Connect with us

Hassan

ಸಿಎಂ ಓಲೈಕೆಗಾಗಿ ಸವಲತ್ತುಗಳನ್ನು ಕೊಡುತ್ತಿದ್ದಾರೆ: ಶಾಸಕ ಎ.ಮಂಜು 

Published

on

ಹಾಸನ : ನಿಗಮ ಮಂಡಳಿ ಅಧ್ಯಕ್ಷರಿಗೆ ಸಚಿವ ದರ್ಜೆ ಸ್ಥಾನಮಾನ‌ ನೀಡಿ, ವೇತನ, ಬಾಡಿಗೆ ಹೆಚ್ಚಳ ವಿಚಾರವಾಗಿ ಸರ್ಕಾರದ ವಿರುದ್ಧ ಶಾಸಕ ಎ.ಮಂಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ, ಅರಕಲಗೂಡು ತಾಲೂಕಿನ, ಕೆಲಗಳಲೆ ಗ್ರಾಮದಲ್ಲಿ ಇಂದು ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿ ಓಲೈಕೆಗಾಗಿ ಸವಲತ್ತುಗಳನ್ನು ಕೊಡುತ್ತಿದ್ದಾರೆ. ಈಗ ಸರ್ಕಾರದಲ್ಲಿ ದುಡ್ಡಿಲ್ಲ, ಅಭಿವೃದ್ಧಿಗೆ ದುಡ್ಡಿಲ್ಲ, ರಸ್ತೆ ಗುಂಡಿ ಮುಚ್ಚಲು ದುಡ್ಡಿಲ್ಲ. ಅಭಿವೃದ್ಧಿ ಮಾಡುವುದನ್ನು ಬಿಟ್ಟು ಗ್ಯಾರೆಂಟಿ ಯೋಜನೆ ಮಾಡಿ ಎಸ್ಸಿ‌, ಎಸ್‌ಟಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದಿದ್ದಾರೆ.

ಮುಖ್ಯಮಂತ್ರಿಗೆ ಪರ-ವಿರೋಧ ಇರುವುದರಿಂದ ಕ್ಯಾಬಿನೆಟ್ ದರ್ಜೆ ಕೊಟ್ಟು, ವೇತನ ಜಾಸ್ತಿ ಮಾಡಿ ಓಲೈಕೆ‌ ಮಾಡುವ ಕಾರ್ಯಕ್ರಮ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಬಾರ ಎನ್ನುವುದು ಗೊತ್ತಿಲ್ಲ. ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಇರಬೇಕು ಎನ್ನುವುದು ಬಿಟ್ಟರೆ ಜನರ ತೆರಿಗೆ ಹಣ ಈ ರೀತಿ ಖರ್ಚು ಮಾಡುತ್ತಿರುವುದು ತಪ್ಪು ಎನ್ನುವುದು ಆಡಳಿತ ಮಾಡುವವರಿಗೆ ಅರ್ಥವಾಗಬೇಕು. ಸರ್ಕಾರ ಜನರ ಸರ್ಕಾರ, ದುಡ್ಡು ಜನರ ದುಡ್ಡು, ಜನರ ಸರ್ಕಾರ ಆಗಬೇಕು, ಜನರ ಅಭಿವೃದ್ಧಿ ಸರ್ಕಾರ ಆಗಬೇಕು ಎಂದು ಹೇಳಿದ್ದಾರೆ.

ಮೊದಲೆಲ್ಲಾ ಚೇರ್‌ಮೆನ್‌ಗಳಿಗೆ ಯಾವುದೇ ಸ್ಥಾನ-ಮಾನ, ವೇತನ ಇರಲಿಲ್ಲ.  ಮಂತ್ರಿಗೆ ಕೊಡುವ ಸವಲತ್ತು, ಸಂಬಳ ಅವರಿಗೂ ಕೊಡುವುದಾದರೆ ಹಣ ಸ್ಥಿತಿ ಎಲ್ಲಿಗೆ ಹೋಗುತ್ತದೆ ಎಂದು ಬಜೆಟ್‌ನಲ್ಲಿ ಗೊತ್ತಾಗುತ್ತದೆ. ಇದರಿಂದ ಜನರ ಮೇಲೆ ಹೊರೆ ಬೀಳುತ್ತದೆ, ಇದನ್ನು ಮಾಡುವುದು ತಪ್ಪು ಎಂದು ತಿಳಿಸಿದ್ದಾರೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮೈತ್ರಿಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ವಿರೋಧ ವಿಚಾರ

