Mysore
ಮುಂಬರುವ ದಿನಗಳಲ್ಲಿ ಬರ ಉಲ್ಬಣವಾಗಬಹುದು,ಕೂಡಲೇ ಕಾರ್ಯೋನ್ಮುಖರಾಗಿ – ಕೃಷ್ಣ ಭೈರೇಗೌಡ
ಸಿ.ಎಂ.ಜನತಾದರ್ಶನದಲ್ಲಿ ಕಂದಾಯ ಇಲಾಖೆಯ ದೂರುಗಳೇ ಜಾಸ್ತಿ
ನಕಾಶೆಯಲ್ಲಿರುವ ರಸ್ತೆ ಕೊಡಲಾಗದಿದ್ದರೆ ಸರ್ಕಾರ ಬೇಕಾ ?
ಸಿ.ಎಂ.ಮಾತೃ ಜಿಲ್ಲೆ ಎಂಬ ಅರಿವು ನಿಮಗಿರಲಿ
ಮೈಸೂರು: ಮುಂದಿನ ದಿನಗಳಲ್ಲಿ ಎದುರಾಗಹುದಾದ ಬರ ಪರಿಸ್ಥಿತಿ ನಿಭಾಯಿಸಲು ಕೂಡಲೇ ಕಾರ್ಯೋನ್ಮುಖರಾಗಿ,ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಸಿದ್ಧತೆಗಳನ್ನು ಮಾಡಿಕೊಳ್ಳಿ ಎಂದು ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಾದೇಶಿಕ ಆಯುಕ್ತರ ಕಚೇರಿ ಯಲ್ಲಿ ನಡೆದ ಮೈಸೂರು ಜಿಲ್ಲೆಯ ಕಂದಾಯ ಇಲಾಖೆಯ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು,ಬರಗಾಲ ಸಂಬಂಧ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು ಎರಡು ಬಾರಿ ಸಭೆ ಮುಂದೂಡಲಾಗಿದೆ ಹಾಗಾಗಿ ಮೊದಲ ಕಂತಿನ ಹಣವನ್ನು ರಾಜ್ಯ ಸರ್ಕಾರದಿಂದಲೇ ನೀಡಲು ಸಿ.ಎಂ. ನಿರ್ದೇಶನ ನೀಡಿದ್ದಾರೆ ಎಂದರು.
ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವಿನ ಲಭ್ಯತೆ ಬಗೆಗೆ ಖಾತರಿಪಡಿಸಿಕೊಳ್ಳಿ ,ಕಂದಾಯ ಇಲಾಖೆ ಜನರ ಸಮಸ್ಯೆಗಳ ನಿವಾರಣೆಗೆ ಮಂಚೂಣಿಯಲ್ಲಿರುವ ಇಲಾಖೆ ಆದರೆ ಕಂದಾಯ ಇಲಾಖೆ ಎಂದರೆ ವಿಳಂಬದ ಇಲಾಖೆ ಎಂಬಂತಾಗಿದೆ ಏಕೆಂದರೆ ಸಿ.ಎಂ.ಅವರು ಬೆಂಗಳೂರಿನಲ್ಲಿ ನಡೆಸುವ ಜನತಾದರ್ಶನಕ್ಕೆ ಬರುವ ದೂರುಗಳಲ್ಲಿ ಬಹುತೇಕ ಕಂದಾಯ ಇಲಾಖೆಯವೇ ಆಗಿರುತ್ತವೆ. ನೂರಾರು ಕಿಲೋಮೀಟರ್ ದೂರದಿಂದ ಬಂದು ಸಾರ್ವಜನಿಕರು ದೂರು ನೀಡುತ್ತಾರೆಂದರೆ ಡಿಸಿ,ತಹಶೀಲ್ದಾರರು ಏನು ಕೆಲಸ ಮಾಡುತ್ತೀರೆಂದು ನೀವೇ ಹೇಳಿ ಎಂದರು.
ನಕಾಶೆಯಲ್ಲಿರುವ ಕಾಲುದಾರಿ ಒತ್ತುವರಿ ಬಿಡಿಸಿಕೊಡಲು ತಮ್ಮಿಂದ ಆಗದಿದ್ದರೆ ಅದಕ್ಕೂ ಸಚಿವರು ಬರಬೇಕಾ,ಹಾಗಾದರೆ ತಮ್ಮ ಕೆಲಸವೇನು? ಮೊದಲು ಇಂತಹ ಮನೋಭಾವನೆಯಿಂದ ಹೊರಬನ್ನಿ ನಾವು ನೀವು ಕೂಡಿ ಕೆಲಸ ಮಾಡೋಣ ಎಂದರು.
