Connect with us

Mandya

ನಾಲೆಗಳಿಗೆ ನೀರು ಹರಿಸಲು ರೈತ ಸಂಘ(ಮೂಲ ಸಂಘಟನೆ) ಆಗ್ರಹ

Published

on

ಮಂಡ್ಯ: ಜನಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಕೆಆರ್‌ಎಸ್‌ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಲು ಸರ್ಕಾರ ಕ್ರಮ ವಹಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ(ಮೂಲ ಸಂಘಟನೆ) ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ಆಗ್ರಹಿಸಿದರು.

ಮುಂಗಾರು ಮಳೆಯ ಕೊರತೆ, ತಮಿಳುನಾಡಿಗೆ ಕಾವೇರಿ ನೀರಿನ ನಿರಂತರ ಹರಿಯುವಿಕೆ, ನಾಲೆಗಳ ಅಸಮರ್ಪಕ ನಿರ್ವಹಣೆಯಿಂದ ಭೀಕರ ಬರದ ಛಾಯೆಯ ಪರಿಸ್ಥಿತಿಯಲ್ಲಿ ರೈತರ ಸಂಕಷ್ಟವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ಒತ್ತಾಯಿಸಿದರು.

ಸ್ತುತ ಬೆಳೆದು ನಿಂತಿರುವ ಬೆಳೆ ಮತ್ತು ಜನ ಜಾನುವಾರುಗಳ ಉಪಯೋಗಕ್ಕಾಗಿ ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ ಲಭ್ಯವಿರುವ ನೀರನ್ನು ನಾಲೆಗಳಿಗೆ ಹರಿಸಲು ಕ್ರಮವಹಿಸಬೇಕು. ಬೆಳೆದು ನಿಂತಿರುವ ಕಬ್ಬು ನೀರಿನ ಸರಬರಾಜಿಲ್ಲದೆ ಒಣಗುತ್ತಿದ್ದು, ಸದರಿ ಕಬ್ಬಿಗೆ ಸರ್ಕಾರ ಎಕರೆಗೆ ₹1 ಲಕ್ಷ ಬರ ಪರಿಹಾರ ನೀಡಬೇಕು ಎಂದು ಆಗ್ರಹ ಪಡಿಸಿದರು.

ಜಿಲ್ಲಾದ್ಯಂತ ಸಾವಿರಾರು ಎಕರೆ ಭೂಮಿ ನೀರಿನ ಅಭಾವದಿಂದ ಫಸಲು ಮಾಡದ ಕಾರಣ ರೈತ ಸಂಕಷ್ಟದಲ್ಲಿದ್ದು, ಪ್ರತಿ ಎಕರೆಗೆ ₹25 ಸಾವಿರ, ತೆಂಗು, ಅಡಿಕೆ ಹಾಗೂ ಇತರೆ ತೋಟಗಾರಿಕೆ ಬೆಳೆಗಳು ನೀರಿನ ಅಭಾವದಿಂದ ಒಣಗುತ್ತಿದ್ದು, ಜೀವಿತಾವಧಿ ಲೆಕ್ಕದಲ್ಲಿ ಒಂದು ಮರಕ್ಕೆ ₹25 ಸಾವಿರ ಪರಿಹಾರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ರೈತರ ಕೃಷಿ ಪಂಪ್‌ಸೆಟ್‌ಗಳ ಅಕ್ರಮ-ಸಕ್ರಮ ಯೋಜನೆ ಮರುಜಾರಿ ಮಾಡಬೇಕು. ರೈತರ ಜಮೀನುಗಳಿಗೆ ಟ್ರಾನ್ಸ್‌ಫಾರ್ಮರ್‌ಗಳನ್ನು ಶೀಘ್ರ ಅಳವಡಿಸಿ ಬೆಳೆಗಳನ್ನು ಉಳಿಸಬೇಕು. ಪ್ರತಿದಿನ ನಿರಂತರವಾಗಿ ಗುಣಮಟ್ಟದ ವಿದ್ಯುತ್‌ನ್ನು ಹಗಲು 8 ಗಂಟೆ ವಿತರಣೆ ಮಾಡಬೇಕು. ಕೆರೆ, ಕಟ್ಟೆ, ಕಾಲುವೆಗಳಲ್ಲಿರುವ ಹೂಳು ತೆಗೆದು, ಮಳೆಗಾಲದಲ್ಲಿ ನೀರು ಶೇಖರಣೆಯಾಗಲು ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಮಂಜೇಶ್‌ಗೌಡ, ಮುಖಂಡರಾದ ಸೊ.ಸಿ.ಪ್ರಕಾಶ್, ಕೆ.ನಾಗೇಂದ್ರಸ್ವಾಮಿ, ಕೆ.ರಾಮಲಿಂಗೇಗೌಡ, ಎಲ್.ಸುರೇಶ್, ಬೋರಲಿಂಗೇಗೌಡ, ಬಸವರಾಜು ಇದ್ದರು.

