Connect with us

Mandya

ವೈಯಕ್ತಿಕ ಪ್ರತಿಷ್ಠೆಗಿಂತ ಬದ್ಧತೆ ಹಾಗೂ ಅಭಿವೃದ್ಧಿಯ ಮೇಲೆ ಚುನಾವಣೆ: ಎನ್.ಚಲುವರಾಯಸ್ವಾಮಿ

Published

on

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ವೆಂಕಟರಮಣಗೌಡ(ಸ್ಟಾರ್ ಚಂದ್ರು) ಸ್ಪರ್ಧೆಯಲ್ಲ. ಚಲುವರಾಯಸ್ವಾಮಿ ಮತ್ತು ಕುಮಾರಸ್ವಾಮಿ ನಡುವಿನ ಸ್ಪರ್ಧೆ ಎಂದು ಹೇಳುವವರಿದ್ದಾರೆ.

ಯಾರು ಏನು ಬೇಕಾದರೂ ಮಾತನಾಡಿಕೊಳ್ಳಲಿ. ಇದು ‘ಸ್ವಾಮಿ’ಗಳ ನಡುವಿನ ಸ್ಪರ್ಧೆಯಲ್ಲ. ವೈಯಕ್ತಿಕ ಪ್ರತಿಷ್ಠೆಗಿಂತ ಬದ್ಧತೆ ಹಾಗೂ ಅಭಿವೃದ್ಧಿಯ ಮೇಲೆ ಚುನಾವಣೆ ನಡೆಯುತ್ತದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಂಡ್ಯದ ಜನ ಭಾವನೆಗಳಿಂದ ದೂರ. ಕುವೆಂಪು ತತ್ವ ಅನುಸರಿಸುವ ಇವರು ಧರ್ಮ ಜಾತಿ ಭಾವನೆ ಬೆಳೆಸಿಕೊಳ್ಳುವುದಿಲ್ಲ. ಅವರು ಭಾವನಾತ್ಮಕ ವಿಷಯಗಳನ್ನು ತಂದರೂ ಯಶಸ್ವಿಯಾಗುವುದಿಲ್ಲ.

ನಮ್ಮ ಜನ ಖಂಡಿತ ನಮಗೆ ಆಶೀರ್ವಾದ ಮಾಡುತ್ತಾರೆ. ಹೆಚ್ಚಿನ ಬಹುಮತ ಪಡೆದು ಜಯ ಸಾಧಿಸುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.


ಸ್ಟಾರ್ ಚಂದ್ರು ಏ.೧ ಕ್ಕೆ ನಾಮಪತ್ರ ಸಲ್ಲಿಕೆ
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ವೆಂಕಟರಮಣಗೌಡ (ಸ್ಟಾರ್ ಚಂದ್ರು) ಏಪ್ರಿಲ್ ೧ ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.

ಅಂದು ಬೆಳಿಗ್ಗೆ ೯:೩೦ರಿಂದ ೧೦ ಗಂಟೆಯೊಳಗೆ ನಗರದ ಕಾಳಿಕಾಂಬ ದೇವಾಲಯದ ಸನ್ನಿಧಿಯಿಂದ ಹೊರಟು ಮೆರವಣಿಗೆಯ ಮೂಲಕ ಸಾಗಿಬಂದು ಸುಮಾರು ೧ ಗಂಟೆಯ ವೇಳೆಗೆ ಜಿಲ್ಲಾಧಿಕಾರಿ ಕಚೇರಿ ಆವರಣವನ್ನು ತಲುಪಿ ನಾಮಪತ್ರ ಸಲ್ಲಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ನಾಯಕರಾದ ಸುರ್ಜೇವಾಲಾ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಮಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಎಂಟು ಕ್ಷೇತ್ರಗಳ ಮುಖಂಡರು, ಕಾರ್ಯಕರ್ತರು ಏಪ್ರಿಲ್ ೧ ರ ಸೋಮವಾರ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಮ್ಮ ಅಭ್ಯರ್ಥಿಯನ್ನು ಆಶೀರ್ವದಿಸಬೇಕೆಂದು ಮನವಿ ಮಾಡಿದರು.ಸುಮಾರು ೧ ಲಕ್ಷ ಜನ ಸೇರುವ ಸಾಧ್ಯತೆ ಇದೆ ಎಂದು ತಿಳಿಸಿದರು.

