Connect with us

Politics

ಬೆಂಗಳೂರು- ಪುಣೆ- ಮುಂಬೈ ಮಧ್ಯೆ ಹೈಸ್ಪೀಡ್ ರೈಲು ಕಾರಿಡಾರ್| ಎಚ್‌ಡಿಕೆ, ಜೋಶಿ ಸ್ಪಂದನೆ: ಎಂ.ಬಿ.ಪಾಟೀಲ್‌

Published

on

ಬೆಂಗಳೂರು: ಕೇಂದ್ರ ಬಜೆಟ್ ಮಂಡನೆಯಾದ ತಕ್ಷಣ ನಾನು ಬೆಂಗಳೂರು- ಪುಣೆ- ಮುಂಬೈ ನಡುವೆ ಹೈಸ್ಪೀಡ್ ರೈಲು ಕಾರಿಡಾರ್ ಅಗತ್ಯವಾಗಿದೆ ಎಂದು ಹೇಳಿದ್ದೆ.  ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಮತ್ತು ಎಚ್ ಡಿ ಕುಮಾರಸ್ವಾಮಿ ಅವರು ಈ ಬಗ್ಗೆ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರೊಂದಿಗೆ ಚರ್ಚಿಸಿರುವುದಕ್ಕೆ ಧನ್ಯವಾದ ಹೇಳುತ್ತೇನೆ. ಇದರಲ್ಲಿ ರಾಜಕೀಯವೇನೂ ಇಲ್ಲ. ಇದು ಕೇವಲ ಭೇಟಿಗೆ ಮಾತ್ರ ನಿಲ್ಲದೆ, ತಾರ್ಕಿಕ ಅಂತ್ಯ ಕಾಣುವಂತೆ ಮಾಡಬೇಕು ಎಂದು ನಾನು ಮನವಿ ಮಾಡಿಕೊಳ್ಳುತ್ತೇನೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು,  ದೇಶದ ತಂತ್ರಜ್ಞಾನ ರಾಜಧಾನಿ ಬೆಂಗಳೂರು ಹಾಗೂ ಆರ್ಥಿಕ ರಾಜಧಾನಿ ಮುಂಬಯಿ ನಡುವೆ ಅತ್ಯುತ್ತಮ ಸಂಪರ್ಕ ವ್ಯವಸ್ಥೆ ಬರಬೇಕು. ಇದರಿಂದ ಮಧ್ಯ ಮತ್ತು ಉತ್ತರ ಕರ್ನಾಟಕ ಹಾಗೂ ಪಶ್ಚಿಮ ಮಹಾರಾಷ್ಟ್ರದ ಭಾಗಗಳಿಗೆ ಅಪಾರ ಲಾಭವಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರಕಾರದ ಬಜೆಟ್‌ ನಲ್ಲಿ ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು-ಚೆನ್ನೈ ಸೇರಿದಂತೆ 7 ಹೈಸ್ಪೀಡ್ ರೈಲು ಕಾರಿಡಾರ್ ಘೋಷಿಸಿದ್ದಾರೆ. ಇದು ಸ್ವಾಗತಾರ್ಹ. ಆದರೆ ಈ ಎರಡೂ ಯೋಜನೆಗಳಿಂದ ರಾಜ್ಯಕ್ಕೆ ಹೆಚ್ಚಿನ ಪ್ರಯೋಜನವಿಲ್ಲ. ಬೆಂಗಳೂರು-ಪುಣೆ-ಮುಂಬೈ ಮಧ್ಯೆ ಇಂತಹ ಯೋಜನೆ ಬಂದರೆ ತುಮಕೂರು, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಸಾಂಗ್ಲಿ, ಕೊಲ್ಲಾಪುರ ಹೀಗೆ ಹಲವು ಪ್ರದೇಶಗಳಿಗೆ ಪ್ರಯೋಜನವಾಗಿ, ಆರ್ಥಿಕ ಮತ್ತು ಕೈಗಾರಿಕಾ ಪ್ರಗತಿ ಸಾಧ್ಯವಾಗಲಿದೆ ಎಂದು ಬಜೆಟ್ ದಿನವೇ ಹೇಳಿದ್ದೆ. ಈಗ ಆ ನಿಟ್ಟಿನಲ್ಲಿ ಇಬ್ಬರೂ ಕೇಂದ್ರ ಸಚಿವರು ಕಾರ್ಯಪ್ರವೃತ್ತರಾಗಿರುವುದು ಸ್ವಾಗತಾರ್ಹ ಕ್ರಮ ಎಂದು ತಿಳಿಸಿದ್ದಾರೆ.

