Hassan
ನಿಗಮ ಮಂಡಳಿ ಅಧ್ಯಕ್ಷರಿಗೆ ಸಚಿವ ದರ್ಜೆ–ವೇತನ, ಬಾಡಿಗೆ ಹೆಚ್ಚಳ: ಸರ್ಕಾರದ ವಿರುದ್ಧ ಎಂಎಲ್‌ಸಿ ಡಾ. ಸೂರಜ್ ರೇವಣ್ಣ ಅಸಮಾಧಾನ
ಹಾಸನ: ನಿಗಮ–ಮಂಡಳಿ ಅಧ್ಯಕ್ಷರಿಗೆ ಸಚಿವ ದರ್ಜೆ ಸ್ಥಾನಮಾನ ನೀಡಿ, ವೇತನ ಹಾಗೂ ಬಾಡಿಗೆ ಹೆಚ್ಚಳ ಮಾಡುವ ವಿಚಾರದ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ಎಂಎಲ್‌ಸಿ ಡಾ. ಸೂರಜ್ ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೆಲಗಳಲೆ ಗ್ರಾಮದಲ್ಲಿ ಮಾತನಾಡಿದ ಅವರು, ರಾಜ್ಯದ ಆರ್ಥಿಕ ಪರಿಸ್ಥಿತಿ ದುರ್ಬಲವಾಗಿರುವುದು ಇಡೀ ರಾಜ್ಯದ ಜನರಿಗೆ ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದು ಹೇಳಿದರು. “ನಾವೇನು ವಿಶೇಷವಾಗಿ ಹೇಳಬೇಕಿಲ್ಲ. ಒಂದೆಡೆ ಗ್ಯಾರೆಂಟಿಗಳ ಹಾವಳಿ, ಮತ್ತೊಂದೆಡೆ ಅನುದಾನದ ಅಭಾವ ಎದುರಾಗಿದೆ” ಎಂದು ಟೀಕಿಸಿದರು.

ವಿರೋಧ ಪಕ್ಷದವರು ಮಾತ್ರವಲ್ಲ, ಆಡಳಿತ ಪಕ್ಷದ ಶಾಸಕರೇ ತಮ್ಮ ಕ್ಷೇತ್ರಗಳಿಗೆ ಅನುದಾನ ಸಿಗುತ್ತಿಲ್ಲ, ಅಭಿವೃದ್ಧಿ ಆಗುತ್ತಿಲ್ಲ ಎಂದು ಪಕ್ಷದ ಸಭೆಗಳಲ್ಲಿ ಹಾಗೂ ಸಾರ್ವಜನಿಕವಾಗಿ ಅಳಲು ತೋಡಿಕೊಳ್ಳುತ್ತಿರುವುದು ರಾಜ್ಯದ ಆರ್ಥಿಕ ಸ್ಥಿತಿಯ ಪ್ರತಿಬಿಂಬವಾಗಿದೆ. ಈ ವಿಚಾರಗಳು ಈಗ ಬಹಿರಂಗವಾಗಿ ಚರ್ಚೆಯಾಗುತ್ತಿವೆ ಎಂದು ಹೇಳಿದರು.
“ಕರ್ನಾಟಕ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸರ್ಕಾರ ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೋ ನೋಡಬೇಕಿದೆ. ಎಲ್ಲೂ ಶಾಶ್ವತವಾದ, ಸಾರ್ವಜನಿಕರಿಗೆ ನಿಜಕ್ಕೂ ಅನುಕೂಲವಾಗುವ ಹಾಗೂ ಅಗತ್ಯವಿರುವ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ” ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಜನಪ್ರಿಯ ಕಾರ್ಯಕ್ರಮಗಳನ್ನು ನೀಡಿದ್ದರು. ಆದರೆ ಇಂದಿನ ಪರಿಸ್ಥಿತಿ ಮತ್ತು ಆಗಿನ ಪರಿಸ್ಥಿತಿಯನ್ನು ಹೋಲಿಸಿ ಚಿಂತನೆ ಮಾಡಬೇಕಾಗಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಸಲಹೆ ನೀಡಿದರು.
“ಈ ಗ್ಯಾರೆಂಟಿಗಳೆಲ್ಲಾ ಚುನಾವಣೆಗೆ ಮಾತ್ರ ಸೀಮಿತ. ಇದರಿಂದ ರಾಜ್ಯದ ಯಾರಿಗೂ ದೀರ್ಘಾವಧಿಯಲ್ಲಿ ಒಳ್ಳೆಯದಾಗುವುದಿಲ್ಲ” ಎಂದು ಡಾ. ಸೂರಜ್ ರೇವಣ್ಣ ಹೇಳಿದರು.
