಗೂ ಧರ್ಮದ ಮಾರ್ಗದಿಂದ ಮಾತ್ರ ನಾವು ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿಯನ್ನು ಪಡೆಯಲು ಸಾಧ್ಯವಿದೆ ಎಂದು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ಅವರು ತಾಲೂಕಿನ ಗಡಿ ಗ್ರಾಮವಾದ ಅಲ್ಪಹಳ್ಳಿಯಲ್ಲಿ ಶ್ರೀ ವರಸಿದ್ಧಿ ಕಾಲಭೈರವೇಶ್ವರ ಸೇವಾ ಟ್ರಸ್ಟ್ ವತಿಯಿಂದ ನೂತನವಾಗಿ ನಿರ್ಮಿಸುತ್ತಿರುವ ಶ್ರೀ ಕಾಲಭೈರವೇಶ್ವರ ದೇವಸ್ಥಾನದ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಭೂಮಿ ಪೂಜೆ ಮಾಡಿ ನೆರೆದಿದ್ದ ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದರು.

ಸ್ವಾರ್ಥವೇ ತುಂಬಿರುವ ಇಂದಿನ ಸಮಾಜದಲ್ಲಿ ಸಮಾಜಮುಖಿ ಯಾಗಿ ಕೆಲಸ ಮಾಡುವ ಹೃದಯವಂತ ಜನರು ಹಿಂದಿನ ಸಮಾಜಕ್ಕೆ ಅಗತ್ಯವಾಗಿ ಬೇಕಾಗಿದ್ದಾರೆ ಪ್ರಗತಿಪರ ರೈತರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರಾದ ವೆಂಕಟೇಶಣ್ಣ ಅವರು ಅಲ್ಪಹಳ್ಳಿ ಗ್ರಾಮದಲ್ಲಿ ಶ್ರೀಮಠ ಹಾಗೂ ಕಾಲಭೈರವೇಶ್ವರ ಸ್ವಾಮಿ ದೇವಾಲಯದ ನಿರ್ಮಾಣಕ್ಕಾಗಿ ಬೆಲೆಬಾಳುವ ಭೂಮಿಯನ್ನು ದಾನ ಮಾಡಿ ಮಠ ಮಂದಿರಗಳು ಹಾಗೂ ದೇವಾಲಯದ ನಿರ್ಮಾಣಕ್ಕೆ ನಾಂದಿ ಹಾಡಿರುವುದು ಒಳ್ಳೆಯ ವಿಚಾರವಾಗಿದೆ ಎಂದು ದರ್ಶನ್ ಪುಟ್ಟಣ್ಣಯ್ಯ ಅಭಿಮಾನದಿಂದ ಹೇಳಿದರು.

ಶ್ರೀರಂಗಪಟ್ಟಣ ಚಂದ್ರವನ ಆಶ್ರಮದ ಶ್ರೀ ಡಾ.ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿಯವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ನಾವು ಸತ್ತಾಗ ಏನನ್ನು ಕೊಂಡು ಹೋಗುವುದಿಲ್ಲ. ನಮ್ಮನ್ನು ಹಿಂಬಾಲಿಸುವುದು ಪಾಪ ಪುಣ್ಯಗಳ ಮೂಟೆಯೇ ಹೊರತು ನಾವು ಸಂಪಾದಿಸಿರುವ ಆಸ್ತಿಪಾಸ್ತಿಯಲ್ಲ, ಧನ ಕನಕಗಳಲ್ಲ. ಆದ್ದರಿಂದ ನಮ್ಮ ಜೀವಿತದ ಅವಧಿಯಲ್ಲಿ ಸೇವಾ ಮನೋಭಾವನೆ ಹಾಗೂ ಪರೋಪಕಾರ ಗುಣಗಳನ್ನು ಮೈಗೂಡಿಸಿಕೊಂಡು ನೊಂದವರು ಹಾಗೂ ಬಡ ಜನರಿಗೆ ಕೈಲಾದ ಸಹಾಯವನ್ನು ಮಾಡುವ ಮನೋಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ನೊಂದವರು ಹಾಗೂ ಬಡಜನರ ಸೇವೆಯಲ್ಲಿ ಭಗವಂತನನ್ನು ಕಾಣುವ ಪ್ರಾಮಾಣಿಕ ಪ್ರಯತ್ನ ಮಾಡಿ ನಾವು ಸತ್ತ ನಂತರ ಪುಣ್ಯದ ಮೂಟೆಯನ್ನು ಹೊರಲು ಸಾರ್ಥಕ ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.

ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ಶ್ರೀರಾಮಲಿಂಗೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀ. ಶಿವಬಸವ ಸ್ವಾಮೀಜಿ, ಕಾಪನಹಳ್ಳಿ ಗವಿಮಠದ ಶ್ರೀ. ಚನ್ನವೀರಯ್ಯ ಸ್ವಾಮಿಜಿ, ಕೆ.ಆರ್.ಪೇಟೆ ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಎಸ್. ಬಸವೇಗೌಡ, ಮಂಡ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ಇಂದ್ರೇಶ್, ಪಾಂಡವಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಸ್. ಜಯರಾಮು, ಶ್ರೀ ವರಸಿದ್ಧಿ ಕಾಲಭೈರವೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀ.ತ್ರಿಶೋಭಾನಂದ ಸ್ವಾಮೀಜಿ , ಭೂದಾನಿಗಳಾದ ವೆಂಕಟೇಶಣ್ಣ, ರೈತ ಸಂಘದ ಮುಖಂಡರಾದ ರಾಘವ ಪ್ರಕಾಶ್, ಗಿರಿಧರ್ ಬಾರ್ಕೂರು ಗಂಗಾಧರ ಶಾಸ್ತ್ರಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಅಶೋಕ್, ಶ್ರೀರಂಗಪಟ್ಟಣ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಂಎಲ್ ದಿನೇಶ್ ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕ ಡಾಲು ರವಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಬೆಂಗಳೂರಿನ ನಯೋನಿಕ ಐ ಕೇರ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಶ್ರೀ ವರಸಿದ್ಧಿ ಕಾಲಭೈರವೇಶ್ವರ ಸೇವಾ ಟ್ರಸ್ಟ್ ಸಹಯೋಗದಲ್ಲಿ ಏರ್ಪಡಿಸಲಾಗಿತ್ತು.

Continue Reading

Mandya

ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿಗಳಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಿ : ಜಿ.ಪಂ. ಸಿಇಓ ನಂದಿನಿ ಸೂಚನೆ

Published

on

ಮಂಡ್ಯ: ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿಗಳ ಅನುಷ್ಟಾನ ಸಂದರ್ಭದಲ್ಲಿ ಹಲವಾರು ನ್ಯೂನ್ಯತೆಗಳು ಕಂಡುಬಂದಿದ್ದು, ಸದರಿ ನ್ಯೂನ್ಯತೆಗಳನ್ನು ಸರಿಪಡಿಸಿ ಸಾರ್ವಜನಿಕರಿಗೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರನ್ನು ಸರಬರಾಜು ಮಾಡುವಂತೆ ಜಿ.ಪಂ. ಸಿಇಓ ನಂದಿನಿ ಕೆ.ಆರ್. ಅವರು ಮಳವಳ್ಳಿ ತಾಲ್ಲೂಕಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಅಭಿಯಂತರರುಗಳಿಗೆ ಸೂಚಿಸಿದರು.

