Connect with us

Chamarajanagar

ಕ್ಷೇತ್ರ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸಲು ಅಗತ್ಯ ಕ್ರಮ : ಶಾಸಕ ಸಿ. ಪುಟ್ಟರಂಗಶೆಟ್ಟಿ

Published

on

ಚಾಮರಾಜನಗರ: ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚು ಕೆರೆಗಳಿದ್ದು, ಈ ಕೆರೆಗಳಿಗೆ ನೀರು ತುಂಬಿಸಲು ಅಗತ್ಯ ಕ್ರಮ ವಹಿಸಲಾಗಿದೆ ಎಂದು ಎಂ.ಎಸ್.ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು.

ಚಾಮರಾಜನಗರ ತಾಲೂಕಿನ ಕೋಡಿಮೋಳೆ ಕೆರೆಯಲ್ಲಿ ನಿರ್ಮಿಸಿರುವ ಪಂಪ್‍ಹೌಸ್‍ಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು. ಈ ಹಿಂದಿನ ಅವಧಿಯಲ್ಲಿಯೂ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಹೆಚ್.ಎಸ್. ಮಹದೇವಪ್ರಸಾದ್ ಅವರ ಕಾಲದಲ್ಲಿಯೇ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನಕ್ಕೆ ಬಂದಿತ್ತು. ಸುತ್ತೂರು ಏತ ನೀರಾವರಿ ಯೋಜನೆಯಡಿ ಕೆರೆಗಳಿಗೆ ನೀರು ಹರಿಸುವ ಕಾರ್ಯ ನಡೆದಿದೆ ಎಂದು ಹೇಳಿದರು.

ತಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಕೆರೆಗಳು ಬರಲಿದ್ದು ನೀರು ತುಂಬಿಸುವ ಕಾರ್ಯ ನಡೆದಿದೆ. ಕೋಡಿಮೋಳೆ ಕೆರೆಯಿಂದ ಎರಡು ಭಾಗವಾಗಿ ದೊಡ್ಡಮೋಳೆ ಕೆರೆ, ಚಿಕ್ಕಮೋಳೆ ಕೆರೆ, ನಗರದ ಕೆರೆ, ಬಂಡಿಗೆರೆ, ಮರಗದ ಕೆರೆ, ಕೆರೆಗಳಿಗೆ ನೀರು ಹರಿಯಲಿದೆ. ಮಲ್ಲೆದೇವನಹಳ್ಳಿ, ಪುಟ್ಟನಪುರ, ನಾಗವಳ್ಳಿ, ಕಾಗಲವಾಡಿ, ಹೊಂಡರಬಾಳು, ಸರಗೂರು ಮೋಳೆ, ಹೆಬ್ಬಳ್ಳ ಕೆರೆಗಳಿಗೂ ನೀರು ತುಂಬಿಸಲಾಗುತ್ತಿದೆ ಎಂದರು.

ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲೆಯ ಹಲವು ಅಭಿವೃದ್ದಿ ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದೆ. ಈ ಅಭಿವೃದ್ದಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಹಾಗೂ ಕೆರೆಗೆ ನೀರು ಹರಿಸುವ ಯೋಜನೆಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಗಳು ಹಾಗೂ ಜಲ ಸಂಪನ್ಮೂಲ ಸಚಿವರಾದ ಡಿ.ಕೆ. ಶಿವಕುಮಾರ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಶಾಸಕರೆಲ್ಲರೂ ಸೇರಿ ಆಹ್ವಾನಿಸಿ ವಿದ್ಯುಕ್ತವಾಗಿ ಚಾಲನೆ ನೀಡುವ ಕಾರ್ಯಕ್ರಮವನ್ನು ಸ್ವಲ್ಪ ದಿನದಲ್ಲಿಯೇ ಆಯೋಜಿಸಲಾಗುವುದು ಎಂದು ಶಾಸಕರು ತಿಳಿಸಿದರು.

