Connect with us

Kodagu

ಕೊಡಗು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಂದರ್ ರಾಜ್ ವರ್ಗಾವಣೆ

Published

on

ಕೊಡಗು: ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸುಂದರ್ ರಾಜ್ ಅವರನ್ನು ಮೈಸೂರಿನ ಅಪರಾಧ ಹಾಗೂ ಸಂಚಾರ ವಿಭಾಗದ ಡಿಸಿಪಿಯಾಗಿ ವರ್ಗಾವಣೆಗೊಳಿಸಿ ಪೊಲೀಸ್ ಸೇವೆಗಳ ಒಳ ಆಡಳಿತ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ ಧನಂಜಯ ಆದೇಶ ಹೊರಡಿಸಿದ್ದಾರೆ.

Continue Reading

Kodagu

ನಿಟ್ಟೂರು ಜಾಗಲೆ ಗ್ರಾಮದ ರೈತರ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷ:  ಮೀನು ಸಾಕಾಣಿಕೆಗೆ ಭಾರಿ ನಷ್ಟ

Published

on

ಪೊನ್ನಂಪೇಟೆ : ಪೊನ್ನಂಪೇಟೆ ತಾಲೂಕಿನ ಬಾಳೆಲೆ ಹೋಬಳಿಯ ನಿಟ್ಟೂರು ಜಾಗಲೆ ಗ್ರಾಮದ ಪ್ರಗತಿಪರ ಕೃಷಿಕ ಅಳಮೇಂಗಡ ಬೋಸ್ ಮಂದಣ್ಣ ಅವರ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷವಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಹಲವು ವರ್ಷಗಳಿಂದ ದೊಡ್ಡ ಪ್ರಮಾಣದಲ್ಲಿ ಮೀನು ಸಾಕಾಣಿಕೆ ನಡೆಸುತ್ತಿದ್ದ ರೈತರಿಗೆ ಈ ಘಟನೆಯಿಂದ ಅಪಾರ ನಷ್ಟ ಉಂಟಾಗಿದೆ.


ಕೆರೆಯಲ್ಲಿ ಕಾಣಿಸಿಕೊಂಡಿರುವ ಮೊಸಳೆ ಸಾಕಾಣಿಕೆ ಮಾಡಲಾಗಿದ್ದ ಮೀನುಗಳನ್ನು ತಿಂದುಹಾಕುತ್ತಿರುವುದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮೊಸಳೆಯ ಹಾಗೂ ಇತರೆ ಕಾಡು ಪ್ರಾಣಿಗಳ ಸಂಚರಣೆ ಹೆಚ್ಚಾಗಿರುವ ಹಿನ್ನೆಲೆ ಗ್ರಾಮಸ್ಥರಲ್ಲೂ ಭಯದ ವಾತಾವರಣ ನಿರ್ಮಾಣವಾಗಿದೆ. ವಿಶೇಷವಾಗಿ ಕೆರೆಯ ಸುತ್ತಮುತ್ತ ಕೆಲಸ ನಿರ್ವಹಿಸುವ ಕೃಷಿಕರು ಹಾಗೂ ಸಾರ್ವಜನಿಕರ ಜೀವ ಭದ್ರತೆಗೆ ಮೊಸಳೆಯಿಂದ ಆತಂಕ ಎದುರಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಳಮೇಂಗಡ ಬೋಸ್ ಮಂದಣ್ಣ ಅವರು, “ನಾವು ಸಾಕಾಣಿಕೆಗಾಗಿ ಕೆರೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೀನುಗಳನ್ನು ಬಿಡಲಾಗಿತ್ತು. ಆದರೆ ಮೊಸಳೆ ಕಾಣಿಸಿಕೊಂಡ ನಂತರ ಮೀನುಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಭಾರಿ ನಷ್ಟ ಉಂಟಾಗಿದೆ. ಮಾನವ ಜೀವಕ್ಕೂ ಅಪಾಯ ಇರುವುದರಿಂದ ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಂಡು ಮೊಸಳೆಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಬೇಕು” ಎಂದು ಆಗ್ರಹಿಸಿದ್ದಾರೆ.


ಗ್ರಾಮಸ್ಥರು ಕೂಡ ಮೊಸಳೆಯ ಹಾವಳಿಯಿಂದ ಆತಂಕಗೊಂಡಿದ್ದು, ಅರಣ್ಯ ಇಲಾಖೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.