ಮಳವಳ್ಳಿ ತಾಲ್ಲೂಕಿನ ಸುಜ್ಜಲೂರು, ಚನ್ನಪಿಳ್ಳೆಕೊಪ್ಪಲು, ವಡಕೆಪುರ, ಹಂಗ್ರಾಪುರ ಗ್ರಾಮಗಳಲ್ಲಿ ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಕೆಲವು ಮನೆಗಳ ಹತ್ತಿರ ನಳಗಳಲ್ಲಿ ನೀರು ಸೋರುತ್ತಿದೆ, ಕೆಲವು ವಾಲ್ವ್ ಗಳು ಕಾರ್ಯನಿರ್ವಹಿಸುತ್ತಿಲ್ಲ, ಕೆಲವು ಬೀದಿಗಳಲ್ಲಿ ನಳ ಸಂಪರ್ಕ ಕಲ್ಪಿಸಲಾಗಿದ್ದರೂ ನೀರಿನ ಸಂಪರ್ಕ ಕಲ್ಪಿಸಿಲ್ಲ ಈ ಎಲ್ಲಾ ನ್ಯೂನ್ಯತೆಗಳನ್ನು ಸರಿಪಡಿಸಲು ಸೂಚಿಸಿದರು.

ಸ್ಥಳದಲ್ಲಿ ಹಾಜರಿದ್ದ ಗ್ರಾ.ಪಂ.ಗಳ ಸಿಬ್ಬಂದಿಗಳು ಹಾಗೂ ಸಾರ್ವಜನಿಕರೊಂದಿಗೆ ಜಲ ಜೀವನ ಮಿಷನ್ ಯೋಜನೆಯ ಕುಂದುಕೊರತೆಗಳ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಸಾರ್ಜನಿಕರಿಂದ ಸ್ವೀಕೃತವಾದ ದೂರುಗಳ ಬಗ್ಗೆ ಒಂದು ವಾರದೊಳಗೆ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಅಭಿಯಂತರರುಗಳಿಗೆ ಸೂಚಿಸಿದರು.

ಪಶು ಆಸ್ಪತ್ರೆಗೆ ದಿಡೀರ್ ಭೇಟಿ

ಚನ್ನಪಿಳ್ಳೆ ಕೊಪ್ಪಲು ಗ್ರಾಮದ ಪಶು ಆಸ್ಪತ್ರಗೆ ಅನಿರೀಕ್ಷಿತ ಭೇಟಿ ನೀಡಿ ಔಷದಿಗಳ ಸಂಗ್ರಹ, ಆಸ್ಪತ್ರೆಯ ಮೂಲಭೂತ ಸೌಲಭ್ಯ ಹಾಗೂ ಲಸಿಕಾಕರಣದ ಬಗ್ಗೆ ಮಾಹಿತಿ ಪಡೆದರು. ಆಸ್ಪತ್ರೆಯ ಕಟ್ಟಡ ಶಿಥಿಲವಾಗಿದ್ದು, ಈ ಬಗ್ಗೆ ಉಪನಿರ್ದೇಶಕರು, ಪಶುಪಾಲನಾ ಇಲಾಖೆಯವರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

ಆಸ್ಪತ್ರೆ ವ್ಯಾಪ್ತಿಯಲ್ಲಿ 6 ಗ್ರಾಮಗಳಿದ್ದು, ಅಂದಾಜು 3 ಸಾವಿರ ಮೇಕೆ ಮತ್ತು ಕುರಿಗಳಿವೆ ಹಾಗೂ ಔಷದಿಗಳ ಸಂಗ್ರಹ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದರು.

ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ

ಮಳವಳ್ಳಿ ತಾಲ್ಲೂಕಿನ ಮಿನಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳಿಗೆ ನೀಡಲಾಗುವ ಪೌಷ್ಠಿಕ ಆಹಾರದ ವಿವರಣೆ ಪಡೆದರು. ಈ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರದಲ್ಲಿ ನಿರ್ವಹಿಸಲಾಗಿರುವ ವಹಿಗಳನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಳವಳ್ಳಿ ತಾಲ್ಲೂಕಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಕಿರಿಯ ಅಭಿಯಂತರರುಗಳು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.

Continue Reading

Trending

error: Content is protected !!