Hassan
ಭಯೋತ್ಪಾದಕರನ್ನ ರಕ್ಷಿಸುವ ಕಾಂಗ್ರೆಸ್: ಆರ್.ಅಶೋಕ್ ವಾಗ್ದಾಳಿ

ಮಂಡ್ಯ: ಕಾಂಗ್ರೆಸ್ ಭ್ರಷ್ಟಾಚಾರದ ಕೂಪವಾಗಿದ್ದು, ಭಯೋತ್ಪಾದಕರನ್ನು ರಕ್ಷಿಸುವ ಕೆಲಸ ಮಾಡುತ್ತಿದೆ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.
ನಗರದ ಹೊರ ವಲಯದ ಅಮರಾವತಿ ಹೊಟೇಲ್‌ನಲ್ಲಿ ಶುಕ್ರವಾರ ನಡೆದ ಬಿಜೆಪಿ-ಜೆಡಿಎಸ್ ಪಕ್ಷದ ಮೈತ್ರಿ ಕಾರ್ಯಕರ್ತರ ಸಭೆಯ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿ, ಬೆಂಗಳೂರಿನ ರಾಮೇಶ್ವರಂ ಕಫೆ ಬ್ಲಾಸ್ಟ್ ಪ್ರಕರಣದಲ್ಲಿ ಭಾಗಿಯಾಗಿದವರನ್ನು ಸಹೋದರರ ಹೆಸರಿನಲ್ಲಿ ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರು ರಕ್ಷಣೆ ಮಾಡಲು ಮುಂದಾಗಿದ್ದರು ಎಂದು ಆಕ್ರೊಶ ವ್ಯಕ್ತಪಡಿಸಿದರು.
ರಾಮೇಶ್ವರಂ ಹೊಟೇಲ್ನಲ್ಲಿ ನಡೆದ ಬ್ಲಾಸ್ಟ್ ಪ್ರಕರಣವನ್ನು ವ್ಯವಹಾರಿಕ ಈರ್ಷೆಯಿಂದ ಬೇರೆ ಹೊಟೇಲ್‌ನವರು ಕೃತ್ಯ ಮಾಡಿರಬಹುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಗೃಹ ಸಚಿವ ಡಾ.ಪರಮೇಶ್ವರ್ ಹೇಳಿದ್ದರು, ಸ್ಪರ್ಧಾತ್ಮಕ ಪೈಪೋಟಿಯಿಂದ ಬೇರೆ ಹೊಟೇಲ್‌ನವರು ಮಾಡಲು ಸಾಧ್ಯವೇ? ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ ಪ್ರಕರಣ ನಡೆದಾಗಲೂ ಭಯೋತ್ಪಾದಕರನ್ನು ರಕ್ಷಿಸುವ ಕೆಲಸ ಮಾಡಿದರು. ಬೆಂಗಳೂರಿನ ಪ್ರಕರಣವನ್ನು ಎನ್ಐಎಗೆ ವಹಿಸುವಂತೆ ನಾವು ಒತ್ತಾಯಿಸಿದ್ದೆವು. ಆದರೂ ಸರ್ಕಾರ ವಹಿಸಲು ಹಿಂದೇಟು ಹಾಕಿತು ಎಂದು ಆರೋಪಿಸಿದರು.
ವಿಷಯ ತಿಳಿದು ಎನ್ಐಎ ಸ್ವತಃ ಧಾವಿಸಿ ತನಿಖೆ ಆರಂಭಿಸಿತ್ತು. ಮೂರು ದಿನಗಳ ಬಳಿಕ ಸರ್ಕಾರ ಎನ್ಐಗೆ ವಹಿಸುವ ಕೆಲಸ ಮಾಡಿತು, ಬೆಂಗಳೂರಿನ ಜನ ಭಯಭೀತರಾಗಿದ್ದಾರೆ. ರಾಜ್ಯದಲ್ಲೂ ಒಂದು ರೀತಿಯಲ್ಲಿ ಆತಂಕದ ಪರಿಸ್ಥಿತಿ ಉಂಟಾಗಿದೆ. ರಾಮೇಶ್ವರಂ ಹೊಟೇಲ್ ಬಾಂಬ್ ಬ್ಲಾಸ್ಟ್‌ನಿಂದಾಗಿ ಇಡೀ ಬೆಂಗಳೂರೇ ತಲ್ಲಣವಾಗಿದೆ, ಭಯೋತ್ಪಾದಕರನ್ನು ಸಹೋದರರು ಎನ್ನುವ ಕಾಂಗ್ರೆಸ್ಸಿಗರು ಮೃಧು ಧೋರಣೆ ಅನುಸರಿಸುತ್ತಿದ್ದಾರೆ ಎಂದು ಕುಟುಕಿದರು.
