Connect with us

Chamarajanagar

ಕೆಎಸ್‌ಆರ್‌ಟಿಸಿ ಬಸ್ – ದ್ವಿಚಕ್ರ ಡಿಕ್ಕಿ: ಇಬ್ಬರು ಸಾ*ವು

Published

on

ಹನೂರು: ಕೆಎಸ್‌ಆರ್‌ಟಿಸಿ ಬಸ್-ದ್ವಿಚಕ್ರ ವಾಹನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರೂ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ತಾಳಬೆಟ್ಟದ ಸಮೀಪ ಜರುಗಿದೆ.

ಬೆಂಗಳೂರಿನ ನಿವಾಸಿ ಪ್ರದೀಪ್(20), ನೆಲಮಂಗಲದ ಭಾವೀಶ್(21) ಮೃತ ದುರ್ದೈವಿಗಳು.

ಮೃತಪಟ್ಟ ಯುವಕರು ಪಲ್ಸರ್ ಬೈಕ್‌ನಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದರು. ಈ ವೇಳೆ ತಾಳಬೆಟ್ಟ ಬಳಿ ಮಹದೇಶ್ವರ ಬೆಟ್ಟದಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನ ಹಿಂಬದಿ ಕುಳಿತಿದ್ದ ಪ್ರದೀಪ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಉಳಿದಂತೆ ತೀವ್ರ ರಕ್ತಸ್ರಾವವಾಗಿದ್ದ ಭಾವೀಶ್ ಎಂಬಾತನನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.

ಮೃತದೇಹಗಳನ್ನು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿ ಬಿ.ಟಿ.ಕವಿತಾ ಭೇಟಿ ನೀಡಿ ಪರಿಶೀಲಿಸಿದರು. ಇದೇ ವೇಳೆ ಇನ್ಸ್‌ಪೆಕ್ಟರ್‌ ಚಿಕ್ಕರಾಜಶೆಟ್ಟಿ, ಸಬ್ ಇನ್ಸ್‌ಪೆಕ್ಟರ್‌ ಈಶ್ವರ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

Continue Reading

Chamarajanagar

ಅನುಮತಿ ಇಲ್ಲದೆ ರಸ್ತೆಯಲ್ಲಿ ಅಗೆದು ಬಿಎಸ್‌ಎನ್‌ಎಲ್ ಕೇಬಲ್ ಅಳವಡಿಕೆ: ಶಿವಪುರ ಮಹದೇವಪ್ಪ ಆರೋಪ

Published

on

ಗುಂಡ್ಲುಪೇಟೆ: ತಾಲೂಕಿನ ಶಿವಪುರ–ಹಂಗಳ ಮಾರ್ಗ ಸೇರಿದಂತೆ ವಿವಿಧ ಗ್ರಾಮಗಳ ರಸ್ತೆ ಬದಿಯಲ್ಲಿ ಅಗತ್ಯ ಅನುಮತಿ ಪಡೆಯದೆ ಬಿಎಸ್‌ಎನ್‌ಎಲ್ ಕಂಪನಿಯ ಕೇಬಲ್ ಅಳವಡಿಕೆ ಕಾಮಗಾರಿ ನಡೆಸಲಾಗುತ್ತಿದ್ದು, ಇದರಿಂದ ರಸ್ತೆಗಳು ಹಾಳಾಗುತ್ತಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ಆರೋಪಿಸಿದ್ದಾರೆ.

ಬಿಎಸ್‌ಎನ್‌ಎಲ್ ಕಂಪನಿಯ ಗುತ್ತಿಗೆದಾರರು ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಲೋಕೋಪಯೋಗಿ ಇಲಾಖೆಯಿಂದ ಅನುಮತಿ ಪಡೆಯದೆ ಜೆಸಿಬಿ ಯಂತ್ರದ ಮೂಲಕ ರಸ್ತೆ ಬದಿಯಲ್ಲಿ ಅವೈಜ್ಞಾನಿಕವಾಗಿ ಗುಂಡಿ ತೆಗೆದು ಕಾಮಗಾರಿ ನಡೆಸುತ್ತಿದ್ದಾರೆ. ಇದರಿಂದ ರಸ್ತೆಗಳು ಹಾನಿಗೊಳಗಾಗುವುದರ ಜೊತೆಗೆ ವಾಹನ ಸಂಚಾರಕ್ಕೂ ತೀವ್ರ ತೊಂದರೆ ಉಂಟಾಗುತ್ತಿದೆ ಎಂದು ದೂರಿದರು.

