Cinema
ನರೇಂದ್ರ ಮೋದಿಗೆ ಧನ್ಯವಾದ ಹೇಳಿದ ಮೆಗಾಸ್ಟಾರ್ ಚಿರಂಜೀವಿ: ಕಾರಣವೇನು?

ವರ್ಲ್ಡ್ ಆಡಿಯೋ ವಿಶುವಲ್ಸ್ ಅಂಡ್ ಎಂಟರ್‌ಟೈನ್‌ಮೆಂಟ್ ಶೃಂಗ ಸಭೆ (WAVES)ಗೆ ಬಾಲಿವುಡ್ ನಟ ಅನುಪಮ್ ಖೇರ್ ಹಾಗೂ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅವರನ್ನು ವೇವ್ಸ್ ಸಲಹಾ ಮಂಡಳಿಗೆ ಪ್ರಧಾನಿ ನರೇಂದ್ರ ಮೋದಿ ಆಯ್ಕೆ ಮಾಡಿದ್ದಾರೆ.
ಈ ಸಂಬಂಧ ಉದ್ಯಮಿ ಮುಖೇಶ್ ಅಂಬಾನಿ ಹಾಗೂ ಬಿಗ್‌ಬಿ ಅಮಿತಾಭ್ ಬಚ್ಚನ್ ಜೊತೆ ಚರ್ಚಿಸಿದ್ದರು. ಇನ್ನು ಈ ಅವಕಾಶ ನೀಡಿದ ಪ್ರಧಾನಿ ಮೋದಿಗೆ ಟಾಲಿವುಡ್ ಸೂಪರ್‌ಸ್ಟಾರ್ ಚಿರಂಜೀವಿ ಹಾಗೂ ಅನುಮಪ್ ಖೇರ್ ಧನ್ಯವಾದ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಚಿರಂಜೀವಿ, ಈ ಗೌರವಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ವೇವ್ಸ್ (ವರ್ಲ್ಡ್ ಆಡಿಯೊ ವಿಷುಯಲ್ ಎಂಟರ್‌ಟೈನ್‌ಮೆಂಟ್ ಶೃಂಗಸಭೆ) ಗಾಗಿ ಸಲಹಾ ಮಂಡಳಿಯ ಭಾಗವಾಗಲು ಮತ್ತು ಇತರ ಗೌರವಾನ್ವಿತ ಸದಸ್ಯರೊಂದಿಗೆ ವೇದಿಕೆ ಹಂಚಿಕೊಳ್ಳಲು ಇದು ನಿಜಕ್ಕೂ ಒಂದು ವಿಶೇಷತೆಯಾಗಿದೆ.
ಮೋದಿ ಅವರ ಕನಸಿನ ಕೂಸಾದ WAVES ಭಾರತವನ್ನು ಮುನ್ನಡೆಸುತ್ತದೆ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ ಎಂದು ಅವರು ಹೇಳಿದ್ದಾರೆ.
ನಟ ಅನುಪಮ್ ಖೇರ್ ಟ್ವೀಟ್ ಮಾಡಿ, ನರೇಂದ್ರ ಮೋದಿ ಅವರ ವೇವ್ಸ್‌ನ ಸಲಹಾ ಮಂಡಳಿಯಲ್ಲಿ ನನಗೆ ಅವಕಾಶವನ್ನು ನೀಡಿದ್ದಕ್ಕಾಗಿ ಧನ್ಯವಾದಗಳು. ಇದೊಂದು ಅದ್ಭುತ ಉಪಕ್ರಮ. ಇದು ಸಕಾರಾತ್ಮಕವಾಗಿ ಭಾರತವನ್ನು – ಜಾಗತಿಕ ಮನರಂಜನಾ ಕೇಂದ್ರವನ್ನಾಗಿ ಮಾಡುತ್ತದೆ. ನಿಮ್ಮ ದೃಷ್ಟಿಕೋನವನ್ನು ಆಲಿಸುವುದು ಮತ್ತು ಮಂಡಳಿಯ ಇತರ ಪ್ರತಿಷ್ಠಿತ ಸದಸ್ಯರ ಭಾಗವಹಿಸುವಿಕೆ ಭಾರತವು ಕೆಲವು ವರ್ಷಗಳಲ್ಲಿ ಜಾಗತಿಕವಾಗಿ ಮನರಂಜನೆ ಮತ್ತು ಸಾಂಸ್ಕೃತಿಕ ಕ್ಷೇತ್ರದ DAVOS ಆಗಲಿದೆ ಎಂಬುದಕ್ಕೆ ಸ್ಪಷ್ಟ ಸೂಚನೆಯಾಗಿದೆ ಎಂದು ಬರೆದುಕೊಂಡು ಪ್ರಧಾನಿಗೆ ಧನ್ಯವಾದ ತಿಳಿಸಿದ್ದಾರೆ.
