Hassan
ಕೋಮುವಾದಿ ಧ್ವೇಷದ ವಿಷಬೀಜವನ್ನು ಚಿಗುರಿನಲ್ಲೆ ಹೊಡೆದು ಹಾಕಿ ಸೌಹಾರ್ದತಾ ಮಾನವ ಸರಪಳಿಯಲ್ಲಿ ರೂಪ ಹಾಸನ್ ಕರೆ
ಹಾಸನ : ಧಮನ ನೀತಿಗೆ ನಾವು ತಲೆ ತಗ್ಗಿಸುವುದಿಲ್ಲ. ಕೋಮುವಾದಿ ಧ್ವೇಷದ ವಿಷ ಬೀಜವನ್ನು ಚಿಗುರಿನಲ್ಲೆ ಇಲ್ಲವೇ ಮೊಳಕೆಯಲ್ಲೆ ಹೊಡೆದು ಹಾಕಬೇಕು ಎಂದು ಹಿರಿಯ ಸಾಹಿತಿ ರೂಪ ಹಾಸನ್ ಕರೆ ನೀಡಿದರು.
ನಗರದ ಹೇಮಾವತಿ ಗಾಂಧಿ ಹುತಾತ್ಮ ದಿನದ ಅಂಗವಾಗಿ ಪ್ರತಿಮೆ ಬಳಿ ವಿವಿಧ ಸಂಘ ಸಂಸ್ಥೆ, ಪ್ರಗತಿಪರ ಮುಖಂಡರು, ವಿವಿಧ ಸಂಘಟನೆಗಳು, ರೈತರು, ಧಾರ್ಮಿಕ ಅಲ್ಪಸಂಖ್ಯಾತ ಸಂಘಟನೆಗಳು ಸೇರಿ ಮಂಗಳವಾರದಂದು ಸಂಜೆ ಹಮ್ಮಿಕೊಳ್ಳಲಾಗಿದ್ದ ಸೌಹಾರ್ದತಾ ಮಾನವ ಸರಪಳಿ ಹಾಗೂ ಸಭೆಯಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ಇಂದು ವಿವೇಕ ಅವಿವೇಕ, ಸತ್ಯ-ಅಸತ್ಯ, ವಿಚಾರ-ವಿಕಾರಗಳ ನಡುವಿನ ಅಂತರ ಕಡಿಮೆಯಾಗುತ್ತಿದೆ. ಆದರೆ ಮನುಷ್ಯ-ಮನುಷ್ಯರ ನಡುವಿನ ’ಕಂದರ’ ಹೆಚ್ಚಾಗುತ್ತಿದೆ. ಈ ಕಂದರದ ಒಳಗಿಂದ ಬರುತ್ತಿರುವ ಕರುಳ ಬಳ್ಳಿಯ ಕರೆ ಕ್ಷೀಣ ದನಿಯಾಗುತ್ತಿದೆ. ಹೊರಗಿನ ಅನುಚಿತ ಗೂಳಿಗದ್ದಲದಲ್ಲಿ ಕರುಳಬಳ್ಳಿಯ ಮಾನವೀಯ ಕರೆ ಕೇಳಿಸದಂತಾಗಿದೆ. ಇಂಥ ಕಳವಳಕಾರಿ ವಾತಾವರಣದಲ್ಲಿ ಸೌಹಾರ್ದವನ್ನು ಮುನ್ನೆಲೆಗೆ ತರಲು ಎಲ್ಲ ಕ್ಷೇತ್ರಗಳ ಮಾನವೀಯ ಮನಸ್ಸುಗಳು ಮುಂದಾಗಬೇಕಾಗಿದೆ ಎಂದರು. ಸೌಹಾರ್ದ ಎಂದರೆ ಪಕ್ಷಪಾತವಲ್ಲ. ಪೂರ್ವಾಗ್ರಹವಲ್ಲ. ಇದು ಎಲ್ಲಾ ವಲಯದ ಅವಿವೇಕಗಳನ್ನು ಮೀರಿದ ವಿವೇಕದ ಹಾದಿ. ಶಾಂತಿ, ಸಮಾಧಾನ ಮತ್ತು ಸಮಾನ ಮನಸ್ಥಿತಿಯ ಸಾಮಾಜಿಕ ಮೌಲ್ಯಪರ ಮತ್ತು ವಿರೋಧಿ ನೆಲೆಗಳಲ್ಲಿರುವ ವೈರುಧ್ಯಗಳನ್ನು