ಜನರ ತೆರಿಗೆ ಹಣದಲ್ಲಿ ಜೀವನ ನಡೆಸುವ ನಾವು ನೀವು ಅವರ ಜೀವನ ಹೈರಾಣ ಮಾಡಬಾರದು
ಇ – ಆಫೀಸ್ ಅನುಷ್ಟಾನವಿಲ್ಲ : ಕಡತ ವಿಲೇವಾರಿಯಲ್ಲಿ ಪಾರದರ್ಶಕತೆ ಬರಲಿ ಎಂಬ ಉದ್ದೇಶದಿಂದ ಇ,ಆಪೀಸ್ ಜಾರಿ ಮಾಡಲು ಸೂಚಿಸಿದರೂ ಯಾರೊಬ್ಬರೂ ಅನುಷ್ಟಾನಕ್ಕೆ ತರುತ್ತಿಲ್ಲ ಸಬೂಬು ಹೇಳ್ತೀರಿ,ಸಬೂಬು ಹೇಳುವುದ ಬಿಟ್ಟು ಕೆಲಸ ಮಾಡಿ ಎಂದರು.
ಕಂದಾಯ ಇಲಾಖೆ ಎಲ್ಲಾ ಇಲಾಖೆಗಳಿಗೆ ಮಾತೃ ಇಲಾಖೆ ಆಗಿದೆ, ಸರ್ಕಾರದ ಸೌಲಭ್ಯ ತಲುಪಿಸುವಲ್ಲಿ ನಮ್ಮ ಜವಾಬ್ದಾರಿ
ಹೆಚ್ಚಿರುತ್ತದೆ, ನಮ್ಮ ಕೆಲಸ ಸರಿಯಾಗಿದ್ದರೆ ಇಲಾಖೆಗೂ ಸರ್ಕಾರಕ್ಕೂ ಒಳ್ಳೆಯ ಹೆಸರು ಬರುತ್ತದೆ ಎಂದರು.
ಬೆಳೆ ವಿಮೆ ತಂತ್ರಾಂಶದಲ್ಲಿ ಫಲಾನುಭವಿಗಳ ವಿವರ ಸರಿಯಾಗಿ ದಾಖಲಾಗಿಲ್ಲ, ತಮ್ಮ ಜಮೀನಿನಲ್ಲಿ ಬೆಳೆ ಇಡದೇ ಇರುವವರಿಗೂ ಪರಿಹಾರ ಪಾವತಿಯಾಗಿದೆ, ವ್ಯಕ್ತಿಯೋರ್ವರ ಪರಿವರ್ತಿತ ಭೂಮಿಗೂ ಪರಿಹಾರ ಬಂದಿದೆ ಹಾಗಾಗಿ ಹಣ ದುರುಪಯೋಗವಾಗದಂತೆ ಕ್ರಾಪ್ ಸರ್ವೆನಲ್ಲಿ ಇರುವವರಿಗೆ ಬೆಳೆ ವಿಮೆ ದೊರೆಯುವಂತೆ ನೋಡಿಕೊಳ್ಳಿ ಎಂದರು.
ರಾಘವೇಂದ್ರ ಸ್ವಾಮಿ ಮೇಲೆ ಆಣೆ : ಸಬ್ ರಿಜಿಸ್ಟ್ರಾರ್ ಕಛೇರಿ ಗಳಲ್ಲಿ ಡಬಲ್ ಪೇಮೆಂಟ್ ಕೇಳ್ತಾರೆ ಎಂಬ ದೂರುಗಳಿವೆ, ಸಬ್ ರಿಜಿಸ್ಟ್ರಾರ್ ರಾಘವೇಂದ್ರ ಸ್ವಾಮಿ ಆಣೆಗೂ ನನಗೆ ಗೊತ್ತಿಲ್ಲ ಎನ್ನುತ್ತಾರೆ, ಹಾಗಾದರೆ ಲಂಚ ಪಡೆಯುತ್ತಿರುವವರು ಯಾರು ಎಂದರು.
