Manglore
ಮಂಗಳೂರು: ಎರಡೆರಡು ಮದುವೆ, ಹಲವಾರು ಯುವತಿಯರಿಗೆ ವಂಚನೆ- ಆರೋಪಿ ಸೇರಿ ಸಹಕರಿಸಿದಾತನೂ ಅರೆಸ್ಟ್
ಮಂಗಳೂರು: ಎರಡೆರಡು ಮದುವೆಯಾಗಿದ್ದಲ್ಲದೆ, ಮದುವೆ ಆಗುವುದಾಗಿ ನಂಬಿಸಿ ಹಲವಾರು ಯುವತಿಯರಿಗೆ ವಂಚಿಸಿರುವ ಆರೋಪದ ಮೇಲೆ ಖತರ್ನಾಕ್ ಖದೀಮ ಸೇರಿ ಆತನಿಗೆ ಸಹಕರಿಸಿದ ಆರೋಪಿಯನ್ನು ಕಾವೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ಸುಶಾಂತ್ ಪೂಜಾರಿ(32) ಹಾಗೂ ಭಾಸ್ಕರ್ ಬಂಧಿತ ಆರೋಪಿಗಳು.

ಸುಶಾಂತ್ ಪೂಜಾರಿ ಎಂಬಾತ ಮ್ಯಾಟ್ರಿಮೋನಿ ಆನ್‌ಲೈನ್ ಪ್ಲಾಟ್‌ಫಾರಂನಲ್ಲಿ ಯುವತಿಯೋರ್ವಳನ್ನು ಪರಿಚಯ ಮಾಡಿಕೊಂಡಿದ್ದ. ಬಳಿಕ ಈಕೆಯನ್ನು ಮಹಾರಾಷ್ಟ್ರದ ಘನಸೋಳಿಯ ನವ ಮುಂಬೈನಲ್ಲಿ 2025ರ ಫೆ.2ರಂದು ಮದುವೆಯಾಗಿದ್ದಾನೆ. ಬಳಿಕ ಆಕೆಯಿಂದ ಹಂತ ಹಂತವಾಗಿ 6,60,000ರೂ. ಹಣವನ್ನು ಪಡೆದುಕೊಂಡು, ವಂಚಿಸಿ ನ.15ರಿಂದ ನಾಪತ್ತೆಯಾಗಿದ್ದಾನೆ.
ಇದರಿಂದ ಅನುಮಾನಗೊಂಡ ಯುವತಿ ಆತನ ಬಗ್ಗೆ ವಿಚಾರಿಸಿದಾಗ ಇದೇ ರೀತಿ ಸುಮಾರು ಕಡೆ ಮದುವೆ ಮಾಡಿಕೊಳ್ಳುತ್ತೇನೆಂದು ನಂಬಿಸಿ ಮೋಸ ಮಾಡಿದ್ದಾನೆ. ಜೊತೆಗೆ ಈ ಮೊದಲು ಒಂದು ಮದುವೆ ಆಗಿರುವ ವಿಚಾರ ತಿಳಿದಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತೆ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಅಕ್ರ: 184/2025 ಕಲಂ: 318(4), 316(2), 316(1), 336(3), 340(1) ಬಿ ಎನ್ ಎಸ್ ರಂತೆ ಪ್ರಕರಣ ದಾಖಲಿಸಿದ್ದರು.

ತನಿಖೆ ಕೈಗೊಂಡ ಪೊಲೀಸರು ಆರೋಪಿ ಸುಶಾಂತ್ ಪೂಜಾರಿಯನ್ನು 2026ರ ಫೆ.5ರಂದು ಪತ್ತೆ ಹಚ್ಚಿ ದಸ್ತಗಿರಿ ಮಾಡಿ ವಿಚಾರಣೆ ನಡೆಸಿದ್ದಾರೆ. ತನಿಖೆಯಲ್ಲಿ ವೇಳೆ ಆರೋಪಿ ಸುಶಾಂತ್ ಪೂಜಾರಿ ಮ್ಯಾಟ್ರಿಮೋನಿಯಲ್ಲಿ ಪರಿಚಯ ಮಾಡಿಕೊಂಡು ಈ ಮೊದಲು 2021ರಲ್ಲಿ ಉಡುಪಿಯ ಯುವತಿಯೊಬ್ಬಳನ್ನು ಮದುವೆ ಆಗಿರುತ್ತೇನೆಂದು ಒಪ್ಪಿಕೊಂಡಿದ್ದಾನೆ. ಅಲ್ಲದೆ ಉಡುಪಿಯ ಇಬ್ಬರು, ಮುಂಬೈಯ ಇಬ್ಬರು, ಬೆಂಗಳೂರಿನ ಇಬ್ಬರು ಕಾರ್ಕಳದ ಓರ್ವ ಯುವತಿಯನ್ನು ಮದುವೆ ಆಗುವುದಾಗಿ ನಂಬಿಸಿ ಮೊಸ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.