Cinema
ಬೆಟ್ಟಿಂಗ್ ಆಪ್ ಪ್ರಚಾರ: 25 ಸೆಲೆಬ್ರಿಟಿಸ್ ವಿರುದ್ಧ ದೂರು ದಾಖಲು; ಯಾರ್ಯಾರು ಗೊತ್ತಾ?

ತೆಲಂಗಾಣ: ಬೆಟ್ಟಿಂಗ್ ಆಪ್ ಪರ ಪ್ರಚಾರ ಮಾಡಿದ ಆರೋಪದ ಮೇಲೆ ಪಂಚಭಾಷಾ ತಾರಾನಟ ಪ್ರಕಾಶ್ ರಾಜ್, ತೆಲುಗಿನ ಖ್ಯಾತ ನಟರಾದ ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ ಸೇರಿದಂತೆ ಒಟ್ಟು 25 ಮಂದಿ ವಿರುದ್ಧ ತೆಲಂಗಾಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಫಣೀಂದ್ರ ಶರ್ಮಾ ಎಂಬ 32 ವರ್ಷದ ಉದ್ಯಮಿಯೊಬ್ಬರು ನೀಡಿದ ಆಧಾರದಡಿಯಲ್ಲಿ ಈ ಪ್ರಕರಣ ದಾಖಲಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಪ್ರಕಾಶ್ ರಾಜ್ ಹಾಗೂ ರಾಣಾ ದಗ್ಗುಬಾಟಿ ಅವರು ಜಂಗ್ಲಿ ರಮ್ಮಿ ಆಪ್, ವಿಜಯ್ ದೇವರಕೊಂಡ A23 ಆಪ್, ಪ್ರಣೀತಾ ರೈ ಫೈರ್ ಪ್ಲೇ ಆಪ್, ನಿಧಿ ಅಗರ್ವಾಲ್ ಜೀತ್ ವಿನ್ ಆಪ್, ಮಂಚು ಲಕ್ಷ್ಮೀ ಯೊಲೊ247 ಬೆಟ್ಟಿಂಗ್ ಆಪ್‌ಗಳನ್ನು ಪ್ರಚಾರ ಮಾಡಿದ್ದಾರೆ. ಇನ್ನು ಹಲವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡುವ ಮೂಲಕ ಬೆಟ್ಟಿಂಗ್ ಆಪ್ ಪರ ಪ್ರಚಾರ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ.
ನಟ ನಟಿಯರಲ್ಲದೇ ಸಾಮಾಜಿಕ ಜಾಲತಾಣದ ಇನ್ಫ್ಲುಯೆನ್ಸರ್‌ಗಳಾದ ಶ್ರೀಮುಖಿ, ವರ್ಷಿಣಿ, ಸನ್ನಿ ಯಾದವ್, ಅನನ್ಯಾ ಸೇರಿದಂತೆ ಹಲವರ ವಿರುದ್ಧವೂ ದೂರು ದಾಖಲಿಸಲಾಗಿದೆ.
Cinema
‘ಅಪ್ಪು ಅಭಿಮಾನಿ’ಯಾಗಿ ಬರುತ್ತಿದ್ದಾರೆ ತಾರಕಾಸುರ ಖ್ಯಾತಿಯ ರವಿಕಿರಣ್

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ನರಸಿಂಹಲು ಅವರ ಮಗ ರವಿಕಿರಣ್ ಈ ಹಿಂದೆ ‘ತಾರಕಾಸುರ’ ಎಂಬ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದರು. ಈಗ ‘ಅಪ್ಪು ಅಭಿಮಾನಿ’ಯಾಗಿ ಅವರು ಹೊಸ ಚಿತ್ರವೊಂದರ ಮೂಲಕ ಬರುತ್ತಿದ್ದಾರೆ.