ಪ್ರೀತಂ ಜೆ ಗೌಡ ಯಾರ್ರಿ ಅವನು, ಅವನೇನು ಹೈಕಮಾಂಡಾ?  ನಮಗೆ ಹೇಳಬೇಕಿರುವುದು, ಹೇಳಿರುವುದು ಹೈಕಮಾಂಡ್. ಮುಂದಿನ ದಿನಗಳಲ್ಲಿ ಎರಡು ಪಕ್ಷಗಳು ಮೈತ್ರಿಯಲ್ಲಿ ಹೋದರೆ ಈ ರಾಜ್ಯದಲ್ಲಿ ಸುಭದ್ರ ಸರ್ಕಾರ ಬರುತ್ತೆ ಅನ್ನುವುದು ಅಭಿಪ್ರಾಯ ಜನರಲ್ಲಿ ಇದೆ. ಎಂಎಲ್‌ಎಗೆ ಮಾತ್ರ ಮೈತ್ರಿ ಬೇಕು, ಜಿ.ಪಂ., ತಾ.ಪಂ., ಬೇಡ ಅಂದರೆ ಅವರಿಗೆ ಯಾವ ನೈತಿಕತೆ ಇರುತ್ತೆ, ಕಾರ್ಯಕರ್ತರು ಉಳಿದುಕೊಳ್ಳಬೇಕಲ್ಲ. ನಮಗೋಸ್ಕರ ಪಕ್ಷ ಅಲ್ಲಾ, ಕಾರ್ಯಕರ್ತರಿಗೋಸ್ಕರ ಪಕ್ಷ ಇರಬೇಕು ಎಂದು ವಾಗ್ದಾಳಿನಡೆಸಿದ್ದಾರೆ.

ಬಿಜೆಪಿ-ದಳ ಒಟ್ಟಿಗೆ ಹೋಗುವುದು ಅಭಿವೃದ್ಧಿ ಪರ ಎನ್ನುವುದು ನನ್ನ ಭಾವನೆ. ಕಳೆದ ಎಂಪಿ ಚುನಾವಣೆಯಲ್ಲಿ ವೈರಲ್ ಆಯ್ತಲ್ಲಾ, ಯಾರ ವೈರಲ್ ಮಾಡಿದ್ದು, ನಾನು ಅವರ ಹೆಸರು ಹೇಳಲ್ಲ, ಅವರೇ ಅರ್ಥ ಮಾಡಿಕೊಳ್ಳಬೇಕು. ಪಕ್ಷದ ನಿಷ್ಠೆ, ಪಕ್ಷದ ಪರ ಇದ್ದಿದ್ರೆ ಹಾಸನ ಜಿಲ್ಲೆಯಲ್ಲಿ ಬಿಜೆಪಿ ಎಂಪಿ ಇರೋರಲ್ಲ. ಯಾರ ಜೊತೆ ಕೈ ಜೋಡಿಸಿದರು, ಏಕೆ ಜೋಡಿಸಿದರು.  ನನ್ನ ವೈಯುಕ್ತಿಕ ಲಾಭಕ್ಕೆ ರಾಜಕಾರಣ ಅಲ್ಲ ಎಂದು ತಿಳಿಸಿದ್ದಾರೆ.

