Mandya
ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ ನಿರ್ಮಾಣಕ್ಕೆ ಶಾಸಕರು, ಜಿಲ್ಲಾಧಿಕಾರಿಗಳಿಂದ ಸ್ಥಳ ಪರಿಶೀಲನೆ
ಮಂಡ್ಯ : ಜಿಲ್ಲೆಯಲ್ಲಿ ನೂತನ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ ನಿರ್ಮಾಣಕ್ಕಾಗಿ ಜಾಗ ಗುರುತಿಸುವ ಸಂಬಂಧ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಹಾಗೂ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಇಂದು ಮಂಡ್ಯ ತಾಲ್ಲೂಕಿನ ಕೆರಗೋಡು ಹೋಬಳಿಯ ಬಿ.ಹೊಸೂರು ಕಾಲೋನಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಮಂಡ್ಯ ತಾಲೂಕಿನ ಕೆರಗೋಡು -1ನೇ ಹೋಬಳಿಯ ಬಿ.ಹೊಸೂರು ಗ್ರಾಮದಲ್ಲಿ ಖಾಲಿ ಇರುವ ಸರ್ಕಾರಿ ಗೋಮಾಳದಲ್ಲಿ 2 ಎಕರೆ 13 ಕುಂಟೆ ಜಾಗವನ್ನು ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ನಿರ್ಮಾಣಕ್ಕಾಗಿ ಕಾಯ್ದಿರಿಸಲು ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬಿ.ಹೊಸೂರು ಗ್ರಾಮದ ಸರ್ಕಾರಿ ಗೋಮಾಳ ಜಾಗವನ್ನು ಈಗಾಗಲೇ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಕಾಯ್ದಿರಿಸಲಾಗಿದ್ದು, 20 ಗುಂಟೆಯನ್ನು ರಸ್ತೆಗೆ ಕಾಯ್ದಿರಿಸುವ ಬಗ್ಗೆ ಆರ್ ಟಿ ಸಿ ಯಲ್ಲಿ ಹಾಗೂ ನಕಾಶೆಯಲ್ಲಿ ಇಂಡೀಕರಣ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ಅಧಿಕಾರಿಗಳು ತಿಳಿಸಿದರು.

ಬಿ.ಹೊಸೂರು ಗ್ರಾಮದ 4.08 ಎಕರೆ ಜಮೀನನ್ನು ಮೊರಾರ್ಜಿ ಶಾಲೆಗಾಗಿ ಕಾಯ್ದಿರಿಸಿ ಆರ್.ಟಿ.ಸಿ ಯಲ್ಲಿ ನಮೂದಿಸಿ ಭೂಸ್ವಾಧೀನವಾಗಿರುವ ಬಗ್ಗೆ ದಾಖಲಾತಿಗಳನ್ನು ಪರಿಶೀಲಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಯಿತು.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿಯಲ್ಲಿ ಬರುವ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಗಳು ರಾಜ್ಯದ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಮಕ್ಕಳ ಶಿಕ್ಷಣಕ್ಕೆ ದಾರಿ ದೀಪವಾಗಿದ್ದು ಉಚಿತವಾಗಿ ಶಿಕ್ಷಣವನ್ನು ನೀಡುವುದರ ಜೊತೆಗೆ ಮಕ್ಕಳಲ್ಲಿ ನೈತಿಕತೆ, ಸಧೃಡತೆ ಹಾಗೂ ಸ್ವಾವಲಂಬನೆಯನ್ನು ತುಂಬುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ತಿಳಿಸಿದರು.
ಸದರಿ ಶಾಲೆಗಳು ಮಕ್ಕಳಿಗೆ ವಿದ್ಯಾಭ್ಯಾಸ ನೀಡುವಲ್ಲಿ ಖಾಸಗಿ ಶಾಲೆಗಳಿಗೆ ಸಮನಾಗಿ ಪೈಪೋಟಿ ನೀಡುತ್ತಿದ್ದು, ರಾಜ್ಯದಲ್ಲಿ ಉತ್ತಮ ಫಲಿತಾಂಶ ನೀಡುವಲ್ಲಿ ಶ್ರಮಿಸುತ್ತಿವೆ ಎಂದು ಹೇಳಿದರು.