ಕುಮಾರಸ್ವಾಮಿ ಮತ್ತು ಜೋಶಿ ಈ ವಿಚಾರದ ಬಗ್ಗೆ ಗಮನ ಹರಿಸಿರುವುದು ಒಳ್ಳೆಯದು. ಇಂತಹ ವಿಚಾರಗಳಲ್ಲಿ ನಾವು ರಾಜಕೀಯ ಮಾಡಬಾರದು. ಯೋಜನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್, ರೈಲು ಸಚಿವ ಅಶ್ವಿನಿ ವೈಷ್ಣವ್, ವಿ.ಸೋಮಣ್ಣ ಅವರಿಗೆ ಪತ್ರ ಬರೆಯಲಾಗಿದೆ ಎಂದು ಎಂ.ಬಿ ಪಾಟೀಲ್ ಅವರು ಹೇಳಿದ್ದಾರೆ.

ನಾಲ್ಕು ದಿನಗಳ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿರುವ ಲಿಂಗಾಯತ ಶಾಸಕರ ಸಭೆ ನಡೆದಿದ್ದು ಇದು ಶಕ್ತಿ ಪ್ರದರ್ಶನವೇನೂ ಅಲ್ಲ. ಅಶೋಕ ಪಟ್ಟಣ ಹಾಗೂ ಬಿ.ಆರ್. ಪಾಟೀಲ್‌ ಈ ಸಭೆ ಕರೆದಿದ್ದರು. ಸಮುದಾಯದ ಹಿತಾಸಕ್ತಿ ಬಗ್ಗೆ ಅಲ್ಲಿ ಚರ್ಚೆ ನಡೆಯಿತಷ್ಟೆ ಎಂದು ಸ್ಪಷ್ಟನೆ ನೀಡಿದ್ದಾರೆ.

ನಾವು ಆಗಿಂದಾಗ್ಗೆ ಹೀಗೆ ಸಭೆ ಸೇರುತ್ತಲೇ ಇರುತ್ತೇವೆ. ಬೇರೆಬೇರೆ ಸಮುದಾಯಗಳ ಶಾಸಕರೂ ಸಭೆ ಮಾಡುತ್ತಾರೆ. ಆದರೆ ನಮ್ಮ ಸಭೆಯನ್ನು ಮಾತ್ರ ಲಿಂಗಾಯತರ ಶಕ್ತಿ ಪ್ರದರ್ಶನ ಎಂದು ಬಿಂಬಿಸುವುದು ಸರಿಯಲ್ಲ ಎಂದು ಪ್ರತಿಪಾದಿಸಿದ್ದಾರೆ.

1989ರಲ್ಲಿ ಲಿಂಗಾಯತರ ಬೆಂಬಲದಿಂದ ಕಾಂಗ್ರೆಸ್ 178 ಕಡೆ ಗೆದ್ದು, ಐತಿಹಾಸಿಕ ಸಾಧನೆ ಮಾಡಿತ್ತು. ಈಗಲೂ ಕಾಂಗ್ರೆಸ್ ನಲ್ಲಿ‌ 34 ಲಿಂಗಾಯತ ಶಾಸಕರಿದ್ದೇವೆ. 2023ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಸಮುದಾಯ ಕಾಂಗ್ರೆಸ್ಸಿಗೆ ವೋಟ್ ಹಾಕಿದೆ. ಹೀಗಾಗಿ ಸರಕಾರದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಬೇಕು ಎನ್ನುವುದರಲ್ಲಿ ತಪ್ಪೇನಿಲ್ಲ. ಆದರೆ ನಾವು ಇನ್ನೊಂದು ಸಮುದಾಯದ ಪಾಲನ್ನು ಕಿತ್ತುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

 

ಈ ಹಿಂದೆ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಮನರೇಗಾ ಯೋಜನೆಯನ್ನು ಬಿಜೆಪಿ ನಾಯಕರಾದ ಆಡ್ವಾಣಿ, ನಿತಿನ್ ಗಡ್ಕರಿ ಮತ್ತು ನಿರ್ಮಲಾ ಸೀತಾರಾಮನ್ ಅವರೇ ಹೊಗಳಿದ್ದರು. ಈಗ ಮೋದಿ ಸರ್ಕಾರ ಇದನ್ನು ಹಾಳು ಮಾಡಿದ್ದು, ಯೋಜನೆಯ ಹೆಸರನ್ನು ವಿಬಿ-ಜಿ ರಾಮ್ ಜಿ ಎಂದು ಬದಲಿಸಿದೆ. ಬಿಜೆಪಿ ಸಂಸದರೇ ಈ ಬಗ್ಗೆ ಧ್ವನಿ ಎತ್ತಿ, ತಮ್ಮ ಬೆಲೆ ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Politics

ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ: ಸಿಎಂ ಆಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ, ಸಂಪುಟ ಸೇರಲಿದ್ದಾರೆ 12-13 ಹಿರಿಯ ನಾಯಕರು!