ಸದ್ಯ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ. ಅಲ್ಲದೆ ಪ್ರಕರಣದಲ್ಲಿ ಆರೋಪಿ ಸುಶಾಂತ್ ಪೂಜಾರಿಯೊಂದಿಗೆ ಸೇರಿ ಮುಲ್ಕಿ ನಿವಾಸಿ ಭಾಸ್ಕರ್ ಎಂಬಾತನು ಯುವತಿ ಮತ್ತು ಆಕೆಯ ಕುಟುಂಬದವರಿಗೆ ನಂಬಿಸುವ ಉದ್ದೇಶದಿಂದ ಆರೋಪಿ ಸುಶಾಂತ್ ನನ್ನ ಅಳಿಯ ಎಂದು ಹೇಳಿಕೊಂಡಿದ್ದಾನೆ. ಜೊತೆಗೆ ಆರೋಪಿ ಸುಶಾಂತ್ ಪೂಜಾರಿಯ ಕುಟುಂಬಸ್ಥರ ಪರವಾಗಿ ಮುಂಬೈನಲ್ಲಿ ಧಾರ್ಮಿಕ ವಿಧಿವಿಧಾನದಲ್ಲಿ ಪಾಲ್ಗೊಂಡು ಮದುವೆ ನಡೆಸಿದ್ದಾನೆ. ಸದ್ಯ ಆತನನ್ನೂ ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿರುತ್ತದೆ.

ಆರೋಪಿ ಸುಶಾಂತ್ ಪೂಜಾರಿ ವಿರುದ್ಧ ಮಂಗಳೂರು ಉರ್ವಾ ಪೊಲೀಸ್ ಠಾಣಾಅ.ಕ್ರ: 202/2017 ಕಲಂ: 406, 420 ಐಪಿಸಿ, ಉಡುಪಿ ಜಿಲ್ಲೆಯ ಕೋಟಾ ಪೊಲೀಸ್ ಠಾಣಾ ಅ.ಕ್ರ: 132/2022 ಕಲಂ: 379 ಐಪಿಸಿ ಮತ್ತು ಮಹಾರಾಷ್ಟ್ರ ರಾಜ್ಯದ ಅರ್ನಾಲ್ ಪೊಲೀಸ್ ಠಾಣಾ ಅ.ಕ್ರ:354/2022 ಕಲಂ:336(ಎ), 370, 370(4), 376(2),(ಎನ್) 342, ಜೊತೆಗೆ 34 ಐಪಿಸಿ ಕಲಂ:3,4,5 ಇಮ್ಮೋರಲ್ ಟ್ರಾಫಿಕಿಂಗ್ ಆ್ಯಕ್ಟ್, ಕಲಂ:4,8,12 ಪೊಕ್ಸೊ ಕಾಯ್ದೆಯಂತೆ ಪ್ರಕರಣಗಳು ದಾಖಲಾಗಿರುತ್ತದೆ.
Manglore
ಮಂಗಳೂರು: ಚಿನ್ನಾಭರಣ ತೊಳೆದು ಕೊಡುವೆನೆಂದು ‘ಚಿನ್ನ’ ಎಗರಿಸಿ ಪರಾರಿಯಾದ ಖತರ್ನಾಕ್ ಖದೀಮ
ಮಂಗಳೂರು: ಚಿನ್ನಾಭರಣ ತೊಳೆದು ಹೊಳೆಯುವಂತೆ ಮಾಡುವ ನೆಪದಲ್ಲಿ ಕಳ್ಳನೋರ್ವನು ಮಹಿಳೆಯೊಬ್ಬರ ಚಿನ್ನವನ್ನು ಎಗರಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣ ಗ್ರಾಮದಲ್ಲಿ ನಡೆದಿದೆ.
