Connect with us

Mandya

ಕಾಂಗ್ರೆಸ್‌ ಶಾಸಕ ಉದಯ್‌ ಮಾತಿಗೆ ಲಗಾಮು ಹಾಕಿಸಿ

Published

on

ಕಾಂಗ್ರೆಸ್‌ ಶಾಸಕ ಉದಯ್‌ ಮಾತಿಗೆ ಲಗಾಮು ಹಾಕಿಸಿ

ಇಲ್ಲವಾದರೆ ಮುಂದಾಗುವ ಅನಾಹುತಕ್ಕೆ ಕಾಂಗ್ರೆಸ್‌ ವರಿಷ್ಠರೇ ಹೊಣೆ

ಮಂಡ್ಯ: ಹಿರಿಯ ರಾಜಕಾರಣಿಗಳ ಕುಟುಂಬದವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿರುವ ಮದ್ದೂರಿನ ಶಾಸಕ ಕೆ.ಎಂ.ಉದಯ್‌ ವಿರುದ್ಧ ಕಾಂಗ್ರೆಸ್‌ ರಾಜ್ಯ ನಾಯಕರು ಲಗಾಮು ಹಾಕಬೇಕು, ಇಲ್ಲದಿದ್ದರೆ ಮುಂದಾಗುವ ಅನಾಹುತಕ್ಕೆ ಕಾಂಗ್ರೆಸ್ ವರಿಷ್ಠರೇ ಹೊಣೆಯಾಗಬೇಕಾಗುತ್ತದೆ ಎಂದು ಮಾಜಿ ಸಚಿವ ಸಿ.ಎಸ್‌.ಪುಟ್ಟರಾಜು ಎಚ್ಚರಿಕೆ ನೀಡಿದರು.

ಜಿಲ್ಲೆಗೆ ಮತ್ತು ಇಲ್ಲಿನ ರಾಜಕಾರಣಕ್ಕೆ ಅದರದ್ದೇ ಆದ ಗೌರವವಿದೆ. ಅದಕ್ಕೆ ಧಕ್ಕೆ ತರುವ ಕೆಲಸ ಯಾರಿಂದಲೂ ಆಗಬಾರದು. ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ಬಗ್ಗೆ ಮದ್ದೂರಿನ ಕಾಂಗ್ರೆಸ್ ಶಾಸಕ ಕೆ.ಎಂ.ಉದಯ್ ಅವರು 3ನೇ ದರ್ಜೆಯ ವ್ಯಕ್ತಿಗಳಂತೆ ಆಡಿರುವ ಮಾತುಗಳು ಸರಿಯಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಉದಯ್ ಅವರು ಅಕ್ಕ-ತಂಗಿಯರೊಂದಿಗೆ ಜನ್ಮ ತಾಳಿಲ್ಲವೇ? ರಾಜಕಾರಣ ಮಾಡುತ್ತೇವೆಂಬ ಕಾರಣಕ್ಕೆ ಹೆಂಡತಿ-ಮಕ್ಕಳನ್ನು ಬೀದಿಗೆ ತಂದು ನಿಲ್ಲಿಸಲಾಗುತ್ತದೆಯೇ? ‘ಗಂಡಸ್ತನ’ ಪದ ಬಳಸಿ ಟೀಕೆ ಮಾಡಲಾರಂಭಿಸಿದವರು ಯಾರು? ಶಾಸಕ ಉದಯ್ ಅವರ ಮಾತುಗಳಿಗೆ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ, ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರು ಧೃತಿಗೆಡುವ ಅಗತ್ಯವಿಲ್ಲ. ಶ್ರೀರಾಮಚಂದ್ರನನ್ನೇ ಬಿಟ್ಟಿಲ್ಲ, ಅವರನ್ನೂ ಜನರು ನಿಂದಿಸಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಕಾಂಗ್ರೆಸ್‌ನ ವರಿಷ್ಠರು ಶಾಸಕ ಉದಯ್ ಅವರನ್ನು ಹದ್ದುಬಸ್ತಿನಲ್ಲಿಡಬೇಕು. ಇಲ್ಲದಿದ್ದರೆ ಮುಂದಾಗುವ ಅನಾಹುತಕ್ಕೆ ಕಾಂಗ್ರೆಸ್ ವರಿಷ್ಠರೇ ಹೊಣೆಯಾಗಬೇಕಾಗುತ್ತದೆ? ಶಾಸಕ ಉದಯ್ ಅವರಾಡಿರುವ ಮಾತುಗಳಿಗೆ ಒಂದು ರೀತಿ ನಾವೇ ತಬ್ಬಿಬ್ಬಾಗಿದ್ದೇವೆ, ಜನಪ್ರತಿನಿಧಿಗಳು ತಲೆತಗ್ಗಿಸುವ ಮಟ್ಟಿಗೆ ನಾಲಿಗೆಯನ್ನು ಹರಿಯಬಿಟ್ಟಿದ್ದಾರೆ. ಸೂರ್ಯನನ್ನು ನೋಡಿ ಆಗಸಕ್ಕೆ ಉಗುಳಿದರೆ ಅದು ನಮ್ಮ ಮುಖದ ಮೇಲೆಯೇ ಬೀಳುತ್ತದೆ ಎಂಬುದನ್ನು ಉದಯ್ ಅರಿಯಬೇಕು ಎಂದರು.