ರಸ್ತೆ ಬದಿಗಳಲ್ಲಿ ಈಗಾಗಲೇ ಕುಡಿಯುವ ನೀರಿನ ಪೈಪ್‌ಲೈನ್ ಹಾಗೂ ವಿವಿಧ ಕಂಪನಿಗಳ ಕೇಬಲ್‌ಗಳು ಅಳವಡಿಕೆಯಾಗಿವೆ. ಈ ಬಗ್ಗೆ ಅರಿವಿದ್ದರೂ ಸಹ ನೋಂದಣಿ ಇಲ್ಲದ ಜೆಸಿಬಿ ಯಂತ್ರಗಳನ್ನು ಬಳಸಿ ಅಗೆಯುವ ಕೆಲಸ ನಡೆಸುತ್ತಿರುವುದು ಸಾರ್ವಜನಿಕ ಆಸ್ತಿಗೆ ಹಾನಿ ಉಂಟುಮಾಡುತ್ತಿದೆ ಎಂದು ಆರೋಪಿಸಿದ ಅವರು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ಗುತ್ತಿಗೆದಾರರು ಹಾಗೂ ಕಂಪನಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂಬಂಧ ಚಾಮರಾಜನಗರ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದು ದೂರು ಸಲ್ಲಿಸಲಾಗಿದ್ದು, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದರು.

Continue Reading

Chamarajanagar

ಮೈಸೂರಿನ ರಾಜಮನೆತನದ ಕೊಡುಗೆ ನಾಡಿಗೆ ಅಪಾರ: ಎಂ.ರಾಮಚಂದ್ರ

Published

on

ಚಾಮರಾಜನಗರ: ಮೈಸೂರಿನ ರಾಜಮನೆತನದ ಕೊಡುಗೆ ನಾಡಿಗೆ ಅಪಾರವಾದದ್ದು. ಅವರು ಕೇವಲ ಆಡಳಿತಗಾರರಷ್ಟೆ ಅಲ್ಲ, ಕಲೆ, ಶಿಕ್ಷಣ, ಕೈಗಾರಿಕೆ ಮತ್ತು ನೀರಾವರಿಗೆ ಭದ್ರ ಅಡಿಪಾಯ ಹಾಕಿಕೊಟ್ಟ ದೂರದೃಷ್ಠಿ ಚಿಂತಕರಾಗಿದ್ದರು ಎಂದು ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಹೇಳಿದರು.

ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ವತಿಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಆಯೋಜಿಸಿದ್ದ ಮೈಸೂರು ಸಂಸ್ಥಾನದ ಮಹಾರಾಜರು, ಮುಮ್ಮಡಿ ಕೃಷ್ಣರಾಜ ಒಡೆಯರ್ ಹಾಗೂ ಜಯಚಾಮರಾಜೇಂದ್ರ ಒಡೆಯರ್ ಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


“ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಸಾಧನೆಯನ್ನು ನಾವೆಲ್ಲರೂ ನೋಡುತ್ತಿದ್ದೇವೆ. ಸರ್ ಎಂ.ವಿಶ್ವೇಶ್ವರಯ್ಯ ಅವರ ನೇತೃತ್ವದಲ್ಲಿ ಕೆಆರ್‌ಎಸ್ ಜಲಾಶಯ ನಿರ್ಮಿಸಿ ಮೈಸೂರು, ಚಾಮರಾಜನಗರ, ಬೆಂಗಳೂರು ಸೇರಿದಂತೆ ತಮಿಳುನಾಡಿಗೂ ನೀರಾವರಿ ಸೌಲಭ್ಯ ಕಲ್ಪಿಸಿದರು. ಅವರ ಕಾಲದಲ್ಲಿಯೇ ಮೈಸೂರಿನಲ್ಲಿ ಪ್ರಥಮ ವೈದ್ಯ ಶಾಲೆ, ಆಂಗ್ಲ ಶಾಲೆಗಳು ಆರಂಭವಾದವು” ಎಂದು ತಿಳಿಸಿದರು.

