Connect with us

Hassan

ಮಹಿಳೆ ಇರುವುದರಿಂದಲೇ ಪುರುಷರು ಯಶಸ್ವಿಯಾಗಿ ಸಾಧಿಸಲು ಸಾಧ್ಯ : ನಟಿ ಶೃತಿ

Published

on

ಹಾಸನ : ಸಮಾಜದಲ್ಲಿ ಮಹಿಳೆ ಇರುವುದರಿಂದ ಪುರುಷನು ಯಶಸ್ವಿಯಾಗಿ ಗುರಿ ಸಾಧಿಸಲು ಸಾಧ್ಯವಾಗಿದೆ ಎಂದು ಕನ್ನಡ ಚಲನಚಿತ್ರದ ನಾಯಕಿ ನಟಿ ಶೃತಿ ಅಭಿಪ್ರಾಯಪಟ್ಟರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾ ಸರಕಾರಿ, ಅರೆಸರಕಾರಿ ಹಾಗೂ ನಿಗಮ ಮಂಡಳಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ, ಹಾಸನ ಜಿಲ್ಲಾ ರಾಜ್ಯ ಸರಕಾರಿ ನೌಕರರ ಕೋ-ಆಪರೇಟಿವ್ ಸೊಸೈಟಿ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಹಿಳಾ ದಿನಾಚರಣೆಯನ್ನು ಜ್ಯೋತಿ ಬೆಳಗಿ ಉದ್ಘಾಟಿಸಿದ ನಂತರ ದಿವಂಗತ ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪುಷ್ಫಾರ್ಚನೆ ನೆರವೇರಿಸಿ ಅವರ ಪೋಟೊ ಅನಾವರಣಗೊಳಿಸಿದ ನಂತರ ಉದ್ದೇಶಿಸಿ ಮಾತನಾಡಿದ ಅವರು, ಸಮಾಜದಲ್ಲಿ ಮಹಿಳೆಯರಿಗೆ ಅನುಕಂಪಕ್ಕಿಂತ ಅವಕಾಶ ನೀಡಬೇಕು. ಎಲ್ಲಾ ರಂಗಗಳಲ್ಲಿ ಮಹಿಳೆಯರು ಬಹು ಸಂಖ್ಯಾತ ರಾಗಬೇಕು. ಆತ್ಮಸ್ಥೈರ್ಯ ಕಳೆದುಕೊಂಡರೆ ಬದುಕು ಅಸಾದ್ಯ. ಆತ್ಮ ಸ್ಥೈರ್ಯ ಗಟ್ಟಿಯಾಗಿ ಇದ್ದರೆ ಸಮಾಜದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ ಎಂದರು. ಕುಟುಂಬದ ಹಂತದಲ್ಲೇ ಮಹಿಳೆಯರಿಗೆ ಪುರುಷರಿಗೆ ಸಮಾನ ಸ್ಥಾನಮಾನ, ಹಾಗೂ ಅವಕಾಶ ನೀಡುವ ದಿನಗಳು ಬರಬೇಕು. ಅಮೆರಿಕ ದೇಶದಲ್ಲಿ ಹೆಚ್ಚು ಕಾಲ ದುಡಿಸಿಕೊಳ್ಳುತ್ತಿದ್ದ ವೇಳೆ ತಮಗಾಗಿ ಒಂದು ದಿನವನ್ನು ಮೀಸಲಿಡಬೇಕು ಎಂಬ ಉದ್ದೇಶ ಇಟ್ಟುಕೊಂಡು ಆರಂಭವಾದ ದಿನವೇ ಮಹಿಳಾ ದಿನಾಚರಣೆ ಹುಟ್ಟಲು ಕಾರಣವಾಗಿದೆ. ಪ್ರತಿಯೊಬ್ಬ ಯಶಸ್ವಿ ಪುರುಷನ ಜೊತೆ ಜೊತೆಗೆ ಮಹಿಳೆ ಇರುವ ಕಾರಣದಿಂದಲೇ ಪುರುಷರು ಸಾಧಿಸಲು ಸಾಧ್ಯವಾಗುತ್ತದೆ, ಪುರುಷರ ಜೊತೆ ಜೊತೆಯಾಗಿ ನಡೆದು ಪುರುಷರನ್ನು ಸಾಧನೆಯ ಹಾದಿಯಲ್ಲಿ ಕೊಂಡೊಯ್ದ ದಿನಗಳು ಹೆಚ್ಚಿವೆ ಎಂದು ಕಿವಿಮಾತು ಹೇಳಿದರು. ಆರತಿಗೆ ಒಬ್ಬಳು ಕೀರ್ತಿಗೆ ಒಬ್ಬಳು ಎಂಬ ಗಾದೆ ಮಾತು ಎಲ್ಲೆಡೆ ಜನಜನಿತ ಆದರೆ ಇತ್ತೀಚಿನ ದಿನಗಳಲ್ಲಿ ದೇಶಕ್ಕೆ ಕೀರ್ತಿ ತರುವ ನಿಟ್ಟಿನಲ್ಲಿ ಮಹಿಳೆಯರು ಸಾಧನೆ ಮಾಡಿರುವ ಸಾಕಷ್ಟು ಉದಾಹರಣೆಗಳು ಇಂದು ನಮ್ಮ ಕಣ್ಣ ಮುಂದೆ ಇವೆ ಎಂದು ಸಲಹೆ ನೀಡಿದರು. ನಂಬಿಕೆ ಎಂಬ ಕುದುರೆ ಏರಿ, ವಿದ್ಯೆ ಎಂಬ ಆಯುಧ ಬಳಸಿಕೊಂಡು ಸಮಾಜದಲ್ಲಿ ಮುಖ್ಯ ವಾಹಿನಿಗೆ ಬರಬೇಕು, ಜೊತೆಗೆ ಮಹಿಳೆಯರು ಆರ್ಥಿಕವಾಗಿ ಕೂಡ ಪ್ರಭಲ ರಾಗಬೇಕು ಎಂದು ಕರೆ ನೀಡಿದರು.

