Connect with us

Kodagu

ಮುದ್ದಂಡ ಕಪ್ ಹಾಕಿ ಹಬ್ಬ: ದಾಖಲೆಯ 370 ತಂಡಗಳ ನೋಂದಣಿ

Published

on

ಮಡಿಕೇರಿ : ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯ ’೨೫ನೇ ವರ್ಷದ ಮುದ್ದಂಡ ಕಪ್ ಹಾಕಿ ಉತ್ಸವ’ಕ್ಕೆ ಮಡಿಕೇರಿ ನಗರದಲ್ಲಿ ಅಂತಿಮ ಹಂತದ ಸಿದ್ಧತೆ ನಡೆದಿದೆ. ಪಂದ್ಯಾವಳಿಯು ಮಾ.೨೮ ರಿಂದ ಏ.೨೭ರ ವರೆಗೆ ಮೂರು ಮೈದಾನದಲ್ಲಿ ನಡೆಯಲಿದ್ದು, ಈಗಾಗಲೇ ದಾಖಲೆಯ ೩೭೦ ತಂಡಗಳು ನೋಂದಣಿ ಮಾಡಿಕೊಂಡಿವೆ.
ಒಂದು ತಿಂಗಳ ಹಾಕಿ ಪಂದ್ಯಾವಳಿ ಹಾಗೂ ಈ ಅವಧಿಯಲ್ಲಿ ನಡೆಯುವ ವಿಭಿನ್ನ ಕಾರ್ಯಕ್ರಮಗಳ ಕುರಿತು ಕೊಡವ ಹಾಕಿ ಅಕಾಡೆಮಿ ಹಾಗೂ ಮುದ್ದಂಡ ಕಪ್ ಹಾಕಿ ಉತ್ಸವ ಸಮಿತಿಯ ಪ್ರಮುಖರು ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.


ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ ಅವರು ಮಾತನಾಡಿ ಕಳೆದ ಬಾರಿಯ ಕುಂಡ್ಯೋಳಂಡ ಹಾಕಿ ಹಬ್ಬದಲ್ಲಿ ೩೬೦ ತಂಡಗಳು ಪಾಲ್ಗೊಂಡಿದ್ದವು, ಈ ಬಾರಿಯ ಮುದ್ದಂಡ ಕಪ್ ಹಾಕಿ ಉತ್ಸವದಲ್ಲಿ ೧೦ ತಂಡಗಳು ಹೆಚ್ಚುವರಿಯಾಗಿದ್ದು, ೩೭೦ ತಂಡಗಳು ಹೆಸರು ನೋಂದಾಯಿಸಿಕೊಂಡಿವೆ. ನೋಂದಣಿಯ ಕೊನೆಯ ದಿನಾಂಕ ಮಾ.೧೮ ಆಗಿದ್ದು, ಮತ್ತಷ್ಟು ತಂಡಗಳು ಸೇರ್ಪಡೆಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.


ಮಾ.೨೮ರಂದು ಉದ್ಘಾಟನೆಯ ಪ್ರದರ್ಶನ ಪಂದ್ಯವಾಗಿ ಕೊಡವ ಹಾಕಿ ಅಕಾಡೆಮಿ- ಘಿI ಹಾಗೂ ಇತ್ತೀಚೆಗೆ ರಾಷ್ಟ್ರೀಯ ಮಟ್ಟದಲ್ಲಿ ವಿಜೇತರಾದ ಕರ್ನಾಟಕ-ಘಿI ತಂಡಗಳ ನಡುವೆ ಸೆಣಸಾಟ ನಡೆಯಲಿದೆ ಎಂದರು.
ಪಂದ್ಯಾವಳಿಯ ನಿರ್ದೇಶಕರಾಗಿ ಬಡ್ಕಡ ದೀನ ಪೂವಯ್ಯ ಹಾಗೂ ಸಂಯೋಜಕರಾಗಿ ಮುದ್ದಂಡ ರಾಯ್ ತಮ್ಮಯ್ಯ ಕಾರ್ಯನಿರ್ವಹಿಸಲಿದ್ದಾರೆ. ಪಂದ್ಯಾವಳಿಯಲ್ಲಿ ಮುಖ್ಯ ವೀಕ್ಷಕ ವಿವರಣೆಗಾರರಾಗಿ ಚೆಪ್ಪುಡಿರ ಕಾರ್ಯಪ್ಪ, ಇವರಿಗೆ ಸಹಾಯಕರಾಗಿ ಮಾಳೇಟಿರ ಶ್ರೀನಿವಾಸ್ ಇರಲಿದ್ದಾರೆ. ಟೈಸ್ ಪ್ರಕ್ರಿಯೆಯನ್ನು ಕೆಚ್ಚೆಟ್ಟಿರ ಪ್ರಸನ್ನ ನಿರ್ವಹಿಸಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಕಳೆದ ಹಾಕಿ ಉತ್ಸವದಲ್ಲಿ ಗಿನ್ನಿಸ್ ದಾಖಲೆ ನಿರ್ಮಿಸಿದ ಕುಂಡ್ಯೋಳಂಡ ಒಕ್ಕದವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.


