National - International
ರಾಜಕೀಯ ಭಿನ್ನಾಭಿಪ್ರಾಯಗಳ ಬದಿಗೊತ್ತಿ ರಾಹುಲ್ ಗಾಂಧಿಗೆ ಜನ್ಮದಿನದ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ
ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವರಿಗೆ ಜನ್ಮದಿನದ ಶುಭಾಶಯಗಳು. ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ದೊರಕಲಿ ಎಂದು ಪ್ರಾರ್ಥಿಸುತ್ತೇನೆ.
ನವದೆಹಲಿ: ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು 56ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಭಾಶಯಗಳನ್ನು ಕೋರಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಶುಕ್ರವಾರ ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ, ರಾಹುಲ್ ಗಾಂಧಿ ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ಸಿಗಲಿ ಎಂದು ಹಾರೈಸಿದ್ದಾರೆ.
“ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವರಿಗೆ ಜನ್ಮದಿನದ ಶುಭಾಶಯಗಳು. ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ದೊರಕಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರೂ ಕೂಡ ರಾಹುಲ್ ಗಾಂಧಿಯವರಿಗೆ ಶುಭಾಶಯಗಳನ್ನು ಕೋರಿದ್ದಾರೆ. ರಾಹುಲ್ ಗಾಂಧಿಯವರ ಸಾರ್ವಜನಿಕ ಜೀವನ, ಜನಪರ ರಾಜಕಾರಣ ಮತ್ತು ಸಂವಿಧಾನ ಮೌಲ್ಯಗಳ ಮೇಲಿನ ಬದ್ಧತೆಯನ್ನು ಅವರು ಪ್ರಶಂಸಿಸಿದ್ದಾರೆ.
National - International
ಇಂಗ್ಲೆಂಡ್ ವಿರುದ್ಧ 14 ವರ್ಷಗಳ ಬಳಿಕ ಟಿ-20 ಸರಣಿ ಸೋತ ಟೀಂ ಇಂಡಿಯಾ
ಇಂಗ್ಲೆಂಡ್: ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾದ ನಿರೀಕ್ಷಿತ ಪ್ರದರ್ಶನ ಕಾಣಿಸಲಿಲ್ಲ. ಹಾಲಿ ಟಿ20 ವಿಶ್ವ ಚಾಂಪಿಯನ್ ಎಂಬ ಹೆಗ್ಗಳಿಕೆ ಹೊಂದಿದ್ದ ಭಾರತ ತಂಡ, ಐರ್ಲೆಂಡ್ ವಿರುದ್ಧವೂ ಹಾಗೂ ಇಂಗ್ಲೆಂಡ್ ವಿರುದ್ಧವೂ ಉತ್ತಮ ಪ್ರದರ್ಶನ ನೀಡಲಿದೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಎರಡೂ ಸರಣಿಗಳಲ್ಲಿ ತಂಡ ನಿರಾಸೆ ಮೂಡಿಸಿದ್ದು, ವಿಶೇಷವಾಗಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 3-0 ಅಂತರದ ಸೋಲಿನಿಂದ 14 ವರ್ಷಗಳ ಅಜೇಯ ಸರಣಿಗೆ ತೆರೆ ಬಿದ್ದಿದೆ.
2012ರಿಂದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯಗಳ ಟಿ20 ಸರಣಿಗಳಲ್ಲಿ ಭಾರತ ಸೋಲು ಕಂಡಿರಲಿಲ್ಲ. ಈ ಅವಧಿಯಲ್ಲಿ ನಡೆದ ಆರು ಸರಣಿಗಳಲ್ಲಿ ಭಾರತ ಐದು ಸರಣಿಗಳನ್ನು ಗೆದ್ದರೆ, ಒಂದು ಸರಣಿ ಡ್ರಾದಲ್ಲಿ ಅಂತ್ಯಗೊಂಡಿತ್ತು. ಇದೀಗ ಏಳನೇ ಸರಣಿಯಲ್ಲಿ ಇಂಗ್ಲೆಂಡ್ ಸಂಪೂರ್ಣ ಮೇಲುಗೈ ಸಾಧಿಸಿ 3-0 ಅಂತರದಿಂದ ಸರಣಿಯನ್ನು ತನ್ನದಾಗಿಸಿಕೊಂಡಿದೆ.