ಭಯೋತ್ಪಾದಕ ಘಟನೆ ಎಂದು ಬಟಾ ಬಯಲಾಗಿದ್ದರೂ ಸಹ ಅವರ ಬಗ್ಗೆ ಸಾಫ್ಟ್ ಆಗಿ ಪ್ರತಿಕ್ರಿಯಿಸುತ್ತಿದ್ದಾರೆ. ವಿಧಾನ ಸೌಧದಲ್ಲೇ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದರೂ ಏನೂ ಮಾಡಲಿಲ್ಲ. ದೇಶದ್ರೋಹಿಗಳಿಗೆ ಕಾಂಗ್ರೆಸ್ ಬೆಂಬಲವಾಗಿ ನಿಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಏ.14 ರಂದು ಮೈಸೂರಿಗೆ ಭೇಟಿ ನೀಡಿ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡುವರು, ಅಂದಿನ ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಾಲ್ಕೂ ಜಿಲ್ಲೆಗಳ ಎನ್‌ಡಿಎ ಅಭ್ಯರ್ಥಿಗಳಾದ ಮೈಸೂರಿನ ಯಧುವೀರ್, ಮಂಡ್ಯದ ಎಚ್.ಡಿ.ಕುಮಾರಸ್ವಾಮಿ, ಚಾಮರಾಜನಗರದ ಬಾಲರಾಜು, ಹಾಸನದ ಪ್ರಜ್ವಲ್ ರೇವಣ್ಣ ಸೇರಿದಂತೆ ವಿವಿಧ ಮುಖಂಡರು ಭಾಗವಹಿಸುವರು ಎಂದು ವಿವರಿಸಿದರು.
ಮೋದಿ ಆಗಮನದ ಹಿನ್ನಲೆಯಲ್ಲಿಯೇ ಮಂಡ್ಯದಲ್ಲಿ ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಕಾರ್ಯಕರ್ತರ ಸಭೆ ನಡೆಸಲಾಗಿದೆ. ನಾಲ್ಕೂ ಜಿಲ್ಲೆಗಳಿಂದ ಹೆಚ್ಚಿನ ಜನರು ಆಗಮಿಸುವರು, ದೊಡ್ಡ ಮಟ್ಟದ ಕಾರ್ಯಕ್ರಮನ್ನು ರೂಪಿಸಲಾಗುವುದು. ಮಂಡ್ಯಗೆ ಕುಮಾರಣ್ಣ, ಇಂಡಿಯಾಗೆ ನರೇಂದ್ರಮೋದಿ ಎಂದು ನಾವು ಹೇಳುತ್ತೇವೆ. ಕಾಂಗ್ರೆಸ್ಸಿಗರು ಮಂಡ್ಯಕ್ಕೆ ಕಂಟ್ರಾಕ್ಟರ್, ಇಂಡಿಯಾಗೆ ರಾಹುಲ ಎನ್ನುತ್ತಾರೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಭ್ರಷ್ಟಾಚಾರದ ಕೂಪವಾಗಿದೆ. ಕಳೆದ 10 ವರ್ಷಗಳಿಂದ ರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉತ್ತಮ ಸಾಧನೆ ಮಾಡಿದ್ದಾರೆ. 