Published

on

ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಬಹುದೊಡ್ಡ ತಿರುವು ಸಿಕ್ಕಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಯ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಹಾಗೂ ಹಾಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಸಿದ್ದರಾಮಯ್ಯ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದು, ಹೊಸ ಸರ್ಕಾರ ರಚನೆಗೆ ಹಾದಿ ಸುಗಮವಾಗಿದೆ.
ನೂತನ ಸಿಎಂ ಆಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಲಿರುವ ಬೆನ್ನಲ್ಲೇ, ಅವರ ನೂತನ ಸಚಿವ ಸಂಪುಟದ (Cabinet Ministers List) ಕುರಿತು ಭಾರಿ ಕುತೂಹಲ ಮೂಡಿದೆ.
ಮೊದಲ ಹಂತದಲ್ಲಿ 12 ರಿಂದ 13 ನಾಯಕರಿಗೆ ಸಚಿವ ಸ್ಥಾನ?
ವಿಶ್ವಾಸಾರ್ಹ ಮೂಲಗಳ ಪ್ರಕಾರ, ಸಿಎಂ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ದಿನವೇ ಡಿ.ಕೆ. ಶಿವಕುಮಾರ್ ಅವರೊಂದಿಗೆ ಮೊದಲ ಹಂತದಲ್ಲಿ 12 ರಿಂದ 13 ಮಂದಿ ಹಿರಿಯ ಮತ್ತು ಅನುಭವಿ ಶಾಸಕರು ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ಪ್ರಾದೇಶಿಕ ಸಮತೋಲನ, ಜಾತಿ ಸಮೀಕರಣ ಮತ್ತು ಹಿರಿತನದ ಆಧಾರದ ಮೇಲೆ ಸಚಿವರ ಮೊದಲ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಸಂಪುಟ ಸೇರಲಿರುವ ಪ್ರಮುಖ ಸಂಭಾವ್ಯ ನಾಯಕರು:
ಡಾ. ಜಿ. ಪರಮೇಶ್ವರ್, ಎಂ.ಬಿ. ಪಾಟೀಲ್, ರಾಮಲಿಂಗಾರೆಡ್ಡಿ, ಕೆ.ಜೆ. ಜಾರ್ಜ್, ಎಚ್.ಕೆ. ಪಾಟೀಲ್, ಪ್ರಿಯಾಂಕ್ ಖರ್ಗೆ, ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಮತ್ತು ಕೃಷ್ಣ ಬೈರೇಗೌಡ ಸೇರಿದಂತೆ ಹಲವು ಹಿರಿಯ ನಾಯಕರು ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಾಧ್ಯತೆ ದಟ್ಟವಾಗಿದೆ.
ಹೊಸ ಸಂಪುಟದ ಮುಂದಿರುವ ಸವಾಲುಗಳೇನು?
ಮುಖ್ಯಮಂತ್ರಿ ಹುದ್ದೆಯಿಂದ ಸಿದ್ದರಾಮಯ್ಯ ಅವರು ಕೆಳಗಿಳಿದಿರುವುದರಿಂದ, ಅವರ ಬೆಂಬಲಿಗರು ಮತ್ತು ಆಪ್ತ ವಲಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದು ಡಿ.ಕೆ. ಶಿವಕುಮಾರ್ ಅವರಿಗೆ ಇರುವ ಮೊದಲ ದೊಡ್ಡ ಸವಾಲಾಗಿದೆ. ಹೈಕಮಾಂಡ್ ಸೂತ್ರದಂತೆ ಅಧಿಕಾರ ಹಸ್ತಾಂತರ ಸುಸೂತ್ರವಾಗಿ ನಡೆದಿದ್ದರೂ, ಸಿದ್ದರಾಮಯ್ಯ ಅವರ ತವರು ಕ್ಷೇತ್ರವಾದ ವರುಣಾ ಹಾಗೂ ಮೈಸೂರು ಭಾಗದಲ್ಲಿ ಅವರ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ನೂತನ ಸಂಪುಟದಲ್ಲಿ ಸಿದ್ದರಾಮಯ್ಯ ಬಣದ ಹಿರಿಯ ನಾಯಕರಿಗೂ ಸೂಕ್ತ ಸ್ಥಾನಮಾನ ನೀಡುವ ಮೂಲಕ ಭಿನ್ನಮತ ಶಮನಗೊಳಿಸಲು ಕಸರತ್ತು ಮುಂದುವರಿದಿದೆ.
ಸಂಪೂರ್ಣ ಸಚಿವರ ಅಧಿಕೃತ ಪಟ್ಟಿ ಮತ್ತು ಖಾತೆ ಹಂಚಿಕೆಯ ಕುರಿತು ಹೈಕಮಾಂಡ್‌ನಿಂದ ಕೆಲವೇ ಗಂಟೆಗಳಲ್ಲಿ ಅಂತಿಮ ಮುದ್ರೆ ಬೀಳಲಿದ್ದು, ರಾಜಭವನದಲ್ಲಿ ಪ್ರಮಾಣ ವಚನಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ.