ಕಂದಾಯ ಗ್ರಾಮ : ತಾಂಡ,ಹಟ್ಟಿ,ಕ್ಯಾಂಪ್,ಹಾಡಿ ಹಾಗೂ ಕೊಪ್ಪಲುಗಳನ್ನು ಗ್ರಾಮಗಳಾಗಿ ಪರಿವರ್ತಿಸಲು 2017 ರಲ್ಲೇ ಕಾನೂನು ಮಾಡಲಾಗಿದೆ ಈಗಾಗಲೇ 1 ಸಾವಿರ ಗ್ರಾಮಗಳು ಕಂದಾಯ ಗ್ರಾಮಗಳಾಗಿದ್ದು, ಮೈಸೂರಿನಲ್ಲಿಯೂ ಚುರುಕುಗೊಳ್ಳಬೇಕು ಹಾಗೂ ತಕರಾರು ಅರ್ಜಿಗಳನ್ನ ಪರಿಗಣಿಸಬೇಡಿ ಎಂದರು.
ಸ್ಮಶಾನಕ್ಕೆ ಭೂಮಿ : ಸ್ಮಶಾನಕ್ಕೆ ಭೂಮಿ ಖರೀದಿಸಲು ಹಣ ಇದ್ದು ಕಾನೂನಿನ ಮಿತಿಯೊಳಗೆ ಖರೀದಿ ಮಾಡಬಹುದು, ಒಂದು ವೇಳೆ ದರ ಜಾಸ್ತಿ ಇದ್ದಲ್ಲಿ ದೂರದಲ್ಲಿ ಭೂಮಿ ಖರೀದಿಸಬಹುದೆಂದರು.
ಗ್ರಾಮ ಲೆಕ್ಕಿಗರನ್ನು ಗ್ರಾ.ಪಂ. ಕಛೇರಿಯಲ್ಲಿ ಲಭ್ಯವಿರುವಂತೆ ಸರ್ಕಾರ ವ್ಯವಸ್ಥೆ ಮಾಡಬೇಕೆಂದ ಶಾಸಕ ಜಿ.ಟಿ.ದೇವೇಗೌಡರ ಮನವಿಗೆ ಪ್ರತಿಕ್ರಿಯಿಸಿದ ಸಚಿವರು, ಈ ಹಿಂದೆಯೇ ಈ ಬಗೆಗೆ ಚರ್ಚೆ ಆಗಿದ್ದು ಜಾರಿಮಾಡಲಾಗುವುದೆಂದರು.
ಡಿಜಿಟಲ್ ಸಾಗುವಳಿ ಚೀಟಿ : ನಕಲಿ ಸಾಗುವಳಿ ಚೀಟಿ ತಡೆಗಟ್ಟಲು ಡಿಜಿಟಲ್ ಸಾಗುವಳಿ ನೀಡಲು ತೀರ್ಮಾನಿಸಲಾಗಿದೆ,ಸಾಗುವಳಿ ಚೀಟಿ ನೀಡುವಾಗಲೇ ಪೋಡಿ,ದುರಸ್ತು ಮಾಡಲಾಗುವುದೆಂದರು.
ಮೈಸೂರು ಜಿಲ್ಲೆಯಲ್ಲಿ ಜಮೀನು ಮಂಜೂರಿಯ 94ಸಿ ಅಡಿ 7800 ಅರ್ಜಿಗಳು ವಿಲೇವಾರಿ ಆಗಿವೆ 420 ಅರ್ಜಿ ಗಳು ಬಾಕಿ ಇದ್ದು ಶೀಘ್ರವಾಗಿ ಅವುಗಳನ್ನು ವಲೇವಾರಿ ಮಾಡಿ ಎಂದರು.
ಪೌತಿ ಖಾತೆ ಅಭಿಯಾನ ಚುರುಕುಗೊಳಿಸಿ ಎಂದರು.
ಸಭೆಯಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ,ಹರೀಶ್ ಗೌಡ,ಮಂಜೇಗೌಡ,ಪ್ರಾದೇಶಿಕ ಆಯುಕ್ತರಾದ ಜೆ.ಸಿ.ಪ್ರಕಾಶ್,ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ,ಅಪರ ಜಿಲ್ಲಾಧಿಕಾರಿ ಲೋಕನಾಥ್, ಕಂದಾಯ ಇಲಾಖೆಯ ಅಧಿಕಾರಿಗಳು ಇದ್ದರು.
Mysore
ಜಾತಿ ಬೇಧಗಳನ್ನು ತೊರೆದು ಬೆಳಕನ್ನು ತರುವ ಕಾರ್ಯವನ್ನು ವೇಮನ ಮಾಡಿದ್ದಾರೆ: ಸಿ.ಎನ್ ಮಂಜೇಗೌಡ
ಮೈಸೂರು: ಸಮಾಜದ ಪರಿವರ್ತನೆಗೆ ತಮ್ಮ ವಿಚಾರಧಾರೆಗಳ ಮೂಲಕ ಬೆಳಕ್ಕನ್ನು ಚೆಲ್ಲಿರುವ ವೇಮನ ಅವರ ಜಯಂತಿಯನ್ನು ನಾನು ಬಹಳ ಸಂತೋಷದಿಂದ ಉದ್ಘಾಟನೆ ಮಾಡುತ್ತಿದ್ದೇನೆ ಎಂದು ವಿಧಾನ ಪರಿಷತ್ ಶಾಸಕರಾದ ಸಿ.ಎನ್. ಮಂಜೇಗೌಡ ಅವರು ಹೇಳಿದರು.