ಕಾರ್ಯಕರ್ತರ ಹಿತ ಕಾಪಾಡಬೇಕು, ದೇಶದ ದೃಷ್ಟಿಯಿಂದ ನೋಡಬೇಕು. ಎನ್‌ಡಿಎ ಅನ್ನೋದು ದೇಶದಲ್ಲಿ ತೀರ್ಮಾನ ಆಗಿದೆ. ಇವ‌ರು ಯಾರನ್ನು, ನಮ್ಮನ್ನ ಕೇಳಿ ತೀರ್ಮಾನ ಮಾಡುವಂತಹದ್ದಲ್ಲ, ಹೈಕಮಾಂಡ್ ತೀರ್ಮಾನ ಮಾಡುತ್ತದೆ.  ಮೋದಿಗಿಂತ ದೊಡ್ಡದವರು ಅಂಥ ಇವರು ಹೇಳಿ ಬಿಟ್ಟರೆ ನಾವೇನು ಮಾತನಾಡಲು ಹೋಗಲ್ಲ. ಇವರು ಹೇಳಿದಂಗೆ ನಾವೇ ಕೇಳುತ್ತಿವೆ ಎಂದಿದ್ದಾರೆ.

ಅಂತಿಮ ಯಾರು ಹೈಕಮಾಂಡ್, ಇವರು ಮಾತನಾಡುವ ರೀತಿ ನೋಡಿದ್ರೆ ಹೈಕಮಾಂಡ್ ಗೌರವ ಕೊಡ್ತಿಲ್ಲ ಅಂಥ ಕಾಣುತ್ತದೆ. ನಾವು ನಮ್ಮ ಹೈಕಮಾಂಡ್ ಇದೆ, ಅವರು ಏನ್ ಹೇಳ್ತಾರೆ ಅದನ್ನು ಕೇಳುತ್ತೇವೆ ಎಂದು ಹೇಳಿದ್ದಾರೆ.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರದಿಂದ ನನಗೆ ಟಿಕೆಟ್ ಸಿಗಲಿದೆ ಎಂಬ ಮಾಜಿಶಾಸಕಬಪ್ರೀತಂಗೌಡ ಹೇಳಿಕೆ ವಿಚಾರ

ಟಿಕೆಟ್ ಕೊಡುವುದು ಬಿಡುವುದು ಹೈಕಮಾಂಡ್ ಅಲ್ವಾ, ನಮ್ಮ ಎಂಎಲ್‌ಎ ಇದ್ದಾಗ ಬೇರೆಯವರಿಗೆ ಬಿಟ್ಟು ಕೊಡಲು ಆಗುತ್ತಾ? ಎಲ್ಲಿ, ಯಾವ್ಯಾವ ಕ್ಷೇತ್ರದಲ್ಲಿ ಗೆದ್ದಿರುತ್ತಾರೆ. ಅವರಿಗೆ ಪ್ರಥಮ ಆದ್ಯತೆ ಕೊಡುತ್ತಾರೆ ಅನ್ನೋದು ನನ್ನ ಭಾವನೆ, ಲೋಕಾರೂಢಿನೂ ಕೂಡ. ಬಿಜೆಪಿಯಲ್ಲೂ ಹಾಗೇ ಟಿಕೆಟ್ ಕೊಡುತ್ತಾರೆ. ಟಿಕೆಟ್ ಕೊಡುವ ಮುಂಚೆ ಸರ್ವೆ ಮಾಡಿಸುತ್ತಾರೆ ಎಂದು ಟಾಂಗ್‌ ನೀಡಿದ್ದಾರೆ.