ಚಾಮರಾಜನಗರ ಪಟ್ಟಣಕ್ಕೆ ಮಾಲಂಗಿಯಿಂದ ಕುಡಿಯುವ ನೀರು ಪೂರೈಸುವ ಮೂರನೇ ಹಂತದ ಯೋಜನೆಗೆ 162 ಕೋಟಿ ರೂ., ಒಳಚರಂಡಿ ನಿರ್ಮಾಣಕ್ಕೆ 141 ಕೋಟಿ ರೂ., ಕ್ರೀಡಾಂಗಣ ಅಭಿವೃದ್ದಿಗೆ 15 ಕೋಟಿ ರೂ. ಅನುದಾನ ನಿಗದಿಯಾಗಿದೆ. ನಗರದ ಜನತೆಗೆ ಸಮಗ್ರವಾಗಿ ಕುಡಿಯುವ ನೀರು ಪೂರೈಸಲಾಗುತ್ತದೆ ಎಂದು ತಿಳಿಸಿದರು.

ಕೋಡಿಮೋಳೆ ಕೆರೆ ಪಂಪ್‍ಹೌಸ್ ವೀಕ್ಷಣೆ ಬಳಿಕ ಶಾಸಕರು ದೊಡ್ಡ ಕೆರೆ, ಚಿಕ್ಕ ಕೆರೆಗೂ ಭೇಟಿ ನೀಡಿ ಪರಿಶೀಲಿಸಿದರು.

ಇದೇ ಸಂದರ್ಭದಲ್ಲಿ ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೆ.ಎಸ್. ಮಹೇಶ್, ಸಹಾಯಕ ಎಂಜಿನಿಯರ್ ಎಂ.ವಿ. ಲೋಕೇಶ್, ಅಮೃತ ಕನ್ಸ್‍ಟ್ರಕ್ಷನ್ ಗುತ್ತಿಗೆದಾರ ರಾಧಾಕೃಷ್ಣರೆಡ್ಡಿ, ನಗರಸಭೆ ಸದಸ್ಯ ಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಟರಾಜು, ಮುಖಂಡರಾದ ಗೋವಿಂದಶೆಟ್ಟಿ, ನಾಗಯ್ಯ, ಇತರರು ಇದ್ದರು.

Continue Reading

Chamarajanagar

ಆ.11 ರಿಂದ ಮಕ್ಕಳ ಸಹಾಯವಾಣಿ ನೌಕರರ ಪ್ರತಿಭಟನೆ

Published

on

ಚಾಮರಾಜನಗರ: ರಾಜ್ಯದ ಮಕ್ಕಳ ರಕ್ಷಣೆಗೆ 24/7 ಸೇವೆ ಸಲ್ಲಿಸುತ್ತಿರುವ ಮಕ್ಕಳ ಸಹಾಯವಾಣಿ 1098 ಸಿಬ್ಬಂದಿಗಳ 10 ತಿಂಗಳ ಬಾಕಿ ವೇತನವನ್ನು ನೀಡಬೇಕು ಎಂದು ಆಗ್ರಹಿಸಿ ಆ.11 ರಿಂದ ಅನಿರ್ದಿಷ್ಟಾವಧಿ ಧರಣಿಯನ್ನು ರಾಜ್ಯ ಸರ್ಕಾರಿ ಖಾಯಂಮೇತರರ ನೌಕರರ ಒಕ್ಕೂಟದಿಂದ ಹಮ್ಮಿಕೊಳ್ಳಲಾಗಿದೆ. ಅಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಯಲಿದ್ದು,10 ತಿಂಗಳ ಬಾಕಿ ವೇತನವನ್ನು ತಕ್ಷಣ ಪಾವತಿಸುವಂತೆ, ಹಲವು ವರ್ಷಗಳಿಂದ ಬಾಕಿ ಉಳಿದಿರುವ ಪ್ರಯಾಣ ಭತ್ಯೆ ಬಿಡುಗಡೆ ಮಾಡುವಂತೆಮಾಡುವಂತೆ ಹಾಗೂ ಎಸ್‌ ಎನ್‌ ಎ-ಸ್ಪರ್ಶ್ ತಂತ್ರಾಂಶದ ತಾಂತ್ರಿಕ ದೋಷದೋಷವನ್ನು ಸರಿಪಡಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸುವುದಾಗಿ ಮಕ್ಕಳ ಸಹಾಯವಾಣಿ ನೌಕರರು ತಿಳಿಸಿದ್ದಾರೆ.


ಅಲ್ಲದೇ, ಸಮಯಕ್ಕೆ ಸರಿಯಾಗಿ ವೇತನ ಪಾವತಿಸುವ ವ್ಯವಸ್ಥೆ ಮಾಡಬೇಕು. ಕಡಿಮೆ ವೇತನದಲ್ಲಿ 24/7 ಕರ್ತವ್ಯ ನಿರ್ವಹಿಸುತ್ತಿರುವ ಕಾರಣ ವೇತನ ಪರಿಷ್ಕರಣೆ ಮಾಡಬೇಕು. ಎಲ್ಲ ಸಿಬ್ಬಂದಿಗಳಿಗೆ ಕೆಲಸದ ಭದ್ರತೆ ಖಾತ್ರಿಪಡಿಸಬೇಕು. ಪ್ರತಿ ತಿಂಗಳು ನಿಗದಿತ ದಿನಾಂಕದಂದು ವೇತನ ಪಾವತಿ ಖಾತ್ರಿಪಡಿಸಬೇಕು. ರಾಜ್ಯ ಸರ್ಕಾರವೇ ಮೊದಲು ಅನುದಾನ ನೀಡಿ, ನಂತರ ಕೇಂದ್ರದಿಂದ ಪಡೆಯುವ ವಿಧಾನ ಜಾರಿಗೊಳಿಸಬೇಕು ಎಂದು ಇನ್ನಿತರ ಬೇಡಿಕೆಗಳ ಈಡೇರಿಕೆ ಆಗ್ರಹ ಮಾಡುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

Chamarajanagar

30 ದಿನಗಳ ನಂತರ ಕೆರೆಗಳಿಗೆ ನೀರು ತುಂಬಿಸಲಾಗುವುದು: ಶಾಸಕ ಎಚ್.ಎಂ.ಗಣೇಶಪ್ರಸಾದ್

Published

on

ಗುಂಡ್ಲುಪೇಟೆ, ಆ.6: ಬರಗಾಲದ ಹಿನ್ನೆಲೆಯಲ್ಲಿ ಚಾಮರಾಜನಗರ ತಾಲೂಕಿನ ಮೂರನೇ ಹಂತದ 10 ಕೆರೆಗಳಿಗೆ 30 ದಿನಗಳ ಕಾಲ ನೀರು ಹರಿಸಲು ತಾತ್ಕಾಲಿಕವಾಗಿ ನಿರ್ಧರಿಸಲಾಗಿದ್ದು, ಈ ಬಗ್ಗೆ ತಾಲೂಕಿನ ರೈತರು ಹಾಗೂ ಸಾರ್ವಜನಿಕರು ಸಹಕಾರ ನೀಡುವಂತೆ ಶಾಸಕ ಎಚ್.ಎಂ.ಗಣೇಶಪ್ರಸಾದ್ ಮನವಿ ಮಾಡಿದ್ದಾರೆ.

ಹುತ್ತೂರು ಪಂಪ್‌ಹೌಸ್‌ನಿಂದ ಕಳೆದ ನಾಲ್ಕೈದು ತಿಂಗಳುಗಳಿಂದ ನಾಲ್ಕನೇ ಹಂತದ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಇದರ ಪರಿಣಾಮವಾಗಿ ಕರಕಲಮಾದಹಳ್ಳಿ, ದಾರಿಬೇಗೂರು, ಯರಿಯೂರು ಹಾಗೂ ವಡ್ಡಗೆರೆ-1 ಮತ್ತು ವಡ್ಡಗೆರೆ-2 ಕೆರೆಗಳು ಈಗಾಗಲೇ ಭರ್ತಿಯಾಗಿವೆ.