ಮಾಜಿ ಶಾಸಕ ಎ.ಎಸ್.ರವೀಂದ್ರ ಶ್ರೀಕಂಠಯ್ಯ ಅವರ ತಾತ ಚುಂಚೇಗೌಡರದು ದಾನಧರ್ಮ ಮಾಡಿಕೊಂಡು ಬಂದ ಮನೆತನ. ಅವರ ಜನಸೇವೆಯನ್ನು ಮೆಚ್ಚಿಸಿ ಸ್ವತಃ ಮೈಸೂರು ಮಹಾರಾಜರೇ ಶ್ಲಾಘಿಸಿ, ಅವರ ಮನೆಗೆ ಬಂದು ಊಟ ಮಾಡಿಹೋಗಿದ್ದಾರೆ. ಇಂತಹ ಕುಟುಂಬದ ಬಗ್ಗೆ ಕೀಳು ಭಾಷೆ ಬಳಸಿ ಮಾತನಾಡಿರುವುದು ಸರಿಯಲ್ಲ, ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರು ತಾತನ ಕಾಲದಿಂದಲೂ ನೂರಾರು ಎಕರೆ ಹೊಂದಿರುವ ಜಮೀನ್ದಾರರು. ಜನರ ಕಷ್ಟಸುಖಗಳಿಗೆ ಸ್ಪಂದಿಸಿದ, ಆರ್ಥಿಕವಾಗಿ ನೆರವು ನೀಡಿದ ಕುಟುಂಬ ಅವರದು. ಅವರ ಬಗ್ಗೆಯೂ ಕೀಳಾಗಿ ಮಾತನಾಡಿರುವುದು ಶಾಸಕ ಉದಯ್ ಅವರ ವ್ಯಕ್ತಿತ್ವಕ್ಕೆ ಶೋಭೆಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ಗೌರವವನ್ನು ಉಳಿಸಿಕೊಂಡು, ಕಾಪಾಡಿಕೊಂಡು ಹೋಗುವುದು ಹಾಗೂ ಗೌರವಯುತವಾಗಿ ಚುನಾವಣೆ ಮಾಡುವುದು ಎಲ್ಲರ ಕರ್ತವ್ಯ, ಇನ್ನು ಮಳವಳ್ಳಿಯ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ‘ನನ್ನನ್ನು ದೊಡ್ಡರಾಜು’ ಎಂದು ಮೂದಲಿಸಿ ಕರೆದಿದ್ದಾರೆ. ಭೈರವೈಕ್ಯ ಡಾ.ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಅವರೇ ನನ್ನನ್ನು ದೊಡ್ಡರಾಜು ಎಂದು ಕರೆದಿದ್ದಾರೆ. ನನಗೆ ರಾಜಕೀಯ ಶಕ್ತಿ ಕೊಟ್ಟವರು ಎಚ್.ಡಿ.ದೇವೇಗೌಡರು. ದೇವರಂತೆ ಆಶೀರ್ವಾದ ಮಾಡಿದವರು ಚುಂಚಶ್ರೀಗಳು. ಕಳಂಕರಹಿತ ಜನಪ್ರತಿನಿಧಿಯಾಗಿ ಜನರ ಸೇವೆ ಮಾಡಿಕೊಂಡು ಬರುತ್ತಿದ್ದೇನೆ. ನೀವೇನು ನನ್ನನ್ನು ಟೀಕಿಸುವುದು? ನನ್ನನ್ನು ಟೀಕಿಸುವ, ಪ್ರಶ್ನಿಸುವ ಹಕ್ಕು ನಿಮಗಿಲ್ಲ ಎಂದು ಎಚ್ಚರಿಕೆ ನೀಡಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನಿಮ್ಮ ಶಾಸಕತ್ವ ಉಳಿಸಿಕೊಟ್ಟಿದ್ದರ ಬಗ್ಗೆ ಬಹಿರಂಗ ಚರ್ಚೆಗೆ ನಾನು ಸಿದ್ಧ. ನೀವು ಕರೆದ ಸ್ಥಳಕ್ಕೆ ಬರುತ್ತೇವೆ. ಬನ್ನಿ ಚರ್ಚೆ ಮಾಡೋಣ, ಎಲ್ಲ ಅಧಿಕಾರವನ್ನೂ ನೀವೇ(ಪಿಎಂ) ಅನುಭವಿಸಬೇಕೆ? ಇತರ ಜಾತಿಯವರಿಗೆ ಅವಕಾಶ ಬೇಡವೇ? ಎಂಡಿಸಿಸಿ ಬ್ಯಾಂಕ್ ವರಿಷ್ಠರ ಚುನಾವಣೆಯಲ್ಲಿ ಕಾಂಗ್ರೆಸ್ಸಿಗರು ಬಿ.ಎಸ್.ಯಡಿಯೂರಪ್ಪ ಅವರ ಮನೆ ಬಾಗಿಲನ್ನು ಕಾದಿಲ್ಲವೇ ಎಂದು ಪ್ರಶ್ನಿಸಿದರು.