ವರಿಷ್ಠರ ತೀರ್ಮಾನವೇ ಅಂತಿಮ
ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮಾಜಿ ಶಾಸಕ ಪ್ರೀತಂಗೌಡ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಅದರ ಬಗ್ಗೆ ನಮ್ಮ ಪಕ್ಷದ ಹಾಗೂ ಬಿಜೆಪಿ ಪಕ್ಷದ ವರಿಷ್ಠರು ಕುಳಿತು ತೀರ್ಮಾನ ಮಾಡುತ್ತಾರೆ. ನಮ್ಮ ಅಭಿಪ್ರಾಯದಲ್ಲಿ ಪಕ್ಷ ಸದೃಢವಾಗಿ ಸಾಗುತ್ತಿದೆ” ಎಂದರು.

ಡಿಸಿಸಿ ಬ್ಯಾಂಕ್ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಬಹುತೇಕ ಚುನಾವಣೆಗಳಲ್ಲಿ ನಮ್ಮ ಪಕ್ಷ ಮೇಲುಗೈ ಸಾಧಿಸಿದ್ದು, ಯಾವುದೇ ಒಳ–ಹೊರ ಬೆಂಬಲವಿಲ್ಲದೆ ಜಯ ಸಾಧಿಸಿ ಉತ್ತಮ ಸ್ಥಿತಿಯಲ್ಲಿ ಇದೆ ಎಂದು ಹೇಳಿದರು. ಈ ಯಶಸ್ಸನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ಸ್ಪಷ್ಟಪಡಿಸಿದರು.
“ಅವರು ಈ ರೀತಿಯ ಹೇಳಿಕೆಗಳನ್ನು ಹೊಸದಾಗಿ ಕೊಡುತ್ತಿಲ್ಲ. ಹಿಂದೆಯೂ ನೀಡಿದ್ದಾರೆ, ಈಗಲೂ ಕೊಡುತ್ತಿದ್ದಾರೆ, ಮುಂದೆಯೂ ಕೊಡುತ್ತಾರೆ. ಅದಕ್ಕೆ ಪ್ರತಿಕ್ರಿಯೆ ನೀಡದೇ ಇರುವುದು ಉತ್ತಮ” ಎಂದರು.

ಬಿಜೆಪಿ ಒಂದು ರಾಷ್ಟ್ರೀಯ ಪಕ್ಷವಾಗಿದ್ದು, ಅದರ ಬಗ್ಗೆ ನಮಗೆ ಅಪಾರ ಗೌರವವಿದೆ. ನಮ್ಮ ಪಕ್ಷ ಹಾಗೂ ಬಿಜೆಪಿ ಕಾರ್ಯಕರ್ತರು ಸಮನ್ವಯತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು. ಆದರೆ ಬಿಜೆಪಿ ಪಕ್ಷದಲ್ಲಿಯೇ ಕೆಲವರು ಈ ಪವಿತ್ರ ಮೈತ್ರಿಗೆ ತೊಂದರೆ ನೀಡುವ ದುರುದ್ದೇಶ ಹೊಂದಿದ್ದಾರೆ. ಆದರೆ ಅವರು ಅದರಲ್ಲಿ ಸಫಲರಾಗುವುದಿಲ್ಲ ಎಂದು ಹೇಳಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಕುರಿತು ನಮ್ಮ ಪಕ್ಷದ ವರಿಷ್ಠರು, ಶಾಸಕರು ಹಾಗೂ ಜಿಲ್ಲೆಯ ಮುಖಂಡರ ಅಭಿಪ್ರಾಯ ಪಡೆದು ಮುಂದಿನ ಪ್ರತಿಕ್ರಿಯೆ ನೀಡಲಾಗುವುದು ಎಂದು ಡಾ. ಸೂರಜ್ ರೇವಣ್ಣ ಹೇಳಿದರು.
Hassan
MCE ಆಡಳಿತ ಮಂಡಳಿ ಜಟಾಪಟಿ: ಫೆ. 12ಕ್ಕೆ ಅವಿಶ್ವಾಸ ನಿರ್ಣಯ ಮಂಡನೆಗೆ ಹೈಕೋರ್ಟ್ ಆದೇಶ
ಹಾಸನ: ನಗರದ ಮಲೆನಾಡು ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಜಟಾಪಟಿಗೆ ಸಂಬಂಧಿಸಿದಂತೆ ಹೈ ಕೋರ್ಟ್ ಮತ್ತೊಮ್ಮೆ ಅವಿಶ್ವಾಸ ನಿರ್ಣಯಕ್ಕೆ ಅವಕಾಶ ನೀಡಿದ್ದು ಕೋರ್ಟ್ ನಿಂದಲೇ ವೀಕ್ಷಕರನ್ನು ನೇಮಕ ಮಾಡಿದೆ.
ಮಲೆನಾಡು ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ವಿಚಾರಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲಾ ನ್ಯಾಯಾಲಯ ನೀಡಿದ್ದ ಮಧ್ಯಂತರ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಬಿ.ಆರ್. ಗರುದೇವ್ ಅವರ ತಂಡ ಸಲ್ಲಿಸಿದ್ದ ಮೇಲ್ಮನವಿಯನ್ನು ಮಾನ್ಯ ಹೈಕೋರ್ಟ್ ಸೋಮವಾರ ವಿಚಾರಣೆ ನಡೆಸಿತು.
