Connect with us

Mandya

ಪ್ರಾಣ ಹಾನಿಯಾಗದಂತೆ ಎಚ್ಚರಿಕೆ ವಹಿಸಿ: ಡಿಸಿ ಕುಮಾರ

Published

on

ಮಂಡ್ಯ: ಎಲ್ಲೆಡೆ ಮಳೆಗಾಲ ಪ್ರಾರಂಭವಾಗುತ್ತಿದ್ದು, ಮಳೆ ಹಾಗೂ ಗಾಳಿಯಿಂದ ಪ್ರಾಣ ಹಾನಿಯಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಸೂಚನೆ ನೀಡಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಪತ್ತು ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಲಾಖೆಗಳು ಮುನ್ನಚ್ಚರಿಕೆ ಕ್ರಮಗಳನ್ನು ವಹಿಸದೇ ಸಣ್ಣ ಪುಟ್ಟ ಕಾರಣಗಳಿಂದ ಮಳೆ ಅಥವಾ ಬಿರುಗಾಳಿಯಿಂದ ಪ್ರಾಣ ಹಾನಿಯಾದಲ್ಲಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದರ ಜೊತೆಗೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಈ ಬಾರಿ ಸಾಮಾನ್ಯ ಮಳೆಗಿಂತ ಅಧಿಕ ಮಳೆಯಾಗುವ ಸಾಧ್ಯತೆಯಿದೆ. ಮಳೆಯ ಜೊತೆ ಹೆಚ್ಚಿನ ಗಾಳಿಯು ಸಂಭವಿಸಲಿದ್ದು, ಕೂಡಲೇ ಎಲ್ಲಾ ಇಲಾಖೆಯವರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

ದುರ್ಬಲ ಕೊಂಬೆಗಳನ್ನು ತೆರವುಗೊಳಿಸಿ ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯಿತಿಗಳು ಅರಣ್ಯ ಇಲಾಖೆಯೊಂದಿಗೆ ಜಂಟಿಯಾಗಿ ಕಾರ್ಯನಿರ್ವಹಿಸಿ ಮರದ ದುರ್ಬಲ ಕೊಂಬೆಗಳನ್ನು ತೆರವುಗೊಳಿಸಿ ಎಂದರು.

ಮಳೆ ಬಂದ ಸಂದರ್ಭದಲ್ಲಿ ಮರಗಳು, ವಿದ್ಯುತ್ ಕಂಬಗಳು ಗಾಳಿಯಿಂದ ಬಿದ್ದು ಹೋದಲ್ಲಿ ಅವುಗಳನ್ನು ತಕ್ಷಣ ತೆರವುಗೊಳಿಸುವ ರೀತಿ ಇಲಾಖೆ ಸಜ್ಜಾಗಿರಬೇಕು. ಮಳೆಯ ಸಂದರ್ಭದಲ್ಲಿ ಕ್ಷಿಪ್ರವಾಗಿ ಕೆಲಸ ನಿರ್ವಹಿಸಲು ತಂಡಗಳನ್ನು ರಚಿಸಿ. ಸಾರ್ವಜನಿಕರಿಂದ ದೂರು ಬಾರದಂತೆ ಕೆಲಸನಿರ್ವಹಿಸಿ ಎಂದರು.

ಕಂಟ್ರೋಲ್ ರೂಂ ತಾಲ್ಲೂಕುವಾರು ತಾಲ್ಲೂಕು ಕಚೇರಿ, ತಾಲ್ಲೂಕು ಪಂಚಾಯತ್ ಕಚೇರಿ, ನಗರ ಸ್ಥಳೀಯ ಸಂಸ್ಥೆಗಳ ಕಚೇರಿ, ಚೆಸ್ಕಾಂ ಕಚೇರಿ, ಅರಣ್ಯ ಇಲಾಖೆಗಳಲ್ಲಿ 2 ದಿನದೊಳಗಾಗಿ ಕಂಟ್ರೋಲ್ ರೂಂ ತೆರೆದು ಸಾರ್ವಜನಿಕರು ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆಗಳ ವಿವರವನ್ನು ಮಾಹಿತಿಗಾಗಿ ಅನಾವರಣಗೊಳಿಸಬೇಕು ಎಂದರು.