‘ಅಪ್ಪು ಅಭಿಮಾನಿ’ ಎಂಬ ಹೆಸರೇ ಹೇಳುವಂತೆ, ಈ ಚಿತ್ರದಲ್ಲಿ ರವಿಕಿರಣ್, ಪುನೀತ್ ಅಭಿಮಾನಿಯಾಗಿ ಕಾಣಿಸಿಕೊಂಡಿದ್ದಾರೆ. ಅಪ್ಪು ಅಭಿಮಾನಿಯೊಬ್ಬ ಜೀವನದಲ್ಲಿ ಏನೆಲ್ಲಾ ಸಾಧಿಸುತ್ತಾನೆ ಎಂದು ಸಾರುವ ಈ ಚಿತ್ರದಲ್ಲಿ ರವಿಕಿರಣ್ ಜೊತೆಗೆ ರಾಘವೇಂದ್ರ ರಾಜಕುಮಾರ್, ಶರತ್ ಲೋಹಿತಾಶ್ವ, ಸುಮನ್, ಚಿದಾನಂದ್, ಥ್ರಿಲ್ಲರ್ ಮಂಜು, ಶಿವಪ್ಪ ಕುಡ್ಲೂರು ಮುಂತಾದವರು ನಟಿಸುತ್ತಿದ್ದಾರೆ.
ಬಿಡುಗಡೆಗೆ ಸಿದ್ಧವಾಗುತ್ತಿರುವ ಈ ಚಿತ್ರದ ಪ್ರಚಾರದ ಮೊದಲ ಹಂತವಾಗಿ ಇತ್ತೀಚೆಗೆ ಚಿತ್ರತಂಡವು ನರ್ತಕಿ ಚಿತ್ರಮಂದಿರದ ಎದುರು ಪುನೀತ್ ಅವರ 50 ಅಡಿ ಕಟೌಟ್ ನಿಲ್ಲಿಸಿದೆ. ಪುನೀತ್ ನಾಯಕನಾಗಿ ಅಭಿನಯಿಸಿರುವ ಮೊದಲ ಚಿತ್ರ ‘ಅಪ್ಪು’ ಇತ್ತೀಚೆಗೆ ಮರುಬಿಡುಗಡೆ ಮಾಡಲಾಗಿದೆ. ಈ ಸಂದರ್ಭದಲ್ಲಿ ‘ಅಪ್ಪು ಅಭಿಮಾನಿ’ ಚಿತ್ರತಂಡದ ವತಿಯಿಂದ ‘ಅಪ್ಪು ಅಭಿಮಾನಿ’ ಚಿತ್ರದ 50 ಅಡಿ ಕಟೌಟ್ ನಿಲ್ಲಿಸಲಾಗಿದೆ. ಚಿತ್ರದಲ್ಲಿ ನಾಯಕ ರವಿ ಕಿರಣ್, ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವುದರಿಂದ ಕಟ್‌ಔಟ್‌ನಲ್ಲಿ ಅಪ್ಪು ನಂತರ ನಾಯಕನ ಚಿತ್ರವೂ ಇದೆ.
ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ರಾಘವೇಂದ್ರ ರಾಜಕುಮಾರ್, ಸಾ.ರಾ. ಗೋವಿಂದು, ಎಂ.ಎನ್. ಸುರೇಶ್ ಮುಂತಾದವರು ಹಾಜರಿದ್ದರು.
ಅಕ್ಷಯ ಮೂವಿ ಫ್ಯಾಕ್ಟರಿ ಸಂಸ್ಥೆ ನಿರ್ಮಿಸಿರುವ ಈ ಚಿತ್ರವನ್ನು ಡಾ. ರೆಡ್ಡಿ ನಿರ್ದೇಶನ ಮಾಡಿದ್ದಾರೆ. ಶೇಖ್ ಮುನೀರ್ ಪಾಷಾ ಕಥೆ, ಮಣಿಕಾಂತ್ ಕದ್ರಿ ಸಂಗೀತ ಈ ಚಿತ್ರಕ್ಕಿದೆ.
