Special
ವಿದ್ಯುತ್ ವಯರ್ ಮೇಲೆ ಬಿದ್ದು ಚಿಂತಾಜನಕವಾದ ಕೋತಿ ಮರಿ

ಚಿಕಿತ್ಸೆ ಕೊಡಿಸಿ ಜೀವ ಉಳಿಸಿದ ಪವರ್ ಮ್ಯಾನ್ ಗಳು
ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ಕೆಲವು ವಿಡಿಯೋಗಳು ನೋಡುಗರ ಮನಸ್ಸನ್ನು ಗೆದ್ದುಬಿಡುತ್ತವೆ. ಅದರಲ್ಲೂ ಪ್ರಾಣಿ ಪಕ್ಷಿಗಳ ಮೇಲೆ ಮಾನವೀಯತೆ ತೋರುವ ವಿಡಿಯೋಗಳು ಇನ್ನೂ ಹತ್ತಿರವಾಗುತ್ತವೆ. ಇಂತಹ ಹೃದಯಸ್ಪರ್ಶಿ ಘಟನಾವಳಿ ಕಣ್ಣ ಮುಂದೆ ನಡೆದರೆ ಹೇಗಿರುತ್ತದೆ…? ಇದಕ್ಕೊಂದು ನಿದರ್ಶನದ ವಿಡಿಯೋ ಇಲ್ಲಿದೆ.
ಮಡಿಕೇರಿ ವ್ಯಾಪ್ತಿಯಲ್ಲಿ ಸೆಸ್ಕ್ ನ ಪವರ್ ಮ್ಯಾನ್ ಗಳು ಕರ್ತವ್ಯ ನಿರ್ವಹಿಸುತ್ತಿದ್ದಾಗ ಅಚಾನಾಕಾಗಿ ಮರ್ಕಟದ ಮರಿಯೊಂದು ವಿದ್ಯುತ್ ತಂತಿ ಮೇಲೆ ಬಿದ್ದಿದೆ. ವಿದ್ಯುತ್ ಸ್ಪರ್ಶಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಕೋತಿಯನ್ನು ಕೂಡಲೇ ಪವರ್ ಮ್ಯಾ ನ್ ಗಳಾದ (O & M-1ಮಡಿಕೇರಿ) ಶಿವಣ್ಣ ಮತ್ತು ಅಭಿಷೇಕ್ ಅವರುಗಳು ಪಶು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಕೊಡಿಸುವ ಮೂಲಕ ಅದರ ಜೀವ ಉಳಿಸುವಲ್ಲಿ ಮಾನವೀಯತೆ ಮೆರೆದರು. ವಿದ್ಯುತ್ ಆಘಾತದಿಂದ ನೋವುಂಡರೂ ತಂಟೆ ಮಾಡದೇ ಕೋತಿ ಮರಿ ಚಿಕಿತ್ಸೆಗೆ ಸ್ಪಂದಿಸಿದೆ. ಪವರ್ ಮ್ಯಾನ್ ಗಳ ಈ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
Program
2020ರ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆ

ಪ್ರಜ್ವಲ್ ದೇವರಾಜ್ ಅತ್ಯುತ್ತಮ ನಟ
ಅಕ್ಷತಾ ಪಾಂಡವಪುರಅವರಿಗೆ ಅತ್ಯುತ್ತಮ ನಟಿ
ಬೆಂಗಳೂರು, ಮಾರ್ಚ್ ೧೨: ಕನ್ನಡ ಚಿತ್ರರಂಗ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರತಿ ವರ್ಷ ಕನ್ನಡ ಉತ್ತಮ ಚಿತ್ರಗಳಿಗೆ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಿಕೊಂಡು ಬಂದಿದೆ. ಕಳೆದ ಕೊರೊನಾ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮಕ್ಕೆ ಬ್ರೇಕ್ ಆಗಿದ್ದು. ಎಲ್ಲಾ ವರ್ಷಗಳ ಪ್ರಶಸ್ತಿಗಳನ್ನು ಸರ್ಕಾರ ಘೋಷಣೆ ಮಾಡುತ್ತಿದೆ.
ಇತ್ತೀಚಿಗಷ್ಟೆ ೨೦೧೯ರ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿತ್ತು.
ಪೈಲ್ವಾನ್ ಚಿತ್ರದ ನಟನೆಗಾಗಿ ಕಿಚ್ಚ ಸುದೀಪ್ ಅತ್ಯುತ್ತಮ ನಟ ಹಾಗೂ ದಯಾಳ್ ಪದ್ಮನಾಭನ್ ನಿರ್ದೇಶನದ ತ್ರಯಂಬಕA ಚಿತ್ರದ ನಟನೆಗಾಗಿ ಅನುಪಮಾ ಗೌಡ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರಕಿತ್ತು. ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ನಟ ಕಿಚ್ಚ ಸುದೀಪ್ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ನಿರಾಕರಿಸಿದರು. ತಮಗಿಂತ ಅತ್ಯುತ್ತಮ ನಟರಿದ್ದಾರೆ ಅವರನ್ನು ಆರಿಸಿ ಪ್ರಶಸ್ತಿ ನೀಡುವಂತೆ ಮನವಿ ಮಾಡಿದ್ದರು. ಈ ಗೊಂದಲದ ನಡುವೆಯೇ ಇದೀಗ ೨೦೨೦ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ.