ಒಂದಾಗಿಸುವ ಪ್ರಕ್ರಿಯೆಯ ಪ್ರತೀಕವೇ ಸೌಹಾರ್ದ. ಸಂವಿಧಾನದ ಆಶಯಗಳಿಗೆ ಬದುಕುತ್ತೀವಿ ಎಂದು ಹೇಳಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಮತ್ತು ಹಿರಿಯ ಪತ್ರಕರ್ತರಾದ ವೆಂಕಟೇಶ್ ಮಾತನಾಡಿ, ಪ್ರಗತಿಪರ ಮುಖಂಡರು, ವಿವಿಧ ಸಂಘಟನೆಗಳು, ರೈತರು, ಧಾರ್ಮಿಕ ಅಲ್ಪಸಂಖ್ಯಾತ ಸಂಘಟನೆಗಳು ಸೌಹಾರ್ದತಾ ಮಾನವ ಸರಪಳಿಗೆ ಸಹಕಾರ ನೀಡಿದ್ದು, ಪ್ರಸ್ತೂತದಲ್ಲಿ ದೇಶವನ್ನು ಹೊಡೆಯುವುದಕ್ಕೆ ಕೇಂದ್ರ ಸರಕಾರವೇ ಮುಂದಾಗಿದೆ. ನಮ್ಮದು ಮತದಾನದ ಪ್ರಜಾಪ್ರಭುತ್ವ. ಯಾವುದೇ ಜಾರಿ, ಧರ್ಮದ ಪರವಾಗಿಲ್ಲ. ಇಂದು ಸಂವಿಧಾನದ ಆಶಯವನ್ನು ಗಾಳಿಗೆ ತೂರಿ ಒಂದೆ ಭಾಷ ಪರವಾಗಿ ಆಡಳಿತ ನಡೆಸಲಾಗುತ್ತಿದೆ ಎಂದರು. ಮಹಾತ್ಮ ಗಾಂಧಿ ಹತ್ಯೆಯಾದ ಮೇಲೆ ಒಂದೆ ಪದ ಹೇಳುವುದು ಹೇ ರಾಮ್ ಎಂದು ಸಾವನಪ್ಪುತ್ತಾರೆ. ಇಂದು ಜೈಶ್ರೀರಾಮ್ ಎಂದು ಈ ದೇಶವನ್ನು ಹಾಳು ಮಾಡಲು ದೊಡ್ಡ ಗುಂಪು ನಿಂತು ಬಿಟ್ಟಿದೆ. ಇದು ದೇಶದ ಸಂವಿಧಾನಕ್ಕೆ, ದೇಶದ ಐಕ್ಯತೆಗೆ ಬಾರಿ ಅಪಾಯವಿದೆ. ಸೌಹಾರ್ಧ ಪರಂಪರೆಯನ್ನು ಎತ್ತಿ ಹಿಡಿಯಲು ಈ ಸೌಹಾರ್ಧತಾ ಮಾನವ ಸರಪಳಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ನಮ್ಮ ಭಾರತಕ್ಕೆ ಬಹುದೊಡ್ಡ ಸೌಹಾರ್ದ ಪರಂಪರೆಯಿದೆ. ಬಹು ಸಂಸ್ಕೃತಿ, ಬಹುಭಾಷೆ ಮತ್ತು ಬಹು ಧರ್ಮಗಳ ಎಲ್ಲರೂ ಪರಸ್ಪರ ಸೌಹಾರ್ದದಿಂದ ಬದುಕುತ್ತ, ಆರೋಗ್ಯಕರ ಸಮಾಜ ನಿರ್ಮಾಣ ಮಾಡಬೇಕೆಂಬ ಬದ್ಧತೆಯಿಂದ ಅನೇಕ ಸಾಧಕರು ಶ್ರಮಿಸಿದ್ದಾರೆ. ಜಾತಿ, ಮತ ಧರ್ಮಗಳನ್ನು ಮೀರಿ ಒಟ್ಟಾಗಿ ಜೀವಿಸಿದ ಸೋದರತ್ವದ ಮೌಲ್ಯವನ್ನು ಪ್ರತಿನಿಧಿಸಿದ್ದಾರೆ. ವಿವಿಧ ಹಬ್ಬಾದಿ ಆಚರಣೆಗಳನ್ನು ಒಟ್ಟಾಗಿ ಮಾಡಿ ಸಂಭ್ರಮಿಸಿದ ನಿದರ್ಶನಗಳಿಗೂ ನಮ್ಮ ದೇಶವು ಉತ್ತಮ ಸಾಕ್ಷಿ ಸ್ವರೂಪಿಯಾಗಿದೆ. ಬಹುತ್ವದ ಬದುಕಿನ ಮಾದರಿಯಾಗಿ ವಿಶ್ವಕ್ಕೆ ದಾರಿತೋರಿಸಿದೆ. ನಮ್ಮ ಕರ್ನಾಟಕವು ಇಂತಹ ಸೌಹಾರ್ದ ಪರಂಪರೆಯನ್ನು ಉನ್ನತ ಮಟ್ಟದಲ್ಲಿ ಬಂದ ಆದರ್ಶ ರಾಜ್ಯವಾಗಿದೆ ಎಂದು ಹೇಳಿದರು. ಭಾರತ ಭಾರತವಾಗಿರಬೇಕು. ಧರ್ಮವು ರಾಷ್ಟ್ರೀಯತೆಗೆ ಮಾನದಂಡವಲ್ಲ. ಅದು ಮನುಷ್ಯ ಮನುಷ್ಯನ ನಡುವಿನ ವಯಕ್ತಿಕ ಸಂಬಂಧ. ಮನಸ್ಸಿನಲ್ಲಿ ಪರಧರ್ಮದ ಬಗ್ಗೆ ಕೆಟ್ಟದಾಗಿ ಯೋಚಿಸಬಾರದು. ಎಲ್ಲಾ ಧರ್ಮಗಳನ್ನು ಸಮದೃಷ್ಠಿಯಲ್ಲಿ ನೋಡಿ ಬೇರೆ ಧರ್ಮದಲ್ಲಿರುವ ಒಪ್ಪಿತ ವೈಶಿಷ್ಟ್ಯಗಳನ್ನು ಎಲ್ಲಾ ಧರ್ಮಿಯರು ಅಳವಡಿಸಿಕೊಳ್ಳಬೇಕು ಎಂದರು. ಹಲವು ದಶಕಗಳಿಂದಲೂ ಕರ್ನಾಟಕವನ್ನು ‘ಸರ್ವ ಜನಾಂಗದ ಶಾಂತಿಯ ತೋಟ’ ಎಂದು ಹೆಮ್ಮೆಯಿಂದ ಕರೆಯುತ್ತಾ ಬಂದ ಹಿರಿಮೆಗೆ ಈಗಾಗಲೇ ಗಂಭೀರ ಧಕ್ಕೆ ಬಂದೊದಗಿರುವುದು ನಿಚ್ಚಳವಾಗಿದೆ ಎಂದು ಎಚ್ಚರಿಸಿದರು.

ಇದೆ ವೇಳೆ ಅಂತರಾಷ್ಟ್ರೀಯ ಚಿತ್ರಕಲಾವಿದ ಕೆ.ಟಿ. ಶಿವಪ್ರಸಾದ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಸಂಚಾಲಕ ಅಂಬೂಗ ಮಲ್ಲೇಶ್, ಕ್ರೈಸ್ತ ಮುಖಂಡರಾದ ಸುರೇಶ್, ಜೀವನ್ ಪ್ರಕಾಶ್, ಹಿರಿಯ ಪತ್ರಕರ್ತರಾದ ವೆಂಕಟೇಶ್, ಅಜಾದ್ ಟಿಪ್ಪು ಸಂಘರ್ಷ ಸಮಿತಿ ಅಧ್ಯಕ್ಷ ಮುಬಾಶೀರ್ ಅಹಮದ್, ಜೈಭೀಮ್ ಬ್ರಿಗೇಡ್ ಅಧ್ಯಕ್ಷ ರಾಜೇಶ್, ಸೌಹಾರ್ದ ವೇದಿಕೆಯ ಜಿಲ್ಲಾ ಸಂಚಾಲಕ ಎಂ.ಜಿ. ಪೃಥ್ವಿ, ನವೀನ್ ಕುಮಾರ್, ಮಲೆನಾಡು ಮೆಹಬೂಬ್, ಸಮೀರ್, ಚೇತನ್, ಅರವಿಂದ್, ಅಜ್ಜಾಂ ಖಾನ್, ಅಮ್ಜಾದ್ ಖಾನ್ ಇತರರು ಉಪಸ್ಥಿತರಿದ್ದರು.