ಇಂತಹ ಶಾಲೆಗಳನ್ನು ನಿರ್ಮಾಣ ಮಾಡುವುದು ಜಿಲ್ಲಾಡಳಿತದ ಗುರುತರದ ಜವಬ್ದಾರಿಯಾಗಿದ್ದು, ಜನಪ್ರತಿನಿಧಿಗಳು ಇದಕ್ಕೆ ಸಹಕಾರ ನೀಡುತ್ತಿರುವುದು ಪ್ರಗತಿಗೆ ಪೂರಕವಾಗಿರುತ್ತದೆ ಎಂದರು.
ಪರಿಶೀಲನೆ ವೇಳೆ ಮಂಡ್ಯ ತಹಶೀಲ್ದಾರ್ ವಿಶ್ವನಾಥ್, ಭೂ ದಾಖಲೆಗಳ ಸಹಾಯಕ ನಿರ್ದೇಶಕಿ ಮಮತಾ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
Mandya
ಅನುಭವ ಪರಿಗಣಿಸಿ ಸಚಿವ ಸ್ಥಾನ ಕೊಡಿ : ರಮೇಶ್ ಬಂಡಿಸಿದ್ದೇಗೌಡ
ಮಂಡ್ಯ: ನಮ್ಮ ಅನುಭವ ಪರಿಗಣಿಸಿ ನನಗೆ ಒಂದು ಅವಕಾಶ ಕೊಡಿ. ನಾನು ಸಚಿವ ಆಗಲು ಫಿಟ್ ಇದ್ದೇನೆ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟರು. ತಾಲೂಕಿನ ಸಂತೆಕಸಲಗೆರೆ ಭೂಮಿ ಸಿದ್ಧೇಶ್ವರ ದೇವಸ್ಥಾನ ದಲ್ಲಿ ತಗ್ಗಹಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಮುಖಂಡ ಎಸ್.ಎಂ.ರುದ್ರಪ್ಪ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಹಳ ದಿನಗಳಿಂದ ಭೂಮಿ ಸಿದ್ದೇಶ್ವರ ದೇವಸ್ಥಾನದಲ್ಲಿ ಪೂಜೆ ಮಾಡಿಸಬೇಕು ಅಂದುಕೊಂಡಿದ್ದೆ. ಇದೀಗ ಪೂಜೆ ಮಾಡಿಸಿದ್ದೇನೆ. ಈ ಪೂಜಾ ಕಾರ್ಯಕ್ರಮಕ್ಕೆ ತಗ್ಗಹಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರು ಆಗಮಿಸಿದ್ದಾರೆ. ನಮ್ಮಿಂದ ಸಣ್ಣ-ಪುಟ್ಟ ತೊಂದರೆ ಆಗಿದ್ದರೆ, ನಮ್ಮ ಕುಟುಂಬದಿಂದ ನಿಮ್ಮ ಮನಸ್ಸುಗಳಿಗೆ ನೋವು ಮಾಡಿದರೆ ತಪ್ಪುಗಳನ್ನು ಮನ್ನಿಸಿ ಎಂದು ಹೇಳಿದರು.
ಶ್ರೀರಂಗಪಟ್ಟಣ ಕ್ಷೇತ್ರಕ್ಕೆ ಕಳೆದ ನಾಲ್ಕೂವರೆ ದಶಕದಿಂದ ಸಚಿವ ಸ್ಥಾನ ಸಿಕ್ಕಿಲ್ಲ. ನಮ್ಮ ಕುಟುಂಬ 5 ದಶಕಗಳಿಂದಲೂ ರಾಜಕಾರಣದಲ್ಲಿ ಸಕ್ರಿಯವಾಗಿದೆ. ನಾನು ಮೂರನೇ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಕಾಂಗ್ರೆಸ್ ಸೇರಿದ ನಂತರ ಸಂಸತ್ ಚುನಾವಣೆ, ವಿಧಾನ ಪರಿಷತ್‌ನ ವಿವಿಧ ಕ್ಷೇತ್ರಗಳು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದೇನೆ. ಹಾಗಾಗಿ ನಾನು ಸಚಿವ ಸ್ಥಾನ ಕೇಳಿದ್ದೇನೆ ಎಂದರು.

ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ವರಿಷ್ಟರಲ್ಲಿ ಮನವಿ ಮಾಡಿದ್ದೇನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಂಪುಟ ವಿಸ್ತರಣೆ ಸಂದದರ್ಭದಲ್ಲಿ ಮಂತ್ರಿ ಸ್ಥಾನ ಸಿಗುವ ನಂಬಿಕೆ ಇದೆ ಎಂದರು
1986ರಲ್ಲೇ ನಮ್ಮ ಕುಟುಂಬಕ್ಕೆ ಮಂತ್ರಿ ಸಿಗುವ ಅವಕಾಶ ಇತ್ತು ಸಿದ್ದರಾಮಯ್ಯ ಹೇಳಿದ್ರು. ಕಾರಣಾಂತರದಿಂದ ಆಗಿಲ್ಲ. ಆ ಸಂದರ್ಭದಲ್ಲಿ ನಮ್ಮ ತಾಯಿ ಅವರನ್ನು ಸಮಾಧಾನ ಮಾಡುವ ಕೆಲಸವಾಯಿತು. 2004ರಲ್ಲೂ ಸಮಾಧಾನ ಮಾಡಿದ್ದರು. ನನಗೂ ಒಂದು ಅವಕಾಶ ಕೊಡಿ. ಅನುಭವ ಹಂಚಿಕೊಳ್ಳಲು, ನಾವು ಕೆಲಸ ಮಾಡಲು ಅವಕಾಶ ಕೊಡಿ. ವರಿಷ್ಠರನ್ನು ಭೇಟಿ ಮಾಡಿದ್ದೇನೆ. ಹೈಕಮಾಂಡ್ ನಿರ್ಧಾರಕ್ಕೆ ಬದ್ದ ನಮ್ಮ ಬೇಡಿಕೆ ಬಗ್ಗೆ ಭರವಸೆ ಕೊಟ್ಟಿದ್ದಾರೆ. ಪಕ್ಷಕ್ಕೆ ಕೆಲಸ ಮಾಡಿದವರಿಗೆ ಅವಕಾಶ ಕೊಡಿ. ಜಾತಿ ವ್ಯವಸ್ಥೆ ಮಾತನಾಡುವುದನ್ನು ಮೊದಲು ಬಿಡಿ. ನಮ್ಮ ಅನುಭವ ಪರಿಗಣಿಸಿ, ನಾನು ಫಿಟ್ ಇದ್ದೇನೆ ಸಚಿವ ಸ್ಥಾನ ಕೊಡಿ ಎಂದರು.

ಇದೇ ವೇಳೆ ಕಾಂಗ್ರೆಸ್ ಮುಖಂಡ ತಗ್ಗಹಳ್ಳಿ ಕೃಷ್ಣ ಮಾತನಾಡಿ, ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರಿಗೆ ಸಚಿವ ಸ್ಥಾನ ಕೊಡಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಹೈಕಮಾಂಡ್ ಗೆ ವಿನಂತಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಎನ್.ಚಲುವರಾಯಸ್ವಾಮಿ ಅವರು ಮೂರು ವರ್ಷಗಳ ಕಾಲ ಮಂತ್ರಿಯಾಗಿ ಕೆಲಸ ಮಾಡಿದ್ದೀರಿ. ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಶಾಸಕರು ಉಳಿದ ಎರಡು ವರ್ಷಗಳ ಅವಧಿಗೆ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರಿಗೆ ಮಂತ್ರಿಸ್ಥಾನ ಕಲ್ಪಿಸಲು ನೀವುಗಳು ಸಹಕರಿಸಿ ಎಂದು ವಿನಂತಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ನಾಗರಾಜು, ಡಿ.ಮಂಜುನಾಥ್, ಮಧು ಕಾಳೇನಹಳ್ಳಿ ಮಂಜುನಾಥ್,ನಾಗಣ್ಣ, ಪಲ್ಲವಿ, ಅಂಕರಾಜು, ಸೇರಿದಂತೆ ಕೊತ್ತತ್ತಿ ಹಾಗೂ ತಗ್ಗಹಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರು ಇಧ್ದರು.
