Manglore
ಮಂಗಳೂರು: ಹೈಕೋರ್ಟ್ ಪೀಠ ಸ್ಥಾಪನೆಗೆ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಿಂದ ಪೂರಕ ಸ್ಪಂದನೆ
ಮಂಗಳೂರು: ಕರಾವಳಿ ಭಾಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಹಾಗೂ ಮಂಗಳೂರಿನಲ್ಲಿ ಸಂಚಾರ ಹೈಕೋರ್ಟ್ ಪೀಠ ಸ್ಥಾಪನೆ ಉದ್ದೇಶಕ್ಕಾಗಿ ಹೈಕೋರ್ಟ್ ಪೀಠ ಹೋರಾಟ ಸಮಿತಿಯ ನಿಯೋಗ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರನ್ನು ಉಡುಪಿ ಸರ್ಕ್ಯೂಟ್ ಹೌಸ್‌ನಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು.

ಹೈಕೋರ್ಟ್ ಪೀಠ ಹೋರಾಟ ಸಮಿತಿಯ ಸಂಚಾಲಕರೂ ವಿಧಾನ ಪರಿಷತ್ ನ ಸದಸ್ಯ ಐವನ್ ಡಿಸೋಜ ಮನವಿ ಸಲ್ಲಿಸಿದರು.
ಕರಾವಳಿ ಭಾಗದಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸುವ ಕಾರ್ಯ ಬಹಳ ಮುಖ್ಯವಾಗಿದೆ. ಜನಸಾಮಾನ್ಯರಿಗೆ ದೂರದ ಬೆಂಗಳೂರಿಗೆ ಹೋಗಿ ಕಾನೂನು ಹೋರಾಟದಲ್ಲಿ ತೊಡಗಿಸಿಕೊಳ್ಳಲು ಬಹಳ ಕಷ್ಟವಾಗುತ್ತದೆ. ಮಳೆಗಾಲದ ಸಂದರ್ಭ ದೂರದ ಬೆಂಗಳೂರಿನ ಸಂಪರ್ಕ ಆಗಾಗ ಕಡಿತಗೊಳ್ಳುತ್ತದೆ. ಇದರಿಂದ ಜನರು ಹೈಕೋರ್ಟಿಗೆ ಸಂಚರಿಸಲು ಕಷ್ಟ ಅನುಭವಿಸುತ್ತಿದ್ದಾರೆ.
ಅಲ್ಲದೆ ಕರಾವಳಿ ಭಾಗ ಉಡುಪಿ ಚಿಕ್ಕಮಂಗಳೂರು ಕೊಡಗು ಜಿಲ್ಲೆಗಳ ದಾವೆಗಳ ವಿಲೇವಾರಿಯಲ್ಲಿ ವಿಳಂಬವಾಗುತ್ತಿದ್ದು ಇದರಿಂದ ಈ ಭಾಗದ ಜನರಿಗೆ ಬಹಳ ತೊಂದರೆಯಾಗುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿಗಳಿಗೆ ವಿವರಿಸಿದರು. ಸಿಎಂ ಸಿದ್ದರಾಮಯ್ಯ ಕರಾವಳಿ ಭಾಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಒಲವನ್ನು ತೋರಿಸಿರುವುದರಿಂದ, ಮೊದಲಿಗೆ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪಸುಲು ಒಪ್ಪಿಗೆ ನೀಡಬೇಕೆಂದು ವಿನಂತಿಸಿದರು.