Hassan
ಗೋಮಾತೆ ಎಂದಿಗೂ ಕೈ ಬಿಡುವುದಿಲ್ಲ: ಸದಾಶಿವ ಶಿವಾಚಾರ್ಯ ಸ್ವಾಮೀಜಿ
ವರದಿ: ಸತೀಶ್ ಚಿಕ್ಕಕಣಗಾಲು
ಆಲೂರು: ಮನುಷ್ಯನನ್ನು ಭೂಮಿ ಕೈಬಿಟ್ಟರೂ ಗೋಮಾತೆ ಕೈ ಬಿಡುವುದಿಲ್ಲ ಎಂದು ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷರಾದ ಶ್ರೀ ಸದಾಶಿವ ಶಿವಾಚಾರ್ಯಸ್ವಾಮಿಜಿ ಹೇಳಿದರು.
ತಾಲೂಕಿನ ಪಾಳ್ಯ ಹೋಬಳಿ ಯಲಗನಹಳ್ಳಿ ಗ್ರಾಮದಲ್ಲಿ ನೂತನವಾಗಿ ಪ್ರಾರಂಭಗೊಂಡ ಹಾಲು ಉತ್ಪಾದಕರ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು. ಇಟ್ಟರೆ ಸಗಣಿಯಾದೆ, ತಟ್ಟಿದರೆ ಕರುಲಾದೆ, ಸುಟ್ಟರೆ ನೊಸಲಿಗೆ ವಿಭೂತಿಯಾದೆ, ತಟ್ಟದೆ ಹಾಕಿದರೆ ಮೇಲು ಗೊಬ್ಬರವಾದೆ, ನೀನಾರಿಗದೆಯೊ ಎಲೆ ಮಾನವ, ಹರಿ ಹರಿ ಗೋವು ನಾನು ಎಂಬ ಕವಿ ವಾಣಿಯಂತೆ. ಗೋವಿನಿಂದ ಪ್ರತಿಯೊಂದು ಫಲವನ್ನು ಮಾನವ ಕಂಡುಕೊಂಡಿದ್ದಾನೆ ಎಂದರು.

ಇತ್ತಿಚೆಗೆ ದೇಶದಲ್ಲಿ ಕ್ಷೀರಕ್ರಾಂತಿಯಾದ ನಂತರ ಹಾಲು ಒಕ್ಕೂಟಗಳು ವಿಶೇಷವಾಗಿ ಬೆಳೆದು ನಿಂತಿವೆ. ರಾಜ್ಯದಲ್ಲಿ ಹಾಲು ಉತ್ಪಾದನೆಲಯಲ್ಲಿ ಬೆಂಗಳೂರು ಪ್ರಥಮ ಸ್ಥಾನದಲ್ಲಿದ್ದರೆ ಹಾಸನ ಹಾಲು ಒಕ್ಕೂಟ ಎರಡನೆ ಸ್ಥಾನದಲ್ಲಿರುವುದು ವಿಶೇಷ. ಇತ್ತಿಚೆಗೆ ಕೃತಕ ಹಾಲು ಉತ್ಪಾದನೆಯಲ್ಲಿ ರಸಾಯನಿಕ ಬೆರೆಸಿ ಮಾರಾಟ ಮಾಡುತ್ತಿರುವುದು ಆಘಾತಕಾರಿ ಬೆಳವಣಿಗೆ ಎಂದು ಹೇಳಿದರು.