ಹಾಸನ ಜಿಲ್ಲಾ ನ್ಯಾಯಾಲಯವು ಆರ್.ಟಿ. ದೇವೇಗೌಡ ಅವರನ್ನು ಅಧ್ಯಕ್ಷರಾಗಿ, ಜಗದೀಶ್ ಚೌಡುವಳ್ಳಿ ಅವರನ್ನು ಕಾರ್ಯದರ್ಶಿಯಾಗಿ ಹಾಗೂ ಪಾರ್ಶ್ವನಾಥ್ ಅವರನ್ನು ಖಜಾಂಚಿಗಳಾಗಿ ಮುಂದುವರಿಸಲು ಅನುಮತಿ ನೀಡಿದ್ದು, ಆಡಳಿತ ಮಂಡಳಿಯ ಕಾರ್ಯನಿರ್ವಹಣೆಗೆ ಯಾವುದೇ ಅಡ್ಡಿ ಉಂಟುಮಾಡಬಾರದೆಂದು ಮಧ್ಯಂತರ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು.

ವಿಚಾರಣೆ ನಡೆಸಿದ ಹೈಕೋರ್ಟ್, ಫೆಬ್ರವರಿ 12ರಂದು 2/3 ಸಂಖ್ಯಾಬಲದ ಮಾನದಂಡದಂತೆ ಮತ್ತೊಮ್ಮೆ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ನೀಡಿದೆ. ಅಲ್ಲದೆ, ಅವಿಶ್ವಾಸ ನಿರ್ಣಯದ ಸಂಪೂರ್ಣ ಪ್ರಕ್ರಿಯೆಗೆ ಹೈಕೋರ್ಟ್‌ನಿಂದಲೇ ವೀಕ್ಷಕರನ್ನು ನೇಮಿಸಲಾಗಿದ್ದು, ಪ್ರಕ್ರಿಯೆಯ ಕುರಿತ ವರದಿಯನ್ನು ಫೆಬ್ರವರಿ 16ರಂದು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಮಲೆನಾಡು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜಗದೀಶ್ ಚೌಡುವಳ್ಳಿ, ಒಟ್ಟು 24 ನಿರ್ದೇಶಕರ ಪೈಕಿ ಕನಿಷ್ಠ 16 ನಿರ್ದೇಶಕರ ಬೆಂಬಲ ಅವಿಶ್ವಾಸ ನಿರ್ಣಯಕ್ಕೆ ಅಗತ್ಯವಿದೆ. ಪ್ರಸ್ತುತ ತಮ್ಮ ಪರವಾಗಿ 10 ನಿರ್ದೇಶಕರ ಸ್ಪಷ್ಟ ಬೆಂಬಲವಿದ್ದು, ಇನ್ನೂ 2–3 ನಿರ್ದೇಶಕರು ಬೆಂಬಲ ನೀಡುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ನಾವು ಮೊದಲ ದಿನದಿಂದಲೇ ನ್ಯಾಯಾಲಯದ ಆದೇಶಗಳನ್ನು ಗೌರವಿಸಿ, ಸಂಪೂರ್ಣ ಕಾನೂನುಬದ್ಧವಾಗಿ ಆಡಳಿತ ನಡೆಸಿಕೊಂಡು ಬಂದಿದ್ದೇವೆ. ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶವನ್ನು ಗೌರವದಿಂದ ಸ್ವಾಗತಿಸುತ್ತೇವೆ. ಮುಂದಿನ ಅವಿಶ್ವಾಸ ನಿರ್ಣಯದಲ್ಲಿಯೂ ಜಯ ಸಾಧಿಸಿ, ಜನಪರ ಆಡಳಿತವನ್ನು ಮುಂದುವರೆಸುವೆವು ಎಂಬ ದೃಢ ವಿಶ್ವಾಸವಿದೆ ಎಂದು ಅವರು ಹೇಳಿದರು.