10 ವರ್ಷಗಳಿಂದ ಭ್ರಷ್ಟಾಚಾರ ಮಾಡಿದ್ದಾರೆ ಎನ್ನುವ ಕಾಂಗ್ರೆಸ್ಸಿಗರು 50 ವರ್ಷ ಏನು ಮಾಡಿದ್ದಾರೆ? ಗರೀಬಿ ಹಠಾವೋ, 3ಜಿ, 4ಜಿ, ಭೂಮಿಯೊಳಗೆ, ಆಕಾಶದಲ್ಲಿ ಎಲ್ಲಕಡೆ ಕಾಂಗ್ರೆಸ್ಸಿಗರು ಭ್ರಷ್ಟಾಚಾರ ನಡೆಸಿರುವುದು ಜಗಜ್ಜಾಹೀರಾಗಿದೆ. ಪ್ರಧಾನಿ ಮೋದಿಯವರು ದೇಶ ಕಾಯುವ ಕಾವಲುಗಾರನಾಗಿ ಕೆಲಸ ಮಾಡಿದ್ದಾರೆ. ಅದರಿಂದಾಗಿ ನಾವು ರಾಜ್ಯದ 28 ಕ್ಕೆ 28 ಕ್ಷೇತ್ರದಲ್ಲೂ ಗೆಲುವು ಸಾಧಿಸಲು ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ನಮ್ಮ ಪಕ್ಷದ ಸ್ಟಾರ್ ಕ್ಯಾಂಪೇನರ್ ಸುಮಲತಾ ಅಂಬರೀಷ್ ಆಗಿದ್ದಾರೆ. ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಯಾವಾಗ ದಿನಾಂಕ ಗೊತ್ತುಪಡಿಸುತ್ತಾರೋ ಅಂದು ಸುಮಲತಾ ಮಂಡ್ಯದಲ್ಲಿ ಪ್ರಚಾರ ನಡೆಸಲಿದ್ದಾರೆ, ಕೇವಲ ಮಂಡ್ಯ ಮಾತ್ರವಲ್ಲದೆ, ಮೈಸೂರು, ಬೆಂಗಳೂರು, ಚಾಮರಾಜನಗರ ಸೇರಿದಂತೆ ಹಲವೆಡೆ ಶುದ್ಧ ಮನಸ್ಸಿನಿಂದ ಪ್ರಚಾರ ಮಾಡಲಿದ್ದಾರೆ. ಜೊತೆಗೆ ಮೋದಿಯವರ ಸಮಾವೇಶದಲ್ಲೂ ವೇದಿಕೆ ಮೇಲೆ ಇರಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮುಖಂಡರಾದ ಸಿ.ಎಸ್.ಪುಟ್ಟರಾಜು, ಪ್ರತಾಪಸಿಂಹ, ಮೈ.ವಿ.ರವಿಶಂಕರ್, ಡಾ.ಎನ್.ಎಸ್.ಇಂದ್ರೇಶ್, ವಿದ್ಯಾನಾಗೇಂದ್ರ, ರೂಪ, ಎಂ.ಎಸ್.ರಘುನಂದನ್, ಬಿ.ಆರ್.ರಾಮಚಂದ್ರ, ಮುನಿರಾಜು, ವಿವೇಕ್, ಪ.ನಾ.ಸುರೇಶ್, ಅಶೋಕ್‌ಕುಮಾರ್, ಪ್ರಸನ್ನಕುಮಾರ್, ಚಾಮರಾಜು, ಕೆರಗೋಡು ಮಹೇಶ ಇದ್ದರು.
Hassan
ಸಂಭ್ರಮದಿಂದ ನಡೆದ ವೀರಭದ್ರೇಶ್ವರ ಸ್ವಾಮಿಯ 46ನೇ ಜಾತ್ರಾ ಮಹೋತ್ಸವ

ಆಲೂರು: ತಾಲ್ಲೂಕಿನ ಅಡವಿ ಬಂಟೆನಹಳ್ಳಿ ಗ್ರಾಮದಲ್ಲಿ ಶ್ರೀ ದೇವೀರಮ್ಮ ಶ್ರೀ ವೀರಭದ್ರೇಶ್ವರ ಸ್ವಾಮಿಯವರ 46ನೇ ವರ್ಷದ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರ ನಡುವೆ ಸಂಭ್ರಮದಿಂದ ನಡೆಯಿತು.
ಮಾ.13ರ ಗುರುವಾರ ರಾಮೇಶ್ವರ ಹಳ್ಳದಲ್ಲಿ ಶ್ರೀ ದೇವೀರಮ್ಮ ಶ್ರೀ ವೀರಭದ್ರೇಶ್ವರ ಸ್ವಾಮಿಯವರಿಗೆ ಗಂಗಾಸ್ನಾನ ಏರ್ಪಡಿಸಲಾಗಿತ್ತು. ಶ್ರೀ ಕ್ರೋಧಿನಾಮ ಸಂವತ್ಸರೇ ಉತ್ತರಾಯಣೇ ಶಿಶಿರ ಋತು ಫಾಲ್ಗುಣ ಶುಕ್ಲ ಪಕ್ಷ 1927 ಗತಕಲಿ 5101 ದಿನಾನಿ14 ಪೂರ್ವ ಭಾದ್ರಪದ ಉತ್ತರ ಪಲ್ಗುಣಿ ನಕ್ಷತ್ರ ಪೂರ್ಣಿಮೆಯ ಮಾ. 