Connect with us

Mandya

ಎಚ್‌.ಡಿ.ಕುಮಾರಸ್ವಾಮಿಗೆ ಮತ ನೀಡಲು ಅಬ್ಬಾಸ ಅಲಿ ಬೋಹ್ರಾ ಮನವಿ

Published

on

ಮಂಡ್ಯ :  ಎನ್‌ಡಿಎ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅರ್ಹತೆ ಮತ್ತು ಅಭಿವೃದ್ಧಿ ಚಿಂತನೆ ಇರುವುದರಿಂದ ಎಲ್ಲ ವರ್ಗದ ಜನರು ಎಚ್‌ಡಿಕೆ ಅವರಿಗೆ ಮತ ನೀಡಬೇಕು ಎಂದು ಕೇಂದ್ರದ ವಕ್ಫ್ ಕೌನ್ಸಿಲ್ ಮಾಜಿ ಸದಸ್ಯ ಅಬ್ಬಾಸ್ ಆಲಿ ಬೋಹ್ರಾ ಮನವಿ ಮಾಡಿದರು.

ಎಚ್.ಡಿ.ಕುಮಾರಸ್ವಾಮಿ ಅವರು ಸಂಸದರಾಗಿ ಆಯ್ಕೆಯಾದರೆ ಕೇಂದ್ರದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಲಿದ್ದು, ಆ ಮೂಲಕ ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಅನುಕೂಲವಾಗುತ್ತದೆ. ಅಲ್ಲದೆ, ಕಾವೇರಿ ಸಮಸ್ಯೆಯನ್ನು ಬಗೆಹರಿಸಲಿದ್ದಾರೆ. ಆದ್ದರಿಂದ ಅವರನ್ನು 2 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರು ಅತಿ ಹೆಚ್ಚಿದ್ದರೂ ನಿರ್ಣಾಯಕ ಹಿಂದುಳಿದ ವರ್ಗ, ದಲಿತರು, ಅಲ್ಪಸಂಖ್ಯಾತರು, ಶೋಷಿತ ವರ್ಗದವರು ಆಗಿದ್ದಾರೆ. ಈ ಎಲ್ಲ ವರ್ಗದ ಮತದಾರರು ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಮುಖ್ಯಮಂತ್ರಿ, ರೈತ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ಪರವಾಗಿ ಮತ ಚಲಾಯಿಸಿದರೆ ನೂರಕ್ಕೆ ನೂರರಷ್ಟು ಗೆಲುವು ಸಾಧಿಸುವರು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಂಡ್ಯ ಜಿಲ್ಲೆಯ ಹಿರಿಯ ರಾಜಕಾರಣಿಗಳಾದ ನಿತ್ಯ ಸಚಿವ ದಿ.ಕೆ.ವಿ.ಶಂಕರಗೌಡ, ಎಚ್.ಕೆ.ವೀರಣ್ಣಗೌಡ, ಎಂ.ಕೆ.ಶಿವನಂಜಪ್ಪ, ಕೆ.ಎನ್.ನಾಗೇಗೌಡ, ಎಸ್.ಡಿ.ಜಯರಾಂ ಅವರು ಸೇರಿದಂತೆ ಅನೇಕ ರಾಜಕಾರಣಿಗಳು ಮಂಡ್ಯ ಜಿಲ್ಲೆಯಲ್ಲಿ ಅಭಿವೃದ್ಧಿಪಥದತ್ತ ಕೊಂಡೊಯ್ದಿದ್ದಾರೆ. ಅದೇರೀತಿ ಎಚ್.ಡಿ.ಕುಮಾರಸ್ವಾಮಿ ಅವರು ಹಿರಿಯ ರಾಜಕಾರಣಿಗಳಂತೆ ಅವರ ಮಾದರಿಯಲ್ಲಿ ಜಿಲ್ಲೆಯನ್ನು ಅಭಿವೃದ್ಧಿ ಮಾಡುವರು ಎಂದು ಭರವಸೆ ನೀಡಿದರು.