Continue Reading

Politics

ಜೈಪುರದಲ್ಲಿ ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ

Published

on

ಜೈಪುರ/ಬೆಂಗಳೂರು: ಸಿದ್ದರಾಮಯ್ಯ ಅವರು ಪ್ರಯಾಣಿಸುತ್ತಿದ್ದ ವಿಶೇಷ ವಿಮಾನವು ರಾಜಸ್ಥಾನದ   ಜೈಪುರ ನಗರದಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ದೆಹಲಿಯಲ್ಲಿ ಉಂಟಾದ ಹವಾಮಾನ ವೈಪರೀತ್ಯ ಮತ್ತು ಕಡಿಮೆ ದೃಶ್ಯಮಾನತೆ ಹಿನ್ನೆಲೆ, ಭದ್ರತಾ ಕ್ರಮವಾಗಿ ವಿಮಾನವನ್ನು ಜೈಪುರ ವಿಮಾನ ನಿಲ್ದಾಣಕ್ಕೆ ಮರುನಿರ್ದೇಶಿಸಲಾಯಿತು.

ವಿಮಾನವು ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿದ್ದು, ಸಿದ್ದರಾಮಯ್ಯ ಸೇರಿದಂತೆ ವಿಮಾನದಲ್ಲಿದ್ದ ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹವಾಮಾನ ಪರಿಸ್ಥಿತಿ ಸುಧಾರಿಸಿದ ಬಳಿಕ ವಿಮಾನವು ದೆಹಲಿಗೆ ಪ್ರಯಾಣ ಮುಂದುವರಿಸುವ ಸಾಧ್ಯತೆ ಇದೆ.

ಘಟನೆಯ ಹಿನ್ನೆಲೆಯಲ್ಲಿ ಕೆಲಕಾಲ ಆತಂಕ ಉಂಟಾದರೂ ಯಾವುದೇ ತಾಂತ್ರಿಕ ದೋಷ ಅಥವಾ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

Continue Reading

Politics

ಯಶಸ್ವಿಗೊಂಡ ಒಕ್ಕಲಿಗ ಸಮುದಾಯದ ವಧು -ವರರ ಸಮಾವೇಶ

Published

on

ತಿ.ನರಸೀಪುರ: ತಾಲೂಕಿನ ಬನ್ನೂರು ಪಟ್ಟಣದ ಹೊರ ವಲಯದಲ್ಲಿರುವ ಶ್ರೀ ನಿವಾಸ ಕಲ್ಯಾಣ ಮಂಟಪದಲ್ಲಿ ಒಕ್ಕಲಿಗ ಸಮುದಾಯದ ವಧು -ವರರ ಸಮಾವೇಶ ನಡೆಯಿತು.

ಮೈಸೂರಿನ ನೇಗಿಲ ಯೋಗಿ ಸಮಾಜ ಸೇವಾ ಟ್ರಸ್ಟ್ ವತಿಯಿಂದ ನಡೆದ ವಧು-ವರರ ಸಮಾವೇಶದಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ಹಲವು ಜಿಲ್ಲೆಗಳಿಂದ ನೂರಾರು ವಧು -ವರರು ಭಾಗವಹಿಸಿ ತಮ್ಮ ಸಂಗಾತಿ ಆಯ್ಕೆ ಮಾಡಿಕೊಂಡರು.