ಜಿಲ್ಲಾ ಸರಕಾರಿ, ಅರೆಸರಕಾರಿ ಹಾಗೂ ನಿಗಮ ಮಂಡಳಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಕೆ.ಎಂ. ಶ್ರೀನಿವಾಸ್ ಪ್ರಾಸ್ತಾವಿಕ ನುಡಿಯಲ್ಲಿ ಮಾತನಾಡಿ, ನಮ್ಮ ತಾತನ ಕಾಲದಲ್ಲಿ ಮಹಿಳೆಯರು ಎಂದರೇ ಶೋಷಣೆ ಇತ್ತು. ಈಗ ಅವು ಯಾವುದು ಇಲ್ಲ. ಎಲ್ಲಾ ರಂಗದಲ್ಲೂ ಮಹಿಳೆಯರು ಇದ್ದಾರೆ. ಯಾವ ಮನೆಯಲ್ಲಿ ಮಹಿಳೆ ಶಾಂತಿಯುತವಾಗಿ ನೆಮ್ಮದಿಯಾಗಿ ಜೀವನ ಮಾಡುತ್ತಿದ್ದಾರೆ ಆ ಮನೆ ನೆಮ್ಮದಿಯಿಂದ ಇರುತ್ತದೆ ಎಂದರು.

ಅಭಿವೃದ್ದಿ ಇಲಾಖೆಯ ಹೆಚ್.ಕೆ. ಪುಷ್ಪಲತಾ ಮಾತನಾಡಿ, ಮಾರ್ಚ್ ತಿಂಗಳು ಬಂದರೆ ತುಂಬಾ ಕಡೆ ಮಹಿಳಾ ದಿನಾಚರಣೆ ವಿವಿಧೆಡೆ ಆಚರಿಸಲಾಗುತ್ತದೆ ಆದರೆ ಮತ್ತೆ ಮುಂದಿನ ವರ್ಷದ ಮಾರ್ಚ್‌ಗೆ ಕಾಯುವ ಪರಿಸ್ಥಿತಿ ಇದೆ. ಪುರುಷ ಪ್ರಧಾನ ಸಮಾಜದಲ್ಲಿ ಎಲ್ಲಾ ಸಂಕೊಲೆಯನ್ನು ಕಳಚಿ ಪುರುಷರಿಗೆ ಸಮಾನವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಇಂದು ಛಾಪು ಮೂಡಿಸಿದ್ದಾರೆ ಮುಂದಿನ ದಿನಗಳಲ್ಲಿ ಕೂಡ ಮಹಿಳೆಯರಿಗೆ ವಿಶೇಷ ಮನ್ನಣೆ ನೀಡುವ ದಿನಗಳು ಬರಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎನ್. ಮಂಜುಳಾ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ಅತ್ಯುನ್ನತ ಹುದ್ದೆಗಳಲ್ಲಿ ಮಹಿಳೆಯರೇ ಛಾಪು ಮೂಡಿಸಿದ್ದಾರೆ. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಎಸ್ಪಿ, ಥಾಸಿಲ್ದಾರ್ ಸೇರಿದಂತೆ ಬಹುತೇಕ ಅಧಿಕಾರಿಗಳು ಮಹಿಳೆಯರೇ ಆಗಿದ್ದಾರೆ. ಆದರೆ ಈ ನಡುವೆಯೂ ಇಂದಿಗೂ ಹೆಣ್ಣು ಭ್ರೂಣ ಹತ್ಯೆ ಆಗುತ್ತಿಯವುದು ಬೇಸರದ ವಿಚಾರ, ಇಂತಹ ದಿನಗಳು ದೂರಾಗಿ ಮಹಿಳೆಯರಿಗೆ ವಿಶೇಷ ಮನ್ನಣೆ ನೀಡುವ ದಿನಗಳು ಬರಲಿ ಎಂದರು.