ಪ್ರಸ್ತುತ ಬರ, ನೀರಿನ ಸಮಸ್ಯೆಯಿಂದ ರೈತರು ಕಂಗಾಲಾಗಿದ್ದಾರೆ. ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ ನೀರಿಲ್ಲ. ಬೆಳೆಗಳಿಗೆ ನೀರಿಲ್ಲದಿರುವುದರಿಂದ ಇಲ್ಲಿನ ಜನರು ಪರದಾಡುವ ಸ್ಥಿತಿ ಎದುರಾಗಿದೆ. ರಾಜ್ಯದಲ್ಲಿ ಸರ್ಕಾರ ಇದ್ದರೂ ಸಹ ರೈತರ ಸಮಸ್ಯೆಗೆ ಯಾವ ರೀತಿಯಲ್ಲೂ ಸ್ಪಂದಿಸುತ್ತಿಲ್ಲ. ಶುದ್ಧ ಕುಡಿಯು ನೀರು ಸಿಗದಿರುವುದರಿಂದ ಕಲುಷಿತ ನೀರಿನ ಮೊರೆ ಹೋಗಿದ್ದಾರೆ. ಇದರಿಂದ ಕಾಲರಾ, ಡೆಂಗ್ಯೂ ಸೇರಿದಂತೆ ಇತರೆ ಸಾಂಕ್ರಾಮಿಕ ರೋಗಗಳು ಜನರನ್ನು ಬಾಧಿಸುತ್ತಿದ್ದು, ಈ ಕಾಯಿಲೆಗಳು ಕೊರೊನಾಗಿಂತ ಮಾರಕವಾಗಿವೆ ಎಂದು ಆತಂಕ ಪಟ್ಟರು.

ರೈತರು ಬೆಳೆನಷ್ಟದಿಂದ, ಸಾಲಗಾರರಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ತಮಿಳುನಾಡಿನ ಓಲೈಕೆಗಾಗಿ ಕಾವೇರಿ ನೀರನ್ನು ಕದ್ದುಮುಚ್ಚಿ ಅಲ್ಲಿಗೆ ಹರಿಸಿ, ಇಲ್ಲಿನ ರೈತರ ಬೆನ್ನಿಗೆ ಚೂರಿ ಹಾಕಿದ್ದಾರೆ. ತಮಿಳುನಾಡಿನಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆ ಇಲ್ಲ. ಆದರೆ, ಇಲ್ಲಿನ ಜನ-ಜಾನುವಾರುಗಳಿಗೆ ಕುಡಿಯುವುದಕ್ಕೆ ನೀರು ಸಿಗುತ್ತಿಲ್ಲ ಇದರ ಪರಿಣಾಮದಿಂದ ಜನರು ಹಾಗೂ ಜಾನುವಾರುಗಳು ಸತ್ತರೆ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ ಎಂದು ಎಚ್ಚರಿಕೆ ನೀಡಿದರು.