Continue Reading
Click to comment

Leave a Reply

Your email address will not be published. Required fields are marked *

Mandya

ಶಾಲಾ ಜಾಗ ಖಾಸಗಿ ವ್ಯಕ್ತಿಯ ಹೆಸರಿಗೆ : ಬಿಇಓ ರಿಂದ ಸ್ಥಳ ಪರಿಶೀಲನೆ

Published

on

ಶ್ರೀರಂಗಪಟ್ಟಣ : ತಾಲೂಕಿನ ಹುಲಿಕೆರೆ ಗ್ರಾಮದ ಸರ್ವೆ ನಂ 101/16 ರ 1 ಎಕರೆ ಶಾಲಾ ಜಾಗವು ಖಾಸಗಿ ವ್ಯಕ್ತಿಯ ಹೆಸರಿಗೆ ವರ್ಗಾವಣೆಗೊಂಡಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದರು.

ಶಾಲಾ ಜಾಗವನ್ನು ಬದಲಾವಣೆ ಮಾಡಿ ಖಾಸಗಿ ವ್ಯಕ್ತಿ ಹೆಸರಿಗೆ ವರ್ಗಾಯಿಸಿರುವ ಕುರಿತು ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳ ಆದೇಶದನ್ವಯ ಕ್ಷೇತ್ರ ಶಿಕ್ಷಣಾಧಿಕಾರಿ ಗ್ರಾಮಕ್ಕೆ ತೆರಳಿ ಪರಿಶೀಲಿಸಿದರು.

1956 ರಲ್ಲಿ ಹುಲಿಕೆರೆ ಗ್ರಾಮದ ಪಟೇಲ್ ದಾಸೇಗೌಡ ಎಂಬುವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 1 ಎಕರೆ ಜಾಗವನ್ನು ನೀಡಿ ಖಾತೆ ಮಾಡಿಸಿದ್ದರು. 2022ರ ತನಕ ಈ ಜಾಗವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಸರಿನಲ್ಲಿ ಖಾತೆ ಹೊಂದಿದ್ದು, 2023 ರಲ್ಲಿ ಏಕಾಏಕಿ ಖಾಸಗಿ ವ್ಯಕ್ತಿ ಹೆಸರಿಗೆ ಖಾತೆ ಮಾಡಲಾಗಿದೆ. ಈ ಕುರಿತು ಹುಲಿಕೆರೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ದಾಖಲೆಗಳ ಸಮೇತ ದೂರು ನೀಡಿದ್ದು ದಾಖಲೆಗಳನ್ನು ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು ಈ ಕುರಿತು ತನಿಖೆ ನಡೆಸಿ ಸ್ಥಳ ಪರಿಶೀಲನೆ ಮಾಡಿ ವರದಿ ನೀಡಲು ತಹಶೀಲ್ದಾರ್ ಗೆ ಆದೇಶ ಮಾಡಿದ್ದರು. ಈ ಹಿನ್ನಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ನೇತೃತ್ವದಲ್ಲಿ , ಭೂಪನ ಇಲಾಖೆಯ ಎ.ಡಿ.ಎಲ್ ಮೇಘಾ, ಕಂದಾಯ ಇಲಾಖೆಯ ರಾಜಸ್ವ ನೀರಿಕ್ಷಕ ಪ್ರಸನ್ನ ಒಳಗೊಂಡ ತಂಡ ಸ್ಥಳ ಪರಿಶೀಲನೆ ನಡೆಸಿ, ಸ್ಥಳಿಯರಿಂದ ಮಾಹಿತಿ ಸಂಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎ.ಡಿ.ಎಲ್.ಆರ್ ಮೇಘಾ ಈಗಲೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಸರಲ್ಲಿ ಒಂದು ಎಕರೆ ಜಾಗದ ಖಾತೆ ಹೊಂದಿದೆ. ಆತಂಕ ಬೇಡ ಜಿಲ್ಲಾಧಿಕಾರಿಗಳ ಆದೇಶದಂತೆ ತಹಶೀಲ್ದಾರ್ ಮಾರ್ಗದರ್ಶನದಲ್ಲಿ ಸರ್ವೇ ನಡೆಸಿ ವರದಿ ನೀಡಲಾಗುತ್ತದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಮಾತನಾಡಿ, ಶಾಲೆಗೆ ಸೇರಿದ ಜಾಗ ಸರ್ಕಾರದ ಆಸ್ತಿಯಾಗಿದೆ. ಅತಿಕ್ರಮಣ ಹಾಗೂ ವರ್ಗಾವಣೆ ಕಾನೂನು ಬಾಹಿರವಾಗಿ ನಡೆಸಿದ್ದು, ಸರ್ವೇ ನಂತರ ತಿಳಿಯಲಿದೆ. ಈಗಿರುವ ಜಾಗದಲ್ಲಿ ಯಾರು ಅತಿಕ್ರಮ ಮಾಡದಂತೆ ಸೂಚಿಲಾಗುತ್ತದೆ ಎಂದರು.