ತಿರುಪತಿ ದೇವಸ್ಥಾನದಲ್ಲಿ ಲಡ್ಡು ತಯಾರು ಮಾಡಲು ರಾಜ್ಯದಿಂದ ಶುದ್ಧ ನಂದಿನಿ ಹಾಲು ಪಡೆಯುತ್ತಿದ್ದರು. ದೇವಸ್ಥಾನ ಆಡಳಿತ ಮಂಡಲಿ ಅಧಿಕ ಆರ್ಥಿಕ ಲಾಭದ ದೃಷ್ಟಿಯಿಂದ ಬೇರೆಡೆಯಿಂದ ಹಾಲು ಪಡೆದು ಲಡ್ಡು ತಯಾರು ಮಾಡುತ್ತಿದ್ದರು. ಪರಿಶೀಲಿಸಿದಾಗ ಹಂದಿ ಕೊಬ್ಬು ಬಳಸುತ್ತಿರುವುದು ಕಂಡು ಬಂದಿರುವುದು ಆಘಾತಕಾರಿ ವಿಷಯ. ಶ್ರೀಮಂತ ದೇವಾಲಯದಲ್ಲಿ ಅನಾಚಾರ ನಡೆದು ಬೆಳಕಿಗೆ ಬಂತು. ನಂತರದಲ್ಲಿ ಕರ್ನಾಟಕ ಹಾಲು ಒಕ್ಕೂಟದಿಂದ ತಯಾರಾಗುವ ನಂದಿನಿ ತುಪ್ಪ ಪಡೆಯಲು ಬಂದಿರುವುದು ಬಹಳ ವಿಶೇಷ. ಗೋವು ಕಸವನ್ನು ತಿಂದರೂ ಹಾಲು ನೀಡುತ್ತದೆ. ಹಾಲಿನಲ್ಲಿ 20 ದಿನದ ವರೆಗೆ ವಿಷ ಬರುವುದಿಲ್ಲ. ಯುವಜನರು ಹೈನುಗಾರಿಕೆಯಲ್ಲಿ ತೊಡಗಬೇಕು. ಆಡಳಿತ ಮಂಡಲಿ ಗ್ರಾಹಕರನ್ನು ಪ್ರೋತ್ಸಾಹಿಸಬೇಕು ಎಂದರು.

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಕೆ. ಎಸ್. ಮಂಜೇಗೌಡರು ಮಾತನಾಡಿ, ಗೋವುಗಳನ್ನು ಸಾಕಿ ಅದರ ಉಪಯೋಗ ಪಡೆದುಕೊಂಡವರಿಗೆ ಮಾತ್ರ ಪಡೆದ ಫಲ ಅರ್ಥವಾಗುತ್ತದೆ. ಮಾಜಿ ಸಚಿವ ಎಚ್. ಡಿ. ರೇವಣ್ಣ ರವರು ರಾಜ್ಯದಲ್ಲಿ ಹಾಲು ಉತ್ಪಾದನೆ ಮತ್ತು ಮಾರಾಟ ಮಾಡಲು ಸಹಕಾರ ಮಂಡಲಿಗಳನ್ನು ರಚಿಸಿ, ಹೈನುಗಾರಿಕೆ ಅಭಿವೃದ್ಧಿಗೆ ಕಾರಣವಾಗಿದ್ದಾರೆ. ಹೈನುಗಾರಿಕೆ ಕುಟುಂಬದ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲು ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಾಸನ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಪಿ. ಲಿಂಗರಾಜು, ಆಡಳಿತ ಅಧಿಕಾರಿ ಸೌಜನ್ಯ, ಸಂಘದ ಅಧ್ಯಕ್ಷ ಹಾಲಪ್ಪ, ಕಾರ್ಯದರ್ಶಿ ಯೋಗೇಶ್, ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
Hassan
ಪೋಕ್ಸೋ ಪ್ರಕರಣ: ಮೂವರು ಆರೋಪಿಗಳಿಗೆ ಶಿಕ್ಷೆ ವಿಧಿಸಿದ ಕೋರ್ಟ್
ಸಕಲೇಶಪುರ: ತಾಲೂಕಿನಲ್ಲಿ 2016 ರಲ್ಲಿ ನಡೆದಿದ್ದ ಪೋಕ್ಸೋ ಪ್ರಕರಣವೊಂದರ ಆರೋಪಿಗಳಿಗೆ ಹಾಸನದ ತ್ವರಿತ ನ್ಯಾಯಾಲಯ ವಿವಿಧ ರೀತಿಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದ ಎ-1 ಆರೋಪಿ ರೂಪೇಶ್ ಎಂಬಾತನಿಗೆ 10 ಸಜೆ ಜೊತೆಗೆ ಅಟ್ರಾಸಿಟಿ ಕೇಸಲ್ಲಿ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಹಾಗೆಯೇ ಎ-2 ಆರೋಪಿ ಹೊನ್ನಪ್ಪನಿಗೆ 10 ವರ್ಷ ಸಜೆ ಮತ್ತು ಪ್ರಕರಣದ ಮೂರನೇ ಚಂದ್ರಶೇಖರ್‌ಗೆ 7 ವರ್ಷ ಶಿಕ್ಷೆ ವಿಧಿಸಲಾಗಿದೆ.