ರಾಜ್ಯ ಚಲನಚಿತ್ರ ಪ್ರಶಸ್ತಿ ರಾಜ್ಯಾ ಸರ್ಕಾರ ಹಾಗೂ ಕನ್ನಡ ಚಲನಚಿತ್ರ ಮಂಡಳಿ , ನಿನ್ನೆ ಮಾರ್ಚ್ ೧೧ರದು ೨೦೨೦ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿಯನ್ನು ಪ್ರಕಟಿಸಿದೆ. ಜಂಟಲ್‌ಮ್ಯಾನ್ ಚಿತ್ರದ ಅಭಿನಯಕ್ಕಾಗಿ ಪ್ರಜ್ವಲ್ ದೇವರಾಜ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ.
ಇನ್ನು ಪಿಂಕಿ ಎಲ್ಲಿ ಚಿತ್ರ ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ಆಯ್ಕೆಯಾಗಿದ್ದರೆ, ಇದೇ ಚಿತ್ರದ ನಟನೆಗಾಗಿ ನಟಿ ಅಕ್ಷತಾ ಪಾಂಡವಪುರಅವರಿಗೆ ಅತ್ಯುತ್ತಮ ನಟಿ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ.
ಒಟ್ಟು ೨೦ಕ್ಕೂ ವಿಭಾಗಗಳಿಗೆ ೨೦೨೦ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಿಣೆ.
ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ
* ಅತ್ಯುತ್ತಮ ನಟ: ಪ್ರಜ್ವಲ್ ದೇವರಾಜ್ (ಜಂಟಲ್‌ಮ್ಯಾನ್)
* ಅತ್ಯುತ್ತಮ ನಟಿ: ಅಕ್ಷತಾ ಪಾಂಡವಪುರ (ಪಿಂಕಿ ಎಲ್ಲಿ)
* ಅತ್ಯುತ್ತಮ ಚಿತ್ರ: ಪಿಂಕಿ ಎಲ್ಲಿ
* ೨ನೇ ಅತ್ಯುತ್ತಮ ಚಿತ್ರ: ವರ್ಣಪಟಲ
* ೩ನೇ ಅತ್ಯುತ್ತಮ ಚಿತ್ರ: ಹರಿವ ನದಿಗೆ ಮೈಯೆಲ್ಲಾ ಕಾಲು
* ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ: ಗಿಳಿಯು ಪಂಜರದೊಳಿಲ್ಲ ಮತ್ತು ಈ ಮಣ್ಣು
* ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ಫೋರ್ ವಾಲ್ಸ್
* ಅತ್ಯುತ್ತಮ ಮಕ್ಕಳ ಚಿತ್ರ: ಪದಕ
* ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ: ನೀಲಿ ಹಕ್ಕಿ( ಗಣೇಶ್ ಹೆಗ್ಡೆ)
* ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಚಿತ್ರ: ಜೀಟಿಗೆ ( ತುಳು)
* ಅತ್ಯುತ್ತಮ ಸಂಗೀತ ನಿರ್ದೇಶಕ: ಗಗನ್ ಬಡೇರಿಯಾ (ಮಾಲ್ಗುಡಿ ಡೇಸ್)
* ಅತ್ಯುತ್ತಮ ಪೋಷಕ ನಟ: ರಮೇಶ್ ಪಂಡಿತ್(ತಲೆದAಡ)
* ಅತ್ಯುತ್ತಮ ಪೋಷಕ ನಟಿ: ಮಂಜುಳಮ್ಮ (ದಂತ ಪುರಾಣ)
* ಅತ್ಯುತ್ತಮ ಕಥೆ: ಶಶಿಕಾಂತ್ ಗಟ್ಟಿ (ರಾಂಚಿ)
* ಅತ್ಯುತ್ತಮ ಚಿತ್ರಕಥೆ: ರಾಘವೇಂದ್ರ ಕುಮಾರ್ (ಚಾಂದಿನಿ ಬಾರ್)
*ಅತ್ಯುತ್ತಮ ಬಾಲ ನಟ: ಅಹಿಲ್ ಅನ್ಸಾರಿ (ದಂತ ಪುರಾಣ)
*ಅತ್ಯುತ್ತಮ ಬಾಲ ನಟಿ: ಬೇಬಿ ಹಿತೈಶಿ ಪೂಜಾರ (ಪಾರು)
*ಅತ್ಯುತ್ತಮ ಕಲಾ ನಿರ್ದೇಶನ: ಗುಣಶೇಖರ (ಬಿಚ್ಚುಗತ್ತಿ)
*ತೀರ್ಪುಗಾರರ ವಿಶೇಷ ಪ್ರಶಸ್ತಿ: ಸಂಚಾರಿ ವಿಜಯ್ (ಮರಣೋತ್ತರ ಪ್ರಶಸ್ತಿ)
ರಾಜ್ಯ ಪ್ರಶಸ್ತಿಗಳ ಆಯ್ಕೆ ಸಮಿತಿಯನ್ನು ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ಬಿ.ಎಸ್.ಲಿಂಗದೇವರು ನೇತೃತ್ವ ವಹಿಸಿದ್ದರು.