::: ತರಬೇತಿ ಕಾರ್ಯಾಗಾರ :::
ಹಾಕಿ ಅಕಾಡೆಮಿಯ ಕಾರ್ಯಾಧ್ಯಕ್ಷ ಮೇಕೇರಿರ ರವಿ ಪೆಮ್ಮಯ್ಯ ಮಾತನಾಡಿ ಕೊಡವ ಹಾಕಿ ಅಕಾಡೆಮಿ ವತಿಯಿಂದ ಮಾರ್ಚ್ ೧೯ ಮತ್ತು ೨೦ ರಂದು ವಿರಾಜಪೇಟೆಯ ಕಾವೇರಿ ಕಾಲೇಜ್ ನಲ್ಲಿ ಹಾಕಿ ತೀರ್ಪುಗಾರರ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಜಿಲ್ಲೆಯ ಆಸಕ್ತ ಯುವ ಸಮೂಹ ಇದರಲ್ಲಿ ಪಾಲ್ಗೊಂಡು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಮಿನಿ ಒಲಂಪಿಕ್ಸ್ ಮಾದರಿಯಲ್ಲಿ ಈ ಬಾರಿಯ ಮುದ್ದಂಡ ಕಪ್ ಹಾಕಿ ಉತ್ಸವ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಾಕಿ ಅಕಾಡೆಮಿಯ ಉಪಾಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಮಾತನಾಡಿ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಒಡೆಯರ್, ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ, ರಾಜ್ಯಸಭಾ ಸದಸ್ಯ ಅಜೆಯ್ ಮಾಕನ್, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮತ್ತಿತರ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದರು.
ಮುದ್ದಂಡ ಹಾಕಿ ಹಬ್ಬದ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ ಮಾತನಾಡಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ನ ಎರಡು ಮೈದಾನ ಹಾಗೂ ಪೊಲೀಸ್ ಕವಾಯತು ಮೈದಾನದಲ್ಲಿ ಪಂದ್ಯಾವಳಿಗಳನ್ನು ಆಯೋಜಿಸಲಾಗಿದ್ದು, ಗ್ಯಾಲರಿ ನಿರ್ಮಾಣದ ಕಾರ್ಯ ಆರಂಭಗೊಂಡಿದೆ. ಹಾಕಿ ಉತ್ಸವದ ಬೆಳ್ಳಿಹಬ್ಬದ ಸಂಭ್ರಮದ ಹಿನ್ನೆಲೆ ಹಾಕಿ ಪಂದ್ಯಾವಳಿಯೊಂದಿಗೆ ವಿಭಿನ್ನ ಕಾರ್ಯಕ್ರಮಗಳು ಕೂಡ ನಡೆಯಲಿದೆ ಎಂದರು.
::: ಕ್ರೀಡಾಜ್ಯೋತಿಯ ವಿಶೇಷ :::
ಈ ಬಾರಿ ವಿಶೇ?ವಾಗಿ ಇದುವರೆಗೆ ಹಾಕಿ ಉತ್ಸವ ಆಯೋಜಿಸಿದ್ದ ಎಲ್ಲಾ ಕುಟುಂಬಗಳ ಐನ್’ಮನೆಗಳಿಗೆ ಮ್ಯಾರಥಾನ್ ಮೂಲಕ ಕ್ರೀಡಾಜ್ಯೋತಿಯನ್ನು ಕೊಂಡೊಯ್ಯಲಾಗುವುದು. ಮಾ.೨೫ರಂದು ಬೆಳಗ್ಗೆ ೮ ಗಂಟೆಗೆ ಕೊಡವ ಹಾಕಿ ಉತ್ಸವದ ಜನಕರಾದ ಕರಡ ಗ್ರಾಮದ ಪಾಂಡಂಡ ಕುಟುಂಬದ ಐನ್’ಮನೆಯಲ್ಲಿ ಆರಂಭಗೊಳ್ಳಲಿರುವ ಮುದ್ದಂಡ ಹಾಕಿ ಉತ್ಸವದ ಕ್ರೀಡಾಜ್ಯೋತಿಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಉದ್ಘಾಟಿಸಲಿದ್ದಾರೆ.