ಇನ್ನು ನಾಯಕ ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಭಾರತ ಟಿ20 ತಂಡದ ಪ್ರದರ್ಶನವೂ ನಿರಾಸೆ ಮೂಡಿಸಿದೆ. ಅವರ ನಾಯಕತ್ವದಲ್ಲಿ ಆಡಿದ ಆರು ಪಂದ್ಯಗಳಲ್ಲಿ ಐದು ಪಂದ್ಯಗಳಲ್ಲಿ ಭಾರತ ಸೋತಿದ್ದು, ಒಂದು ಪಂದ್ಯ ಮಳೆಯಿಂದ ರದ್ದಾಗಿದೆ. ಐರ್ಲೆಂಡ್ ವಿರುದ್ಧದ ವೈಟ್‌ವಾಶ್ ಹಾಗೂ ಇಂಗ್ಲೆಂಡ್ ವಿರುದ್ಧದ ಸರಣಿ ಸೋಲು ತಂಡದ ಮೇಲೆ ಒತ್ತಡ ಹೆಚ್ಚಿಸಿದೆ.
ಸತತ ಸೋಲುಗಳಿಂದ ಕಂಗೆಟ್ಟಿರುವ ಟೀಂ ಇಂಡಿಯಾ ಈಗ ಮುಂದಿನ ಜಿಂಬಾಬ್ವೆ ಪ್ರವಾಸದಲ್ಲಿ ಪುಟಿದೇಳುವ ವಿಶ್ವಾಸದಲ್ಲಿದೆ. ತಂಡ ತನ್ನ ತಪ್ಪುಗಳನ್ನು ಸರಿಪಡಿಸಿ ಮತ್ತೆ ಗೆಲುವಿನ ಹಾದಿಗೆ ಮರಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
National - International
ಇರಾನ್‌ನ 90 ಮಿಲಿಟರಿ ನೆಲೆಗಳ ಮೇಲೆ ಅಮೆರಿಕ ದಾಳಿ; ಪ್ರತಿಯಾಗಿ ಕ್ಷಿಪಣಿ, ಡ್ರೋನ್ ದಾಳಿ ನಡೆಸಿದ ಇರಾನ್
ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಉದ್ವಿಗ್ನತೆ ಹೆಚ್ಚಾಗಿದ್ದು, ಅಮೆರಿಕ ಮತ್ತು ಇರಾನ್ ನಡುವೆ ಸಂಘರ್ಷ ತೀವ್ರಗೊಂಡಿದೆ. ಕದನ ವಿರಾಮದ ಬಳಿಕವೂ ಹಾರ್ಮುಜ್ ಜಲಸಂಧಿಯ ಮೇಲಿನ ನಿಯಂತ್ರಣದ ವಿಚಾರವಾಗಿ ಎರಡು ದೇಶಗಳು ಮತ್ತೆ ಮುಖಾಮುಖಿಯಾಗಿವೆ.
ಕದನ ವಿರಾಮ ಮುರಿದುಬಿದ್ದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ ಬೆನ್ನಲ್ಲೇ, ಇರಾನ್‌ನ ಸುಮಾರು 90 ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ಅಮೆರಿಕ ವೈಮಾನಿಕ ದಾಳಿ ನಡೆಸಿದೆ.

ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಅಡ್ಡಿಪಡಿಸುವ ಹಾಗೂ ಹಡಗುಗಳ ಮೇಲೆ ದಾಳಿ ನಡೆಸುವ ಇರಾನ್‌ನ ಸಾಮರ್ಥ್ಯವನ್ನು ಕುಗ್ಗಿಸುವ ಉದ್ದೇಶದಿಂದ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.