ಇದೇ ವೇಳೆ ಮಾತನಾಡಿದ ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಗೂಳೇಗೌಡ ಮದುವೆ ಎಂಬ ಪವಿತ್ರ ಸಂಬಂಧ ಗಟ್ಟಿಯಾಗಿರಬೇಕು. ಹಾಗಾಗಿ ಪತಿ ಮತ್ತು ಪತ್ನಿಯ ನಡುವೆ ಹೊಂದಾಣಿಕೆ ಬಹಳ ಮುಖ್ಯ. ಸಂಸಾರವೆಂದ ಮೇಲೆ ಸಣ್ಣ ಪುಟ್ಟ ವೈಮನಸ್ಸು ಇರುತ್ತದೆ. ಅವುಗಳ ಕ್ಷಮಿಸುವ ಪ್ರವೃತ್ತಿಯನ್ನು ದಂಪತಿ ಮೈಗೂಡಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಧ್ಯವರ್ತಿಗಳ ಹಾವಳಿ, ವೃಥಾ ಖರ್ಚನ್ನು ತಪ್ಪಿಸಿ ನೇರ ವಧು-ವರರ ಸಂದರ್ಶನ ಮುಖೇನ ವಿವಾಹ ಮಾಡಿಕೊಳ್ಳಬೇಕು. ವಧು-ವರರ ಸಮನ್ವಯತೆ ಸಂಸಾರವನ್ನು ಯಶಸ್ಸಿನತ್ತ ಸಾಗಿಸುತ್ತದೆ. ವಧು-ವರರು ತಾವೇ ನೇರ ಸಂಪರ್ಕಿಸಿ, ಮದುವೆ ಆಗುವ ಇಚ್ಛೆ ಇದ್ದಲ್ಲಿ ವಿವಾಹ ವೇದಿಕೆಯಲ್ಲಿರುವ ಬಹು ಆಯ್ಕೆಯಲ್ಲಿ ತಮ್ಮ ಇಚ್ಚಿಸುವ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳ ಬಹುದು ಎಂದರು.

ಅಂತಾರಾಷ್ಟ್ರೀಯ ಜನಪದ ಗಾಯಕ ಗೋನಾಸ್ವಾಮಿ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ರೈತರಿಗೆ ವಧು ಸಿಗುತ್ತಿಲ್ಲ ಎಂಬ ಅಪವಾದವಿದೆ. ಇದರಿಂದ ರೈತರು ಧೃತಿಗೆಡುವ ಅಗತ್ಯತೆ ಇಲ್ಲ. ಅತ್ಯಂತ ತಾಳ್ಮೆಯಿಂದ ವಧು ಅನ್ವೇಷಣೆ ಮಾಡಬೇಕು. ರೈತನೇ ಈ ದೇಶದ ಮುಂದಿನ ಅಧಿಪತಿ. ವಿದೇಶದಲ್ಲಿ ಲಕ್ಷ ಲಕ್ಷ ವೇತನ ಪಡೆಯುತ್ತಿದ್ದ ಕೆಲಸಗಾರರು ತಮ್ಮ ಕೆಲಸಗಳನ್ನು ತ್ಯಜಿಸಿ ಪ್ರಗತಿಪರ ರೈತರಾಗಿ ತಮ್ಮ ಜಮೀನುಗಳಲ್ಲಿ ರೈತರಾಗಿದ್ದಾರೆ. ಇದು ದೇಶಾಭಿವೃದ್ಧಿಗೆ ಶುಭ ಸೂಚಕ ಎಂದರು.

ಇದೇ ವೇಳೆ ನೂರಾರು ವಧು-ವರರು ತಮ್ಮ ಹೆಸರುಗಳನ್ನು ನೋಂದಾಯಿಸಿ ತಮ್ಮ ನೆಚ್ಚಿನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡರು.ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಬಿ.ಎಚ್. ರವಿಕುಮಾರ್,ತೋಟಗಾರಿಕೆ ಇಲಾಖೆ ರಾಮೇಗೌಡ, ನೇಗಿಲ ಯೋಗಿ ಸಂಘದ ಜಿಲ್ಲಾಧ್ಯಕ್ಷ ರವಿಕುಮಾರ್, ಸಮಾಜ ಸೇವಕ ಡಾ.ಮಹೇಂದ್ರ ಸಿಂಗ್ ಕಾಳಪ್ಪ ಇತರರು ಇದ್ದರು.

Continue Reading

Trending

error: Content is protected !!