Hassan
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಎಚ್‌ಡಿಕೆ ಅಭಿಮಾನಿಗಳಿರುವ ಕ್ಷೇತ್ರ: ನಿಖಿಲ್ ಕುಮಾರಸ್ವಾಮಿ
ಹಾಸನ : ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡರ ಬಗ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಹಾಗೂ ಚಾಮುಂಡೇಶ್ವರಿ ಕ್ಷೇತ್ರದಿಂದ ಸಾ.ರಾ.ಮಹೇಶ್ ಸ್ಪರ್ಧೆ ವಿಚಾರವಾಗಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಜಿಲ್ಲೆಯ, ಅರಕಲಗೂಡು ತಾಲೂಕಿನ, ಕೆಲಗಳಲೆ ಗ್ರಾಮದಲ್ಲಿ ಇಂದು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಇವತ್ತಿನ ಕಾಲಘಟ್ಟದಲ್ಲಿ ಇವೆಲ್ಲವನ್ನೂ ಚರ್ಚೆ ಮಾಡುವುದು ಅಪ್ರಸ್ತುತ. ಕೆಲವೊಂದು ರಾಜಕಾರಣದ ಬೆಳೆವಣಿಗೆಗಳನ್ನು ಬಹಳ ಹತ್ತಿರದಿಂದ ನೀವು ನೋಡಿದ್ದೀರಿ. ನಿಮ್ಮ ಹತ್ರ ಏನು ಮುಚ್ಚು ಮರೆ ಮಾಡಲು ಆಗಲ್ಲ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಎಚ್.ಡಿ.ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ಅವರ ಅಭಿಮಾನಿಗಳು ಇರುವ ಕ್ಷೇತ್ರ. ನಮ್ಮನ್ನು ಪ್ರೀತಿಸುವ ದೊಡ್ಡ ವರ್ಗ ಆ ಕ್ಷೇತ್ರದಲ್ಲಿದೆ ಎಂದಿದ್ದಾರೆ.

ಸ್ವಾಭಾವಿಕವಾಗಿ ಸಾರ್ವಜನಿಕ ವಲಯದಲ್ಲಿ ನಿಂತು ಚುನಾಯಿತ ಪ್ರತಿನಿಧಿಗಳು ಚರ್ಚೆ ಮಾಡಿದ ಸಂದರ್ಭದಲ್ಲಿ ಕಾರ್ಯಕರ್ತರಲ್ಲಿ ಸ್ವಲ್ಪ ಇರುಸು ಮುರುಸು ಆಗಿರುವುದು ಸತ್ಯ. ಮಾಧ್ಯಮದ ಮುಂದೆ ಮಾತನಾಡಿ ಇತ್ಯರ್ಥ ಆಗುವುದು ಏನು ಅಲ್ಲ. ಏನೇ ಬಗೆ ಹರಿಯಬೇಕಾದರೂ ಕಾಲ ಬರಬೇಕು, ಕಾಲ ನಿರ್ಣಯ ಮಾಡುತ್ತದೆ. ವರಿಷ್ಠರು ಕಾರ್ಯಕರ್ತರ ಗೌರವವನ್ನು ಕಾಪಾಡಿಕೊಳ್ಳುವ ದೃಷ್ಟಿಯಲ್ಲಿ, ಕ್ಷೇತ್ರವನ್ನು ಉಳಿಸಿಕೊಳ್ಳಲು ಆಯಾ ಸಂದರ್ಭದಲ್ಲಿ ಒಳ್ಳೆಯ ತೀರ್ಮಾನ ತೆಗೆದುಕೊಳ್ಳುತ್ತಾರೆಂದು ಈ ಪಕ್ಷದ ಕಾರ್ಯಕರ್ತನಾಗಿ ನಂಬಿಕೆ ಇಟ್ಟುಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮೈತ್ರಿ ಬಗ್ಗೆ ಮಾಜಿಶಾಸಕ ಪ್ರೀತಂಗೌಡ ವಿರೋಧ, 2028 ಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಎಂಬ ಜೆಡಿಎಸ್ ನಾಯಕರ ಹೇಳಿಕೆ ಕುರಿತು ಪ್ರೀತಂಗೌಡ ಟಾಂಗ್ ನೀಡಿದ ವಿಚಾರವಾಗಿ ಮಾತನಾಡಿದ ಅವರು, ಜನತಾದಳ ಪಕ್ಷದ ನಾಯಕತ್ವದ ಹಿಡಿದಿರುವುದು ಸನ್ಮಾನ್ಯ ಕುಮಾರಣ್ಣ ಅವರು. ದೇವೇಗೌಡರು ಸಾಹೇಬರ ಮಾರ್ಗದರ್ಶನ, ರೇವಣ್ಣ ಸಾಹೇಬರ ಅವರ ರಾಜಕೀಯ ಶಕ್ತಿ ಬಹಳ ಪ್ರಬಲವಾಗಿದೆ. ಇವತ್ತಿಗೂ ಕುಮಾರಣ್ಣ ಅವರು ಕೊಟ್ಟಂತಹ ಆಡಳಿತ, ನಾನು ಜನರೊಂದಿಗೆ ಜನತಾದಳ ಮಾಡಿದಾಗ 52 ಕ್ಷೇತ್ರದಲ್ಲಿ 9 ಸಾವಿರ ಕಿಲೋಮೀಟರ್ ಪ್ರವಾಸ ಮಾಡಿದ್ದೆ. ಮೊದಲನೇ ಹಂತದಲ್ಲಿ ಓಡಾಡಿಕೊಂಡು ಬಂದಿದ್ದೇನೆ ಎಂದು ತಿಳಿಸಿದ್ದಾರೆ.

