Kodagu
ಸಿಎನ್‌ಸಿ 2ನೇ ಹಂತದ ಪಾದಯಾತ್ರೆ ಮುಕ್ತಾಯ : ಅ.7 ರಿಂದ 3ನೇ ಹಂತ ಆರಂಭ

ಮಡಿಕೇರಿ : ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ 9 ಪ್ರಮುಖ ಬೇಡಿಕೆಗಳ ಕುರಿತು ಕೊಡವ ಜನಜಾಗೃತಿ ಮೂಡಿಸುತ್ತಾ ಸರ್ಕಾರದ ಗಮನ ಸೆಳೆಯಲು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಡೆಸುತ್ತಿರುವ 5 ಹಂತಗಳ ಪಾದಯಾತ್ರೆಯಲ್ಲಿ 2ನೇ ಹಂತದ ಪಾದಯಾತ್ರೆ ವಿರಾಜಪೇಟೆ ತಾಲ್ಲೂಕಿನ “ಚೆಂಬೆಬೆಳಿಯೂರಿನ” ಎಡೆನಾಲ್‌ನಾಡ್ ಮಂದ್‌ನಲ್ಲಿ ಮುಕ್ತಾಯಗೊಂಡಿತು.
ಮೂರನೇ ಹಂತದ ಪಾದಯಾತ್ರೆ ಅ.7 ರಂದು ಬೆಳಗ್ಗೆ 10 ಗಂಟೆಗೆ ಕಂಗಳತ್ತನಾಡ್ (ಗೊಣಿಕೊಪ್ಪ-ಮಾಯಮುಡಿ)ನಿಂದ ಆರಂಭಗೊಳ್ಳಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
“ಚೆಂಬೆಬೆಳಿಯೂರಿನ” ಎಡೆನಾಲ್‌ನಾಡ್ ಮಂದ್‌ನಲ್ಲಿ ಕೊಡವ ಜಾಗೃತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಸಿಎನ್‌ಸಿ ಸಂಘಟನೆ ಅತ್ಯಂತ ತಾಳ್ಮೆಯಿಂದ ಸುದೀರ್ಘ ಹೋರಾಟ ನಡೆಸುವ ಮೂಲಕ ಕೊಡವರಿಗೆ ಸಾಂವಿಧಾನಿಕವಾಗಿ ದೊರಕಬೇಕಾದ ಹಕ್ಕುಗಳ ಪರ ಪ್ರತಿಪಾದಿಸುತ್ತಾ ಬಂದಿದೆ ಎಂದರು.
ಈ ಪಾದಯಾತ್ರೆ ಹೆಚ್ಚು ಪರಿಣಾಮ ಬೀರಿದ್ದು, ಎರಡು ಹಂತಗಳನ್ನು ಈಗಾಗಲೇ ಮುಗಿಸಿದ್ದೇವೆ. ಇನ್ನು ಉಳಿದಿರುವ ಮೂರು ಹಂತಗಳಲ್ಲಿ ಎಲ್ಲರನ್ನೂ ಭೇಟಿಯಾಗಿ ಕೊಡವ ಲ್ಯಾಂಡ್ ಪರ ಹಕ್ಕೊತ್ತಾಯವನ್ನು ಮಂಡಿಸಲಾಗುವುದು ಎಂದು ನಾಚಪ್ಪ ಹೇಳಿದರು.
3ನೇ ಹಂತದ ಪಾದಯಾತ್ರೆ : ಅ.7 ರಂದು ಬೆಳಗ್ಗೆ 10 ಗಂಟೆಗೆ ಕಂಗಳತ್ತನಾಡ್ (ಗೊಣಿಕೊಪ್ಪ-ಮಾಯಮುಡಿ) 3.00 ಗಂಟೆಗೆ ಅರ್ಕೇರಿನಾಡ್ (ಬಾಳೆಲೆ) (ಪೊನ್ನಂಪೇಟೆ ತಾಲೂಕು), ಅ.8 ರಂದು ಬೆಳಗ್ಗೆ 10 ಗಂಟೆಗೆ ಕಿರ್ನಾಲ್‌ನಾಡ್ (ಕರ‍್ಗೂರ್-ಬೆಸಗೂರ್), 3 ಗಂಟೆಗೆ ಪತ್ತ್ ಕಟ್‌ನಾಡ್ (ಬೆಕ್ಕೆಸೆಡ್ಲೂರ್-ಕಾನೂರ್) (ಪೊನ್ನಂಪೇಟೆ ತಾಲೂಕು), ಅ.9 ರಂದು ಬೆಳಗ್ಗೆ 10 ಗಂಟೆಗೆ ತೊಡನಾಡ್ (ಕುಮಟೂರ್-ಶ್ರೀಮಂಗಲ), 2:30 ಗಂಟೆಗೆ, ಕುರ್ಚಿನಾಡ್ (ಕುರ್ಚಿ-ಬೀರುಗ) (ಪೊನ್ನಂಪೇಟೆ ತಾಲೂಕು), ಅ.10 ರಂದು ಬೆಳಗ್ಗೆ 10 ಗಂಟೆಗೆ ಮರೆನಾಡ್, ಪಾಕೇರಿನಾಡ್, ಐವತ್ನಾಡ್, ಪೊನಾಡ್ ಈ ನಾಲ್ಕು ನಾಡು ಮಂದ್‌ಗಳಲ್ಲಿ ಸಭೆ (ಬಾಡಗರ ಕೇರಿ-ತೆರಾಲ್-ಬಿರುನಾಣಿ) (ಪೊನ್ನಂಪೇಟೆ ತಾಲ್ಲೂಕು), ಅ.11 ರಂದು ಬೆಳಗ್ಗೆ 10 ಗಂಟೆಗೆ ತಾಳೆರಿನಾಡ್ (ಟಿ.ಶೆಟ್ಟಿಗೇರಿ), 2.30 ಗಂಟೆಗೆ ಅಂಜಿಗೇರಿನಾಡ್ (ಹುದಿಕೇರಿ-ಬೇಗೂರು) (ಪೊನ್ನಂಪೇಟೆ ತಾಲೂಕು) ನಲ್ಲಿ ನಡೆಯಲಿದೆ ಎಂದು ನಾಚಪ್ಪ ಹೇಳಿದರು.