ಅಮರಾವತಿ ಚಂದ್ರಶೇಖರ್ ಮತ್ತವರ ಸಹೋದರರು 2019ರ ಲೋಕಸಭೆ ಚುನಾವಣೆಯಲ್ಲಿ ನಿಖಿಲ್‌ ಕುಮಾರಸ್ವಾಮಿ ಪರವಾಗಿ ಚುನಾವಣೆ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ನಾವು ಮಾತುಕೊಟ್ಟಂತೆ ಅವರ ಸಹೋದರ ಅಶ್ವತ್ಥ್ ಅವರನ್ನು ಎಂಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಗೆಲ್ಲಿಸಿಕೊಂಡು, ಅವರನ್ನು ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ಮಾಡಿದೆವು. ಆದರೆ, ನೀವು ನಿಮ್ಮ ಪಕ್ಷದವರೇ ಆದ, ಜಿಲ್ಲೆಯಲ್ಲಿ ಕಿತ್ತೂರುರಾಣಿ ಚೆನ್ನಮ್ಮಂತಿರುವ ಮಾಜಿ ಶಾಸಕ ಮಲ್ಲಾಜಮ್ಮ ಅವರನ್ನು ಹೇಗೆ ನಡೆಸಿಕೊಳ್ಳುತ್ತಿದ್ದೀರಿ ನಮಗೆ ಗೊತ್ತಿಲ್ಲವೇ ಎಂದು ತಿಳಿಸಿದರು.

ಮಾಜಿ ಶಾಸಕ ಸುರೇಶ್‌ಗೌಡ ಮಾತನಾಡಿ, ಶಾಸಕ ಉದಯ್ ಅವರಾಗಿರುವ ಮಾತುಗಳ ಬಗ್ಗೆ ಚುನಾವಣಾ ಆಯೋಗಕ್ಕೂ ದೂರು ನೀಡಲಾಗುವುದು. ಚುನಾವಣೆ ನೆಪದಲ್ಲಿ ಗಣಿ ಇಲಾಖೆಯ ಅಧಿಕಾರಿಗಳ ಮೂಲಕವೇ ಗಣಿ ಮಾಲೀಕರಿಂದ ಹಣ ವಸೂಲಿ ಮಾಡುವ ದಂಧೆಯಲ್ಲಿ ಜಿಲ್ಲೆಯ ಕೆಲವು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಇದಕ್ಕೆ ಚುನಾವಣಾ ಆಯೋಗ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಮಹಾತ್ಮ ಗಾಂಧೀಜಿ ಅವರು ಹೆಜ್ಜೆ ಇಟ್ಟ ಪುಣ್ಯಭೂಮಿ ಮದ್ದೂರು. ಅಂತಹ ಕ್ಷೇತ್ರವನ್ನು ಪ್ರತಿನಿಧಿಸಿರುವ ಶಾಸಕ ಉದಯ್ ಅವರು ಅಧಿಕಾರ, ಹಣದ ಮದದಲ್ಲಿ ಹೆಣ್ಣು ಮಕ್ಕಳ ಬಗ್ಗೆ ಹಗುರ ಮತ್ತು ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ, ನಾವು ಬಳಕೆ ಮಾಡುವ ಶಬ್ದಗಳ ಅರ್ಥವನ್ನು ತಿಳಿದು ಮಾತನಾಡುವುದು ಒಳಿತು. ರಾಜಕಾರಣದಲ್ಲಿ ಸಾವಿರ ಮಾತುಗಳು ಬರುತ್ತವೆ. ಅದು ಪುರುಷರಾದ ನಮಗಷ್ಟೇ ಸೀಮಿತವಾಗಬೇಕು. ಕುಟುಂಬದವರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದರು.