ಎಲ್ಲೇ ಹೋದರು ಇವತ್ತಿನ ಈ ಸರ್ಕಾರದ ದುರಾಡಳಿತ, ಸರ್ಕಾರದ ಕೆಲವೊಂದು ನಡವಳಿಕೆ ನೋಡಿ ಜನರು ಬೇಸತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಎಲ್ಲೇ ಹೋದರು ಜನ ಕುಮಾರಣ್ಣನಂತಹ ನಾಯಕ ಈ ರಾಜ್ಯದ ಚುಕ್ಕಾಣಿಯನ್ನು ಹಿಡಿಯಬೇಕೆಂಬ ಪ್ರಸ್ತಾಪಗಳು ಬಹಳ ಗಟ್ಟಿಯಾಗಿ ನಡೆಯುತ್ತಿದೆ. ಅದಕ್ಕೆ ನಾನು ಸಾಕ್ಷಿ ಇದ್ದೇನೆ, 2028 ಜನತಾದಳ ಪಕ್ಷ ಎಂದರೆ ಕುಮಾರಣ್ಣನ ನೇತೃತ್ವದಲ್ಲಿ ಚುನಾವಣೆ ನಡೆಯುತ್ತದೆ. ಇದು ಕಾರ್ಯಕರ್ತರ ಅಪೇಕ್ಷೆ ಅಲ್ಲಾ, ಜನರ ಭಾವನೆ ಕೂಡ ಅದೇ ಆಗಿದೆ. ಅದನ್ನು ನಾನು ಹೊರಗಡೆ ಹಾಕಿದ್ದೀನಿ, ನಮ್ಮದು ಪ್ರಾದೇಶಿಕ ಪಕ್ಷ ಕಳೆದ ಲೋಕಸಭಾ ಚುನಾವಣೆಯಲ್ಲಿ ನಾವು ಅವರು ಜೊತೆ ಒಂದಾಗಿದ್ದೇವೆ ಎಂದಿದ್ದಾರೆ.
ರಾಜ್ಯದ ಹಿತ ದೃಷ್ಟಿಯಿಂದ ಒಂದಾಗಿದ್ದೇವೆ
ರಾಜ್ಯದ ಜನತೆಯೂ ಅದಕ್ಕೆ ಪೂರಕವಾಗಿ ಸಹಿ ಹಾಕಿದ್ದಾರೆ. ಲೋಕಸಭೆಗೆ 19 ಜನ ಸಂಸದರನ್ನು ಗೆಲ್ಲಿಸಿಕೊಟ್ಟಿದ್ದಾರೆ. ಕುಮಾರಣ್ಣ ಅವರು ಮುಂದೆ ಮುಖ್ಯಮಂತ್ರಿ ಆಗ್ತಾರೋ, ಆಗಬೇಕೋ, ಏನು ಆಗಬೇಕು, ರಾಜ್ಯ ರಾಜಕಾರಣಕ್ಕೆ ಯಾವಾಗ ಬರಬೇಕು. ಇವೆಲ್ಲವನ್ನು ಬಿಜೆಪಿಯ ರಾಷ್ಟ್ರೀಯ ನಾಯಕರು ಕಾಲ ಬಂದಂತಹ ಸಂದರ್ಭದಲ್ಲಿ ಕುಳಿತು ಚರ್ಚೆ ಮಾಡಿ ನಿರ್ಣಯ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ
ಶಿಸ್ತು ಪಾಲನೆ ಕಮಿಟಿ ಇರುತ್ತೆ, ನಮ್ಮಲ್ಲೂ ಇದೆ. ಆ ಶಿಸ್ತು ಪಾಲನೆ ಕಮಿಟಿ ಯಾರ‌್ಯಾರು ಪಕ್ಷದ ಅಶಿಸ್ತಿನ ನಡವಳಿಕೆಗೆ ಕಾರಣರಾಗುತ್ತಾರೆ. ಆಯಾ ಪಕ್ಷದ ಕಮಿಟಿಯಲ್ಲಿ ಇವೆಲ್ಲವೂ ತೀರ್ಮಾನ ಮಾಡುತ್ತಾರೆ. ಬೀದಿಯಲ್ಲಿ ನಿತ್ಕಂಡು, ಬೀದಿ ರಂಪಾಟ ಮಾಡಿಕೊಂಡು ಎರಡು ಪಕ್ಷದ ಕಾರ್ಯಕರ್ತರು, ನಾಯಕರು ಗೌರವ ಕಳೆದುಕೊಂಡು ಮಾತನಾಡಬೇಡಿ ಎಂದು ಅವರ ಪಕ್ಷದಲ್ಲಿ ತಿದ್ದಿ ಬುದ್ದಿ ಹೇಳುತ್ತಾರೆಂದು ನಂಬಿದ್ದೀನಿ, ಕಾದು ನೋಡೋಣ ಎಂದು ತಿಳಿಸಿದ್ದಾರೆ.