ಇದೇ ವೇಳೆ ಸ್ತ್ರೀರೋಗ ತಜ್ಞೆ ಡಾ. ಎ. ಸಾವಿತ್ರಿ ಹಾಗೂ ಮನೋರೋಗ ತಜ್ಞೆ ಡಾ.ಸುನೀತಾ ಮಹಿಳೆಯರಿಗೆ ಆರೋಗ್ಯ ಸಂರಕ್ಷಣೆ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾಗಿ ದುಡಿಯುತ್ತಿರುವ ಮಹಿಳೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಗಮನ ಸೆಳೆದವು. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಮಾಡಿದ ಮಹಿಳೆಯರು ಹಾಗೂ ಸಂಘದ ಮಹಿಳಾ ನಿರ್ದೇಶಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇದೆ ಸಂದರ್ಭದಲ್ಲಿ ಮಾಜಿ ಶಾಸಕ ಪ್ರೀತಂ ಜೆ. ಗೌಡರ ಪತ್ನಿ ಕಾವ್ಯ ಪ್ರೀತಂ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಕಿರಣ್, ಚನ್ನರಾಯಪಟ್ಟಣ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಎನ್. ದೀಪಾ, ಹಿಮ್ಸ್ ಆಸ್ಪತ್ರೆಯ ಡಾ. ಸುನೀತಾ, ಹಾಸನ ಜಿಲ್ಲಾ ಸರಕಾರಿ ನೌಕರರ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ.ಎನ್. ಪರಮೇಶ್, ಉಪಾಧ್ಯಕ್ಷ ಆರ್. ಶಿವೇಗೌಡ, ಗೌರವಾಧ್ಯಕ್ಷ ಆರ್.ಸಿ. ಭೈರಪ್ಪ, ಬಿ.ಎನ್. ರಾಜಶೇಖರ್, ಗೌರವ ಕಾರ್ಯದರ್ಶಿ ಸತೀಶ್, ನಿರ್ದೇಶಕರಾದ ಎಸ್. ಮಧು, ಬಿ.ಆರ್. ಧರ್ಮ, ಕೆ.ಕೆ. ಸಿಂಧು, ಕೆ.ಎಸ್. ಲಾವಣ್ಯ ಇತರರು ಉಪಸ್ಥಿತರಿದ್ದರು. ಲಕ್ಷ್ಮೀನಾರಾಯಣ್ ಕಾರ್ಯಕ್ರಮ ನಿರೂಪಿಸಿದರು.

Continue Reading
Click to comment

Leave a Reply

Your email address will not be published. Required fields are marked *

Hassan

ಮುಂದಿನ ದಿನಗಳಲ್ಲಿ ಚೊಂಬು-ಜಾಗಟೆ ಗ್ಯಾರಂಟಿ

Published

on

ಕಾಂಗ್ರೆಸ್ ವಿರುದ್ಧ ಹೆಚ್.ಡಿ. ರೇವಣ್ಣ ವಾಗ್ದಾಳಿ

ಹಾಸನ: ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯದ ಖಜಾನೆ ಖಾಲಿ ಮಾಡಿ ಜನರಿಗೆ ಬಿಕ್ಷೆ ಹಾಕುತ್ತಿದ್ದು, ಮುಂದಿನ ದಿನಗಳಲ್ಲಿ ಚೊಂಬು ಮತ್ತು ಜಾಗಟೆ ಕೊಡುವುದು ಗ್ಯಾರಂಟಿ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಭವಿಷ್ಯ ನುಡಿದರು.

ನಗರದಲ್ಲಿ ಆಪ್ತರ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಕರ್ನಾಟಕ ರಾಜ್ಯ ಲೂಟಿ ಕೋರರ ಕೈಯಲ್ಲಿ ಸಿಲುಕಿಕೊಂಡಿದೆ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯದ ಖಜಾನೆ ಖಾಲಿ ಮಾಡಿ ಜನರಿಗೆ ಬಿಕ್ಷೆ ಹಾಕುತ್ತಿದೆ ಮುಂದಿನ ದಿನಗಳಲ್ಲಿ ಕೈಯಲ್ಲಿ ಚೊಂಬು ಹಾಗೂ ಜಾಗಟೆ ಕೊಡುವುದು ಗ್ಯಾರಂಟಿ ಎಂದರು.