Kodagu
ಕೊಡಗಿನಲ್ಲಿ ಎನ್‌ಡಿಆರ್‌ಎಫ್ ಅನುದಾನದಿಂದ ಅಭಿವೃದ್ಧಿ ಕಾರ್ಯ ಪ್ರಗತಿ : ಚೆಪ್ಪುಡಿರ ರಾಕೇಶ್ ದೇವಯ್ಯ ಸಮರ್ಥನೆ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ 2024-25ನೇ ಸಾಲಿನ ಕಾರ್ಯಾದೇಶದಂತೆ ಮಳೆಹಾನಿ ಕಾಮಗಾರಿಗಳು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ಅನುದಾನದಿಂದ ನಡೆಯುತ್ತಿದೆ. ಆದರೆ ಜಿಲ್ಲೆಯ ಕಾಂಗ್ರೆಸಿಗರು ಈ ಕಾಮಗಾರಿಗಳನ್ನು ರಾಜ್ಯ ಸರ್ಕಾರದ ಅನುದಾನದಿಂದ ಕೈಗೆತ್ತಿಕೊಳ್ಳಲಾಗಿದೆ ಎಂದು ಜನರ ಹಾದಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಿರಾಜಪೇಟೆ ಮಂಡಲ ಬಿಜೆಪಿಯ ವಕ್ತಾರರು ಹಾಗೂ ಕೊಡಗು ಜಿಲ್ಲಾ ದಿಶಾ ಸಮಿತಿಯ ಸದಸ್ಯರಾದ ಚೆಪ್ಪುಡಿರ ರಾಕೇಶ್ ದೇವಯ್ಯ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೋಟ್ಯಾಂತರ ರೂ. ಎನ್‌ಡಿಆರ್‌ಎಫ್ ಅನುದಾನದಿಂದ ಜಿಲ್ಲಾ ವ್ಯಾಪಿ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಈ ಕಾಮಗಾರಿ ರಾಜ್ಯ ಸರ್ಕಾರದ ಅನುದಾನದಿಂದ ಕಾರ್ಯಗತಗೊಳ್ಳುತ್ತಿದೆ ಎಂದು ಕಾಂಗ್ರೆಸಿಗರು ಪ್ರತಿಬಿಂಬಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎನ್‌ಡಿಆರ್‌ಎಫ್ ಶೇ.75ರಷ್ಟು ಅನುದಾನ ನೀಡಿದರೆ ಉಳಿದ ಶೇ.25ನ್ನು ರಾಜ್ಯ ಸರ್ಕಾರ ನೀಡಬೇಕಾಗುತ್ತದೆ. 2024-25ನೇ ಸಾಲಿನಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ರಸ್ತೆ ದುರಸ್ತಿಯ 495 ಕಾಮಗಾರಿಗಳಿಗೆ ಎನ್‌ಡಿಆರ್‌ಎಫ್ ಮೂಲಕ 1,483.69 ಲಕ್ಷ ರೂ. ಮೀಸಲಿಟ್ಟಿದ್ದು, ಶೇ.75ರ ಅನುಪಾತದಲ್ಲಿ 1,112.77 ಲಕ್ಷ ಹಣ ಬಿಡುಗಡೆಯಾಗಿದೆ. ಮಡಿಕೇರಿ ನಗರಸಭೆ ವ್ಯಾಪ್ತಿಯ ರಸ್ತೆ ದುರಸ್ತಿಯ 14 ಕಾಮಗಾರಿಗಳಿಗೆ 30 ಲಕ್ಷ ರೂ. ನಿಗಧಿಯಾಗಿದ್ದು, 22.50 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ.