ಜನರಿಗೆ ಕಾವೇರಿ ನೀರಿನ ವಿಚಾರದಲ್ಲಿ ಮೋಸ ಮಾಡಿರುವ ಕಾಂಗ್ರೆಸ್ಸಿಗರಿಗೆ ಮಂಡ್ಯ ಜಿಲ್ಲೆಯ ಮತದಾರದ ಬಳಿ ಮತ ಕೇಳುವ ನೈತಿಕ ಹಕ್ಕಿಲ್ಲ. ಈ ಕಾವೇರಿ ಹೋರಾಟಕ್ಕೆ ದೇವೇಗೌಡರು. ಮಾದೇಗೌಡರು ಎಚ್.ನಂಜೇಗೌಡರು ಕಾವೇರಿ ತಜ್ಞರಾಗಿ ಕಾವೇರಿ ನೀರು ಉಳಿಸುವಲ್ಲಿ ಅವರ ಪಾತ್ರ ಹೆಚ್ಚಾಗಿದೆ. ಅನೇಕ ಹೋರಾಟಗಾರರು ಕಾವೇರಿಗಾಗಿ ಜೈಲಿಗೆ ಹೋಗಿದ್ದಾರೆ. ಇದರಲ್ಲಿ ಎಷ್ಟೋ ಮಂದಿ ಕಂಗಾಲಾಗಿ ಮೃತಪಟ್ಟಿದ್ದು, ಕಾವೇರಿ ಉಳಿವಿಗಾಗಿ ಮಾಜಿ ಪ್ರಧಾನಿ ದೇವೇಗೌಡ, ಎಚ್.ನಂಜೇಗೌಡರು ಸಂಸತ್‌ನಲ್ಲಿ ನೂರಾರು ಬಾರಿ ದನಿ ಎತ್ತಿದ್ದಾರೆ. ದಿ.ಜಿ.ಮಾದೇಗೌಡರು ಮೂರು ದಶಕಗಳ ಕಾಲ ಕಾವೇರಿ ನೀರಿಗಾಗಿ ಹೋರಾಟ ಮಾಡಿದ್ದಾರೆ. ಪ್ರಸ್ತುತ ಕಾವೇರಿ ರಕ್ಷಣೆಯನ್ನು ಕಾಂಗ್ರೆಸ್ ಸರ್ಕಾರದಿಂದ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.

ದೇವೇಗೌಡರು ಅಲ್ಪಸಂಖ್ಯಾತ ಸಮುದಾಯದ ಮಿರಾಜುದ್ದೀನ್ ಪಟೇಲ್ ಹಾಗೂ ಸಿ.ಎಂ.ಇಬ್ರಾಹಿಂ ಅವರನ್ನು ಜಾ.ದಳ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಪ್ರತಿ ಬಾರಿ ಜನತಾದಳ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ನಾಲ್ಕರಿಂದ ಐದು ಮಂದಿ ಅಲ್ಪಸಂಖ್ಯಾತರನ್ನು ಕ್ಯಾಬಿನೆಟ್ ದರ್ಜೆಯ ಮಂತ್ರಿಯನ್ನಾಗಿ ಮಾಡಿದ್ದಾರೆ. ಈ ಹಿಂದೆ ರೋಷನ್ ಬೇಗ್ ರಂತಹ ಅಲ್ಪಸಂಖ್ಯಾತ ನಾಯಕರಿಗೆ ರಾಜ್ಯದಲ್ಲಿ ಅತ್ಯುನ್ನತ ಗೃಹಖಾತೆಯನ್ನು ನೀಡಿದ್ದಾರೆ. ಇದೇ ರೀತಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಅಲ್ಪಸಂಖ್ಯಾತರಿಗಾಗಿ ಅಪಾರ ಕೊಡುಗೆಗಳನ್ನು ಕೊಟ್ಟಿದ್ದಾರೆ ಎಂದು ವಿವರಿಸಿದರು.

ಅಲ್ಪಸಂಖ್ಯಾತರ ಭವಿಷ್ಯಕ್ಕಾಗಿ ಪ್ರಾದೇಶಿಕ ಪಕ್ಷ ಬಹಳ ಅನಿವಾರ್ಯವಾಗಿದ್ದು, ಕೇವಲ ಓಟ್ ಬ್ಯಾಂಕ್‌ಗಾಗಿ ಅಲ್ಪಸಂಖ್ಯಾತರನ್ನು ಬಳಸಿಕೊಳ್ಳುವ ಕಾಂಗ್ರೆಸ್ ಪಕ್ಷ ಸಮುದಾಯಕ್ಕೆ ಯಾವುದೇ ಕೊಡುಗೆ ಕೊಟ್ಟಿಲ್ಲ. ರಾಜ್ಯದ ಶೇ.80 ರಷ್ಟು ಮುಸ್ಲಿಮರು ಕಾಂಗ್ರೆಸ್‌ಗೆ ಮತ ಕೊಟ್ಟಿದ್ದಾರೆ. 9 ಮಂದಿ ಮುಸ್ಲಿಂ ಸಮುದಾಯದ ಶಾಸಕರು ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದಾರೆ. ಆದರೆ ಮಂತ್ರಿ ಸ್ಥಾನ ಕೊಟ್ಟಿರುವುದು. ಕೇವಲ ಎರಡು ಮಂದಿಗೆ ಮಾತ್ರ. ಅದು ಕೂಡ ದುರ್ಬಲ ಖಾತೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಮಡಿವಾಳ ಸಂಘದ ಅಧ್ಯಕ್ಷ ರವಿ, ಮುಖಂಡರಾದ ಮಹಂತಪ್ಪ, ರಾ.ಸಿ.ಸಿದ್ದರಾಜು, ವಸಂತಕುಮಾರ್, ಮಹೇಶ್ ಇದ್ದರು.