ನಾವೂ ಕೂಡ ಬೇರೆ ರಾಜಕಾರಣಿಗಳಿಗೆ ಬೈದಿದ್ದೇವೆ, ಅವರಿಂದ ಬೈಸಿಕೊಂಡಿದ್ದೇವೆ. ಆದರೆ, ಬೈಯ್ಯುವುದರಲ್ಲಿ ಅರ್ಥವಿರುತ್ತಿತ್ತು. ಅದು ಬಿಟ್ಟು ಕುಟುಂಬದ ಬಗ್ಗೆ ಮಾತನಾಡುವುದು ಎಷ್ಟು ಸರಿ? ರವೀಂದ್ರ ಶ್ರೀಕಂಠಯ್ಯ ಅವರ ಬಗ್ಗೆ ಕೀಳಾಗಿ ಮಾತನಾಡಲು ಅವರೇನು ಲೈವ್‌ಬ್ಯಾಂಡ್, ಕ್ಯಾಬರೆ ಅಥವಾ ಏನಾದರೂ ದಂಧೆ ನಡೆಸುತ್ತಿದ್ದಾರೆಯೇ? ಅವರ ಬಗ್ಗೆ ನೀವೇನು ನೋಡಿದ್ದೀರಿ? ನಿಮ್ಮ ಹೇಳಿಕೆಯನ್ನು ನೋಡಿ ನಮ್ಮ ಸಹೋದರಿ ಹಾಗೂ ನಿಮ್ಮ ಪತ್ನಿ ನಿಮ್ಮನ್ನು ಇನ್ನೂ ಮನೆಯಲ್ಲಿ ಇರಿಸಿಕೊಂಡಿದ್ದಾರೆಯೇ? ಅಷ್ಟೊಂದು ಗಂಡಸ್ತನವಿದ್ದರೆ ಮನೆಗಲ್ಲ, ಮನೆಯ ರಸ್ತೆಗೆ ಬನ್ನಿ ನೋಡೋಣ ಎಂದು ಆಕ್ರೋಶ ವ್ಯಕ್ತಪ‍ಡಿಸಿದರು.

ನಿಮ್ಮ ಕ್ಷೇತ್ರದ ಹೋಟೆಲ್‌ಗಳಲ್ಲಿ ಯಾವ ದಂಧೆ ನಡೆಯುತ್ತಿದೆ ಎಂಬುದು ನಿಮ್ಮ ಅರಿವಿಗಿಲ್ಲವೇ? ಕೂಡಲೇ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ಬಳಿ ಶಾಸಕ ಉದಯ್ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರ, ಜೆಡಿಎಸ್ ಅಧ್ಯಕ್ಷ ಡಿ.ರಮೇಶ್, ಮುಖಂಡ ನವೀನ್‌ ಕುಮಾರ್ ಇದ್ದರು.

Continue Reading
Click to comment

Leave a Reply

Your email address will not be published. Required fields are marked *

Mandya

ತಾಲ್ಲೂಕು ಕಚೇರಿಗೆ ಡಿಸಿ ಭೇಟಿ : ಸಾರ್ವಜನಿಕರಿಂದ ಕುಂದು ಕೊರತೆ ಪರಿಶೀಲನೆ

Published

on

ಮಂಡ್ಯ: ಜಿಲ್ಲಾಧಿಕಾರಿ ಡಾ.ಕುಮಾರ ಅವರು ಮಂಡ್ಯ ತಹಶೀಲ್ದಾರ್ ಹಾಗೂ ತಾಲ್ಲೂಕು ಪಂಚಾಯತ್ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲ್ಲೂಕು ಕಚೇರಿಯಲ್ಲಿ ಸಾರ್ವಜನಿಕರೊಂದಿಗೆ ಚರ್ಚಿಸಿ ಕುಂದು ಕೊರತೆಗಳ ಬಗ್ಗೆ ಪರಿಶೀಲನೆ ನಡೆಸಿದ ಅವರು, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು‌.