ಹುಲಿಕರೆ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಚೆಲವರಾಜು, ಮುಖಂಡ ಶ್ರೀನಿವಾಸ ಅಧಿಕಾರಿಗಳಿಗೆ ದಾಖಲೆ ಸಮೇತ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಮಾಜಿ ಸದಸ್ಯೆ ರೇಶ್ಮಾಬಾನು ಸ್ಥಳಕ್ಕಾಗಮಿಸಿ ನಮ್ಮ ಮುಸ್ಲಿಂ ಸಮುದಾಯಕ್ಕೆ ಸೇರಿದ ಜಾಗ ಕೂಡ ಖಾಸಗಿ ವ್ಯಕ್ತಿಯ ಹೆಸರಿಗೆ ಮಾಡಿರುವುದು ಕಂಡು ಬಂದಿದೆ ಎಂದು ದೂರಿದರು.

ರಾಜ ಸ್ವ ನೀರಿಕ್ಷಕ ಪ್ರಸನ್ನ, ಗ್ರಾಮ ಲೆಕ್ಕಾಧಿಕಾರಿ ರಘು ಸೇರಿದಂತೆ, ಹುಲಿಕರೆ ಗ್ರಾಮಸ್ಥರು, ಮುಖಂಡರು ಇತರರು ಇದ್ದರು.

Continue Reading

Mandya

ಕಾನೂನಾತ್ಮಕ ಸಮಸ್ಯೆಗಳಿಗೆ ಸ್ಥಳದಲ್ಲಿ ಪರಿಹಾರದ ಭರವಸೆ : ಸಚಿವ ಎನ್. ಚಲುವರಾಯಸ್ವಾಮಿ

Published

on

ನಾಗಮಂಗಲ : ಜನಸಾಮಾನ್ಯರಿಗೆ ತಮ್ಮ ಸ್ಥಳದಲ್ಲಿ ಕಾನೂನಾತ್ಮಕ ಸಮಸ್ಯೆಗಳನ್ನು ಪರಿಹರಿಸಲು ಜನಸ್ಪಂದನಾ ಕಾರ್ಯಕ್ರಮ ಸೂಕ್ತವಾಗಿದೆ ಎಂದು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ತಿಳಿಸಿದರು.