ಕುಶಾಲನಗರ ಪುರಸಭೆ ವ್ಯಾಪ್ತಿಯ 18 ರಸ್ತೆ ದುರಸ್ತಿ ಕಾಮಗಾರಿಗೆ 10.20 ಲಕ್ಷ ರೂ. ಮೀಸಲಿಟ್ಟಿದ್ದು, 7.65 ಲಕ್ಷ ಬಿಡುಗಡೆಯಾಗಿದೆ. ವಿರಾಜಪೇಟೆ ಪುರಸಭೆ ವ್ಯಾಪ್ತಿಯ ರಸ್ತೆ ದುರಸ್ತಿಯ 13 ಕಾಮಗಾರಿಗಳಿಗೆ 12.90 ಲಕ್ಷ ನಿಗಧಿಯಾಗಿದ್ದು, 9.68 ಲಕ್ಷ ಬಿಡುಗಡೆಯಾಗಿದೆ. ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 6 ರಸ್ತೆ ದುರಸ್ತಿ ಕಾಮಗಾರಿಗೆ 5.70 ಲಕ್ಷ ರೂ. ನಿಗಧಿಯಾಗಿದ್ದು, 4.28 ಲಕ್ಷ ರೂ. ಬಿಡುಗಡೆಯಾಗಿದೆ.
ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ ರಸ್ತೆ ದುರಸ್ತಿಯ 74 ಕಾಮಗಾರಿಗಳಿಗೆ 211.54 ಲಕ್ಷ ರೂ. ಮೀಸಲಿಟ್ಟಿದ್ದು, 158.66 ಲಕ್ಷ ರೂ. ಬಿಡುಗಡೆಯಾಗಿದೆ. ಚೆಸ್ಕಾಂ ಇಲಾಖೆಗೆ ಸಂಬಂಧಿಸಿದಂತೆ 3,137 ವಿದ್ಯುತ್ ಕಂಬಗಳ ಬದಲಾವಣೆ ಮತ್ತು 2.20 ಕಿ.ಮೀ ವಿದ್ಯುತ್ ಮಾರ್ಗದ ದುರಸ್ತಿ ಕಾರ್ಯಕ್ಕಾಗಿ 157.86 ಲಕ್ಷ ರೂ. ಮಂಜೂರಾಗಿದ್ದು, ಸಂಪೂರ್ಣ ಹಣ ಬಿಡುಗಡೆಯಾಗಿದೆ. ಹೀಗೆ ಒಟ್ಟು 620 ಕಾಮಗಾರಿಗಳಿಗೆ 1911.89ಲಕ್ಷ ರೂ. ಮಂಜೂರಾಗಿದ್ದು, 1473.38 ಲಕ್ಷ ರೂ. ಬಿಡುಗಡೆಯಾಗಿದೆ. ಅಲ್ಲದೆ ಅತಿ ಮಳೆಯಿಂದ ಅಕಾಲಿಕವಾಗಿ ಮೃತಪಟ್ಟ ವಿರಾಜಪೇಟೆಯ ವಿಷ್ಣು ಬೆಳ್ಯಪ್ಪ ಹಾಗೂ ಗೌರಿ ಅವರ ಕುಟುಂಬಕ್ಕೆ ತಲಾ 5 ಲಕ್ಷ ರೂ.ಗಳನ್ನು ಪರಿಹಾರವಾಗಿ ಎನ್‌ಡಿಆರ್‌ಎಫ್ ಅನುದಾನದಿಂದ ನೀಡಲಾಗಿದೆ.
ಬಹುತೇಕ ಅಭಿವೃದ್ಧಿ ಕಾಮಗಾರಿಗಳಿಗೆ ಮತ್ತು ಪರಿಹಾರಕ್ಕೆ ಎನ್‌ಡಿಆರ್‌ಎಫ್ ಅನುದಾನದ ಮೂಲಕವೇ ಹಣ ಹಂಚಿಕೆಯಾಗುತ್ತಿದೆ. ಆದರೆ ಇದನ್ನು ಬಹಿರಂಗಪಡಿಸದ ಕಾಂಗ್ರೆಸ್ಸಿಗರು ರಾಜ್ಯ ಸರ್ಕಾರದ ಅನುದಾನವೆಂದು ಪ್ರತಿಬಿಂಬಿಸಿ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ ಎಂದು ರಾಕೇಶ್ ದೇವಯ್ಯ ಆರೋಪಿಸಿದ್ದಾರೆ.