ಹೆಚ್.ಡಿ. ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ಹಾಸನ ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರರ ಬದಲಾವಣೆ ಆಗಿದೆ. ಶಾಲಾ ಕಾಲೇಜು ಕಟ್ಟಡಗಳು, ಗುಣಮಟ್ಟದ ಶಿಕ್ಷಣದ ಮೂಲಕ ಹಾಸನ ಜಿಲ್ಲೆ ಎಸ್.ಎಸ್.ಎಲ್.ಸಿ. ಯಲ್ಲಿ ಕೂಡ ಪ್ರಥಮ ಸ್ಥಾನ ಪಡೆಯುವ ಮೂಲಕ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಆದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಾಸನ ಜಿಲ್ಲೆಗೆ ಕೊಡುಗೆ ಶೂನ್ಯ ಎಂದು ದೂರಿದರು. ನಂಬಿದವರಿಗೆ ಟೋಪಿ ಹಾಕಿ ನಿಷ್ಕಲ್ಮಶ ರಾಜಕಾರಿಣಿ ದೇವೇಗೌಡರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿದ್ದಾರೆ ಎಂದು ಕಿಡಿಕಾರಿದರು.

ಹಿಂದಿನಿಂದಲೂ ನಮ್ಮ ಕುಟುಂಬದ ಬಗ್ಗೆ ಅನೇಕರು ಒಂದಲ್ಲ, ಒಂದು ರೀತಿಯ ಅಪಪ್ರಚಾರ ಮಾಡುತ್ತಿದ್ದಾರೆ. ದೇವೇಗೌಡರ ಕಾಲದಿಂದಲೂ ಇದು ನಡೆಯುತ್ತಿದೆ. ಇದಕ್ಕೆಲ್ಲಾ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ನಮ್ಮ ಕುಟುಂಬದ ಬಗ್ಗೆ ಅಪಪ್ರಚಾರ ಮಾಡುವುದು ಮಾಮೂಲಿ. ಇದನ್ನೆಲ್ಲ ಜಿಲ್ಲೆಯ ಜನರು ಗಮನಿಸುತ್ತಿದ್ದಾರೆ. ಈ ಚುನಾವಣೆಯಲ್ಲಿ ಹಾಸನ, ಮಂಡ್ಯ, ಕೋಲಾರ ಸೇರಿದಂತೆ ಎಲ್ಲಾ ೨೮ಕ್ಕೆ ೨೮ ಸ್ಥಾನವನ್ನೂ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸವ್ಯಕ್ತಪಡಿಸಿದರು.

ರಾಜ್ಯದಲ್ಲಿ ಗ್ಯಾರಂಟಿ ಆಯ್ತು ಈಗ ಪೊಳ್ಳು ಗ್ಯಾರಂಟಿ ಶುರುವಾಗಿದೆ. ಬಾಂಡ್ ಪೇಪರ್‌ನಲ್ಲಿ ಸಿಎಂ ಹಾಗೂ ಡಿಸಿಎಂ ಒಂದು ಲಕ್ಷ ಕೊಡುವುದಾಗಿ ಕರಪತ್ರ ಹಂಚುತ್ತಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಗಮನಿಸಬೇಕು ಎಂದು ಆಗ್ರಹಿಸಿದರು. ಒಂದು ಕಡೆ ಪ್ರಜ್ವಲ್, ದೇವೇಗೌಡರು ಏನು ಮಾಡಿದ್ದಾರೆ ಅಂತಾರೆ. ಆದರೆ ಅವರು ಈ ಜಿಲ್ಲೆಗೆ ಏನು ಕೊಡುಗೆ ಕೊಟ್ಟಿದ್ದಾರೆ ಎಂಬುದು ಜನರಿಗೆ ಗೊತ್ತು. ೧೧ ತಿಂಗಳಲ್ಲಿ ರಾಜ್ಯದ ಖಜಾನೆ ಖಾಲಿ ಮಾಡಿ ಖಾಲಿ ಚೊಂಬು ಕೊಟ್ಟಿದ್ದಾರೆ. ಒಂದೇ ಒಂದು ಅಭಿವೃದ್ಧಿ ಕೆಲಸ ಆಗಿಲ್ಲ ಎಂದು ಗಂಬೀರವಾಗಿ ಆರೋಪಿಸಿದರು.

