Hassan
ಪ್ರಥಮ ಬಾರಿಗೆ ವಿದ್ಯುತ್ ಲೈನ್ ಮೆನ್ ದಿನಾಚರಣೆ

ಹಾಸನ: ಪ್ರಥಮ ಬಾರಿಗೆ ಸೆಸ್ಕಂ ಮತ್ತು ಕೆಪಿಟಿಸಿಎಲ್ ವಿದ್ಯುತ್ ಲೈನ್ ಮೆನ್ ಗಳ ದಿನಾಚರಣೆಯನ್ನು ನಗರದ ಹೊಸ ಬಸ್ ನಿಲ್ದಾಣ ಬಳಿ ಇರುವ ಕಛೇರಿ ಆವರಣದಲ್ಲಿ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಅಧ್ಯಕ್ಷತೆಯಲ್ಲಿ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಮೊದಲು ಇತ್ತಿಚಿಗೆ ಶ್ರೀನಗರದಲ್ಲಿ ವಿದ್ಯುತ್ ಕೆಲಸವನ್ನು ನಿರ್ವಹಿಸುವಾಗ ಸಾವನಪ್ಪಿದ ರಂಗನಾಥ್ ಅವರಿಗೆ ಶಾಂತಿಕೋರಿ ಎರಡು ನಿಮಿಷ ಮೌನ ಆಚರಿಸಿದರು. ನಂತರ ಶಾಸಕರು ಉದ್ದೇಶಿಸಿ ಮಾತನಾಡುತ್ತಾ, ಕೆಇಬಿ ಲೈನ್ ಮೆನ್ ಗಳಿಗಾಗಿ ದಿನಾಚರಣೆ ಹಮ್ಮಿಕೊಂಡಿರುವುದಕ್ಕೆ ಸರಕಾರಕ್ಕೆ ಅಭಿನಂದನೆ ಹಾಗೂ ಲೈನ್ ಮೆನ್ ಗಳಿಗೆ ಶುಭಾಶಯವನ್ನು ಮೊದಲು ತಿಳಿಸುತ್ತೇನೆ. ವಿದ್ಯುತ್ ಕೆಲಸ ಮಾಡುವಾಗ ತಮ್ಮ ಜೀವನವನ್ನೆ ಹೊತ್ತೆಯಾಗಿ ಇಟ್ಟು ಹಗಲು ರಾತ್ರಿ ಎನ್ನದೆ ಕೆಲಸ ನಿರ್ವಹಿಸಲಾಗುತ್ತದೆ. ಮಾಜಿ ಸಚಿವರಾದ ಹೆಚ್.ಡಿ. ರೇವಣ್ಣ ಅವರ ಕಾಲದಲ್ಲಿ ಹೆಚ್ಚು ಲೈನ್ಮೆನ್ ಗಳನ್ನು ನೇಮಕ ಮಾಡಿಕೊಂಡಿದ್ದರು. ಹಾಸನ ಜಿಲ್ಲೆಯ ಅನೇಕ ತಾಲೂಕಿನಲ್ಲಿ ಖಾಲಿ ಹುದ್ದೆಗಳಿದ್ದು, ಇದರಿಂದ ಈಗ ಕೆಲಸ ಮಾಡುತ್ತಿರುವವರಿಗೆ ಹೆಚ್ಚಿನ ಒತ್ತಡ ಉಂಟಾಗಿದೆ. ಖಾಲಿ ಇರುವ ಹುದ್ದೆಗಳ ನೇಮಕಕ್ಕೆ ನಾವು ಕೂಡ ಸರಕಾರಕ್ಕೆ ಮನವಿ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಭರ್ತಿ ಮಾಡುವ ಭರವಸೆ ನೀಡಿದ್ದಾರೆ ಎಂದರು. ಚಿಕ್ಕನಾಯಕನಹಳ್ಳಿ ನಿವಾಸಿ ರಂಗನಾಥ್ ಅವರು ಕರ್ತವ್ಯದಲ್ಲಿದ್ದಾಗ ಸಾವನಪ್ಪಿದ್ದು, ವಿದ್ಯುತ್ ಕೆಲಸ ನಿರ್ವಹಿಸುವಾಗ ಹೆಚ್ಚಿನ ಸುರಕ್ಷತೆ ಅಗತ್ಯ. ಅದರಲ್ಲಿಯೂ ಮೊಬೈಲ್ ಇರಬಹುದು, ಮನೆಯಲ್ಲಿ ಚಿಕ್ಕಪುಟ್ಟ ವ್ಯತ್ಯಾದ ಇರಬಹುದು