ನಮ್ಮ ಅಭ್ಯರ್ಥಿ ವೆಂಕಟರಮಣೇಗೌಡ,ನಾವು ಸ್ವತಃ ಮಂಡ್ಯ ಜಿಲ್ಲೆಯವರು. ಹುಟ್ಟಿದ್ದು, ಬೆಳೆದದ್ದು, ಅಂತ್ಯವಾಗುವುದು ಇಲ್ಲೇ. ಏಳು ಜನ ಶಾಸಕರು, ಇಬ್ಬರು ವಿಧಾನ ಪರಿಷತ್ ಸದಸ್ಯರು ಹಾಗೂ ಮುಂಬರುವ ಚುನಾವಣೆಯಲ್ಲಿ ಮರಿತಿಬ್ಬೇಗೌಡರು ಗೆಲ್ಲುತ್ತಾರೆ. ಇವರ ನಡುವೆ ಕೆಲಸ ಮಾಡಲು ನಮ್ಮವರೇ ಸಂಸದರಾದರೆ ಹೆಚ್ಚು ಅನುಕೂಲ. ಮುಖ್ಯಮಂತ್ರಿ,ಉಪಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಸರಿಯಾಗುತ್ತದೆ. ಅಭ್ಯರ್ಥಿಗೆ ಜಿಲ್ಲೆಯ ಬಗ್ಗೆ ಬದ್ಧತೆ ಇದೆ. ಎಲ್ಲರ ಜೊತೆ ಬೆರೆಯುವ ಸರಳ ವ್ಯಕ್ತಿತ್ವದವರಾಗಿದ್ದಾರೆ. ಉದ್ಯಮಿಯಾಗಿ ಸಮಾಜಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಳ್ಳುವ ವಿಶ್ವಾಸವಿದೆ ಎಂದರು.

ನಮ್ಮ ಸ್ನೇಹಿತರು ಇದು ಧರ್ಮಯುದ್ಧ ಎಂದಿದ್ದಾರೆ. ಸತ್ಯಕ್ಕೆ ಮತ್ತು ಧರ್ಮಕ್ಕೆ ಜಯ ಎಂಬುದಕ್ಕೆ ನಮ್ಮದೂ ಸಹಮತ ಇದೆ. ಜಿಲ್ಲೆಯ ಜನರ ಆಶೀರ್ವಾದದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ನಾವು ಬಂದ ಮೇಲೆ ಕಾರ್ಯಕ್ರಮಗಳನ್ನು ನೀಡಿದ್ದೇವೆ.ಜಿಲ್ಲೆಯ ಅಭಿವೃದ್ಧಿ ಮಾಡಲು ಮುಂದಾಗಿದ್ದೇವೆ. ಚುನಾವಣೆಯಲ್ಲಿ ಏನೇನೋ ವಿಷಯಗಳು ಬರುವುದು ಸಹಜ. ಚುನಾವಣೆಗೆ ನಿಂತ ಎಲ್ಲರೂ ಗೆಲ್ಲುತ್ತೇವೆ ಎಂಬ ಭಾವನೆ ಇಟ್ಟುಕೊಂಡಿದ್ದಾರೆ ಅದು ಸಹಜ ಎಂದರು.

ಮಾಜಿ ಸಚಿವ ಕೆ.ಸಿ.ನಾರಾಯಣಗೌಡರು ಕಾಂಗ್ರೆಸ್‌ಗೆ ಬರ್ತೀನಿ ಅಂತ ಹೇಳಿದ್ದರು. ಈಗ ಬಿಜೆಪಿ ಜೆಡಿಎಸ್ ಗಾಳಕ್ಕೆ ಬಿದ್ದಿರಬಹುದು. ಬೇಡ ಎಂದು ಅವರ ಮನೆಗೆ ಹೋದರೆ ಬೆಲೆ ಇರುವುದಿಲ್ಲ. ಆದರೆ ಅವರ ಬೆಂಬಲಿಗರ ಶಕ್ತಿ ನಮಗೆ ದೊರೆಯುತ್ತದೆ ಎಂದರು.

