Location
ಲಿಂಗಾಯಿತರಿಗೆ ಅಧಿಕಾರ ತಪ್ಪಿಸಿ ಅನ್ಯಾಯ ಮಾಡಿದ್ದ ಎಚ್ ಡಿ ಕುಮಾರಸ್ವಾಮಿ : ಸಚಿವ ಎಂ.ಬಿ ಪಾಟೀಲ್*

*ಲಿಂಗಾಯಿತರಿಗೆ ಅಧಿಕಾರ ತಪ್ಪಿಸಿ ಅನ್ಯಾಯ ಮಾಡಿದ್ದ ಎಚ್ ಡಿ ಕುಮಾರಸ್ವಾಮಿ : ಸಚಿವ ಎಂ.ಬಿ ಪಾಟೀಲ್*
ಮಂಡ್ಯ :- ಬಿಜೆಪಿ – ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವೀರಶೈವ ಲಿಂಗಾಯತ ಸಮುದಾಯಕ್ಕೆ ರಾಜಕೀಯ ಕ್ಷೇತ್ರದಲ್ಲಿ ಉನ್ನತ ಅಧಿಕಾರ ತಪ್ಪಿಸುವ ಮೂಲಕ ಬಹುದೊಡ್ಡ ಅನ್ಯಾಯ ಮಾಡಿದ್ದನ್ನು ಸಮುದಾಯದ ಜನತೆ ಮರೆಯಬಾರದು ಎಂದು ಸಚಿವ ಎಂ ಬಿ ಪಾಟೀಲ್ ತಿಳಿಸಿದರು.
ನಗರದ ಕನಕ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ವೀರಶೈವ – ಲಿಂಗಾಯಿತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, 2008 ರಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚನೆ ಮಾಡಿದವು.
ಮೊದಲ ಅವಧಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿ ಅಧಿಕಾರ ಅನುಭವಿಸಿದರು, ಒಪ್ಪಂದದಂತೆ ಇನ್ನುಳಿದ 20 ತಿಂಗಳ ಅವಧಿಗೆ ಲಿಂಗಾಯಿತ ಸಮುದಾಯದ ಬಿ.ಎಸ್.ಯಡಿಯೂರಪ್ಪರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕಾಗಿತ್ತು, ಆದರೆ ಯಡಿಯೂರಪ್ಪರಿಗೆ ಮುಖ್ಯಮಂತ್ರಿ ಸ್ಥಾನಮಾನ ಕಲ್ಪಿಸದೆ ಸಮುದಾಯಕ್ಕೆ ದೊಡ್ಡ ಅನ್ಯಾಯ ಮಾಡಿದ್ದರು ಎಂದು ಹೇಳಿದರು.
ಬಿಜೆಪಿ ಪಕ್ಷ ಸಮಾನತೆಯ ಹರಿಕಾರ ಬಸವಣ್ಣನವರ ತತ್ವ ಸಿದ್ಧಾಂತವನ್ನು ಎಂದಿಗೂ ಒಪ್ಪುವುದಿಲ್ಲ, ಅಷ್ಟೇ ಅಲ್ಲದೆ ಬಸವಣ್ಣರನ್ನ ಸಾಂಸ್ಕೃತಿಕ ನಾಯಕ ಎಂಬುವುದನ್ನು ಒಪ್ಪುವುದಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರ ಸಂವಿಧಾನ ಮತ್ತು ಬಸವಣ್ಣನವರ ಸಿದ್ಧಾಂತದ ಮೇಲೆ ಹೆಚ್ಚಿನ ನಂಬಿಕೆ ಇಟ್ಟಿದೆ ಎಂದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಹೀನಾಯವಾಗಿ ಸೋತ ಹಿನ್ನೆಲೆಯಲ್ಲಿ ಬಿ.ಎಸ್.ಯಡಿಯೂರಪ್ಪರ ಪುತ್ರ ಬಿ.ವೈ.ವಿಜಯೇಂದ್ರರನ್ನ ಪಕ್ಷದ ರಾಜ್ಯಾಧ್ಯಕ್ಷ ರನ್ನಾಗಿ ಮಾಡಲಾಗಿದೆ.