ರಾಜ್ಯ ಸರ್ಕಾರ ವಿವಿಧ ಭಾಗ್ಯಗಳ ಯೋಜನೆಯನ್ನು ಅನುಷ್ಠಾನಗೊಳಿಸುವುದಕ್ಕಾಗಿ ಬಹುತೇಕ ಹಣವನ್ನು ಖರ್ಚುಮಾಡುತ್ತಿದ್ದು, ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಹಣ ದೊರೆಯುತ್ತಿಲ್ಲ. ರಾಜ್ಯ ಸರ್ಕಾರ ಸಮರ್ಪಕವಾಗಿ ಅನುದಾನವನ್ನು ಬಿಡುಗಡೆ ಮಾಡದೆ ಇರುವುದರಿಂದ ಕೊಡಗಿನ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಎನ್‌ಡಿಆರ್‌ಎಫ್ ಅನುದಾನ ಸೇರಿದಂತೆ ಕೇಂದ್ರದ ಅನುದಾನದ ಮೂಲಕವೇ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು, ಜನರ ಹಾದಿ ತಪ್ಪಿಸುವ ಕಾರ್ಯದಲ್ಲಿ ಕಾಂಗೆಸ್ ಕಾರ್ಯಕರ್ತರು ತೊಡಗಿದ್ದಾರೆ.
ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿರುವ ಜನಪ್ರತಿನಿಧಿಗಳು ಎನ್‌ಡಿಆರ್‌ಎಫ್ ಅನುದಾನವನ್ನು ತಮ್ಮ ಪಕ್ಷದ ಕಾರ್ಯಕರ್ತರುಗಳ ಮನೆಗಳಿಗೆ ತೆರಳುವ ರಸ್ತೆಗಳ ದುರಸ್ತಿಗೆ ಮಾತ್ರ ಬಳಕೆಯಗುವಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿರುವ ರಾಕೇಶ್ ದೇವಯ್ಯ, ಇತರ ರಸ್ತೆಗಳ ನಿರ್ಲಕ್ಷ್ಯವನ್ನು ಖಂಡಿಸುವುದಾಗಿ ತಿಳಿಸಿದ್ದಾರೆ.
ಅಧಿಕಾರಿಗಳು ಜನಪ್ರತಿನಿಧಿಗಳ ಯಾವುದೇ ಒತ್ತಡಕ್ಕೆ ಮಣಿಯದೆ ಎನ್‌ಡಿಆರ್‌ಎಫ್ ಅನುದಾನ ಅಗತ್ಯ ಕಾಮಗಾರಿಗಳಿಗೆ ನ್ಯಾಯಯುತವಾಗಿ ವಿನಿಯೋಗವಾಗುವಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
Kodagu
ಹುದಿಕೇರಿಯಲ್ಲಿ 66/11 ಕೆವಿ ವಿದ್ಯುತ್ ಉಪ ಕೇಂದ್ರದ ಭೂಮಿ ಪೂಜೆ

ಗೋಣಿಕೊಪ್ಪಲು : ಹುದಿಕೇರಿಯಲ್ಲಿ ನೂತನ ವಿದ್ಯುತ್ ಪ್ರಸರಣ ಉಪ-ಕೇಂದ್ರ ಸ್ಥಾಪಿಸುವ ನಿಟ್ಟಿನಲ್ಲಿ ಶಾಸಕ ಎ.ಎಸ್ ಪೊನ್ನಣ್ಣ ಭೂಮಿ ಪೂಜೆ ನೆರವೇರಿಸಿದರು.
ಈ ಉಪ ಕೇಂದ್ರದಿಂದ 11 ಕೆವಿಯ 12 ಮಾರ್ಗ ಪೊನ್ನಂಪೇಟೆಯಿಂದ ಹುದಿಕೇರಿವರೆಗ ಹೊರಹೋಗಲಿದೆ. ಸುಮಾರು 19.34 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯ ಒಂದು ವರ್ಷದ ಕಾಲಾವಧಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಚೀಫ್ ಎಲೆಕ್ಟ್ರಿಕ್ ಆಫೀಸರ್ ರೋಷನ್ ಅಪ್ಪಚ್ಚು ತಿಳಿಸಿದರು. ಶಾಸಕರ ಪ್ರಯತ್ನದಿಂದಾಗಿ ಕ್ಷೇತ್ರಾದ್ಯಂತ ಹಲವು ವಿದ್ಯುತ್ ಉಪ-ಕೇಂದ್ರಗಳು ಸ್ಥಾಪನೆಗೊಳ್ಳುತ್ತಿದ್ದು, ಅತಿ ಶೀಘ್ರದಲ್ಲೇ ಇದನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಚೆಸ್ಕಾಂ ಅಧಿಕಾರಿಗಳು, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ವಲಯ ಕಾಂಗ್ರೆಸ್ ಅಧ್ಯಕ್ಷ ಸೂರಜ್, ಪೊನ್ನಂಪೇಟೆ ತಾಲೂಕು ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ಅಣಲಮಾಡ ಲಾಲಾ ಅಪ್ಪಣ್ಣ, ಹುದಿಕೇರಿ ಪಂಚಾಯಿತಿ ಅಧ್ಯಕ್ಷ ಕುಪ್ಪಣಮಾಡ ನವ್ಯ ಕಾವೇರಮ್ಮ, ಹಿರಿಯ ಕಾಂಗ್ರೆಸ್ ಮುಖಂಡರಾದ ಚೇಕ್ಕೇರ ವಾಸು ಕುಟ್ಟಪ್ಪ, ಚೆಕ್ಕೇರ ಸುಧೀರ್, ಮೋಟಯ್ಯ, ಡಿಸಿಸಿ ಸದಸ್ಯರಾದ ಮುಕಟ್ಟೀರ ಸಂದೀಪ್, ಅಜ್ಜಿಕುಟ್ಟಿರ ಗಿರೀಶ್, ನೂರೇರ ಮನೋಹರ್, ಅಣಲಮಾಡ ಹರೀಶ್, ಅಲಿರಾ ರಶೀದ್, ಕುಪ್ಪಣ ಮಾಡ ಕಾವೇರಮ್ಮ,ಕೊಡoಗಡ ವಾಸು, ಕೊಡಂಗಡ ದಮಯಂತಿ ಹಾಗೂ ಪ್ರಮುಖರು ಉಪಸಿತರಿದ್ದರು.