ಲೋಕಸಭಾ ಸದಸ್ಯರಾದ ಸುಮಲತಾ ಅಂಬರೀಶ್ ಅವರು ಸಮರ್ಥವಾಗಿ ತಮ್ಮ ಕಾರ್ಯ ನಿರ್ವಹಿಸಿದ್ದಾರೆ ಏನು ಬೇಕಾದರೂ ತೀರ್ಮಾನ ತೆಗೆದುಕೊಳ್ಳಲು ಅವರು ಸ್ವತಂತ್ರರಾಗಿದ್ದಾರೆ. ಬಿಜೆಪಿಗೆ ಬಾಹ್ಯ ಬೆಂಬಲ ಕೊಟ್ಟಿದ್ದರು. ದೆಹಲಿ ನಾಯಕರು ಟಿಕೆಟ್ ಕೊಡುತ್ತಾರೆ ಎನ್ನುವ ಆತ್ಮವಿಶ್ವಾಸ ಇತ್ತು. ಟಿಕೆಟ್ ಸಿಗದ ಈ ಸಂದರ್ಭದಲ್ಲಿ ಅವರು ನಾಳೆ ಸಭೆ ಕರೆದಿದ್ದಾರೆ ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದರ ಬಗ್ಗೆ ನನಗೂ ಕುತೂಹಲ ಇದೆ. ನಾಳಿನ ಸಭೆಯ ತೀರ್ಮಾನ ತಿಳಿದ ನಂತರ ಮಾತನಾಡುತ್ತೇನೆ ಎಂದರು.

ಸ್ಥಳೀಯತೆ ವಿಷಯ ಮುನ್ನೆಲೆಗೆ ಬರುವುದಿಲ್ಲ
ಲೋಕಸಭಾ ಚುನಾವಣೆಗೆ ದೇಶದ ಯಾರು, ಯಾವ ಪ್ರಜೆ ಎಲ್ಲಿ ಬೇಕಾದರೂ ನಿಲ್ಲಬಹುದು. ಹಿಂದೆ ಚಿಕ್ಕಬಳ್ಳಾಪುರ, ರಾಮನಗರ,ಚನ್ನಪಟ್ಟಣ, ಮಧುಗಿರಿ, ಕನಕಪುರ ಎಲ್ಲಾ ಕಡೆ ಅವರ ಕುಟುಂಬದವರು ಹೋಗಿ ಬಂದಿದ್ದಾರೆ. ಒಂದು ಹಂತದಲ್ಲಿ ದೂರದ ಹುಬ್ಬಳ್ಳಿಯಲ್ಲಿ ಮನೆಯನ್ನೂ ಸಹ ಮಾಡಿದ್ದರು. ಆದ್ದರಿಂದ ಮಂಡ್ಯದ ಹೊರಗಿನವರು ಎನ್ನುವ ವಿಷಯವನ್ನು ಮುನ್ನೆಲೆಗೆ ತರುವುದಿಲ್ಲ ಎಂದರು.

ಕಳೆದ ಒಂದು ತಿಂಗಳಿನಿಂದ ಅಭ್ಯರ್ಥಿ ಘೋಷಣೆ ಮಾಡಿ ಪ್ರಚಾರ ಪ್ರಾರಂಭ ಮಾಡಿದ್ದೇವೆ. ಈಗಾಗಲೇ ಪ್ರತಿ ತಾಲೂಕಿನಲ್ಲಿ ಎರಡೆರಡು ಬಾರಿ ಶಾಸಕರು, ಪದಾಧಿಕಾರಿಗಳ ಸಮ್ಮುಖದಲ್ಲಿ ಸಭೆಗಳನ್ನು ಮಾಡಲಾಗಿದೆ. ಗ್ರಾಮ ಪಂಚಾಯಿತಿ, ಹೋಬಳಿ ಮಟ್ಟದಲೂ ಪ್ರಚಾರ ಕೈಗೊಳ್ಳಲಾಗಿದೆ. ಚುನಾವಣೆ ಅಧಿಕೃತವಾಗಿ ಘೋಷಣೆಯಾದ ನಂತರ ಲೋಕಸಭಾ ವ್ಯಾಪ್ತಿಯ ೮ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಆಶೀರ್ವಾದ ಮಾಡಿ-ಸ್ಟಾರ್ ಚಂದ್ರು
ಅಭ್ಯರ್ಥಿ ವೆಂಕಟರಮಣಗೌಡ ಮಾತನಾಡಿ ಮಗು ಹುಟ್ಟಿದ ತಕ್ಷಣ ಮಾತು ಕಲಿಯುವುದಿಲ್ಲ. ಕಡಿಮೆ ಮಾತನಾಡುವ ನಾನು ಮುಂದಿನ ದಿನಗಳಲ್ಲಿ ಎಲ್ಲಾ ವಿಷಯಗಳನ್ನು ಕಲಿಯುತ್ತೇನೆ. ಜನತೆ ಏಪ್ರಿಲ್ ೧ ರಂದು ಬಂದು ನನಗೆ ಆಶೀರ್ವಾದ ಮಾಡಬೇಕೆಂದು ಕೋರಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಪಿ.ರವಿಕುಮಾರ್ ಗಣಿಗ, ಜಿಲ್ಲಾ ಕಾಂಗ್ರೆಸ್ ಹಾಗೂ ಮೈ ಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಕಾಂಗ್ರೆಸ್ ಕಾರ್ಯಾಧ್ಯಕ್ಷ ಚಿದಂಬರ್, ಉಪಾಧ್ಯಕ್ಷ ಸುರೇಶ್, ವಿಜಯಲಕ್ಷ್ಮಿ ರಘುನಂದನ್ ಹಾಜರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Mandya