ಈ ಹಿಂದೆ 50 ಸಾವಿರಕ್ಕಿಂತ ಒಂದು ಮತದ ಅಂತರದಲ್ಲಿ ಸೋತರೆ ರಾಜಕೀಯ ನಿವೃತ್ತಿಯಾಗುತ್ತೇನೆ ಎಂದಿದ್ದರು. ಇನ್ನೂ ಏಕೆ ರಾಜಕೀಯದಲ್ಲಿ ಇದ್ದಾರೆ, ಯೋಚನೆ ಮಾಡಬೇಕು ಅವರು. ಮಾತನಾಡಬೇಕಾದರೆ ಬಾರಿ ಯೋಚನೆ ಮಾಡಿ ಮಾತನಾಡಬೇಕು. ಜನರು ಪ್ರಜ್ಞಾವಂತರು, ಬುದ್ದಿವಂತರಿದ್ದಾರೆ. ನಮ್ಮ ಮಾತು ಜನರಿಗೆ ಕೆಟ್ಟದಾಗಿ ಬಿಂಬಿಸಬಾರದು. ಆ ರೀತಿ ನಡೆದುಕೊಳ್ಳಬೇಕು, ಆಗ ಪಕ್ಷಕ್ಕೂ ಒಳ್ಳೆಯದಾಗುತ್ತದೆ. ಯಾವ್ಯಾವ ಚುನಾವಣೆಗಳು ಚಿಹ್ನೆ ಮೇಲೆ ನಡೆಯುತ್ತೆ, ಆ ಎಲ್ಲಾ ಚುನಾವಣೆಗಳಲ್ಲೂ ಮೈತ್ರಿಯಾಗಿ ಹೋಗಬೇಕು. ಇದು ಕಾರ್ಯಕರ್ತರ ದೃಷ್ಟಿಯಿಂದ ಒಳ್ಳೆಯದು, ಇದು ನನ್ನ ವೈಯುಕ್ತಿಕ ಅಭಿಪ್ರಾಯ ಎಂದು ತಿಳಿಸಿದ್ದಾರೆ.

Continue Reading

Hassan

1.5 ಕೋಟಿ ಅಧಿಕ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ಸ್ವರೂಪ್ ಪ್ರಕಾಶ್ ಚಾಲನೆ

Published

on

ಹಾಸನ : ಹಾಸನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇಂದು ಸುಮಾರು 45 ಲಕ್ಷಕ್ಕೂ ಅಧಿಕ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ಸ್ವರೂಪ್ ಪ್ರಕಾಶ್ ಗುದ್ದಲಿ ಪೂಜೆ ನೆರವೇರಿಸಿದರು.

ಮೊದಲಿಗೆ ಸುಮಾರು 8 ಲಕ್ಷ ವೆಚ್ಚದಲ್ಲಿ ಹಾಸನ ನಗರದ ಪೆನ್ಶನ್ ಮೊಹಲ್ಲ ಮುಖ್ಯ ರಸ್ತೆಯಲ್ಲಿರುವ ಶಾಹಿ ಮಸೀದಿಯ ಧರ್ಮಗುರುಗಳ ವಸತಿ ನಿಲಯ ಕಟ್ಟಡ ಕಾಮಗಾರಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು.

ಬಳಿಕ ನಗರದ ಚೆಂಗಿ ದಿವಾನ್ ದರ್ಗಾದ ಸುತ್ತ ಸುಮಾರು ಮೂರು ಲಕ್ಷ ವೆಚ್ಚದಲ್ಲಿ ಕಾಂಪೌಂಡ್ ಕಾಮಗಾರಿಗೆ ಚಾಲನೆ ನೀಡಲಾಯಿತು, ನಂತರ ಸುಮಾರು 24 ಲಕ್ಷ ವೆಚ್ಚದಲ್ಲಿ ಹಳೆ ಖಬ್ರಸ್ಥಾನ ಹಾಗೂ ಶವಾಗಾರದ ಸ್ನಾನದ ಗೃಹ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.