ಹಾಸನ ಫ್ಲೈ ಓವರ್ ಮಾಡಲು ನಾನು ಬರಬೇಕಾಯ್ತಾ, ಹಾಸನದ ಬಸ್ ನಿಲ್ದಾಣಕ್ಕೆ ನಿತ್ಯ ನಾಲ್ಕು ಸಾವಿರ ಬಸ್ ಬರ್ತವೆ. ಆದರೆ ಇವರು ಕೇವಲ ಎರಡು ಪಥದ ರಸ್ತೆಯ ಫ್ಲೈ ಓವರ್ ಮಾಡಿದ್ದಾರೆ. ಹಾಸನದ ಮೆಡಿಕಲ್ ಕಾಲೇಜು ಉಳಿಸಲು ಇವರ ಕೊಡುಗೆ ಏನು? ನಮ್ಮ ಕೊಡುಗೆ ಏನು ಅಂತಾರೆ, ಇವರ ಕೊಡುಗೆ ಏನು ಹೇಳಲಿ? ಎಂದು ಸವಾಲು ಹಾಕಿದರು. ಅರವತ್ತು ವರ್ಷ ಆದರೂ ಈ ಕಾಂಗ್ರೆಸ್ ಸರ್ಕಾರ ಶಿಕ್ಷಣಕ್ಕೆ ಆದ್ಯತೆ ಕೊಡಲಿಲ್ಲ. ಶೇಕಡಾ ೪೦ ರಷ್ಡು ಶಿಕ್ಷಕರ ಹುದ್ದೆ ಖಾಲಿ ಇದೆ. ಬಡ ಜನರಿಗೆ ಮೋದಿಯವರು ಐದು ಕೆಜಿ ಅಕ್ಕಿ ಕೊಡ್ತಾರೆ ಇವರು ಅದನ್ನ ಹೇಳ್ತಾರಾ! ಇವರು ಗ್ಯಾರಂಟಿ ಗಾಗಿ ಲಕ್ಷಾಂತರ ಕೋಟಿ ಸಾಲ ಮಾಡಿದ್ದಾರೆ.

ಇವರು ಬಿಜೆಪಿಯನ್ನ ಪರ್ಸೆಂಟೇಜ್ ಎನ್ನೋರು ಇವರು ರೈತರಿಂದಲು ಪರ್ಸೆಂಡೇಜ್ ತಗೊತಾರಲ್ಲ ಸ್ವಾಮಿ ಎಂದು ಆರೋಪ ಮಾಡಿದರು.

Continue Reading

Hassan

ಪೆನ್ ಡ್ರೈವ್ ಪ್ರಕರಣ ಸಮಗ್ರ ತನಿಖೆ ಆಗಲಿ ಅನುಪಮ ಆಗ್ರಹ

Published

on

ಹಾಸನ: ಈಗಾಗಲೇ ಎಲ್ಲಾ ಕಡೆ ಮಾತಾಗಿರುವ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಗ್ರ ತನಿಖೆ ಆಗಬೇಕಾಗಿದೆ. ಬೇರೆ ಹೆಣ್ಣು ಮಕ್ಕಳ ಬಗ್ಗೆ ಮಾತನಾಡುವರ ಕುರಿತು ಕಾಂಗ್ರೆಸ್ ಅಭ್ಯರ್ಥಿ ತಾಯಿ ಅನುಪಮ ಅಸಮಧಾನವ್ಯಕ್ತಪಡಿಸಿದರು. ಈ ಲೋಕಸಭಾ ಚುನಾವಣೆಯಲ್ಲಿ ನನ್ನ ಮಗ ಶ್ರೇಯಸ್ ಪಟೇಲ್ ಗೆಲ್ಲುವುದು ನಿಶ್ಚಿತ ಎಂದು ವಿಶ್ವಾಸವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಈ ವಿಚಾರ ಎತ್ತಿರುವುದೆ ಜಿ. ದೇವರಾಜೇಗೌಡರು ಆಗಿರುವುದರಿಂದ ಪೆನ್ ಡ್ರೈವ್ ಇದೆ ಎಂದು ಹೇಳಿಕೆ ನೀಡುವ ಜಿ. ದೇವರಾಜೇಗೌಡರು ಏಕೆ ಮಾಡಿರಬಾರದು ಎಂದು ಗಂಭೀರವಾಗಿ ಆರೋಪಿಸಿ ಟಾಂಗ್ ನೀಡಿದರು.