Kodagu
ಬೆಂಗಳೂರು ಕೊಡವ ಸಮಾಜಕ್ಕೆ ಏಳು ಏಕರೆ ಜಾಗ: ಎಪ್ಪತ್ತು ವರ್ಷಗಳ ಬಳಿಕ ಮರುಕಳಿಸಿದ ಇತಿಹಾಸ

ಬರಹ : ತೆನ್ನೀರ ಮೈನಾ, ಕಾಂಗ್ರೆಸ್ ಮುಖಂಡರು
ಬೆಂಗಳೂರು: ಕೊಡವ ಸಮಾಜ, ಕರ್ನಾಟಕದ ರಾಜ್ಯಧಾನಿ ಬೆಂಗಳೂರಿನಲ್ಲಿ ಸ್ಥಾಪಿತವಾಗಿರುವ ಸಂಸ್ಥೆ. ವಿಶ್ವದಲ್ಲಿಯೇ ಅಪರೂಪದ ಸಂಸ್ಕೃತಿ, ಪರಂಪರೆಯನ್ನು ಹೊಂದಿರುವ ಕೊಡವ ಜನಾಂಗದ ಆಚರಣೆಗಳನ್ನು ನಗರೀಕರಣದ ನಡುವೆಯೂ ನಾಶವಾಗದ ಹಾಗೆ ಕಾಪಾಡಿಕೊಂಡು ಬರುತ್ತಿರುವ ಸಂಸ್ಥೆಯಾಗಿದೆ.
1911 ರಲ್ಲಿ ಕೂರ್ಗ್ ಅಸೋಸಿಯೇಷನ್ ಎಂಬ ಹೆಸರಿನಲ್ಲಿ ಕೇವಲ 30 ಸದಸ್ಯರಿಂದ ಸ್ಥಾಪಿತವಾಗಿ ನಂತರ ಬೆಂಗಳೂರು ಕೊಡವ ಸಮಾಜ ಎಂದು ನಾಮಕರಣಗೊಂಡು ಕೊಡವ ಸಾಹಿತ್ಯ, ಸಂಸ್ಕೃತಿ,ಭಾಷೆ,ಉಡುಗೆ ತೊಡುಗೆ ,ಪದ್ದತಿ ಪರಂಪರೆಯ ಬೆಳವಣಿಗೆಗೆ ತನ್ನದೇ ಆದ ಅಪರಿಮಿತ ಕೊಡುಗೆ ನೀಡುವ ಮೂಲಕ ಬೃಹತ್ತಾಗಿ ಬೆಳೆದಿದೆ. ಸ್ಥಾಪಕ ಅಧ್ಯಕ್ಷ ಕುಪ್ಪಂಡ ಮುದ್ದಪ್ಪರವರಿಂದ ಪ್ರಸ್ತುತ ಅಧ್ಯಕ್ಷ ಕರೋಟಿರ ಪೆಮ್ಮಯ್ಯನವರ ವರೆಗೆ ಸೇವೆ ಸಲ್ಲಿಸಿದ ಎಲ್ಲಾ ಅಧ್ಯಕ್ಷರು ಮತ್ತು ಅವರ ಪಧಾಧಿಕಾರಿಗಳ ಪರಿಶ್ರಮದಿಂದ ಉಚ್ಛ್ರಾಯ ಸ್ಥಿತಿಯಲ್ಲಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ.20 ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿದ್ದು ಬೆಂಗಳೂರಿನಲ್ಲಿರುವ ಸುಮಾರು 40 ಸಾವಿರದಷ್ಟಿರುವ ಕೊಡವರಿಗೆ ಬೆಂಗಳೂರು ಕೊಡವ ಸಮಾಜ ಗುರುಮನೆಯಂತಿದೆ.