ಅಕ್ರಮವಾಗಿ ಸ್ಟೋನ್ ಕ್ರಷರ್ – ವಕೀಲ ಹೃತಿಕ್ ಗೌಡ ದೂರು

Published

on

ಮಂಡ್ಯ: ಜಿಲ್ಲೆಯ ಕಾಳೇನಹಳ್ಳಿ ಗ್ರಾಮದಲ್ಲಿ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಪಿ.ಸಿ.ನರಸಿಂಹ ಗೌಡ ಎಂಬಾತ ಅಕ್ರಮವಾಗಿ ಸ್ಟೋನ್ ಕ್ರಷರ್ ನಡೆಸುತ್ತಿದ್ದಾರೆ ಎಂದು ವಕೀಲ ಕೆ ವಿ.ಹೃತಿಕ್ ಗೌಡ ದೂರಿದರು.
ಭಾನುವಾರ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು, ಶರತ್ ಕುಮಾರ್ ಎಂಬುವವರು ಕಾಳೇನಹಳ್ಳಿ ಗ್ರಾಮದ ಸರ್ವೆ. ನಂಬರ್ 30/5 ರಲ್ಲಿ ಕುರಿ ಮತ್ತು ಮೇಕೆ ಫಾರಂ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ನರಸಿಂಹೇಗೌಡ ಎಂಬಾತ ಅಕ್ರಮವಾಗಿ ಸ್ಟೋನ್ ಕ್ರಷರ್ ನಡೆಸುತ್ತಿದ್ದು ಇದರಿಂದ ಬರುವ ಧೂಳಿನಿಂದ ಹಲವಾರು ಮೇಕೆಗಳು ಮೃತಪಟ್ಟಿವೆ. ಅಲ್ಲದೆ ಕೃಷಿಗಳ ಮೇಲೆ ಕ್ರಷರ್ ಧೂಳಿನ ಪ್ರಭಾವ ಬೀರಿದ್ದು ಹೈನುಗಾರಿಕೆಗೂ ತೊಂದರೆ ಆಗುತ್ತಿದೆ ಎಂದು ದೂರಿದರು.

ಬೆಳೆಗಳ ಮೇಲೆ ಧೂಳು ಬೀಳುತ್ತಿರುವುದರಿಂದ ಬೆಳೆಗಳು ನಾಶವಾಗುತ್ತಿದೆ. ಹಸುಗಳಿಗೆ ಮತ್ತು ಕುರಿ ಹಾಗೂ ಮೇಕೆಗಳಿಗೆ ಮೇವು ಸಿಗದೆ ಪ್ರಾಣಿಗಳು ಪರಿತಪಿಸುವಂತಾಗಿದೆ ಎಂದು ತಿಳಿಸಿದರು.