ವೀರಶೈವ – ಲಿಂಗಾಯಿತ ಸಮುದಾಯ ಓಲೈಕೆ ಮಾಡಲು ಇಂತಹ ತಂತ್ರ ಮಾಡಿರುವ ಬಿಜೆಪಿ ವರಿಷ್ಠರು, ಕೇವಲ 3 ವರ್ಷ ಮಾತ್ರ ರಾಜ್ಯಾಧ್ಯಕ್ಷ ಎಂದು ವಿಜಯೇಂದ್ರ ಅವರಿಗೆ ನಿಗದಿ ಮಾಡಿದ್ದಾರೆ. ಅಷ್ಟರೊಳಗೆ ಎಲ್ಲಾ ಚುನಾವಣೆ ಮುಗಿಯುತ್ತದೆ. ಆಮೇಲೆ ಇನ್ನೇಕೆ ಇವರು ಎಂಬ ಭಾವನೆ ಇಟ್ಟುಕೊಂಡಿದೆ. ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಪಕ್ಷದ ಅಧ್ಯಕ್ಷ ಸ್ಥಾನವು ಲಿಂಗಾಯತ ಸಮುದಾಯದ ಕೈತಪ್ಪಲಿದ್ದು, ಆದರೆ ಕಾಂಗ್ರೆಸ್ ಪಕ್ಷ ಸಮುದಾಯದ ಹೆಚ್ಚಿನವರನ್ನು ಮುಖ್ಯಮಂತ್ರಿಯಾಗಲು ಅವಕಾಶ ಕಲ್ಪಿಸಿದೆ ಎಂದರು.
ಕಾಂಗ್ರೆಸ್ ಪಕ್ಷ ಜನರ ಬದುಕು ಕಟ್ಟುವ ಕೆಲಸ ಮಾಡುತ್ತಿದ್ದರೆ, ಬಿಜೆಪಿ ಪಕ್ಷ ಜನರ ಭಾವನೆ ಕೆರಳಿಸುವ ಕೆಲಸ ಮಾಡುತ್ತಿದೆ. ದೇಶದಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನೆಸುತ್ತಾರೆ, ನಿಜವಾಗಲೂ ದೇಶ ಕಟ್ಟಿದ್ದು ಕಾಂಗ್ರೆಸ್ ನಾಯಕರು. ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಟ್ಟದ್ದು ಕಾಂಗ್ರೆಸ್. ದೇಶವನ್ನಾಳಿದ ಕಾಂಗ್ರೆಸ್ ಸಾವಿರಾರು ಅಣೆಕಟ್ಟು, ಕೈಗಾರಿಕೆ ನಿರ್ಮಾಣ ಮಾಡಿದೆ. ಆಹಾರ ಉತ್ಪಾದನೆಯಲ್ಲಿ ಕ್ರಾಂತಿ ಮಾಡಿತು. ಆದರೆ ಹಳೆ ಮೈಸೂರು ಭಾಗದಲ್ಲಿ ಒಂದು ಅಣೆಕಟ್ಟು ನಿರ್ಮಾಣ ಮಾಡದ ಬಿಜೆಪಿ ಅಭಿವೃದ್ಧಿ ಮಂತ್ರ ಜಪಿಸುತ್ತಿದೆ.
ನರೇಂದ್ರ ಮೋದಿ ನೇತೃತ್ವದ ಸರಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನರ ಬದುಕನ್ನು ಸಂಕಷ್ಟಕ್ಕೆ ದೂಡಿದೆ. ಉದ್ಯೋಗ ಸೃಷ್ಟಿ ಇಲ್ಲದೆ ನಿರುದ್ಯೋಗ ತಾಂಡವಡುತ್ತಿದೆ. ನೋಟ್ ಬ್ಯಾನ್ ಮಾಡಿ ತಪ್ಪು ಮಾಡಿದೆ, ಇದೀಗ ಚುನಾವಣಾ ಬಾಂಡ್ ಹಗರಣ ದೊಡ್ಡ ಮಟ್ಟದ್ದಾಗಿದ್ದು, ಕೇಂದ್ರ ತನಿಕಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಹೆದರಿಸಿ ಬೆದರಿಸಿ ಚುನಾವಣಾ ಬಾಂಡ್ ನೆಪದಲ್ಲಿ ಸುಲಿಗೆ ಮಾಡಲಾಗಿದೆ.