Hassan
ಸಿಎಂ ಓಲೈಕೆಗಾಗಿ ಸವಲತ್ತುಗಳನ್ನು ಕೊಡುತ್ತಿದ್ದಾರೆ: ಶಾಸಕ ಎ.ಮಂಜು
ಹಾಸನ : ನಿಗಮ ಮಂಡಳಿ ಅಧ್ಯಕ್ಷರಿಗೆ ಸಚಿವ ದರ್ಜೆ ಸ್ಥಾನಮಾನ ನೀಡಿ, ವೇತನ, ಬಾಡಿಗೆ ಹೆಚ್ಚಳ ವಿಚಾರವಾಗಿ ಸರ್ಕಾರದ ವಿರುದ್ಧ ಶಾಸಕ ಎ.ಮಂಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ, ಅರಕಲಗೂಡು ತಾಲೂಕಿನ, ಕೆಲಗಳಲೆ ಗ್ರಾಮದಲ್ಲಿ ಇಂದು ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿ ಓಲೈಕೆಗಾಗಿ ಸವಲತ್ತುಗಳನ್ನು ಕೊಡುತ್ತಿದ್ದಾರೆ. ಈಗ ಸರ್ಕಾರದಲ್ಲಿ ದುಡ್ಡಿಲ್ಲ, ಅಭಿವೃದ್ಧಿಗೆ ದುಡ್ಡಿಲ್ಲ, ರಸ್ತೆ ಗುಂಡಿ ಮುಚ್ಚಲು ದುಡ್ಡಿಲ್ಲ. ಅಭಿವೃದ್ಧಿ ಮಾಡುವುದನ್ನು ಬಿಟ್ಟು ಗ್ಯಾರೆಂಟಿ ಯೋಜನೆ ಮಾಡಿ ಎಸ್ಸಿ, ಎಸ್‌ಟಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದಿದ್ದಾರೆ.

ಮುಖ್ಯಮಂತ್ರಿಗೆ ಪರ-ವಿರೋಧ ಇರುವುದರಿಂದ ಕ್ಯಾಬಿನೆಟ್ ದರ್ಜೆ ಕೊಟ್ಟು, ವೇತನ ಜಾಸ್ತಿ ಮಾಡಿ ಓಲೈಕೆ ಮಾಡುವ ಕಾರ್ಯಕ್ರಮ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಬಾರ ಎನ್ನುವುದು ಗೊತ್ತಿಲ್ಲ. ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಇರಬೇಕು ಎನ್ನುವುದು ಬಿಟ್ಟರೆ ಜನರ ತೆರಿಗೆ ಹಣ ಈ ರೀತಿ ಖರ್ಚು ಮಾಡುತ್ತಿರುವುದು ತಪ್ಪು ಎನ್ನುವುದು ಆಡಳಿತ ಮಾಡುವವರಿಗೆ ಅರ್ಥವಾಗಬೇಕು. ಸರ್ಕಾರ ಜನರ ಸರ್ಕಾರ, ದುಡ್ಡು ಜನರ ದುಡ್ಡು, ಜನರ ಸರ್ಕಾರ ಆಗಬೇಕು, ಜನರ ಅಭಿವೃದ್ಧಿ ಸರ್ಕಾರ ಆಗಬೇಕು ಎಂದು ಹೇಳಿದ್ದಾರೆ.
ಮೊದಲೆಲ್ಲಾ ಚೇರ್‌ಮೆನ್‌ಗಳಿಗೆ ಯಾವುದೇ ಸ್ಥಾನ-ಮಾನ, ವೇತನ ಇರಲಿಲ್ಲ. ಮಂತ್ರಿಗೆ ಕೊಡುವ ಸವಲತ್ತು, ಸಂಬಳ ಅವರಿಗೂ ಕೊಡುವುದಾದರೆ ಹಣ ಸ್ಥಿತಿ ಎಲ್ಲಿಗೆ ಹೋಗುತ್ತದೆ ಎಂದು ಬಜೆಟ್‌ನಲ್ಲಿ ಗೊತ್ತಾಗುತ್ತದೆ. ಇದರಿಂದ ಜನರ ಮೇಲೆ ಹೊರೆ ಬೀಳುತ್ತದೆ, ಇದನ್ನು ಮಾಡುವುದು ತಪ್ಪು ಎಂದು ತಿಳಿಸಿದ್ದಾರೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮೈತ್ರಿಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ವಿರೋಧ ವಿಚಾರ
ಪ್ರೀತಂ ಜೆ ಗೌಡ ಯಾರ್ರಿ ಅವನು, ಅವನೇನು ಹೈಕಮಾಂಡಾ? ನಮಗೆ ಹೇಳಬೇಕಿರುವುದು, ಹೇಳಿರುವುದು ಹೈಕಮಾಂಡ್. ಮುಂದಿನ ದಿನಗಳಲ್ಲಿ ಎರಡು ಪಕ್ಷಗಳು ಮೈತ್ರಿಯಲ್ಲಿ ಹೋದರೆ ಈ ರಾಜ್ಯದಲ್ಲಿ ಸುಭದ್ರ ಸರ್ಕಾರ ಬರುತ್ತೆ ಅನ್ನುವುದು ಅಭಿಪ್ರಾಯ ಜನರಲ್ಲಿ ಇದೆ. ಎಂಎಲ್‌ಎಗೆ ಮಾತ್ರ ಮೈತ್ರಿ ಬೇಕು, ಜಿ.ಪಂ., ತಾ.ಪಂ., ಬೇಡ ಅಂದರೆ ಅವರಿಗೆ ಯಾವ ನೈತಿಕತೆ ಇರುತ್ತೆ, ಕಾರ್ಯಕರ್ತರು ಉಳಿದುಕೊಳ್ಳಬೇಕಲ್ಲ. ನಮಗೋಸ್ಕರ ಪಕ್ಷ ಅಲ್ಲಾ, ಕಾರ್ಯಕರ್ತರಿಗೋಸ್ಕರ ಪಕ್ಷ ಇರಬೇಕು ಎಂದು ವಾಗ್ದಾಳಿನಡೆಸಿದ್ದಾರೆ.