ಅದನ್ನು ಮನಸ್ಸಿಗೆ ಇಟ್ಟುಕೊಂಡು ಕೆಲಸ ನಿರ್ವಹಿಸುವಾಗ ಅವಘಡಗಳು ಸಂಭವಿಸುತ್ತದೆ ಎಂದು ಕಿವಿಮಾತು ಹೇಳಿದರು. ಲೈನ್ ಮೆನ್ ವೃತ್ತಿ ಎಂದರೇ ಬಹಳ ಕಷ್ಟಕರವಾದ ಕೆಲಸವಾಗಿದೆ. ಏನೆ ಸಮಸ್ಯೆ ಇದ್ದರೂ ಎಲ್ಲಾವನ್ನು ಬದಿಗಿಟ್ಟು ಕೆಲಸ ನಿರ್ವಹಿಸಬೇಕಾಗಿದೆ. ಕೆಲಸದ ವೇಳೆ ಸೇಫ್ಟಿಯನ್ನು ಬಳಸಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಪ್ರತಿ ಇಲಾಖೆಗಳಲ್ಲೂ ಯೂನಿಯನ್ ಇರುತ್ತದೆ. ಆದರೇ ಸೆಸ್ಕಂ ಮತ್ತು ಕೆಪಿಟಿಸಿಎಲ್ ಇರುವಷ್ಟು ಒಗ್ಗಟ್ಟು ಬೇರೆ ಯಾವುದರಲ್ಲೂ ಇಲ್ಲ ಎಂದು ಶ್ಲಾಘನೆವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಇಲಾಖೆಯ ಡಬ್ಲೂಇ ಹೇಮರಾಜ್, ಅರ್ಜುನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
Hassan
ವಿದೇಶಗಳಿಗೆ ಮಾದರಿಯಾಗಬಲ್ಲ ಸಾಂಸ್ಕೃತಿಕ ಹಿರಿಮೆ ಭಾರತದ್ದು: ಸಿಮೆಂಟ್ ಮಂಜು

ವರದಿ: ಸತೀಶ್ ಚಿಕ್ಕಕಣಗಾಲು
ಆಲೂರು: ಜಗತ್ತಿನ ವಿವಿಧ ದೇಶಗಳಿಗೆ ಮಾದರಿಯಾಗಬಲ್ಲ ಸಾಂಸ್ಕೃತಿಕ ಹಿರಿಮೆ ಭಾರತದ್ದು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಐ.ಕ್ಯೂ.ಎ.ಸಿ. ಹಾಗೂ ಸಾಂಸ್ಕೃತಿಕ ವೇದಿಕೆ ಇವುಗಳ ವತಿಯಿಂದ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಎಂಬ ಶೀರ್ಷಿಕೆಯಡಿಯಲ್ಲಿ ಆಯೋಜಿಸಿದ್ದ ಜಾನಪದ ಉತ್ಸವ 2025ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತದ ಪ್ರತಿಯೊಂದು ಸಾಂಸ್ಕೃತಿಕ ಆಚರಣೆಗೂ ನಿರ್ದಿಷ್ಟ ಅರ್ಥವಿದೆ. ಈ ಕಾರಣಕ್ಕಾಗಿಯೇ ಭಾರತದ ಸಾಂಸ್ಕೃತಿಕ ಆಚರಣೆಗಳು ಉಡುಗೆ ತೊಡುಗೆಗಳು ಜಗತ್ತಿನ ವಿವಿಧ ದೇಶಗಳನ್ನು ಸೆಳೆದಿವೆ. ಪ್ರಾಚೀನ ಭಾರತದ ಇತಿಹಾಸ, ಕೌಟುಂಬಿಕ ಹಿನ್ನೆಲೆಗಳತ್ತ ದೃಷ್ಟಿ ಹಾಯಿಸಿ ದಾಗ ಇವು ಅವಿಭಕ್ತ ಕುಟುಂಬಗಳ ಹಿತಾಸಕ್ತಿಗೆ ಹೆಚ್ಚಿನ ಮಹತ್ವ ಮತ್ತು ರಕ್ಷಣೆ ನೀಡುತ್ತ ಬಂದಿರುವುದನ್ನು ನಾವು ಕಾಣಬಹುದು. ಅವಿಭಕ್ತ ಕುಟುಂಬಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಹೆಚ್ಚು ಸ್ವಾವ ಲಂಬಿಯಾಗಿದ್ದವು.