“ಜಯಚಾಮರಾಜ ಒಡೆಯರ್ ಮೈಸೂರು ಸಂಸ್ಥಾನದ 25ನೇ ಕೊನೆಯ ಮಹಾರಾಜರಾಗಿದ್ದರು. 1950ರಿಂದ 1956ರವರೆಗೆ ರಾಜ್ಯಭಾರ ನಡೆಸಿದ ಅವರು, ಕರ್ನಾಟಕ ರಚನೆಯ ನಂತರ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು” ಎಂದು ಹೇಳಿದರು.

ದಲಿತ ಮಹಾಸಭಾ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ ಪಾಪು ಮಾತನಾಡಿ, “750 ವರ್ಷಗಳ ಸುದೀರ್ಘ ಆಡಳಿತ ನಡೆಸಿ 25 ಮಹಾರಾಜರನ್ನು ಕಂಡ ಮೈಸೂರು ಸಂಸ್ಥಾನವನ್ನು ನಾವು ಸ್ಮರಿಸಬೇಕು. ಮಹಾರಾಜರಷ್ಟೆ ಮಹಾರಾಣಿಯರೂ ಜನಪರ ಸೇವೆ ನೀಡಿದ್ದಾರೆ” ಎಂದರು.


ಅಖಿಲ ಕರ್ನಾಟಕ ಕನ್ನಡ ಮಹಾಸಭಾ ಅಧ್ಯಕ್ಷ ಶ್ರೀನಿವಾಸಗೌಡ ಅಧ್ಯಕ್ಷತೆ ವಹಿಸಿ, “ಮುಮ್ಮಡಿ ಕೃಷ್ಣರಾಜ ಒಡೆಯರ್ ತಮ್ಮ ತಂದೆ 9ನೇ ಖಾಸ ಚಾಮರಾಜೇಂದ್ರ ಒಡೆಯರ್ ಅವರ ನೆನಪಿಗಾಗಿ ಈ ಊರಿಗೆ ಚಾಮರಾಜನಗರ ಎಂದು ನಾಮಕರಣ ಮಾಡಿದರು. ಚಾಮರಾಜೇಶ್ವರ ದೇವಸ್ಥಾನವನ್ನೂ ಅವರು ನಿರ್ಮಿಸಿದರು” ಎಂದು ತಿಳಿಸಿದರು.

ಇದೇ ವೇಳೆ ಚಾಮರಾಜೇಶ್ವರ ರಥ ಕಟ್ಟುವ ಪ್ರಭುಸ್ವಾಮಿ, ಆರ್ಚಕರಾದ ಮೋಹನ್ ರಾವ್, ಅನಂತಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ್ ಋಗ್ವೇದಿ, ಉದ್ಯಮಿ ಶ್ರೀನಿಧಿ, ಸಮಾಜ ಸೇವಕ ಜಿ.ವಿ. ವೆಂಕಟನಾಗಪ್ಪ ಶೆಟ್ಟಿ, ಗೌರವಾಧ್ಯಕ್ಷ ಶಾ.ಮುರಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Continue Reading

Chamarajanagar

ರಾಷ್ಟ್ರಧ್ವಜವು ದೇಶಭಕ್ತಿಯ ಪ್ರತೀಕ – ಸುರೇಶ್ ಋಗ್ವೇದಿ

Published

on

ಚಾಮರಾಜನಗರ: ರಾಷ್ಟ್ರಧ್ವಜವು ದೇಶಭಕ್ತಿಯ ಪ್ರತೀಕವಾಗಿದ್ದು, ದೇಶದ ಉಳಿವಿಗಾಗಿ ಬಲಿದಾನವಾಗಲು ಸದಾ ಸಿದ್ಧರಿರುವ ನಾವುಗಳು ಅದರ ಮೇಲಿನ ಭಕ್ತಿಯಿಂದಲೇ ರಾಷ್ಟ್ರವನ್ನು ಸಂರಕ್ಷಿಸಿ ಗೌರವದಿಂದ ಕಾಪಾಡುವ ಕಾರ್ಯವನ್ನು ಭಾರತೀಯರು ನಿರ್ವಹಿಸುತ್ತಿದ್ದಾರೆ ಎಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಎನ್. ಋಗ್ವೇದಿ ತಿಳಿಸಿದರು.