Mandya
ತಂಬಾಕು ವ್ಯಸನ ಮುಕ್ತ ಸಮಾಜವನ್ನು ನಿರ್ಮಿಸಲು ಎಲ್ಲರೂ ಭಾಗಿಯಾಗಬೇಕು :ಎನ್. ಸರಸ್ವತಿ
ಶ್ರೀರಂಗಪಟ್ಟಣ: ತಂಬಾಕು ಸೇವನೆಯಿಂದ ಕ್ಯಾನ್ಸರ್, ಹೃದಯಾಘಾತ ಮತ್ತು ಶ್ವಾಸಕೋಶದ ಕಾಯಿಲೆಗಳು ಬರುವ ಅಪಾಯದ ಬಗ್ಗೆ ಅರಿವು ಮೂಡಿಸುವುದು ತೀರಾ ಅಗತ್ಯವಾಗಿದ್ದು, ಜನರು ಧೂಮಪಾನ ಅಥವಾ ತಂಬಾಕು ಚಟವನ್ನು ತೊರೆದು ಆರೋಗ್ಯವನ್ನು ಕಾಪಾಡಿ ಕೊಳ್ಳಲು ಮುಂದಾಗಬೇಕು. ಹಾಗೆಯೇ ತಂಬಾಕು ವ್ಯಸನ ಮುಕ್ತ ಸಮಾಜವನ್ನು ನಿರ್ಮಿಸಲು ಸಾರ್ವಜನಿಕ ಸಮುದಾಯ ಪ್ರಯತ್ನಿಸಬೇಕು ಎಂದು ಅಲೈ ಎನ್ ಸರಸ್ವತಿರವರು ತಿಳಿಸಿದರು.
ಅಸೋಶಿಯೇಷನ್ ಆಫ್ ಐಕ್ಯಾ ಅಲೈಯನ್ಸ್ ಕ್ಲಬ್, ಅನನ್ಯ ಆರ್ಟ್ ಸಂಸ್ಥೆ, ಕಾಮಧೇನು ಸ್ವಸಹಾಯ ಸಂಘ ಶ್ರೀರಂಗಪಟ್ಟಣ, ಮಂಡ್ಯ ಜಿಲ್ಲಾ ಜನರಲ್ ಲಿಸ್ಟ್ ಕ್ಲಬ್, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಗಳ ಸಹಯೋಗದೊಂದಿಗೆ ತಂಬಾಕು ವಿರೋದಿ ದಿನ ಮತ್ತು ವಿಶ್ವ ಪರಿಸರ ದಿನದ ಅಂಗವಾಗಿ ಮೇಳಾಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸೊಸೈಟಿ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇದಕ್ಜೂ ಮೊದಲು ಕಾರ್ಯಕ್ರಮ ಉಧ್ಘಾಟಿಸಿ ಪರಿಸರ ಸಂರಕ್ಷಣೆ ಕುರಿತು ಮಾತನಾಡಿದ ಅಲೈ ಆಶಾಲತ ಪುಟ್ಟೇಗೌಡ ಅವರು, ‘ಪರಿಸರವನ್ನು ಸಂರಕ್ಷಿಸಲು ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಕೆಲವು ಸರಳ ಹಾಗೂ ಪರಿಣಾಮಕಾರಿ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಮಾಲಿನ್ಯವನ್ನು ನಿಯಂತ್ರಿಸಬೇಕು ಮತ್ತು ನೈಸರ್ಗಿಕ ಸಮತೋಲನವನ್ನು ಕಾಪಾಡಿಕೊಳ್ಳಬೇಕು. ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಅಲೈ ಅನುಪಮ ಮಾತನಾಡಿ, ‘ಮಹಿಳೆಯರು ಮುಟ್ಟಿನ ಸಮಯದಲ್ಲಿ ನೈರ್ಮಲ್ಯ ಮತ್ತು ಸ್ವಚ್ಚತೆ ಕಾಪಾಡಿಕೊಳ್ಳಲು ಸ್ಯಾನಿಟರಿ ನ್ಯಾಪಕಿನ್ ಬಳಸುವ ಮೂಲಕ ಸ್ವಚ್ಚತೆಗೆ ಮುಂದಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಶ್ರೀ ಹೆಗ್ಗಡೇಶ್ವರ ಪ್ರಸನ್ನ ಪಾರ್ವತಿ ದೇವಸ್ಥಾನದ ಆವರಣದಲ್ಲಿ ಸಾಗವಾನಿ ಗಿಡಗಳನ್ನು ನೆಡಲಾಯಿತು. ಮತ್ತು ಕಾರ್ಯಕ್ರಮದ ನಂತರ ಮಹಿಳೆಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್ ಗಳನ್ನು ಉಚಿತವಾಗಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅಲೈಯನ್ಸ್ ಸಂಸ್ಥೆಯ ಅನುಪಮಾ, ನಳಿನ, ಪುಷ್ಪ, ಎಚ್ ವಿ ಪುಟ್ಟಸ್ವಾಮಿ, ಬನಶಂಕರಿ, ನಾಗೇಂದ್ರ, ರೋಟರಿ ಕ್ಲಬ್ ಅಧ್ಯಕ್ಷರಾದ ಶ್ರೀ. ರಾಘವೇಂದ್ರ, ವಿರೂಪಾಕ್ಷ, ಶಿವಣ್ಣ, ಸಂಜೀವಿನಿ ಒಕ್ಕೂಟದ ಮ್ಯಾನೇಜರ್ ರಂಜಿತಾ, ಭಾಗ್ಯಮ್ಮ, ಪ್ರಭುಸ್ವಾಮಿ ಇದ್ದರು.
Mandya
ಆಧುನಿಕ ಭಾರತದ ಶಿಲ್ಪಿ ನಾಲ್ವಡಿ ಕೃಷ್ಣರಾಜ ಒಡೆಯರ್: ಡಾ.ಈ.ಸಿ.ನಿಂಗರಾಜ್ ಗೌಡ ಬಣ್ಣನೆ
ಮಂಡ್ಯ: ತಮ್ಮ ಜನಪರ ಅಭಿವೃದ್ಧಿ ಕೆಲಸದ ಮೂಲಕವೇ ರಾಜರ್ಷಿ ಎಂಬ ಬಿರುದು ಪಡೆದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆಧುನಿಕ ಭಾರತದ ಶಿಲ್ಪಿ ಎಂದು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ ಹಾಗೂ ಮೈಸೂರು ವಿಭಾಗೀಯ ಬಿಜೆಪಿ ಪ್ರಭಾರಿ ಡಾ.ಈ.ಸಿ.ನಿಂಗರಾಜ್ ಗೌಡ ಬಣ್ಣಿಸಿದರು.
ಡಾ.ಜೀಶಂಪ ಸಾಹಿತ್ಯ ವೇದಿಕೆ ವತಿಯಿಂದ ಭಾನುವಾರ ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಅಂಗವಾಗಿ ಅಖಿಲ ಕರ್ನಾಟಕ ಪ್ರಥಮ ಮಹಿಳಾ ಕನ್ನಡ ಅಕ್ಷರ ಜಾತ್ರೆ, ವಿವಿಧ ಪ್ರಶಸ್ತಿ ಪ್ರದಾನ ಮತ್ತು ಕವಿಗೋಷ್ಟಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಸಂಸ್ಥಾನದ ಅತ್ಯಂತ ಪ್ರಸಿದ್ಧ ಮತ್ತು ಜನಪರ ರಾಜರಲ್ಲಿ ಒಬ್ಬರು. ಅವರನ್ನು ರಾಜರ್ಷಿ ಎಂದು ಕರೆಯಲಾಗುತ್ತಿತ್ತು. ಏಕೆಂದರೆ ಅವರು ರಾಜನಾಗಿದ್ದರೂ ಋಷಿಯಂತೆ ಸರಳತೆ, ಧರ್ಮನಿಷ್ಠೆ ಮತ್ತು ಜನಸೇವೆಯನ್ನು ಪಾಲಿಸುತ್ತಿದ್ದರು. ಅವರ ಆಡಳಿತಾವಧಿಯಲ್ಲಿ ಮೈಸೂರು ಸಂಸ್ಥಾನವು ಭಾರತದ ಅತ್ಯಂತ ಅಭಿವೃದ್ಧಿಶೀಲ ಮತ್ತು ಸುಶಾಸಿತ ಸಂಸ್ಥಾನಗಳಲ್ಲಿ ಒಂದಾಗಿ ಪ್ರಸಿದ್ಧಿಯಾಯಿತು ಎಂದು ತಿಳಿಸಿದರು.