ಈ ಬಗ್ಗೆ ತನಿಖೆ ನಡೆದರೆ ನರೇಂದ್ರ ಮೋದಿ ಕಥೆ ಏನಾಗಲಿದೆ. ಆದರೂ ಸಹ ನರೇಂದ್ರ ಮೋದಿ ಅಪ್ಪಟ ಸುಳ್ಳಿನ ನಾಟಕ ಮುಂದುವರೆಸಿದ್ದಾರೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳಿಂದ ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ. ಮಹಿಳೆಯರಿಗೆ ಹೆಚ್ಚಿನ ಸವಲತ್ತು ದೊರಕಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕೇಂದ್ರದಿಂದ ಹೆಚ್ಚಿನ ಗ್ಯಾರಂಟಿ ಲಾಭ ಮಹಿಳೆಯರು, ರೈತರು, ಕಾರ್ಮಿಕರಿಗೆ ಸಿಗಲಿದೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡರಿಗೆ ಮತ ನೀಡುವ ಮೂಲಕ ಸಮುದಾಯದ ಜನತೆ ಗೆಲ್ಲಿಸಿ ಕೊಡಬೇಕು. ಮುಂದಿನ ದಿನಗಳಲ್ಲಿ ವೀರಶೈವ ಲಿಂಗಾಯತ ಸಮುದಾಯದ ಜನತೆಗೆ ರಾಜಕೀಯ ಸ್ಥಾನಮಾನ ದೊರಕಿಸಿಕೊಡಲು ಬದ್ಧನಾಗಿರುವುದಾಗಿ ಅವರು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ಮಾತನಾಡಿ, ಜಿಲ್ಲೆಯ ಜನತೆ ಅವಕಾಶ ಕೊಟ್ಟಾಗ ಏನು ಮಾಡದೆ ಸಂಸದರಾಗಿ ಎಚ್.ಡಿ.ಕುಮಾರಸ್ವಾಮಿ ಏನು ಮಾಡಲು ಸಾಧ್ಯ. ಅವರ ತಂದೆಗಿಂತಲೂ ದೊಡ್ಡ ನಾಯಕರಾಗಲು ಸಾಧ್ಯವೇ. ಕಾವೇರಿ ವಿಚಾರದಲ್ಲಿ ಎಚ್.ಡಿ.ದೇವೇಗೌಡ ಪ್ರಧಾನಿಯಾಗಿದ್ದಾಗ ಏನು ಮಾಡಲಿಲ್ಲ. ಈಗ ಕುಮಾರಸ್ವಾಮಿ ಏನು ಮಾಡಲಿದ್ದಾರೆ. ಇಷ್ಟೊಂದು ಸುಳ್ಳು ಹೇಳುವ ಅವಶ್ಯಕತೆ ಇದೆಯಾ ಎಂದು ಪ್ರಶ್ನಿಸಿದರು.
ಬಿ.ಎಸ್.ಯಡಿಯೂರಪ್ಪರಿಗೆ ಮುಖ್ಯಮಂತ್ರಿ ಹುದ್ದೆಯ ಅಧಿಕಾರ ತಪ್ಪಿಸಿದ ಎಚ್.ಡಿ.ಕುಮಾರಸ್ವಾಮಿ, ಅನಂತರವೂ ಸಹ ಅವರ ವಿರುದ್ಧ ವೇಸದ ರಾಜಕಾರಣ ಮಾಡುತ್ತಾ ಯಡಿಯೂರಪ್ಪರನ್ನ ಜೈಲಿಗೆ ಕಳುಹಿಸಲು ಸತತವಾಗಿ ಮುಂದಾದರು. ಅಷ್ಟರ ಮಟ್ಟಿಗೆ ಯಡಿಯೂರಪ್ಪರಿಗೆ ಕಿರುಕುಳ ನೀಡಿದ್ದನ್ನು ಜನತೆ ಮರೆಯುವುದಿಲ್ಲ ಎಂದರು.
ಮಂಡ್ಯ ಜಿಲ್ಲೆಗೆ ನೂರಾರು ವರ್ಷ ಮರೆಯದಿರುವ ಯಾವುದಾದರೂ ಕೊಡುಗೆಯನ್ನು ಎಚ್.ಡಿ.ಕುಮಾರಸ್ವಾಮಿ ನೀಡಿದ್ದಾರಾ..? ನಿಜವಾಗಲೂ ಅವರ ಕೊಡುಗೆ ಬಿಗ್ ಝೀರೋ ಎಂದ ಅವರು ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಿದ್ದೇನೆ ಅವಕಾಶ ಕೊಡಿ ಎಂದು ಮನವಿ ಮಾಡಬೇಕು.
ಆದರೆ ಇಲ್ಲ ಸಲ್ಲದ ಸುಳ್ಳು ಭರವಸೆಗಳನ್ನು ಹೇಳಿದರೆ ಜನರು ನಂಬಲು ಸಾಧ್ಯವಿಲ್ಲ ಎಂದು ತಿಳಿಸಿದರು.