ಆರಂಭದಲ್ಲಿ ಬೆಂಗಳೂರು ಕೊಡವ ಸಮಾಜಕ್ಕೆ ಸ್ವಂತ ಕಟ್ಟಡವಾಗಲಿ ನಿವೇಶನವಾಗಲಿ ಇರಲಿಲ್ಲ. ಬಸವನಗುಡಿ ಬಳಿಯ ಖಾಸಗಿ ಜಾಗದಲ್ಲಿ ತಮ್ಮ ಕಾರ್ಯಕ್ರಮಗಳನ್ನು( ಪುತ್ತರಿ ನಮ್ಮೆ,ಕೈಲ್ ಪೊಳ್ದ್ ನಮ್ಮೆ,ಊರೊರ್ಮೆ ಮುಂತಾದವು) ನಡೆಸುತ್ತಿದ್ದರು. ಭಾರತದ ಮಹಾನ್ ಸೇನಾ ದಂಡನಾಯಕರಾಗಿ ಸೇವೆ ಸಲ್ಲಿಸಿದ್ದ,ಶಿಸ್ತು ಮತ್ತು ಪ್ರಾಮಾಣಿಕತೆಯನ್ನೇ ಉಸಿರಾಗಿಸಿಕೊಂಡಿದ್ದ ಜನರಲ್ ಕೊಡಂದೇರ.ಎಂ.ಕಾರ್ಯಪ್ಪ ( ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ) ನವರು ಭಾರತೀಯ ಸೈನ್ಯಕ್ಕೆ ಹಾಗೂ ದೇಶಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಸ್ವತಂತ್ರ ಭಾರತದ ಅಂದಿನ ವಿಶಾಲ ಮೈಸೂರು ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ರವರು ಬೆಂಗಳೂರಿನ ಹೃದಯ ಭಾಗದಲ್ಲಿರುವ ವಸಂತ ನಗರದಲ್ಲಿ ಒಂದು ಏಕರೆ ಜಾಗವನ್ನು ಉಡುಗೊರೆಯಾಗಿ ನೀಡಿದ್ದರು.ಆ ಜಾಗವನ್ನು 1956 ರಲ್ಲಿ ಬೆಂಗಳೂರು ಕೊಡವ ಸಮಾಜಕ್ಕೆ ದಾನವಾಗಿ ನೀಡಿದರು.ನಂತರದಲ್ಲಿ ಬೆಂಗಳೂರು ಕೊಡವ ಸಮಾಜ ಆ ಜಾಗದಲ್ಲಿ ಬೃಹತ್ ಬಹುಮಹಡಿ ಕಟ್ಟಡಗಳನ್ನು ಹಂತ ಹಂತವಾಗಿ ಕಟ್ಟಿ ದೊಡ್ಡ ಸಂಸ್ಥೆಯಾಗಿ ಬೆಳೆಸಿತು.ಸಂಸ್ಕೃತಿಯ ಬೆಳವಣಿಗೆಗಳ ಜೊತೆಗೆ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಮತ್ತಷ್ಟು ಮೇಲ್ಪಂಕ್ತಿಯನ್ನು ಸಂಸ್ಥೆ ತಲುಪಿತು.
ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪನವರು ಮಾಡಿದ ಕಾರ್ಯ ಇತಿಹಾಸ ನಿರ್ಮಿಸಿದರೆ ಆ ರೀತಿಯ ಇತಿಹಾಸ ಮತ್ತೊಮ್ಮೆ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ.ಎಸ್.ಪೊನ್ನಣ್ಣ ನವರಿಂದ ಮತ್ತೊಮ್ಮೆ ಮರುಕಳಿಸಿದೆ.ಅದಕ್ಕೆ ಕಾರಣ ಬೆಂಗಳೂರು ಕೊಡವ ಸಮಾಜದ ಹೆಸರಿಗೆ ಬೆಂಗಳೂರು ನಗರ ಜಿಲ್ಲೆಯ ಯಲಹಂಕ ಹೊಸಹಳ್ಳಿ ಯ ಸರ್ವೆ ನಂ 21 ರಲ್ಲಿ ವರ್ಗಾವಣೆಗೊಂಡ ಏಳು ಏಕರೆ ಅತ್ಯಮೂಲ್ಯ ಜಾಗ.