ಚಾಮರಾಜ ಒಡೆಯರ್ ಅವರು ಬೇಗ ನಿಧನರಾದ ಕಾರಣ ಅವರ ಮಗ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಬಾಲ್ಯದಲ್ಲೇ ರಾಜ್ಯದ ಉತ್ತರಾಧಿಕಾರಿಯಾದರು. ಆರಂಭದಲ್ಲಿ ತಾಯಿ ಕೆಂಪನಂಜಮ್ಮಣಿ ಅವರು ರಾಜ್ಯದ ಆಡಳಿತ ನೋಡಿಕೊಂಡರು. ಅವರ ಕಾಲವನ್ನು ಮೈಸೂರು ಸಂಸ್ಥಾನದ ಸುವರ್ಣ ಯುಗ ಎನ್ನುತ್ತಾರೆ ಎಂದು ಸ್ಮರಿಸಿದರು.

ನಾಲ್ವಡಿ ಅವರು ಶಿಕ್ಷಣ ಕ್ಷೇತ್ರದ ಅಭಿವೃದ್ಧಿ, 1916ರಲ್ಲಿ ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆಗೆ ಕಾರಣರಾದರು. ಮಹಿಳಾ ಶಿಕ್ಷಣಕ್ಕೆ ಉತ್ತೇಜನ ನೀಡಿದರು. ಶಾಲೆಗಳು, ಕಾಲೇಜುಗಳು ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು ಎಂದು ಶ್ಲಾಘಿಸಿದರು.
ಕೈಗಾರಿಕಾ ಕ್ಷೇತ್ರದಲ್ಲಿ ಕ್ರಾಂತಿ ನಡೆಸಿ ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿ, ಮೈಸೂರು ಸಿಲ್ಕ್ ಇಂಡಸ್ಟ್ರಿ, ಭದ್ರಾವತಿ ಐರನ್ ಅಂಡ್ ಸ್ಟೀಲ್ ವರ್ಕ್ಸ್ ಸ್ಥಾಪಿಸಿ, ವಿದ್ಯುತ್ ಉತ್ಪಾದನೆಗಾಗಿ ಶಿವನಸಮುದ್ರ ಜಲವಿದ್ಯುತ್ ಯೋಜನೆಗೆ ಉತ್ತೇಜನ ನೀಡಿದರು. ಮೈಸೂರು ಸಂಸ್ಥಾನವನ್ನು ಕೈಗಾರಿಕಾ ದೃಷ್ಟಿಯಿಂದ ಭಾರತದ ಮಾದರಿ ರಾಜ್ಯವನ್ನಾಗಿ ರೂಪಿಸಿದರು ಎಂದು ಬಣ್ಣಿಸಿದರು.
ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಾಣಕ್ಕೆ ಮಹತ್ವದ ಪಾತ್ರವಹಿಸಿದರು. ಇದರ ಯೋಜನೆಯಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಪ್ರಮುಖ ಪಾತ್ರವಹಿಸಿದರು. ಈ ಅಣೆಕಟ್ಟು ಕೃಷಿ, ಕುಡಿಯುವ ನೀರು ಮತ್ತು ವಿದ್ಯುತ್ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿತು ಎಂದರು.