ಒಳಚರಂಡಿಗಳ ಕಸ ಹಾಗೂ ಇನ್ನಿತರೆ ವಸ್ತುಗಳು ಸೇರಿಕೊಂಡು ಮಳೆ ನೀರು ಹರಿಯುವಿಕೆಗೆ ತೊಂದರೆಯಾಗುತ್ತದೆ. ಒಳಚರಂಡಿಯಲ್ಲಿರುವ ಕಸವನ್ನು ತೆರವುಗೊಳಿಸಿ ಎಂದರು.

ಮಳೆ ಹಾಗೂ ಬಿರುಗಾಳಿಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮರಗಳ ಕೆಳಗಡೆ ವಾಹನಗಳ ನಿಲುಗಡೆ ಮಾಡದಂತೆ ಹಾಗೂ ಇನ್ನಿತರೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿ ಎಂದರು.

ಈ ಹಿಂದಿನ ಸಾಲುಗಳಲ್ಲಿ ಮಳೆಯಿಂದ ಮುಳುಗಡೆ ಅಥವಾ ತೊಂದರೆಯಾದ ಗ್ರಾಮಗಳನ್ನು ಪಟ್ಟಿ ಮಾಡಿಕೊಂಡು ಸಿದ್ಧತೆಗಳನ್ನು ಮಾಡಿಕೊಳ್ಳಿ. ನುರಿತ ಈಜುಗಾರರು, ಜೆ.ಸಿ.ಬಿ, ಹಿಟ್ಯಾಚಿ ಮಾಲೀಕರ ಸಂಪರ್ಕ ಸಂಖ್ಯೆಗಳನ್ನು ಸಂಗ್ರಾಹಿಸಿಟ್ಟಿಕೊಳ್ಳಿ ಎಂದರು.

ಮಳೆಯಿಂದ ಮನೆ ಹಾನಿ ಅಥವಾ ಬೆಳೆ ಹಾನಿಯಾದಲ್ಲಿ ತಕ್ಷಣ ಪರಿಶೀಲಿಸಿ ತಹಶೀಲ್ದಾರ್ ಜಿಲ್ಲಾಧಿಕಾರಿಗಳ ಕಚೇರಿಗೆ ವರದಿ ಸಲ್ಲಿಸಬೇಕು ಎಂದರು.

ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.ಮಳೆ ನೀರು ನಿಂತಲ್ಲಿ ತೆರವುಗೊಳಿಸಲು ತಂಡಗಳನ್ನು ರಚಿಸಿ ದಿನದ 24 ಗಂಟೆ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. ವಿದ್ಯುತ್ ಕಂಬಗಳು ಸುಸ್ಥಿತಿಯಲ್ಲಿರುವ ಬಗ್ಗೆ ಪರಿಶೀಲಿಸಿ ವರದಿ ನೀಡಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್ ನಾಗರಾಜು ಅವರು ಮಾತನಾಡಿ ಈ ಹಿಂದೆ ಮಳೆಯಾದ ಸಂದರ್ಭದಲ್ಲಿ ನಾಗಮಂಗಲ ಬಸ್ ನಿಲ್ದಾಣದಲ್ಲಿ ನೀರು ತುಂಬಿಕೊಂಡು ತೊಂದರೆಯಾಗಿತ್ತು. ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳಿ. ಕೆರೆಗಳಲ್ಲಿ ಹೂಳು ತೆಗೆಯುವ ಕೆಲಸ ವ್ಯವಸ್ಥಿತವಾಗಿ ನಡೆಯಲಿ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್, ಪಾಂಡವಪುರ ಉಪವಿಭಾಗಾಧಿಕಾರಿ ಮಾರುತಿ, ಚೆಸ್ಕಾಂ ಅಧೀಕ್ಷಕ ಅಭಿಯಂತರ ಸೋಮಶೇಖರ್, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಕೃಷ್ಣ ಕುಮಾರ್, ತೋಟಗಾರಿಕೆ‌ ಇಲಾಖೆ ಉಪನಿರ್ದೇಶಕಿ ರೂಪಶ್ರೀ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Mandya