ಬಂದರು ನಗರಗಳಾದ ಬುಶೆಹರ್, ಬಂದರ್ ಅಬ್ಬಾಸ್ ಹಾಗೂ ಸಿರಿಕ್ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ವಾಯು ರಕ್ಷಣಾ ವ್ಯವಸ್ಥೆಗಳು, ಕರಾವಳಿ ಕಣ್ಗಾವಲು ಕೇಂದ್ರಗಳು, ಕ್ಷಿಪಣಿ ಮತ್ತು ಡ್ರೋನ್ ಸಂಗ್ರಹಣಾ ತಾಣಗಳು, ನೌಕಾಪಡೆಯ ಸೌಲಭ್ಯಗಳು ಹಾಗೂ ಕರಾವಳಿ ಭಾಗದಲ್ಲಿರುವ ಮಿಲಿಟರಿ ಲಾಜಿಸ್ಟಿಕ್ಸ್ ಮೂಲಸೌಕರ್ಯಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಅಮೆರಿಕ ತಿಳಿಸಿದೆ.
ಅಮೆರಿಕ ದಾಳಿಗೆ ಇರಾನ್ ಪ್ರತಿದಾಳಿ
ಅಮೆರಿಕದ ದಾಳಿಯ ಬೆನ್ನಲ್ಲೇ ಇರಾನ್ ಪ್ರತಿದಾಳಿ ನಡೆಸಿದ್ದು, ಕುವೈತ್ ಮತ್ತು ಬಹ್ರೇನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿದೆ.

ಅಮೆರಿಕ ಇತ್ತೀಚೆಗೆ ನಡೆಸಿದ ದಾಳಿಗಳಿಗೆ ಪ್ರತಿಯಾಗಿ ಮೊದಲ ಹಂತದ ಕಾರ್ಯಾಚರಣೆಯಾಗಿ ಈ ದಾಳಿ ನಡೆಸಲಾಗಿದೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಪ್ರಕಟಣೆಯಲ್ಲಿ ತಿಳಿಸಿದೆ.
ಮಧ್ಯಪ್ರಾಚ್ಯದಲ್ಲಿ ಬೆಳೆಯುತ್ತಿರುವ ಈ ಬೆಳವಣಿಗೆಗಳಿಂದ ಪ್ರದೇಶದಲ್ಲಿ ಮತ್ತೆ ಯುದ್ಧದ ಆತಂಕ ಹೆಚ್ಚಾಗಿದ್ದು, ಜಾಗತಿಕ ಮಟ್ಟದಲ್ಲಿಯೂ ಪರಿಸ್ಥಿತಿಯ ಮೇಲೆ ತೀವ್ರ ನಿಗಾ ವಹಿಸಲಾಗಿದೆ.
National - International
ಕದನ ವಿರಾಮ ಅಂತ್ಯ ಎಂದ ಟ್ರಂಪ್| ಅಮೆರಿಕ-ಇರಾನ್ ನಡುವೆ ಮತ್ತೆ ಯುದ್ಧ: ಭಾರತ ಪರಿಸ್ಥಿತಿ ಸಂದಿಗ್ಧ
ನವದೆಹಲಿ: ದಿನಕ್ಕೊಂದು ಹೇಳಿಕೆ ನೀಡುತ್ತಾ, ಮನ ಬಂದಂತೆ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ನಿಸ್ಸೀಮರಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಇರಾನ್ ಕದನ ವಿರಾಮಕ್ಕೆ ಒಪ್ಪುವವರೆಗೂ ಬೆಂಬಿಡದೆ ಕಾಡಿ, ಒಪ್ಪದಿದ್ದರೆ ದೇಶವನ್ನೇ ನಾಶಪಡಿಸುವುದಾಗಿ ಬೆದರಿಕೆಯೊಡ್ಡಿದ್ದ ಟ್ರಂಪ್, ಇದೀಗ ಎರಡೂ ದೇಶಗಳ ನಡುವಿನ ಕದನವಿರಾಮ ಅಂತ್ಯಗೊಂಡಿದೆ ಎಂದು ಘೋಷಿಸಿದ್ದಾರೆ.
ಇದರ ನಡುವೆ ಇರಾನ್ ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಮೇಲೆ ದಾಳಿ ನಡೆಸಿದ್ದರೆ, ಇತ್ತ ಅಮೆರಿಕ, ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿದೆ. ಇವರಿಬ್ಬರ ಜಗಳದಿಂದ ಬಹ್ರೇನ್, ಕುವೈತ್ ಮೇಲೂ ಮತ್ತೆ ಇರಾನ್ ದಾಳಿ ಆರಂಭವಾಗಿದೆ.