ಇದೇ ವೇಳೆ ಪೆನ್ಷನ್ ಮೊಹಲ್ಲ ಬಡಾವಣೆಯಲ್ಲಿ ಅಪಾಯಕಾರಿ ಸ್ಥಳಗಳಲ್ಲಿರುವ ಹಳೆ ವಿದ್ಯುತ್ ತಂತಿಗಳು ಹಾಗೂ ಕಂಬಗಳನ್ನು ತೆರವುಗೊಳಿಸಿ ಸುಮಾರು ಒಂದು ಕೋಟಿ ವೆಚ್ಚದಲ್ಲಿ ಯು ಜಿ ಕೇಬಲ್ ಅಳವಡಿಕೆ ಕಾರ್ಯಕ್ಕು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮುಸಲ್ಮಾನ್ ಧರ್ಮ ಗುರುಗಳು ಹಾಗೂ ಪಕ್ಷದ ಮುಖಂಡರು ಮತ್ತು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಜೊತೆಗಿದ್ದರು. ಎಲ್ಲ ಕಾಮಗಾರಿಗಳಲ್ಲೂ ಗುಣಮಟ್ಟ ಕಾಯ್ದುಕೊಂಡು ಸಾರ್ವಜನಿಕರ ಹಿತ ದೃಷ್ಟಿಯಿಂದ ಕೆಲಸ ಮಾಡಬೇಕು ಎಂದು ಗುತ್ತಿಗೆದಾರರು ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ನಗರದ ವಿವಿಧೆಡೆ ವಿದ್ಯುತ್ ಕಾಮಗಾರಿ ಕೆಲಸ ನಡೆಯುತ್ತಿರುವ ಕಾರಣ ವಿವಿಧಡೆ ವಿದ್ಯುತ್ ವ್ಯತ್ಯಯ ಆಗುವ ಸಾಧ್ಯತೆ ಇದೆ ಸಾರ್ವಜನಿಕರು ಹಾಗೂ ಹಾಸನ ಕ್ಷೇತ್ರದ ಜನರು ಸಹಕರಿಸಬೇಕಾಗಿ ಮನವಿ ಮಾಡಿದರು.

Continue Reading

Hassan

ಪ್ರೀತಮ್ ಗೌಡ ನೇತೃತ್ವದ ಬಿಜೆಪಿ ತಂಡ ನಕಲಿ ಗಿರಾಕಿಗಳು, ಬೆರಕೆ ಬಿಜೆಪಿಗರು : ವಕೀಲ ದೇವರಾಜೇಗೌಡ

Published

on

ಹಾಸನ: ಹಾಸನದಲ್ಲಿ ಪ್ರೀತಮ್ ಗೌಡ ನೇತೃತ್ವದ ಬಿಜೆಪಿ ತಂಡ ನಕಲಿ ಗಿರಾಕಿಗಳು, ಬೆರಕೆ ಬಿಜೆಪಿಗರು ಎಂದು ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಹಾಗೂ ಬಿಜೆಪಿ ಮುಖಂಡ ವಕೀಲ ದೇವರಾಜೇಗೌಡ ತೀವ್ರ ವಾಗ್ದಾಳಿ ನಡೆಸಿದರು.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನದಲ್ಲಿ ಪ್ರೀತಂ ಗೌಡ ನೇತೃತ್ವದ ಬಿಜೆಪಿ ತಂಡಕ್ಕೆ ಪಕ್ಷದ ಹೆಸರೆಳುವ ನೈತಿಕತೆ ಇಲ್ಲ ಬಿಜೆಪಿ ಪಕ್ಷಕ್ಕೆ ಅವರ ಕೊಡುಗೆ ಏನು, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರೀತಂ ಗೌಡ ಪಕ್ಷ ಕಟ್ಟುವ ಕೆಲಸ ಮಾಡಿದ್ದರೆ ಅದನ್ನು ಸಾಬೀತು ಮಾಡಲಿ ಎಂದು ಸವಾಲು ಹಾಕಿದರು.

ಮೂರ್ ನಾಲ್ಕು ಜನ ಹಿಂಬಾಲಕರನ್ನು ಕಟ್ಟಿಕೊಂಡು ಬಾಯಿಗೆ ಬಂದಂತೆ ಮಾತನಾಡಿ ಅವನ ವಿರುದ್ಧ ಮಾತನಾಡಿದರೆ ಮತ್ತೊಬ್ಬರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿರುವ ಪ್ರೀತಂ ಗೌಡ ಬಿಜೆಪಿಗೆ ಪ್ರಾಮಾಣಿಕನಾಗಿ ಇದ್ದಾನೆಯೇ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು . ಕಳೆದ ಎಂಪಿ ಚುನಾವಣೆಯಲ್ಲಿ ಯಾವ ಪಕ್ಷದ ಗೆಲುವಿಗೆ ಕೆಲಸ ಮಾಡಿದ್ದಾರೆ ಎಂಬುದು ಇಡೀ ಜಿಲ್ಲೆಗೆ ಗೊತ್ತಿದೆ ಎಂದು ತಮ್ಮ ಅಸಮಧಾನ ವ್ಯಕ್ತಪಡಿಸಿದ್ದರು.