Special
ಕೇಂದ್ರೀಯ ವಿದ್ಯಾಲಯ ಶಾಲೆಗಳಲ್ಲಿ 1ನೇ ತರಗತಿ ಪ್ರವೇಶಾತಿಗೆ ಅರ್ಜಿ ಅಹ್ವಾನ : ಆನ್ಲೈನ್ ನೋಂದಣಿ ಆರಂಭ

KVS Entrance Exam Application for Class 1 2025 : 2025 – 26 ನೇ ಸಾಲಿಗೆ ಕೇಂದ್ರೀಯ ವಿದ್ಯಾಲಯ ಶಾಲೆಗಳಲ್ಲಿ ಒಂದನೇ ತರಗತಿ ಪ್ರವೇಶಾತಿಗೆ ಮತ್ತು ಆಯ್ಕೆ ಮಾಡಿದಂತಹ ಬಾಲವಟಿಕ ಶಾಲೆಗಳಲ್ಲಿ 3 ವರ್ಷದಿಂದ 6 ವರ್ಷದ ಮಕ್ಕಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಯಾವ ಯಾವ ಮಕ್ಕಳು ಅರ್ಜಿ ಸಲ್ಲಿಸಬಹುದು?
ಸದ್ಯಕ್ಕೆ ಒಂದನೇ ತರಗತಿಯ ಪ್ರವೇಶಾತಿಗೆ ಹಾಗೂ ಬಾಲವಟಿಕ 1, 2, 3 ರ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಈ ಕೆಳಗಿನ ಮಕ್ಕಳ ಸಂಬಂಧಪಟ್ಟ ಪ್ರವೇಶಾತಿಗೆ ಅರ್ಜಿ ಸಲ್ಲಿಸಬಹುದು.
* 1ನೇ ತರಗತಿ ಪ್ರವೇಶಾತಿಗೆ – 6 ರಿಂದ 7 ವರ್ಷದ ಒಳಗಿನ ಮಕ್ಕಳು
* ಬಾಲವಟಿಕ 1ರ ಪ್ರವೇಶಾತಿಗೆ – 3 ರಿಂದ 4 ವರ್ಷದ ಒಳಗಿನ ಮಕ್ಕಳು
* ಬಾಲವಟಿಕ 2ರ ಪ್ರವೇಶಾತಿಗೆ – 4 ರಿಂದ 5 ವರ್ಷದ ಒಳಗಿನ ಮಕ್ಕಳು
* ಬಾಲವಟಿಕ 3ರ ಪ್ರವೇಶಾತಿಗೆ – 5 ರಿಂದ 6 ವರ್ಷದ ಒಳಗಿನ ಮಕ್ಕಳು
ಕೆಂದಯ್ಯ ವಿದ್ಯಾಲಯ ಶಾಲೆಗಳ ಪ್ರವೇಶಾತಿಗೆ ಯಾವ ವರ್ಗದವರಿಗೆ ಎಷ್ಟು ಮೀಸಲಾತಿ ಇದೆ?
* ಪರಿಶಿಷ್ಟ ಜಾತಿ ವರ್ಗದ ಮಕ್ಕಳಿಗೆ 15%
* ಪರಿಶಿಷ್ಟ ಪಂಗಡ ವರ್ಗದ ಮಕ್ಕಳಿಗೆ 7.5%
* ಇತರೆ ಹಿಂದುಳಿದ ವರ್ಗದ ಮಕ್ಕಳಿಗೆ 27%
ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹಾಗೂ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳ ಮಾಹಿತಿ :
* ಈ ಪ್ರವೇಶಾತಿಗೆ ಅರ್ಜಿಯನ್ನು ಸಲ್ಲಿಸಲು 07ನೇ ಮಾರ್ಚ್ 2025 ರಿಂದ ಆರಂಭವಾಗಿದ್ದು 21 ಮಾರ್ಚ್ 2025 ರವರೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
* ಪ್ರಥಮ ಪ್ರವೇಶ ಪಟ್ಟಿ ಬಿಡುಗಡೆ ದಿನಾಂಕ – ಏಪ್ರಿಲ್ 17, 2025
* ಪ್ರವೇಶ ಪ್ರಕ್ರಿಯೆ ದಿನಾಂಕ – ಏಪ್ರಿಲ್ 17 ರಿಂದ ಏಪ್ರಿಲ್ 21ರವೆರೆಗೆ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?