ಈ ಮನವಿಗೆ ಪೂರಕವಾಗಿ ಸ್ಪಂದಿಸಿದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಯವರು ತಮ್ಮ ಮನವಿಯ ಬಗ್ಗೆ ಆದಷ್ಟು ಬೇಗ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಸಮಿತಿಯ ನಿಯೋಗದಲ್ಲಿ ಮಂಗಳೂರು ವಕೀಲ ಸಂಘದ ಅಧ್ಯಕ್ಷ ರಾಘವೇಂದ್ರ ಹೆಚ್. ವಿ. ಮಂಗಳೂರಿನ ಪ್ರಧಾನ ಜಿಲ್ಲಾ ಸರಕಾರಿ ವಕೀಲ ಎಂ ಪಿ ನರೋನ್ಹ, ಪ್ರಧಾನ ಕಾರ್ಯದರ್ಶಿ ಶ್ರೀಧರ್ ಎಚ್, ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿ, ಉಪಾಧ್ಯಕ್ಷ ದೇವದಾಸ್ ವಿ. ಶೆಟ್ಟಿಗಾರ್, ಬ್ರಹ್ಮಾವರ ವಕೀಲರ ಸಂಘದ ಅಧ್ಯಕ್ಷ ಕಾಡೂರು ಪ್ರವೀಣ್ ಶೆಟ್ಟಿ ಉಪಸ್ಥಿತರಿದ್ದರು.
Manglore
ಮಂಗಳೂರು: ಅಂತಾರಾಜ್ಯ ವಾಹನ, ಸರಗಳ್ಳನ ಅರೆಸ್ಟ್- 4ದ್ವಿಚಕ್ರ ವಾಹನಗಳು, 2ಚಿನ್ನದ ಸರಗಳು ವಶಕ್ಕೆ
ಮಂಗಳೂರು: ಅಂತಾರಾಜ್ಯ ಕುಖ್ಯಾತ ವಾಹನ ಹಾಗೂ ಸರಗಳ್ಳನ ಬಂಧಿಸಿರುವ ಪೊಲೀಸರು ನಾಲ್ಕು ದ್ವಿಚಕ್ರ ವಾಹನಗಳು ಸೇರಿದಂತೆ ಎರಡು ಚಿನ್ನದ ಸರಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಕೇರಳ ರಾಜ್ಯದ ತಿರುವನಂತಪುರಂ ಜಿಲ್ಲೆಯ ವೆಲ್ಲಟ್ಟಿ ವೀಡು, ವಲಿಯರ್ತಲ ನಿವಾಸಿ ಆದಿತ್ ಗೋಪಾನ್ ಅಲಿಯಾಸ್ ಮುತ್ತುಕೃಷ್ಣ(32) ಬಂಧಿತ ಆರೋಪಿ.
ನ.21ರಂದು ಸಂಜೆ ಕದ್ರಿ ಬಟ್ಟಗುಡ್ಡೆ ಬಳಿ 83 ವರ್ಷದ ವೃದ್ಧ ಮಹಿಳೆಯು ತನ್ನ ಮನೆಯ ಬಳಿ ಓಣಿಯಲ್ಲಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಅಪರಿತ ವ್ಯಕ್ತಿ ಅವರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದಾನೆ. ಈ ಬಗ್ಗೆ ಮಂಗಳೂರು ಪೂರ್ವ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ಆರೋಪಿಯ ಪತ್ತೆ ಬಗ್ಗೆ ವಿಶೇಷ ತಂಡ ರಚಿಸಿ, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗಿತ್ತು. ಡಿ.4ರಂದು ಆರೋಪಿ ಬಗ್ಗೆ ವಿಶೇಷ ತಂಡಕ್ಕೆ ದೊರೆತ ಮಾಹಿತಿಯಂತೆ ಕದ್ರಿ ಜೋಗಿ ಮಠದ ಬಳಿ ವಾಹನ ತಪಸಾಣೆ ನಡೆಸುತ್ತಿದ್ದ ಪೊಲೀಸರು ದ್ವಿಚಕ್ರ ವಾಹನ ಚಲಾಯಿಸಿಕೊಂಡು ಬಂದ ಸಂಶಯಾಸ್ಪದ ವ್ಯಕ್ತಿಯನ್ನು ನಿಲ್ಲಿಸಿ ಪರಿಶೀಲಿಸಿದ್ದಾರೆ. ಆಗ ಈ ವಾಹನ ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ ವಾಹನವಾಗಿತ್ತು. ವಿಚಾರಿಸಿದಾಗ ಆರೋಪಿ ಕಳ್ಳತನ ಮಾಡಿದ ದ್ವಿಚಕ್ರ ವಾಹನವನ್ನು ಬಳಸಿಕೊಂಡು ವಯೋವೃದ್ಧರು, ಒಂಟಿ ಮಹಿಳೆಯರನ್ನು ಗುರುತಿಸಿ ಸರಗಳವು ಮಾಡಿರುವುದು ಬೆಳಕಿಗೆ ಬಂದಿರುತ್ತದೆ.