ತಾಲ್ಲೂಕು ಕಚೇರಿಯಲ್ಲಿ ಕಳೆದ ಒಂದು ವಾರದಿಂದ ರೈತರಿಗೆ ಸಂಬಂಧಪಟ್ಟಂತೆ ಆಧಾರ್ ಸೀಡಿಂಗ್ ನಡೆಯುತ್ತಿರುವ ಕೆಲಸಗಳನ್ನು ಪರಿಶೀಲಿಸಿದರು.

ಮಳೆ ಹೆಚ್ಚಿನ ಪ್ರಮಾಣದಲ್ಲಿ ಬಂದಿರುವ ಹಿನ್ನೆಲೆಯಲ್ಲಿ ಯಾವುದಾದರೂ ಮನೆ ಹಾನಿ ಅಥವಾ ಬೆಳೆಗಳು ಹಾನಿಯಾಗಿ ವರದಿ ಸಿದ್ಧ ಪಡಿಸುತ್ತಿರುವ ಬಗ್ಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಚರ್ಚಿಸಿದರು.

ಕಂದಾಯ ಗ್ರಾಮಗಳಿಗೆ ಹಕ್ಕು ಪತ್ರ ನೀಡಬೇಕಿರುವ ಬಾಕಿ ಪ್ರಕರಣಗಳು, ರಸ್ತೆ ಒತ್ತುವರಿ, 1ಮತ್ತ5 ತಿದ್ದುಪಡಿ, ಪಡಿತರ ಚೀಟಿ ಕುರಿತು ದೂರು ಬರಿತ್ತಿದ್ದು, ಪರಿಶೀಲನೆ ನಡೆಸಿದರು

ಮಂಡ್ಯ ತಾಲ್ಲೂಕಿನಲ್ಲಿ 410 ಹಕ್ಕು ಪತ್ರಗಳಿಗೆ ಡೇಟಾ ಎಂಟ್ರಿ ನಡೆಯುತ್ತಿದೆ‌. ಅವುಗಳನ್ನು ಸಹ ಪರಿಶೀಲಿಸಿದರು.

ರೈತರು ತಮ್ಮ ಪಹಣಿಗಳಿಗೆ ದಾಖಲೆಗಳಿಗೆ ಕಡ್ಡಾಯವಾಗಿ ಆಧಾರ್ ಸೀಡಿಂಗ್ ಆಗಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಅದರಂತೆ ಮಂಡ್ಯ ಜಿಲ್ಲೆಯಲ್ಲಿ ಕೂಡ ಈಗಾಗಲೇ 21 ಲಕ್ಷ ರೈತರ ಪೈಕಿ ಸುಮಾರು 1 ಲಕ್ಷದ 10 ಸಾವಿರ ಆಧಾರ್ ಸೀಡಿಂಗ್ ನ್ನು ಕಳೆದ ಒಂದು ವಾರದಿಂದ ಮಾಡಲಾಗಿದೆ. ಜೂನ್ ಅಂತ್ಯದೊಳಗೆ ಜಿಲ್ಲೆಯ 21 ಲಕ್ಷ ಖಾತೆದಾರರ ಆಧಾರ್ ಸೀಡಿಂಗ್ ಯೋಜನೆ ಪೂರ್ಣಗೊಳಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಮಹೇಶ್, ತಹಶೀಲ್ದಾರ್ ಶಿವಕುಮಾರ್ ಬಿರಾದಾರ್, ಎಡಿಎಲ್’ಆರ್ ಮಮತಾ, ಭೂಮಿ ಶಾಖೆ ಸಲಹೆಗಾರ ಲೋಹಿತ್, ಗ್ರಾಮ ಲೆಕ್ಕಾಧಿಕಾರಿ ತೇಜಸ್ ಗೌಡ ಇತರರು ಉಪಸ್ಥಿತರಿದ್ದರು.

Continue Reading

Mandya

ಬಂಜಾರ ಸಮುದಾಯಕ್ಕೆ ಮಂಜೂರಾಗಿದ್ದ ನಿವೇಶನ ಹಕ್ಕು ಪತ್ರ ನೀಡದೆ ವಂಚನೆ : ಕಾನೂನು ಕ್ರಮಕ್ಕೆ ಲಲಿತಾ ನಾಯಕ್ ಆಗ್ರಹ