14 ರ ಶುಕ್ರವಾರ ಬೆಳಿಗ್ಗೆ 8-00 ಗಂಟೆಗೆ ಗ್ರಾಮದ ದೇವಸ್ಥಾನದಲ್ಲಿ ಶ್ರೀ ದೇವೀರಮ್ಮನವರ ಮೂಲಸ್ಥಾನದಲ್ಲಿ ಅಂಕುರಾರ್ಪಣ ರುದ್ರಾಭಿಷೇಕ ಮತ್ತು ಮಹಾಮಂಗಳಾರತಿಯನ್ನು ಏರ್ಪಡಿಸಿ ಮತ್ತು ಸಂಜೆ 3-00 ಗಂಟೆಗೆ ಶ್ರೀ ಮಳೆಮಲ್ಲೇಶ್ವರ ಸ್ವಾಮಿಯವರ ಬೆಟ್ಟದಲ್ಲಿ ಶ್ರೀ ದೇವೀರಮ್ಮ- ಶ್ರೀ ವೀರಭದ್ರೇಶ್ವರ ಸ್ವಾಮಿಯವರಿಗೆ ರುದ್ರಾಭಿಷೇಕ ನಡೆಯಿತು, ಸಂಜೆ 7-30 ಗಂಟೆಗೆ ಸರಿಯಾಗಿ ಶ್ರೀ ಮಳೆಮಲ್ಲೇಶ್ವರ ಸ್ವಾಮಿಯವರ ಬೆಟ್ಟದಿಂದ ಶ್ರೀ ದೇವೀರಮ್ಮ ಶ್ರೀ ವೀರಭದ್ರೇಶ್ವರ ಸ್ವಾಮಿಯವರ ಮುತ್ತಿನ ಮಂಟಪ ಉತ್ಸವ ನಂದಿಧ್ವಜ, ವೀರಭದ್ರ ಕುಣಿತ, ಕೋಲಾಟ, ಡೊಳ್ಳು ಕುಣಿತ ಹಾಗೂ ವಿವಿಧ ವಾದ್ಯದೊಂದಿಗೆ ಮೆರವಣಿಗೆ ಮೂಲಕ ಗ್ರಾಮಕ್ಕೆ ಆಗಮನ ರಾತ್ರಿ 8-30 ರಿಂದ 10-30ರವರೆಗೆ ಅರ್ಚನೆ ಮಹಾಮಂಗಳಾರತಿ ಕಾರ್ಯಕ್ರಮ ನಡೆದವು.
ರಾತ್ರಿ 10-30 ಗಂಟೆಯಿಂದ ನಂದಿಧ್ವಜದೊಂದಿಗೆ ಶ್ರೀ ದೇವೀರಮ್ಮ ಸ್ವಾಮಿಯವರ ಉತ್ಸವ ಜರುಗಿದವು.
ಮಾ.15ರ ಶನಿವಾರ ಬೆಳಗ್ಗೆ 5-30 ಗಂಟೆಯಿಂದ ಕಳಸ ಶ್ರೀ ದೇವೀರಮ್ಮ ಶ್ರೀ ವೀರಭದ್ರೇಶ್ವರ ಸ್ವಾಮಿಯವರ ಮೆರವಣಿಗೆಯೊಂದಿಗೆ ಕೆಂಡೋತ್ಸವ ಕಾರ್ಯಕ್ರಮ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು. ಹೊತ್ತ ಭಕ್ತರು ಕೆಂಡ ಹಾಯ್ದರು. ಹರಕೆ ಹೊತ್ತ ಭಕ್ತರು ಕೆಂಡ ತುಳಿದು ತಮ್ಮ ಭಕ್ತಿ ಸಮರ್ಪಿಸಿದರು.
ಜಾತ್ರಾ ಮಹೋತ್ಸವ ಅಂಗವಾಗಿ ರಾತ್ರಿ “ರಾಜಾ ಸತ್ಯವ್ರತ ಅಥವಾ ಶನಿಪ್ರಭಾವ ” ಎಂಬ ಸುಂದರ ಪೌರಾಣಿಕ ನಾಟಕವನ್ನು ಏರ್ಪಡಿಸಲಾಗಿತ್ತು. ಮಾ.16 ನೇ ಭಾನುವಾರ ಬೆಳಿಗ್ಗೆ 9-00 ಗಂಟೆಯಿಂದ ಭೂತಪ್ಪನವರ ಸೇವಾ ಕಾರ್ಯಗಳು ನಡೆದವು.
ಮಾ.14 ರ ಶುಕ್ರವಾರ ರಾತ್ರಿಯಿಂದ ಮಾ.15ರ ಶನಿವಾರ ರಾತ್ರಿವರೆಗೆ ಎಲ್ಲಾ ಭಕ್ತಾದಿಗಳಿಗೂ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.