ಕೇಂದ್ರೀಯ ವಿದ್ಯಾಲಯದ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಹೊಸ ಬಳಕೆದಾರರ ಆಯ್ಕೆಯಲ್ಲಿ ನೋಂದಣಿ ಮಾಡಿ. ನಂತರದಲ್ಲಿ ನಿಮ್ಮ ವಯಕ್ತಿಕ ಮಾಹಿತಿ ಹಾಗೂ ಪೋಷಕರ ಮಾಹಿತಿ ವಿಳಾಸ ಸೇರಿದಂತೆ ಸಂಬಂದಿಸಿದ ದಾಖಲಾತಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಿ.
KVS ಜಾಲತಾಣ : https://kvsangathan.nic.in/
Special
ರುದ್ರಭೂಮಿಯ ಕರ್ಮಯೋಗಿನಿ ನೀಲಮ್ಮ

ವಿಶೇಷ ವರದಿ: ಡಾ. ಕೂಡ್ಲಿ ಗುರುರಾಜ
ಸಾವು-ನೋವು ಕಂಡಾಗ ಜೀವನ ನಶ್ವರ ಅಂತೀವಿ. ಸ್ಮಶಾನಕ್ಕೆ ಹೋದಾಗ ಜೀವನ ಇಷ್ಟೇ ಎಂದು ವೈರಾಗ್ಯ ತಾಳುತ್ತೇವೆ. ನಂತರ ಮರೆತು ಬಿಡುತ್ತೇವೆ. ಅದು ಸ್ಮಶಾನ ವೈರಾಗ್ಯ. ಆದರೆ, ಇಲ್ಲೊಬ್ಬ ಮಹಿಳೆ ಜೀವನ ನಶ್ವರ ಅಂತ ನಿರಂತರವಾಗಿ ಬದುಕುತ್ತಿದ್ದಾರೆ. ಸ್ಮಶಾನದಲ್ಲೇ ವಾಸವಿದ್ದು ಸ್ಮಶಾನ ವೈರಾಗ್ಯ ಅವರದ್ದಾಗಿಲ್ಲ. ಮನುಷ್ಯನ ಸಾವು ಅವರ ಅಂತರಂಗದ ಕಣ್ಣನ್ನು ತೆರೆಸಿದೆ. ಕಾಯಕದಲ್ಲೇ ಕೈಲಾಸ ಕಾಣುವಂತೆ ಮಾಡಿದೆ. ಅವರು ಎಪ್ಪತ್ತು ವರ್ಷದ ನೀಲಮ್ಮ.
ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ ವೀರಶೈವ-ಲಿಂಗಾಯತ ರುದ್ರಭೂಮಿಯಲ್ಲಿ ಶವಗಳ ಅಂತ್ಯ ಸಂಸ್ಕಾರಕ್ಕೆ ಗುಂಡಿ ಅಗೆಯುವ ನೀಲಮ್ಮ ನೊಂದ ಜೀವ. ಹಾಗಂತ ಕೊರಗುತ್ತಾ ಕುಳಿತವರಲ್ಲ. ಹೆಗಲ ಮೇಲೆ ಟವಲ್ ಹಾಕಿಕೊಂಡು ಹಾರೆ, ಪಿಕಾಸಿ ಹಿಡಿದು ನಿಂತರೆ ಗುಂಡಿ ತೋಡುವವರೆಗೂ ವಿರಮಿಸುವುದಿಲ್ಲ. ಮಸಣದಲ್ಲಿ ಕಳೆದ ಇಪ್ಪತ್ತು ವರ್ಷಗಳಲ್ಲಿ ಸುಮಾರು ಐದು ಸಾವಿರ ಗುಂಡಿಗಳನ್ನು ತೋಡಿರುವ ಶ್ರಮಜೀವಿ. ಕರ್ಮಯೋಗಿನಿ. ಮುಖದಲ್ಲಿ ಸಂತೃಪ್ತ ಭಾವ.