ಆರೋಪಿಯನ್ನು ಡಿ.5ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮುಂದಿನ ತನಿಖೆಗಾಗಿ ಆರೋಪಿಯನ್ನು 3ಲದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆದುಕೊಳ್ಳಲಾಗಿದೆ.
ಸದ್ರಿ ಆರೋಪಿಯ ವಿಚಾರಣೆಯನ್ನು ನಡೆಸಿ ಈ ಕೆಳಕಂಡ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ತನಿಖೆಯನ್ನು ನಡೆಸಿ ಕಳವಾದ ಸೊತ್ತುಗಳನ್ನು ಸ್ವಾಧೀನ ಪಡಿಸಲಾಗಿದೆ.

1. ದಿನಾಂಕ: 21-11-2025 ರಂದು ಕದ್ರಿ ಬಟ್ಟಗುಡ್ಡೆ ಬಳಿ ವಯೋವೃದ್ದ ಮಹಿಳೆಯ 1.5 ಪವನ್ ಸರವನ್ನು ಸುಲಿಗೆ ಮಾಡಿದ ಪ್ರಕರಣ.
2. ದಿನಾಂಕ: 27-09-2025 ರಂದು ಮುಲ್ಕಿ ಠಾಣಾ ವ್ಯಾಪ್ತಿಯ ಕೋಟೆಕೇರಿ ಬಳಿ ಒಂಟಿ ಮಹಿಳೆಗೆ ಚೂರಿ ತೋರಿಸಿ ಬೆದರಿಸಿ 2 ಪವನ್ ಚಿನ್ನದ ಸರವನ್ನು ಸುಲಿಗೆ ಪ್ರಕರಣ.
3. ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ದ್ವಿ ಚಕ್ರ ವಾಹನ ಕಳವು ಮಾಡಿದ ಪ್ರಕರಣ.
4. ಕುಂದಾಪುರ ಠಾಣಾ ವ್ಯಾಪ್ತಿಯಲ್ಲಿ ದ್ವಿ ಚಕ್ರ ವಾಹನ ಕಳವು ಮಾಡಿದ ಪ್ರಕರಣ.
5. ಸುರತ್ಕಲ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಬಳಿ ನಡೆಸಿದ ದ್ವಿ ಚಕ್ರ ವಾಹನ ಕಳವು ಪ್ರಕರಣ6. ಸುರತ್ಕಲ್ ಠಾಣಾ ವ್ಯಾಪ್ತಿಯ ಅಗರಮೇಲು ಬಳಿ ನಡೆಸಿದ ದ್ವಿ ಚಕ್ರ ವಾಹನ ಕಳವು ಪ್ರಕರಣ.