Published

on

ಮಂಡ್ಯ: ಬಂಜಾರ ಸಮುದಾಯಕ್ಕೆ ಮಂಜೂರಾಗಿದ್ದ ನಿವೇಶನದ ಹಕ್ಕು ಪತ್ರ ನೀಡದೆ ವಂಚಿಸಿರುವ ಸಮುದಾಯದ ವಂಚಕ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಆಗ್ರಹ ಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1987 – 88 ರಲ್ಲಿ ನನ್ನ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಅಂದಿನ ಸರ್ಕಾರ ತಮ್ಮನ್ನು ಮೇಲ್ಮನೆ ಸದಸ್ಯೆಯನ್ನಾಗಿ ಮಾಡಿದ್ದ ಸಂದರ್ಭದಲ್ಲಿ ಬಂಜಾರ ಸಂಘಗಳನ್ನು ಸ್ಥಾಪಿಸಿ ನಿರಾಶ್ರಿತರಿಗೆ ವಸತಿ ಸೌಕರ್ಯ ಕಲ್ಪಿಸಲು ಸರ್ಕಾರಕ್ಕೆ ಮನವಿ ಮಾಡಿದ್ದೆ. ಆ ಹಿನ್ನೆಲೆಯಲ್ಲಿ ಸರ್ಕಾರ ಮಂಡ್ಯದ ಗುತ್ತಲು ಗ್ರಾಮದ ಸರ್ವೆ ನಂಬರ್ 530 ರಲ್ಲಿ ಒಂದು ಎಕರೆ 28 ಗುಂಟೆ ಜಮೀನನ್ನು ಮಂಜೂರು ಮಾಡಿತ್ತು ಎಂದರು.

ನಂತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೃಷ್ಣನಾಯಕ್ ಅವರಿಗೆ ಜವಾಬ್ದಾರಿ ನೀಡಿ ವಸತಿ ವ್ಯವಸ್ಥೆ ಮಾಡಿಕೊಡಲಾಯಿತು. ನಂತರ ಹತ್ತಾರು ಫಲಾನುಭವಿಗಳು ಅಲ್ಲಿ ನೆಲೆಸಿದ್ದು ಅವರೆಲ್ಲರಿಗೂ ಹಕ್ಕು ಪತ್ರ ಲಭ್ಯವಾಯಿತು.

1998ರಲ್ಲಿ ಆ ಬಡಾವಣೆಯನ್ನು ಬಿ.ಟಿ ಲಲಿತಾ ನಾಯಕ್ ಬಡಾವಣೆ ಎಂಬುದಾಗಿ ಮರು ನಾಮಕರಣ ಮಾಡಲಾಯಿತು. ಸಂಘದ ಮೂಲಕ ನ್ಯಾಯಬೆಲೆ ಅಂಗಡಿ, ವಾಚನಾಲಯ, ಸಮುದಾಯ ಭವನ, ಅಂಗನವಾಡಿ ಕೇಂದ್ರ, ಸಂತ ಸೇವಾಲಾಲ್ ಮಂದಿರವನ್ನು ಸಹ ಮಂಜೂರು ಮಾಡಿಸಲಾಯಿತು. ಆದರೆ ಕೃಷ್ಣ ನಾಯಕ್ ಮರಣದ ನಂತರ ಆತ ಮಾಡಿರುವ ವಂಚನೆ ಬಯಲಿಗೆ ಬಂದಿದ್ದು, ಅವರ ಕುಟುಂಬದವರೇ ಬಂಜಾರ ಪದಾಧಿಕಾರಿಗಳಾಗಿ ನೇಮಕಗೊಂಡಿದ್ದು ಮೂರು ಲಕ್ಷ ರೂಪಾಯಿ ಕೊಟ್ಟರೆ ಮಾತ್ರ ಹಕ್ಕು-ಪತ್ರವನ್ನು ನೀಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಅಲ್ಲದೆ ಕೆಲವರಲ್ಲಿ ಭಯ ಹುಟ್ಟಿಸುತ್ತಿದ್ದಾರೆ ಎಂದು ದೂರಿದರು.

ಕೃಷ್ಣ ನಾಯಕ್ ಅವರ ಪತ್ನಿ ಮಂಗಳಮ್ಮ ಈಗಿನ ಪ್ರಧಾನ ಕಾರ್ಯದರ್ಶಿ ಆಗಿದ್ದು, ಸ್ವಯಂಘೋಷಿತ ಅಧ್ಯಕ್ಷರಾಗಿ ಅವರ ತಂಗಿಯ ಮಗ ವೆಂಕಟ ನಾಯಕ, ಖಜಾಂಚಿಯಾಗಿ ಮಗ ನಂದರಾಜ ನಾಯಕ, ಸಹ ಕಾರ್ಯದರ್ಶಿಯಾಗಿ ಅಳಿಯ ಕುಮಾರ ನಾಯಕ, ಸಂಘಟನಾ ಕಾರ್ಯದರ್ಶಿಯಾಗಿ ಅಣ್ಣನ ಮಗ ರಮೇಶ ನಾಯಕ, ಸದಸ್ಯರಾಗಿ ಪುತ್ರಿಯರಾದ ಮಮತಾ ಮತ್ತು ಅನಿತಾಭಾಯಿ ಅವರಿದ್ದು ಇವರೆಲ್ಲರೂ ಕೂಡಿ ವಂಚನೆ ಮಾಡಿದ್ದಾರೆ.