ನೀಲಮ್ಮ ಅವರ ಬದುಕು ಅನಿರೀಕ್ಷಿತಗಳ ತಿರುವು. ಯಾವ ಸ್ಮಶಾನಕ್ಕೆ ನೆಂಟರೊಬ್ಬರ ಅಂತ್ಯಸಂಸ್ಕಾರಕ್ಕಾಗಿ ಒಮ್ಮೆ ಬಂದು ಆದಷ್ಟು ಬೇಗ ಇಲ್ಲಿಂದ ಹೊರಡೋಣ ಎಂದು ತಮ್ಮ ಪತಿಯ ಕಿವಿಯಲ್ಲಿ ಉಸುರಿದ್ದರೋ ಮೂರೇ ತಿಂಗಳಲ್ಲಿ ಅದೇ ಸ್ಮಶಾನದ ನಿವಾಸಿಯಾಗಿದ್ದರು ನೀಲಮ್ಮ. ಇದು ಅವರ ಬಾಳಿನ ವಿಧಿಯಾಟ.
ನೀಲಮ್ಮ ಮೈಸೂರು ಜಿಲ್ಲೆ ಸರಗೂರು ತಾಲೂಕಿನ ಕೊತ್ತೇಗಾಲದವರು. ಓದಿದ್ದು ನಾಲ್ಕನೇ ಕ್ಲಾಸ್. ವೀರಶೈವ – ಲಿಂಗಾಯತ ಜಂಗಮ ಸಮಾಜದವರು. ತಂದೆಯ ಕೃಷಿ ಕಾರ್ಯಕ್ಕೆ ನೆರವಾಗಲು ಓದಿಗೆ ತಿಲಾಂಜಲಿ.1975ರಲ್ಲಿ ವಿವಾಹ. ನಂತರ ಪತಿ ಜೊತೆ ಮೈಸೂರಿನಲ್ಲಿ ವಾಸ. ಪತಿ ಎಂ.ಸಿ.ಬಸವರಾಜು ಚಲನಚಿತ್ರ ಮಂದಿರವೊಂದರಲ್ಲಿ ನೌಕರ. ನಂತರ ನಾನಾ ಕಡೆ ಉದ್ಯೋಗ. ಕೊನೆಗೆ 1991 ರಲ್ಲಿ ಮೈಸೂರು ಮಹಾನಗರ ಪಾಲಿಕೆಯ ವೀರಶೈವ-ಲಿಂಗಾಯತ ರುದ್ರಭೂಮಿಯಲ್ಲಿ ನಂದಿ ದೇವಸ್ಧಾನದಲ್ಲಿ ಅರ್ಚಕ. ಜೊತೆಯಲ್ಲಿ ಶವಗಳ ಅಂತ್ಯಸಂಸ್ಕಾರಕ್ಕೆ ನೆರವು. ಸ್ಮಶಾನದಲ್ಲೇ ಪಾಲಿಕೆ ನಿರ್ಮಿಸಿರುವ ಸಣ್ಣ ಮನೆಯಲ್ಲಿ ಬಸವರಾಜು-ನೀಲಮ್ಮ ದಂಪತಿ ಮಕ್ಕಳೊಂದಿಗೆ ವಾಸ. ಬಸವರಾಜು 2005ರಲ್ಲಿ ಹೃದಯಾಘಾತದಿಂದ ಹಠಾತ್ ನಿಧನ. ಹೆಂಡತಿ, ಮಕ್ಕಳ ಮೈ ಮೇಲೆ ಸಾಲದ ಹೊರೆ. ನೀಲಮ್ಮದಿಕ್ಕೆಟ್ಟರು. ಜೊತೆಯಲ್ಲಿ ಇಬ್ಬರು ಪುತ್ರರು. ಮುಂದಿನ ಜೀವನ ಹೇಗೆ ಎಂಬ ಗಾಢ ಚಿಂತೆ.
ಅದೊಂದು ದಿನ. ನೀಲಮ್ಮ ಸ್ಮಶಾನದ ಮನೆಯಲ್ಲೇ ಏಕಾಂಗಿ. ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನ. ಕುತ್ತಿಗೆಗೆ ಬಿಗಿದಿದ್ದ ಗಂಟು ಕಳಚಿಕೊಂಡಿತ್ತು. ನೀಲಮ್ಮ ಬದುಕುಳಿದರು. ದೇವರು ಆಯುಸ್ಸು ಕೊಟ್ಟಿದ್ದಾನೆ. ಈಸಬೇಕು, ಇದ್ದು ಜಯಿಸಬೇಕು ಎಂದು ಅಂದೇ ದೃಢ ಸಂಕಲ್ಪ. ಕೈಗೆ ಅಂದು ಎತ್ತಿಕೊಂಡ ಹಾರೆ, ಪಿಕಾಸಿಯನ್ನು ಇನ್ನೂ ಕೆಳಗಿಳಿಸಿಲ್ಲ. ಶವಗಳಿಗೆ ಗುಂಡಿ ತೋಡುತ್ತಲೇ ಇಪ್ಪತ್ತು ವರ್ಷಗಳನ್ನು ಕಳೆದಿದ್ದಾರೆ. ಸಾಲ ತೀರಿಸಿದ್ದಾರೆ. ಹಿರಿಯ ಮಗ ಗುಂಡಿ ತೋಡಲು ನೆರವಾಗುತ್ತಾನೆ. ಇನ್ನೊಬ್ಬ ಮಗ ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿ. ಮಗ, ಸೊಸೆ, ಮೊಮ್ಮಕ್ಕಳೊಂದಿಗೆ ಸ್ಮಶಾನದಲ್ಲೇ ವಾಸ. ಸೊಸೆಯ ಬಾಣಂತನ ನಡೆದಿದ್ದು ಮಸಣದಲ್ಲೇ.