SSLC ಪೂರ್ವಸಿದ್ದತಾ ಪರೀಕ್ಷೆ ಪರಿಶೀಲಿಸಿದ ಜಿ.ಪಂ. ಸಿಇಓ ಕೆ.ಆರ್.ನಂದಿನಿ

Published

on

ಮಂಡ್ಯ: ಜ. 27ರಿಂದ ಪ್ರಾರಂಭವಾಗಿರುವ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ದತಾ ಪರೀಕ್ಷೆ ಹಿನ್ನೆಲೆಯಲ್ಲಿ ಮಂಡ್ಯ ತಾಲ್ಲೂಕಿನ ಸೂನಗನಹಳ್ಳಿ ಮತ್ತು ತಗ್ಗಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿನ ಪರೀಕ್ಷಾ ಕೇಂದ್ರಗಳಿಗೆ ಜಿ.ಪಂ. ಸಿಇಓ ನಂದಿನಿ ಕೆ.ಆರ್. ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸೋಮವಾರ ಶಾಲೆಗೆ ಭೇಟಿ ನೀಡಿದ  ಅವರು, ಕಳೆದ ಮಾಹೆ ನಡೆದ ಮೊದಲನೇ ಪೂರ್ವ ಸಿದ್ದತಾ ಪರೀಕ್ಷೆಯಲ್ಲಿ ಫಲಿತಾಂಶ ಕಡಿಮೆಯಾಗಲು ಕಾರಣಗಳೇನು ಎಂಬ ಬಗ್ಗೆ ಶಾಲೆಯ ಮುಖ್ಯೋಪಧ್ಯಾಯರಿಂದ ಮಾಹಿತಿ ಪಡೆದರು.
ಮುಖ್ಯ ಪರೀಕ್ಷೆಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಇದ್ದು, ವಿದ್ಯಾರ್ಥಿಗಳಲ್ಲಿ ಆತ್ಮ ಸ್ಥೈರ್ಯ ತುಂಬುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಪೋಷಕರಿಗೂ ಸಹ ಸೂಕ್ತ ಮಾಹಿತಿ ನೀಡಿ ಮಕ್ಕಳಿಗೆ ಮನೆಯಲ್ಲಿಯೂ ಕಲಿಕಾ ವಾತಾವರಣ ನಿರ್ಮಾಣ ಮಾಡುವಂತೆ ತಿಳಿಸಲು ಶಿಕ್ಷಕರಿಗೆ ಸೂಚಿಸಿದರು.
ಕಲಿಕಾ ಮಿತ್ರ ಪರೀಕ್ಷಾ ಮಾರ್ಗದರ್ಶಿ ನೀಡಿದ ನಂತರ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಸ್ವಲ್ಪ ಅನುಕೂಲವಾಗಿದೆ ಹಾಗೂ ಸಿ.ಎಸ್.ಆರ್. ಅನುದಾನದಡಿ ನೀಡಲಾಗಿರುವ ನೋಟ್ ಬುಕ್ ಗಳನ್ನು ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸಿ ಹೆಚ್ಚಿನ ಅಬ್ಯಾಸ ಮಾಡಿಸಲು ಸಹಾಯಕವಾಗಿದೆ ಎಂದು ಶಿಕ್ಷಕರು ಮಾಹಿತಿ ನೀಡಿದರು.
ಕಳೆದ ಮಾಹೆಯಿಂದ ಬಾನುವಾರವೂ ಸಹ ತರಗತಿಗಳನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಕೂಡ ಆಸಕ್ತಿಯಿಂದ ಹಾಜರಾಗುತ್ತಿದ್ದಾರೆ. ಆದರೆ ಕೆಲವು ವಿದ್ಯಾರ್ಥಿಗಳು ಗೈರುಹಾಜರಾಗುತ್ತಿದ್ದು, ಸದರಿ ವಿದ್ಯಾರ್ಥಿಗಳ ಪೋಷಕರಿಗೂ ಈ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದು ಶಿಕ್ಷಕರೊಬ್ಬರು ತಿಳಿಸಿದರು. ಕೆಲವು ಬಾಲಕರು ಶಾಲೆಗೆ ಗೈರು ಹಾಜರಾಗುತ್ತಿದ್ದು, ಬಾಲಕರಿಂದಲೇ ಫಲಿತಾಂಶ ಕುಂಠಿತವಾಗುತ್ತಿದೆ ಎಂದು ತಿಳಿಸಿದರು.
ಈ ಬಗ್ಗೆ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಬಾಲಕರ ಪೋಷಕರ ಸಭೆ ನಡೆಸಿ ಶಿಕ್ಷಣದ ಮಹತ್ವ, ಅದರಲ್ಲಿಯೂ ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗುವುದರಿಂದ ಆಗುವ ಪ್ರಯೋಜನಗಳ ಕುರಿತು ಮನವರಿಕೆ ಮಾಡಿಕೊಡುವಂತೆ ಕ್ರಮವಹಿಸಲು ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆರವರಿಗೆ ಸೂಚಿಸಿದರು.