ಅವರ ಜೊತೆ ಇರುವ ಹಿಂಬಾಲಕರು ಕೂಡ ಅವರು ಮಾಡಿದ್ದೆ ಸರಿ ಎಂಬಂತೆ ಮಾತನಾಡುತ್ತಿದ್ದಾರೆ ಒಂದೆಡೆ ಕಾಂಗ್ರೆಸ್ ಸಂಸದ ಶ್ರೇಯಸ್ ಕಥೆ ಹಾಗೂ ಇನ್ನೊಂದೆಡೆ ಪ್ರೀತಮ್ ಗೌಡ ಅವರನ್ನು ಹೊತ್ತುಕೊಂಡು ಕುಣಿಯುತ್ತಿರುವ ಬಿಜೆಪಿಗರು ಯಾವ ಪಕ್ಷದವರು ಎಂಬ ಗೊಂದಲದಲ್ಲಿ ಜಿಲ್ಲೆಯ ಜನರಿದ್ದಾರೆ ಮೊದಲು ಜನರಿಗೆ ಅವರು ಯಾವ ಪಕ್ಷಕ್ಕೆ ನಿಯತ್ತಾಗಿದ್ದಾರೆ ಎಂಬುದರ ಬಗ್ಗೆ ತಿಳಿಸಲಿ ಎಂದರು.

ದೇವಣೆ ಪ್ರೀತಂ ಗೌಡ ಪರ ಮಾತನಾಡಿದ ಮಹಿಳೆ ಅನ್ನಪೂರ್ಣಮ್ಮ ವಿರುದ್ಧವು ಆಕ್ರೋಶ ವ್ಯಕ್ತಪಡಿಸಿದ ಅವರು, ಅನ್ನಪೂರ್ಣಮ್ಮ ಅವರ ವೈಯಕ್ತಿಕ ಜೀವನ ಏನು ಎಂಬುದರ ಬಗ್ಗೆ ಸ್ವಲ್ಪ ಮನವರಿಕೆ ಮಾಡಿಕೊಳ್ಳಲಿ, ಅವರು ಜೆಡಿಎಸ್ ನಲ್ಲಿದ್ದಾಗ ಏನೇನು ಮಾಡಿದ್ದಾರೆ ಅವರಿಗೆ ಎಷ್ಟು ಜನ ಗಂಡಂದಿರು ಅವರ ಕ್ಯಾರೆಕ್ಟರ್ ಏನು ಎಂಬುದರ ಬಗ್ಗೆ ನಾನು ದಾಖಲೆ ಇಡುತ್ತೇನೆ ಎಂದರು.

ಇನ್ನೊಬ್ಬರ ಬಗ್ಗೆ ಮಾತನಾಡುವ ಮೊದಲು ತಾವೇಷ್ಟು ಪ್ರಾಮಾಣಿಕರು ಎಂಬ ಬಗ್ಗೆ ಪ್ರತಿಯೊಬ್ಬರು ಮನವರಿಕೆ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ತಮ್ಮಿಂದಲೇ ಪಕ್ಷ ಎಂಬ ಮಾತನ್ನು ಹಾಗೂ ಉದ್ದಟತನ ಅಹಂಕಾರವನ್ನು ಪ್ರೀತಮ್ ಗೌಡ ಬಿಡದಿದ್ದರೆ ಈಗಾಗಲೇ ಜಿಲ್ಲೆಯ ಜನ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ ಮುಂದಿನ ದಿನಗಳಲ್ಲಿ ಅದೇ ರೀತಿಯ ಉತ್ತರ ನೀಡುವಲ್ಲಿ ಸಂದೇಹವಿಲ್ಲ ಎಂದರು.