Continue Reading

Kodagu

ಆದಿವಾಸಿ ಸಮುದಾಯದ ವಿದ್ಯಾವಂತರಿಗೆ ನೇಮಕಾತಿ ಜಾರಿಗೆ ಆಗ್ರಹಿಸಿ ಮನವಿ

Published

on

ಸಿದ್ದಾಪುರ: ಕರ್ನಾಟಕ ಸರ್ಕಾರವು 2025-26ನೇ ಸಾಲಿನ ಬಜೆಟ್ನಲ್ಲಿ ರಾಜ್ಯದ 13 ಆದಿವಾಸಿ ಸಮುದಾಯಗಳ ವಿದ್ಯಾವಂತರಿಗೆ ನೇರ ನೇಮಕಾತಿ ಮಾಡುವುದಾಗಿ ಘೋಷಿಸಿದ್ದರೂ, ಇದುವರೆಗೂ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಆರೋಪಿಸಿ, ಕೊಡಗು ಆದಿವಾಸಿ ಎಜುಕೇಷನ್ ಯೂತ್ ಫೌಂಡೇಶನ್ ವತಿಯಿಂದ ಅಪರ ಜಿಲ್ಲಾಧಿಕಾರಿ ಡಾ.ಸಹನಾ ಎಸ್ ಅವರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಯಾರವ ಸಮಾಜದ ಅಧ್ಯಕ್ಷ ಸಿದ್ದಪ್ಪ ಪಿ.ಕೆ. ಸರ್ಕಾರ ಘೋಷಿಸಿದ ಯೋಜನೆ ಶೀಘ್ರ ಜಾರಿಗೆ ಬಂದು, ಆದಿವಾಸಿ ಸಮುದಾಯದ ವಿದ್ಯಾವಂತ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೆ, ಸಮುದಾಯದ ಯುವಕರು ಶಿಕ್ಷಣ ಪಡೆದಿದ್ದರೂ ಉದ್ಯೋಗಾವಕಾಶಗಳ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.


ಮನವಿ ಸಲ್ಲಿಸುವ ವೇಳೆ ವಕೀಲರು ತುಳಸಿ ಜೆ.ಆರ್., ಪುಷ್ಪಜಾ ವೈ.ಆರ್. (ಸಂಯೋಜಕರು, ಕೊಡಗು ಆದಿವಾಸಿ ಎಜುಕೇಷನ್ ಯೂತ್ ಫೌಂಡೇಶನ್), ಗಿರಿಜನ ಮುಖಂಡ ಭೋಜಪ್ಪ, ನೇತ್ರ ಹಾಗೂ ಬೋಪಿತ್ ಪಿ.ಬಿ. ಉಪಸ್ಥಿತರಿದ್ದರು.