ಈ ಚುನಾವಣೆಯಲ್ಲಿ ಜಿಲ್ಲೆಯ ಜನ ಬದಲಾವಣೆ ಬಯಸಿದ್ದು, ಎಲ್ಲಾ ಕಡೆ ಶ್ರೇಯಸ್ ಪಟೇಲ್‌ಗೆ ಉತ್ತಮವಾದ ವಾತಾವರಣ ಇದೆ. ಒಂದು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಹಾಗೂ ಪುಟ್ಟಸ್ವಾಮಿಗೌಡರ ಮೊಮ್ಮಗ ಎಂಬುದು ಸೇರಿ ಗೆಲುವಿಗೆ ಪೂರಕ ಆಗಲಿದೆ ಎಂದರು. ನಮ್ಮ ಮಾವ ೧೯೯೯ ರಲ್ಲಿ ಎಂಪಿ ಆಗಿದ್ದಾಗ ಆಸ್ಪತ್ರೆ, ನೀರಾವರಿ ಯೋಜನೆ ಮಾಡಿದ್ದಾರೆ. ನಾನು ಎರಡು ಎಲೆಕ್ಷನ್‌ನಲ್ಲಿ ಅವರ ಮುಂದೆ ಮಂಡಿಯೂರಿದ್ದೇನೆ. ನನ್ನ ಮಗ ೩ನೇ ಚುನಾವಣೆ ಎದುರಿಸುತ್ತಿದ್ದು, ಜಿಲ್ಲೆಯ ಜನ ನಮಗೆ ಆಶೀರ್ವಾದ ಮಾಡಬೇಕು ಎಂದು ಕೋರಿದರು. ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಗೆಲ್ಲಿಸಲು ಎಷ್ಟೆ ಹಣ ಹಂಚಿಕೆ ಮಾಡಿದರೂ ಈ ಬಾರಿ ಶ್ರೇಯಸ್ ಪಟೆಲ್ ಗೆಲ್ಲುವುದು ನಿಶ್ಚಿತ. ಕುಟುಂಬದ ವಿರುದ್ಧ ಹೋರಾಟ ನಡೆಸುವುದು ಅಷ್ಟು ಸುಲಭವಲ್ಲ. ಈಗ ಈ ಕುಟುಂಬಕ್ಕೆ ಶಕ್ತಿ ಇಲ್ಲ. ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶ್ರೇಯಸ್ ಪಟೇಲ್ ಬೆನ್ನ ಹಿಂದೆ ನಿಂತಿರುವುದರಿಂದ ಇಡೀ ಕಾಂಗ್ರೆಸ್ ಪಕ್ಷ ಒಟ್ಟಾಗಿ ಕಸಲೆ ಮಾಡಿದ್ದು ಶ್ರೀರಕ್ಷೆ ಆಗಲಿದೆ. ಜಿಲ್ಲೆಯ ಜನತೆ ನಮ್ಮ ಮಗನಿಗೆ ಮತ ಹಾಕುವಂತೆ ಇದೆ ವೇಳೆ ಮನವಿ ಮಾಡಿದರು.

ಕಾಂಗ್ರೆಸ್ ಮುಖಂಡರಾದ ಹೆಚ್.ಕೆ. ಜವರೇಗೌಡ ಮಾತನಾಡಿ, ಈ ಲೋಕಸಭಾ ಚುನಾವಣೆಯಲ್ಲಿ ವಾತವರಣ ಕಾಂಗ್ರೆಸ್ ಪರವಾಗಿದ್ದು, ಸ್ವಯಂ ಪ್ರೇರಿತವಾಗಿ ಶ್ರೇಯಸ್ ಪಟೇಲ್ ಗೆ ಮತ ಹಾಕಬೇಕು ಎನ್ನುವ ವಾತವರಣ ಬಂದಿದೆ. ಕಾಂಗ್ರೆಸ್ ಕಾರ್ಯಕ್ರಮದ ಕಾರ್ಯಕ್ರಮಗಳು ಶ್ರೀರಕ್ಷೆ ಆಗಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಮುಖಂಡರಾದ ಹೆಚ್.ಕೆ. ಜವರೇಗೌಡ, ಬನವಾಸೆ ರಂಗಸ್ವಾಮಿ, ಮುರುಳಿಮೋಹನ್, ಜಾವಗಲ್ ಮಂಜುನಾಥ್ ಇತರರು ಉಪಸ್ಥಿತರಿದ್ದರು.

Continue Reading

Hassan

ಹಾಸನದಲ್ಲಿ ಬಿಜೆಪಿಯ ಕೆಲ ವ್ಯಕ್ತಿಗಳು, ಮಂಡ್ಯದಲ್ಲಿ ಸುಮಲತಾ ನಮಗೆ ಸಹಕರಿಸುತ್ತಿಲ್ಲ

Published

on

ಕಾವೇರಿ ನೀರನ್ನು ಉಳಿಸಲು ಶತಸಿದ್ಧ : ಹೆಚ್.ಡಿ. ದೇವೇಗೌಡ

ಹಾಸನ : ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಕೆಲ ವ್ಯಕ್ತಿಗಳು ಹಾಸನದಲ್ಲಿ ಮತ್ತು ಮಂಡ್ಯದಲ್ಲಿ ಸುಮಲತಾ ಅವರು ನಮಗೆ ಸಹಕರಿಸುತ್ತಿಲ್ಲ ಎಂದು ಬೇಸರವ್ಯಕ್ತಪಡಿಸಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ನಮ್ಮ ಮೂರು ಕ್ಷೇತ್ರದಲ್ಲೂ ಜಯಗಳಿಸುವುದಾಗಿ ವಿಶ್ವಾಸವ್ಯಕ್ತಪಡಿಸಿ, ಕಾವೇರಿ ನೀರನ್ನು ಉಳಿಸಲು ಶತಸಿದ್ಧ ಎಂದು ಶಪತ ಮಾಡಿದರು.