ಇಂದು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕರ್ನಾಟಕ ಕಲಾಮಂದಿರ ಆವರಣದ ಕಿರುರಂಗಮಂದಿರಲ್ಲಿ ಹಮ್ಮಿಕೊಂಡಿದ್ದ, ವೇಮನ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜವನ್ನು ಒಳ್ಳೆಯಾದರಿಗೆ ತರುವಂತಹ ಕೆಲಸವನ್ನು ವೇಮನ ಅವರು ಮಾಡಿದ್ದಾರೆ. ಜಾತಿ ಬೇಧಗಳನ್ನು ತೊರೆದು ಕತ್ತಲನ್ನು ಬೆಳಗಿಸಿ, ಬೆಳಕನ್ನು ತರುವಂತಹ ಕಾರ್ಯವನ್ನು ವೇಮನ ಅವರು ಮಾಡಿದ್ದಾರೆ ಎಂದು ಹೇಳಿದರು.
ಪುಸ್ತಕದ ಮೂಲಕ ಎಲ್ಲಾ ರೀತಿಯ ವಿಚಾರ ಧಾರೆಗಳನ್ನು ನೀಡುವುದರ ಮೂಲಕ ಸಮಾಜವನ್ನು ಪರಿವರ್ತನೆ ಮಾಡುವಂತಹ ಕೆಲಸವನ್ನು ಮಾಡಿದ್ದಾರೆ ಎಂದರು.
ಮೈಸೂರು ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಪಿ. ಶಿವರಾಜು ಅವರು ಮಾತನಾಡಿ ಮಹಾಯೋಗಿ ವೇಮನ ಅವರು ನಮ್ಮ ಇಡೀ ದೇಶಕ್ಕೆ ನೀಡಿರುವಂತಹ ಆದರ್ಶಗಳು ಬಹಳ ಸತ್ಯವಾಗಿವೆ ಇಂತಹ ಮಹಾನ್ ವ್ಯಕ್ತಿಗಳ ಜಯಂತಿಯ ಕಾರ್ಯಕ್ರಮವನ್ನು ಆಚರಿಸುತ್ತಾ ಇರುವುದು ಸಂತೋಷವನ್ನು ನೀಡುತ್ತದೆ ಎಂದು ಹೇಳಿದರು.
ಎಲ್ಲರೂ ಸಹ ಸಮಾನರು , ಯಾವುದೇ ಜಾತಿ ಬೇಧ ಇಲ್ಲದೆ ನಾವೆಲ್ಲರೂ ಒಂದು ಎಂಬುದನ್ನು ನಮಗೆ ತಿಳಿಸಿಕೊಟ್ಟಿರುವಂತಹ ವೇಮನಂತಹ ಮಹಾನ್ ದಾರ್ಶನಿಕರು ನಮಗೆ ದಾರಿದೀಪ ವಾಗಿದ್ದಾರೆ ಎಂದು ಹೇಳಿದರು.
ಬರೀ ನಾವು ಮಾತ್ರ ಜಯಂತಿಯನ್ನು ಆಚರಿಸುತ್ತೇವೆ ಎಂದು ಹೇಳದೆ ನಾವೆಲ್ಲರೂ ಸೇರಿ ಜಯಂತಿಯನ್ನು ಆಚರಿಸುತ್ತೇವೆ ಎಂಬ ಪರಿಕಲ್ಪನೆ ನಮ್ಮಲ್ಲಿ ಬರಬೇಕು ಎಂದು ತಿಳಿಸಿದರು.
ಸಾಹಿತ್ಯ ಎಂಬುದರಲ್ಲಿ ಒಂದು ವಿಶೇಷವಾದಂತಹ ಶಕ್ತಿ ಇದೆ. ಸಾಹಿತ್ಯವನ್ನು ಓದುವುದರಿಂದ ನಮ್ಮ ಜೀವನವನ್ನ ಯಾವ ರೀತಿ ಬದಲಾವಣೆ ಮಾಡಿಕೊಳ್ಳುತ್ತೇವೆ ಹಾಗೂ ಹೇಗೆ ನಮ್ಮ ಜೀವನವನ್ನು ರೂಪಿಸಿಕೊಳ್ಳುತ್ತೇವೆ ಎಂಬುದು ಬಹಳ ದೊಡ್ಡ ವಿಷಯವಾಗಿದೆ ಎಂದರು.
ಕೃಷ್ಣರಾಜನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಪ್ರೊ. ಮೈಸೂರು ಕೃಷ್ಣಮೂರ್ತಿ ಅವರು ಮಾತನಾಡಿ ಭಾರತ ದೇಶವು ತತ್ವಜ್ಞಾನಿಗಳ ತವರು, ಭಾರತ ದೇಶದಲ್ಲಿ ಹುಟ್ಟಿರುವಂತಹ ತತ್ವಜ್ಞಾನಿಗಳು ಬೇರೆಲ್ಲೂ ಹುಟ್ಟಿಲ್ಲ ಬೇರೆ ಬೇರೆ ಕಾಲಘಟ್ಟಗಳಲ್ಲಿ ಕಾಣಿಸಿಕೊಂಡಿರುವಂತಹ ತತ್ವಜ್ಞಾನಿಗಳು ಈ ದೇಶವನ್ನು ಕಟ್ಟಿ ಬೆಳೆಸುವುದಕ್ಕೆ ಕೊಟ್ಟಿರುವಂತಹ ಕೊಡುಗೆ ಅಪಾರವಾಗಿದೆ. ಅವರಲ್ಲಿ ವೇಮನ ನಂತಹ ಸರ್ವಜ್ಞರು ಕೂಡ ನಮ್ಮ ದೇಶಕ್ಕೆ ಅಪಾರವಾದಂತದ ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದರು.
ವೇಮನ ಅವರು ನಮಗೆ ವ್ಯಕ್ತಿ ಶೀಲವನ್ನು ಹೇಳಿಕೊಟ್ಟಿದ್ದಾರೆ, ಜೊತೆಗೆ ಸಮಾನತೆ , ಮತ್ತು ಸತ್ಯ ಎಂಬ ಎರಡು ತತ್ವವನ್ನು ನೀಡಿದ್ದಾರೆ. ಎಲ್ಲಾ ಕಾಲವೂ, ಎಲ್ಲ ಸಮಾಜವು ನೆಮ್ಮದಿಯಿಂದ ಇರಲು ಈ ಎರಡು ತತ್ವಗಳು ಸಾಕು ಎಂದು ವೇಮನ ಅವರು ನಮಗೆ ತಿಳಿಸಿದ್ದಾರೆ ಇದಕ್ಕಿಂತ ನಮಗೆ ಇನ್ನೇನು ಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಯ ಅನುಷ್ಠಾನದ ಪ್ರಾಧಿಕಾರದ ಅಧ್ಯಕ್ಷರಾದ ಅರುಣ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ. ಎನ್.ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕರಾದ ಡಾ. ಎಂ.ಡಿ ಸುದರ್ಶನ್, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಬಳಗದ ಅಧ್ಯಕ್ಷರಾದ ಡಾ. ಬಿ.ಎಂ ವಾಮದೇವ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Mysore
ಫೆಬ್ರವರಿ 10 ರಿಂದ 12 ರವರೆಗೆ ತಿ.ನರಸೀಪುರ ಕುಂಭಮೇಳ
ಮೈಸೂರು: ಫೆಬ್ರವರಿ 10 ರಿಂದ 12 ರವರೆಗೆ ಟಿ ನರಸೀಪುರದ ತ್ರಿವೇಣಿ ಸಂಗಮದ ಬಳಿ ಕುಂಭಮೇಳ 2025 ನ್ನು ಹಮ್ಮಿಕೊಳ್ಳಲಾಗಿದೆ. ಭಕ್ತಾದಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ ಮಹದೇವಪ್ಪ ಅವರು ತಿಳಿಸಿದರು
ಇಂದು ಕುಂಭ ಮೇಳ -2025 ರ ಆಚರಣೆಯ ಸಂಬಂಧ ಜಲದರ್ಶಿನಿ ಅಥಿತಿ ಗೃಹದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಫೆಬ್ರವರಿ 10 ರಿಂದ 12 ಈವರೆಗೆ ಟಿ ನರಸೀಪುರದಲ್ಲಿ ಕುಂಭಮೇಳ ನಡೆಯುತ್ತದೆ. ಪ್ರಥಮ ಬಾರಿಗೆ 1989 ರಲ್ಲಿ ಪ್ರಾರಂಭವಾಯಿತು. ಇದು 3 ವರ್ಷಗಳಿಗೆ ಒಮ್ಮೆ ನಡೆಯುವ ಮೇಳ. ಕುಂಭಮೇಳದಲ್ಲಿ ಸ್ವಚ್ಚತೆ ಕಾಪಾಡಬೇಕು. ಪ್ಲಾಸ್ಟಿಕ್ ಮುಕ್ತ ಪ್ರದೇಶ ಎಂದು ಘೋಷಣೆ ಮಾಡಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಮೊಬೈಲ್ ಟಾಯ್ಲೆಟ್ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.