ನೀಲಮ್ಮ ಒಂದು ಗುಂಡಿಯನ್ನು ಮೂರು ಅಡಿ ಅಗಲ, ಮೂರು ಅಡಿ ಉದ್ದ ತೋಡುತ್ತಾರೆ. ಒಂದು ಗುಂಡಿ ತೆಗೆಯಲು ಸುಮಾರು ಮೂರು ತಾಸುಗಳ ಸಮಯ ಬೇಕು. ಗುಂಡಿ ತೋಡಲು 2005ರಲ್ಲಿ ಆರಂಭಿಸಿದಾಗ ಒಂದು ಗುಂಡಿಗೆ 150 ರೂಪಾಯಿ ಸಂಭಾವನೆ. ಈಗ 1,500 ರೂಪಾಯಿ ಪಡೆಯುತ್ತಾರೆ. ಕೆಲಮೊಮ್ಮೆ ವಾರದಲ್ಲಿ ಐದು ಗುಂಡಿಗಳನ್ನು ಅಗೆಯುತ್ತಾರೆ. ಇನ್ನು ಕೆಲವೊಮ್ಮೆ ಒಂದು ವಾರವಾದರೂ ಗುಂಡಿ ತೋಡುವ ಕೆಲಸ ಬರುವುದಿಲ್ಲ.
ಅವಿವಾಹಿತರ ಶವಗಳು, ಮರಣೋತ್ತರ ಪರೀಕ್ಷೆ ನಡೆದ ಮೃತದೇಹಗಳನ್ನು ಮಲಗಿಸಿ ಅಂತ್ಯಸಂಸ್ಕಾರ ಮಾಡ್ತಾರೆ. ಆಗ ಗುಂಡಿಯನ್ನು ಉದ್ದವಾಗಿ ತೋಡಬೇಕಾಗುತ್ತದೆ. ಉಳಿದ ಶವಗಳನ್ನು ಕೂರಿಸಿ ಅಂತ್ಯ ಸಂಸ್ಕಾರ ಮಾಡುವುದರಿಂದ ಅದಕ್ಕೆ ತಕ್ಕಂತೆ ಗುಂಡಿಯನ್ನು ತೋಡುತ್ತಾರೆ. ಸ್ಮಶಾನದಲ್ಲಿ ಜಾಗದ ಕೊರತೆ. ಹೊಸ ಗುಂಡಿ ತೋಡಲು ಜಾಗ ಸಿಗುವುದು ಕಡಿಮೆ. ಹೀಗಾಗಿ, ಈ ಹಿಂದೆ ಹೆಣಗಳನ್ನು ಹೂತಿದ್ದ ಜಾಗದಲ್ಲೇ ಮತ್ತೆ ಗುಂಡಿ ತೋಡಬೇಕಾಗುತ್ತದೆ. ಇದು ಹಳೆಯ ಗುಂಡಿ ಅಂತ ಮೊದಲೇ ಸಂಬಂಧಪಟ್ಟವರಿಗೆ ತಿಳಿಸುತ್ತಾರೆ. ನನ್ನ ಈ ಕಾಯಕ ಭಗವಂತನ ಇಚ್ಛೆ. ನನ್ನದೇನೂ ಇಲ್ಲ ಎಂದು ನೀಲಮ್ಮ ಮೌನಕ್ಕೆ ಶರಣಾಗುತ್ತಾರೆ.
ಐದಾರು ತಿಂಗಳ ಹಿಂದಿನ ಮಾತು. ನೀಲಮ್ಮ ಅವರ ಅತ್ತೆ ವಯೋಸಹಜ ಕಾಯಿಲೆಯಿಂದ ನೀಲಮ್ಮನ ಮನೆಯಲ್ಲೇ ನಿಧನರಾದರು. ಅವರ ಹೆಣದ ಗುಂಡಿಯನ್ನು ನೀಲಮ್ಮ ಅಗೆದರು. ಇದಕ್ಕೂ ಕೆಲವು ವರ್ಷಗಳ ಮುನ್ನ ತನ್ನ ಮೈದುನರ ಮೃತದೇಹಗಳ ಅಂತ್ಯಸಂಸ್ಕಾರಕ್ಕೂ ಸ್ಮಶಾನದಲ್ಲಿ ಗುಂಡಿ ಅಗೆದಿದ್ದು ನೀಲಮ್ಮನೇ. ಉಮ್ಮಳಿಸಿ ಬರುತ್ತಿದ್ದ ದುಃಖವನ್ನು ತಡೆದು ಗುಂಡಿ ಅಗೆದು ಅತ್ತೆ, ಮೈದುನರ ಶವಗಳನ್ನು ಗುಂಡಿಯೊಳಗೆ ಇಳಿಸಿದ್ದಾರೆ.