9 ವರ್ಷಗಳ ಹಿಂದೆ ನಡೆದಿದ್ದ ಪ್ರಕರಣದ ಸುದೀರ್ಘ ತನಿಖೆ ನಡೆಸಿದ ಸಕಲೇಶಪುರ ಗ್ರಾಮಾಂತರ ಪೊಲೀಸರು ನಂತರ ಕೋರ್ಟ್‌ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
Hassan
ಪುಲ್ವಾಮ ದಾಳಿಯಲ್ಲಿ ಮೃತಪಟ್ಟರ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ : ಫೆ.14 ರಂದು ಬೈಕ್ ರ‍್ಯಾಲಿ
ಹಾಸನ: ಪುಲ್ವಾಮ ದಾಳಿಯಲ್ಲಿ ಮೃತಪಟ್ಟರ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ಉದ್ದೇಶದಿಂದ ಫೆ.14 ರಂದು ನಗರದಲ್ಲಿ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ನಿವೃತ್ತ ಅರೆಸೇನಾ ಪಡೆ
ಒಕ್ಕೂಟದ ಜಿಲ್ಲಾಧ್ಯಕ್ಷ ಸಿ. ನಾಗೇಶ್ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2019 ರ ಫೆ. 14 ರಂದು ಜಮ್ಮು ಕಾಶ್ಮೀರ ದ ಪುಲ್ವಾಮ ಬಳಿ ನಡೆದ ಉಗ್ರರ ದಾಳಿಯಲ್ಲಿ 44 ಮಂದಿ ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಉದ್ದೇಶದಿಂದ ಬೈಕ್ ರ್ಯಾಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಅಂದು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಹಾಸನ ನಗರದ ಡೈರಿ ಸರ್ಕಲ್ ನಿಂದ ಬೈಕ್ ರ್ಯಾಲಿ
ಪ್ರಾರಂಭವಾಗಿ ರಿಂಗ್ ರಸ್ತೆಯವ ತನ್ವಿ ತ್ರಿಷಾ ಕಲ್ಯಾಣ ಮಂಟಪ ಮಾರ್ಗವಾಗಿ ಸುಬೇದಾರ್ ನಾಗೇಶ್ ವೃತ್ತ, ಸಾಲಗಾಮೆ ರಸ್ತೆ, ಮಲೆನಾಡು ಇಂಜಿನಿಯರಿಂಗ್ ಕಾಲೇಜು, ಸಹ್ಯಾದ್ರಿ ಸರ್ಕಲ್, ಹೇಮಾವತಿ ಪ್ರತಿಮೆ ಮುಂಭಾಗದಿಂದ ಎನ್ ಆರ್ ಸರ್ಕಲ್, ಡಿ ಸಿ ಕಛೇರಿ ಮೂಲಕ ಹಾಯ್ದು ರೈಲ್ವೆ ಸ್ಟೇಷನ್ ಮತ್ತು ಡೈರಿ ಸರ್ಕಲ್ ಮುಖಾಂತರ ಕೆಂಚಟಹಳ್ಳಿಯಲ್ಲಿ ಇರುವ ನಮ್ಮ ನಿವೃತ್ತ ಅರಸೇನಾ ಪಡೆಯ ಕಟ್ಟಡದ ಹತ್ತಿರಕ್ಕೆ ಸಾಗುತ್ತದೆ ಮತ್ತು ಅಲ್ಲಿ ಮುಕ್ತಾಯವಾಗುತ್ತದೆ ಎಂದು ವಿವರಿಸಿದರು.