ಒಡೆಯರ್ ಅವರು ತಮ್ಮ ಆಳ್ವಿಕೆಯಲ್ಲಿ ಮೈಸೂರು ಸಂಸ್ಥಾನದಲ್ಲಿ ಉತ್ತಮ ರಸ್ತೆ, ಆರೋಗ್ಯ ಸೇವೆ ಮತ್ತು ನೀರಾವರಿ ವ್ಯವಸ್ಥೆ ಅಭಿವೃದ್ಧಿಪಡಿಸಿದರು. ದಲಿತರು ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಕ್ರಮ ಕೈಗೊಂಡರು. ಸರ್ಕಾರಿ ಸೇವೆಗಳಲ್ಲಿ ಸ್ಥಳೀಯರಿಗೆ ಅವಕಾಶ ನೀಡಿದರು. ಕಲೆ ಮತ್ತು ಸಂಗೀತಕ್ಕೆ ಪ್ರೋತ್ಸಾಹ ನೀಡಿದ ಒಡೆಯರ್ ಅವರು, ಸಂಗೀತ, ಸಾಹಿತ್ಯ ಮತ್ತು ಚಿತ್ರಕಲೆಗೆ ಅಪಾರ ಪ್ರೋತ್ಸಾಹ ನೀಡಿದರು. ಮೈಸೂರು ಚಿತ್ರಕಲಾ ಶೈಲಿ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಬೆಳೆಸಿದರು ಎಂದು ಹೇಳಿದರು.
ಕೈಗಾರಿಕೆಗಳು, ಶಿಕ್ಷಣ ಸಂಸ್ಥೆಗಳು, ಅಣೆಕಟ್ಟುಗಳು, ಬ್ಯಾಂಕುಗಳು ಸೇರಿದಂತೆ ಸಾರ್ವಜನಿಕ ಯೋಜನೆಗಳನ್ನು ನೀಡಿದರು. ಅಂಗವಿಕಲರು, ದಲಿತರು, ಮಹಿಳೆಯರು, ಕಾರ್ಮಿಕರ ಏಳ್ಗೆಗೆ ಶ್ರಮಿಸಿದ ಅವರ ಆಡಳಿತಕಾಲವನ್ನು ಮೈಸೂರು ಸಂಸ್ಥಾನದ ಸುವರ್ಣಯುಗ ಎಂದು ಇತಿಹಾಸದಲ್ಲಿ ದಾಖಲಿಸಲಾಗಿದೆ ಎಂದು ತಿಳಿಸಿದರು.

ಇತ್ತೀಚೆಗಷ್ಟೇ ಪರಿಸರ ದಿನಾಚರಣೆ ಆಚರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಗಿಡಗಳನ್ನು ನೆಡುವುದಲ್ಲ. ಬೆಳೆಸಬೇಕೆಂದು ಕರೆ ಕೊಟ್ಟಿದ್ದರು. ಅದರಂತೆ ದೇಶ ನಿವಾಸಿಗಳು ಗಿಡ ನೆಟ್ಟು ಮೋದಿ ಕರೆಯನ್ನ ಬೆಂಬಲಿಸಿದರು. ಕೇವಲ ಪರಿಸರ ದಿನಾಚರಣೆ ಸಂದರ್ಭದಲ್ಲಿ ಮಾತ್ರವಲ್ಲದೇ ಪ್ರತಿಯೊಬ್ಬರು ಶುಭ ಸಮಾರಂಭಗಳಲ್ಲಿ ಗಿಡ ನೆಟ್ಟು ಪ್ರೋತ್ಸಾಹಿಸಬೇಕೆಂದು ಕರೆ ನೀಡಿದರು.