ಮುಂದಿನ ಹಂತದಲ್ಲಿ ವಡಯನಪುರ, ಬೊಮ್ಮಲಾಪುರ, ಶಿವಪುರ ಹಾಗೂ ಗುಂಡ್ಲುಪೇಟೆಯ ಅಮ್ಮನಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಬಾಕಿಯಿದೆ. ಆದರೆ, ಚಾಮರಾಜನಗರ ತಾಲೂಕಿನ ಮೂರನೇ ಹಂತದ 10 ಕೆರೆಗಳಿಗೆ ನೀರು ದೊರೆಯದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಅವರು ನಡೆಸುತ್ತಿರುವ ಅಹೋರಾತ್ರಿ ಧರಣಿಯನ್ನು ಪರಿಗಣಿಸಿ ಮಾನವೀಯ ದೃಷ್ಟಿಯಿಂದ 30 ದಿನಗಳ ಕಾಲ ಆ ಕೆರೆಗಳಿಗೂ ನೀರು ಹರಿಸಲು ಸೂಚನೆ ನೀಡಲಾಗಿದೆ.

30 ದಿನಗಳ ಬಳಿಕ ಮತ್ತೆ ಗುಂಡ್ಲುಪೇಟೆ ತಾಲೂಕಿನ ನಾಲ್ಕನೇ ಹಂತದ ಕೆರೆಗಳಿಗೆ ನೀರು ಹರಿಸುವ ಕಾರ್ಯವನ್ನು ಮುಂದುವರಿಸಲಾಗುವುದು ಎಂದು ತಿಳಿಸಲಾಗಿದೆ.

ಬರಗಾಲದ ಸಂಕಷ್ಟದ ಸಂದರ್ಭದಲ್ಲಿ ಎಲ್ಲಾ ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಈ ತಾತ್ಕಾಲಿಕ ನಿರ್ಧಾರ ಕೈಗೊಳ್ಳಲಾಗಿದೆ. ಚಾಮರಾಜನಗರ ಮತ್ತು ಗುಂಡ್ಲುಪೇಟೆ ಎರಡೂ ತಾಲೂಕಿನ ರೈತರು ಪರಸ್ಪರ ಸಹಕಾರ, ತಾಳ್ಮೆ ಮತ್ತು ಐಕ್ಯತೆಯಿಂದ ನಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.

Continue Reading

Chamarajanagar

ಹನೂರಿನಲ್ಲಿ ಆಗಸ್ಟ್ 7ರಿಂದ ಕೆಂಪೇಗೌಡ ಕ್ರಿಕೆಟ್ ಲೀಗ್ ಆರಂಭ

Published

on

ಹನೂರು: ನಾಡಪ್ರಭು ಕೆಂಪೇಗೌಡರ ಜಯಂತೋತ್ಸವದ ಅಂಗವಾಗಿ ಹನೂರು ಪಟ್ಟಣದ ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿ ಆಗಸ್ಟ್ 7ರಿಂದ 9ರವರೆಗೆ ವಿಭಾಗಮಟ್ಟದ ಕೆಂಪೇಗೌಡ ಕ್ರಿಕೆಟ್ ಲೀಗ್ ನಡೆಯಲಿದ್ದು, ಶುಕ್ರವಾರ ಬೆಳಗ್ಗೆ 10 ಗಂಟೆಗೆ ಟೂರ್ನಿಗೆ ಚಾಲನೆ ನೀಡಲಾಗುವುದು.