ಬೇಲೂರು: ಟಿ.ವಿ.ಮಾಧ್ಯಮಗಳ ಹೊಡೆತಕ್ಕೆ ಸಿಲುಕಿ ನಲುಗಿರುವ ನಾಟಕ ಕಲೆ ಇಂದಿಗೂ ಜೀವಂತವಾಗಿದೆ ಎಂದರೆ, ಇದಕ್ಕೆ ಗ್ರಾಮೀಣ ಪ್ರದೇಶದ ಜನರ ಪ್ರೋತ್ಸಾಹ ಹಾಗೂ ಆಸಕ್ತಿಯೇ ಕಾರಣವಾಗಿದೆ ಎಂದು ಶಾಸಕ ಹೆಚ್.ಕೆ ಸುರೇಶ್ ತಿಳಿಸಿದರು.
ತಾಲೂಕಿನ ಹಗರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೇರಿದ ಅಡವಿ ಬಂಟೆನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ 46ನೇ ವರ್ಷದ ಶ್ರೀ ದೇವೀರಮ್ಮ ಶ್ರೀ ವೀರಭದ್ರೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ರಾಜಾ ಸತ್ಯವ್ರತ ಅಥವಾ ಶನಿಪ್ರಭಾವ ” ಎಂಬ ಸುಂದರ ಪೌರಾಣಿಕ ನಾಟಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು, ಇಂದಿನ ದಿನಮಾನಗಳಲ್ಲಿ ಟಿವಿ, ಮೊಬೈಲ್ ಹಾವಳಿಯಿಂದ ಪೌರಾಣಿಕ ನಾಟಕಗಳು ನಶಿಸುತ್ತಿವೆ. ಗ್ರಾಮೀಣ ಭಾಗದ ಕಲಾಭಿಮಾನಿಗಳು ಪೌರಾಣಿಕ ನಾಟಕಗಳನ್ನು ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕೆಂದು ಕರೆ ನೀಡಿದರು. ಬಂಟೆನಹಳ್ಳಿಯ ಗ್ರಾಮಕ್ಕೆ ಅರಣ್ಯ ಇಲಾಖೆಯಿಂದ ಆಗುತ್ತಿರುವ ಸಮಸ್ಯೆಯನ್ನು ಸಮಸ್ಯೆಯನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಈ ಬಗ್ಗೆ ಸದನದಲ್ಲೂ ಕೂಡ ಸರ್ಕಾರವನ್ನ ಗಮನ ಸೆಳೆಯುವಂತಹ ಕೆಲಸ ಮಾಡುತ್ತೇನೆ ಎಂದರು.
ವೇದಿಕೆ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ನವೀನ್, ಬಿಜೆಪಿ ಮುಖಂಡ ಡಿಶಾಂತ್ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ಮುತ್ತಣ್ಣ, ಪೃಥ್ವಿರಾಜ್, ವಕೀಲರಾದ ವೀರಭದ್ರೇಗೌಡ, ಗ್ರಾಮದ ಮುಖಂಡರಾದ ಸಿದ್ದಮಲ್ಲೇಗೌಡ, ಬಸವರಾಜ್, ವಿರುಪಾಕ್ಷ, ಜಯಣ್ಣ ಗ್ರಾಮಸ್ಥರು ಹಾಗೂ ಭಕ್ತರು ಹಾಜರಿದ್ದರು.
Hassan
ಛತ್ರಪತಿ ಶಿವಾಜಿ ತತ್ವ ಆದರ್ಶ ಅನುಸರಿಸಿ: ಸಂಸದ ಶ್ರೇಯಸ್ ಪಟೇಲ್

ಹಾಸನ : ಇಡೀ ದೇಶಕ್ಕೆ ಮಾದರಿಯಾದ ಛತ್ರಪತಿ ಶಿವಾಜಿ ಮಹಾರಾಜರ ತತ್ವ ಆದರ್ಶಗಳನ್ನು ಎಲ್ಲರೂ ಅನುಸರಿಸಬೇಕು ಎಂದು ಸಂಸದ ಶ್ರೇಯಸ್ ಪಟೇಲ್ ಕರೆ ನೀಡಿದರು.
ನಗರದ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಭಾನುವಾರದಂದು ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿವಾಜಿ ಅವರ ಧೈರ್ಯ, ಶೌರ್ಯ, ನೇರ ನುಡಿಯನ್ನು ಎಲ್ಲರೂ ಮೆಚ್ಚಲೇಬೇಕು. ಶಿವಾಜಿ ಅವರು ಒಂದು ಸಮಾಜಕ್ಕೆ ಸೀಮಿತವಾದವರಲ್ಲ. ಇಡೀ ದೇಶಕ್ಕೆ ಮಾದರಿಯಾದ ಕ್ರಾಂತಿವೀರರು. ಮುಂದಿನ ಪೀಳಿಗೆಯವರು, ನಾವು ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗೋಣ ಎಂದು ಹೇಳಿದರು.