ನಂತರ ಪೊನ್ನಂಪೇಟೆಯ ೮ ಐನ್ ಮನೆಗಳನ್ನು ಕ್ರಮಿಸಿ, ಮಾ.೨೬ ರಿಂದ ೨೮ ರವರೆಗೆ ವಿವಿಧ ಐನ್ ಮನೆಗಳಿಗೆ ಕ್ರೀಡಾಜ್ಯೋತಿ ಸಾಗಲಿದೆ.
ಮಾ.೨೮ರಂದು ಬೆಳಿಗ್ಗೆ ೯ಗಂಟೆಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಿಂದ ಮುಖ್ಯ ರಸ್ತೆಯ ಮೂಲಕ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನಕ್ಕೆ ಬೃಹತ್ ಮೆರವಣಿಗೆಯ ಮೂಲಕ ಕ್ರೀಡಾಜ್ಯೋತಿಯನ್ನು ಕೊಂಡೊಯ್ಯಲಾಗುವುದು. ನಾಲ್ಕು ದಿನವೂ ಪ್ರಮುಖ ಮ್ಯಾರಥಾನ್ ಓಟಗಾರರು ಕ್ರೀಡಾಜ್ಯೋತಿಯೊಂದಿಗೆ ಓಡಲಿದ್ದಾರೆ ಎಂದು ರಶಿನ್ ಸುಬ್ಬಯ್ಯ ಮಾಹಿತಿ ನೀಡಿದರು.
::: ಮಹಿಳಾ ಹಾಕಿ ಸಂಭ್ರಮ :::
ಬೆಳ್ಳಿಮಹೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ಮುದ್ದಂಡ ಹಾಕಿ ಉತ್ಸವದಲ್ಲಿ ಮಹಿಳಾ ತಂಡಗಳ ನಡುವೆ ಹಾಕಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಈಗಾಗಲೇ ೩೦ ತಂಡಗಳು ನೋಂದಾಯಿಸಿಕೊಂಡಿದ್ದು, ನೋಂದಣಿಯ ಕೊನೆಯ ದಿನಾಂಕ ಏ.೧೦ ಆಗಿರುವುದರಿಂದ ಮತ್ತಷ್ಟು ತಂಡಗಳು ಸೇರ್ಪಡೆಗೊಳ್ಳಲಿವೆ. ಮೂರನೇ ಮೈದಾನದಲ್ಲಿ ಮಹಿಳಾ ಹಾಕಿ ಪಂದ್ಯಾವಳಿ ನಡೆಯಲಿದೆ ಎಂದರು.
ಸೆಮಿಫೈನಲ್ ಸಂದರ್ಭ ಭಾರತೀಯ ಮಹಿಳಾ ಹಾಕಿ ತಂಡದ ನಾಯಕಿ ಲಾಲ್ ರಿಮ್ ಸಿಯಾಮಿ ಅವರು ಆಗಮಿಸಿದ ಹಾಕಿ ಕ್ರೀಡೆಯ ಕುರಿತು ಮಾಹಿತಿ ನೀಡಲಿದ್ದಾರೆ. ಭಾರತೀಯ ಪುರುಷರ ಹಾಕಿ ತಂಡದ ನಾಯಕ ಹಾಗೂ ಒಲಂಪಿಯನ್ ಮನ್ ಪ್ರೀತ್ ಸಿಂಗ್ ಕೂಡ ಪಂದ್ಯಾವಳಿಯ ಸಂದರ್ಭ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
::: ತಂದ್- ಬೆಂದ್ :::
ವಿಶೇಷವಾಗಿ ರಸಪ್ರಶ್ನೆ ಸ್ಪರ್ಧೆ ಮತ್ತು ತಂದ್- ಬೆಂದ್ (ವಧು ವರರ ಅನ್ವೇಷಣೆ) ಕಾರ್ಯಕ್ರಮವನ್ನು ಪಂದ್ಯಾವಳಿ ನಡೆಯುವ ಮೈದಾನದ ಆವರಣದಲ್ಲಿ ಆಯೋಜಿಸಲಾಗುತ್ತಿದೆ. ಏ.೨೬ ರಂದು ಸೈಕ್ಲೋಥಾನ್ ನಗರದಲ್ಲಿ ನಡೆಯಲಿದೆ. ಪ್ರೀ ಕ್ವಾರ್ಟರ್ ನಡೆಯುವ ದಿನದಿಂದ ಅಂತಿಮ ಪಂದ್ಯಾವಳಿ ದಿದವರೆಗೂ ಡಿಜೆ ಕಾರ್ಯಕ್ರಮ ಮನರಂಜಿಸಲಿದೆ. ನಗರದ ಫೀ.