ಆದರೆ ಇಂದು ಎಲ್ಲೋ ಮನಸ್ಸಿನ ಮೂಲೆಯಲ್ಲಿ ಅಡಗಿದ ಸಂಶಯ, ಅಹಂಕಾರ, ಅಸೂಯೆ ಎಂಬ ಮಾಯಾ ಜಾಲದಲ್ಲಿ ಸಿಲುಕಿ, ಒಟ್ಟಾಗಿ ಬಾಳಿ ಬದುಕ ಬೇಕಾದ ಅವಿಭಕ್ತ ಕುಟುಂಬ ಗಳು ಇಂದು ವಿಭಕ್ತವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಹಾಸನ ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷ ಡಾ.ಹಂಪನಹಳ್ಳಿ ತಿಮ್ಮೇಗೌಡ ಮಾತನಾಡಿ, ನಮ್ಮ ನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಿದ್ದ ಅಪ್ಪಟ ಗ್ರಾಮೀಣ ಕ್ರೀಡೆಗಳು ದಿನದಿಂದ ದಿನಕ್ಕೆ ನಶಿಸಿ ಹೋಗುತ್ತಿದ್ದು, ಮುಂದಿನ ದಿನಗಳಲ್ಲಿ ಇತಿಹಾಸದ ಪುಟವನ್ನು ಸೇರುವ ಎಲ್ಲಾ ಸ್ಪಷ್ಟ ಲಕ್ಷಣಗಳು ಕಂಡುಬರುತ್ತಿದೆ ಆದ್ದರಿಂದ ಗ್ರಾಮೀಣ ಸೊಗಡು, ಸಂಸ್ಕೃತಿಯನ್ನು ನಶಿಸಿ ಹೋಗಲು ಬಿಡಬಾರದು, ಹಳ್ಳಿಗಳಲ್ಲಿ ನಡೆಯುವ ಉತ್ಸವ, ಜಾತ್ರೋತ್ಸವ ಮುಂತಾದ ಸಂಸ್ಕೃತಿ ಗ್ರಾಮೀಣ ಭಾಗದ ಸೊತ್ತಾಗಿದೆ. ಗ್ರಾಮೀಣ ಭಾಗದಲ್ಲಿ ನಡೆಯುವ ಉತ್ಸವಗಳಿಗೆ ಹಲವಾರು ಅರ್ಥಗಳಿರುತ್ತದೆ. ಈ ದಿಸೆಯಲ್ಲಿ ನೂರಾರು ವರ್ಷಗಳಿಂದ ಹಿರಿಯರು ಹಾಕಿಕೊಟ್ಟ ಗ್ರಾಮೀಣ ಭಾಗದ ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ಬೆಳೆಸಿಕೊಂಡು ಹೋಗುವಂತೆ ಸಲಹೆ ನೀಡಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಆಲೂರು ಬಸ್ ನಿಲ್ದಾಣದಿಂದ ಕಾಲೇಜಿನವರೆಗೂ ಎತ್ತಿನಗಾಡಿಯ ಮೆರವಣಿಗೆ ನಡೆಯಿತು ಈ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿನಿಯರು ಕುಂಭಕಳಸ ಹೊತ್ತು ಸಾಗಿದರೆ ವಿದ್ಯಾರ್ಥಿಗಳು ಡೊಳ್ಳು ಕುಣಿತಕ್ಕೆ ಹೆಜ್ಜೆ ಹಾಕಿದರು, ವೇದಿಕೆ ಕಾರ್ಯಕ್ರಮದಲ್ಲಿ ಶಿಕ್ಷಕಿ ವೇದಾವತಿಯವರು ಜಾನಪದ ಹಾಡುಗಳನ್ನು ಹಾಡುವ ಮೂಲಕ ಎಲ್ಲರ ಗಮನ ಸೆಳೆದರು ನಂತರ ಇದೇ ಕಾಲೇಜಿನಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಬೇರೆಡೆಗೆ ವರ್ಗಾವಣೆಯಾದ ಉಪನ್ಯಾಸಹ ಮೋಹನ್ ಕುಮಾರ್ ಹಾಗೂ ಶಿವಪ್ರಸಾದ್ ಮತ್ತು ಕರವೇ ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ ರವರನ್ನು ಗೌರವಿಸಿ ಸನ್ಮಾನಿಸಲಾಯಿತು ನಂತರ ವಿಶ್ವ ಜಲದಿನ-2025″ ಅಂಗವಾಗಿ ಜಲ ಸಂರಕ್ಷಣೆ ಕುರಿತು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲ ಟಿ.ಪಿ ಪುಟ್ಟರಾಜು, ಉಪನ್ಯಾಸಕರಾದ ರಾಘವೇಂದ್ರ, ರಮೇಶ್, ವೆಂಕಟೇಶ್, ಪುರುಷೋತ್ತಮ್, ಮಾರುತಿ, ನಟರಾಜ್ ಗ್ರಾಮ ಪಂಚಾಯತಿ ಸದಸ್ಯರಾದ ನಂಜುಂಡಪ್ಪ, ಮೋಹನ್ ಕುಮಾರ್, ಬಿಜೆಪಿ ಮುಖಂಡರಾದ ನಂಜೇಶಣ್ಣ, ಹರೀಶ್, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಬಾಲಲೋಚನ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Hassan
ಪೊಲೀಸ್ ಇಲಾಖೆ ಸರ್ಕಾರದ ಕೈಗೊಂಬೆ: ಸೂರಜ್ ರೇವಣ್ಣ ಕಿಡಿ

ಹಾಸನ: ನಾನೊಬ್ಬ ಎಂಎಲ್‌ಸಿ ಆಗಿ ಪೊಲೀಸ್ ಕಛೇರಿಗೆ ಖುದ್ದಾಗಿ ಹೋಗಿ ಎಸ್‌ಪಿಗೆ ಕಂಪ್ಲೇಂಟ್ ಕೊಟ್ಟರೂ ಸ್ವೀಕರಿಸುವುದಿಲ್ಲ. ಒಂದು ದಿನವಾದರೂ ಎಫ್‌ಐಆರ್ ದಾಖಲಿಸುವುದಿಲ್ಲ. ನನಗೇ ಅನ್ಯಾಯವಾಗಿರುವಾಗ ಜಿಲ್ಲೆಯ ಜನರ ಕಥೆ ಏನು? ಇವತ್ತು ಪೊಲೀಸ್ ಇಲಾಖೆ ಉಳಿದೇ ಇಲ್ಲ, ಸರ್ಕಾರದ ಕೈಗೊಂಬೆಯಾಗಿ ಮಾರ್ಪಟ್ಟಿದೆ ಎಂದು ಎಸ್‌ಪಿ ಮಹಮದ್ ಸುಜೀತಾ ಅವರ ವಿರುದ್ಧ ವಿಧಾನ ಪರಿಷತ್ತು ಸದಸ್ಯ ಸೂರಜ್ ರೇವಣ್ಣ ಅವರು ಏಕವಚನದಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡರು.