2011 ರಲ್ಲಿ ಬೆಂಗಳೂರು ಕೊಡವ ಸಮಾಜದ ಶತಮಾನೋತ್ಸವ ಕಾರ್ಯಕ್ರಮದ ಸಂಧರ್ಭದಲ್ಲಿ ಅಂದಿನ ಕರ್ನಾಟಕದ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದ ಗೌಡರು ಅಂದಿನ ಕರ್ನಾಟಕ ರಾಜ್ಯ ವಿಧಾನ ಸಭಾ ಅಧ್ಯಕ್ಷರಾದ ಕೆ.ಜಿ.ಬೋಪಯ್ಯ, ಮಡಿಕೇರಿ ಕ್ಷೇತ್ರದ ಶಾಸಕರಾದ ಅಪ್ಪಚ್ಚು ರಂಜನ್ ರವರಿಗೆ ಸಮಾಜದ ಪ್ರಮುಖರು ಏಳು ಏಕರೆ ಜಾಗದ ಪ್ರಸ್ತಾವನೆಯನ್ನು ಸಲ್ಲಿಸುತ್ತಾರೆ. ಸದಾನಂದ ಗೌಡರು ಒಪ್ಪಿಗೆ ಸೂಚಿಸುತ್ತಾರೆ. ನಂತರ ಆಡಳಿತಾತ್ಮಕ ಪ್ರಕ್ರಿಯೆ ಗಳು ನಡೆದು ದಿನಾಂಕ 8-3-2023 ರಂದು ಸರ್ಕಾರ ಸದರಿ ಜಾಗವನ್ನು ಕೃಷಿಯೇತರ ಜಮೀನಿನ ಪ್ರಸ್ತುತ ಮಾರುಕಟ್ಟೆ ದರ ಪಾವತಿಸಲು ಒಪ್ಪಿಗೆ ನೀಡುತ್ತದೆ. ಕೊಡವ ಸಮಾಜದ ಪಾಲಿಗೆ ಇದೊಂದು ನಿಲುಕದ ದ್ರಾಕ್ಷಿ. ಮಾರುಕಟ್ಟೆ ದರ ವೆಂದರೆ 40 ಕೋಟಿಯಿಂದ 50 ಕೋಟಿ ವೆಚ್ಚವಾಗುತ್ತದೆ.ಇದು ಆ ಸಂಸ್ಥೆಗೆ ಅಸಾಧ್ಯವಾದ ಕಾರ್ಯ. ಆದರೂ ಬೆಂಗಳೂರು ಕೊಡವ ಸಮಾಜ ಸುಮ್ಮನಾಗುವುದಿಲ್ಲ. ಭಗೀರಥ ಪ್ರಯತ್ನ ಮುಂದುವರಿಸುತ್ತದೆ.
ಬೆಂಗಳೂರು ಕೊಡವ ಸಮಾಜದ ಪ್ರಸ್ತುತ ಅಧ್ಯಕ್ಷರಾದ ಕರೋಟಿರ ಪೆಮ್ಮಯ್ಯ ನವರ ನೇತೃತ್ವದಲ್ಲಿ ಮತ್ತೊಂದು ಸಾಹಸಕ್ಕೆ ಮುನ್ನುಡಿ ಹಾಕುತ್ತಾರೆ.ಸರ್ಕಾರ ಬದಲಾಗಿ ವಿರಾಜಪೇಟೆ ಕ್ಷೇತ್ರದ ಶಾಸಕರಾಗಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದಲ್ಲಿ ಅಪಾರ ಅನುಭವ ಹೊಂದಿರುವ ಎ.ಎಸ್.ಪೊನ್ನಣ್ಣ ನವರು ಆಯ್ಕೆಯಾಗುತ್ತಾರೆ.
ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಗಳ ಕಾನೂನು ಸಲಹೆಗಾರರಾಗಿ ಸಂಪುಟ ದರ್ಜೆ ಸ್ಥಾನದೊಂದಿಗೆ ನೇಮಕಗೊಳ್ಳುತ್ತಾರೆ
ಸ್ವತಃ ವಕೀಲರಾದ ಕರೋಟಿರ ಪೆಮ್ಮಯ್ಯ ಮತ್ತು ಅವರ ತಂಡ ಪೊನ್ನಣ್ಣ ನವರಿಗೆ ಮನವಿ ಸಲ್ಲಿಸುತ್ತಾರೆ. ಹಲವು ಸುತ್ತಿನ ಮಾತುಕತೆಗಳು ಅಧಿಕಾರಿಗಳ ಮಟ್ಟದಲ್ಲಿ ನಡೆಯುತ್ತದೆ.ದಿನಾಂಕ 4-3-2024 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಎ.ಎಸ್.ಪೊನ್ನಣ್ಣ ನವರಿಂದ ನಡಾವಳಿ ಪತ್ರ ಸಲ್ಲಿಕೆಯಾಗುತ್ತದೆ. ಮಾನ್ಯ ಮುಖ್ಯಮಂತ್ರಿ ಗಳು ಸಂಪುಟ ಸಭೆಯಲ್ಲಿ ಪ್ರಸ್ತಾವನೆಯನ್ನು ಚರ್ಚೆಗೆ ತರುತ್ತಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಮತ್ತು ಬೆಂಗಳೂರು ಉಸ್ತುವಾರಿ ಸಚಿವರಾದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಪೊನ್ನಣ್ಣ ನವರ ಕೋರಿಕೆಯನ್ನು ಒಪ್ಪುತ್ತಾರೆ. ಕಂದಾಯ ಸಚಿವ ಕೃಷ್ಣ ಬೈರೇಗೌಡರ ಸಹಮತದೊಂದಿಗೆ ಸಚಿವ ಸಂಪುಟವೇ ಪೊನ್ನಣ್ಣನವರ ನಡಾವಳಿಗೆ ಮನ್ನಣೆ ನೀಡುತ್ತದೆ.ವಿಶೇಷ ವಿನಾಯತಿಯಡಿ ಜಮೀನು ನೀಡಲು ( ಮಾರುಕಟ್ಟೆ ದರಕ್ಕಿಂತ ಶೇ 90 ರಷ್ಟು ರಿಯಾಯಿತಿ) ಒಪ್ಪಿಗೆ ನೀಡುತ್ತದೆ.ಭೂ ಮಂಜೂರಾತಿ ನಿಯಮಗಳು 1969 ರ ನಿಯಮ 22-ಎ(1)(i)(2) ರನ್ವಯ ಆದೇಶ ಸಂಖ್ಯೆ ನಂ.ಎಲ್.ಎನ್.ಡಿ (ಎನ್.ಎ)/203/2009-10 ದಿನಾಂಕ 2-6-2025 ರಂದು ಆದೇಶ ಹೊರಡಿಸುತ್ತದೆ. ಕೇವಲ ಒಂದು ಕೋಟಿ 7 ಲಕ್ಷ ರೂ.ಗಳನ್ನು ಪಾವತಿಸಿ ಕೊಡವ ಸಮಾಜ ಜಾಗವನ್ನು ಪಡೆಯುತ್ತದೆ.ದಶಕಗಳ ಕೊಡವ ಸಮಾಜದ ಕನಸು ನನಸಾಗುತ್ತದೆ.