ರ್ಯಾಲಿಯಲ್ಲಿ ಸಾರ್ವಜನಿಕರು, ವಿವಿಧ ಸಂಘಟನೆ ಪ್ರತಿನಿಧಿಗಳು ಭಾಗವಹಿಸಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಬೇಕಾಗಿ ಮನವಿ ಮಾಡಿದರು.
ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ರಮೇಶ್, ನಾರಾಯಣಪ್ಪ, ಎಚ್.ಕುಮಾರ್, ಎಚ್.ಆರ್.ವಿಜಯ್ ಕುಮಾರ್ ಮತ್ತಿತರರು ಇದ್ದರು.
-
Mandya9 hours agoನದಿಯ ಪಾವಿತ್ರ್ಯತೆ ಮತ್ತು ಪರಿಸರ ರಕ್ಷಣೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಿ : ಅಸ್ಥಿ ವಿಸರ್ಜನೆಯ ಜೊತೆಗೆ ಬಟ್ಟೆ ಮತ್ತು ಪೂಜಾ ಸಾಮಗ್ರಿ ಬಿಡುವುದು ಸಂಪೂರ್ಣ ನಿಷೇಧ – ಡಿಸಿ
-
State2 hours agoಲೈಂಗಿಕ ದೌರ್ಜನ್ಯ ಕೇಸ್: ಮಂಡ್ಯ ರಮೇಶ್, ಸಾಧು ಕೋಕಿಲ ವಿರುದ್ದದ ಪ್ರಕರಣವನ್ನು ರದ್ದುಗೊಳಿಸಿದ ಹೈಕೋರ್ಟ್
-
Hassan3 hours agoಗೋಮಾತೆ ಎಂದಿಗೂ ಕೈ ಬಿಡುವುದಿಲ್ಲ: ಸದಾಶಿವ ಶಿವಾಚಾರ್ಯ ಸ್ವಾಮೀಜಿ
-
Special1 hour agoಉಚಿತ PSI ಕೋಚಿಂಗ್: ಪರೀಕ್ಷೆ ಇಲ್ಲದೆ ಆಯ್ಕೆ!!
-
Chamarajanagar7 hours agoಮಲೆ ಮಹದೇಶ್ವರ ಬೆಟ್ಟದ ಮಹಾಶಿವರಾತ್ರಿ ಜಾತ್ರೆಗೆ ದ್ವಿಚಕ್ರ, ತ್ರಿಚಕ್ರ ವಾಹನ ನಿಷೇಧ: ಡಿಸಿ ಆದೇಶ
-
Mandya4 hours agoಫೆ.15ಕ್ಕೆ ಭೈರವೈಕ್ಯ ಶ್ರೀಕುಮಾರ ಚಂದ್ರಶೇಖರನಾಥ ಮಹಾಸ್ವಾಮೀಜಿಯವರ ಅಭಿನಂದನಾ ಗ್ರಂಥ ಲೋಕಾರ್ಪಣೆ : ಬಸವರಾಜ್
-
Mandya3 hours agoಮೂಲ ಸೌಕಾರ್ಯಗಳನ್ನು ಕಲ್ಪಿಸುವಂತೆ ಕೆ.ಎಂ.ಉದಯ್ಗೆ ಮನವಿ ಸಲ್ಲಿಸಿದ ಮಹಿಳೆಯರು
-
National2 hours agoರಾಜ್ಯಸಭೆಯಲ್ಲಿ ಕರ್ನಾಟಕ ರಾಜ್ಯದ ಬಗ್ಗೆ ಪುನಃ ಧ್ವನಿ ಎತ್ತಿದ ಮಾಜಿ ಪ್ರಧಾನಿ ಎಚ್ಡಿಡಿ