ನಾಡಪ್ರಭು ಕೆಂಪೇಗೌಡರ ಅಭಿಮಾನಿ ಬಳಗದ ಆಶ್ರಯದಲ್ಲಿ ಐಪಿಎಲ್ ಮಾದರಿಯಲ್ಲಿ ಆಯೋಜಿಸಿರುವ ಈ ಕ್ರಿಕೆಟ್ ಲೀಗ್‌ನಲ್ಲಿ ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಗಳ ಪ್ರತಿಭಾವಂತ ಆಟಗಾರರು ಭಾಗವಹಿಸಲಿದ್ದಾರೆ. ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಉದ್ದೇಶದಿಂದ ಈ ಪಂದ್ಯಾವಳಿ ಆಯೋಜಿಸಲಾಗಿದೆ.

ಟೂರ್ನಿಯಲ್ಲಿ ಒಟ್ಟು 12 ತಂಡಗಳು ಪ್ರಶಸ್ತಿಗಾಗಿ ಸೆಣಸಲಿದ್ದು, ಈಗಾಗಲೇ 200ಕ್ಕೂ ಹೆಚ್ಚು ಆಟಗಾರರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ವಿವಿಧ ತಂಡಗಳಿಗೆ ಆಯ್ಕೆಯಾಗಿದ್ದಾರೆ.

ಟೀಮ್ ವಾರಿಯರ್ಸ್ ಹನೂರು, ನರಸೀಪುರದ ಕನ್ನಡ ತಾಯಿ ಮಕ್ಕಳ ತಂಡ, ಚಾಮರಾಜನಗರದ ಪಿಆರ್‌ಕೆ ತಂಡ, ಕೌದಳ್ಳಿಯ ಇಬ್ರಾಮಿ ಕ್ರಿಕೆಟರ್ಸ್, ಎಚ್.ಡಿ. ಕೋಟೆಯ ಕಬಿನಿ ತಂಡ, ಗುಂಡ್ಲುಪೇಟೆಯ ರಿವೆಂಜ್ ಬುಲ್ಸ್, ನಂಜನಗೂಡಿನ ಇಲೆವೆನ್ ತಂಡ, ಕುದೇರಿನ ದೊಸ್ತ್ ತಂಡ, ಮಂಡ್ಯದ ಕ್ಲಾಸಿಕ್ ತಂಡ, ನರಸೀಪುರದ ನವಚೇತನ ತಂಡ, ಕೆ.ಆರ್. ಪೇಟೆಯ ಹನುಮಾನ್ ಕ್ರಿಕೆಟರ್ಸ್ ಹಾಗೂ ಹನೂರಿನ ಎಸ್‌ಎಂಬಿ ತಂಡಗಳು ಕಣಕ್ಕಿಳಿಯಲಿವೆ.

ಟೂರ್ನಿಯ ವಿಜೇತ ತಂಡಕ್ಕೆ ಆಕರ್ಷಕ ಟ್ರೋಫಿಯೊಂದಿಗೆ ರೂ1 ಲಕ್ಷ ನಗದು ಬಹುಮಾನ ಹಾಗೂ ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ಟ್ರೋಫಿಯೊಂದಿಗೆ ರೂ 50 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಕ್ರೀಡಾಭಿಮಾನಿಗಳಿಗೆ ಪಂದ್ಯಗಳ ವೀಕ್ಷಣೆಗೆ ಅನುಕೂಲವಾಗುವಂತೆ ಪ್ರತಿ ಪಂದ್ಯವನ್ನು ಯೂಟ್ಯೂಬ್ ಲೈವ್ ಮೂಲಕ ಪ್ರಸಾರ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಶುಕ್ರವಾರ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಒಕ್ಕಲಿಗ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕೆಂಪೇಗೌಡ ಅಭಿಮಾನಿಗಳು ಭಾಗವಹಿಸಲಿದ್ದು, ಅವರ ಸಮ್ಮುಖದಲ್ಲಿ ಕೆಂಪೇಗೌಡ ಕ್ರಿಕೆಟ್ ಲೀಗ್‌ಗೆ ಅಧಿಕೃತ ಚಾಲನೆ ದೊರೆಯಲಿದೆ.

Continue Reading

Trending

error: Content is protected !!