ಈ ಭಾನುವಾರ ಅಂದರೆ ದಿನಾಂಕ 15-6-2025 ರಂದು ಬೆಂಗಳೂರು ಕೊಡವ ಸಮಾಜದವತಿಯಿಂದ ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಸಿದ್ದರಾನಯ್ಯನವರು, ಸನ್ಮಾನ್ಯ ಡಿ.ಸಿ.ಎಂ.ಡಿ.ಕೆ ಶಿವಕುಮಾರ್, ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ, ಪ್ರಮುಖ ರುವಾರಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಸೇರಿದಂತೆ ಸಚಿವ ಸಂಪುಟದ ಸದಸ್ಯರಿಗೆ ಅಭಿನಂದನೆಗಳು ಮತ್ತು ಕೃತಜ್ಞತೆ ಸಮಾರಂಭ ಏರ್ಪಡಿಸಿದ್ದು ಬೆಂಗಳೂರು ಕೊಡವ ಸಮಾಜದ ಪಾಲಿಗೆ ಐತಿಹಾಸಿಕ ಕಾರ್ಯಕ್ರಮವಾಗಿದೆ.
-
Mandya23 hours ago
ನೇಣು ಬಿಗಿದ ಸ್ಥಿತಿಯಲ್ಲಿ ಪುರುಷ ಹಾಗೂ ಮಹಿಳೆಯ ಕೊಳೆತ ಶ*ವಗಳು ಪತ್ತೆ
-
State19 hours ago
ಹಾಸನ ಏರ್ಪೋರ್ಟ್ 2026ಕ್ಕೆ ಪೂರ್ಣ: ಚಿಕ್ಕಮಗಳೂರು-ಮಡಿಕೇರಿಯಲ್ಲಿ ಹೆಲಿಪೋರ್ಟ್ ನಿರ್ಮಾಣಕ್ಕೆ ವರದಿ ಸಿದ್ಧ
-
Kodagu23 hours ago
ಗೃಹಲಕ್ಷ್ಮಿ ಯೋಜನೆ ಇ-ಕೆವೈಸಿ ಫೆಲ್ಯೂರ್: ಹತ್ತಿರದ ಸಿಡಿಪಿಓ ಕಚೇರಿ ತೆರಳಿ Status ಪರಿಶೀಲನೆ ಮಾಡಿಸಿ
-
Hassan23 hours ago
ಬೆಳೆ ವಿಮೆ ಪ್ರಚಾರದ ವಾಹನಗಳಿಗೆ ಡಿಸಿ ಸಿ. ಸತ್ಯಭಾಮ ಚಾಲನೆ
-
Hassan20 hours ago
ಕಾಣೆಯಾಗಿದ್ದ ಮಹಿಳೆ ಶವವಾಗಿ ಪತ್ತೆ
-
Mandya24 hours ago
ಗೌರವ ಡಾಕ್ಟರೇಟ್ ಸ್ವೀಕರಿಸಲು ಪ್ರೊ.ಜಯಪ್ರಕಾಶ್ ಗೌಡ ಅವರಿಗೆ ಅಧಿಕೃತ ಆಹ್ವಾನ
-
State20 hours ago
16ನೇ ಹಣಕಾಸಿನ ಆಯೋಗಕ್ಕೆ ಹೆಚ್ಚುವರಿ ಜ್ಞಾಪನಾ ಪತ್ರ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ
-
State21 hours ago
ಕೇರಳದಲ್ಲಿ ಜೂ.17ರವರೆಗೂ ವ್ಯಾಪಕ ಮಳೆ: ರಾಜ್ಯದ ಮೀನುಗಾರರಿಗೆ ಐಎಂಡಿ ಎಚ್ಚರಿಕೆ