ಬೆಂಗಳೂರಿನ ಗೋಸಾಯಿ ಮಠದ ಮಂಜುನಾಥ ಸ್ವಾಮೀಜಿ ಮಾತನಾಡಿ, ಛತ್ರಪತಿ ಶಿವಾಜಿಯವರು ಕೇವಲ ಮರಾಠ ಸಮಾಜಕ್ಕೆ ಸೀಮಿತವಲ್ಲ, ಇಡೀ ವಿಶ್ವಕ್ಕೆ ಆದರ್ಶ ಪುರುಷರಾಗಿದ್ದಾರೆ. ಶಿವಾಜಿ ರಾಷ್ಟ್ರ ನಾಯಕ, ಸ್ವರಾಜ್ಯ ಸ್ಥಾಪಕರಾಗಿದ್ದಾರೆ. ಭಾರತೀಯರೆಲ್ಲರೂ ಒಂದೇ ಎಂಬ ಉದಾತ್ತ ಆದರ್ಶ ಕೊಟ್ಟಿರುವ ಮಹಾಪುರುಷರಲ್ಲಿ ಶಿವಾಜಿ ಅವರೂ ಒಬ್ಬರು. ಶಿವಾಜಿವನ್ನು ನಾಲ್ಕು ಗೋಡೆಗೆ ಸೀಮಿತಗೊಳಿಸದೆ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಅನುಷ್ಟಾನಕ್ಕೆ ತರಬೇಕು ಎಂದು ಹೇಳಿದರು.
ಶಾಸಕ ಹೆಚ್.ಪಿ. ಸ್ವರೂಪ್ ಮಾತನಾಡಿ, ಶಿವಾಜಿಯವರು ವೀರ ಯೋಧರಾಗಿದ್ದು, ವಿಶ್ವ ಪ್ರಸಿದ್ಧರಾಗಿದ್ದಾರೆ. ಶಿವಾಜಿ ಅವರ ಪುತ್ತಳಿಯನ್ನು ಹಾಸನದಲ್ಲಿ ಶೀಘ್ರದಲ್ಲೇ ಅನಾವರಣ ಮಾಡೋಣ ಹಾಗೂ ಮರಾಠ ಸಮುದಾಯದ ಮಕ್ಕಳಿಗೆ ವಸತಿ ನಿಲಯವನ್ನು ನಿರ್ಮಾಣ ಮಾಡಿಕೊಡುವುದರ ಕುರಿತು ನೀವು ಕೂಡ ಮನವಿ ಮಾಡಿದ್ದೀರಿ ಅದನ್ನು ಶೀಘ್ರದಲ್ಲೇ ಶಾಸಕರ ನಿಧಿಯಿಂದ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮಕ್ಕೂ ಮೊದಲು ೩೯೮ನೇ ಶ್ರೀ ಶಿವ ಛತ್ರಪತಿ ಶಿವಾಜಿ ಮಹಾರಾಜರ ಜಯಂತೋತ್ಸವದ ಅಂಗವಾಗಿ ಶ್ರೀ ಅಂಬಾಭವಾನಿ ಕಲ್ಯಾಣ ಮಂಟಪ, ಅಗ್ರಹಾರ, ಹಾಸನದಲ್ಲಿ ಬೆಳಗ್ಗೆ ಒಂಬತ್ತು ಗಂಟೆಗೆ ಪೂಜಾ ಕಾರ್ಯಕ್ರಮಗಳನ್ನು ಮುಗಿಸಿ ಇಲ್ಲಿಂದ ಮೆರವಣಿಗೆ ಹೊರಟು ಹಳೆ ಬಸ್ ಸ್ಟ್ಯಾಂಡ್ ರಸ್ತೆ ಮಾರ್ಗವಾಗಿ ಕಲಾಭವನವರೆಗೆ ಮೆರವಣಿಗೆ ನಡೆಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಎಚ್.ಪಿ. ತಾರಾನಾಥ್, ಹಾಸನ ಜಿಲ್ಲಾ ನೌಕರರ ಸಂಘದ ಗೌವಾಧ್ಯಕ್ಷರಾದ ಈ. ಕೃಷ್ಣೇಗೌಡ, ವಕೀಲರಾದ ವಿಜಯಕುಮಾರ್ ನಾರ್ವೆ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತಿನ ಹಾಸನ ಜಿಲ್ಲಾಧ್ಯಕ್ಷರಾದ ಎನ್ ಲೀಲಾಕುಮಾರ್, ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಎ.ವಿ. ರುದ್ರಪ್ಪಾಜಿರಾವ್ ಫೋರ್ಪಡೆ, ಗೌರವಾಧ್ಯಕ್ಷ ಹೆಚ್.ಜೆ. ತುಳಜಿರಾವ್ ಠಾಣ್ಗೆ, ಖಜಾಂಚಿ ಪ್ರಕಾಶ್, ನಿರ್ದೇಶಕ ಸುರೇಶ್ ಇತರರು ಉಪಸ್ಥಿತರಿದ್ದರು. ಯದೀಶ್ ಅವರು ಕಾರ್ಯಕ್ರಮ ನಿರೂಪಿಸಿದರು.