ಈ ಎಲ್ಲಾ ಪ್ರಕರಣಗಳು ಸೇರಿದಂತೆ ಆರೋಪಿಯಿಂದ 4 ದ್ವಿಚಕ್ರ ವಾಹನಗಳು ಮತ್ತು ಚಿನ್ನಾಭರಣ ಸಮೇತ ಒಟ್ಟು 5ಲಕ್ಷ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯವಲ್ಲಿ ಪೊಲೀಸರು ಯಶಸ್ವಿಯಾಗಿರುತ್ತಾರೆ
ಆರೋಪಿಯ ಮೇಲೆ ಈಗಾಗಲೇ ತಮಿಳುನಾಡು ರಾಜ್ಯದಲ್ಲಿ 4 ಚಿನ್ನಾಭರಣ ಕಳ್ಳತನ ಪ್ರಕರಣ ದಾಖಲಾಗಿದ್ದು, ನಾಗರಕೋಯಿಲ್ ಜೈಲಿನಲ್ಲಿ ಸೆರೆವಾಸ ಅನುಭವಿಸಿ ಬಿಡುಗಡೆಗೊಂಡಿರುವ ಆಸಾಮಿಯಾಗಿರುತ್ತಾನೆ. ಈತನು ಅಂತರ್ ರಾಜ್ಯ ಕುಖ್ಯಾತ ಕಳ್ಳನಾಗಿದ್ದು, ಜೈಲಿನಿಂದ ಬಿಡುಗಡೆಯಾದ ಬಳಿಕ ರೈಲಿನಲ್ಲಿ ಭಾರತ ದೇಶದ ಎಲ್ಲಾ ಕಡೆ ಸುತ್ತಾಡಿಕೊಂಡು ರೈಲ್ವೇ ನಿಲ್ದಾಣದ ಬಳಿ ಆಸು ಪಾಸಿನಲ್ಲಿ ಇರುವ ದ್ವಿ ಚಕ್ರವಾಹನ ಕಳ್ಳತನ ಮಾಡಿ ಸುಲಿಗೆ ಮಾಡುತ್ತಿದ್ದನು. ಈತನ ಪತ್ತೆಗೆ ಪೊಲೀಸರ ವಿಶೇಷ ಪ್ರಯತ್ನದಿಂದ ಪ್ರಕರಣವು ಅತೀ ಶೀಘ್ರದಲ್ಲಿ ಪತ್ತೆಯಾಗಿರುತ್ತದೆ.
ಈ ಪ್ರಕರಣವನ್ನು ಮಂಗಳೂರು ಪೂರ್ವ ಪೊಲೀಸ್ ಠಾಣೆಯ ನಿರೀಕ್ಷಕರಾದ ಅನಂತ ಪದ್ಮನಾಭ ಮತ್ತು ಕದ್ರಿ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಈ ಕಾರ್ಯಚರಣೆಯನ್ನು ನಡೆಸಿ ಪತ್ತೆ ಮಾಡಿರುತ್ತಾರೆ.
Manglore
ವೈಭವಪೂರಿತವಾಗಿ ನಡೆದ ಎಕ್ಸಲೆಂಟ್ ಶಾಲಾ ವಾರ್ಷಿಕೋತ್ಸವ ಸಂಭ್ರಮ
ಮೂಡುಬಿದಿರೆ: ಎಕ್ಸಲೆಂಟ್ ಶಾಲೆಯಲ್ಲಿ 2025- 26ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ವಾರ್ಷಿಕೋತ್ಸವವನ್ನು ಬಹಳ ವೈಭವಪೂರಿತವಾಗಿ ಆಚರಿಸಿದೆ. ಎಕ್ಸಲೆಂಟ್ ಶಾಲೆ ಹೆಸರಿಗೆ ತಕ್ಕಂತೆ ಎಕ್ಸಲೆಂಟ್ ಆಗಿ ಕ್ರಮಬದ್ಧರೀತಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಭುವನ ಜ್ಯೋತಿ ಶೈಕ್ಷಣಿಕ ಸಂಸ್ಥೆಗಳ ಅಧ್ಯಕ್ಷ ಪ್ರಶಾಂತ್ ಡಿಸೋಜ ಅಭಿಪ್ರಾಯಪಟ್ಟರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಶಾಂತ್ ಡಿಸೋಜ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಸಿಬಿಎಸ್ಇ ಪಠ್ಯಕ್ರಮ ಬದಲಾವಣೆಯಲ್ಲಿ ಶಿಕ್ಷಕರ ಭೋದನ ಶೈಲಿಯು ಬದಲಾಗುತ್ತಿದೆ. ಇದರ ಸಂಪೂರ್ಣ ಸದುಪಯೋಗ ಪಡೆದು ಪೋಷಕರು ಹೆಮ್ಮೆ ಪಡುವ ರೀತಿಯಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಬೇಕು ಎಂದರು.