ಗೃಹ ಮಂಡಳಿಯ ಅಧ್ಯಕ್ಷ ಶಿವಲಿಂಗೇಗೌಡ ಅವರ ವಿರುದ್ಧವು ಮಾತನಾಡಿ, ಇತ್ತೀಚಿಗೆ ಶಿವಲಿಂಗೇಗೌಡ ನೇತೃತ್ವದ ತಂಡ ಸುದ್ದಿಗೋಷ್ಠಿ ನಡೆಸಿ ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ದಾರೆ. ಅವರು ತಮ್ಮ ಮನೆ ಕಟ್ಟಿಕೊಂಡಿರುವುದು ಅಕ್ರಮವಾಗಿ ಎಂಬುದನ್ನು ನ್ಯಾಯಾಲಯದಲ್ಲಿ ತಾನು ಸಾಬೀತು ಮಾಡುತ್ತೇನೆ. ತಮ್ಮ ಹುಡುಕನ್ನು ಮುಚ್ಚಿ ಹಾಕಿಕೊಳ್ಳಲು ಒಂದಷ್ಟು ಜನರನ್ನು ಕರೆದುಕೊಂಡು ಬಂದು ಸುದ್ದಿ ವ್ಯಕ್ತಿ ನಡೆಸಿದರೆ ಅವರು ಮಾಡಿರುವ ತಪ್ಪನ್ನು ಮುಚ್ಚಿಡಲು ಸಾಧ್ಯವಿಲ್ಲ ಇನ್ನೇನು ಕೆಲವೇ ದಿನಗಳಲ್ಲಿ ಅವರ ಬಂಡವಾಳ ಬಯಲಾಗಲಿದೆ ಎಂದರು.

Continue Reading

Hassan

ಫೆ.28ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಶೈಕ್ಷಣಿಕ ಮಹಾಸಮ್ಮೇಳನ ಶಿಕ್ಷಕರ ಸಂಘದ ಸುವರ್ಣ ಮಹೋತ್ಸವ, ಗುರುವಂದನಾ ಸಮಾರಂಭ

Published

on

ಹಾಸನ: “ಎಮಗೆ ಉಪಕರಿಸಿದವರನ್ನು ಸ್ಮರಿಸುವುದು–ಆದರಿಸುವುದು ನಮ್ಮ ಸಂಸ್ಕಾರ, ಎಮಗೆ ಉಪಕಾರ ಮಾಡುವವರನ್ನು ಸತ್ಕರಿಸುವುದು ನಮ್ಮ ಶಿಷ್ಟಾಚಾರ” ಎಂಬ ಘೋಷವಾಕ್ಯದೊಂದಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಫೆಬ್ರವರಿ 28ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯಮಟ್ಟದ ಶೈಕ್ಷಣಿಕ ಮಹಾಸಮ್ಮೇಳನ, ಧನ್ಯತಾ ಸಮಾರಂಭ, ಸಂಘದ ಸುವರ್ಣ ಮಹೋತ್ಸವ ಹಾಗೂ ಗುರುವಂದನಾ ಸಮಾರಂಭವನ್ನು ಭವ್ಯವಾಗಿ ಆಯೋಜಿಸಲಾಗಿದೆ ಎಂದು ಚೈತ್ರ ನಾಯಕರಹಳ್ಳಿ ಅವರು ತಿಳಿಸಿದರು.

55 ವರ್ಷಗಳ ಇತಿಹಾಸ ಹೊಂದಿರುವ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು, ಸಮತ್ವ, ಸಮನ್ವಯ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನೊಳಗೊಂಡ ಸಂಸ್ಥೆಯಾಗಿ ರಾಜ್ಯದ ಸಮಸ್ತ ಶಿಕ್ಷಕರ ಸೇವಾ ಜೀವನದ ಅವಿಭಾಜ್ಯ ಅಂಗವಾಗಿ ಕಾರ್ಯನಿರ್ವಹಿಸುತ್ತಿದೆ. ದಲಿತ ನಾಯಕರಿಂದ ಜನ್ಮ ತಳೆದು, ಧೀಮಂತ ನಾಯಕರಿಂದ ಮುನ್ನಡೆಸಲ್ಪಟ್ಟು, ಪ್ರಸ್ತುತ ಯುವ ನಾಯಕತ್ವದ ಮೂಲಕ “ಶಿಕ್ಷಕರೇ ನನ್ನ ಕುಟುಂಬ ಮತ್ತು ಸರ್ವಸ್ವ” ಎಂಬ ಭಾವನೆಯೊಂದಿಗೆ ಸಂಘಟನೆ ಹೊಸ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ತಿಳಿಸಿದರು.