Continue Reading
Click to comment

Leave a Reply

Your email address will not be published. Required fields are marked *

Mandya

ಸಹಭಾಗಿತ್ವದ ನೀರಾವರಿ ಆಡಳಿತ ನಡೆಸಲು ನೀರು ಬಳಕೆದಾರರ ಸಹಕಾರ ಸಂಘಗಳನ್ನು ಬಲವರ್ಧನೆ ಅತ್ಯಗತ್ಯ

Published

on

ಮಂಡ್ಯ: ಸಹಭಾಗಿತ್ವದ ನೀರಾವರಿ ಆಡಳಿತ ನಡೆಸಲು ನೀರು ಬಳಕೆದಾರರ ಸಹಕಾರ ಸಂಘಗಳನ್ನು ಬಲವರ್ಧನೆ ಅತ್ಯಗತ್ಯ ಎಂದು ಮಂಗಲ ನೀರು ಬಳಕೆದಾರರ ಸಹಕಾರ ಸಂಘದ ನಿರ್ದೇಶಕ ಮಂಗಲ ಯೋಗೇಶ್ ಆಗ್ರಹ ಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಭಾಗಿತ್ವದಲ್ಲಿ ನೀರಾವರಿ ಆಡಳಿತವನ್ನು ಪ್ರಾರಂಭಿಸಿ ಆ ಮೂಲಕ ರೈತರಲ್ಲಿ ನೀರು ನಿರ್ವಹಣೆ, ನೀರಿನ ಮಿತ ಬಳಕೆ ಮತ್ತು ಸದ್ಬಳಕೆ ಮಾಡುವ ಮಹತ್ವಾಕಾಂಕ್ಷೆಯೊಡನೆ ಪ್ರಾರಂಭಿಸಿದ ನೀರು ಬಳಕೆದಾರರ ಸಹಕಾರ ಸಂಘಗಳ ಬಲವರ್ಧನೆ ಅವಶ್ಯಕವಾಗಿದೆ. ಹಾಗಾಗಿ ನೀರು ಬಳಕೆದಾರರ ಸಹಕಾರ ಸಂಘಗಳನ್ನು ಬಲವರ್ಧನೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಕಳೆದ ಮೂರು ದಶಕಗಳಿಂದಲೂ ನೀರು ಬಳಕೆದಾರರ ಸಹಕಾರ ಸಂಘಗಳು ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಸಾಧಿಸಿಲ್ಲ .ಈ ಸಂಬಂಧ ನೀರು ಬಳಕೆದಾರರ ಸಹಕಾರ ಸಂಘ ,ವಿತರಣಾ ವ್ಯಾಪ್ತಿಯ ಒಕ್ಕೂಟ, ಅಣೆಕಟ್ಟೆ ವ್ಯಾಪ್ತಿಯಲ್ಲಿ ಯೋಜನಾ ಮಟ್ಟದ ಮಹಾಮಂಡಳ, ರಾಜ್ಯಮಟ್ಟದಲ್ಲಿ ಶೃಂಗ ಮಹಾ ಮಂಡಳಗಳ ರಚನೆಯನ್ನು ಜರೂರಾಗಿ ಮಾಡಬೇಕಿದೆ ಎಂದರು.