ತಾಲೂಕಿನ ದೇವಲಾಪುರ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಯೋಜನೆ ಮಾಡಿದ್ದ ಜನಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರು ನಿಮ್ಮೂರಿನ ಸಮಸ್ಯೆಗಳನ್ನು ತಿಳಿಸಿದರೆ ಕಾನೂನಾತ್ಮಕವಾಗಿ ಸ್ಥಳದಲ್ಲೇ ಪರಿಹಾರ ನೀಡುವ ಜೊತೆಗೆ ನ್ಯಾಯ ದೊರಕಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಸಾಮಾಜಿಕ ಸಮಾನತೆ ನಿರ್ಮಾಣದ ಹಾದಿಯಲ್ಲಿ ಗ್ಯಾರಂಟಿ ಯೋಜನೆಗಳ ಅಭಿವೃದ್ಧಿ ಜನರ ಆರ್ಥಿಕ ಅಭಿವೃದ್ಧಿಗೆ ನೇರ ಪರಿಹಾರ ಒದಗಿಸುತ್ತಿದ್ದು, ಸರ್ಕಾರದ ಈ ಮಹತ್ವಕಾಂಕ್ಷೆ ಯೋಜನೆ ಬಡಜನರ ಆಶಾಕಿರಣವಾಗಿದೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಸಚಿವರು ಭೀಮನಹಳ್ಳಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಜನಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಆರ್.ನಂದಿನಿ, ತಹಸೀಲ್ದಾರ್ ಆದರ್ಶ, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ಮುಡ್ಲಿಗೌಡ, ತಾಲೂಕು ಕಾರ್ಯನಿರ್ವಹಣಾಧಿಕಾರಿ ಸತೀಶ್. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್, ಸಚಿನ್ ಚೆಲುವರಾಯಸ್ವಾಮಿ, ಸುನಿಲ್, ಲಕ್ಷ್ಮಿಕಾಂತ್ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading

Mandya

ಬಾಲ್ಯ ವಿವಾಹ ತಡೆಗಟ್ಟುವ ಕುರಿತು ಶಾಲಾ ಮಕ್ಕಳಿಗೆ ಅರಿವು

Published

on

ಶ್ರೀರಂಗಪಟ್ಟಣ : ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದ್ದು, ಈ ಬಗ್ಗೆ ಮಕ್ಕಳು ಪೋಷಕರಿಗೆ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಬೇಕು. ವಿದ್ಯಾರ್ಥಿಗಳು ಈ ಬಗ್ಗೆ ಹೆಚ್ಚಿನ ಗಮನಹರಿಸಿದರೆ ತಾಲ್ಲೂಕಿನಲ್ಲಿ ನಡೆಯುವ ಬಾಲ್ಯ ವಿವಾಹ ಪ್ರಕರಣಗಳನ್ನು ತಡೆಯಬಹುದಾಗಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ್ ಸಲಹೆ ನೀಡಿದರು.

ತಾಲೂಕಿನ ಬಲ್ಲೆನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ಬಲ್ಲೆನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಆಯೋಜಿಸಿದ್ದ “ಬಾಲ್ಯ ವಿವಾಹ ತಡೆಗಟ್ಟುವ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ” ಉದ್ದೇಶಿಸಿ ಮಾತನಾಡಿದರು.

ಬಾಲ್ಯ ವಿವಾಹ ಹಾಗೂ ಪೋಕ್ಸೋ ಪ್ರಕರಣಗಳು ತುಂಬಾ ಗಂಭೀರ ಸ್ವರೂಪದಾಗಿದ್ದು, ತಂದೆ, ತಾಯಿ, ಸಂಬಂಧಿಕರ ಅಭಿಪ್ರಾಯದ ಮೇರೆಗೆ ಬಾಲ್ಯ ವಿವಾಹ ನಡೆಯುತ್ತವೆ. ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಬಾಲ್ಯ ವಿವಾಹದಿಂದಾಗುವ ಗಂಭೀರ ಪರಿಣಾಮಗಳ ಬಗ್ಗೆ ಹಾಗೂ ಕಾಯ್ದೆ ಬಗ್ಗೆ ತಿಳುವಳಿಕೆ ನೀಡಿದಾಗ ಮಾತ್ರ ಬಾಲ್ಯ ವಿವಾಹ ತಡೆಗಟ್ಟಲು ಸಾಧ್ಯ. ಬಾಲ್ಯ ವಿವಾಹದಿಂದ ಹೆಣ್ಣು ಮಕ್ಕಳ ಮೇಲೆ ಮಾನಸಿಕವಾಗಿ ದೈಹಿಕವಾಗಿ ಗಂಭೀರ ಪರಿಣಾಮ ಬೀರಿ ಜೀವನ ಹಾಳಾಗುವಂತೆ ಮಾಡುತ್ತದೆ. ಇಂತಹ ಪ್ರಕರಣಗಳು ಕಂಡು ಬಂದರೆ 1098/112 ಸಹಾಯವಾಣಿ ಮೂಲಕ ವಿಷಯಗಳನ್ನು ಅಧಿಕಾರಿಗಳಿಗೆ ತಿಳಿಸಬೇಕು ಎಂದರು.