ಸಾಂಸ್ಕೃತಿಕ ಹಾಗೂ ಜನಪದ ಸಂಗೀತ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ. ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಬೇಕು. ಕೆ.ಎಸ್.ಆರ್.ಟಿ. ಸಿ ವತಿಯಿಂದ ವಿವಿಧ ಭಾಗಗಳಿಂದ ಹೆಚ್ಚಿನ ಬಸ್ ಗಳ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.
ವಿಧಾನ ಪರಿಷತ್ ಸದಸ್ಯರಾದ ಡಾ. ಯತೀಂದ್ರ ಅವರು ಮಾತನಾಡಿ 3 ದಿನವೂ ವಿವಿಧ ಕಾರ್ಯಕ್ರಮಗಳು ಜರುಗುತ್ತವೆ. ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಕಾವೇರಿ ಆರತಿಯನ್ನು ಫೆಬ್ರವರಿ 11 ರಂದು ಮಾಡಲಾಗುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ದೇಶೀಯ ಸಂಸ್ಕೃತಿಯನ್ನು ಬಿಂಬಿಸುವಂತೆ ಮಾಡಬೇಕು. ಸ್ನಾನ ಘಟ್ಟಗಳಲ್ಲಿ ಸ್ವಚ್ಚತೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ನಿಗದಿತ ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಉಚಿತ ಅನ್ನದಾನ ಮಾಡುವ ಕಡೆ ಸ್ವಚ್ಚತೆ ಕಾಪಾಡಬೇಕು ಎಂದು ಸೂಚನೆ ನೀಡಿದರು.
ಫೈರ್ ಸೆಪ್ಟಿ ಕೈಗೊಳ್ಳಬೇಕು. ಕುಟೀರಗಳ ಬಳಿ ಭದ್ರತೆ ವ್ಯವಸ್ಥೆ ಕೈಗೊಳ್ಳಬೇಕು. ರಸ್ತೆಗಳು ಉತ್ತವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದರು
ಜಿಲ್ಲಾಧಿಕಾರಿಗಳಾದ ಜಿ ಲಕ್ಷ್ಮೀಕಾಂತ ರೆಡ್ಡಿ ಅವರು 1989 ರಿಂದ ಕುಂಭಮೇಳ ಆಚರಣೆ ಪ್ರಾರಂಭವಾಯಿತು. ಪ್ರತಿ 3 ವರ್ಷಕ್ಕೆ ಒಮ್ಮೆ ನಡೆಯುತ್ತದೆ. 2019 ರಲ್ಲಿ ನಡೆಯಿತು. ಕೋವಿಡ್ ಇದ್ದುದರಿಂದ 2021 ರಲ್ಲಿ ಕುಂಭಮೇಳ ನಡೆಯಲಿಲ್ಲ. ನದಿಯಲ್ಲಿ ಸ್ಥಾನ ಮಾಡಲು 5 ಕಡೆ ಜಾಗ ಗುರುತಿಸಲಾಗಿದೆ. 1 ಯಾಗ ಶಾಲೆ ನಿರ್ಮಾಣ ಮಾಡಲಾಗುವುದು. 6 ಕುಟೀರಗಳನ್ನು ನಿರ್ಮಾಣ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ ಎಂ ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
Mysore
ಚುಂಚನಕಟ್ಟೆ ಕಾವೇರಿ ನದಿಯಲ್ಲಿ ಶ್ರೀ ರಾಮ ದೇವರ ತೆಪ್ಪೋತ್ಸವ
ವರದಿ : ಎಸ್ ಬಿ ಹರೀಶ್ ಸಾಲಿಗ್ರಾಮ
ಸಾಲಿಗ್ರಾಮ :- ಕಿವಿತುಂಬೆಲ್ಲಾ ಪಟಾಕಿ ಸದ್ದು. . . ಇದರ ನಡುವೆ ದೇವಾಲಯದಿಂದ ಉತ್ಸವ ಮೂರ್ತಿಯನ್ನು ಹೊತ್ತು ತಂದ ಭಕ್ತಾದಿಗಳು . . . ಅಲಂಕೃತಗೊಂಡಿದ್ದ ಮಂಟಪದಲ್ಲಿ ಪ್ರತಿಷ್ಠಾಪನೆಗೊಂಡ ಸೀತಾ ರಾಮ ಲಕ್ಷ್ಮಣ. . . ನದಿಯಲ್ಲಿ ಮೂರು ಸುತ್ತು ಸುತ್ತಿದ ಉತ್ಸವ ಮೂರ್ತಿಗಳು . . . ದೇವಲೋಕವೇ ಧರೆಗೆ ಬಂದ ಅನುಭವ . . . ಈ ಇಂತಹ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾದ ಸಾವಿರಾರು ಮಂದಿ. . .