ಮಾ.ಕಾರ್ಯಪ್ಪ ವೃತ್ತದಿಂದ ಮುಕ್ತ ಮಜಾ ರನ್’ ನಡೆಯಲಿದೆ. ಅಂತಿಮ ದಿನದ ಸಮಾರಂಭದ ಸಂದರ್ಭ ಆಕರ್ಷಕ ಸಿಡಿಮದ್ದುಗಳ ಪ್ರದರ್ಶನವಿರುತ್ತದೆ. ಸುಮಾರು ೨ ಸಾವಿರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ವಂದನಾ ಟ್ರಸ್ಟ್ ಸಂಸ್ಥೆ ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ತ್ಯಾಜ್ಯಗಳ ನಿರ್ವಹಣೆಯನ್ನು ಮಾಡಲಿದೆ ಎಂದರು.
ಮುದ್ದಂಡ ಒಕ್ಕದ ಕಾರ್ಯದರ್ಶಿ ಮುದ್ದಂಡ ರಾಯ್ ತಮ್ಮಯ್ಯ ಮಾತನಾಡಿ ಮುಕ್ತ ಶೂಟಿಂಗ್ ಸ್ಪರ್ಧೆಯ ವಿವರ ನೀಡಿದರು. ಏ.೨೦ ರಂದು ಮೈದಾನ ಎರಡರಲ್ಲಿ ಶೂಟಿಂಗ್ ಸ್ಪರ್ಧೆ ಮೂರು ವಿಭಾಗಗಳಲ್ಲಿ ನಡೆಯಲಿದೆ. ೫೦ ಮೀಟರ್ ನಿಗಧಿತ ಗುರಿಯ .೨ ಶೂಟಿಂಗ್ ಸ್ಪರ್ಧೆ, ೩೦ ಮೀಟರ್ ಅಂತರದ ಟುವೆಲ್ತ್ ಬೋರ್ ಬಂದೂಕಿನಿಂದ ಗುರಿ ಹಿಡಿಯುವ ಹಾಗೂ ೧೫ ಮೀಟರ್ ದೂರದ ಮೊಟ್ಟೆಗೆ ಗುಂಡಿಕ್ಕುವ ಏರ್ ರೈಫಲ್ ಶೂಟಿಂಗ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಕೂಡ ನಡೆಯಲಿದೆ ಎಂದು ತಿಳಿಸಿದರು.
ಇಲ್ಲಿಯವರೆಗೆ ಕೊಡವ ಹಾಕಿ ಉತ್ಸವವನ್ನು ಆಯೋಜಿಸಿದ ೨೪ ಕುಟುಂಬಗಳನ್ನು ಸ್ಮರಿಸುವ ಮತ್ತು ಗೌರವದಿಂದ ಕಾಣುವ ಉದ್ದೇಶದಿಂದ ಈ ಬಾರಿ ಕ್ರೀಡಾಜ್ಯೋತಿಯನ್ನು ಕೊಂಡೊಯ್ಯಲಾಗುತ್ತಿದೆ. ಈ ಕುಟುಂಬಗಳ ಐನ್ ಮನೆಗಳಿಗೆ ತೆರಳಿ ನೆಲ್ಲಕ್ಕಿ ಬೆಳಕಿನಿಂದ ಕ್ರೀಡಾಜ್ಯೋತಿಗೆ ಬೆಳಕು ಪಡೆಯಲಿದ್ದೇವೆ ಎಂದರು.
ಮುದ್ದಂಡ ಒಕ್ಕದ ಅಧ್ಯಕ್ಷ ಮುದ್ದಂಡ ಬಿ.ದೇವಯ್ಯ ಮಾತನಾಡಿ ಮಾ.೨೮ರಂದು ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಿಂದ ಫೀ.ಮಾ.ಕೆ.ಎಂ.ಕಾರ್ಯಪ್ಪ ಮೈದಾನದವರೆಗೆ ನಡೆಯುವ ಬೃಹತ್ ಮೆರವಣಿಗೆಯಲ್ಲಿ ಸರ್ವರೂ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗಳ ಎಲ್ಲಾ ಕೊಡವ ಸಮಾಜಗಳು ಹಾಗೂ ಕೊಡವ ಕೇರಿಗಳ ಸಹಕಾರವನ್ನು ಪಡೆಯಲಾಗಿದೆ. ಹಾಕಿ ಉತ್ಸವ ಯಾವುದೇ ಅಡ್ಡಿ ಆತಂಕವಿಲ್ಲದೆ ಯಶಸ್ವಿಯಾಗಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Continue Reading