Hassan
ಏ.12, 13ರಂದು ಹಾಸನದಲ್ಲಿ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ

ಹಾಸನ: ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಟಿ.ವಿ. ಶಿವಾನಂದ್ ತಗಡೂರು ಸೂಚನೆಯಂತೆ ಏಪ್ರಿಲ್ 12 ಮತ್ತು 13 ರಂದು ನಗರದ ಸರಕಾರಿ ಕಲಾ ಕಾಲೇಜು ಮತ್ತು ಸರಕಾರಿ ವಿಜ್ಞಾನ ಕಾಲೇಜು ಆವರಣದಲ್ಲಿ ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿಮೆಂಟ್ ನಡೆಸಲು ಹಾಸನ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಸಭೆ ನಡೆಸಿ ಯಶಸ್ವಿಯಾಗಿ ನಡೆಸಲು ನಿರ್ಧರಿಸಲಾಯಿತು.
ಸಭೆಯ ಅಧ್ಯಕ್ಷತೆವಹಿಸಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಟಿ.ವಿ. ಶಿವಾನಂದ್ ತಗಡೂರು ಮಾತನಾಡಿ, ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಹಾಸನದಲ್ಲಿ ಆಯೋಜಿಸಲು ತೀರ್ಮಾನ ಮಾಡಲಾಗಿದ್ದು, ಕಳೆದ ವರ್ಷ ಮಂಗಳೂರಿನಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನು ಬಹಳ ಅಚ್ಚುಕಟ್ಟಾಗಿ ಆಯೋಜನೆ ಮಾಡಲಾಗಿತ್ತು. ಅದಕ್ಕಿಂತ ಬಿನ್ನವಾಗಿ ಇಲ್ಲಿ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಲು ಆಲೂಚನೆ ಇಟ್ಟುಕೊಂಡು ನಿರ್ಧರಿಸಲಾಗಿದೆ. ಕೊಪ್ಪಳದಲ್ಲಿ ನಡೆದ ಸಮ್ಮೇಳನದಲ್ಲಿ ಮದನ್ ಗೌಡರು ತಿಳಿಸಿದ್ದರು. ಏಪ್ರಿಲ್ ೧೨ ಮತ್ತು ೧೩ನೇ ದಿನಾಂಕದಂದು ಹಾಸನದಲ್ಲಿ ಏರ್ಪಡು ಮಾಡಲು ಭಾನುವಾರದಂದು ನಡೆದ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದರು.
ಯಾರು ಪತ್ರಕರ್ತರ ಸಂಘದ ಸದಸ್ಯರಾಗಿದ್ದಾರೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಒಂದೊಂದು ತಂಡ ಭಾಗವಹಿಸಲು ಅವಕಾಶ ಇರುತ್ತದೆ. ಪ್ರತಿಯೊಬ್ಬರ ಐಡಿ ಕಾರ್ಡ್ ಪರೀಕ್ಷೆ ಮಾಡಲಾಗುದು. ಹೊರ ಜಿಲ್ಲೆಯಿಂದ ಬರುವ ಪತ್ರಕರ್ತ ಕ್ರೀಡಾಪಟುಗಳಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಕ್ರೀಡಾಕೂಟ ಯಶಸ್ವಿಗೆ ಜಿಲ್ಲಾ ಸಮಿತಿ, ಉಪ ಸಮಿತಿ ಮಾಡಿಕೊಂಡು ಆವರವರ ಜವಬ್ಧಾರಿಯನ್ನು ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ವಹಿಸಿಕೊಡಲಿದೆ. ಪ್ರಾರಂಭದ ದಿನದಲ್ಲಿ ಮೊದಲ ಆಟ ಸೆಲೆಬ್ರೆಟಿ ಕ್ರಿಕೆಟ್ ನಡೆಯಲಿದೆ. ಮಂಗಳೂರಿನಲ್ಲಿಯೂ ಕೂಡ ಸೆಲಬ್ರಿಟಿ ಜನಪ್ರತಿನಿಧಿಗಳಿಂದ ಆಟೋಟ ನಡೆದಿತ್ತು. ಒಟ್ಟಾರೆ ರಾಜ್ಯ ಮಟ್ಟದ ಈ ಕ್ರಿಕೆಟ್ ಕ್ರೀಡಾಕೂಟವನ್ನು ಯಶಸ್ವಿಗೊಳಿಸುವಂತೆ ಕರೆ ನೀಡಿ ಮನವಿ ಮಾಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂರ್ಘದ ಅಧ್ಯಕ್ಷ ಕೆ.