ಇದು ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆಯ ಕಾವೇರಿ ನದಿಯಲ್ಲಿ ಶುಕ್ರವಾರ ರಾತ್ರಿ ನಡೆದ ಪುರಾಣ ಪ್ರಸಿದ್ದವಾಗಿರುವ ಶ್ರೀ ರಾಮದೇವರ ತೆಪ್ಪೋತ್ಸವದಲ್ಲಿ ಕಂಡು ಬಂದ ದೃಶ್ಯಗಳು.
ರಾತ್ರಿ 7.45 ರ ನಂತರ ಇಲ್ಲಿನ ಶ್ರೀ ರಾಮದೇವರ ದೇವಾಲಯದಿಂದ ಶ್ರೀ ರಾಮ, ಲಕ್ಷಣ, ಸೀತಾಮಾತೆ ದೇವರುಗಳ ಉತ್ಸವ ಮೂರ್ತಿಗಳನ್ನು ಪಟಾಕಿ ಸಿಡಿಸುವ ಮೂಲಕ ಅದ್ದೂರಿ ಮೆರವಣಿಗೆ ಮೂಲಕ ಕಾವೇರಿ ನದಿಯ ದಡದಲ್ಲಿ ದೇವಾಲಯದ ಸಮೀಪವಿರುವ ಆಂಜನೇಯ ಗುಡಿಯ ಬಳಿ ವರ್ಣರಂಜಿತ ವಿದ್ಯುತ್ ಲೈಟ್‌ಗಳು ಮತ್ತು ಹೂವಿನ ಅಲಂಕಾರಗಳಿಂದ ಶೃಂಗಾರಗೊoಡಿದ್ದ ತೆಪ್ಪದಲ್ಲಿ ಪ್ರತಿಷ್ಠಾಪಿಸಲಾಯಿತು.
ಅನಂತರ ತೆಪ್ಪದಲ್ಲಿ ದೇವರ ಉತ್ಸವ ಮೂರ್ತಿಗಳನ್ನು ರಾತ್ರಿ 8.15ರ ಸಮಯದಲ್ಲಿ ಕಾವೇರಿ ನದಿಯ ಮಧ್ಯ ಭಾಗಕ್ಕೆ ತೆಗೆದುಕೊಂಡು ಹೋಗಿ 3 ಭಾರಿ ತಿರುಗಿಸುತ್ತಿದ್ದಂತೆಯೇ ತೆಪ್ಪದಲ್ಲಿದ್ದ ಅರ್ಚಕ ವಾಸುದೇವನ್ ಉತ್ಸವ ಮೂರ್ತಿಗಳಿಗೆ ಮಂಗಳಾರತಿಯನ್ನು ಮಾಡಿದಾಗ ನೆರೆದಿದ್ದ ಸಾವಿರಾರು ಭಕ್ತಾಧಿಗಳು ಶ್ರೀ ರಾಮನಿಗೆ ಜೈಕಾರ, ಶ್ರೀರಮಣನ ಗೋವಿಂದಾ ಗೋ..ವಿಂದಾ ಎಂಬ ಘೋಷಣೆಗಳನ್ನು ಮೊಳಗಿಸಿದಾಗ ದೇವಲೋಕವೇ ಧರೆಗೆ ಬಂದಂತೆ ಭಾಸವಾಯಿತು.