ಶಾಲಾ ಆವರಣದಲ್ಲಿ ಸಂಜೆಯಾಗುತ್ತಿದ್ದಂತೆ ಗ್ರಾಮದ ಕೆಲವು ಯುವಕರು ಆಟ ಆಡಲು ಬರುವ ಕಾರಣ ಸಂಜೆಯ ನಂತರ ವಿಶೇಷ ತರಗತಿ ನಡೆಸಲು ಕಷ್ಟವಾಗುತ್ತಿದೆ, ಈ ಬಗ್ಗೆ ಗ್ರಾ.ಪಂ.ಗೂ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು. ಈ ಬಗ್ಗೆ ಪಿಡಿಓ ರವರು ಅಗತ್ಯ ಕ್ರಮವಹಿಸುವಂತೆ ಸಿಇಓ ಅವರು ಸೂಚಿಸಿದರು.
ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಭಾನುವಾರವೂ ಸೇರಿದಂತೆ ರಜಾ ದಿನಗಳಲ್ಲಿಯೂ ವಿಶೇಷ ತರಗತಿಗಳನ್ನು ನಡೆಸುವಂತೆ ಹಾಗೂ ಸದರಿ ದಿನಗಳಂದು ಸಾರ್ವಜನಿಕರು ಶಾಲಾ ಆವರಣಕ್ಕೆ ಪ್ರವೇಶಿಸಿ ವಿದ್ಯಾರ್ಥಿಗಳ ಅಭ್ಯಾಸಕ್ಕೆ ತೊಂದರೆಯಾಗದಂತೆ ವರ್ತಿಸಲು ಕೋರುವ ಬಗ್ಗೆ ಸುತ್ತೋಲೆಯನ್ನು ಹೊರಡಿಸುವಂತೆ ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆರವರಿಗೆ ಸೂಚಿಸಿದರು.
ಮಂಡ್ಯ ತಾಲೂಕಿನ ತಗ್ಗಹಳ್ಳಿ ಸರ್ಕಾರಿ ಪ್ರೌಢಶಾಲೆಗೂ ಭೇಟಿ ನೀಡಿ ಪೂರ್ವಸಿದ್ದತಾ ಪರೀಕ್ಷೆ ಬಗ್ಗೆ ಪರಿಶೀಲಿಸಿ ಶಿಕ್ಷಕರಿಂದ ಮಾಹಿತಿ ಪಡೆದರು.
ತಗ್ಗಹಳ್ಳಿ ಗ್ರಾ.ಪಂ.ಗೆ ಭೇಟಿ:  ಎಸ್‌ಎಸ್‌ಎಲ್‌ಸಿ ಪೂರ್ವಸಿದ್ದತಾ ಪರೀಕ್ಷೆ ಸಂಬಂಧ ಶಾಲೆಗಳಿಗೆ ಭೇಟಿ ನೀಡುವ ಮಾರ್ಗ ಮಧ್ಯೆ ತಗ್ಗಹಳ್ಳಿ ಗ್ರಾಮ ಪಂಚಾಯತ್ ಗೆ ಕಚೇರಿಯ ಹತ್ತಿರ ಸಾರ್ವಜನಿಕರು ಜಮಾವಣೆಗೊಂಡಿದ್ದನ್ನು ಗಮನಿಸಿದ ಸಿಇಓ ಅವರು ಗ್ರಾ.ಪಂ.ಗೆ ಭೇಟಿ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕರು 15ನೇ ಹಣಕಾಸು ಯೋಜನೆಯಡಿ ರೂ. 40.00 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಅಕ್ರಮವಾಗಿ ಪಾವತಿ ಮಾಡಿದ್ದಾರೆ ಎಂದು ಆರೋಪಿಸಿ ದೂರು ಸಲ್ಲಿಸಿದರು. ಸ್ಥಳದಲ್ಲಿಯೇ ಮಂಡ್ಯ ತಾ.ಪಂ. ಇಓ ಅವರಿಗೆ ಕರೆ ಮಾಡಿ ಈ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚಿಸಿದರು. ಹಾಗೂ ಈ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದೆಂದು ಸಿಇಓ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಂಡ್ಯ ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ್, ಸೂನಗಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪದ್ಯಾಯರಾದ ವೀಣಾ, ತಗ್ಗಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪದ್ಯಾಯರಾದ ಪ್ರತಿಭಾ ಸೇರಿದಂತೆ ಇತರರು ಉಪಸ್ಥಿತರಿದ್ದರು.
Continue Reading