ತಾಲೂಕಿನ ಗೊರೂರು ಪ್ರವಾಸಿ ಮಂದಿರದಲ್ಲಿ ಬಜೆಟ್ ಸಭೆಯ ನಂತರ ಮಾಧ್ಯಮದೊಂದಿಗೆ ಮಾತನಾಡಿ, ಹಾಸನ ಜಿಲ್ಲೆಯ ಪೊಲೀಸ್ ಇಲಾಖೆಯ ಕಾರ್ಯವೈಖರಿಂ ವಿರುದ್ಧ ಸಿಡಿಮಿಡಿಗೊಂಡ ಸೂರಜ್ ರೇವಣ್ಣ, ನಾನೊಬ್ಬ ಎಂಎಲ್‌ಸಿ ಆಗಿದ್ದು, ನಾನೆ ಹೋಗಿ ಎಸ್‌ಪಿಗೆ ದೂರು ನೀಡಿದರೂ ಸ್ವೀಕರಿಸುವುದಿಲ್ಲ. ಒಂದು ದಿನವಾದರೂ ಎಫ್‌ಐಆರ್ ದಾಖಲಿಸುವುದಿಲ್ಲ. ನನಗೇ ಅನ್ಯಾಯವಾದರೇ ಜಿಲ್ಲೆಯ ಜನರ ಕಥೆ ಏನು? ದೂರು ದಾಖಲಿಸಲು ಬೇಕಾಗಿಯೇ ಒಂದು ದಿನ ತಡ ಮಾಡಿದರು. ಇವತ್ತು ಪೊಲೀಸ್ ಇಲಾಖೆ ಉಳಿದೇ ಇಲ್ಲ, ಸರ್ಕಾರದ ಕೈಗೊಂಬೆಯಾಗಿ ಮಾರ್ಪಟ್ಟಿದೆ ಎಂದು ಗಂಭೀರವಾಗಿ ಆರೋಪಿಸಿದರು. ಜೊತೆಗೆ ಹಾಸನ ಜಿಲ್ಲೆಯ ಎಸ್‌ಪಿ ಮಹಮದ್ ಸುಜೀತಾ ಅವರ ವಿರುದ್ಧವೂ ಏಕವಚನದಲ್ಲಿ ತೀವ್ರ ವಾಗ್ದಾಳಿ ನಡೆಸಿದ ಅವರು, ಜಿಲ್ಲೆಯಲ್ಲಿ ನ್ಯಾಯ ಒದಗಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಆಕ್ಷೇಪಿಸಿದರು. ಇಂತಹ ರಾಜಕೀಯ ತಂತ್ರಗಾರಿಕೆ ಮತ್ತು ವ್ಯವಸ್ಥೆಯ ದುರುಪಯೋಗದಿಂದ ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆ ಎಂದು ಅಸಮಧಾನವ್ಯಕ್ತಪಡಿಸಿದರು.
ರಾಜಕೀಯದಲ್ಲಿ ಪಾರದರ್ಶಕತೆ ಮತ್ತು ಅಭಿವೃದ್ಧಿಯ ಉದ್ದೇಶ ಇರಬೇಕೇ ಹೊರತು, ಕೀಳುಮಟ್ಟದ ತಂತ್ರಗಳಿಗೆ ಮೊರೆ ಹೋಗಬಾರದು ಎಂದರು. ನಾವು ಪಾರದರ್ಶಕವಾದ ರಾಜಕಾರಣ ಮಾಡಬೇಕು. ನಮ್ಮ ಜಿಲ್ಲೆ ತಾಲೂಕು ಮತ್ತು ರಾಜ್ಯವನ್ನು ಅಭಿವೃದ್ಧಿ ಮಾಡುವ ಉದ್ದೇಶ ನಮ್ಮದಾಗಿರಬೇಕು. ಜನ ಏಕೆ ನಮ್ಮನ್ನು ಆಯ್ಕೆ ಮಾಡಿದ್ದಾರೆ ಎಂಬುದನ್ನು ನಾವು ನೆನಪಿಸಿಕೊಳ್ಳಬೇಕು. ಆದರೆ ಇಂದು ರಾಜಕಾರಣದಲ್ಲಿ ಅವರವರ ವೈಯಕ್ತಿಕ ವಿಚಾರಗಳನ್ನು ಬಳಸಿಕೊಂಡು ಹನಿಟ್ರ್ಯಾಪ್ ಮಾಡುವುದು, ತಾವು ಸಿಎಂ ಆಗಲು ಇನ್ನೊಬ್ಬ ರಾಜಕಾರಣಿಗೆ ಕೆಟ್ಟ ಹೆಸರು ತರುವ ರೀತಿ ತಂತ್ರಗಾರಿಕೆ ಮಾಡುವುದು, ಪರೋಕ್ಷವಾಗಿ ಬ್ಲಾಕ್‌ಮೇಲ್ ಮೂಲಕ ಕಂಟ್ರೋಲ್‌ನಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದಲ್ಲ ಎಂದರು. ರಾಜ್ಯದ ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಎಚ್ಚರಿಸಿದ ಅವರು, ಇಂತಹ ಕೆಟ್ಟ ವ್ಯವಸ್ಥೆಯಿಂದ ಕರ್ನಾಟಕಕ್ಕೆ ದುಸ್ಥಿತಿ ಬಂದಿದೆ. ಅವರವರ ಪಕ್ಷದವರೇ ಕಿತ್ತಾಡಿಕೊಳ್ಳುತ್ತಿದ್ದಾರೆ. ರಾಜಣ್ಣ ಅವರು ಯಾವ ಸಚಿವರನ್ನು ಭೇಟಿಯಾದರು ಎಂದು ಪ್ರಶ್ನಿಸಿದರು ಯಾವ ಹಿರಿಯ ಮುಖಂಡರನ್ನು ಭೇಟಿಯಾದರು ಎಂಬುದನ್ನು ಮಾಧ್ಯಮಗಳಲ್ಲಿ ತೋರಿಸುತ್ತಿದ್ದೀರಿ. ರಾಜಕಾರಣವನ್ನು ನೇರವಾಗಿ ಮಾಡಬೇಕು. ೪೮ ಮಂದಿ ಹನಿಟ್ರ್ಯಾಪ್ ಮಾಡಿದ್ದಾರೆ ಎನ್ನುತ್ತಾರೆ. ಇದೆಲ್ಲ ರಾಜಕೀಯದಲ್ಲಿ ಒಳ್ಳೆಯ ಸಂಪ್ರದಾಯವಲ್ಲ ಎಂದು ಬೇಸರವ್ಯಕ್ತಪಡಸಿದರು. ಇದರಿಂದ ಯಾರಿಗೇ ಆಗಲಿ ಕೆಟ್ಟ ಹೆಸರು ಬರಲಿದೆ. ರಾಜ್ಯಕ್ಕೂ ಕೆಟ್ಟ ಹೆಸರು ಬರಲಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಯಾರೋ ಒಬ್ಬರು ಸಿಎಂ ಆಗಲು ಹೀಗೆ ಮಾಡಿದ್ದಾರ ಎಂಬ ಪ್ರಶ್ನೆಗೆ, ಅದು ನನಗೆ ಗೊತ್ತಿಲ್ಲ. ಆದರೆ ಅವರ ಪಕ್ಷದಲ್ಲೇ ಅವರು, ಇವರು ಅಂತ ಆರೋಪ-ಪ್ರತ್ಯಾರೋಪ ನಡೆಯುತ್ತಿವೆ ಎಂದರು. ಇದೇ ವೇಳೆ ಹಾಸನ ಜಿಪಂನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ ಸೂರಜ್, ಚುನಾಯಿತ ಪ್ರತಿನಿಧಿಗಳು ಇಲ್ಲದ ಕಾರಣ ಹಾಲಿ ಸಿಇಒ ಅವರು ಪ್ರತಿ ಕಾಮಗಾರಿಗೂ ಇಂತಿಷ್ಟು ಪರ್ಸಂಟೇಜ್ ಪಡೆಯುತ್ತಿದ್ದಾರೆ ಎಂದು ನೇರವಾಗಿ ದೂರಿದರು. ಈ ಬಗ್ಗೆ ನಮ್ಮ ಜಿಲ್ಲೆಯ ಶಾಸಕರಾದ ಸಿಮೆಂಟ್ ಮಂಜು, ಹೆಚ್.ಕೆ.ಸುರೇಶ್, ಹೆಚ್.ಡಿ.ರೇವಣ್ಣ ಮೊದಲಾದವರು ಅಧಿವೇಶನದಲ್ಲೇ ಚರ್ಚೆ ಮಾಡಿದ್ದಾರೆ. ಜಿಪಂನಲ್ಲಿ ನರೇಗಾ ಸೇರಿದಂತೆ ಯಾವುದೂ ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂದು ಬೇಸರ ಹೊರ ಹಾಕಿದರು. ಜಿಲ್ಲೆಯ ಗ್ರಾಪಂ, ತಾಪಂ ನಿಂದಲೂ ಅನೇಕ ಕಾಮಗಾರಿಗಳಿಗೆ ಪರ್ಸಂಟೇಜ್ ಕೊಡಬೇಕಿದೆ. ಈ ಬಗ್ಗೆ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೂ ಮನವಿ ಮಾಡುತ್ತೇನೆ. ಭ್ರಷ್ಟಾಚಾರ ಮಿತಿ ಮೀರಲು ಕಾರಣರಾಗಿರುವ ಸಿಇಒ ಅವರನ್ನು ವರ್ಗ ಮಾಡಬೇಕು ಎಂದು ಮನವಿ ಮಾಡಿದರು. ಕೇಂದ್ರ ಸರ್ಕಾರದ ಆರ್‌ಸಿಹೆಚ್ ಅನುದಾನದಡಿ ಜಿಲ್ಲೆಗೆ ಬಂದಿದ್ದ ೫ ಕೋಟಿ ಹಣ ವಿನಿಯೋಗದಲ್ಲೂ ಸಾಕಷ್ಟು ಅವ್ಯವಹಾರ ನಡೆದಿದ್ದು, ಈ ಬಗ್ಗೆ ಸಂಬಂಧಪಟ್ಟವರು ಶ್ವೇತಪತ್ರ ಹೊರಡಿಸಿ, ಲೆಕ್ಕಪತ್ರ ನೀಡಬೇಕು ಎಂದು ಒತ್ತಾಯಿಸಿದರು. ಎಲ್ಲ ಪ್ರಯತ್ನ: ಹಾಸನ ವಿವಿಯನ್ನು ಉಳಿಸಿಕೊಳ್ಳಲು ಎಲ್ಲ ರೀತಿಯ ಹೋರಾಟ ಮಾಡುತ್ತಿದ್ದೇವೆ. ಬೇರೆ ಜಿಲ್ಲೆಗಳ ವಿವಿಗಳಿಗೆ ಹೋಲಿಸಿದರೆ ಆರ್ಥಿಕ ಸ್ಥಿತಿಗತಿ ಸೇರಿದಂತೆ ಎಲ್ಲ ರೀತಿಯಲ್ಲೂ ಹಾಸನ ವಿವಿ ಉತ್ತಮವಾಗಿದೆ. ಸರ್ಕಾರದಿಂದ ಅಲ್ಲದೆ ಆಂತರಿಕವಾಗಿ ವಾರ್ಷಿಕ ೧೦ ಕೋಟಿ ಆದಾಯ ಬರುತ್ತಿದೆ. ವಿವಿ ಉಳಿಸುವ ಸಂಬಂಧ ಉನ್ನತ ಶಿಕ್ಷಣ ಸಚಿವರು ಹಾಗೂ ಕೇಂದ್ರ ಸರ್ಕಾರಕ್ಕೂ ಮನವಿ ಮಾಡಿದ್ದೇವೆ. ಎಲ್ಲರಿಂದಲೂ ನಮ್ಮ ಮನವಿಗೆ ಸ್ಪಂದನೆ ಸಿಗುವ ವಿಶ್ವಾಸ ಇದೆ ಎಂದು ಹೇಳಿದರು.
Hassan
ಏ.13 ರಂದು ಬ್ರಾಹ್ಮಣ ಮಹಾಸಭಾದ ಚುನಾವಣೆ: ಹೆಚ್.ಎಸ್. ಮಂಜುನಾಥ್ ಮೂರ್ತಿ

ಹಾಸನ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ೨೦೨೫-೨೦೩೦ರ ಅವಧಿಗೆ ಅಧ್ಯಕ್ಷೀಯ ಹಾಗೂ ಜಿಲ್ಲಾ ಪ್ರತಿನಿಧಿ ಚುನಾವಣೆ ಏ.13 ರಂದು ನಿಗದಿಯಾಗಿದೆ ಎಂದು ಹಾಸನ ಜಿಲ್ಲಾ ಬ್ರಾಹ್ಮಣ ಸಭಾದ ಅಧ್ಯಕ್ಷ ಹೆಚ್.ಎಸ್. ಮಂಜುನಾಥ್ ಮೂರ್ತಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಅಧ್ಯಕ್ಷೀಯ ಚುನಾವಣೆಗೆ ಈಗಾಗಲೇ ಎರಡು ಬಣಗಳ ಚುನಾವಣಾ ಆಕಾಂಕ್ಷಿಗಳು ಬಂದು ಪ್ರಚಾರ ನಡೆಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾ ಬ್ರಾಹ್ಮಣ ಸಭಾ, ಜಿಲ್ಲಾ ಪ್ರತಿನಿಧಿ ಆಯ್ಕೆ ಸಂಬಂಧ, ಎಲ್ಲಾ ತಾಲ್ಲೂಕಿನ ಪದಾಧಿಕಾರಿಗಳ ಹಾಗೂ ಉಪಪಂಗಡದ ಮುಖಂಡರೊಂದಿಗೆ ಸಭೆ ನಡೆಸಿ ಪಿ.ಎಸ್. ವೆಂಕಟೇಶ್ ಇವರನ್ನು ಜಿಲ್ಲಾ ಪ್ರತಿನಿಧಿ ಅಭ್ಯರ್ಥಿಯಾಗಿದ್ದಾರೆ ಎಂದರು.