ಖ್ಯಾತ ಕವಿ ಹಾಗೂ ವೈದ್ಯ ಡಾ.ಚಂದ್ರಶೇಖರ್ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅಪಾರ ಜನಸೇವೆ ಮಾಡಿರುವ ಹಿನ್ನೆಲೆಯಲ್ಲಿ ಅವರಿಗೆ ಭಾರತ ರತ್ನ ನೀಡಬೇಕು. ಆಳುವ ನಮ್ಮ ಸರ್ಕಾರ ಜನರ ಬೇಡಿಕೆಗೆ ಸ್ಪಂದಿಸಿ ಆದಷ್ಟು ಬೇಗ ಭಾರತ ರತ್ನ ಘೋಷಿಸಬೇಕೆಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಕರ್ನಾಟಕ ಸೇವಾ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಅಕ್ಷರ ಜಾತ್ರೆಯ ಸಮ್ಮೇಳನಾಧ್ಯಕ್ಷೆ ಹಾಗೂ ಕವಿಯತ್ರಿ ಬಿ.ಆರ್.ಉಮಾ, ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಬನ್ನಂಗಾಡಿ ಸಿದ್ದಲಿಂಗಯ್ಯ, ಸಮಾಜ ಸೇವಕರಾದ ಆನಂದ್ ತಿರುಮಲ, ನವೀದ್ ಮುಲ್ಲಾ, ಆಧ್ಯಾತ್ಮ ಚಿಂತಕಿ ಡಾ.ಪೂರ್ಣಿಮಾ, ಡಾ.ಜೀಶಂಪ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಸ್.ಕೃಷ್ಣ ಸ್ವರ್ಣಸಂದ್ರ, ಪದಾಧಿಕಾರಿಗಳಾದ ಮಂಗಲ ಶಿವಣ್ಣ, ನಾಗೇಶ್ ರಾಗಿಮುದ್ದನಹಳ್ಳಿ, ಎಲ್ಲರೊಳಗೊಂದಾಗು ಮಂಕು ತಿಮ್ಮ ಟ್ರಸ್ಟ್ ನ ವಿನಯ್ ಕುಮಾರ್, ನಾರಾಯಣ ಸ್ವಾಮಿ, ಹೇಮಾ ಉಪಸ್ಥಿತರಿದ್ದರು.
-
Manglore23 hours agoಎಂಬಿಬಿಎಸ್ ವೈದ್ಯರ ಹುದ್ದೆಗೆ ವಾರದೊಳಗೆ ನೇಮಕಾತಿ ಆದೇಶ ನೀಡದಿದ್ದಲ್ಲಿ ಡಿಎಚ್ಒ ಅಮಾನತು- ಯು.ಟಿ.ಖಾದರ್ ವಾರ್ನಿಂಗ್
-
Chikmagalur18 minutes agoಆಲ್ದೂರು ಪಟ್ಟಣಕ್ಕೆ ನುಗ್ಗಿದ ಎರಡು ಕಾಡಾನೆಗಳು: ಕಾಲೇಜು ಗೇಟ್ ಧ್ವಂಸ, ಗ್ರಾಮಸ್ಥರಲ್ಲಿ ಆತಂಕ
-
Hassan23 hours agoಅರಕಲಗೂಡಿನ ಮಕ್ಕಳ ಮನೆ ಶಾಲೆಗಳಲ್ಲಿ ಅರ್ಥಪೂರ್ಣ ವಿಶ್ವ ಪರಿಸರ ದಿನಾಚರಣೆ
-
Kodagu21 hours agoಜಿಎಸ್ಟಿ ಮತ್ತು ಆದಾಯ ತೆರಿಗೆ ಶಿಕ್ಷಣ ಸಹಕಾರ ಕ್ಷೇತ್ರ ರೈತರ ಬೆನ್ನುಲುಬು : ರಾಬಿನ್ ದೇವಯ್ಯ ಬಣ್ಣನೆ
-
Hassan22 hours agoಕಾಳೇಗೌಡನ ಕೊಪ್ಪಲುನಲ್ಲಿ ಎರಡು ಚಿರತೆ ಪ್ರತ್ಯಕ್ಷ ಗ್ರಾಮದ ಜನರಲ್ಲಿ ಆತಂಕ:
-
Mandya22 hours agoಆಧುನಿಕ ಭಾರತದ ಶಿಲ್ಪಿ ನಾಲ್ವಡಿ ಕೃಷ್ಣರಾಜ ಒಡೆಯರ್: ಡಾ.ಈ.ಸಿ.ನಿಂಗರಾಜ್ ಗೌಡ ಬಣ್ಣನೆ
-
Mysore1 hour agoಮೈಸೂರಿನಲ್ಲಿ ಗೃಹಿಣಿ ಸಾ*ವು: ಪತಿಯ ವಿರುದ್ಧ ಕೊಲೆ ಆರೋಪ
-
Chamarajanagar13 minutes agoಸ್ವಚ್ಛತೆ ಕಾಣದ ರಾಘವಾಪುರ ಗ್ರಾಮ: ದೂರು ನೀಡಿದರೂ ಕ್ಯಾರೆ ಎನ್ನದ ಪಿಡಿಓ