ಕಾಶಿಪಟ್ಣದ ಶಿವಗಿರಿಯ, ಮನೆಯೊಂದಕ್ಕೆ ಬಂದ ಕಳ್ಳನೊಬ್ಬ ಚಿನ್ನ ತೊಳೆದುಕೊಡುದಾಗಿ ಹೇಳಿದ್ದ. ಮಹಿಳೆಯು ಚಿನ್ನದ ಸರವನ್ನು ಆತನ ಕೈಯಲ್ಲಿ ನೀಡುತ್ತಿದ್ದಂತೆ, ಕಳ್ಳ ಓಡಿ ಪರಾರಿಯಾಗಿದ್ದಾನೆ.

ಈ ಬಗ್ಗೆ ಮಹಿಳೆ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದೇ ಗ್ರಾಮದ ಮತ್ತೊಂದು ಮನೆಗೆ ತೆರಳುವ ವಿಡಿಯೋವನ್ನು ಗ್ರಾಮಸ್ಥರು ವೈರಲ್ ಮಾಡಿ, ಈ ವ್ಯಕ್ತಿ ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.
Manglore
ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನಲ್ಲಿ ಉಚಿತ ಶೈಕ್ಷಣಿಕ ಸಮಾಲೋಚನೆ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಲೋಕಾರ್ಪಣೆ
ಬೆಳ್ತಂಗಡಿ: ದ.ಕ.ಜಿಲ್ಲೆ ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕ್ಷೇತ್ರ. ನಮ್ಮಲ್ಲಿ ಅನೇಕರು ಶಿಕ್ಷಣ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅದರಲ್ಲೂ ವಿದ್ವತ್ ಶಿಕ್ಷಣ ಸಂಸ್ಥೆ ಸಮಾಜಮುಖಿಯಾಗಿ ಚಿಂತಿಸಿ, ಸಮಾಜದ ವಿದ್ಯಾರ್ಥಿಗಳಿಗಾಗಿ 54 ಕ್ಕೂ ಅಧಿಕ ಸ್ಪರ್ಧಾತ್ಮಕ ಪರೀಕ್ಷೆಗಳಿವೆ, ಅದಕ್ಕೆ ಹೇಗೆ ತಯಾರಿ ನಡೆಸಬೇಕೆಂಬ ನೆಲೆಯಲ್ಲಿ ಜಿಲ್ಲೆಯಲ್ಲೇ ಮೊದಲ ಬಾರಿಗೆ ಉಚಿತವಾಗಿ ಮಾರ್ಗದರ್ಶನ ನೀಡಲು ಮುಂದಾಗಿರುವ ಏಕೈಕ ಕಾಲೇಜೆಂದರೆ ಅದು ವಿದ್ವತ್ ಕಾಲೇಜು ಎಂದು ಹೇಳಲು ಹೆಮ್ಮೆಯಾಗುತ್ತಿದೆ ಎಂದು ಹಿರಿಯ ಪತ್ರಕರ್ತ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಹೇಳಿದರು.

ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನಿಂದ ಸೆ.8 ರಂದು ಕಾಲೇಜಿನ ಆವರಣದಲ್ಲಿ ನಡೆದ Walk-in to VIDVATH, A step into success ಎಂಬ ಉಚಿತ ಶೈಕ್ಷಣಿಕ ಸಮಾಲೋಚನೆ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಜನ್ಮಕೊಟ್ಟ ತಂದೆತಾಯಿ ಹಾಗೂ ವಿದ್ಯೆಕೊಟ್ಟ ಗುರು ದೇವರಿಗೆ ಸಮಾನ. ವಿದ್ವತ್ ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಶಿಬಿರದಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಂತವರನ್ನು ಕರೆಸಿ ಕಾರ್ಯಕ್ರಮ ಲೋಕಾರ್ಪಣೆ ಮಾಡಿರುವುದು ನಿಜಕ್ಕೂ ಅರ್ಥಪೂರ್ಣ. ಭಾಗ್ಯ ಎಂದು ಹೇಳಬಹುದು. ಮೊದಲ ಬಾರಿಯ ಫಲಿತಾಂಶಕ್ಕೆ ವಿದ್ವತ್ ಶಿಕ್ಷಣ ಸಂಸ್ಥೆ ಕಾತುರದಲ್ಲಿದೆ. ಬರುವ ಹತ್ತು ವರ್ಷದಲ್ಲಿ ವಿದ್ವತ್ ಕಾಲೇಜು ರಾಜ್ಯದಲ್ಲೇ ಅತ್ಯುತ್ತಮ ಶೈಕ್ಷಣಿಕ ಸಂಸ್ಥೆಯಾಗಿ ಬೆಳೆಯಲಿದೆ ಎಂಬ ವಿಶ್ವಾಸ ನನಗಿದೆ. ನಮ್ಮ ಶಿಕ್ಷರು ಯಾರು ವೈದ್ಯರಲ್ಲ, ಇಂಜಿನಿಯರ್ ಗಳಲ್ಲ, ಆದರೆ ಅವರೆಲ್ಲರನ್ನು ಸೃಷ್ಟಿ ಮಾಡುವ ಮಹಾತ್ಮರು. ಹಾಗಾಗಿ ನೀವು ಪಡೆದ ಶಿಕ್ಷಣ ಸಂಸ್ಥೆ ಮತ್ತು ಗುರುಗಳ ಮೇಲೆ ಅಪಾರ ಗೌರವ ಇರಲಿ ಎಂದು ಕಿವಿ ಮಾತು ಹೇಳಿದರು.

ಶಿಕ್ಷಣ ಪಡೆದ ಸಂಸ್ಥೆಗೆ ಕೀರ್ತಿ ತನ್ನಿ:
ವಾಕ್ ಇನ್ ಟು ವಿದ್ವತ್, ಎ ಸ್ಟೆಪ್ ಇನ್ ಟು ಸಕ್ಸಸ್ ನಾಮಫಲಕ ಅನಾವರಣ ಮಾಡಿದ ಪದ್ಮಶ್ರೀ ಹರೇಕಳ ಹಾಜಬ್ಬ ಅವರು ಮಾತನಾಡಿ, ಬಡತನವಾದ್ದರಿಂದ ನಾನು ಶಿಕ್ಷಣದಿಂದ ವಂಚಿತನಾದೆ. ಆದರೆ ಅದರಿಂದ ನಾನು ಪಟ್ಟ ಕಷ್ಟ ಬೇರೊಬ್ಬರು ಪಡಬಾರದು ಎಂಬ ನೆಲೆಯಲ್ಲಿ ನನ್ನೂರಲ್ಲಿ ಸರಕಾರಿ ಶಾಲೆ ತೆರೆಯುವ ಕನಸು ಕಂಡೆ. ಈ ಅಭಿಲಾಷೆ ಹೆಮ್ಮರವಾಗಿ ಬೆಳೆಯಿತು. ಅದನ್ನು ಮಾಧ್ಯಮಗಳು ಗುರುತಿಸಿದ್ದರಿಂದ ಈ ಬಡವನಿಗೆ ಇಂದು ಪದ್ಮಶ್ರೀ ಪ್ರಶಸ್ತಿ ಬರುವಂತಾಗಿದೆ. ಹಾಗಾಗಿ ನಾನು ವಿದ್ಯಾರ್ಥಿಗಳಿಗೆ ಕೈಮುಗಿದು ನಮಿಸುವುದೇನೆಂದರೆ ಶಿಕ್ಷಣ ಪಡೆದ ಸಂಸ್ಥೆಗೆ ಕೀರ್ತಿ ತನ್ನಿ ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ ವಿದ್ವತ್ ಕಾಲೇಜಿನ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ, ಭಾರತೀಯ ಮೂಲವಾದ ಸಂಸ್ಕೃತ ಪದದಿಂದ ವಿದ್ವತ್ ಎಂಬ ಹೆಸರು ಇರಿಸಿದ್ದೇವೆ. ಇಂದು ಪೋಷಕರಲ್ಲಿ ತಮ್ಮ ಮಕ್ಕಳು ಏನು ಮಾಡಬೇಕೆಂಬ ಬಗ್ಗೆ ದೂರದೃಷ್ಟಿ ಆಲೋಚನೆಗಳಿಲ್ಲದೆ ಪರಿತಪಿಸುತ್ತಾರೆ. ಈ ನಿಟ್ಟಿನಲ್ಲಿ ವಿದ್ವತ್ ಕಾಲೇಜು ವಿದ್ವಾರ್ಥಿಗಳ ವಿವೇಚನೆಗಾಗಿ ಉಚಿತ ಶೈಕ್ಷಣಿಕ ಸಮಾಲೋಚನೆ ಹಾಗೂ ವೃತ್ತಿ ಮಾರ್ಗದರ್ಶನ ಪರಿಚಯಿಸಿದ್ದೇವೆ. ಇದು ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಇದರ ಗಂಭೀರತೆ ಪೋಷಕರಿಗೂ ಅರಿವಿರಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ತಿಳಿಸಿದರು.