Cinema
ಏಪ್ರಿಲ್.10ಕ್ಕೆ ತೆರೆ ಕಾಣಲಿದೆ ಧನ್ವೀರ್ ನಟನೆಯ‘ವಾಮನ’

ಧನ್ವೀರ್ ಗೌಡ ಅಭಿನಯದ ‘ವಾಮನ’ ಚಿತ್ರವು 2023ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗುತ್ತದೆ ಎಂದು ಚಿತ್ರತಂಡ ಘೋಷಿಸಿತ್ತು. ಆದರೆ, ಅಂದುಕೊಂಡಂತೆ ಚಿತ್ರ ಬಿಡುಗಡೆಯಾಗಲೇ ಇಲ್ಲ. ಅದಾದ ಮೇಲೆ ಧನ್ವೀರ್ ಅಭಿನಯದ ‘ಕೈವ’ ಚಿತ್ರ ಬಿಡುಗಡೆಯಾದರೂ ‘ವಾಮನ’ ಮಾತ್ರ ಬರಲಿಲ್ಲ. ನಾಯಕ ಮತ್ತು ನಿರ್ಮಾಪಕರ ನಡುವಿನ ಮುನಿಸಿನಿಂದ ಚಿತ್ರ ಬಿಡುಗಡೆಯಾಗುವುದೇ ಸಂಶಯ ಎಂಬ ಮಾತುಗಳು ಕೇಳಿ ಬಂದಿದ್ದವು.
ಹೀಗಿರುವಾಗಲೇ, ಒಂದೂವರೆ ವರ್ಷಗಳ ನಂತರ ಕೊನೆಗೂ ‘ವಾಮನ’ ಬಿಡುಗಡೆಯಾವುದಕ್ಕೆ ಸಿದ್ಧನಾಗಿದ್ದಾನೆ. ಚಿತ್ರವನ್ನು ಏಪ್ರಿಲ್.10ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಪ್ರಚಾರದ ಮೊದಲ ಹಂತವಾಗಿ ಚಿತ್ರದ ತಾಯಿ ಸೆಂಟಿಮೆಂಟ್ ಹಾಡೊಂದು ಇತ್ತೀಚೆಗೆ ಬಿಡುಗಡೆಯಾಗಿದೆ.
ಈ ಚಿತ್ರಕ್ಕಾಗಿ ಪ್ರಮೋದ್ ಮರವಂತೆ ಬರೆದಿರುವ ‘ಕಂದ ಕನಸ ರೂಪ …’ ಎಂಬ ತಾಯಿ – ಮಗನ ಬಾಂಧವ್ಯದ ಕುರಿತಾದ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ್ದಾರೆ. ‘ಕಾಂತಾರ’ ಖ್ಯಾತಿಯ ವೆಂಕಟೇಶ್ ಡಿ.ಸಿ ಈ ಹಾಡನ್ನು ಹಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿರುವ ಈ ಹಾಡು A2 music ಚಾನಲ್‍ನಲ್ಲಿ ಬಿಡುಗಡೆಯಾಗಿದೆ.
ಈ ಹಾಡನ್ನು ವಿಶ್ವದ ಎಲ್ಲಾ ತಾಯಂದಿರಿಗೆ ಅರ್ಪಿಸುತ್ತೇನೆ ಎಂದು ಮಾತನಾಡಿದ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಶಂಕರ್ ರಾಮನ್, ‘ನನಗೆ ‘ಕೈ ತುತ್ತು ಕೊಟ್ಟವಳೆ …’ ಹಾಗೂ ‘ಬೇಡುವೆನು ವರವನು …’ ಹಾಡುಗಳು ತುಂಬಾ ಇಷ್ಟ. ಅಂತಹುದೇ ಹಾಡು ನಮ್ಮ ಚಿತ್ರಕ್ಕೆ ಬೇಕು ಎಂದು ಕೇಳಿದಾಗ ಪ್ರಮೋದ್ ಮರವಂತೆ ಈ ಹಾಡನ್ನು ಬರೆದುಕೊಟ್ಟಿದ್ದಾರೆ. ತಾಯಿ ತನ್ನ ಬವಣೆಗಳನ್ನು ಮಗನ ಮುಂದೆ ಹೇಳಿಕೊಳ್ಳುವ ಈ ಹಾಡು ಎಲ್ಲರಿಗೂ ಇಷ್ಟವಾಗಲಿದೆ’ ಎಂದರು.