Mandya

ವಿವಿಧೆಡೆ ಚಿನ್ನಾಭರಣ ಕಳವು ಮಾಡಿದ್ದ ಖದೀಮರ ಸೆರೆ ; 35 ಲಕ್ಷ ರೂ. ಮೌಲ್ಯದ ಮಾಲುಗಳ ವಶ

Published

on

ಮಂಡ್ಯ : ಜಿಲ್ಲೆಯ ಮಳವಳ್ಳಿ ತಾಲೂಕಿನ ನಾನಾ ಭಾಗಗಳಲ್ಲಿ ಕಳವು ಪ್ರಕರಣಗಳಿಗೆ ಸಂಬಂದಿಸಿದಂತೆ ಸುಮಾರು 35 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ, ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಡಾ.ವಿ.ಜೆ.ಶೋಭರಾಣಿ ತಿಳಿಸಿದರು.

ಮಳವಳ್ಳಿ ತಾಲೂಕಿನ ಪಟ್ಟಣ ವ್ಯಾಪ್ತಿಯ ಮನೆಗಳ್ಳತನ, ಸಾಗ್ಯ ಸರಗೂರು ಗ್ರಾಮದ ಪಟ್ಟಲದಮ್ಮ ದೇವಾಸ್ಥಾನದಲ್ಲಿ ಕಳ್ಳತನ ಪೈಕಿ 168 ಗ್ರಾಂ ಚಿನ್ನ, 291 ಗ್ರಾಂ ಬೆಳ್ಳಿ ಹಾಗೂ ದ್ವಿಚಕ್ರ ವಾಹನ ಕಳ್ಳತನ ಪ್ರರಕಣದಲ್ಲಿ 19 ಬೈಕ್‌ಗಳನ್ನು ಆರೋಪಿಗಳನ್ನು ಬಂಧಿಸಿ ವಶಕ್ಕೆ ಪಡೆಯಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

ಮಳವಳ್ಳಿ ಟೌನ್‌ನ ಗಂಗಾಧರ್ ಅವರ ಮನೆಯಲ್ಲಿ ಕಳ್ಳತನ ಪ್ರಕರಣದಲ್ಲಿ 16 ವರ್ಷದ ಬಾಲಕ ಹಾಗು ಆತನ ತಂದೆ ಬಾಬ್‌ಜಾನನ್ನು ಬಂಧಿಸಲಾಗಿದೆ. ತನಿಖೆಯ ವೇಳೆ ಮಳವಳ್ಳಿ ಪುರ ಪೊಲೀಸ್ ಠಾಣೆಯಲ್ಲಿ 3 ಹಲಗೂರು ಹಾಗೂ ಬನ್ನೂರು ಪೊಲೀಸ್ ಠಾಣೆಯಲ್ಲಿ ತಲಾ ಒಂದು ಪ್ರಕರಣದ ಪೈಕಿ ಒಟ್ಟು 20 ಲಕ್ಷ ರೂ ಮೌಲ್ಯದ 144 ಗ್ರಾಂ ಚಿನ್ನ, 46 ಗ್ರಾಂ ಬೆಳ್ಳಿ ವಶಕ್ಕೆ ಪಡೆಯಲಾಗಿದೆ. ಪಿಎಸ್‌ಐಗಳಾದ ಶಿವಲಿಂಗ ದಳವಾಯಿ ಲೋಕೇಶ್, ಎಎಸ್‌ಐಗಳಾದ ಎಂ.ಬಿ.ಸುರೇಶ್, ರಮೇಶ್, ಸಿಬ್ಬಂದಿಗಳಾದ ಮಾದೇಶ್, ಹರ್ಷವರ್ಧನ್, ವಿಖಾಶ್, ಸಿದ್ದರಾಜು, ರಫೀಕ್ ನಧಾಫ್, ಮಂಜು ಕಾರ‍್ಯನಿರ್ವಹಿಸಿದ್ದಾರೆ ಎಂದರು.