ಆದ ಕಾರಣ ಇವರೆಲ್ಲರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಂಡು ಉಗ್ರಶಿಕ್ಷೆ ನೀಡಬೇಕು. ಜೊತೆಗೆ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. .ಹಾಗೂ ಅವರು ಪಡೆದಿರುವ ಹಣವನ್ನು ವಾಪಸ್ ನೀಡಬೇಕು. ಬೇರೆ ಸಮುದಾಯದವರು ಆಕ್ರಮಣ ಮಾಡಿಕೊಂಡಿರುವ ಜಾಗವನ್ನು ತೆರವುಗೊಳಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಅವರು ಸುದ್ದಿಗೋಷ್ಠಿ ಮೂಲಕ ಆಗ್ರಹ ಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಒಂದೇ ಮಾತರಂ ಸಮಾಜ ಸೇವಾ ಸಂಸ್ಥೆ ಅಧ್ಯಕ್ಷ ಸಿಎಂ.ಶಿವಕುಮಾರ್ ನಾಯಕ್. ಕರ್ನಾಟಕ ಬಂಜಾರ ಜಾಗೃತಿ ದಳದ ರಾಜ್ಯಾಧ್ಯಕ್ಷ ತಿಪ್ಪ ಚನ್ನನಾಯಕ, ಮಂಡ್ಯ ಜಿಲ್ಲಾ ಲಂಬಾಣಿ ಸೇವಾ ಸಂಘದ ಅಧ್ಯಕ್ಷ ಎಂಕೆ ಬಾಲರಾಜ್, ಕರ್ನಾಟಕ ಬಂಜಾರ ಜಾಗೃತಿ ದಳದ ಮಹೇಶ್ ನಾಯಕ, ಮುಖಂಡರಾದ ಪುಟ್ಟಸ್ವಾಮಿ, ಶೀನಾ ನಾಯಕ್, ವಿವೇಕ್ ಉಪಸ್ಥಿತರಿದ್ದರು.

Continue Reading

Mandya

ನಾಲ್ವಡಿ ಕೃಷ್ಣರಾಜ‌ ಒಡೆಯರ್ 140 ನೇ ಜನ್ಮ‌ ದಿನಾಚರಣೆಯನ್ನು ಪಕ್ಷಾತೀತವಾಗಿ ಎಲ್ಲಾ ಸಂಘಟನೆಗಳೂ ಆಚರಿಸಬೇಕು – ತಗ್ಗಳ್ಳಿ ವೆಂಕಟೇಶ್

Published

on

ಮಂಡ್ಯ: ಜೂನ್ 4 ರಂದು ಮಂಡ್ಯ ಜಿಲ್ಲಾದ್ಯಂತ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 140ನೇ ಜನ್ಮ ದಿನಾಚರಣೆಯನ್ನು ಪಕ್ಷಾತೀತವಾಗಿ ಎಲ್ಲಾ ಸಂಘಟನೆಗಳು, ಸಂಘ ಸಂಸ್ಥೆಗಳು ಆಚರಿಸಬೇಕೆಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ಅಧ್ಯಕ್ಷ ತಗಹಳ್ಳಿ ವೆಂಕಟೇಶ್ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಡೆಯರ್ ಅವರು ಮಾದರಿ ಮಹಾರಾಜರಾಗಿದ್ದಾರೆ. ಶಿಕ್ಷಣ, ಆರೋಗ್ಯ, ನೀರಾವರಿ, ಕೈಗಾರಿಕೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆಗಳನ್ನು ಅವರು ನೀಡಿದ್ದಾರೆ .

ಸ್ವಾತಂತ್ರ್ಯ ಪೂರ್ವದಲ್ಲಿ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸಿ, ಗೆಜ್ಜೆಪೂಜೆಯಂತಹ ಅನಿಷ್ಟ ಪದ್ದತಿಗೆ ಒಡೆಯರ್ ಅವರು ತಿಲಾಂಜಲಿ ನೀಡಿದ್ದಾರೆ. ದೇಶದಲ್ಲಿ ಜನಪರ, ಅಭಿವೃದ್ಧಿಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.