ಜಿಲ್ಲಾ ಬ್ರಾಹ್ಮಣ ಸಭಾ ಹಾಗೂ ಉಪಪಂಗಡಗಳು ಮತ್ತು ತಾಲೂಕು ಸಂಘಗಳ ಮುಖಂಡರು ಯಾವುದೇ ಬಣದ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುವುದಿಲ್ಲವೆಂದು ನಿರ್ಣಯಿಸಿ, ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷರಾದ ಹೆಚ್. ಎಸ್. ಮಂಜುನಾಥ ಮೂರ್ತಿ ನೇತೃತ್ವದಲ್ಲಿ ತೀರ್ಮಾನಿಸಲಾಗಿದೆ. ಮುಂದೆ ರಾಜ್ಯ ಸಮಿತಿಗೆ ಮಾತ್ರ ಚುನಾವಣೆ ನಡೆಯಬೇಕಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹೊಯ್ಸಳ ಕರ್ನಾಟಕ ಬ್ರಾಹ್ಮಣ ಸಭಾದ ಅಧ್ಯಕ್ಷ ವೆಂಕಟೇಶ್ ಮೂರ್ತಿ, ಬಬ್ಬರೂ ಕಮ್ಮೆ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ನಾಗರಾಜು, ನಗರ ಬ್ರಾಹ್ಮಣ ಸಭಾ ಅಧ್ಯಕ್ಷ ವೆಂಕಟೇಶ್, ಮಾದವ ಸಂಘದ ಅಧ್ಯಕ್ಷ ಕೆ.ಪಿ.ಎಸ್. ಪ್ರಮೋದ್, ಸೀತಾರಾಮಾಂಜನೇಯ ದೇವಸ್ಥಾನದ ಅಧ್ಯಕ್ಷ ಶ್ರೀಕಾಂತ್ ಇತರರು ಉಪಸ್ಥಿತರಿದ್ದರು.
-
Kodagu22 hours ago
ಬೇಳೂರು ಬಾಣೆಯಲ್ಲಿ ಸ್ಟೇರಿಂಗ್ ಲಾಕ್ : ಕಾರು ಪಲ್ಟಿ
-
Kodagu18 hours ago
ಕೊಡಗಿನ ಭರವಸೆಯ ಪ್ರತಿಭೆ ವರ್ತ ಕಾಳಿ ಕಿರುಚಿತ್ರದ ನಿರ್ದೇಶಕ: ಕೃತಾರ್ಥ ಮಂಡೆಕುಟ್ಟಂಡ
-
State14 hours ago
ಬಿಜೆಪಿ ಶೋಕಾಸ್ ನೋಟಿಸ್ ಕುರಿತು ಶಾಸಕ ಎಸ್ಟಿಎಸ್ ಫಸ್ಟ್ ರಿಯಾಕ್ಷನ್
-
Mysore18 hours ago
ಎಲ್ಲಾ ಪಕ್ಷದವರ ಮೇಲೂ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ: ಯತೀಂದ್ರ ಸಿದ್ದರಾಮಯ್ಯ
-
Mandya13 hours ago
ಎಂ.ಕೆ.ಸೋಮಶೇಖರ್ಗೆ ರಾಜ್ಯಮಟ್ಟದ ಛಾಯಗ್ರಾಹಕ ಹಾಗೂ ಕಲಾವಿದ ಪ್ರಶಸ್ತಿ ಪ್ರಧಾನ
-
State11 hours ago
ಬಿಜೆಪಿಯಿಂದ ಆರು ವರ್ಷಗಳ ಕಾಲ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ
-
Mandya17 hours ago
ಭೂ ದಾಖಲೆ ಹೊಂದಿರುವವರನ್ನು ಓಕ್ಕಲೆಬ್ಬಿಸಬೇಡಿ : ಎನ್ ಚೆಲುವರಾಯಸ್ವಾಮಿ
-
Hassan15 hours ago
1 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನರೆವೇರಿಸಿದ ಸ್ವರೂಪ್ ಪ್ರಕಾಶ್