ಅಂಕಗಳು ಮುಖ್ಯವಲ್ಲ, ಉತ್ತಮ ಸಂಸ್ಕಾರವು ಜೀವನದ ಉತ್ತುಂಗಕ್ಕೆ ಕರೆದುಕೊಂಡು ಹೋಗುತ್ತದೆ ಎಂದು ಮೈಸೂರು ಎಸ್ಎಲ್‌ವಿ ಬುಕ್ ಏಜೆನ್ಸಿ ವ್ಯವಸ್ಥಾಪಕ ನಿರ್ದೇಶಕ ದಿವಾಕರ ದಾಸ್ ರವರು ತಿಳಿಸಿದರು.
ಒತ್ತಡದಾಯಕ ಕಲಿಕೆಗಿಂತ ಆನಂದದಾಯಕ ಕಲಿಕೆಯು ಉತ್ತಮ ಸಾಧನೆ ಮಾಡಲು ಪೂರಕವಾಗುತ್ತದೆ ಎಂದು ಎಕ್ಸಲೆಂಟ್ ಸಿಬಿಎಸ್ಇ ಶಾಲೆಯ ಹಳೆಯ ವಿದ್ಯಾರ್ಥಿ ಶಿಶಿರ್ ಎಚ್. ಶೆಟ್ಟಿಯವರು ಅನಿಸಿಕೆ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎಕ್ಸಲೆಂಟ್ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ರವರು, ಪೋಷಕರ ಬೆಂಬಲದಿಂದ ಎಕ್ಸಲೆಂಟ್ ಸಂಸ್ಥೆ ಅಭಿವೃದ್ಧಿ ಪಥದತ್ತ ಸಾಗಲು ಸಹಾಯಕವಾಗಿದೆ ಎಂದು ಅಭಿಪ್ರಾಯಪಟ್ಟರು.ಸ್ವಯಂ ನಂಬಿಕೆ ಬದುಕಿಗೆ ಅತ್ಯಗತ್ಯ. ಮಿತಿಯನ್ನು ಗಮನಿಸದೆ ಸಾಧ್ಯತೆಯ ಕಡೆಗೆ ಗಮನಹರಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್ ರವರು ತಿಳಿಸಿದರು.
ಗಣ್ಯರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಸಿದರು. ಸಿಬಿಎಸ್ಇ ಪ್ರಾಂಶುಪಾಲ ಪ್ರಸಾದ್ ವಾರ್ಷಿಕ ವರದಿಯನ್ನು ಮಂಡಿಸಿದರು.
ಇದೇ ಸಂದರ್ಭದಲ್ಲಿ ಪ್ರಶಾಂತ್ ಡಿಸೋಜಾ, ದಿವಾಕರ್ ದಾಸ್, ಎಂ. ಗಣೇಶ್ ಕಾಮತ್ ಮತ್ತು ಕೆಸೆಟ್, ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಶೇಕಡಾ 99.96, ಜೆ ಇ ಇ ಅಡ್ವಾಸ್ಡ್ , ಕಾಮಿಡಿಕೆ ಪರೀಕ್ಷೆಯಲ್ಲಿ ಮೊದಲ ರಾಂಕ್ ಗಳಿಸಿ ಸಂಸ್ಥೆಗೆ ಹೆಮ್ಮೆಯನ್ನು ತಂದುಕೊಟ್ಟ ಎಕ್ಸಲೆಂಟ್ ಸಿಬಿಎಸ್ಇ ಶಾಲೆಯ ಹಳೆಯ ವಿದ್ಯಾರ್ಥಿ ಶ್ರೀ ಶಿಶಿರ್ ಎಚ್ ಶೆಟ್ಟಿ ಇವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
2024 – 25ನೇ ಸಿಬಿಎಸ್ಇ ಬೋರ್ಡ್ ನಡೆಸಿದ ವಾರ್ಷಿಕ ಪರೀಕ್ಷೆಯಲ್ಲಿ ಶಾಲೆಯಲ್ಲಿ ಅತ್ಯಧಿಕ ಅಂಕಗಳಿಸಿದ ರುಚಿರ ಕುಂದರ್ ಮತ್ತು ಆಂತಿಯ ಶೈನಾ ಮಿರಾಂಡ ರವರನ್ನು ಗೌರವಿಸಲಾಯಿತು. ಶೈಕ್ಷಣಿಕ ಸಾಧನೆ ಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದರು.