ಸಾಗ್ಯ ಸರಗೂರು ಗ್ರಾಮದ ಶ್ರೀಪಟ್ಟಲದಮ್ಮ ದೇವಸ್ಥಾನದ ಬಾಗಿಲು ಒಡೆದು ಕಳ್ಳತನ ಪ್ರಕರಣದಲ್ಲಿ ತಮಿಳುನಾಡಿನ ವಿಜಯ್, ಮಣಿ, ಮಂಡ್ಯದ ಮಧುರ, ಭರತ್, ರಾಮನಗರದ ನವೀನ್, ಮೈಸೂರಿನ ಶಬ್ಬೀರ್ ಎನ್ನುವವರನ್ನು ಬಂಧಿಸಲಾಗಿದೆ. ಎಲ್ಲರ ವೃತ್ತಿ ಚಿಂದಿ ಆಯುವುದು, ಪಾತ್ರೆ ರಿಪೇರಿ ಮಾಡುವುದಾಗಿದೆ. ಆರೋಪಿಗಳ ಮೇಲೆ ಹಲಗೂರು ಠಾಣಾ ವ್ಯಾಪ್ತಿಯಲ್ಲಿ 4 ಪ್ರಕರಣಗಳಿವೆ. ಅವುಗಳಿಂದ ಮೌಲ್ಯದ 24 ಗ್ರಾಂ ಚಿನ್ನ, 245 ಗ್ರಾಂ ಬೆಳ್ಳಿ, 5094 ರೂ ಹುಂಡಿ ಹಣ, ಎರಡು ಜತೆ ದೀಪಾಲೆ ಕಂಬ, ಎರಡು ಪೂಜಾ ತಟ್ಟೆ, 5 ಗಂಟೆ, ಬೈಕ್ ಮತ್ತು ಗೂಟ್ಸ್ ಆಟೋ ಹಾಗೂ ಎರಡು ಮೇಕೆಗಳ ಮಾರಾಟದ ಹಣ ಸೇರಿ ಒಟ್ಟು 7,17,844 ರೂ. ವಶಕ್ಕೆ ಪಡೆಯುವಲ್ಲಿ ಠಾಣೆಯ ಪಿಎಸ್‌ಐ ಲೋಕೇಶ್, ರಿಯಾಜ್ ಪಾಷ, ಪ್ರಭುಸ್ವಾಮಿ, ರವಿಕಿರಣ್, ಲೋಕೇಶ್, ಸಿದ್ದರಾಜು, ಮೋಹನ್‌ಕುಮಾರ್, ರಫಿಕ್ ನಧಾಫ್ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.