Kodagu

ಮುದ್ದಂಡ ಕಪ್ ಹಾಕಿ ಉತ್ಸವ : ಫೈನಲ್ಸ್ ಗೆ ಶ್ರೇಷ್ಠ ಆಟಗಾರರ ಆಗಮನ : ಉತ್ಸವ ಸಮಿತಿಯಿಂದ ಸನ್ಮಾನ

Published

on

ಮಡಿಕೇರಿ : ಮುದ್ದಂಡ ಕಪ್ ಹಾಕಿ ಉತ್ಸವದ ಫೈನಲ್ ಪಂದ್ಯಾವಳಿ ಮತ್ತು ಸಮಾರೋಪ ಸಮಾರಂಭ ನಡೆಯುವ ಏ.೨೭ ರಂದು ಪ್ರತಿಷ್ಠಿತ ಪ್ರಶಸ್ತಿ ವಿಜೇತ, ಶ್ರೇಷ್ಠ ಆಟಗಾರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮುದ್ದಂಡ ಹಾಕಿ ಉತ್ಸವ ಸಮಿತಿಯ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ ತಿಳಿಸಿದ್ದಾರೆ.


೧೯೭೫ರ ವಿಶ್ವಕಪ್ ಹಾಕಿ ವಿಜೇತ, ವಿಶ್ವದಲ್ಲೇ ಅತಿ ಹೆಚ್ಚು ಪದಕ ಗಳಿಸಿರುವ ಅರ್ಜುನ ಪ್ರಶಸ್ತಿಗೆ ಭಾಜನರಾಗಿರುವ ಕೊಡಗಿನ ಸಿಡಿಲಮರಿ ಖ್ಯಾತಿಯ ಬಿ.ಪಿ.ಗೋವಿಂದ ಅವರು ಮುದ್ದಂಡ ಹಾಕಿ ಹಬ್ಬಕ್ಕೆ ಆಗಮಿಸಲಿದ್ದಾರೆ. ೧೯೭೨ ಮ್ಯುನಿಚ್ ಒಲಂಪಿಕ್ಸ್, ೧೯೭೩ ವಿಶ್ವಕಪ್, ೧೯೭೬ ಮಾಂಟ್ರಿಲ್ ಒಲಂಪಿಕ್ಸ್ ನ ಎಲ್ಲಾ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಪದಕ ಗಳಿಸಿದ ಖ್ಯಾತಿ ಇವರದ್ದು.
ವಿಶ್ವಕಪ್ ಹಾಕಿ ಭೂಪಟದಲ್ಲಿ ಭಾರತ ಹಾಕಿ ತಂಡದ ಹೆಸರನ್ನು ಅಜರಾಮರಗೊಳಿಸಿದ ಕೊಡಗಿನ ವೀರ, ೧೯೭೫ ವಿಶ್ವಕಪ್ ಹಾಕಿ ವಿಜೇತ ತಂಡದ ಆಟಗಾರ ಪೈಕೇರ ಕಾಳಯ್ಯ, ೧೯೮೦ ಮಾಸ್ಕೋ ಒಲಂಪಿಕ್ಸ್ ನಲ್ಲಿ ಚಿನ್ನ ಗೆದ್ದ ನಾಯಕ, ಭಾರತ ತಂಡದ ತರಬೇತುದಾರ, ವಿಶ್ವಕಪ್ ಹಾಗೂ ಒಲಂಪಿಕ್ಸ್ ನಲ್ಲಿ ಹೆಸರು ಗಳಿಸಿದ, ದಕ್ಷಿಣ ರೈಲ್ವೆ ತಂಡದ ಅದ್ಭುತ ಆಟಗಾರ ಪದ್ಮಶ್ರೀ ಪುರಸ್ಕೃತ ವಾಸುದೇವ ಭಾಸ್ಕರ್, ೧೯೮೦ ಮಾಸ್ಕೋ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ವಿಜೇತ, ೧೯೮೪ ಲಾಸ್ ಏಂಜಲೀಸ್ ಒಲಂಪಿಕ್ಸ್, ೧೯೮೮ ಸಿಯೋಲ್ ಒಲಂಪಿಕ್ಸ್ ನ ನಾಯಕ, ವಿಶ್ವಕಪ್ ಚಾಂಪಿಯನ್ಸ್ ಟ್ರೋಫಿ ಹಾಗೂ ಇನ್ನು ಹಲವು ಪಂದ್ಯಾವಳಿಗಳಲ್ಲಿ ಆಡಿದ ಕೊಡಗಿನ ಏಕೈಕ ಆಟಗಾರ ಹಾಗೂ ಅರ್ಜುನ ಪ್ರಶಸ್ತಿ ವಿಜೇತ ಎಂ.ಎಂ.ಸೋಮಯ್ಯ ಆಗಮಿಸಲಿದ್ದಾರೆ.