ಕಾಲೇಜಿನ ಭೌತಶಾಸ್ತ್ರ ಪ್ರಯೋಗಾಲಯ ಉದ್ಘಾಟಿಸಿದ ಬೆಳ್ತಂಗಡಿ ಸಿರೋ ಮಲಬಾರ್ ಕ್ಯಾಥೊಲಿಕ್ ಧರ್ಮಪ್ರಾಂತ್ಯದ ಪ್ರಧಾನ ಗುರುಗಳಾದ ಫಾ.ಜೋಸೆಫ್ ವಲಿಯಪರಂಬಿಲ್ ಮಾತನಾಡಿ, ಇಲ್ಲಿ ಯುವ ಪೀಳಿಗೆ ಬೆರೆತುಕೊಳ್ಳಲು ಉತ್ತಮ ಅವಕಾಶವನ್ನು ವಿದ್ವತ್ ಕಾಲೇಜು ಪರಿಚಯಿಸಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಅವರ ಭವಿಷ್ಯ ರೂಪಿಸುವ ದೂರದೃಷ್ಟಿ ಚಿಂತನೆಗೆ ಕಾಲೇಜನ್ನು ಅಭಿನಂದಿಸುತ್ತೇನೆ. ವಿದ್ಯಾರ್ಥಿಗಳು ಈ ಸೌಲಭ್ಯ ಬಳಸಿಕೊಳ್ಳಿ, ಪ್ರಾಮಾಣಿಕವಾಗಿ ಸಕಾರಾತ್ಮಕ ಜ್ಞಾನ ಸಂಪಾದಿಸಿ, ಸಮರ್ಪಣೆಯೊಂದಿಗೆ ಪರಿಶ್ರಮಿಸಿ, ಮೌಲ್ಯಗಳೊಂದಿಗೆ ಬೆಳೆದು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಮಾನವರಾಗಿ ಎಂದು ಸಂದೇಶ ನೀಡಿದರು.

ರಸಾಯನಶಾಸ್ತ್ರ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿ, ತಹಶೀಲ್ದಾರ್ ಪೃಥ್ವಿ ಸಾನಿಕಮ್ ಮಾತನಾಡಿ, ನಾವು ಬೇರೆಯವರೊಂದಿಗೆ ನಮ್ಮನ್ನು ತುಲನೆ ಮಾಡಬಾರದು. ವಿಜ್ಞಾನ ಇರುವುದು ಕಲಿಯಲು ಅಲ್ಲ, ಹೊರತಾಗಿ ಅವಿಷ್ಕರಿಸಲು. ಅವಿಷ್ಕರಿಸುವವರು ಬೆಳೆಯುತ್ತಾರೆ. ನಿಮ್ಮ ಆಲೋಚನಾ ಲಹರಿಯನ್ನು ವಿಸ್ತರಿಸಿ ಎಂದು ಕರೆ ನೀಡಿದರು.