ಈ ವಿಚಾರವಾಗಿ ಕುರಿ ಫಾರಂ ನಡೆಸುತ್ತಿರುವ ಶರತ್ ಕುಮಾರ್ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದು ನ್ಯಾಯಾಲಯವು ಮೇ 18, 2024ರಂದು ಸ್ಟೋನ್ ಕ್ರಷರ್ ನಡೆಸದಂತೆ ತಡೆಯಾಜ್ಞೆ ನೀಡಿದೆ. ಆದರೂ ಕೂಡ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಶನಿವಾರದಿಂದ ಕ್ರಶರ್ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ಈ ಬಗ್ಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಗಣಿ ಇಲಾಖೆ ಅಧಿಕಾರಿಗಳು ಸೇರಿದಂತೆ ಸಂಬಂಧ ಪಟ್ಟ ಇಲಾಖೆಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಪಾದಿಸಿದರು.

ಆದ್ದರಿಂದ ಕೂಡಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಂಡು ರೈತರನ್ನು ರಕ್ಷಿಸುವಂತೆ ಅವರು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ವಕೀಲರಾದ ವಿನಯ್ ಕುಮಾರ್, ಸಮಾಜಸೇವಕ ವೀರಣ್ಣಗೌಡ, ಶಾಂತ ಕುಮಾರ್, ರೈತ ಮುಖಂಡ ವಿಶ್ವ, ಕುರಿ ಮತ್ತು ಮೇಕೆ ಫಾರಂ ಮಾಲೀಕ ಶರತ್ ಕುಮಾರ್ ಉಪಸ್ಥಿತರಿದ್ದರು.

Continue Reading

Mandya

ಸಮರ್ಥ ಆಡಳಿತ ವ್ಯವಸ್ಥೆ ಬಗ್ಗೆ ದೇಶಕ್ಕೆ ಪರಿಚಯಿಸಿದ್ದು ನಾಲ್ವಡಿ : ಈ.ಸಿ.ನಿಂಗರಾಜ್ ಗೌಡ ಬಣ್ಣನೆ

Published

on

ಮಂಡ್ಯ : ಒಬ್ಬ ಸಮರ್ಥ ಆಡಳಿತಗಾರ ಹೇಗೆ ಆಡಳಿತವನ್ನು ನಡೆಸಬೇಕೆಂದು ಇಡೀ ದೇಶಕ್ಕೆ ಪರಿಚಯಿಸಿ ಕೊಟ್ಟ ಮಹಾನ್ ನಾಯಕ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಆಗಿದ್ದಾರೆ. ಅವರು ಪ್ರತಿಯೊಬ್ಬರಿಗೂ ದಾರಿದೀಪ ಎಂದು ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ನ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್ ಗೌಡ ಶ್ಲಾಘಿಸಿದರು.

ಡಾ.ಜೀಶಂಪ ಸಾಹಿತ್ಯ ವೇದಿಕೆ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಫಿಲಂಸ್ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ನಗರದ ಗಾಂಧಿ ಭವನದಲ್ಲಿ ನಡೆದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ, 6ನೇ ಕನ್ನಡ ಅಕ್ಷರ ಜಾತ್ರೆ, ವಿವಿಧ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವರ್ಷಪೂರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಮರಣೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಾಂದಿ ಹಾಡಿದವರು ಒಡೆಯರ್. ರಾಜ್ಯದ ಶಿಕ್ಷಣ, ಸಾಹಿತ್ಯ, ಸಂಸ್ಕೃತಿ , ಉದ್ಯೋಗ, ಕೃಷಿ, ಕೈಗಾರಿಕೆ, ಕಾರ್ಖಾನೆ, ನೀರಾವರಿ‌ ಅಭಿವೃದ್ಧಿಗೆ ಒಡೆಯರ್ ಅವರೇ ಕಾರಣೀಭೂತರು ಎಂದು ಬಣ್ಣಿಸಿದರು.

ಎಲ್ಲಾ ಕ್ಷೇತ್ರದಲ್ಲೂ ತಮ್ಮದೇ ಆದ ರೀತಿಯಲ್ಲಿ ಸಾಧನೆ ಮಾಡಿದ ನಾಲ್ವಡಿ ಕೃಷ್ಣರಾಜ ಒಡೆಯರ್, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ಸಕ್ಕರೆ ಕಾರ್ಖಾನೆ, ಕನ್ನಡ ಸಾಹಿತ್ಯ ಪರಿಷತ್ತು, ಒಕ್ಕಲಿಗ ಸಂಘ, ಜಲವಿದ್ಯುತ್, ಸೇರಿದಂತೆ ಹಲವು ಸಂಘ ಸಂಸ್ಥೆಗಳನ್ನು ಸ್ಥಾಪಿಸಿದರು. ಶೋಷಿತ, ಹಿಂದುಳಿದ ಸಮುದಾಯದ ಏಳ್ಗೆಗೆ ಶ್ರಮಿಸಿದವರು ಎಂದು ಶ್ಲಾಘಿಸಿದರು.