೧೯೬೮ ಒಲಂಪಿಕ್ಸ್ ನ ಗೋಲ್ ಕೀಪರ್ ಆಗಿ ಪ್ರತಿನಿಧಿಸಿದ ಆಟಗಾರ. ಒಲಂಪಿಕ್ಸ್, ವಿಶ್ವಕಪ್, ಚಾಂಪಿಯನ್ ಟ್ರೋಫಿ, ಏಷ್ಯನ್ ಗೇಮ್ಸ್ ಗಳಲ್ಲಿ ಟೆಕ್ನಿಕಲ್ ಅಫಿಶಿಯಲ್ ಆಗಿ ಬಹಳಷ್ಟು ವರ್ಷ ಸೇವೆ ಸಲ್ಲಿಸಿದ ಹಾಗೂ ಹಾಕಿ ಪಂದ್ಯಾವಳಿಯ ಬಗ್ಗೆ ಅಪಾರ ಅನುಭವವಿರುವ ಮುನೀರ್ ಸೇಟ್, ೧೯೯೬ ಹಾಗೂ ೨೦೦೦ ಒಲಂಪಿಕ್ಸ್ ಆಟಗಾರ. ಏಷ್ಯನ್ ಗೇಮ್ಸ್, ವಿಶ್ವಕಪ್ ಹಾಗೂ ಅರ್ಜುನ ಪ್ರಶಸ್ತಿ ವಿಜೇತ ಮಹಮ್ಮದ್ ರಿಯಾಜ್ ಅವರು ಆಗಮಿಸಲಿದ್ದಾರೆ.
ಈ ಹಾಕಿ ದಿಗ್ಗಜರನ್ನು ಅರ್ಥಪೂರ್ಣವಾಗಿ ಬರಮಾಡಿಕೊಂಡು ತೆರೆದ ಜೀಪಿನಲ್ಲಿ ಕೊಡಗಿನ ಸಾಂಪ್ರದಾಯಿಕ ದುಡಿಕೊಟ್ ಪಾಟ್ ನೊಂದಿಗೆ ಮೈದಾನದ ಸುತ್ತ ಮೆರವಣಿಗೆ ಮಾಡಲಾಗುವುದು ಎಂದು ರಶಿನ್ ಸುಬ್ಬಯ್ಯ ಮಾಹಿತಿ ನೀಡಿದರು.
ಕೊಡವ ಕೌಟುಂಬಿಕ ಹಾಕಿ ಮೂರು ಬಾರಿ ಲಿಮ್ಕಾ ದಾಖಲೆ, ಒಂದು ಬಾರಿ ಗಿನ್ನಿಸ್ ದಾಖಲೆ ನಿರ್ಮಿಸಿದೆ. ಇಂದು ಕೊಡವ ಹಾಕಿ ವಿಶ್ವ ವಿಖ್ಯಾತ ಪಡೆದಿದೆ. ಎಲ್ಲಾ ಕ್ರೀಡಾ ಪ್ರೇಮಿಗಳು ಮುದ್ದಂಡ ಹಾಕಿ ಹಬ್ಬದ ಕೊನೆಯ ದಿನದ ಅದ್ಭುತ ಕ್ಷಣವನ್ನು ವೀಕ್ಷಿಸಬೇಕು ಎಂಬುವುದು ಮುದ್ದಂಡ ಕುಟುಂಬಸ್ಥರು ಹಾಗೂ ಕೊಡವ ಹಾಕಿ ಅಕಾಡೆಮಿಯ ಬಯಕೆ ಎಂದು ಅವರು ಹೇಳಿದರು.
::: ಹಾಕಿ ಜನಕನ ಕನಸು ನನಸು :::
ಕೌಟುಂಬಿಕ ಹಾಕಿಯ ಜನಕ ಪಾಂಡಂಡ ಕುಟ್ಟಪ್ಪ ಅವರು ವಿಶ್ವಕಪ್ ವಿಜೇತರು ಹಾಗೂ ಒಲಂಪಿಕ್ ನಲ್ಲಿ ಚಿನ್ನ ಗೆದ್ದ ಕೊಡಗಿನ ಆಟಗಾರರನ್ನು ಒಂದೇ ವೇದಿಕೆಗೆ ಕರೆತರಬೇಕೆಂಬ ಕನಸು ಕಂಡಿದ್ದರು, ಅದು ಇಂದು ನನಸಾಗುತ್ತಿದೆ.
ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ, ವಿಶ್ವಕಪ್ ವಿಜೇತರಾದ ಕಾಳಯ್ಯ ಹಾಗೂ ಗೋವಿಂದ ಅವರು ವಿಶ್ವಕಪ್ ಗೆದ್ದು ೫೦ ವರ್ಷ ತುಂಬಿದ ಸಡಗರದಲ್ಲಿದ್ದಾರೆ. ಇದೇ ಪ್ರಥಮ ಬಾರಿಗೆ ಹಾಕಿ ಪ್ರೇಮಿಗಳ ಸಮ್ಮುಖದಲ್ಲಿ ಇವರನ್ನು ಗೌರವಿಸಬೇಕು ಎಂಬ ತೀರ್ಮಾನವನ್ನು ಕೊಡವ ಹಾಕಿ ಅಕಾಡೆಮಿ ಹಾಗೂ ಮುದ್ದಂಡ ಕುಟುಂಬದವರು ತೆಗೆದುಕೊಂಡಿದ್ದಾರೆ ಎಂದು ರಶಿನ್ ಸುಬ್ಬಯ್ಯ ತಿಳಿಸಿದರು.
೧೯೮೦ರ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದು ೪೫ ವರ್ಷಗಳು ತುಂಬಿದ ಸಂಭ್ರಮದಲ್ಲಿರುವ ಪದ್ಮಶ್ರೀ ಪುರಸ್ಕೃತ ವಾಸುದೇವ ಭಾಸ್ಕರನ್ ಹಾಗೂ ಕೊಡಗಿನವರಾದ ಮನೆಯಪಂಡ ಸೋಮಯ್ಯ ಅವರನ್ನು ಕೂಡ ಸನ್ಮಾನಿಸಿ ಗೌರವಿಸಲಾಗುವುದು ಎಂದರು.