ಬಿಜೆಪಿ-ದಳ ಒಟ್ಟಿಗೆ ಹೋಗುವುದು ಅಭಿವೃದ್ಧಿ ಪರ ಎನ್ನುವುದು ನನ್ನ ಭಾವನೆ. ಕಳೆದ ಎಂಪಿ ಚುನಾವಣೆಯಲ್ಲಿ ವೈರಲ್ ಆಯ್ತಲ್ಲಾ, ಯಾರ ವೈರಲ್ ಮಾಡಿದ್ದು, ನಾನು ಅವರ ಹೆಸರು ಹೇಳಲ್ಲ, ಅವರೇ ಅರ್ಥ ಮಾಡಿಕೊಳ್ಳಬೇಕು. ಪಕ್ಷದ ನಿಷ್ಠೆ, ಪಕ್ಷದ ಪರ ಇದ್ದಿದ್ರೆ ಹಾಸನ ಜಿಲ್ಲೆಯಲ್ಲಿ ಬಿಜೆಪಿ ಎಂಪಿ ಇರೋರಲ್ಲ. ಯಾರ ಜೊತೆ ಕೈ ಜೋಡಿಸಿದರು, ಏಕೆ ಜೋಡಿಸಿದರು. ನನ್ನ ವೈಯುಕ್ತಿಕ ಲಾಭಕ್ಕೆ ರಾಜಕಾರಣ ಅಲ್ಲ ಎಂದು ತಿಳಿಸಿದ್ದಾರೆ.

ಕಾರ್ಯಕರ್ತರ ಹಿತ ಕಾಪಾಡಬೇಕು, ದೇಶದ ದೃಷ್ಟಿಯಿಂದ ನೋಡಬೇಕು. ಎನ್‌ಡಿಎ ಅನ್ನೋದು ದೇಶದಲ್ಲಿ ತೀರ್ಮಾನ ಆಗಿದೆ. ಇವರು ಯಾರನ್ನು, ನಮ್ಮನ್ನ ಕೇಳಿ ತೀರ್ಮಾನ ಮಾಡುವಂತಹದ್ದಲ್ಲ, ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಮೋದಿಗಿಂತ ದೊಡ್ಡದವರು ಅಂಥ ಇವರು ಹೇಳಿ ಬಿಟ್ಟರೆ ನಾವೇನು ಮಾತನಾಡಲು ಹೋಗಲ್ಲ. ಇವರು ಹೇಳಿದಂಗೆ ನಾವೇ ಕೇಳುತ್ತಿವೆ ಎಂದಿದ್ದಾರೆ.
ಅಂತಿಮ ಯಾರು ಹೈಕಮಾಂಡ್, ಇವರು ಮಾತನಾಡುವ ರೀತಿ ನೋಡಿದ್ರೆ ಹೈಕಮಾಂಡ್ ಗೌರವ ಕೊಡ್ತಿಲ್ಲ ಅಂಥ ಕಾಣುತ್ತದೆ. ನಾವು ನಮ್ಮ ಹೈಕಮಾಂಡ್ ಇದೆ, ಅವರು ಏನ್ ಹೇಳ್ತಾರೆ ಅದನ್ನು ಕೇಳುತ್ತೇವೆ ಎಂದು ಹೇಳಿದ್ದಾರೆ.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರದಿಂದ ನನಗೆ ಟಿಕೆಟ್ ಸಿಗಲಿದೆ ಎಂಬ ಮಾಜಿಶಾಸಕಬಪ್ರೀತಂಗೌಡ ಹೇಳಿಕೆ ವಿಚಾರ
ಟಿಕೆಟ್ ಕೊಡುವುದು ಬಿಡುವುದು ಹೈಕಮಾಂಡ್ ಅಲ್ವಾ, ನಮ್ಮ ಎಂಎಲ್‌ಎ ಇದ್ದಾಗ ಬೇರೆಯವರಿಗೆ ಬಿಟ್ಟು ಕೊಡಲು ಆಗುತ್ತಾ? ಎಲ್ಲಿ, ಯಾವ್ಯಾವ ಕ್ಷೇತ್ರದಲ್ಲಿ ಗೆದ್ದಿರುತ್ತಾರೆ. ಅವರಿಗೆ ಪ್ರಥಮ ಆದ್ಯತೆ ಕೊಡುತ್ತಾರೆ ಅನ್ನೋದು ನನ್ನ ಭಾವನೆ, ಲೋಕಾರೂಢಿನೂ ಕೂಡ. ಬಿಜೆಪಿಯಲ್ಲೂ ಹಾಗೇ ಟಿಕೆಟ್ ಕೊಡುತ್ತಾರೆ. ಟಿಕೆಟ್ ಕೊಡುವ ಮುಂಚೆ ಸರ್ವೆ ಮಾಡಿಸುತ್ತಾರೆ ಎಂದು ಟಾಂಗ್ ನೀಡಿದ್ದಾರೆ.