ಮಹನೀಯರ ಹೆಸರಿನ ಪ್ರಶಸ್ತಿಗಳನ್ನು ಪಡೆದಾಗ ಸಾಧಕರ ಗೌರವ ಹೆಚ್ಚಾಗುತ್ತದೆ. ಸಾಧಕರು ಮಹನೀಯರ ಪ್ರಶಸ್ತಿ ಪಡೆದಾಗ ಅವರ ಹೆಸರಿಗೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಹೆಜ್ಜೆ ಗುರುತು ಕೃತಿ ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಸಾಹಿತಿ ಡಾ.ಎಚ್.ಎಸ್.ಮುದ್ದೇಗೌಡ, ಮಂಡ್ಯ ಜಿಲ್ಲೆಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಘೋಷಣೆಯಾಗಿ ವರ್ಷ ಕಳೆದರೂ ಇನ್ನೂ ಸಹ ಸರ್ಕಾರ ಸಿದ್ದತೆಗೆ ಒಂದು ರೂಪಾಯಿ ಹಣ ಬಿಡುಗಡೆ ಮಾಡಿಲ್ಲ. ಜೊತೆಗೆ ದಿನಾಂಕವನ್ನೂ ನಿಗದಿ ಮಾಡಿಲ್ಲ. ಹೀಗಾದರೆ ಐದು ವರ್ಷಕೊಮ್ಮೆಯೂ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಮಾಡಲು ಸಾಧ್ಯವಾಗುವುದಿಲ್ಲ. ಕನ್ನಡದ ಬಗ್ಗೆ ರಾಜ್ಯ ಸರ್ಕಾರ ಇಷ್ಟೊಂದು ತಾತ್ಸಾರ ಮನೋಭಾವನೆ ವ್ಯಕ್ತಪಡಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಮ್ಮೇಳನಾಧ್ಯಕ್ಷರಾದ ಕವಿ ಹಾಗೂ ಖ್ಯಾತ ವೈದ್ಯ ಡಾ.ಚಂದ್ರಶೇಖರ್ ಮಾತನಾಡಿ, ಸಾಹಿತ್ಯದಲ್ಲಿ ಮೂರು ವಿಧಗಳಿವೆ. ಪ್ರಭೋದ, ಪ್ರಮೋದ, ಪ್ರಮಾದ ಸಾಹಿತ್ಯ ಗಳಿವೆ. ಪ್ರಭೋದ ಸಾಹಿತ್ಯಕ್ಕೆ ಸಾಹಿತ್ಯಾಸ್ತರು ಹೆಚ್ಚಿನ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.

ಟಿವಿ ಧಾರವಾಹಿಗಳಿಂದ ಸಾಹಿತ್ಯಕ್ಕೆ ಕಂಟಕ ಎದುರಾಗಿದೆ. ಮಹಿಳೆಯರು ಧಾರವಾಹಿಗಾಗಿ, ಊಟ, ನಿದ್ದೆ ಬಿಡುತ್ತಾರೆ. ಧಾರವಾಹಿಗಳಿಗೆ ಕೊಡುವಷ್ಟು ಆಸಕ್ತಿಯನ್ನು ಜನಸಾಮಾನ್ಯರು ಪುಸ್ತಕ ಓದಲು ಕೊಟ್ಟರೆ ಸಾಹಿತ್ಯ ಕ್ಷೇತ್ರ ಅಭಿವೃದ್ಧಿ ಆಗುತ್ತದೆ ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ, ಕನ್ನಡರತ್ನ ಪ್ರಶಸ್ತಿ ಹಾಗೂ ಕಾವ್ಯಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ರಾಜ್ಯ ಆರ್.ಟಿ.ಓ ನೌಕರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ಸಮಾಜ ಸೇವಕಿ ಕಾವೇರಮ್ಮಶೇಷಾದ್ರಿ, ಡಾ.ಜೀಶಂಪ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಸ್.ಕೃಷ್ಣ ಸ್ವರ್ಣಸಂದ್ರ, ಪ್ರಧಾನ ಕಾರ್ಯದರ್ಶಿ ಮಂಗಲ ಶಿವಣ್ಣ, ಉಪಾಧ್ಯಕ್ಷರಾದ ರಾಗಿಮುದ್ದನಹಳ್ಳಿ ನಾಗೇಶ್, ರೂಪಾ ಹೊಸಹಳ್ಳಿ, ಕವಿಗಳಾದ ಕೊತ್ತತ್ತಿ ರಾಜು, ಕೆ.ವಿ.ರಮೇಶ್ ಕಟ್ಟೇಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Continue Reading