ಇರಾನ್-ಅಮೆರಿಕ ನಡುವೆ ಆರಂಭವಾಗಿರುವ ಈ ಮಿಲಿಟರಿ ದಾಳಿಯ ಬಿಸಿ ಭಾರತಕ್ಕೂ ತಟ್ಟಲಿದೆ. ಇರಾನ್ ಜೊತೆ ಇನ್ಮುಂದೆ ಶಾಂತಿ ಮಾತುಕತೆ ಮಾತೇ ಇಲ್ಲ, ಕದನವಿರಾಮ ಅಂತ್ಯಗೊಂಡಿದೆ ಎಂದು ಡೊನಾಲ್ಡ್ ಟ್ರಂಪ್ ಘೋಷಿಸಿರುವುದು ಸಹಜವಾಗಿಯೇ ಬೇರೆ ದೇಶಗಳ ಆತಂಕಕ್ಕೆ ಕಾರಣವಾಗಿದೆ.

ಹಲವು ತಿಂಗಳುಗಳಿಂದ ನಡೆಯುತ್ತಿರುವ ಈ ಎರಡೂ ದೇಶಗಳ ಯುದ್ಧದ ಪರಿಣಾಮ ಎದುರಿಸಿರುವ ದೇಶಗಳು ಕದನವಿರಾಮ ಘೋಷಣೆ ಬಳಿಕ ನಿಟ್ಟುಸಿರು ಬಿಟ್ಟಿದ್ದವು.
ಇದೀಗ ಮತ್ತೆ ಯುದ್ಧಾರಂಭದ ಲಕ್ಷಣ ಹೆಚ್ಚಾಗಿರುವುದರಿಂದ ಇತರೆ ದೇಶಗಳು ಕೂಡ ಚಿಂತಿತವಾಗಿವೆ. ಇದಕ್ಕೆ ಭಾರತವೂ ಹೊರತಾಗಿಲ್ಲ. ಹಾಗಾಗಿ ಕದನ ವಿರಾಮದ ಅಂತ್ಯ, ಜಾಗತಿಕವಾಗಿ ತಲ್ಲಣ ಸೃಷ್ಟಿಸಿದೆ. ಈ ಉದ್ವಿಗ್ನತೆಯು ಜಾಗತಿಕವಾದ ರಾಜಕೀಯ ಮತ್ತು ಆರ್ಥಿಕತೆಯ ಮೇಲೆ ಮಾತ್ರವಲ್ಲದೆ, ಭಾರತದ ಮೇಲೂ ಅತ್ಯಂತ ಗಂಭೀರವಾದ ನೇರ ಪರಿಣಾಮ ಬೀರುತ್ತದೆ.
ಭಾರತ ಅಮೆರಿಕ ಮತ್ತು ಇರಾನ್ ಇಬ್ಬರಿಗೂ ಆಪ್ತ ರಾಷ್ಟ್ರ. ಹೀಗಾಗಿ ಎರಡೂ ದೇಶಗಳ ನಡುವೆ ಯುದ್ಧ ಉಂಟಾದರೆ ಭಾರತ ಯಾರ ಪರ ನಿಲ್ಲಬೇಕೆಂಬ ಸಂದಿಗ್ಧತೆಗೆ ಸಿಲುಕಬೇಕಾಗುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ ಕದನ ವಿರಾಮ ಅಂತ್ಯವಾಗಿರುವುದರಿಂದ ಇರಾನ್ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚುವುದು ಖಚಿತ. ಇದರಿಂದ ಭಾರತದ ಇಂಧನದ ಟ್ಯಾಂಕರ್‌ಗಳು ಹಾರ್ಮುಜ್ ಜಲಸಂಧಿ ದಾಟಿ ಬರಲು ಸಾಧ್ಯ ವಾಗುವುದಿಲ್ಲ. ಜಾಗತಿಕವಾಗಿಯೂ ತೈಲ ಬೆಲೆಗಳು ದುಪ್ಪಟ್ಟಾಗುತ್ತವೆ. ಆಗ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರಗಳು ಗಗನಕ್ಕೇರುತ್ತವೆ. ಸರಕು ಸಾಗಣೆ ವೆಚ್ಚ ಹೆಚ್ಚಿ ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗುತ್ತದೆ.
ಪಶ್ಚಿಮ ಏಷ್ಯಾ/ಗಲ್ಫ್ ರಾಷ್ಟ್ರಗಳಲ್ಲಿ ಸುಮಾರು ೮೫ ಲಕ್ಷಕ್ಕೂ ಹೆಚ್ಚು ಭಾರತೀಯರು ವಾಸಿಸುತ್ತಿದ್ದಾರೆ. ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್ ಈಗಾಗಲೇ ಅಮೆರಿಕ ನೆಲೆಗಳಿರುವ ಬಹ್ರೇನ್ ಮತ್ತು ಕುವೈತ್ ಮೇಲೆ ಕ್ಷಿಪಣಿ ದಾಳಿ ನಡೆಸಿರುವುದರಿಂದ ಗಲ್ಫ್ ಪ್ರದೇಶದಲ್ಲಿರುವ ಭಾರತೀಯರಿಗೆ ಸುರಕ್ಷತೆ ಇಲ್ಲದಂತಾಗಿದೆ. ಯುದ್ಧ ಉಲ್ಬಣಿಸಿದರೆ ಲಕ್ಷಾಂತರ ಭಾರತೀಯರು ಉದ್ಯೋಗ ಕಳೆದು ಕೊಳ್ಳಬೇಕಾಗುತ್ತದೆ. ಯುದ್ಧಪೀಡಿತ ಪ್ರದೇಶಗಳ ಭಾರತೀಯರನ್ನು ತಾಯ್ನಾಡಿಗೆ ಕರೆತರಬೇಕಾದ ಸವಾಲು ಎದುರಾಗಲಿದೆ.
ಭಾರತವು ಇರಾನ್‌ನಲ್ಲಿ ಚಾಬಹಾರ್ ಬಂದರನ್ನು ಅಭಿವೃದ್ಧಿ ಪಡಿಸುತ್ತಿದೆ. ಇದರ ಮೂಲಕ ಪಾಕಿಸ್ತಾನ ಮಾರ್ಗ ಬಿಟ್ಟು ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾ ದೇಶಗಳಿಗೆ ವ್ಯಾಪಾರ ಸಂಪರ್ಕ ಹೊಂದುವುದು ಭಾರತದ ಗುರಿಯಾಗಿದೆ.
ಇದೀಗ ಅಮೆರಿಕ ಇರಾನ್ ಮೇಲೆ ಕಠಿಣ ಆರ್ಥಿಕ ನಿರ್ಬಂಧ ವಿಧಿಸಿ, ದಾಳಿ ಮುಂದುವರೆಸಿದರೆ ಭಾರತವು ಚಾಬಹಾರ್
ಬಂದರಿನ ಕೆಲಸ ಮಾಡುವುದು ಕಷ್ಟವಾಗುತ್ತದೆ. ಯೋಜನೆಗೆ ಭಾರತ ಹೂಡಿರುವ ಹಣ ವಾಪಸ್ ಬರುವುದಿಲ್ಲ.
ಈ ಎಲ್ಲ ಕಾರಣಗಳಿಂದ ಇರಾನ್-ಅಮೆರಿಕದ ನಡುವಿನ ಯುದ್ಧ ಭಾರತಕ್ಕೂ ಅನೇಕ ಸವಾಲು ಒಡ್ಡುವುದಂತೂ ಖಚಿತ.