Continue Reading

Kodagu

ಕೊಡಗು ಗೌಡ ಸಮಾಜಗಳ ಒಕ್ಕೂಟದ ನೂತನ ಆಡಳಿತ ಮಂಡಳಿ ರಚನೆ ಅಧ್ಯಕ್ಷರಾಗಿ ಆನಂದ್ ಕರಂದ್ಲಾಜೆ ಆಯ್ಕೆ

Published

on

ಮಡಿಕೇರಿ : ಕೊಡಗು ಗೌಡ ಸಮಾಜಗಳ ಒಕ್ಕೂಟದ ನೂತನ ಆಡಳಿತ ಮಂಡಳಿಯನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಆನಂದ್ ಕರಂದ್ಲಾಜೆ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ರಾಜೇಶ್ ತೇನನ, ಎರಡನೇ ಬಾರಿಗೆ ಕಾರ್ಯದರ್ಶಿಯಾಗಿ ಉದಯ್ ಪೇರಿಯನ, ಖಜಾಂಚಿಯಾಗಿ ನವೀನ್ ಅಂಬೆಕಲ್, ಜಂಟಿ ಕಾರ್ಯದರ್ಶಿಯಾಗಿ ಕೊಡಪಾಲು ಗಣಪತಿ, ನಿರ್ದೇಶಕರುಗಳಾಗಿ ಪೇರಿಯನ ಜಯಾನಂದ, ಚಿಲ್ಲನ ಗಣಿಪ್ರಸಾದ್, ಕೊಡಗನ ಹ?, ಕುಯ್ಯಮುಡಿ ಅಶ್ವಿನಿ ಕುಮಾರ್, ಬೇಕಲ್ ಬಿಪಿನ್, ಪುಳಕಂಡ್ರ ಸುದೀಪ್, ಕುಯ್ಯಮುಡಿ ರಂಜು ಪಾಣತ್ತಲೆ, ಜಗದೀಶ್ ಮಂದಪ್ಪ, ಕೊಂಬಾರನ ರೋ?ನ್, ಮೊಟ್ಟನ ಕರುಣ, ಪುದಿಯನೆರವನ ರೇವತಿ ರಮೇಶ್ ಹಾಗೂ ಕುಂಬುಗೌಡನ ಜಲಜ ವಿನೋದ್ ನೇಮಕಗೊಂಡಿದ್ದಾರೆ.
ಮಡಿಕೇರಿಯ ಗೌಡ ಸಮಾಜದಲ್ಲಿ ನಡೆದ ಕೊಡಗು ಗೌಡ ಸಮಾಜಗಳ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಮಾಜಿ ಅಧ್ಯಕ್ಷ ಸೂರ್ತಲೆ ಸೋಮಣ್ಣ ಅವರು ನೂತನ ಅಧ್ಯಕ್ಷ ಆನಂದ್ ಕರಂದ್ಲಾಜೆ ಅವರಿಗೆ ಅಧಿಕಾರ ಹಸ್ತಾಂತರಿಸಿ ಶುಭ ಹಾರೈಸಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಆನಂದ್ ಕರಂದ್ಲಾಜೆ ಅವರು ಗೌಡ ಸಮಾಜಗಳ ಹಾಗೂ ಜನಾಂಗ ಬಾಂಧವರ ಪ್ರಗತಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ಕೊಡಗು ಜಿಲ್ಲೆಯಲ್ಲಿರುವ ಎಲ್ಲಾ ಜನಾಂಗಗಳೊಂದಿಗೆ ಅರೆಭಾ? ಒಕ್ಕಲಿಗ ಗೌಡರು ಶಾಂತಿ ಮತ್ತು ಸಮನ್ವಯತೆಯಿಂದ ಜೀವನ ಸಾಗಿಸುತ್ತಿದ್ದಾರೆ. ಈ ಸಾಮರಸ್ಯವನ್ನು ಹೀಗೆ ಮುಂದುವರಿಸಲು ಆದ್ಯತೆ ನೀಡಲಾಗುವುದು. ಗೌಡ ಜನಾಂಗವನ್ನು ಮತ್ತಷ್ಟು ಅಭಿವೃದ್ಧಿಪಥದತ್ತ ಕೊಂಡೊಯ್ಯಲು ಕಾರ್ಯ ಚಟುವಟಿಕೆಗಳನ್ನು ರೂಪಿಸಿ ಒಗ್ಗಟ್ಟಿನಿಂದ ಮುನ್ನಡೆಯಲಾಗುವುದು ಎಂದರು.