Mandya

ಅಗ್ನಿ ಶಾಮಕದಳ ಅಧಿಕಾರಿಗಳಿಂದ ಅಣುಕು ಪ್ರದರ್ಶನ

Published

on

ಶ್ರೀರಂಗಪಟ್ಟಣ: ಪಟ್ಟಣದ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ ಆವರಣದಲ್ಲಿ ಸ್ಥಳೀಯ ಅಗ್ನಿ ಶಾಮಕ ಅಧಿಕಾರಿಗಳಿಂದ ಬೆಂಕಿ ನಂದಿಸುವ ಕುರಿತು ಅಣುಕು ಪ್ರದರ್ಶನ ಕಾರ್ಯಕ್ರಮ ಜರುಗಿತು.

ಆಕಸ್ಮಿಕವಾಗಿ ಆಸ್ಪತ್ರೆಯಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಬೆಂಕಿ ಅವಘಢ ಸಂಭವಿಸಿದಾಗ ಆಗುವ ದುರ್ಘಟನೆ ಹಾಗೂ ಅಪಾಯ ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಗ್ನಿ ಶಾಮಕ ಠಾಣಾಧಿಕಾರಿ ಅಂಬರೀಶ್.ಎನ್.ಯು ಮಾಹಿತಿ ನೀಡಿದರು.

ಅಗ್ನಿ ಅವಘಢಗಳ ಸಂದರ್ಭದಲ್ಲಿ ಅಗ್ನಿ ಶಾಮಕ ದಳ ಇಲಾಖೆಯಿಂದ ಕೈಗೊಳ್ಳುವ ಕ್ರಮಗಳು ಹಾಗೂ ಇಲಾಖೆ ಬಳಸುವ ಉಪಕರಣಗಳ ಬಗ್ಗೆ ಮಾಹಿತಿ ನೀಡಿದರು. ನಂತರ ಆಗ್ನಿ ಶಾಮಕ ದಳದ ಸಿಬ್ಬಂದಿಗಳು ಅಣುಕು ಪ್ರದರ್ಶನದ ಮೂಲಕ ತಾಲ್ಲೂಕಿನ ಎಲ್ಲಾ ವೈದ್ಯರು ಹಾಗೂ ಅಧಿಕಾರಿ ಸಿಬ್ಬಂದಿಗಳಿಗೆ ಅರಿವು ಮೂಡಿಸಿದರು.

ಸದರಿ ವೇಳೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಡಿ.ಟಿ.ಮಂಜುನಾಥ್ ಮಾತನಾಡಿ, ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಅಧಿಕಾರಿಗಳು ಆಕಸ್ಮಿಕ ಬೆಂಕಿ ಸಂಭವಿಸಿದ ಕಡೆ ತಕ್ಷಣ ಧಾವಿಸಿ ತಮ್ಮ ಜೀವದ ಹಂಗು ತೊರೆದು ರಕ್ಷಣೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವದು ಶ್ಲಾಘನೀಯ ಎಂದರು.

ಈ ವೇಳೆ ಮುಖ್ಯ ವೈದ್ಯಾಧಿಕಾರಿ ಡಾ.ಪಿ.ಮಾರುತಿ, ಸಹಾಯಕ ಠಾಣಾಧಿಕಾರಿ ಕೆ.ಪಿ.ಪರಮೇಶ್, ಹಾಗೂ ಸಿಬ್ಬಂದಿಗಳು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಮೋಹನ, ತಾಲ್ಲೂಕಿನ ಆರೋಗ್ಯ ಕೇಂದ್ರದ ಎಲ್ಲಾ ವೈದ್ಯಾಧಿಕಾರಿಗಳು, ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Continue Reading

Trending

error: Content is protected !!