ವಿಕೇಂದ್ರಿತ ಸಂಘಗಳ ಕಾರ್ಯ ಚಟುವಟಿಕೆಗಳು ಪ್ರಸಕ್ತ ಪರಿಣಾಮಕಾರಿಯಾಗಿ ನಡೆಯಬೇಕಾದರೆ ಈ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಿದೆ. ಯೋಜನೆಗಿಂತ ಮುನ್ನ 2000ನೇ ಇಸವಿಯಲ್ಲಿ ಕರ್ನಾಟಕ ಸರ್ಕಾರ ನೀರಾವರಿ ಕಾಯಿದೆಗೆ ತಿದ್ದುಪಡಿ ತಂದಿರುವುದು ನೀರು ಬಳಕೆದಾರರ ಸಹಕಾರ ಸಂಘಗಳ ಬಲವರ್ಧನೆಗೆ ಸಹಕಾರಿಯಾಗಿದ್ದು, ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ರಾಷ್ಟ್ರೀಯ ಬ್ಯಾಂಕುಗಳು ರೈತರಿಗೆ ಸಾಲ ವಿತರಿಸುವಾಗ ನೀರು ಬಳಕೆದಾರರ ಸಹಕಾರ ಸಂಘಗಳಿಂದಲೇ ಬಾಕಿ ಪ್ರಮಾಣಪತ್ರವನ್ನು ಪಡೆದುಕೊಳ್ಳುವಂತೆ ಸೂಚಿಸಬೇಕು. ಕೇಂದ್ರ ಸರ್ಕಾರದ ಧನಸಹಾಯದ ಕಾರ್ಯಕ್ರಮದಲ್ಲಿ ನೀರು ಬಳಕೆದಾರರ ಸಂಘಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ವಾರ್ಷಿಕ ಕಾರ್ಯ ಧನವನ್ನು 1 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡಬೇಕು. ವಿಸಿ ನಾಲಾ ಆಧುನಿಕರಣ ಕಾಮಗಾರಿಯನ್ನು ನಿಲ್ಲಿಸಿ ಮುಂಗಾರಿನಲ್ಲಿ ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ಮಹಾಮಂಡಲಗಳಿಗೆ ಶೇರುಧನವಾಗಿ ಒಂದು ಕೋಟಿ ರೂಪಾಯಿಗಳನ್ನು ಸರ್ಕಾರ ನೀಡಿ ಸಮರ್ಪಕವಾಗಿ ಕಾರ್ಯ ನಿರ್ವಹಣೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕೊತ್ತತ್ತಿ ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಕೆ ಎಸ್ ರವಿ, ಎಂ ಬಿ ಸುರೇಶ, ಚನ್ನಪ್ಪ, ಚಂದ್ರಶೇಖರ ಸೇರಿದಂತೆ ಇತರರು ಉಪಸ್ಥಿತರಿದ್ದರು

Continue Reading

Mandya

ಆರೋಗ್ಯಯುತವಾದ ಜೀವನಕ್ಕಾಗಿ 1 ಗಂಟೆ ಸಮಯವನ್ನು ಮೀಸಲಿಡಿ: ಡಾ: ಸೀತಾಲಕ್ಷ್ಮಿ

Published

on

ಮಂಡ್ಯ: ಆರೋಗ್ಯಯುತ ಜೀವನಕ್ಕಾಗಿ ಪ್ರತಿದಿನ ಯೋಗ, ವ್ಯಾಯಮ, ವಾಕ್ ಯಾವುದಾದರೂ ದೈಹಿಕ ಚಟುವಟಿಕೆಗೆ ಒಂದು ಗಂಟೆ ಮೀಸಲಿಡಿ ಎಂದು ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ಸೀತಾ ಲಕ್ಷ್ಮಿ ಅವರು ಹೇಳಿದರು.

ಅವರು ಮಿಮ್ಸ್ ಇಲಾಖೆಯಲ್ಲಿ ಹಮ್ಮಿಕೊಂಡಿದ್ದ ಯೋಗೋತ್ಸವ ಕಾರ್ಯಕ್ರಮವನ್ನು ಕುರಿತು ಮಾತನಾಡಿ, 10 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಸಂಬಂಧ ಯೋಗೋತ್ಸವ ಕಾರ್ಯಕ್ರಮವನ್ನು ಮಂಡ್ಯ ಜಿಲ್ಲೆಯ ಮಿಮ್ಸ್ ಇಲಾಖೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಭಾಗವಹಿಸುವ ಎಲ್ಲಾ ವಿದ್ಯರ್ಥಿಗಳಿಗೂ ಡಿಜಿಟಲ್ ಪ್ರಮಾಣಪತ್ರ ನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಎಸ್.ಪಿ.ವೈ.ಎಸ್ ಎಸ್.ನ ಜಿಲ್ಲಾ ಸಂಚಾರಕರಾದ ಶಂಕರ ನಾರಾಯಣ ಶಾಸ್ತ್ರೀ, ಯೋಗ ತರಬೇತುದಾರ ಶಿವರುದ್ರ ಸ್ವಾಮಿ, ಪತಂಜಲಿ ಯೋಗ ಶಿಕ್ಷಣ ಸಮಿತಿಯ ಮುಖ್ಯಸ್ಥರಾದ ರವಿ, ಮಿಮ್ಸ್ ನಿರ್ದೇಶಕ ಹಾಗೂ ಡೀನ್ ಡಾ.ಪಿ ನರಸಿಂಹಮೂರ್ತಿ, ಮಿಮ್ಸ್ ವೈದ್ಯಕೀಯ ಅಧೀಕ್ಷಕರು ಡಾ.ಶಿವಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

Continue Reading

Mandya

ಕೃಷಿ ಸಚಿವರಿಂದ 2 ಕೋಟಿ ರೂ. ವೆಚ್ಚದ ಬೆಳ್ಳೂರು ರೈತ ಸಂಪರ್ಕ ಕೇಂದ್ರದ ಶಂಕುಸ್ಥಾಪನೆ

Published

on

ನಾಗಮಂಗಲ: ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರು ಇಂದು 2 ಕೋಟಿ ರೂ. ವೆಚ್ಚದಲ್ಲಿ ಬೆಳ್ಳೂರು ರೈತ ಸಂಪರ್ಕ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿದರು.

ರೈತರ ಹಿತ ಸಂರಕ್ಷಣೆ ಸರ್ಕಾರದ ಆದ್ಯತೆ: ಎನ್ ಚಲುವರಾಯಸ್ವಾಮಿ

ರೈತರ ಹಿತ ಸಂರಕ್ಷಣೆ ರಾಜ್ಯ ಸರ್ಕಾರದ ಮೊದಲ ಅದ್ಯತೆ ಎಂದು ಕೃಷಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚುವರಾದ ಎನ್. ಚಲುವರಾಯಸ್ವಾಮಿ ತಿಳಿಸಿದರು.

ನಾಗಮಂಗಲ ತಾಲೂಕಿನ ಬೆಳ್ಳೂರಿನಲ್ಲಿ ನೂತನ ರೈತ ಸಂಪರ್ಕ ಕೇಂದ್ರಕ್ಕೆ ಗುದ್ದಲಿ ಪೂಜೆ ನೇರವೇರಿಸಿ ಕೃಷಿಕರಿಗೆ ರಸಗೊಬ್ಬರ, ಬಿತ್ತನೆ ಬೀಜ, ಕೀಟನಾಶಕಗಳನ್ನು ವಿತರಿಸಿ ಸಚಿವರು ಮಾತನಾಡಿದರು.