Continue Reading

Kodagu

ಮೂರು ವರ್ಷಗಳ ಸಾಧನೆಯ ಶ್ವೇತಪತ್ರ ಹೊರಡಿಸಲಿ : ವಿರಾಜಪೇಟೆ ಬಿಜೆಪಿ ಸವಾಲು

Published

on

ಮಡಿಕೇರಿ: ಕಳೆದ ಮೂರು ವರ್ಷಗಳ ಅವಧಿಯಲ್ಲಿ ವಿರಾಜಪೇಟೆ ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳ ಶ್ವೇತಪತ್ರವನ್ನು ಶಾಸಕರು ತಕ್ಷಣ ಬಿಡುಗಡೆ ಮಾಡಬೇಕೆಂದು ವಿರಾಜಪೇಟೆ ಬಿಜೆಪಿ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಒತ್ತಾಯಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕ್ಷೇತ್ರದಲ್ಲಿ ಕಳೆದ ಮೂರು ವರ್ಷಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಯಿತೇ ಹೊರತು ಇಲ್ಲಿಯವರೆಗೆ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಸಾಮಾಜಿಕ ಜಾಲಾತಾಣಗಳಲ್ಲಿ ಮಾತ್ರ ಕೋಟಿಗಟ್ಟಲೆ ಅನುದಾನದ ಸುಳ್ಳು ಪ್ರಚಾರ ನೀಡಿ ಜನರ ಹಾದಿ ತಪ್ಪಿಸಲಾಗುತ್ತಿದೆ. ಇದೀಗ 150 ಕೋಟಿ ರೂ.ಗಳ ಅನುದಾನದ ಬಗ್ಗೆ ಪ್ರಚಾರ ನೀಡಲಾಗುತ್ತಿದೆಯಾದರೂ ಮಳೆಯ ನೆಪವೊಡ್ಡಿ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ಪೈಪೋಟಿ ಮತ್ತು ಗುಂಪುಗಾರಿಕೆ ನಡೆಯುತ್ತಿದ್ದು, ಕಾಂಗ್ರೆಸ್ ಸರಕಾರ ಕಳೆದ ಮೂರು ವರ್ಷಗಳಲ್ಲಿ ತನ್ನ ಬದ್ಧತೆಯನ್ನು ಪ್ರದರ್ಶಿಸಿಲ್ಲ. ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಅಧಿಕಾರವನ್ನು ಅನುಭವಿಸುತ್ತಾ ಕಾಲಹರಣ ಮಾಡುತ್ತಿದೆ. ಇದರ ಪರಿಣಾಮ ವಿರಾಜಪೇಟೆ ಕ್ಷೇತ್ರದ ಮೇಲೂ ಬೀರಿದ್ದು, ಶಾಸಕರು ಪ್ರಚಾರಕ್ಕಷ್ಟೇ ಸೀಮಿತವಾಗುತ್ತಿದ್ದಾರೆ. ಬಜೆಟ್ ನಲ್ಲಿ ಘೋಷಣೆಯಾದ ಯೋಜನೆಗಳನ್ನು ಆರಂಭಿಸುವ ಕಾಳಜಿ ತೋರಿಲ್ಲ. ಅಭಿವೃದ್ಧಿ ಕಾರ್ಯಗಳ ಕುರಿತು ಪ್ರಶ್ನಿಸುವವರ ಬಾಯಿ ಮುಚ್ಚಿಸುವ ಕೆಲಸವನ್ನು ಕಾಂಗ್ರೆಸ್ಸಿಗರು ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಗ್ರಾ.ಪಂ ಮಾಡಬಹುದಾದ ಕಾಮಗಾರಿಗಳನ್ನು ಮಾಡಿ ಮಹಾ ಸಾಧನೆ ಮಾಡಿದಂತೆ ಪ್ರತಿಬಿಂಬಿಸಿಕೊಳ್ಳಲಾಗುತ್ತಿದೆ. ಗ್ರಾಮ ಗ್ರಾಮಗಳಲ್ಲಿ ಅಭಿವೃದ್ಧಿ ಶೂನ್ಯವಾಗಿದೆ, ತಮ್ಮ ಹಿತೈಷಿಗಳನ್ನು ಮತ್ತು ಪಕ್ಷದ ಕಾರ್ಯಕರ್ತರನ್ನು ಮೆಚ್ಚಿಸಲಷ್ಟೇ ಕೆಲವು ಭಾಗಗಳಲ್ಲಿ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಜನಸಾಮಾನ್ಯರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಕಾರ್ಯವನ್ನು ಶಾಸಕರು ಮಾಡುತ್ತಿಲ್ಲ. ಕ್ಷೇತ್ರದಲ್ಲಿರುವ ಬಡವರಿಗೆ ಹಾಗೂ ನಿವೇಶನ ರಹಿತರಿಗೆ ನಿವೇಶನ ನೀಡುವುದಾಗಿ ಭರವಸೆ ನೀಡಿ ಮೂರು ವರ್ಷವೇ ಕಳೆದಿದ್ದರೂ ಇಲ್ಲಿಯವರೆಗೆ ನಿವೇಶನ ಹಂಚಿಕೆ ಮಾಡಿಲ್ಲ. ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ಬಡವರು ಹಾಗೂ ಕೂಲಿ ಕಾರ್ಮಿಕರು ಸೂರಿಗೆ ಪ್ರತಿಭಟನೆ ನಡೆಸುತ್ತಿರುವುದು ಸಾಮಾನ್ಯವಾಗಿದೆ.ಅಭಿವೃದ್ಧಿಯ ಹರಿಕಾರರೆಂದು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬೆಂಬಲಿಗರಿಂದ ಪ್ರಚಾರಗಿಟ್ಟಿಸಿಕೊಳ್ಳುತ್ತಿರುವ ಶಾಸಕರು ೩ ವರ್ಷಗಳ ಸಾಧನೆಯ ಶ್ವೇತಪತ್ರವನ್ನು ಮೊದಲು ಹೊರಡಿಸಲಿ ಮತ್ತು ಬಹಿರಂಗ ಚರ್ಚೆಗೆ ಬರಲಿ ಎಂದು ರಾಕೇಶ್ ದೇವಯ್ಯ ಸವಾಲು ಹಾಕಿದ್ದಾರೆ.

Continue Reading

Trending

error: Content is protected !!