ಮೈಸೂರು ಮತ್ತು ಮಂಡ್ಯ ಜಿಲ್ಲೆಗೆ ಅವರು ನೀಡಿರುವ ಕೊಡುಗೆ ಅಪಾರವಾಗಿದೆ. ಹಾಗಾಗಿ ಅವರನ್ನು ಸ್ಮರಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು .
ಮಂಡ್ಯ ಜಿಲ್ಲೆಯ ಬರಡು ಭೂಮಿಯನ್ನು ಹಸಿರು ಮಾಡಿ ದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲುತ್ತದೆ. ತಮ್ಮ ಕುಟುಂಬದವರ ಒಡವೆಗಳನ್ನು ಮಾರಿ ಕನ್ನಂಬಾಡಿ ಕಟ್ಟೆಯನ್ನು ನಿರ್ಮಿಸಿ ಕೃಷಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ

ನೀರಾವರಿ ,ಕೈಗಾರಿಕೆ ಒಡೆಯರ್ ಅವರ ಕೊಡುಗೆಯಾಗಿದೆ. ಇಡೀ ಏಷ್ಯಾದಲ್ಲಿಯೇ ಶಿಂಷಾದಲ್ಲಿ ವಿದ್ಯುತ್ ಯೋಜನೆಯನ್ನು ಪ್ರಥಮ ಬಾರಿಗೆ ಜಾರಿಗೆ ತಂದಿದ್ದಾರೆ. ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯ, ಆಸ್ಪತ್ರೆ ಹೀಗೆ ನೂರಾರು ಯೋಜನೆಗಳನ್ನು ಜಾರಿಗೆ ತಂದು ಜನೋಪಯೋಗಿ ಕೆಲಸ ಮಾಡಿದ್ದಾರೆ. ಅಲ್ಲದೆ ಸಾಹಿತ್ಯ ಕ್ಷೇತ್ರಕ್ಕೂ ಕೊಡುಗೆ ನೀಡಿದ್ದಾರೆ ಎಂದರು .
ಚಿತ್ರನಟರು ,ಕ್ರೀಡಾಪಟುಗಳು, ರಾಜಕಾರಣಿಗಳ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಮಾಡುತ್ತಿರುವುದನ್ನು ನೋಡುತ್ತಿದ್ದೇವೆ. ಇದು ಸಹಜ ಪ್ರಕ್ರಿಯೆಯಾಗಿದೆ. ಆದರೆ ನಮಗೆ ಅನ್ನ ನೀಡಿದ, ರಾಜ್ಯಕ್ಕೆ ಹೊಸ ಆಯಾಮವನ್ನೇ ತಂದುಕೊಟ್ಟ ಒಡೆಯರ್ ಅವರ ಜನ್ಮ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಬೇಕು. ಇದು ಎಲ್ಲರ ಕರ್ತವ್ಯವಾಗಿದೆ ಎಂದರು.

ಸರ್ಕಾರಿ ಕಚೇರಿಗಳಲ್ಲಿ ಮತ್ತು ಇತರ ಸಂಘ ಸಂಸ್ಥೆಗಳು ಶಾಲಾ ಕಾಲೇಜುಗಳು ಸೇರಿದಂತೆ ಎಲ್ಲೆಡೆ ಅವರ ಜನ್ಮ ದಿನಾಚರಣೆಯನ್ನು ಆಚರಿಸಲು ಆದೇಶಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅವರಿಗೆ ಮನವಿ ಮಾಡಿದ್ದೇವೆ. ಅವರು ಈ ಬಗ್ಗೆ ಸುತ್ತೋಲೆ ಹೊರಡಿಸುವುದಾಗಿ ಭರವಸೆ ನೀಡಿದ್ದಾರೆ. ಆದ ಕಾರಣ ಎಲ್ಲಾ ಸಂಘಟನೆಗಳು, ಸಂಘ ಸಂಸ್ಥೆಗಳು, ಗ್ರಾಮ ಪಂಚಾಯಿತಿಗಳು ಸ್ವಯಂ ಪ್ರೇರಿತವಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಸರಳ ರೀತಿಯಲ್ಲಿ ಆಚರಿಸಬೇಕು ಎಂದು ಅವರು ಮನವಿ ಮಾಡಿದರು.

ಗೋಷ್ಠಿಯಲ್ಲಿ ಸಚಿನ್, ಮಂಜು, ಶಿವಣ್ಣ, ಉಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Continue Reading

Trending

error: Content is protected !!