ವೀರಶೈವ – ಲಿಂಗಾಯಿತ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷ ಪ್ರಾಮುಖ್ಯತೆ ನೀಡಿದ್ದು, ಸಮುದಾಯದ ಜನರ ಮೇಲೆ ವಿಶ್ವಾಸದಿಂದ ಮುನ್ನಡೆಯುತ್ತಿದೆ. ನಿಮ್ಮಗಳ ಆಶೀರ್ವಾದ ಇರಲಿ ಎಂದು ಮನವಿ ಮಾಡಿದರು.
ವೀರಶೈವ ಲಿಂಗಾಯತ ಸಮುದಾಯದ ಜಗದಾಂಬ, ಎಂ.ಎಸ್.ಮಂಜುನಾಥ್ ಬೆಟ್ಟಹಳ್ಳಿ, ನಾಗರಾಜ್, ಸುಂಡಹಳ್ಳಿ ಮಂಜುನಾಥ್, ಗೀತಾ, ಸುಗುಣ, ಶೀಲಾ, ಆಶಾ, ರೇಣುಕಾ ಶಿವಣ್ಣ ಸೇರಿದಂತೆ ಹಲವರು ಬಿಜೆಪಿ -ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.
ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ರಮೇಶ್ ಬಾಬು ಬಂಡಿ ಸಿದ್ದೇಗೌಡ, ರವಿಕುಮಾರ್ ಗಣಿಗ ಸೇರಿದಂತೆ ಇತರರು ಉಪಸ್ಥಿತರಿದ್ದರು.
Hassan
ಫೆ.15 ಮತ್ತು 16 ರಂದು ಅಡಿಬೈಲು ಗ್ರಾಮದ ಶ್ರಿ ರಂಗನಾಥಸ್ವಾಮಿ ಜಾತ್ರೆ

ಸತೀಶ್ ಚಿಕ್ಕಕಣಗಾಲು
ಆಲೂರು: ತಾಲೂಕಿನ ಎರಡು ಹೋಬಳಿಗಳ ಧಾರ್ಮಿಕ ಸಂಬಂಧ ಬೆಸೆಯುವ ಪುರಾಣ ಪ್ರಸಿದ್ಧ ಅಡಿಬೈಲು ಗ್ರಾಮದ ಶ್ರಿ ರಂಗನಾಥಸ್ವಾಮಿ ದೇವರ ಐತಿಹಾಸಿಕ ಜಾತ್ರೆ ಫೆ.೧೫ ಮತ್ತು ೧೬ ರಂದು ನಡೆಯಲಿದೆ.
ದೇವಸ್ಥಾನದಲ್ಲಿ ಫೆ.೮ ರಿಂದ ೧೭ ರವರೆಗೆ ಉತ್ಸವಗಳು ಮತ್ತು ಅನ್ನ ಸಂತರ್ಪಣೆ ನಡೆಯುತ್ತದೆ. ಇತಿಹಾಸ ಹೇಳುವಂತೆ ಒಬ್ಬ ಕೊರಮನು ಬುಟ್ಟಿ ಹೆಣೆಯಲು ಬಿದಿರು ತರಲು ಹೋಗಿದ್ದನು. ಬಿದಿರು ಮೆಣೆ (ಗುಂಪೊದಕ್ಕೆ) ಕತ್ತಿಯನ್ನು ಹೊಡೆಯುವಾಗ ಆಯತಪ್ಪಿ ಏಟು ಒಂದು ಬಂಡೆಗೆ ತಾಗುತ್ತದೆ. ಆ ಬಂಡೆಯಿಂದ ಒಂದು ಬದಿಯಲ್ಲಿ ಹಾಲು ಮತ್ತೊಂದು ಬದಿಯಲ್ಲಿ ರಕ್ತ ಬರುತ್ತದೆ ಇದರಿಂದ ಗಾಬರಿಯಾದ ಅವನು ಪ್ರಜ್ಞೆ ತಪ್ಪಿ ಬೀಳುವನು. ಮನೆಗೆ ವಾಪಾಸು ಬಾರದ ಈತನನ್ನು ಮನೆಯವರು ಹುಡುಕಿಕೊಂಡು ಹೋದರು. ಪ್ರಜ್ಞೆಬಂದ ವ್ಯಕ್ತಿಯು ನಡೆದ ವಿಷಯವನ್ನು ತಿಳಿಸುತ್ತಾನೆ.