ಇಸ್ರೇಲ್-ಇರಾನ್ ನಡುವಿನ ಸಂಘರ್ಷದಿಂದ ಆರಂಭವಾದ ಯುದ್ಧದಲ್ಲಿ ಅಮೆರಿಕ ಎಂಟ್ರಿ ಕೊಟ್ಟಿತ್ತು. ಇದೀಗ ಇಸ್ರೇಲ್ ಕೊಂಚ ಹಿಂದೆ ಸರಿದು,ಸೈಲೆಂಟ್ ಆಗಿದ್ದರೂ ಅಮೆರಿಕ ಮಾತ್ರ ಇರಾನ್ ಬೆನ್ನತ್ತಿದೆ. ಇದೀಗ ಈ ಯುದ್ಧ ಇರಾನ್ ಮತ್ತು ಅಮೆರಿಕದ
ನಡುವೆ ದೊಡ್ಡ ಬಿರುಕನ್ನು ಉಂಟುಮಾಡಿದೆ.
ಇಂಡಿಯಾ ಮೇಲೆ ನಾನಾ ಪರಿಣಾಮ
ಮತ್ತೆ ಕಚ್ಚಾ ತೈಲ ಬೆಲೆ ಏರಿಕೆಯಾಗಿ ಇಂಧನ ಬಿಕ್ಕಟ್ಟು ಸೃಷ್ಟಿಯಾಗುವ ಸಾಧ್ಯತೆ ಇದೆ. ಹಾಗೆಯೇ ವಿದೇಶಿ ಹೂಡಿಕೆದಾರರ ಹಿಂತೆಗೆತ ನಿರ್ಧಾರದಿಂದ ಭಾರತೀಯ ಷೇರು ಮಾರುಕಟ್ಟೆ ಮೇಲೆ ಭಾರೀ ಹೊಡೆತ ಬೀಳುತ್ತದೆ. ಅಲ್ಲದೆ, ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಕೂಡ ಭಾರಿ ಪ್ರಮಾಣದಲ್ಲಿ ಕುಸಿಯುತ್ತದೆ. ಇದರಿಂದ ಭಾರತ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಬೆಲೆಯ ಹೊರೆಯೂ ಹೆಚ್ಚಾಗುತ್ತದೆ.
-
Mysore11 hours agoಹುಣಸೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹ*ತ್ಯೆ; ಸಾವಿನ ಕಾರಣ ನಿಗೂಢ
-
Mysore17 hours agoನಂಜನಗೂಡಿನಲ್ಲಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ: ಕಾಮುಕನಿಗೆ ಗ್ರಾಮಸ್ಥರಿಂದ ಧರ್ಮದೇಟು, ಪೊಲೀಸರ ವಶಕ್ಕೆ
-
Kodagu13 hours agoಅಧ್ಯಕ್ಷರಾಗಿ ವಾಂಚಿರ ವಿಠಲ್ ನಾಣಯ್ಯ ಆಯ್ಕೆ
-
Politics6 hours agoಪರಪ್ಪನ ಅಗ್ರಹಾರಕ್ಕೆ ವಿಜಯಲಕ್ಷ್ಮಿ, ರಕ್ಷಿತಾ ಭೇಟಿ: ದರ್ಶನ್ ಆರೋಗ್ಯ ವಿಚಾರಣೆ
-
Politics7 hours agoರಾಜ್ಯ ಸಚಿವ ಸಂಪುಟ ವಿಸ್ತರಣೆ ನಾಳೆ: 18 ಮಂದಿಗೆ ಸಚಿವ ಸ್ಥಾನ ಸಾಧ್ಯತೆ
-
Kodagu6 hours agoಹಾರಂಗಿ ಜಲಾಶಯದ ನೀರು ಕುಡಿಯಲು ಮಾತ್ರ: ರೈತರಿಗೆ ಬೆಳೆ ಬೆಳೆಯದಂತೆ ಮನವಿ
-
Kodagu9 hours agoಕೂಡಿಗೆ ವ್ಯಾಪ್ತಿಯಲ್ಲಿ 1 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಡಾ. ಮಂತರ್ ಗೌಡ ಚಾಲನೆ
-
Manglore4 hours agoಮನೆ ಕಾಮಗಾರಿಗೆ ಬಂದು 6.37 ಲಕ್ಷ ಮೌಲ್ಯದ ಚಿನ್ನಾಭರಣ ಕಳವು- ಕೃತ್ಯ ಎಸಗಿದ 24 ಗಂಟೆಯೊಳಗೆ ಆರೋಪಿ ಅಂದರ್