ರೈತರರು ಸಮಗ್ರ ಬೇಸಾಯದ ಬಗ್ಗೆ ಗಮನ ಹರಿಸಬೇಕು. ಕಡ್ಡಾಯವಾಗಿ ಬೆಳೆ ವಿಮೆ ನೋಂದಣಿ ಮಾಡಿಸಿ ಅನಿರೀಕ್ಷಿತ ನಷ್ಟ ದಿಂದ ರಕ್ಷಣೆ ಪಡೆಯಬೇಕು ಎಂದು ಅವರು ಹೇಳಿದರು.

ಎಲ್ಲಾ ರೈತ ಸಂಪರ್ಕ ಕೇಂದ್ರಗಳ ಮೂಲಕ ಬಿತ್ತನೆ ಬೀಜಗಳು, ರಸಗೊಬ್ಬರ ಹಾಗೂ ರೈತರಿಗೆ ಸಿಗುವ ಸಬ್ಸಿಡಿ ಉಪಯೋಗವಾಗುವ ಇನ್ನಿತರ ಮಾಹಿತಿಯನ್ನು ನೀಡಲಾಗುತ್ತದೆ ಎಂದು ಎನ್.ಚಲುವರಾಯಸ್ವಾಮಿ ತಿಳಿಸಿದರು.

ತಾವು ಕೃಷಿ ಸಚಿವರಾದ ನಂತರ ರೈತರಿಗೆ ಎಲ್ಲಾ ಸೌಲಭ್ಯ ಒಂದೇ ಕಡೆ ಸಿಗವಂತೆ ಮಾಡಲು ರೈತ ಸಂಪರ್ಕ ಕೇಂದ್ರಗಳನ್ನು ಸಶಕ್ತಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು.

ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ‌ ಇಲಾಖೆಯಲ್ಲಿ 600 ಸಹಾಯಕ ಕೃಷಿ ಅಧಿಕಾರಿ ಹಾಗೂ ಕೃಷಿ ಅಧಿಕಾರಿಗಳ ನೇಮಕಾತಿಗೆ ಕ್ರಮವಹಿಸಲಾಗಿದೆ ಎಂದರು.

ರೈತರು ಮಳೆ ಪ್ರಮಾಣವನ್ನು ಅರಿತು ಕಡಿಮೆ ಮತ್ತು ದೀರ್ಘ ಅವಧಿಯಲ್ಲಿ ಬೆಳಗಳ ಬಗ್ಗೆ ನಿರ್ಧಾರ ಮಾಡಬೇಕಿದೆ. ಲಾಭದಾಯಕ ಕೃಷಿ ಬಗ್ಗೆ ರೈತ ಸಂಪರ್ಕ ಕೇಂದ್ರಗಳು ಮಾರ್ಗದರ್ಶನ ನೀಡುವ ಕಾರ್ಯ ನಿರ್ವಹಿಸಲಿವೆ ಎಂದು ಕೃಷಿ ಸಚಿವರು ತಿಳಿಸಿದರು.

ಬೆಳ್ಳೂರು ಹೋಬಳಿಯ ರೈತರಿಗೆ ಉಪಯೋಗ ವಾಗುವಂತೆ ರೈತ ಸಂಪರ್ಕ ಕೇಂದ್ರ ಕಟ್ಟಡಕ್ಕೆ ಶಂಕು ಸ್ಥಾಪನೆ ನೆರವೇರಿದೆ. ಮುಂದಿನ ದಿನಗಳಲ್ಲಿ ನಾಗಮಂಗಲ ತಾಲೂಕಿನ ಎಲ್ಲಾ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಪರಿಕರಗಳನ್ನು ಪೂರೈಸಲಾಗುವುದು ಎಂದು ಚಲುವರಾಯಸ್ವಾಮಿ ಹೇಳಿದರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಹಾಗೂ ಉಪ ನಿರ್ದೇಶಕಿ ಮಮತ, ನಾಗಮಂಗಲ ತಹಶೀಲ್ದಾರ್ ನಯೀಂ ಉನ್ನಿಸಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Continue Reading

Trending

error: Content is protected !!