ಸ್ಥಳವನ್ನು ಗಮನಿಸಿದಾಗ ಬ್ರಹ್ಮದೇವನ ವಿಗ್ರಹ ಪತ್ತೆಯಾಗುತ್ತದೆ.ಆ ಉದ್ಭವ ಮೂರ್ತಿಯನ್ನು ಪಾಳೆಗಾರರಿಂದ ರಕ್ಷಿಸಲೆಂದು ವಿಷ್ಣುವರ್ಧನ ರಾಜನು ದೇವಾಲಯವನ್ನು ನಿರ್ಮಾಣ ಮಾಡಿಸುತ್ತಾನೆ. ಹೊಯ್ಸಳ ದೊರೆ ವಿಷ್ಣುವರ್ಧನ ಜೈನ ಧರ್ಮದಿಂದ ವೈಷ್ಣವ ಧರ್ಮಕ್ಕೆ ಮತಾಂತರ ಹೊಂದಿದ್ದರಿಂದ ಬ್ರಹ್ಮದೇವನನ್ನು ರಂಗನಾಥನೆಂಬ ಹೆಸರಿನಿಂದ ಕರೆಯಲಾರಂಭಿಸಿದರು.
ಕೆಂಚಮ್ಮನ ಹೊಸಕೋಟೆ ಮತ್ತು ಕುಂದೂರು ಹೋಬಳಿಗೆ ಸೇರಿದ ಸುಮಾರು ೪೮ ಹಳ್ಳಿಗಳಿಗೆ ಸಂಬಂಧಿಸಿದ ಈ ಜಾತ್ರೆ ಸಂಕ್ರಾಂತಿ ಹಬ್ಬದ ದಿನದಂದು ಕುಂದೂರು ಹೋಬಳಿ ವ್ಯಾಪ್ತಿಗೊಳಪುಡುವ ಸುಮಾರು ೨೦ ಗ್ರಾಮಗಳಿಗೆ ಅಡ್ಡೆ ದೇವರು ಹೋಗುತ್ತದೆ. ಉತ್ಸವ ಮುಗಿದ ನಂತರ ಜಾತ್ರೆ ನಡೆಯುವ ಏಳು ದಿನಗಳ ಮೊದಲು ಬೆಟ್ಟದಲ್ಲಿರುವ ದೇವಾಲಯಕ್ಕೆ ಕರೆತರಲಾಗುತ್ತದೆ.
ಮೊದಲ ದಿನ ಶನಿವಾರ ದೊಡ್ಡ ಹರಿಸೇವೆ. ಭಾನುವಾರ, ಸೋಮವಾರ ಹಕ್ಕಿನ ಉತ್ಸವ ನಡೆಯುತ್ತದೆ. ಮಂಗಳವಾರ ಬಿಂದಿಗಮ್ಮ ಕಳಸ ಹೊರುವ ಪೂಜಾರಿಯವರಿಗೆ ತಲೆ ಬೋಳಿಸಿ, ಹಸೆ ಹಾಕಿ ಕಾಸೆ ವೇಷದೊಂದಿಗೆ ದೇವಾಲಯಕ್ಕೆ ಕಳುಹಿಸಿಕೊಡಲಾಗುತ್ತದೆ. ಇವರು ಜಾತ್ರಾ ಮಹೋತ್ಸವ ಮುಗಿಯುವವರೆಗೂ ಹಣ್ಣ-ಹಂಪಲು ಬಿಟ್ಟರೆ ಬೇರೆನನ್ನೂ ಸೇವಿಸದೆ ಪೂಜಾ ಕೈಂಕರ್ಯದಲ್ಲಿ ತೊಡಗುತ್ತಾರೆ. ಶ್ರೀ ರಂಗನಾಥಸ್ವಾಮಿಗೂ ಬಿಂದಿಗಮ್ಮನಿಗೂ ಮದುವೆ ಮಾಡಿ ಆ ವೈಭವವನ್ನು ಆನಂದಿಸುವುದು ಈ ಜಾತ್ರೆಯ ವಿಶೇಷವಾಗಿದೆ.