ಸ್ಮಶಾನದಲ್ಲಿ ಮೊನ್ನೆ ನೀಲಮ್ಮ ಅವರನ್ನು ಮಾತಾಡಿಸಿದಾಗ ಅವರ ಅಂತರಂಗದ ಮಾತು ಬಹಿರಂಗ. ಎಲ್ಲರಿಗೂ ಒಳಿತನ್ನು ಬಯಸಿದರೆ ದೇವರು ತಾನಾಗಿಯೇ ಎಲ್ಲವನ್ನೂ ಕೊಡುತ್ತಾನೆ. ನಾವು ಯಾರಿಗೂ ಭಾರವಾಗಬಾರದು ಎಂದು ನೀಲಾಕಾಶವನ್ನು ದಿಟ್ಟಿಸಿ ನೋಡುತ್ತಾರೆ. ಸಾಯುವವರೆಗೂ ಇದೇ ಕೆಲಸ ಮಾಡಬೇಕೆಂಬ ದೃಢ ಸಂಕಲ್ಪ. ಕಳೆದುಕೊಳ್ಳಲು ಪಡೆದುಕೊಂಡು ಬಂದಿದ್ದಾದರೂ ಏನೆಂಬ ನಿರ್ಲಿಪ್ತತೆ.
ನೀಲಮ್ಮ ಅವರ ಮಾತಿನಲ್ಲಿ ಅಧ್ಯಾತ್ಮದ ನೋಟ ಇಣುಕುತ್ತದೆ. ಜೀವನದ ಸುಖದುಃಖಗಳ ದರ್ಶನವಾಗುತ್ತದೆ. ಕಾಯಕದ ಮಹತ್ವ ಅರಿವಾಗುತ್ತದೆ. ಇಹಲೋಕದ ನಶ್ವರತೆಯ ಅನಾವರಣವಾಗುತ್ತದೆ. ಅದು ಅವರ ಸಹಜ ಮಾತು. ಜೀವನ ಕಲಿಸಿದ ಪಾಠ. ಕಾಯಕವೇ ಹೇಳಿಕೊಟ್ಟ ನೀತಿ ಬೋಧನೆ. ಬೂಟಾಟಿಕೆಗೆ ಆಸ್ಪದವೇ ಇಲ್ಲ.
ನೀವು ಸ್ಮಶಾನದಲ್ಲೇ ಏಕೆ ವಾಸ ಮಾಡ್ಬೇಕು? ಬೇರೆ ಕಡೆ ಮನೆ ಮಾಡಬಹುದಲ್ವಾ? ಅಂದ್ರೆ ನೀಲಮ್ಮ ಏನು ಹೇಳ್ತಾರೆ ಗೊತ್ತಾ? ಬೇರೆ ಕಡೆ ಮನೆ ಮಾಡಿದರೂ ಕೊನೆಗೆ ಇಲ್ಲಿಗೇ ಹೊತ್ತುಕೊಂಡು ಬರ್ತಾರಲ್ವಾ? ನನ್ನ ಬದುಕಿನ 70 ವರ್ಷದಲ್ಲಿ 33 ವರ್ಷಗಳನ್ನು ಸ್ಮಶಾನದಲ್ಲೇ ಕಳೆದಿದ್ದೇನೆ. ಇನ್ನೇಕೆ ಬೇರೆ ಕಡೆ ಮನೆ? ಎಂಬ ಪ್ರಶ್ನೆ.
ನೀಲಮ್ಮ ತನ್ನ ಪತಿಯ ಶವವನ್ನು ಸ್ಮಶಾನದಲ್ಲೇ ಮನೆಯ ಪಕ್ಕದಲ್ಲೇ ಹೂತಿದ್ದಾರೆ. ಪ್ರತಿದಿನ ಬೆಳಗ್ಗೆ ಎದ್ದು ಪತಿಯನ್ನು ಕಾಣುತ್ತೇನೆ. ಪತಿಯ ಜೊತೆ ಜೀವನ ಮಾಡಿದೆ. ಪತಿ ಸತ್ತ ನಂತರವೂ ಅವರ ಜೊತೆಗೇ ಇದ್ದೇನೆ. ಪ್ರತಿದಿನ ಅವರನ್ನು ನೋಡ್ತೀನಿ. ನಾನು ಓಡಾಡ್ತೀನಿ, ಅವರು ಓಡಾಡಲ್ಲ ಅಷ್ಟೇ ವ್ಯತ್ಯಾಸ. ಯಾರಿಗಿದೆ ಈ ಭಾಗ್ಯ ಎಂದು ನೀಲಮ್ಮ ಕೇಳುವಾಗ ಅವರ ಮಾತಲ್ಲಿ ಪ್ರೀತಿ ಎದ್ದು ಕಾಣುತ್ತದೆ.