ಮಳವಳ್ಳಿ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಬಳಿ ಬೈಕ್ ಕಳ್ಳತನ ಬೇದಿಸಿರುವ ಟೌನ್ ಪೊಲೀಸರು ಮೈಸೂರಿನ ಕೆ.ಕಾರ್ತಿಕ್ ಮಳವಳ್ಳಿಯ ಎಸ್.ಎಸ್.ಸಾಗರ್ ಮತ್ತು ಎಂ.ಸಿ.ಪ್ರಜ್ವಲ್ ಎಂಬ ರೋಪಿಗಳನ್ನು ಬಂಧಿಸಿದ್ದಾರೆ. ತನಿಖೆಯ ವೇಳೆ ಬನ್ನೂರು ಠಾಣಾ ವ್ಯಾಪ್ತಿಯಲ್ಲಿ 10, ಕೊಳ್ಳೇಗಾಲ ಟೌನ್‌ನಲ್ಲಿ 2, ಕೊಳ್ಳೇಗಾಲ ಗ್ರಾಮಾಂತರ, ಮಂಡ್ಯ ಪಶ್ಚಿಮ ವ್ಯಾಪ್ತಿಯಲ್ಲಿ ತಲಾ 2, ಮೈಸೂರು ನಗರ, ಮಳವಳ್ಳಿ, ಕಿರುಗಾವಲು ಠಾಣಾ ವ್ಯಾಪ್ತಿಯಲ್ಲಿ ತಲಾ 1 ಪ್ರಕರಣಗಳಿಂದ 19 ಬೈಕ್ ವಶಕ್ಕೆ ಪಡೆಯಲಾಗಿದೆ. ಕರ‍್ಯಾಚರಣೆಯಲ್ಲಿ ಮಳವಳ್ಳಿ ಟೌನ್ ಪೊಲೀಸ್ ಠಾಣೆಯ ಪಿಎಸ್‌ಐ ಶಿವಲಿಂಗ ದಳವಾಯಿ, ಎಎಸ್‌ಐಗಳಾದ ಸುರೇಶ್, ಗೋಪಾಲ್, ಸಿಬ್ಬಂದಿಗಳಾದ ಮಾದೇಶ್, ಮಹದೇವಸ್ವಾಮಿ, ಹರ್ಷವರ್ಧನ್, ಪ್ರಭುಸ್ವಾಮಿ, ರಿಯಾಜ್ ಪಾಷಾ, ವಿಕಾಶ್, ಶ್ರೀನಿವಾಸ್, ಮಧುಕಿರಣ್ ಭಾಗವಹಿಸಿದ್ದರು. ಎಲ್ಲ ಪ್ರಕರಣಗಳನ್ನು ಡಿವೈಎಸ್‌ಪಿ ಎಸ್.ಬಿ.ಯಶವಂತ್‌ಕುಮಾರ್, ಸಿಐ ಬಿ.ಎಸ್.ಶ್ರೀಧರ್ ಮಾರ್ಗದರ್ಶನದಲ್ಲಿ ಬೇದಿಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಸಿಬ್ಬಂದಿ ವರ್ಗದ ಕಾರ್ಯವನ್ನು ಅವರು ಶ್ಲಾಘಿಸಿದರು.

Continue Reading

Mandya

ಎಂ. ಅಂಕೇಗೌಡರ ಪುಸ್ತಕ ಪ್ರೀತಿ ಇಂದಿನ ಯುವ ಪೀಳಿಗೆಗೆ ಮಾದರಿ : ಡಾ.ಮಾನಸ

Published

on

ಪಾಂಡವಪುರ : ಪುಸ್ತಕ ಮನೆ ಸ್ಥಾಪನೆ ಮಾಡಿ ಇಪ್ಪತ್ತು ಭಾಷೆಯ ಇಪ್ಪತ್ತು ಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ಸಂಗ್ರಹಿಸಿ ವಿಶಿಷ್ಟ ಸಾಧನೆ ಮಾಡಿರುವ ಅಂಕೇಗೌಡ ಅವರ ಪುಸ್ತಕ ಪ್ರೀತಿ ಇಂದಿನ ಯುವಪೀಳಿಗೆಗೆ ಆದರ್ಶಪ್ರಾಯವಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಹೇಳಿದರು.

ತಾಲೂಕಿನ ಹರಳಹಳ್ಳಿಯಲ್ಲಿರುವ ಪುಸ್ತಕ ಮನೆಯಲ್ಲಿ 2026 ನೇ ಸಾಲಿನ ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಎಂ..ಅಂಕೇಗೌಡ ಅವರನ್ನು ಪುಸ್ತಕ ಪ್ರಾಧಿಕಾರದ ವತಿಯಿಂದ ಗೌರವ ಸಮರ್ಪಣೆ ಮಾಡಿ ಅವರು ಮಾತನಾಡುತಿದ್ದರು.