ಕಾವೇರಿ ನದಿಯಲ್ಲಿ ಸುತ್ತಿ ಬಂದ ಶ್ರೀರಾಮ, ಲಕ್ಷಣ, ಸೀತಾ ದೇವರುಗಳ ಉತ್ಸವ ಮೂರ್ತಿಗಳನ್ನು ಭಕ್ತಾಧಿಗಳು ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಿ ಪೂಜಾ ಕೈಂಕರ್ಯಗಳನ್ನು ಕೈಗೊಂಡು ತಮ್ಮ ಇಷ್ಟಾರ್ಥವನ್ನು ಈಡೇರುವಂತೆ ಪ್ರಾರ್ಥಿಸಿಕೊಂಡರು.
ಆನಂತರ ಉತ್ಸವ ಮೂರ್ತಿಗಳನ್ನು ಮತ್ತೆ ದೇವಾಲಯಕ್ಕೆ ಒತ್ತು ತರಲಾಯಿತು. ಈ ಬಾರಿಯ ತೆಪ್ಪೋತ್ಸವಕ್ಕೆ ಗುಂಡ್ಲುಪೇಟೆ ಆನಂದ್‌ಕುಮಾರ್ ಎಂಬುವವರು ಭಾರಿ ಪಟಾಕಿಗಳನ್ನು ಸಿಡಿಸುವ ಮೂಲಕ ತೆಪ್ಪೋತ್ಸವಕ್ಕೆ ಕಳೆತಂದರು.
ಕಾರ್ಯಕ್ರಮದಲ್ಲಿ ಸಾಲಿಗ್ರಾಮ ತಸೀಲ್ದಾರ್ ನರಗುಂದ, ಉಪತಹಸೀಲ್ದಾರ್ ಕೆ.ಜೆ.ಶರತ್ , ಗ್ರಾಮ ಲೆಕ್ಕಿಗರಾದ ಮೇಘ, ಮೌನೇಶ್,ಕಾವೇರಿ,ಪ್ರಿಯಾ,
ದೇವಾಲಯದ ಇಓ ಕೆ.ರಘು, ಪಾರುಪತ್ತೆದಾರ್ ಯತೀರಾಜ್, ಸೇರಿದಂತೆ 3 ಸಾವಿರ ಭಕ್ತಾಧಿಗಳು ಹಾಜರಿದ್ದರು.
-
Kodagu21 hours ago
ಅಖಿಲ ಕೊಡವ ಸಮಾಜದ ಹೇಳಿಕೆಗೆ ನಮ್ಮ ವಿರೋಧವಿದೆ, ಹೋರಾಟ ಮುಂದುವರಿಯಲಿದೆ – ಕನೆಕ್ಟಿಂಗ್ ಕೊಡವಾಸ್ ಸಂಘಟನೆ ಸ್ಪಷ್ಟನೆ
-
Kodagu20 hours ago
ಕಿಡಿಗೇಡಿಗಳನ್ನು ಬಂಧಿಸದೇ ನಡೆಸುವ ಶಾಂತಿ ಮಾತುಕತೆಗೆ ನಮ್ಮ ಬೆಂಬಲವಿಲ್ಲ: ಯುಕೊ ಸ್ಪಷ್ಟನೆ
-
Tech18 hours ago
ಮೊಬೈಲ್ ಬಳಕೆದಾರರಿಗೆ ದೂರ ಸಂಪರ್ಕ ಇಲಾಖೆಯಿಂದ ಗೂಡ್ ನ್ಯೂಸ್ : ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕಾದ ಮಾಹಿತಿ
-
Sports22 hours ago
Champions Trophy 2025ಕ್ಕೆ ಟೀಂ ಇಂಡಿಯಾ ಪ್ರಕಟ: ಗಿಲ್ಗೆ ಉಪನಾಯಕ ಪಟ್ಟ
-
National - International24 hours ago
ಕೊಲ್ಕತ್ತಾ ವೈದ್ಯ ಮೇಲಿನ ಅತ್ಯಾಚಾರ ಪ್ರಕರಣ: 57 ದಿನಗಳಲ್ಲಿ ತೀರ್ಪು ಪ್ರಕಟ; ರಾಯ್ ದೋಷಿ
-
Mysore21 hours ago
ಮೈಸೂರು ವಿವಿ ಗೌರವ ಡಾಕ್ಟರೇಟ್ ತಂದ ಖುಷಿ
-
Mysore20 hours ago
ಮೈಸೂರಿನ ಮಾರುಕಟ್ಟೆಗೆ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು
-
Hassan23 hours ago
ನ್ಯಾಯಾಲಯದ ತಡೆ ಆಜ್ಞೆ ಇದ್ರೂ ವಿಮಾನ ನಿಲ್ದಾಣದ ಸುತ್ತ ಕಾಂಪೌಂಡ್ ನಿರ್ಮಾಣ