ಕಾರ್ಯಕ್ರಮಕ್ಕೆ ಪೋಷಕರು ಆಗಮಿಸಿ ಕಾರ್ಯಕ್ರಮದ ಮೇರುಗನ್ನು ಇಮ್ಮಡಿಗೊಳಿಸಿದರು. ಕಾರ್ಯಕ್ರಮದಲ್ಲಿ ಆಡಳಿತ ನಿರ್ದೇಶಕ ಡಾ. ಬಿ. ಪಿ ಸಂಪತ್ ಕುಮಾರ್, ಸಿಬಿಎಸ್ಇ ಪ್ರಾಂಶುಪಾಲ ಪ್ರಸಾದ್, ಹಳೆ ವಿದ್ಯಾರ್ಥಿ ಶಿಶಿರ್, ಶಾಲಾ ನಾಯಕ ಶ್ರೀಕರ್ ಮತ್ತು ನಾಯಕಿ ನಿರೀಕ್ಷ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕಿ ಶ್ರೀಮತಿ ಹರ್ಷಿತ ನಿರೂಪಿಸಿ, ಸಿ ಬಿ ಎಸ್ ಸಿ ಸಂಯೋಜಕಿ ಶ್ರೀಮತಿ ವಿಮಲ ಸ್ವಾಗತಿಸಿ, ವಿದ್ಯಾರ್ಥಿನಿ ನಿರೀಕ್ಷಾ ವಂದಿಸಿದರು.
Manglore
ಅಜ್ಜನ ಕೈಬಿಟ್ಟು ಓಡಿದ ಮಗು ಕಾರು ಡಿಕ್ಕಿಯಾಗಿ ದಾರುಣ ಸಾವು
ಬೆಳ್ತಂಗಡಿ : ಅಜ್ಜನೊಂದಿಗೆ ಕೈ ಹಿಡಿದು ತಿಂಡಿ ತರಲು ಬಂದಿದ್ದ ಮಗು ಹೆದ್ದಾರಿಯಲ್ಲಿ ಕೈ ಬಿಟ್ಟು ಓಡಿದ ಪರಿಣಾಮ ಕಾರೊಂದು ಡಿಕ್ಕಿಯಾಗಿ ಮೂರು ವರ್ಷದ ಮಗು ದಾರುಣ ಮೃತಪಟ್ಟ ಘಟನೆ ಚಾರ್ಮಾಡಿ ಹೆದ್ದಾರಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಬೀಟಿಗೆ ಎಂಬಲ್ಲಿ ಘಟನೆ ನಡೆದಿದೆ.
ಚಾರ್ಮಾಡಿ ಗ್ರಾಮ ಪಂಚಾಯತ್ ಸದಸ್ಯ ಬೀಟಿಗೆ ನಿವಾಸಿ ಸಿದ್ದಿಕ್ ಯು.ಪಿ ಅವರ ಮೂರು ವರ್ಷದ ಮಗು ಮುಹಮ್ಮದ್ ಹಝೀರಿನ್ ಮೃತಪಟ್ಟ ಮಗು.