ನಾವು ಪುಸ್ತಕ ಪ್ರೀತಿಯನ್ನು ಉತ್ತೇಜಿಸುವ ಸಲುವಾಗಿ ಪ್ರಾಧಿಕಾರದ ವತಿಯಿಂದ ಮನೆಗೊಂದು ಗ್ರಂಥಾಲಯ ಯೋಜನೆ ಆರಂಭಿಸಿದ್ದೇವೆ. ಆದರೆ ಅಂಕೇಗೌಡರ ಮನೆಯ ಈ ಗ್ರಂಥಾಲಯ ನಿಬ್ಬೆರಗಾಗಿಸುವಂತಿದೆ. ಇಷ್ಟೊಂದು ದೊಡ್ಡ ಪ್ರಮಾಣದ ಪುಸ್ತಕಗಳನ್ನು ಒಬ್ಬ ವ್ಯಕ್ತಿ ತನ್ನ ಸ್ವಂತ ಪರಿಶ್ರಮ ಮತ್ತು ಆಸಕ್ತಿಯಿಂದ ಸಂಗ್ರಹ ಮಾಡಿರುವುದು ಅತ್ಯಂತ ಅಚ್ಚರಿಯ ಸಂಗತಿ. ಅವರ ಈ ಸಾಧನೆ ಶಾಶ್ವತವಾಗಿ ಉಳಿಯುತ್ತದೆ. ಇದರ ಮೂಲಕ ಜ್ಞಾನದ ತಳಹದಿಯ ಮೇಲೆ ದೇವಾಲಯ ಕಟ್ಟುವುದು ಹೇಗೆ ಎಂಬುದನ್ನು ಅಂಕೇಗೌಡರು ತೋರಿಸಿಕೊಟ್ಟಿದ್ದಾರೆ. ಜನ ದೇವಾಲಯಗಳಿಗೆ ಮತ್ತು ತಮ್ಮ ಭಕ್ತಿಯ ಕಾಣಿಕೆಗಾಗಿ ಖರ್ಚು ಮಾಡುವ ಶೇಕಡಾ 10%ರಷ್ಟನ್ನಾದರು ಪುಸ್ತಕ ಕೊಂಡುಕೊಳ್ಳಲು ಉಪಯೋಗಿಸಿದ್ದಲ್ಲಿ ಪುಸ್ತಕ ಲೋಕದ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.

ಅಂಕೇಗೌಡರ ಅಂತಿಮ ಕಾಲದಲ್ಲಿ ಯಾರು ಬರಲಿ, ಬಿಡಲಿ, ಸರ್ಕಾರ ಅವರ ಮನೆ ಮುಂದೆ ಇರುತ್ತದೆ. ಅವರ ಸಾಧನೆಗೆ ಸಂದಗೌರವ ಇದಾಗಿದೆ ಎಂದು ಅವರು ತಿಳಿಸಿದರು. ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಅಂಕೇಗೌಡರು, ತಮ್ಮ ಹಿಂದಿನ ದಿನಗಳನ್ನು ನೆನೆದು ಭಾವುಕರಾದರು. ತಾವು ಬಸ್ ಕಂಡೆಕ್ಟರ್ ಆಗಿ ಕೆಲಸ ಮಾಡುತಿದ್ದ ದಿನಗಳಲ್ಲಿ ನಡೆದ ಘಟನೆಗಳನ್ನು ನೆನಪಿಸಿಕೊಂಡ ಅವರು ನಂತರ ಆ ಕೆಲಸ ತೊರೆದು ಪಾಂಡವಪುರದ ಫ್ಯಾಕ್ಟರಿಯೊಂದರಲ್ಲಿ ಕೆಲಸಕ್ಕೆ ಸೇರಿ ಪುಸ್ತಕ ಮನೆ ಸ್ಥಾಪಿಸಿದ ಸಂದರ್ಭವನ್ನು ಕುರಿತು ವಿವರಿಸಿದರು.

ಈ ಪುಸ್ತಕಗಳನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಿಡುವುದೇ ನನ್ನ ದೊಡ್ಡ ಕನಸು ಎಂದ ಅವರು, ಇಲ್ಲಿಗೆ ಬರುವ ಸಂಶೋಧನಾ ವಿದ್ಯಾರ್ಥಿಗಳು ಅಧ್ಯಯನ ಮಾಡಲು ಹಾಗೂ ತಂಗಲು ಕಟ್ಟಡವೊಂದರ ಅವಶ್ಯಕತೆ ಇದೆ ಎಂದು ಹೇಳಿದರು.

ಈ ವೇಳೆ ಸಾರ್ವಜನಿಕ ಗ್ರಂಥಾಲಯ ಆಯುಕ್ತ ಹೆಚ್. ಬಸವರಾಜೇಂದ್ರ, ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ಹಾಗೂ ಖ್ಯಾತ ಪತ್ರಕರ್ತ, ಬರಹಗಾರ ರಾಜಶೇಖರ ಕದಂಬ, ರಾಮಣ್ಣ, ತಿಪ್ಪಣ್ಣ ಹಾಗೂ ಶ್ರೀನಿವಾಸ ಕರಿಯಪ್ಪ ಅವರು ಉಪಸ್ಥಿತರಿದ್ದರು.

Continue Reading

Trending

error: Content is protected !!