ನಗರದ ಹೊರವಲಯದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ದೇಶದ ಸಂಪತ್ತನ್ನು ಹಂಚುತ್ತೇವೆ ಎಂದು ಕಾಂಗ್ರೆಸ್‌ನವರು ಜಗಳವಾಡುತ್ತಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬರಲು ಶಕ್ತಿನೇ ಇಲ್ಲ. ಆದರೆ ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ. ಭೂಮಿ, ಸಂಪತ್ತನ್ನು ಹಂಚುತ್ತೇವೆ ಎಂದು ರಾಹುಲ್ ಗಾಂಧಿ ಹೇಳ್ತಾರೆ. ಕಾವೇರಿ ಬೇಸಿನ್‌ಗೆ ಸಂಬಂಧಪಟ್ಟ ಎಲ್ಲಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದೇನೆ. ಪ್ರಧಾನ ಮಂತ್ರಿಗಳ ಜೊತೆ ಎರಡು ಸಭೆ ಮಾಡಿದ್ದೇನೆ. ಎರಡನೇ ಹಂತದ ಚುನಾವಣೆ ಹೈದರಾಬಾದ್, ಕರ್ನಾಟಕ, ಮುಂಬೈ ಕರ್ನಾಟಕ ಮೇ.೭ ರಂದು ನಡೆಯಲಿದೆ. ಶಿವಮೊಗ್ಗ ಸೇರಿ ಎರಡನೇ ಹಂತದ ಚುನಾವಣೆ ನಡೆಯುತ್ತದೆ ಎಂದರು.

ಹಾಸನದಲ್ಲಿ ಬಿಜೆಪಿಯ ಒಬ್ಬರು ವಿರೋಧ ಮಾಡ್ತಾರೆ ಅಂತ ನೀವು ಕೇಳಬಹುದು, ನಾನೇ ಹೇಳ್ತಿನಿ! ಇವತ್ತು ಕಾವೇರಿ ಬೇಸಿನ್‌ನಲ್ಲಿ ಎಲ್ಲಾ ಕ್ಷೇತ್ರಗಳನ್ನು ಗೆಲ್ಲುವ ಸಾಧ್ಯತೆ ಇದೆ. ಬಿಜೆಪಿಯ ಕೆಲವು ವ್ಯಕ್ತಿಗಳು ಹಾಸನದಲ್ಲಿ ಕೋ-ಆಪರೇಟ್ ಮಾಡ್ತಿಲ್ಲ. ಮಂಡ್ಯದಲ್ಲಿ ಸುಮಲತಾ ಕುಮಾರಸ್ವಾಮಿಗೆ ಕೋಆಪರೇಟ್ ಮಾಡ್ತಿಲ್ಲ.

ಅದರಿಂದ ಕುಮಾರಸ್ವಾಮಿ ಏನೋ ಅಪಾಯ ಆಗುತ್ತೆ ಅಂತ, ಏನು ಆಗಲ್ಲ. ಪ್ರಮುಖವಾಗಿ ಕಾವೇರಿ ಸಮಸ್ಯೆ ಇದೆ, ಅದು ಜೀವನ್ಮರಣದ ಪ್ರಶ್ನೆ.