ಮಗು ಅಜ್ಜನ ಜೊತೆಗೆ ಕೈಹಿಡಿದು ತನ್ನ ಮನೆ ಬಳಿಯ ಅಂಗಡಿಗೆ ತಿಂಡಿ ತರಲು ಬಂದಿತ್ತು. ಹಿಂದಿರುಗಿ ರಸ್ತೆ ದಾಟುತ್ತಿದ್ದಾಗ ಕೈಬಿಟ್ಟು ಓಡಿದೆ. ಈ ವೇಳೆ ವೇಗವಾಗಿ ಚಾರ್ಮಾಡಿ ಕಡೆಯಿಂದ ಬೆಳ್ತಂಗಡಿಗೆ ತೆರಳುತ್ತಿದ್ದ ಕಾರು ಮಗುವಿಗೆ ಢಿಕ್ಕಿ ಹೊಡೆದಿದೆ. ದೂರಕ್ಕೆ ಎಸೆಯಲ್ಪಟ್ಟ ಮಗುವನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮಂಗಳೂರಿನ ಆಸ್ಪತ್ರೆಗೆ ಒಯ್ಯುವಷ್ಟರಲ್ಲಿ ಮೃತಪಟ್ಟಿದೆ. ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿದ್ದು ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
-
State9 hours agoಡಿವೈಡರ್ಗೆ ಕಾರ್ ಡಿಕ್ಕಿ, ಹೊತ್ತಿ ಉರಿದ ಕಾರಿನೊಳಗೆ ಲೋಕಾಯುಕ್ತ ಇನ್ಸ್ಪೆಕ್ಟರ್ ಸಜೀವ ದಹನ
-
Hassan6 hours agoನಗರದ ಇಂಜಿನಿಯರ್ ಕಾಲೇಜು ಆವರಣದಲ್ಲಿ ಸರ್ಕಾರಿ ಸೇವೆಗಳ ಸಮರ್ಪಣ ಸಮಾವೇಶ
-
State22 hours agoSSLC ಪಾಸ್ ಆದವರಿಗೆ ಸರ್ಕಾರಿ ನೌಕರಿ ಚಾನ್ಸ್! ಸಂಪೂರ್ಣ ಮಾಹಿತಿ ಇಲ್ಲಿದೆ…
-
Chikmagalur24 hours agoವಿದ್ಯಾರ್ಥಿಗಳಿಗೆ ಉಚಿತ ಪಠ್ಯ ನೋಟ್ ಪುಸ್ತಕ ವಿತರಣೆ, ಮುಂದಿನ ಶೈಕ್ಷಣಿಕ ವರ್ಷದಿಂದ ಅನುಷ್ಠಾನ: ಮಧು ಬಂಗಾರಪ್ಪ
-
Mysore23 hours agoನಾಳೆಯಿಂದ ಸಿಗ್ಮಾ ಆಸ್ಪತ್ರೆಯಲ್ಲಿ ಉಚಿತ ಥೈರಾಯ್ಡ್ ತಪಾಸಣೆ
-
National22 hours agoಪಲಾಶ್ ಮುಚ್ಚಲ್ರೊಂದಿಗೆ ಮದುವೆ ಮುಂದೂಡಿದ ನಂತರ ಮೊದಲ ಪೋಸ್ಟ್ ಹಂಚಿಕೆಕೊಂಡ ಸ್ಮೃತಿ ಮಂದಾನ
-
Hassan8 hours agoಅಂಬೇಡ್ಕರ್ ತತ್ತ್ವ, ಸಿದ್ಧಾಂತಗಳು ಶಾಶ್ವತ: ಸಂಸದ ಶ್ರೇಯಸ್ ಪಟೇಲ್
-
Chikmagalur11 hours agoಬ್ಯಾನರ್ ತೆರವು ವಿಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತನ ಹ*ತ್ಯೆ