ಚಿತ್ರ ಬಿಡುಗಡೆಯ ದಿನಾಂಕ ಘೋಷಣೆಯಾದರೂ, ಮುನಿಸು ಮರೆಯಾದಂತೆ ಕಾಣಲಿಲ್ಲ. ಸಮಾರಂಭದಲ್ಲಿ ಹಾಜರಿದ್ದರೂ ನಿರ್ಮಾಪಕ ಚೇತನ್ ಗೌಡ ಮತ್ತು ನಾಯಕ ಧನ್ವೀರ್ ಗೌಡ ಜೊತೆಯಾಗಿ ಕಾಣಿಸಿಕೊಳ್ಳಲಿಲ್ಲ. ಇಷ್ಟಕ್ಕೂ ಚಿತ್ರದ ಬಿಡುಗಡೆ ತಡವಾಗಿದ್ದೇಕೆ ಎಂಬ ಮಾಧ್ಯಮದವರ ಪ್ರಶ್ನೆಗೆ, ‘ವ್ಯಾಪಾರದ ವಿಷಯವಾಗಿ ಚಿತ್ರ ಸ್ವಲ್ಪ ತಡವಾಯಿತು’ ಎಂದು ನಿರ್ಮಾಪಕರು ಹೇಳಿದ್ದಾರೆ.
‘ವಾಮನ’ ಚಿತ್ರದಲ್ಲಿ ಧನ್ವೀರ್‌ಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದು, ಜೊತೆಗೆ ತಾರಾ, ಶಿವರಾಜ್ ಕೆ.ಆರ್.ಪೇಟೆ, ಕಾಕ್ರೋಚ್ ಸುಧಿ ಮುಂತಾದವರು ಅಭಿನಯಿಸಿದ್ದಾರೆ. ಮಹೇಂದ್ರ ಸಿಂಹ ಅವರ ಛಾಯಾಗ್ರಹಣ ಮತ್ತು ಅಜನೀಶ್ ಲೋಕನಾಥ್ ಸಂಗೀತ ಈ ಚಿತ್ರಕ್ಕಿದೆ.
-
Mandya7 hours ago
ಜನಮಿತ್ರ ಫಲಶೃತಿ: ಹೆಬ್ಬಾಡಿಹುಂಡಿ ಗ್ರಾಮದ ಸ್ಮಶಾನ ಜಾಗದ ರಸ್ತೆ ಬೇಲಿಗೆ ಸಿಗ್ತು ಉತ್ತರ
-
Hassan14 hours ago
ಹಾಸನದಲ್ಲಿ ಭಾರೀ ಮಳೆ: ಅಪಾರ ಪ್ರಮಾಣದ ಬೆಳೆ ಹಾನಿ
-
Mandya10 hours ago
ಜೆಎಸ್ಎಸ್ ಕಾಲೇಜಿನಲ್ಲಿ ಪತ್ರಿಕಾ ಬರಹ ಕುರಿತು ಕಾರ್ಯಾಗಾರ
-
Kodagu12 hours ago
ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ
-
Mandya9 hours ago
ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕರೆ ಕೂಡಲೇ ತಿಳಿಸಿ
-
Hassan13 hours ago
ಕ್ಷಯ ಮುಕ್ತ ಭಾರತವನ್ನಾಗಿ ಮಾಡಲು ಎಲ್ಲಾರೂ ಕೈಜೋಡಿಸಿ: ಡಿಸಿ ಸಿ. ಸತ್ಯಭಾಮ
-
Kodagu10 hours ago
ನಿವೃತ್ತ ಶಿಕ್ಷಕಿಯಿಂದ ಕಕ್ಕಬ್ಬೆ ಯುವಕಪಾಡಿ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಚಾರಣ ಭಾಗ್ಯ
-
Kodagu7 hours ago
ಮಡಿಕೇರಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ಲೈಬಸ್ ಸಂಚಾರ