ಈ ಹಿಂದೆ 50 ಸಾವಿರಕ್ಕಿಂತ ಒಂದು ಮತದ ಅಂತರದಲ್ಲಿ ಸೋತರೆ ರಾಜಕೀಯ ನಿವೃತ್ತಿಯಾಗುತ್ತೇನೆ ಎಂದಿದ್ದರು. ಇನ್ನೂ ಏಕೆ ರಾಜಕೀಯದಲ್ಲಿ ಇದ್ದಾರೆ, ಯೋಚನೆ ಮಾಡಬೇಕು ಅವರು. ಮಾತನಾಡಬೇಕಾದರೆ ಬಾರಿ ಯೋಚನೆ ಮಾಡಿ ಮಾತನಾಡಬೇಕು. ಜನರು ಪ್ರಜ್ಞಾವಂತರು, ಬುದ್ದಿವಂತರಿದ್ದಾರೆ. ನಮ್ಮ ಮಾತು ಜನರಿಗೆ ಕೆಟ್ಟದಾಗಿ ಬಿಂಬಿಸಬಾರದು. ಆ ರೀತಿ ನಡೆದುಕೊಳ್ಳಬೇಕು, ಆಗ ಪಕ್ಷಕ್ಕೂ ಒಳ್ಳೆಯದಾಗುತ್ತದೆ. ಯಾವ್ಯಾವ ಚುನಾವಣೆಗಳು ಚಿಹ್ನೆ ಮೇಲೆ ನಡೆಯುತ್ತೆ, ಆ ಎಲ್ಲಾ ಚುನಾವಣೆಗಳಲ್ಲೂ ಮೈತ್ರಿಯಾಗಿ ಹೋಗಬೇಕು. ಇದು ಕಾರ್ಯಕರ್ತರ ದೃಷ್ಟಿಯಿಂದ ಒಳ್ಳೆಯದು, ಇದು ನನ್ನ ವೈಯುಕ್ತಿಕ ಅಭಿಪ್ರಾಯ ಎಂದು ತಿಳಿಸಿದ್ದಾರೆ.
-
Hassan1 hour agoಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಎಚ್‌ಡಿಕೆ ಅಭಿಮಾನಿಗಳಿರುವ ಕ್ಷೇತ್ರ: ನಿಖಿಲ್ ಕುಮಾರಸ್ವಾಮಿ
-
Mysore6 hours agoಹಣ್ಣುಗಳ ಮಹತ್ವ, ಪೌಷ್ಟಿಕಾಂಶದ ಬಗ್ಗೆ ಅರಿವು ಮೂಡಿಸಿದ ರವಿ ಮಹದೇವ್
-
Chamarajanagar8 hours agoಚಿರತೆ ದಾಳಿ: ಹಸು ಬಲಿ ಗ್ರಾಮಸ್ಥರಲ್ಲಿ ಆತಂಕ
-
Mandya59 minutes agoಬೂದನೂರು ಗ್ರಾಮ ಪಂಚಾಯತಿಗೆ ನೇಮಕವಾಗಿರುವ ಆಡಳಿತಾಧಿಕಾರಿಗೆ ಗ್ರಾಮಸ್ಥರಿಂದ ಭವ್ಯ ಸ್ವಾಗತ
-
Hassan2 hours agoಸಿಎಂ ಓಲೈಕೆಗಾಗಿ ಸವಲತ್ತುಗಳನ್ನು ಕೊಡುತ್ತಿದ್ದಾರೆ: ಶಾಸಕ ಎ.ಮಂಜು
-
Hassan2 hours ago1.5 ಕೋಟಿ ಅಧಿಕ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ಸ್ವರೂಪ್ ಪ್ರಕಾಶ್ ಚಾಲನೆ
-
Kodagu5 hours ago“ಅಂದು ದೂರದ ಆಲೋಚನೆ ಇಂದು ದುರಾಲೋಚನೆ”
-
Manglore4 hours agoಕಾರಿನಲ್ಲಿ ಕಾಲೇಜು ವಿದ್ಯಾರ್ಥಿನಿಯ ಅಪಹರಣಕ್ಕೆ ಯತ್ನ…?- ಆರೋಪ