ಹೆಚ್. ವೇಣುಕುಮಾರ್ ಮಾತನಾಡಿ, ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸುವ ಕ್ರಿಕೆಟ್ ಕ್ರೀಡಾಪಟುಗಳಿಗೆ ವಸತಿ ಸೌಲಭ್ಯ, ಊಟದ ವ್ಯವಸ್ಥೆ ಸೇರಿದಂತೆ ಎಲ್ಲಾ ಸಿದ್ಧತೆಗಳನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮಾಡುತ್ತಿದೆ. ಕ್ರಿಕೆಟ್ ಪಂದ್ಯಾವಳಿಗೆ ವಿಶೇಷವಾಗಿ ರಾಜ್ಯ ಸಭಾಪತಿ ಯೂ.ಟಿ. ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಆಗಮಿಸಲಿದ್ದಾರೆ. .
ಸಭೆಯಲ್ಲಿ ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಣಿ ಸದಸ್ಯ ಹೆಚ್.ಬಿ. ಮದನ್ ಗೌಡ, ಮಾಜಿ ಅಧ್ಯಕ್ಷರಾದ ಮಂಜುನಾಥ್, ರವಿನಾಕಲಗೂಡು, ಬಿ.ಆರ್. ಉದಯಕುಮಾರ್, ಪ್ರಸನ್ನಕುಮಾರ್, ಕಾರ್ಯದರ್ಶಿ .ಪಿ.ಎ. ಶ್ರೀನಿವಾಸ್, ಕುಮಾರ್, ನಟರಾಜು, ಜಿ. ಪ್ರಕಾಶ್, ಹೆತ್ತೂರ್ ನಾಗರಾಜು, ಜ್ಞಾನೇಶ್, ಕುಶ್ವಂತ್, ಕೃಷ್ಣ, ನಾಗರಾಜು, ಮಂಜು, ಮೆಹಾಬೂಬ್, ದಯಾನಂದ್, ಶರತ್ ಇತರರು ಉಪಸ್ಥಿತರಿದ್ದರು.
-
Chamarajanagar21 hours ago
ಕಾಂಗ್ರೆಸ್ ಗೆ ಭರ್ಜರಿ ಗೆಲುವು
-
Uncategorized20 hours ago
ಕಾಡಾನೆ ಸೆರೆ ಕಾರ್ಯಾಚರಣೆ ಯಶಸ್ವಿ: ಪುಂಡಾನೆ ಸೆರೆ ಹಿಡಿದ ಕ್ಯಾಪ್ಟನ್ ಪ್ರಶಾಂತ್ ಅಂಡ್ ಟೀಮ್
-
Chamarajanagar21 hours ago
ಕಾರು ಅಪಘಾತ ಇಬ್ಬರು ಸ್ಥಳದಲ್ಲೇ ಮೃತ
-
Chikmagalur23 hours ago
ಹತ್ತು ಲಕ್ಷ ಮೌಲ್ಯದ 11 ಬೈಕ್ ಕದ್ದಿದ್ದ ಕಳ್ಳನ ಬಂಧನ
-
National - International13 hours ago
ಪಾಕ್ನ 90 ಮಂದಿ ಸೈನಿಕರನ್ನು ಹತ್ಯೆ ಮಾಡಿದ್ದೇವೆ ಎಂದ ಬಲೂಚ್ ಲಿಬರೇಶನ್ ಆರ್ಮಿ
-
Kodagu14 hours ago
ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕೆರೆಗೆ ಬಿದ್ದು ಬಾಲಕಿ ಮೃ*ತ
-
Chamarajanagar15 hours ago
ತಲೆಯಲ್ಲಿ ಕೂದಲಿಲ್ಲ ಎಂದು ನಿಂದಿಸಿದ ಪತ್ನಿ: ಮನನೊಂದ ಪತಿ ಆತ್ಮ*ಹತ್ಯೆ
-
Mandya18 hours ago
ಮಳವಳ್ಳಿ ವಸತಿ ಶಾಲೆಯ ದುರ್ಘಟನೆ : ಎಚ್ಡಿಕೆ ಕಳವಳ