ದೇವಾಲಯದಲ್ಲಿ ಗುರುವಾರ ರಾತ್ರಿ ಬಿಂದಿಗಮ್ಮನವರಿಗೆ ಹಸೆ ಹಾಕುವ ವಿಶೇಷ ಪೂಜೆ ಇರುತ್ತದೆ. ಶುಕ್ರವಾರ ರಾತ್ರಿ ಗಂಡನ ಕಡೆ ಊರಾದ ಭರತೂರಿನ ಹೊಳೆ ದಡಕ್ಕೆ ಉತ್ಸವ ಮೂರ್ತಿಯೊಂದಿಗೆ ಬಿಂದಿಗಮ್ಮನವರನ್ನು ಕರೆ ತರಲಾಗುವುದು. ಶನಿವಾರ ಹೊಳೆ ದಡದಲ್ಲಿ ಜಾತ್ರೆ ನಡೆಯುತ್ತದೆ. ಸಂಜೆ ಬಿಂದಿಗಮ್ಮನವರನ್ನು ಗಂಡನ ಮನೆಗೆ ಅಂದರೆ ರಂಗನಾಥಸ್ವಾಮಿ ದೇವಾಲಯಕ್ಕೆ ಕಳುಹಿಸುವ ಸಂದರ್ಭ ನೋಡಲೇಬೇಕಾದುದು. ಕಳಸ ಹೊರಡುವ ಮುನ್ನ ಕುಂದೂರಿನ ಗ್ರಾಮಸ್ಥರನ್ನು ಭರತೂರು ಗ್ರಾಮಸ್ಥರು ಬರಮಾಡಿಕೊಂಡು ವಿಶೇಷ ಆತಿಥ್ಯ ನೀಡಿ ಗೌರವಿಸುತ್ತಾರೆ.
ಹೂವು ತುಳಸಿಯಿಂದ ಅಲಂಕೃತವಾದ ಹರಿವಾಣದಲ್ಲಿ ಬಿಂದಿಗಮ್ಮನವರ ಕಳಸವನ್ನು ತಲೆ ಬೋಳಿಸಿದ್ದ ಪೂಜಾರಿ ತಲೆ ಮೇಲೆ ಇಡಲಾಗುತ್ತದೆ. ಸ್ವಲ್ಪ ದೂರ ನಿಧಾನವಾಗಿ ನಡೆದು ಹೋಗುತ್ತಿದ್ದ ಕಳಸ ಹೊತ್ತವರು, ನಂತರದಲ್ಲಿ ತಲೆ ಮೇಲಿರುವ ಕಳಸವನ್ನು ಕೈಯಲ್ಲಿ ಹಿಡಿಯದೆ ಓಡಲು ಪ್ರಾರಂಭ ಮಾಡುತ್ತಾರೆ. ಹೊಳೆಯಿಂದ ಸುಮಾರು ೧೦ ಕಿ. ಮೀ. ದೂರದ ಗುಡ್ಡದ ಮೇಲಿರುವ ದೇವಸ್ಥಾನಕ್ಕೆ ಏಳು ಊರು ಬಾಗಿಲಗಳನ್ನು ದಾಟಿಕೊಂಡು ಕೇವಲ ಮುಕ್ಕಾಲು ಗಂಟೆಯಲ್ಲಿ ತಲುಪುತ್ತದೆ.
ಊರು ಬಾಗಿಲಲ್ಲಿ ಅಕ್ಕಿ ಹಸೆ ಬರೆದು ಹಣ ಹಾಕಿರುತ್ತಾರೆ. ಬಾಗಿಲು ದಾಟುವ ಸಂದರ್ಭದಲ್ಲಿ ಕಳಸ ಹೊತ್ತವರು ತನ್ನ ಗದ್ದದಿಂದ ನೆಲದ ಮೇಲಿಟ್ಟ ಹಣವನ್ನು ಮುಟ್ಟುತ್ತಾರೆೆ. ಕಳಸ ಮುಂದೆ ಹೋದ ಕೂಡಲೆ ನೆರೆದಿದ್ದವರು ಹಸೆ ಅಕ್ಕಿಯನ್ನು ಮುಗಿಬಿದ್ದು ತೆಗೆದುಕೊಳ್ಳುತ್ತಾರೆ. ಈ ಸಂದರ್ಭ ನೋಡಲು ಅತ್ಯಂತ ಕುತೂಹಲಕಾರಿಯಾಗಿರುತ್ತದೆ.