ಸ್ಮಶಾನ ಮೈಲಿಗೆ ಅಲ್ಲ. ಸ್ಮಶಾನ ರುದ್ರದೇವರ ವಾಸಸ್ಥಳ. ಸ್ನಾನ ಮಾಡಿಕೊಂಡು ಸ್ಮಶಾನಕ್ಕೆ ಬರಬೇಕು, ಸ್ಮಶಾನದಿಂದ ಹೋದ ನಂತರ ಸ್ನಾನ ಮಾಡೋದಲ್ಲ ಎಂಬುದು ನೀಲಮ್ಮ ನುಡಿ.
ಸ್ಮಶಾನದಲ್ಲಿ ದೆವ್ವ, ಭೂತಗಳ ಕಾಟ ಇದೆಯಾ ಅಂತ ಕೆಲವರು ಕೇಳ್ತಾರೆ. ಯಾವ ದೆವ್ವ, ಭೂತಗಳು? ನಾವೇ ದೆವ್ವಗಳು. ಇಲ್ಲಿರೋದು ಒಂದೇ ಕಾಟ, ಅದು ಸೊಳ್ಳೆಕಾಟ ಅಂತ ನೀಲಮ್ಮ ನಗೆ ಚಟಾಕಿ ಹಾರಿಸುತ್ತಾರೆ.
ನೀಲಮ್ಮ ಹಾಗೂ ಅವರ ಇಬ್ಬರು ಪುತ್ರರು ತಮ್ಮ ಸಾವಿನ ನಂತರ ತಮ್ಮ ಮೃತದೇಹಗಳನ್ನು ಮೈಸೂರು ಮೆಡಿಕಲ್ ಕಾಲೇಜಿಗೆ ದಾನ ಮಾಡುವ ಪತ್ರಕ್ಕೆ ಸಹಿ ಮಾಡಿದ್ದಾರೆ. ನಮ್ಮ ಹತ್ತಿರ ದಾನ ಮಾಡೋಕ್ಕೆ ಬೇರೆ ಏನೂ ಇಲ್ಲ. ಹಾಗಾಗಿ, ದೇಹವನ್ನೇ ಸತ್ತ ಮೇಲೆ ದಾನ ಮಾಡ್ತೀವಿ. ಇದರಿಂದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಉಪಯೋಗವಾದರೆ ಅದಕ್ಕಿಂತ ಇನ್ನೇನು ಭಾಗ್ಯ ಬೇಕು ಎಂದು ನೀಲಮ್ಮ ಕೇಳುವಾಗ ಸಾರ್ಥಕತೆ ಭಾವ ಅವರನ್ನು ಆವರಿಸುತ್ತದೆ.
-
Mandya8 hours ago
ಜನಮಿತ್ರ ಫಲಶೃತಿ: ಹೆಬ್ಬಾಡಿಹುಂಡಿ ಗ್ರಾಮದ ಸ್ಮಶಾನ ಜಾಗದ ರಸ್ತೆ ಬೇಲಿಗೆ ಸಿಗ್ತು ಉತ್ತರ
-
Hassan15 hours ago
ಹಾಸನದಲ್ಲಿ ಭಾರೀ ಮಳೆ: ಅಪಾರ ಪ್ರಮಾಣದ ಬೆಳೆ ಹಾನಿ
-
Mandya11 hours ago
ಜೆಎಸ್ಎಸ್ ಕಾಲೇಜಿನಲ್ಲಿ ಪತ್ರಿಕಾ ಬರಹ ಕುರಿತು ಕಾರ್ಯಾಗಾರ
-
Kodagu12 hours ago
ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ
-
Kodagu8 hours ago
ಮಡಿಕೇರಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ಲೈಬಸ್ ಸಂಚಾರ
-
Mandya10 hours ago
ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕರೆ ಕೂಡಲೇ ತಿಳಿಸಿ
-
Hassan14 hours ago
ಕ್ಷಯ ಮುಕ್ತ ಭಾರತವನ್ನಾಗಿ ಮಾಡಲು ಎಲ್ಲಾರೂ ಕೈಜೋಡಿಸಿ: ಡಿಸಿ ಸಿ. ಸತ್ಯಭಾಮ
-
Kodagu11 hours ago
ನಿವೃತ್ತ ಶಿಕ್ಷಕಿಯಿಂದ ಕಕ್ಕಬ್ಬೆ ಯುವಕಪಾಡಿ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಚಾರಣ ಭಾಗ್ಯ