ಜೈ ಹಿಂದ್ ಪ್ರತಿಷ್ಠಾನ ಮತ್ತು ಋಗ್ವೇದಿ ಯುತ್ ಕ್ಲಬ್ ಸಹಯೋಗದಲ್ಲಿ ಆಯೋಜಿಸಿದ್ದ “ರಾಷ್ಟ್ರೀಯ ಧ್ವಜ ದತ್ತು ದಿನ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


“1947 ಜುಲೈ 22ರಂದು ಸಂವಿಧಾನ ಸಭೆಯು ತ್ರಿವರ್ಣ ಧ್ವಜವನ್ನು ಅಂಗೀಕರಿಸಿತು. ದೇಶದ ಏಕತೆ ಮತ್ತು ಭಾವೈಕ್ಯತೆಯ ದಿವ್ಯ ಸಾಧನವಾಗಿ ರಾಷ್ಟ್ರಧ್ವಜವು ಸ್ವಾಭಿಮಾನ, ಆತ್ಮಗೌರವ, ತ್ಯಾಗ-ಬಲಿದಾನಗಳಿಗೆ ಅರ್ಪಿಸುವ ಗೌರವ ಸೂಚಕವಾಗಿದೆ” ಎಂದು ಹೇಳಿದರು.

ಕೇಸರಿ, ಬಿಳಿ, ಹಸಿರು ಮತ್ತು 24 ಗೆರೆಗಳ ನೀಲಿ ಚಕ್ರ ಹೊಂದಿರುವ ತ್ರಿವರ್ಣ ಧ್ವಜವು ದೇಶದ ಗೌರವದ ಸಂಕೇತವಾಗಿದೆ. ಶುದ್ಧ ಖಾದಿಯಿಂದ ವಿಶೇಷವಾಗಿ ತಯಾರಾಗುವ ಈ ಧ್ವಜಕ್ಕೆ ವಿಶಿಷ್ಟ ಗೌರವಿದೆ. ಕರ್ನಾಟಕದ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ರಾಷ್ಟ್ರಧ್ವಜ ತಯಾರಿಕಾ ಘಟಕವಿದ್ದು, ರಾಜ್ಯದಲ್ಲಿ ಸುಮಾರು 52 ಕಡೆ ಧ್ವಜ ತಯಾರಿಕಾ ಕೇಂದ್ರಗಳಿರುವುದು ನಮಗೆ ಹೆಮ್ಮೆಯ ವಿಷಯ ಎಂದರು.

ಧ್ವಜವು ಸ್ವಾತಂತ್ರ್ಯ, ಸಮಾನತೆ ಮತ್ತು ರಾಷ್ಟ್ರದ ಪ್ರತೀಕವಾಗಿದ್ದು, ರಾಷ್ಟ್ರಭಕ್ತಿ ಮತ್ತು ತ್ಯಾಗದ ಸಂಕೇತವಾಗಿದೆ. ರಾಷ್ಟ್ರಧ್ವಜವನ್ನು ರೂಪಿಸಿದ ಮಹಾನ್ ವ್ಯಕ್ತಿ ಪಿಂಗಳಿ ವೆಂಕಯ್ಯ ಎಂದು ಸ್ಮರಿಸಿದರು.


ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ಬಿ.ಕೆ. ಆರಾಧ್ಯ ಮಾತನಾಡಿ, ತ್ರಿವರ್ಣ ಧ್ವಜದ ಮಹತ್ವ ಸಾರುವ ಕಾರ್ಯಕ್ಕೆ ಜೈ ಹಿಂದ್ ಪ್ರತಿಷ್ಠಾನಕ್ಕೆ ವಂದನೆ ಸಲ್ಲಿಸಿದರು. “ರಾಷ್ಟ್ರಧ್ವಜ ನಮ್ಮೆಲ್ಲರ ಉಸಿರು. ಲಕ್ಷಾಂತರ ದೇಶಭಕ್ತರ ಹೋರಾಟ ಮತ್ತು ತ್ಯಾಗದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಸೈನಿಕರು ಧ್ವಜದ ಸಂರಕ್ಷಣೆಗಾಗಿ ತ್ಯಾಗ ಮಾಡುತ್ತಿದ್ದಾರೆ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರಂಗ ಶೆಟ್ಟಿ, ಸಂಜಯ್, ಮಹೇಶ್, ಉದಯ್, ಕುಸುಮ ಋಗ್ವೇದಿ, ಶ್ರಾವ್ಯ ಋಗ್ವೇದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Continue Reading

Trending

error: Content is protected !!