ಮಂಡ್ಯದಲ್ಲಿ ಕೈ ಅಭ್ಯರ್ಥಿ ಗೆಲ್ಲಲು ೧೨೫ ಕೋಟಿ ಎನ್‌ಓಸಿ ರಿಲೀಸ್ ಮಾಡಿದ್ದಾರೆ. ರಾಜ್ಯದಲ್ಲಿ ೨೮ ಕ್ಕೆ ೨೮ ಸ್ಥಾನ ಗೆಲ್ಲುಬೇಕು. ಯಾರೇ ಪ್ರಚಾರ, ಅಪಪ್ರಚಾರ ಏನೇ ಮಾಡಲಿ ಈ ದೇವೇಗೌಡ ೯೧ ವಯಸ್ಸಿನಲ್ಲಿ ಹೋರಾಟ ಮಾಡುತ್ತಿದ್ದಾನೆ ಅದು ಎಲ್ಲರ ಮನಸ್ಸಿಗೆ ನಾಟಿದೆ. ಮೋದಿಯವರು ಡಿಎಂಕೆಯ ಹಂಗಿನಿಂದ ಈ ದೇಶ ಆಳುವ ಪರಿಸ್ಥಿತಿ ಬರುವುದಿಲ್ಲ. ಮೇಕೆದಾಟು ಯೋಜನೆ ಬಗ್ಗೆ ಡಿಎಂಕೆ ಪ್ರಣಾಳಿಕೆಯಲ್ಲಿ ಹಾಕಿದೆ. ಒಬ್ಬ ಪೊಲೀಸ್ ಅಧಿಕಾರಿ ತಮಿಳುನಾಡಿನ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಹೋರಾಡುತ್ತಿದ್ದಾರೆ. ಅಣ್ಣಾ ಡಿಎಂಕೆಯಲ್ಲಿ ಪಕ್ಷದಲ್ಲಿ ಕೆಲವರು ಪರಸ್ಪರ ಭಿನ್ನಾಭಿಪ್ರಾಯಗೊಂಡು ಅವರು ಕೂಡ ಬಿಜೆಪಿ ಜೊತೆ ಅಧಿಕಾರ ಹಂಚಿಕೊಂಡಿದ್ದಾರೆ. ತಮಿಳುನಾಡಿನಲ್ಲಿ ಬಿಜೆಪಿ ಅಕೌಂಟ್ ಓಪನ್ ಮಾಡುತ್ತೆ ಯಾವುದೇ ಸಂಶಯವಿಲ್ಲ. ಚಿಕ್ಕಬಳ್ಳಾಪುರದಲ್ಲಿ ನೀರಿನ ಸಮಸ್ಯೆ ಅರ್ಥ ಆಗಿದೆ.

ನಾನು ಗಮನ ಹರಿಸುತ್ತೇನೆ ಎಂದು ಪ್ರಧಾನಮಂತ್ರಿಗೂ ಹೇಳಿದ್ದೇನೆ. ಮೇಕೆದಾಟು, ಕಾವೇರಿ ಬಗ್ಗೆ ಕೇಂದ್ರ ಜಲಸಂಪನ್ಮೂಲ ಸಚಿವರ ಜೊತೆ ಮಾಡುತ್ತಿದ್ದೇನೆ.

ಅವರು ಏನು ಹೇಳಿದ್ದಾರೆ ಎನ್ನುವುದನ್ನು ಮಾಧ್ಯಮದ ಮುಂದೆ ಹೇಳಲ್ಲ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೋದಲೆಲ್ಲ ಜನಕ್ಕೆ ಅವರು ಹಣದ ಹೊಳೆಯನ್ನು ಹರಿಸುತ್ತಿದ್ದಾರೆ. ಮೂವರು ಇದ್ದರೂ ಆದರೇ ಡಾ. ಮಂಜುನಾಥ್ ಅವರನ್ನು ನಿಲ್ಲಿಸಿದ್ದಾರೆ. ಆದರೂ ಡಾ.ಮಂಜುನಾಥ್ ಗೆಲ್ತಾರೆ. ಅವರು ಅಧಿಕಾರ ಎಷ್ಟು ದುರುಪಯೋಗ ಮಾಡಬೇಕು ಮಾಡಿದ್ದಾರೆ.ಏನೇ ಸಮಸ್ಯೆ ಇಲ್ಲ, ಡಾ.ಮಂಜುನಾಥ್ ಗೆಲ್ತಾರೆ ಎಂದು ವಿಶ್ವಾಸವ್ಯಕ್ತಪಡಿಸಿದರು. ಯಾವ ಕಾವೇರಿ ನೀರನ್ನು ಉಳಿಸುತ್ತೇನೆ ಎಂದು ಹೇಳಿದ್ದೇನೋ ಅದನ್ನು ಮಾಡುತ್ತೇನೆ, ಅದು ಶತಸಿದ್ದ. ಆದರೆ ಭತ್ತದ ಬೆಳೆಯಿರಿ ಎಂದು ಹೇಳಲು ಹೋಗಲ್ಲ ಎಂದು ಹೇಳಿದರು.

ಇದೆ ವೇಳೆ ಹುಡಾ ಮಾಜಿ ಅಧ್ಯಕ್ಷ ಕೆ.ಎಂ. ರಾಜೇಗೌಡ, ಮಾಜಿ ಶಾಸಕ ಬಿ.ವಿ. ಕರೀಗೌಡ, ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಸುಮುಖ ರಘು, ಒಕ್ಕಲಿಗರ ಸಂಘದ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ ಇತರರು ಉಪಸ್ಥಿತರಿದ್ದರು.

 

Continue Reading

Trending

error: Content is protected !!