ಜೀವಶಾಸ್ತ್ರ ಪ್ರಯೋಗಾಲಯ ಉದ್ಘಾಟಿಸಿದ ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿ ಮಾತನಾಡಿ, ಹಿಂದೆ ರಾತ್ರಿ ಶಾಲೆಯಲ್ಲಿ ಕಲಿತು ಶಿಕ್ಷಣ ಪಡೆಯುತ್ತಿದ್ದರು. ಆದರೆ ಇಂದು ಉತ್ತಮ ಅಂಕಗಳಿಸಲು ರಾತ್ರಿ ಹಗಲು ಎನ್ನದೆ ಶಿಕ್ಷಣ ಪಡೆಯಬೇಕಿದೆ. ಈ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿ ಎಂದು ಹಾರೈಸಿದರು.

ವಿಶೇಷ ಆಹ್ವಾನಿತರಾದ ಪದ್ಮಶ್ರೀ, ಶಿಕ್ಷಣ ಸಂತ ಹರೇಕಳ ಹಾಜಬ್ಬ ಹಾಗೂ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಪಿ.ಬಿ.ಹರೀಶ್ ರೈ ಅವರನ್ನು ಕಾಲೇಜು ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು. ಉಚಿತ ಶೈಕ್ಷಣಿಕ ಸಮಾಲೋಚನೆಯಲ್ಲಿ ನೋಂದಾಯಿಸಿದ ವಿದ್ಯಾರ್ಥಿಗಳಿಗೆ ಬಹುಮಾನವಾಗಿ ನೀಡುವ ಟಿ.ಶರ್ಟ್ ನ್ನು ಸಂಸ್ಥೆಯ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಅನಾವರಣ ಮಾಡಿದರು.
ಕಾರ್ಯಕ್ರಮದಲ್ಲಿ ವಿದ್ವತ್ ಕಾಲೇಜು ಕಾರ್ಯದರ್ಶಿ ಪ್ರಜ್ವಲ್ ರೈ, ಟ್ರಸ್ಟಿಗಳಾದ ಎಂ.ಕೆ.ಕಾಶಿನಾತ್, ಸುಚಿತ್ರಾ ಶೆಟ್ಟಿ, ರೇಶ್ಮಾ ಸುಭಾಶ್ಚಂದ್ರ ಶೆಟ್ಟಿ, ಆಡಳಿತಾಧಿಕಾರಿ ಅಶೋಕ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
Manglore
ಕಾಸರಗೋಡು: ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ನೇ*ಣುಬಿಗಿದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಕೇರಳದ ಕಾಸರಗೋಡಿನಲ್ಲಿ 24 ವರ್ಷದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಚಿನ್ನು ಪಾಪು ತಮ್ಮ ಬಾಡಿಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟು ಪತ್ತೆಯಾಗಿದ್ದಾರೆ. ಕಾಸರಗೋಡು ಶೈಲಿಯ ಭಾಷೆ ಹಾಗೂ ಸ್ಥಳೀಯ ಆಹಾರದ ವೀಡಿಯೋಗಳಿಂದ ವೈರಲ್ ಆಗಿದ್ದ ಇವರು, ಇನ್‌ಸ್ಟಾಗ್ರಾಂನಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದರು.
ಇವರ ನಿಜವಾದ ಹೆಸರು ಕೆ. ರೇಷ್ಮಾ. ಅತೀ ಕಡಿಮೆ ಸಮಯದಲ್ಲಿಯೇ ಹೆಚ್ಚು ಜನಪ್ರಿಯತೆ ಗಳಿಸಿದ್ದರು. ಮೂಲತಃ ಅಡೂರ್‌ನವರಾದ ಇವರು ಮುಖ್ಯವಾಗಿ ತುಳು ಹಾಗೂ ಮಲಯಾಳಂ ಭಾಷೆಯಲ್ಲಿ ಮಾಡಿದ ವಿಡಿಯೋಗಳಿಂದ ಹೆಚ್ಚು ಜನಪ್ರಿಯರಾದರು. ಅವರ ಈ ಶೈಲಿ ಅನೇಕ ವೀಕ್ಷಕರಿಗೆ ಸಹಜ ಹಾಗೂ ಹತ್ತಿರ ಎನಿಸಿತ್ತು. ಅವರ ಹಲವಾರು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.