Continue Reading

Kodagu

ಪೋಷಣ್ ಪಾಕ್ವಾಡ್, ಸೀಮಂತ ಕಾರ್ಯಕ್ರಮ

Published

on

ಮಡಿಕೇರಿ : ಬೆಟ್ಟಗೇರಿ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಾಕ್ವಾಡ್, ಸೀಮಂತ ಕಾರ್ಯಕ್ರಮ ಹಾಗೂ ಆಯುಷ್ ಕಾರ್ಯಕ್ರಮ ಶನಿವಾರ ನಡೆಯಿತು.
ಕಾರ್ಯಕ್ರಮದಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರದ ಡಾಕ್ಟರ್ ಶುಭ, ಆಯುಷ್ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ, ಸ್ಥಳೀಯವಾಗಿ ಸಿಗುವ ಔಷಧಿ ಗುಣ ಇರುವ ಸೊಪ್ಪುಗಳನ್ನು ತಂದು ಅದರ ಮಹತ್ವದ ಬಗ್ಗೆ ತಿಳಿಸಿದರು. ಆರೋಗ್ಯಕರ ಜೀವನಶೈಲಿ ಬಗ್ಗೆ, ಆಹಾರ ಪದ್ಧತಿಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.
ಯೋಗ ಶಿಕ್ಷಕಿ ಪವಿತ್ರ ಯೋಗದ ಮಹತ್ವ ತಿಳಿಸುತ್ತಾ ಎಲ್ಲಾ ಫಲಾನುಭವಿಗಳಿಗೆ ಯೋಗಾಭ್ಯಾಸ ಮಾಡಿಸಿದರು. ಪ್ರಭಾರ ಸಾಹಿತ್ಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್, ಸಾವಿರ ದಿನಗಳ ಮಹತ್ವ, ಅಪೌಷ್ಟಿಕತೆ ಬರದಂತೆ ತಡೆಯುವ ಆಹಾರ ಪದ್ಧತಿ, ಪೌಷ್ಟಿಕ ಆಹಾರ ಸೇವನೆ ಬಗ್ಗೆ, ತೂಕದ ಮಹತ್ವ, ಸ್ವಚ್ಛತೆ, ಕೈ ತೊಳೆಯುವ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.
ಇದೇ ಸಂದರ್ಭ ಆಯುಷ್ ಇಲಾಖೆಗೆ ಸಂಬಂಧಿಸಿದ ಆರೋಗ್ಯ ಪದ್ಧತಿಯನ್ನು ಒಳಗೊಂಡ ಹಿತ್ತಲೊಳಗಿರಲವ್ವ ಹತ್ತು ಮೂಲಿಕೆಗಳು ಹಾಗೂ ಆಯುಷ್ ಆರೋಗ್ಯ ಕೈಪಿಡಿಯನ್ನು ವಿತರಣೆ ಮಾಡಲಾಯಿತು. ಇದರೊಂದಿಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಯುಷ್ ಟಾನಿಕ್ ಮತ್ತು ಮಾತ್ರೆಗಳು ವಿತರಿಸಲಾಯಿತು.
ಬೆಟ್ಟಗೇರಿ ಅಂಗನವಾಡಿ ಕಾರ್ಯಕರ್ತೆ ಬಿ ಎಂ ಪುಷ್ಪಾವತಿ ಕಾರ್ಯಕ್ರಮವನ್ನು ಉತ್ತಮವಾಗಿ ಆಯೋಜಿಸುವುದರೊಂದಿಗೆ ನಿರೂಪಣೆ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಸುರಕ್ಷಾಧಿಕಾರಿ ಕೃತಿಕಾರಾಣಿ, ರತಿ, ಆಶಾ ಕಾರ್ಯಕರ್ತೆ ಜಯಚಿತ್ರ, ಆಶಾ ಕಾರ್ಯಕರ್ತೆ ಪ್ರಮೀಳಾ ಹಾಜರಿದ್ದರು.

Continue Reading

Trending

error: Content is protected !!