ಬಾಲ್ಯ ವಿವಾಹ ಕಂಡುಬಂದಲ್ಲಿ ಬಾಲ್ಯ ವಿವಾಹಕ್ಕೆ ಪ್ರೋತ್ಸಾಹ ನೀಡುವವರು ಸೇರಿದಂತೆ ಮಗುವಿನ ಪೋಷಕರಿಗೆ,ಮಗುವಿನ ಜವಾಬ್ದಾರಿ ಹೊತ್ತವರಿಗೆ, ಭಾಗವಹಿಸಿದ ಇತರರ ವಿರುದ್ಧ ಪ್ರಕರಣ ದಾಖಲಿಸುತ್ತಾರೆ. ಆದ್ದರಿಂದ ಮಕ್ಕಳು ಬಾಲ್ಯ ವಿವಾಹಕ್ಕೆ ಒಳಗಾಗದೆ ಸಂಪೂರ್ಣ ಶಿಕ್ಷಣ ಪಡೆಯಬೇಕು.ಬಾಲ್ಯ ವಿವಾಹವಾದಲ್ಲಿ ಸಣ್ಣ ವಯಸ್ಸಿನಲ್ಲೇ ಗರ್ಭಿಣಿಯಾಗಿ ಕಡಿಮೆ ತೂಕದ ಮಗ ಮಗುವಿನ ಜನನ,ತಾಯಿ ಮರಣ, ಶಿಶು ಮರಣ, ಬುದ್ಧಿಮಾಂದ್ಯತೆ ಮಗು ಹುಟ್ಟುವ ಸಾಧ್ಯತೆ ಇದೆ. ಜೊತೆಗೆ ವಯಸ್ಸಿಗೆ ಮೀರಿದ ಜವಾಬ್ದಾರಿ ಹೊರಿಸಿದಂತಾಗುತ್ತದೆ. ದೈಹಿಕ ಬೆಳವಣಿಗೆಗೆ ಕುಂಠಿತವಾಗುತ್ತದೆ ಎಂದು ಹೇಳಿದರು.

ರಕ್ತ ಹೀನತೆ ಉಂಟಾಗಿ ಕಡಿಮೆ ತೂಕದ ಮಗುವಿನ ಜನನದ ಸಾಧ್ಯತೆ ಇದೆ ಹಾಗೆಯೇ ಗರ್ಭ ಚೀಲಕ್ಕೆ ಪೆಟ್ಟು ಬೀಳುವ ಕಾರಣ ಎಳೆಯ ವಯಸ್ಸಿನಲ್ಲಿ ಗರ್ಭಕೋಶ ತೆಗೆಯುವ ಸಂದರ್ಭ ಒದಗುತ್ತದೆ. ಎಳೆವಯಸ್ಸಿನಲ್ಲಿ ಮುಪ್ಪಾದಂತೆ ಕಾಣುತ್ತಾರೆ. ಭಯ ಭೀತ ವಾತಾವರಣದಲ್ಲಿ ಬದುಕುತ್ತಾರೆ ಹಾಗಾಗಿ ಎಲ್ಲರೂ ಸೇರಿ ಈ ಬಾಲ್ಯ ವಿವಾಹವನ್ನು ತಡೆಗಟ್ಟಿ ಬಾಲ್ಯ ವಿವಾಹ ಮುಕ್ತ ಶ್ರೀರಂಗಪಟ್ಟಣ ತಾಲೂಕನ್ನಾಗಿ ಘೋಷಿಸಲು ನಾವೆಲ್ಲರೂ ಸನ್ನದ್ಧರಾಗೋಣ ಎಂದರು.

ನಂತರ ಬಾಲ್ಯ ವಿವಾಹ ತಡೆ ಕುರಿತು ಮಕ್ಕಳಿಂದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಸೆಲ್ವಿ ಎಂ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಪದ್ಮ,ಆಶಾ ಕಾರ್ಯಕರ್ತೆ ಸುಗುಣ ಹಾಗೂ ಸಹ ಶಿಕ್ಷಕರು, ಶಾಲಾ ಮಕ್ಕಳು ಇದ್ದರು.

Continue Reading

Trending

error: Content is protected !!