ಭಾನುವಾರ ಬೆಟ್ಟದ ಮೇಲೆ ಹಗಲು ಜಾತ್ರೆ ನಡೆಯುತ್ತದೆ. ಸೋಮವಾರ ಹೇಮಾವತಿ ನದಿ ನೀರಿನಿಂದ ಅಭಿಷೇಕದೊಂದಿಗೆ ಜಾತ್ರಾ ವಿಶೇಷ ಪೂಜಾ ಕಾರ್ಯಕ್ಕೆ ನಾಂದಿ ಹಾಡಲಾಗುತ್ತದೆ. ನಂತರ ಯುಗಾದಿ ಹಬ್ಬದ ಸಂದರ್ಭದಲ್ಲಿ ಭರತೂರು ಕಡೆಗೆ ಸೇರುವ ಸುಮಾರು ೧೦ ಗ್ರಾಮಗಳಲ್ಲಿ ಅಡ್ಡೆ ಉತ್ಸವ ನಡೆಯುತ್ತದೆ ಮುಜರಾಯಿ ಇಲಾಖೆಗೆ ಸೇರಿದ ಅಡಿಬೈಲು ಶ್ರೀ ರಂಗನಾಥಸ್ವಾಮಿ ದೇವರ ಜಾತ್ರೆ ಫೆ. ೧೫ ರಂದು ಭರತೂರು ಗ್ರಾಮ ಹೇಮಾವತಿ ಹಿನ್ನಿರು ಬದಿಯಲ್ಲಿ ಮತ್ತು ೧೬ ರಂದು ರಂಗನಬೆಟ್ಟದ ಮೇಲೆ ನಡೆಯುತ್ತದೆ ಆಲೂರಿನಿಂದ ೧೮ ಕಿ. ಮೀ. ಮಗ್ಗೆ-ರಾಯರಕೊಪ್ಪಲು ಮಾರ್ಗವಾಗಿ ಪ್ರತಿದಿನ ಸಾರಿಗೆ ಬಸ್ ವ್ಯವಸ್ಥೆ ಇರುತ್ತದೆ ಭಕ್ತರು ಸ್ವಚ್ಚತೆಯನ್ನು ಕಾಪಾಡಬೇಕು ಎನ್ನುತ್ತಾರೆ ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಿ. ಉಮೇಶ್.
Mandya
ಮುಂಡುಗದೊರೆ ಪಂಚಾಯ್ತಿಗೆ ಪದ್ಮ ಅಧ್ಯಕ್ಷೆ

ಶ್ರೀರಂಗಪಟ್ಟಣ : ತಾಲೂಕಿನ ಮುಂಡುಗದೊರೆ ಗ್ರಾ. ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಪದ್ಮ ಡಿ.ಎಸ್.ಕೋಂ ಸೋಮೇಶ ಹಾಗು ಉಪಾಧ್ಯಕ್ಷರಾಗಿ ಗಾಯಿತ್ರಿ ಕೋಂ ಶಿವರಾಜ್ ಕುಮಾರ್ ಅವಿರೋಧವಾಗಿ ಆಯ್ಕೆಯಾದರು.
ನಿಕಟಪೂರ್ವ ಅಧ್ಯಕ್ಷ ಸೋಮಣ್ಣ ಹಾಗು ಉಪಾಧ್ಯಕ್ಷೆ ಸುಗುಣ ರಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಈ ಇಬ್ಬರನ್ನು ಹೊರತು ಪಡಿಸಿ ಯಾರು ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ಎಇಇ ಮಂಜುನಾಥ್ ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಗ್ರಾಮಸ್ಥರು ಹಾಗೂ ಮುಖಂಡರುಗಳು ಸನ್ಮಾನಿಸಿ ಅಭಿನಂಧಿಸಿದರು.
Mandya
ಶಾಲಾ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಹಬ್ಬ

ಮಂಡ್ಯ: ಎಸ್.ಬಿ ಎಜುಕೇಶನ್ ಟ್ರಸ್ಟ್, ಮಾಂಡವ್ಯ ಇಂಟಿಗ್ರೇಟೆಡ್ ಪದವಿ ಪೂರ್ವ ಕಾಲೇಜು, ಮಾಂಡವ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆ, ನೆಹರು ನಗರ, ಮಂಡ್ಯ, ಈ ಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಹಬ್ಬದ ಕಾರ್ಯಕ್ರಮ ಶಾಲೆಯ ಆವರಣದಲ್ಲಿ ಎಸ್.ಬಿ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಬಿ ಶಿವಲಿಂಗಯ್ಯರವರ ಅಧ್ಯಕ್ಷತೆಯಲ್ಲಿ ಜರುಗಿತು.