ಪ್ರೀತಿಸಿ ಮದುವೆಯಾಗಿದ್ದ ರೇಷ್ಮಾ ಒಂದು ತಿಂಗಳ ಹಿಂದೆಯಷ್ಟೇ ವಿಚ್ಛೇದನ ಪಡೆದಿದ್ದರು. ಅವರಿಗೆ ನಾಲ್ಕು ವರ್ಷದ ಪುತ್ರನಿದ್ದು, ಸದ್ಯ ಆತ ಅಡೂರ್‌ನಲ್ಲಿರುವ ತನ್ನ ಅಜ್ಜ-ಅಜ್ಜಿ (ರೇಷ್ಮಾ ಪೋಷಕರು) ಜೊತೆಗಿದ್ದಾನೆ. ಸೋಮವಾರ ಮಧ್ಯಾಹ್ನ, ಚಿನ್ನು ಪಾಪು ಕಾಸರಗೋಡಿನ ತಮ್ಮ ಬಾಡಿಗೆ ಮನೆಯ ಕೋಣೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದನ್ನು ಗಮನಿಸಿದ ಅಕ್ಕಪಕ್ಕದವರು ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲಿಯೇ ಅವರು ಮೃತಪಟ್ಟಿದ್ದರು ಎಂದು ವೈದ್ಯರು ಖಚಿತಪಡಿಸಿದ್ದಾರೆ.
ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.
-
Mysore10 hours agoರಾಜ್ಯದಲ್ಲಿ ಯತೀಂದ್ರ ಸೇಲ್ಸ್ ಟ್ಯಾಕ್ಸ್ ಕಡ್ಡಾಯ: ಪ್ರತಾಪ್ ಸಿಂಹ ಆರೋಪ
-
Mandya4 hours agoಕಾಯಕ ಶರಣರ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು :ಡಾ. ಬಿ.ವಿ. ನಂದೀಶ್
-
National3 hours agoಪಿಎಂ ಮೋದಿ ವಿರುದ್ಧ ಆಕ್ಷೇಪಾರ್ಹ ಪೋಸ್ಟರ್ ಹೊತ್ತೊಯ್ದಿರುವುದು ಪ್ರಚೋದನಕಾರಿ ನೀತಿ: ಪ್ರಹ್ಲಾದ್ ಜೋಶಿ
-
Special24 hours agoಸ್ತ್ರೀ ಶಕ್ತಿ ಪ್ಯಾಕೇಜ್: ಮಹಿಳೆಯರಿಗೆ ಭದ್ರತೆಯಿಲ್ಲದೇ 10 ಲಕ್ಷದವರೆಗೆ ಸಾಲ!
-
Mysore4 hours agoಕಳ್ಳತನ ಮಾಡಿದ್ದ ಕಾರು ವಶ: ಆರೋಪಿ ಬಂಧನ
-
Chikmagalur3 hours agoಮುಳ್ಳಯ್ಯನಗಿರಿ ದೇವಸ್ಥಾನದ ಕಾಮಗಾರಿ: ಸೀತಾಳಯ್ಯನ ಗಿರಿಯಿಂದ ಮುಳ್ಳಯ್ಯನಗಿರಿಗೆ ತೆರಳುವ ಮಾರ್ಗದಲ್ಲಿ ತಾತ್ಕಾಲಿಕ ನಿರ್ಬಂಧ
-
Kodagu3 hours agoಸಮ ಸಮಾಜ ನಿರ್ಮಾಣದಲ್ಲಿ ಕಾಯಕ ಶರಣರ ಕೊಡುಗೆ ಅಪಾರ: ಬಿ.ಬಿ.ಹೇಮಲತಾ
-
Kodagu5 hours ago104 ಮೊಬೈಲ್ಗಳನ್ನು ಪತ್ತೆ ಹಚ್ಚಿ ವಾರಸುದಾರರಿಗೆ ಹಿಂದಿರುಗಿಸಲಾಗಿದೆ: ಎಸ್ಪಿ ಬಿಂದುಮಣಿ