ಶಿಕ್ಷಕರ ಸೇವಾ ಹಿತಾಸಕ್ತಿಯ ರಕ್ಷಣೆಯೊಂದಿಗೆ, ಸರ್ಕಾರಿ ಶಾಲೆಗಳ ಸಬಲೀಕರಣ ಮತ್ತು ಶಿಕ್ಷಣದ ಪ್ರಗತಿಗೆ ಸಂಘಟನೆ ನಿರಂತರವಾಗಿ ಶ್ರಮಿಸುತ್ತಿದೆ. “ಸರ್ಕಾರಿ ಶಾಲೆಗಳ ಉಳಿವು ಎಂದರೆ ಬಡಜನರ ಶಿಕ್ಷಣದ ಉಳಿವು” ಎಂಬ ನಂಬಿಕೆಯಿಂದ ರಾಜ್ಯ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ ಹಲವು ರಚನಾತ್ಮಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಶಿಕ್ಷಕರ ನೂರಾರು ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಹಾಗೂ ಇಲಾಖೆಗಳ ಗಮನ ಸೆಳೆಯುವ ಮೂಲಕ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದೆ ಎಂದು ಹೇಳಿದರು.

ಫೆಬ್ರವರಿ 28ರಂದು ನಡೆಯಲಿರುವ ಈ ರಾಜ್ಯಮಟ್ಟದ ಶೈಕ್ಷಣಿಕ ಮಹಾಸಮ್ಮೇಳನದಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ಚಂದ್ರಶೇಖರ್ ನುಗ್ಗಲಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎಚ್.ಎಸ್. ಚೇತನ್ ಹಾಗೂ ಗೌರವಾಧ್ಯಕ್ಷರಾದ ಕೆ. ನಾಗೇಶ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ಸಮ್ಮೇಳನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ
ಡಿ.ಕೆ. ಶಿವಕುಮಾರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಸಚಿವ ಮಧು ಬಂಗಾರಪ್ಪ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ರಾಜ್ಯದ 1 ಲಕ್ಷ 65 ಸಾವಿರಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ಶಿಕ್ಷಕರು, ಎಲ್ಲಾ ಜಿಲ್ಲೆಗಳ ಜಿಲ್ಲಾ ಮತ್ತು ತಾಲ್ಲೂಕು ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಹಿತೈಷಿಗಳು ಈ ಶೈಕ್ಷಣಿಕ ಮಹಾಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.


ಈ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹಾಸನ ಜಿಲ್ಲಾಧ್ಯಕ್ಷರಾದ ಚೈತ್ರ ನಾಯಕರಹಳ್ಳಿ, ಜಿಲ್ಲಾ ಗೌರವಾಧ್ಯಕ್ಷರಾದ ಅಣ್ಣಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಬಸವರಾಜ್, ಜಿಲ್ಲಾ ಉಪಾಧ್ಯಕ್ಷ ಗುಡುಗನಹಳ್ಳಿ ಮಂಜುನಾಥ್, ರಾಜ್ಯ ಉಪಾಧ್ಯಕ್ಷ ವಿ.ಜಿ. ದ್ಯಾವೇಗೌಡ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರಸ್ವಾಮಿ, ಹಾಸನ ತಾಲ್ಲೂಕು ಅಧ್ಯಕ್ಷ ಸಿ.ಹೆಚ್. ಅಣ್ಣೆಗೌಡ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಬಿ.ಎಚ್. ರಾಜು, ಜಿಲ್ಲಾ ಸರ್ಕಾರಿ ನೌಕರರ ಸಂಘದ ಕ್ರೀಡಾ ಕಾರ್ಯದರ್ಶಿ ಬಿ.ಕೆ. ರವೀಂದ್ರ, ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿಕಟ ಪೂರ್ವ ಕಾರ್ಯಾಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Continue Reading

Trending

error: Content is protected !!