ಎಸ್.ಬಿ ಎಜುಕೇಶನ್ ಟ್ರಸ್ಟ್ ನ ಕಾರ್ಯದರ್ಶಿಗಳಾದ ಡಾ. ಮೀರಾ ಶಿವಲಿಂಗಯ್ಯರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅತ್ಯುನ್ನತ ಶ್ರೇಣಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಾದ ರಾಹುಲ್ ಹಾಗೂ ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡು ಬಹುಮಾನವನ್ನು ಪಡೆದ ವಿದ್ಯಾರ್ಥಿಗಳಿಗೆ ಮಾಂಡವ್ಯ ಕಾಲೇಜಿನ ಪ್ರಾಂಶುಪಾಲರಾದ ಕೆ.ಕೆ. ಚಂದ್ರಶೇಖರ್ ರವರು ಬಹುಮಾನವನ್ನು ವಿತರಿಸಿದರು.
ಮುಖ್ಯ ಅತಿಥಿಗಳಾಗಿ ಎಕ್ಸಲೆಂಟ್ ಸ್ಕೂಲ್ ನ ಕಾರ್ಯದರ್ಶಿ ಅಬ್ದುಲ್ ಮುನೀರ್, ಮಹದೇಶ್ವರ ಚಿಲ್ಡ್ರನ್ ಸ್ಕೂಲ್ ನ ಕಾರ್ಯದರ್ಶಿ ಎಂ. ರವಿ, ಶ್ರೀ ಗುರುವಿಜ್ಞಾನ ವಿದ್ಯಾಲಯದ ಅಧ್ಯಕ್ಷರಾದ ಎಮ್.ಸಿ. ಶಿವಕುಮಾರ್, ಮಾಂಡವ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಮಹದೇವಯ್ಯ, ಮಾಂಡವ್ಯ ಇಂಟಿಗ್ರೇಟೆಡ್ ಪದವಿ ಪೂರ್ವ ಕಾಲೇಜಿನ ಶೈಕ್ಷಣಿಕ ಪಾಲದಾರರಾದ ಎಂ. ಅವಿನಾಶ್ ಡಾ. ಎಂ. ಮೋಹನ್, ಡಿ.ಎಸ್. ರಾಘವೇಂದ್ರ (ವಿಜ್ಞಾನ ವಿಭಾಗ), ಶೈಕ್ಷಣಿಕ ಪಾಲುಗಾರರಾದ ವಾಣಿಜ್ಯ ವಿಭಾಗದ ಚನ್ನೇಶ್ ಹಾಗೂ ಅರ್ಚನಾರವರು ವೇದಿಕೆಯಲ್ಲಿ ಹಾಜರಿದ್ದರು.
ವೇದಿಕೆಯ ಕಾರ್ಯಕ್ರಮದ ನಂತರ ಕಾಲೇಜಿನ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
-
Kodagu13 hours ago
ಮಡಿಕೇರಿಯಲ್ಲಿ ಡಿ ಗ್ರೂಪ್ ಹುದ್ದೆಗಳಿಗೆ ಅರ್ಜಿ ಆಹ್ವಾನ
-
Kodagu13 hours ago
ಸ್ಪ್ರಿಂಕ್ಲರ್ ಪೈಪಿಗೆ ಕೃಷಿ ಇಲಾಖೆಯಿಂದ ಸಹಾಯಧನ
-
Kodagu16 hours ago
ಕೊಡಗು ಗೌಡ ಸಮಾಜಗಳ ಒಕ್ಕೂಟ ತೀವ್ರ ಅಸಮಾಧಾನ: ಕಾರಣವೇನು?
-
Hassan22 hours ago
HASSAN: ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟಾಟಾ ವಿಂಗರ್ ವಾಹನ ಪಲ್ಟಿ
-
Mysore22 hours ago
ಅವಹೇಳನಕಾರಿ ಚಿತ್ರವುಳ್ಳ ಪೋಸ್ಟ್ : ಆರೋಪಿ ಬಂಧನಕ್ಕೆ ರಸ್ತೆ ತಡೆದು ಪ್ರತಿಭಟನೆ
-
Hassan17 hours ago
ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಅಕ್ರಮ: ಮರು ಚುನಾವಣೆಗೆ ಒತ್ತಾಯ
-
State15 hours ago
ನಮ್ಮ ಮೆಟ್ರೋ ದರ ಏರಿಕೆ: ಸಿಎಂ ಸಿದ್ದರಾಮಯ್ಯ ಅವರ ಮಾಧ್ಯಮ ಪ್ರಕಟಣೆ
-
Hassan22 hours ago
ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ಜಾತ್ರಾ ಮಹೋತ್ಸವ: ಜೆಡಿಎಸ್ ಹಾಗೂ ಕಾಂಗ್ರೆಸ್ನಿಂದ ಪ್ರತ್ಯೇಕವಾಗಿ ಆರ್ಕೆಸ್ಟ್ರಾ ಆಯೋಜನೆ